ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕಂದ್ರೆ…ಅಲ್ಲಿ ಹೀಗೆಲ್ಲ ಇರ್ಲಿಲ್ಲ!

ಭ್ರಮೆ….

ಸಿದ್ರಾಮ್ ಪಾಟೀಲ

ನನ್ನದೇ ಒಂದು ಜಗತ್ತಿನಲ್ಲಿ ಹೀಗೆಲ್ಲ ಇರ್ಲಿಲ್ಲ….

ಅಲ್ಲಿ ಕೆಲವರೆ ಎಲ್ಲ ಉಳ್ಳವರಾಗಿರಲಿಲ್ಲ,

ಅಲ್ಲಿ ಎಡ-ಬಲ ಎಂಬ ಎಡಬಿಡಂಗಿ ಚೌಕಾಶಿ ಇರ್ಲೇ ಇಲ್ಲ,

ಮಹೋನ್ನತದ ಬೇತಾಳ ಬೆನ್ನು ಹತ್ತಲೇ ಇಲ್ಲ,

ಕುರೂಪ, ಚಂದ-ಛಾಯಿಗಳು ಬತ್ತಳಿಕೆ ಬಾಣಗಳಾಗಲೇ ಇಲ್ಲ,

ನಗು ಎಂದಿಗೂ ವ್ಯಂಗ್ಯದ ರೂಪ ತಾಳಲೇ ಇಲ್ಲ,

ಹತಾಶದ ಗೆಳೆತನ ಬೆಳೆಯಲೇ ಇಲ್ಲ,

ಆದರೂ….

ಅಲ್ಲಿ ಎನೋ ಒಂದು ಇಲ್ಲ ಅಂತ ಅನ್ನಿಸ್ಲೇ ಇಲ್ಲ!

ಯಾಕಂದ್ರೆ…ನನ್ನ ಜಗತ್ತು ಸಾವಿನಾಚೆಯದ್ದಾಗಿತ್ತು!

ನಾ ಭ್ರಮೆಯನ್ನು ಒಪ್ಪದಿರುವಷ್ಟು ಆಶಾವಾದಿಯೇ..??

ಆ ಬಣಿವೆ ಸುಟ್ಟು ದನದ ಹೊಟ್ಟೆ ಮರುಕ,

ಆ ಕೆರೆ ಬತ್ತಿ ಮೀನುಗಳ ಮಾರಣ ಹೋಮ,

ಆ ಮರ ಕಡಿದ ಮ್ಯಾಲೆ ಬಿದ್ದ ಗುಬ್ಬಿ ಗೂಡು ಮತ್ತು,

ಸೂರಿಲ್ಲದೆ ಹಾರಿ ಹೋದ ಹಕ್ಕಿಗಳು….

ಛೆ..ಛೆ ಇಲ್ಲಿ ಬದುಕಿ ಉಳಿದು ಇದೆಲ್ಲ ನೋಡುವಂತಾಯ್ತು!

ಯಾಕಂದ್ರೆ…ಅಲ್ಲಿ ಹೀಗೆಲ್ಲ ಇರ್ಲಿಲ್ಲ!

ಸತ್ತಾಗ ಇದನ್ನೆಲ್ಲ ನೋಡಲೇ ಇಲ್ಲ!!


ಸರಾಗವಾಗಿತ್ತು ಸಾವಿನಾಚೆಗಿನ ಹಕೀಕತ್ತು

ಇಲ್ಯಾಕೋ ಹಳಹಳಿ, ಬೆಳಕೇ ಭಯ ನೀಡುತ್ತಿದೆ!

ಕೊಲ್ಲುವ, ಕೆದರುವ, ತೆಗಳುವ, ತೋರುವ, ಜನರ ಕಾಡಿದು

ಕಂಡಾಬಟ್ಟೆ ತಲೆ ತಿರುಗುತ್ತಿದೆ

ಯಾಕಂದ್ರೆ…ಅಲ್ಲಿ ಹೀಗೆಲ್ಲ ಇರ್ಲಿಲ್ಲ

ಸತ್ತಾಗ ಇದನ್ನೆಲ್ಲ ನೋಡಲೇ ಇಲ್ಲ!!

ನನ್ನ ಬದುಕು ಬೀಸೂಕಲ್ಲಿನೊಳಗೆ ಸಿಕ್ಕ ಕಡಲೆ ಕಾಳು,

ನನ್ನ ಬದುಕು ಜಾಲಿಮರದ ಮೇಲೆ ಮುಗಿಲಿಂದ ಬಿದ್ದ ಹಕ್ಕಿ,

ನನ್ನ ಬದುಕು ಕಮ್ಮಾರನ ತಿದಿಯೊಳಗೆ ತುರುಕಿಹ ಲೋಹ,

ನನ್ನ ಬದುಕು ಇಂತಹುದೇ ಇನ್ನೂ ಏನೇನೋ…ಅಂತೆಲ್ಲ ಅನ್ನಿಸತೊಡಗಿತು!

ಬದುಕಿ ಬಂದು ಈಗ ಇದನ್ನೆಲ್ಲ ನೋಡಿದ ಮೇಲೆ

ಯಾಕಂದ್ರೆ….ಅಲ್ಲಿ ಹೀಗೆಲ್ಲ ಇರ್ಲಿಲ್ಲ

ಸತ್ತಾಗ ಇದನ್ನೆಲ್ಲ ನೋಡಲೇ ಇಲ್ಲ!!

 

‍ಲೇಖಕರು avadhi

10 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading