ಹಿರಿಯ ವಿದ್ವಾಂಸರಾದ ಪಂಡಿತಾರಾಧ್ಯ ಅವರು ಇತ್ತೀಚಿಗೆ ಯಕ್ಷಗಾನದ ಮಧ್ಯೆ ನಡೆದ ಅನುಚಿತ ಪ್ರಸಂಗವನ್ನು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಆ ಮೂಲಕ ಧರ್ಮ ನಿರಪೇಕ್ಷ ರಾಷ್ಟ್ರದಲ್ಲಿ ಮಾಧ್ಯಮಗಳು ಬಿತ್ತುವ ಧರ್ಮ ಕಾರ್ಯಕ್ರಮಗಳು ಹೇಗೆ ಬದಲಾಗಬೇಕಿದೆ ಎನ್ನುವ ಸಲಹೆಯನ್ನೂ ಮಂಡಿಸಿದ್ದಾರೆ .
ನಿಮ್ಮ ಸಲಹೆ ಏನು
ಪ್ರತಿಕ್ರಿಯೆಗೆ ಸ್ವಾಗತ

ಪಂಡಿತಾರಾಧ್ಯ ಮೈಸೂರು
ಕೆಲವು ವರ್ಷಗಳ ಹಿಂದೆ ಮೇಳವೊಂದು ಮೈಸೂರಿನ ಪುರಭವನದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿತ್ತು. ಒಂದು ಸಂಜೆ ಯಕ್ಷಗಾನ ಪ್ರದರ್ಶನ ನೋಡುತ್ತಿರುವಾಗ ರಾತ್ರಿ ೮ಕ್ಕೆ ಪುರಭವನದ ಎದುರಿನ ಮಸೀದಿಯಿಂದ ಬಾಂಗ್ ಕೇಳಿಬಂತು. ಪೌರಾಣಿಕ ಪಾತ್ರ ನಿರ್ವಹಿಸುತ್ತಿದ್ದ ನಟರೊಬ್ಬರು ಅದನ್ನು ಕೇಳಿ ’ಇದು ಒಂದು (ಅಡ್ಡಿ) ಬಾಕಿ ಇತ್ತು” ಎಂದು ಕತೆಯ ಸಂದರ್ಭಕ್ಕೆ ಅಳವಡಿಸಿ ಹೇಳಿದರು. ಯಕ್ಷಗಾನದ ಪಾತ್ರಗಳು ಸದ್ಯಃಸ್ಫೂರ್ತಿಯಿಂದ ಸಂಭಾಷಣೆಗಳನ್ನು ಹೇಳುವುದರಿಂದ ಕಲಾವಿದರಿಗೇ ಇರುವ ಔಚಿತ್ಯ ವಿವೇಕವನ್ನು ಬಿಟ್ಟು ಅವರ ಮೇಲೆ ಯಾರಿಗೂ ಯಾವ ನಿಯಂತ್ರಣವೂ ಇರುವುದಿಲ್ಲ. ಕೆಲವು ಪ್ರೇಕ್ಷಕರು ಅದನ್ನು ಗ್ರಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು!
ನಾನು ಆಟ ಮುಗಿದ ಮೇಲೆ ಚೌಕಿಗೆ ಹೋಗಿ ಸ್ವತಃ ಕಲಾವಿದರೂ, ಮೇಳದ ಯಜಮಾನರೂ ಆಗಿದ್ದ ಮಿತ್ರರಿಗೆ ಅಭಿನಂದನೆಗಳನ್ನು ತಿಳಿಸಿ ಪ್ರಸಂಗದ ಮಧ್ಯೆ ಕಲಾವಿದರು ಮಾಡಿದ ’ಅಧಿಕ ಪ್ರಸಂಗ’ದ ಬಗ್ಗೆ ನನ್ನ ಅಸಮಾಧಾನವನ್ನು ತಿಳಿಸಿದೆ. ಅವರೂ ಅದನ್ನು ಗಮನಿಸಿದ್ದರು. ಕೂಡಲೆ ಆ ಕಲಾವಿದರನ್ನು ಕರೆಸಿ ಅವರಿಗೆ ನನ್ನ ಪರಿಚಯಮಾಡಿಕೊಟ್ಟರು. ನಾನು ಕಲಾವಿದರನ್ನು ಅಭಿನಂದಿಸಿ ಅಂದಿನ ಪ್ರಸಂಗದಲ್ಲಿ ನಡೆದ ಅನೌಚಿತ್ಯದ ಬಗ್ಗೆ ನನ್ನ ಅಸಮ್ಮತಿಯನ್ನು ತಿಳಿಸಿದೆ: ’ಪ್ರೇಕ್ಷಕರು ಸದ್ಯಃಪರ ನಿರ್ವೃತ’ರಾಗಿ ರಸಾಸ್ವಾದದಲ್ಲಿ ಮಗ್ನರಾಗಿರುವಾಗ ಆದ ರಸಭಂಗವನ್ನು ತಿಳಿಸಿದೆ. ಅವರು ಒಂದು ಕ್ಷಣ ಯೋಚಿಸಿ ತಾವು ಮಾಡಿದ್ದು ಅನುಚಿತವೆಂದು ಒಪ್ಪಿದರು. ನನಗೆ ಸಂತೋಷವಾಯಿತು.
’ಸರಸಾ ವಿಪರೀತಾಶ್ಚೇತ್ ಸರಸಾ ಏವ ಕೇವಲಂ.
ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಏವ ಕೇವಲಂ’
ಎಂಬ ಸುಭಾಷಿತದ ನೆನಪಾಯಿತು. ಅವರಿಗೆ ಧನ್ಯವಾದಗಳನ್ನು ಹೇಳಿದೆ. ಅವರು ನೀವು ನಮಗೆ ಧನ್ಯವಾದ ಹೇಳಬಾರದು. ನಮ್ಮನ್ನು ಎಚ್ಚರಿಸಿದಿರಿ. ನಾವೇ ನಿಮಗೆ ಕೃತಜ್ಞರು ಎಂದರು. ಅದು ಅವರ ವಿನಯ, ಸಂಸ್ಕಾರ.
ಬಾಂಗ್ ಪ್ರಾರ್ಥನೆಯಲ್ಲದಿದ್ದರೂ ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆಗೆ ಕರೆ ನೀಡುವುದು ಸಾರ್ವಜನಿಕ ನೆಮ್ಮದಿಯ ದೃಷ್ಟಿಯಿಂದ ಉಚಿತವಾದುದಲ್ಲ. ಇಂದು ಸಮಯ ಸೂಚಕ ಅಲಾರಾಂ, ಗಡಿಯಾರ ಮೊದಲಾದವು ಮೊಬೈಲುಗಳಲ್ಲಿಯೂ ಇವೆ. ಸಾರ್ವಜನಿಕ ಹಿತದ ದೃಷ್ಟಿಯಿಂದ ಬಾಂಗ್ ಗೆ ಧ್ವನಿವರ್ಧಕಗಳನ್ನು ಬಳಸದಿರುವುದು ವಿವೇಕಯುತವಾಗುತ್ತದೆ. ಬಾಂಗ್ ಒಂದೆರಡು ನಿಮಿಷಗಳ ಅವಧಿಯದಾದರೂ ಅದನ್ನೇ ನೆಪ ಮಾಡಿಕೊಂಡು ಇತರರು ದಿನವಿಡೀ ಧ್ವನಿವರ್ಧಕ ಬಳಸಿ ಸಾರ್ವಜನಿಕರ ನೆಮ್ಮದಿಯನ್ನು ಹಾಳುಮಾಡುವುದಕ್ಕೆ ಸಮರ್ಥನೆ ಇಲ್ಲವಾಗುತ್ತದೆ. ಮಸೀದಿಯ ಗೋಡೆಗಳ ನಡುವೆ ಖಾಸಗಿಯಾಗಿ ಪ್ರಾರ್ಥನೆ ನಡೆಯುವಂತೆ ಬಾಂಗಿಗೂ ಖಾಸಗಿ ವಿಧಾನಗಳನ್ನು ಅನುಸರಿಸಬೇಕು.
ಮತಧರ್ಮನಿರಪೇಕ್ಷ ಸಂವಿಧಾನದ ಹೆಸರಿನಲ್ಲಿ ಆಧಿಕಾರ ಸ್ವೀಕರಿಸಿರುವ ಸರಕಾರದ ಮಾಧ್ಯಮವಾದ ಆಕಾಶವಾಣಿ ಪ್ರತಿ ಶನಿವಾರ ರಾಷ್ಟ್ರೀಯ ಮಹತ್ವದ್ದೆನ್ನುವಂತೆ ಸುಬ್ಬಲಕ್ಷ್ಮಿಯವರು ಹಾಡಿರುವ ಮತಧರ್ಮದ ದೇವತೆಯೊಂದರ ಸುಪ್ರಭಾತವನ್ನು ಪ್ರಸಾರಮಾಡುವುದು ನಿಲ್ಲಬೇಕು.
ಅದೇ ರೀತಿ ಇತರ ಬಾನುಲಿ, ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಮತಧರ್ಮವನ್ನು ಮೆರೆಸುವ, ಭಕ್ತಿ ಗೀತೆಗಳು, ಜ್ಯೋತಿಷ್ಯ ಮೊದಲಾದ ಮೌಢ್ಯವನ್ನು ಬಿತ್ತರಿಸುವ ಕಾರ್ಯಕ್ರಮಗಳನ್ನು ನಿರ್ಬಂಧಿಸಬೇಕು. ಅವರಿಗೆ ಬಾಂಗ್ ಸಮರ್ಥನೆಯಾಗಿ ಸಿಗುವಂತಾಗಬಾರದು. ಯೋಚಿಸಿ.





1. “ಮಸೀದಿಯ ಗೋಡೆಗಳ ನಡುವೆ ಖಾಸಗಿಯಾಗಿ ಪ್ರಾರ್ಥನೆ ನಡೆಯುವಂತೆ ಬಾಂಗಿಗೂ ಖಾಸಗಿ ವಿಧಾನಗಳನ್ನು ಅನುಸರಿಸಬೇಕು”- ಸರಿಯಾದ ಮಾತು
೨. “ಮತಧರ್ಮನಿರಪೇಕ್ಷ ಸಂವಿಧಾನದ ಹೆಸರಿನಲ್ಲಿ ಆಧಿಕಾರ ಸ್ವೀಕರಿಸಿರುವ ಸರಕಾರದ ಮಾಧ್ಯಮವಾದ ಆಕಾಶವಾಣಿ ಪ್ರತಿ ಶನಿವಾರ ರಾಷ್ಟ್ರೀಯ ಮಹತ್ವದ್ದೆನ್ನುವಂತೆ ಸುಬ್ಬಲಕ್ಷ್ಮಿಯವರು ಹಾಡಿರುವ ಮತಧರ್ಮದ ದೇವತೆಯೊಂದರ ಸುಪ್ರಭಾತವನ್ನು ಪ್ರಸಾರಮಾಡುವುದು ನಿಲ್ಲಬೇಕು”- ಈ ಮಾತು ಸಮ್ಮತವೆನ್ನಿಸುತ್ತಿಲ್ಲ. ಸುಪ್ರಭಾತವನ್ನು ಕೇಳಿ ಮನಸ್ಸಿಗೆ ಚೈತನ್ಯ ಪಡೆದುಕೊಳ್ಳುವವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕಿಗೆ ಕಲ್ಲೆಸೆದಂತೆ. ಬಾನುಲಿ ಪ್ರಸಾರವನ್ನು ಕೇಳುವವರು ಸೌಂಡ್ ಸಣ್ಣಗಿರಿಸಿ ಕೇಳಿಕೊಳ್ಳಬೇಕಾದುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು.
೩.”ಬಾನುಲಿ, ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಮತಧರ್ಮವನ್ನು ಮೆರೆಸುವ, ಭಕ್ತಿ ಗೀತೆಗಳು, ಜ್ಯೋತಿಷ್ಯ ಮೊದಲಾದ ಮೌಢ್ಯವನ್ನು ಬಿತ್ತರಿಸುವ ಕಾರ್ಯಕ್ರಮಗಳನ್ನು ನಿರ್ಬಂಧಿಸಬೇಕು’”- ಯಾವುದೇ ಧರ್ಮ ಮತ್ತು ಮತದ ಹೆಸರಿನಲ್ಲಿ ಮೌಢ್ಯ ಬಿತ್ತುವಂತಹ ಕಾರ್ಯಕ್ರಮಗಳನ್ನು ನಿಬಂಧಿಸಬೇಕು. ಆದರೆ ಭಕ್ತಿಗೀತೆಗಳನ್ನು ಬಿತ್ತರಿಸಬಾರದು ಅನ್ನುವುದು ಯಾವ ನ್ಯಾಯ?
ಭಾಷೆ ಮತ್ತು ಸಂಸ್ಕೃತಿ- ಆಚರಣೆಗಳಿಗೆ ಅನುಸಾರವಾಗಿ ರಚಿತವಾಗಿರುವ ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರತಿಯೊಬ್ಬರಿಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕು ಇದೆ. ಯಾವುದೇ ಮತ-ಪಂಗಡದವರು ತಮ್ಮ ಆಚರಣೆಗಳನ್ನು ನಡೆಸುವಾಗ ಇತರರಿಗೆ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳುವುದು ಸಾತ್ವಿಕವೆನ್ನಿಸುತ್ತದೆ.