ಅಮೃತಾ ಪ್ರೀತಂ ನಿಟ್ಟುಸಿರು

ಬರಹಗಾರ್ತಿಯ ವೇದನೆಗಳು

ಅಮೃತಾ ಪ್ರೀತಂ 

maheshwari u2

ಕನ್ನಡಕ್ಕೆ: ಮಹೇಶ್ವರಿ. ಯು

ಒಬ್ಬ ಮಹಿಳೆಯನ್ನು ನಮ್ಮ ಸಮಾಜವು ಲೇಖಕಿಯಾಗಿ ಸ್ವೀಕರಿಸುವುದಕ್ಕಿಂತ ಸುಲಭವಾಗಿ ಒಬ್ಬ ಹಾದರಗಿತ್ತಿಯಾಗಿ ಸ್ವೀಕರಿಸುತ್ತದೆ. ದಾರಿಯ ಕೆಸರು ಬಿಳಿಹಾಳೆಯನ್ನು ರಾಡಿಗೊಳಿಸುವಂತೆ ಕಡುಬಣ್ಣದ ಉಡುಪುಗಳನ್ನು ಹಾಳುಮಾಡುವುದಿಲ್ಲ. ಹೆಣ್ಣೆಂದರೆ ಕೆಸರು ಸ್ಪಷ್ಟವಾಗಿ ಎದ್ದು ತೋರುವ ಬಿಳಿಯ ಹಾಳೆಯಂತೆ.

ಒಬ್ಬಾಕೆ ಲೇಖಕಿ ವೇಶ್ಯೆಯ ಬಗ್ಗೆಯೋ ಅಥವಾ ವಿಕೃತ ಕಾಮಸಂಬಂಧಗಳ ಬಗ್ಗೆಯೋ ಬರೆದರೆ ಮತ್ತು ಮನುಷ್ಯರ ಮಾನಸಿಕ ಕುದಿತಗಳನ್ನು ವಿಶ್ಲೇಷಿಸಿದರೆ ಓದುಗರು ಅಲ್ಲಿ ನಿರೂಪಿತವಾಗಿರುವ ಕೆಟ್ಟ ಅಂಶಗಳನ್ನು ಲೇಖಕಿಯ ವೈಯಕ್ತಿಕ ಬದುಕಿಗೆ ಆರೋಪಿಸಿ ನೋಡುತ್ತಾರೆ. ಕೆಟ್ಟಕುತೂಹಲವನ್ನು ಪ್ರಕಟಿಸುವ , ಕೆಣಕುವ ಮೂರ್ಖಪತ್ರಗಳು ನನಗೆ ಹೆಚ್ಚಾಗಿ ಬರುತ್ತವೆ.

amrita preetam1ಒಂದು ಪ್ರಣಯ ಕವಿತೆಯನ್ನು ಬರೆದರೆ ‘ನಿಮ್ಮ ಪ್ರಿಯತಮ ಯಾರು ? ಯಾರಿಗಾಗಿ ಈ ಕವಿತೆಯನ್ನು ಬರೆದಿರಿ’ ಎಂದು ಜನ ಕೇಳುತ್ತಾರೆ. ಒಬ್ಬ ವಿವಾಹಿತ ಮಹಿಳೆಗೆ ಈ ಪ್ರಶ್ನೆಗಳಿಂದ ಆಗುವ ಮುಜುಗರವನ್ನು ಕಲ್ಪಿಸಿಕೊಳ್ಳಿ. ಧರ್ಮದ ದಿರುಸನ್ನು ಧರಿಸಿಕೊಂಡು ನೈತಿಕತೆಯ ಮೇಲುಡುಪನ್ನು ಹಾಕಿಕೊಂಡು ನಾವು ಬಾಳುತ್ತೇವೆ. ಅವನೊಬ್ಬ ರಾಜಕೀಯ ಧುರೀಣನಾಗಿರಲಿ, ಅರ್ಚಕನಾಗಿರಲಿ ಅಥವಾ ಬರಹಗಾರನಾಗಿರಲಿ ಅವನ ವೈಯಕ್ತಿಕ ಜೀವನ ಮತ್ತು ಅವನ ವೃತ್ತಿಯೊಂದಿಗೆ ಸಂಬಂಧ ಸ್ಥಾಪಿತವಾಗಿಯೇ ಆಗುತ್ತದೆ.

ಈ ನಮ್ಮ ದೇಶದಲ್ಲಿ ಒಬ್ಬ ಒಳ್ಳೆಯ ಜನರಲ್ ಯಾರು ಎಂದರೆ ನೀಟಾಗಿ ಬಾಳುವೆ ಮಾಡುವವನು ಮತ್ತು ಯಾವುದೇ ಆಮಿಷಗಳಿಂದ ದೂರವಿರುವವನು. ಒಬ್ಬ ಒಳ್ಳೆಯ ಆರ್ಥಿಕ ತಜ್ಞ ಯಾರೆಂದರೆ ಸಿಗರೇಟು, ಮದ್ಯ ಮತ್ತಿತರ ವ್ಯಸನಗಳಿಂದ ದೂರವಿರುವವನು – ಹೀಗೆ ತಿಳಿಯುತ್ತಾರೆಂದರೆ ಆಶ್ಚರ್ಯವಿಲ್ಲ. ಕೇವಲ ಧಾರ್ಮಿಕತೆಗಾಗಿಯೇ ಗೌರವಿಸಲ್ಪಡುವ ಒಬ್ಬ ಗಡ್ಡಧಾರಿ ಡಾಕ್ಟರನ್ನು ನಾನು ಬಲ್ಲೆ. ಆತ ರೋಗಿಗಳಿಗೆ ತಪ್ಪು ಔಷಧಿಗಳನ್ನು ಸೂಚಿಸಿದ ಕಾರಣದಿಂದ ಅವರು ಸತ್ತರೂ ಸರಿಯೆ. ಒಬ್ಬ ಲೇಖಕನಂತೂ ಅವನ ವೃತ್ತಿಯ ಸಹಜ ಸ್ವಭಾವದಿಂದಾಗಿಯೇ ಪ್ರತಿಷ್ಠೆ ಹಾಗೂ ಹುಸಿಮೌಲ್ಯಗಳ ಶತ್ರುವಾಗಿರುತ್ತಾನೆ. ನಿರ್ಜೀವ ವ್ಯವಸ್ಥೆಯ ವಿರುದ್ಧ ಅವನು ಸದಾ ಬಂಡೇಳುತ್ತಾನೆ.

ಒಬ್ಬ ಪುರುಷನಿಗಿರುವಷ್ಟು ಅನುಭವಗಳ ಅವಕಾಶ ಮಹಿಳೆಗೆ ಇರುವುದಿಲ್ಲ. ಭಾವನೆಗಳ ವಾಸ್ತವತೆಯನ್ನು ಒಬ್ಬ ಪುರುಷ ಬಹಿರ್ಮುಖಗೊಳಿಸಿ ನೋಡಿದರೆ ಒಬ್ಬ ಮಹಿಳೆ ಅದನ್ನು ಅಂತರ್ಮುಖಗೊಳಿಸಿ ನೋಡುತ್ತಾಳೆ. ಆ ನೈಸರ್ಗಿಕವಾದ, ಕಲ್ಲೋಲವೆಬ್ಬಿಸಿದ ಮುಕ್ತಜೀವನ , ಒಳ್ಳೆಯ, ಕೆಟ್ಟ, ರೂಕ್ಷ, ಆಮಿಷಗಳಿಂದ ಕೂಡಿದ, ಸಾಹಸಯುತ ಯಾವುದೇ ಇರಲಿ- ಕೇವಲ ಅವನ ದೈಹಿಕ ಸಾಮರ್ಥ್ಯದಿಂದಾಗಿ ಅವನಿಗೆ ದಕ್ಕುತ್ತದೆ. ಆದರೆ ಸ್ತ್ರೀಗೆ – ಅವಳು ಅವಳ ಮನೆಯ ನಾಲ್ಕು ಕೋಣೆಗಳ ಮಧ್ಯೆ ಬೆಳೆಯುವುದರಿಂದ ಇವುಗಳಿಂದೆಲ್ಲ ವಂಚಿತಳಾಗುತ್ತಾಳೆ. ಒಂದುವೇಳೆ ಅವಳು ಹೊರಜಗತ್ತಿಗೆ ಹೋದರೂ ಕೂಡ ಅವಳು ಆಮೆಯಂತೆ ಬೆನ್ನಿನ ಮೇಲೆ ಮನೆಯ ಗೋಡೆಯೆಂಬ ಚಿಪ್ಪುಗಳನ್ನು ಹೊತ್ತಿರುತ್ತಾಳೆ.

ಪಾಶ್ಚಾತ್ಯ ಮಹಿಳೆ ಶತಮಾನಗಳಿಂದ ಯಾವ ಸ್ವಾತಂತ್ರ್ಯವನ್ನು ಅನುಭವಿಸಿದ್ದಾಳೋ ಅದು ಈ ದೇಶಕ್ಕೆ ತಿಳಿದೇ ಇಲ್ಲ. ಒಮ್ಮೆ ನಲ್ವತ್ತರ ದಶಕದ ಆರಂಭದಲ್ಲಿ ಇಂಡಿಯನ್ ಲಿಸನರ್ ಪತ್ರಿಕೆಯ ಮುಖಪುಟದಲ್ಲಿ ನನ್ನ ಫೊಟೋ ಅಚ್ಚಾದಾಗ ಒಬ್ಬ ಗೂಡಂಗಡಿಯವನು ಆ ಚಿತ್ರವನ್ನು ತನ್ನ ಅಂಗಡಿಯ ಮರದ ಬೋರ್ಡ್ನಲ್ಲಿ ಅಂಟಿಸಿದ. ಪುರೋಹಿತ ವರ್ಗ, ಪ್ರತಿಗಾಮಿ ಪತ್ರಿಕೆಗಳು ಮತ್ತು ಸಂಸ್ಥೆಗಳು ಆ ಚಿತ್ರದ ಪ್ರಕಟಣೆಯ ವಿರುದ್ಧ ಬರೆದರು. ಗಯ್ಯಾಳಿ ಹೆಂಗಸರು ಮತ್ತು ಸಣ್ಣ ಸಣ್ಣ ವ್ಯಾಪಾರಿಗಳ ಹೆಂಡಂದಿರು ಕುಚೋದ್ಯದ ಮಾತುಗಳನ್ನು ನನ್ನ ಕುರಿತಾಗಿ ಆಡಿದರು.

ಇತರ ದೇಶಗಳಲ್ಲಿ ಜನರು ತಮ್ಮ ನೆಚ್ಚಿನ ಬರಹಗಾರ ಮತ್ತು ಕಲಾವಿದರ ಭಾವಚಿತ್ರಗಳನ್ನು ತಮ್ಮ ಮನೆಗಳಲ್ಲಿ ತೂಗು ಹಾಕುತ್ತಾರೆ. ಫ್ರಾನ್ಸ್ ದೇಶದಲ್ಲಿ ಒಬ್ಬ ಪರಿಚಾರಿಕೆಗೆ ಕೂಡ ಪಿಕಾಸೊ ಎಂದರೆ ಗೊತ್ತು.  ಜೀನ್ ಪಾಲ್ ಸಾರ್ತ್ರೆ ಎಂದರೆ ಗೊತ್ತು. ಅವಳಿಗೆ ಆ ಪ್ರದೇಶದ ಜನಪ್ರತಿನಿಧಿಯನ್ನೋ ಸಚಿವನನ್ನೋ ಗೊತ್ತಿರಲಾರದು. ಆದರೆ ನಮ್ಮ ದೇಶದಲ್ಲಿ ಅದರಲ್ಲೂ ಪಂಜಾಬಿನಲ್ಲಿ ಹೊಸ ವ್ಯಾಪಾರಿವರ್ಗಕ್ಕೆ ಪ್ರತಿಯೊಬ್ಬ ಉಪ ಸಚಿವನನ್ನೂ ಗೊತ್ತು. ಆದರೆ ಅಮೃತಾ ಶೇರ್ ಗಿಲ್ ಅಥವಾ ಮೋಹನ್ ಸಿಂಗ್ ಎಂದರೆ ಯಾರೆಂದು ಗೊತ್ತಿಲ್ಲ.

amrita preetam revenue stampಪಂಜಾಬಿಗಳಿಗೆ ಜೀವನೋತ್ಸಾಹವಿರುತ್ತದೆ. ಅವರಿಗೆ ಬಣ್ಣ, ಒಳ್ಳೆಯ ಆಹಾರ, ಹಾಗೆಯೇ ಒಳ್ಳೆಯ ಜಗಳ ಎಂದರೆ ತುಂಬ ಇಷ್ಟ. ಒಂದು ರೀತಿಯ ಆಡಂಬರತೆ ಅವರಲ್ಲಿ ಹುದುಗಿರುತ್ತದೆ. ಹೊಟೇಲು, ಕೆಫೆ, ನೈಟ್ ಕ್ಲಬ್ಗಳು ಪಂಜಾಬಿಗಳಿಂದ ತುಂಬಿರುತ್ತದೆ. ಈಗ ಪಂಜಾಬು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಹೋರಾಡುತ್ತಾರಲ್ಲ, ಅವರಿಗೆ ಪಂಜಾಬಿ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಅರಿವಾಗಲಿ, ಆದರವಾಗಲಿ ಇಲ್ಲ. ಖಂಡಿತವಾಗಿ ಅವರಿಗೆ ಅವರ ನೆಲದ ಬರಹಗಾರರನ್ನಾಗಲಿ, ಚಿತ್ರಕಾರರನ್ನಾಗಲಿ ಗೊತ್ತಿಲ್ಲ. ಅವರು ಒಬ್ಬ ಕವಿಯನ್ನು ವಿಜೃಂಭಣೆಯಿಂದ ಸನ್ಮಾನಿಸುವುದಕ್ಕಾಗಿ 50 ಸಾವಿರ ರೂ ವೆಚ್ಚಮಾಡಲು ಸಿದ್ಧರಾಗಿರುವರು .ಆದರೆ ಕನಿಷ್ಠ ಮೂರು ರುಪಾಯಿಯನ್ನು ಒಂದು ಕಾವ್ಯಸಂಗ್ರಹಕ್ಕಾಗಲಿ ಸಣ್ಣಕಥೆಗಳ ಒಂದು ಪುಸ್ತಕಕ್ಕಾಗಲಿ ವಿನಿಯೋಗಿಸಲು ಒಪ್ಪಲಾರರು.

ಪಂಜಾಬಿ ಸಂಸ್ಕೃತಿಯ ಒಂದು ಪ್ರಮುಖ ಕೇಂದ್ರವಾದ ಹೊಸದಿಲ್ಲಿಯಲ್ಲಿ ಸತ್ಕಾರ ಕೂಟಗಳಿಗೆ ಕರೆದು ಆಗಾಗ ನನ್ನನ್ನು ಸನ್ಮಾನಿಸುತ್ತಾರೆ. ಅಂತಹ ಒಂದು ಸಮಾರಂಭಕ್ಕೆ ನಾನು ತಿಳಿದಂತೆ ಎರಡು ಸಾವಿರಕ್ಕಿಂತ ಹೆಚ್ಚು ಖರ್ಚಾಯಿತು. ಅದರ ಅರ್ಧದಷ್ಟು ಹಣವನ್ನು ಹಾಗೇ ಕೊಟ್ಟಿದ್ದರೆ ನನ್ನ ಮನೆಯನ್ನು ನವೀಕರಿಸಬಹುದಿತ್ತು. ನನ್ನ ಅಡುಗೆ ಕೋಣೆಯನ್ನು ಚೆನ್ನಾಗಿ ಇಡಬಹುದಿತ್ತು. ಅಥವಾ ಪುಸ್ತಕಗಳನ್ನೂ ಇನ್ನಿತರ ಅಗತ್ಯಗಳನ್ನೂ ಪೂರೈಸಬಹುದಾಗಿತ್ತು ಎಂದು ನಾನೆಷ್ಟು ಆಸೆಪಟ್ಟೆ! ಇಂತಹ ಕಾರ್ಯಕ್ರಮಗಳ ಸಂಘಟಕರ ಮನೆಗೆ ಕೆಲವೊಮ್ಮೆ ನಾನು ಹೋದದ್ದಿದೆ. ಆದರೆ ಆ ಮನೆಗಳಲ್ಲಿ ನನ್ನ ಯಾವುದೇ ಕೃತಿ ಇದ್ದುದಾಗಿ ನಾನು ಕಂಡಿಲ್ಲ. ಹೆಚ್ಚಾಗಿ ಹುಲಿಯ ಚರ್ಮ ಗೋಡೆಯ ಮೇಲೆ ಇದ್ದೀತು ಹೊರತಾಗಿ ಪುಸ್ತಕಗಳ ಕಪಾಟು ಇಲ್ಲವೆಂದೇ ಹೇಳಬೇಕು.

ಒಬ್ಬ ಮಹಿಳೆಗೆ ಆಕೆಯ ಕೃತಿ ಒಂದು ಮ್ಯಾಗಸಿನ್ ನಲ್ಲಿ ಪ್ರಕಟವಾಗುವುದು ಒಬ್ಬ ಪುರುಷನಿಗಿಂತ ತುಲನಾತ್ಮಕವಾಗಿ ಸುಲಭ. ಕೆಲವು ಪುರುಷರು ಸ್ತ್ರೀ ಕಾವ್ಯನಾಮಗಳನ್ನಿಟ್ಟು ಬರೆಯುವುದನ್ನು ನಾನು ಬಲ್ಲೆ. ಆದರೆ ಒಂದು ನಿಜವಾಗಿಯೂ ಉತ್ಕೃಷ್ಟವಾದ ಕವನ ಅಥವಾ ಸಣ್ಣಕಥೆ ಒಬ್ಬ ಮಹಿಳೆಯ ಹೆಸರಿನಲ್ಲಿ ಪ್ರಕಟವಾದರೆ ಪ್ರತಿಯೊಬ್ಬನೂ ಸಂಶಯಪಡುತ್ತಾನೆ. ನನ್ನ ಮೊದಲ ಕವನಗಳು 1936ರಲ್ಲಿ ಪಂಜಾಬಿ ಪತ್ರಿಕೆಗಳಲ್ಲಿ ಪ್ರಕಟವಾದವು. ಆದರೆ ಅದರ ಸಂಪಾದಕರು ಹಾಗೂ ಓದುಗರು ಆಕವನಗಳನ್ನು ನಾನು ಬರೆದದ್ದಲ್ಲವೆಂದೂ ಅವು ಸ್ವತಃ ಕವಿಯಾದ ನನ್ನ ತಂದೆಯ ರಚನೆಗಳೆಂದೂ ಭಾವಿಸಿದ್ದರು.

ಇದು ಒಂದು ರೀತಿಯಲ್ಲಿ ನನಗೆ ಖುಷಿಯನ್ನೂ ಕೊಟ್ಟಿತ್ತು. ಯಾಕೆಂದರೆ ನನ್ನ ಕೃತಿ ಎಷ್ಟು ಒಳ್ಳೆಯದಿತ್ತೆಂದರೆ ಅದನ್ನು ನನ್ನ ತಂದೆ ಬರೆದದ್ದೆಂದು ಇತರರು ಭಾವಿಸುವಷ್ಟು. ಆದರೆ ಅದು ನನ್ನನ್ನು ಆಳವಾಗಿ ಘಾಸಿಗೊಳಿಸಿತ್ತು ಕೂಡ. ಯಾಕೆಂದರೆ ಅಂತಹ ಕವನದ ರಚನೆಗೆ ನಾನು ಅರ್ಹಳಲ್ಲವೆಂದು ಭಾವಿಸಲಾಗಿತ್ತು! ನನ್ನ ತಂದೆಯವರು 1946ರಲ್ಲಿ ತೀರಿಹೋದರು. ಅದಾದ ಒಂದು ವರ್ಷದ ಬಳಿಕ ಮಾತ್ರವೇ ನನ್ನ ಕವನ ನಾನೇ ರಚಿಸಿದ್ದೆಂದು ಎಲ್ಲರೂ ನಂಬುವಂತಾಯಿತು. ಆ ಕವನದ ವಿಷಯ ದೇಶವಿಭಜನೆ. ವಾರಿಸ್ ಷಾನೊಂದಿಗೆ ನನ್ನ ಮಾತು ಎಂದು ಅದರ ಶೀರ್ಷಿಕೆಯಾಗಿತ್ತು.

ಒಬ್ಬ ಬರಹಗಾರ್ತಿ ಅವಳ ಕಲೆಯನ್ನು ಸಂಶಯಗ್ರಸ್ತ ಜನಗಳಿಗೆ ತನ್ನದೆಂದು ಸಮರ್ಥಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಇಸ್ಮತ್ ಚುಗ್ತೈ ಎಂಬ ಪ್ರಸಿದ್ಧ ಉರ್ದು ಬರಹಗಾರ್ತಿ ಲೈಂಗಿಕ ಸಂಬಂಧಗಳು ಮತ್ತು ಸ್ತ್ರೀ ಶೋಷಣೆ ವಸ್ತುವಾಗುಳ್ಳ ಕತೆಗಳನ್ನು ಮೊದಲಿಗೆ ಬರೆದಾಗ ಅವಳ ಶೈಲಿ ಮತ್ತು ಮನುಷ್ಯ ಪ್ರವೃತ್ತಿಗಳನ್ನು ಆಳಕ್ಕಿಳಿದು ಶೋಧಿಸುವ ರೀತಿ ಓದುಗರನ್ನು ಆಘಾತಗೊಳಿಸಿತು, ಮತ್ತು ಕೆಲಸಮಯದ ವರೆಗೆ ಅವಳ ಕಲೆಯನ್ನು ಪುರುಷ ಪ್ರತಿಭೆ ಎಂದು ಬಣ್ಣಿಸಿತು.

ನನ್ನ ಬರವಣಿಗೆ ವೃತ್ತಿಯ ಆರಂಭದ ವರ್ಷಗಳಲ್ಲಿ ನಾನು ಇತರರ ಕವನಗಳನ್ನು ಕದಿಯುತ್ತೇನೆಂದು ಆರೋಪ ಹೊರಿಸಲಾಯಿತು. ಮಾತ್ರವಲ್ಲ ನಾನು ರೂಪವತಿಯಾಗಿದ್ದುದರಿಂದ ನನ್ನ ಕವನಗಳನ್ನು ಪ್ರಕಟಿಸುತ್ತಾರೆಂದೂ ವ್ಯಂಗ್ಯವಾಡುತ್ತಿದ್ದರು. (ಸಾಂಪ್ರದಾಯಿಕವಾದ ನಂಬಿಕೆ ಏನೆಂದರೆ ಒಬ್ಬ ಕವಿ ಎಂದ ಮೇಲೆ ಆತ ಒಬ್ಬ ನೊಂದ ಬೆಂದ ಕುರೂಪಿ ಪ್ರಾಣಿ). ಇದು ನನ್ನಬರವಣಿಗೆಯನ್ನು ಮುದುಡಿಸಿತು. ಯಾಕೆಂದರೆ ನನ್ನ ಕಾವ್ಯದ ಯಶಸ್ಸನ್ನು ನನ್ನ ಸೌಂದರ್ಯಕ್ಕೆ ಆರೋಪಿಸುವ ಈ ರೀತಿಯ ಪ್ರತಿಕ್ರಿಯೆಗಳಿಂದ ನಾನು ಆಗಾಗ ನೊಂದು ಕೊಳ್ಳುತ್ತಿದ್ದೆ. ನಾನು ಒಂದೊಮ್ಮೆ ಬಹಳ ಉತ್ಸಾಹದಿಂದ ಸಭೆ ಸಮಾರಂಭಗಳಲ್ಲಿ ಕವಿಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದೆ. ಸ್ವಲ್ಪ ಕಾಲ ಕಳೆದ ಮೇಲೆ ನಾನು ಈ ಪರಿಪಾಠವನ್ನು ನಿಲ್ಲಿಸಿದೆ.ತಣ್ಣಗಿನ ಮುದ್ರಣ ಮಾಧ್ಯಮವೇ ಜನರನ್ನು ತಲಪುವ ಉತ್ತಮ ಮಾರ್ಗವೆಂದು ನಾನು ಭಾವಿಸಿದೆ.

ಕೆಲವು ವರ್ಷಗಳ ಹಿಂದೆ ಇಂಗ್ಲಿಷಿನ ಒಂದು ಪ್ರಸಿದ್ಧ ದಿನಪತ್ರಿಕೆ ನನ್ನ ಬಗ್ಗೆ ಹೀಗೆ ಬರೆಯಿತು- ಅವಳ ಯೌವನ ಮತ್ತು ಸೌಂದರ್ಯ ಅವಳಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು. ಅಮೃತಾ ಶೇರ್ ಗಿಲ್ ನ ಚಿತ್ರಕಲೆಯ ಬಗ್ಗೆ ಮಾತನಾಡದೆ ಜನರು ಅವಳ ದೈಹಿಕ ಸೌಂದರ್ಯದ ಬಗ್ಗೆ ಮಾತನಾಡುವುದನ್ನು ಕೇಳಿ ಆ ಕಲಾವಿದೆ ತನಗಾದ ವೇದನೆಯನ್ನು ಅವಳ ಸ್ನೇಹಿತೆಯರೊಂದಿಗೆ ಹಂಚಿಕೊಂಡದ್ದನ್ನು ಈಗ ನಾನು ಅರ್ಥಮಾಡಿಕೊಳ್ಳಬಲ್ಲೆ…

 

ಮೂಲ:
ಇಂಗ್ಲಿಷ್ : Woes of a writer “ Amritha preetham PUBLISHED IN THE ILLUSTRATED WEEKLY  of INDIA DATED FEB 5, 1961 RE PUBLISHED IN July1-7, 1990 in Illustrated weekly

ಕನ್ನಡಕ್ಕೆ: ಮಹೇಶ್ವರಿ. ಯು ( ಅಮೃತಾ ಪ್ರೀತಮ್ ಬಹಳ ಹಿಂದೆ ಬರೆದು ಪ್ರಕಟಿಸಿದ ಈ ಬರಹಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಈ ಬರಹವನ್ನು ನಾನು ಅನುವಾದಿಸಿ ಹಲವು ವರ್ಷಗಳಾದವು)

‍ಲೇಖಕರು admin

April 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಎಸ್.ಪಿ.ವಿಜಯಲಕ್ಶ್ಮಿ

    ಒಬ್ಬ ಲೇಖಕಿಯ ಅಂತರಾಳದ ಈ ವೇದನೆ ಓದಿ ಮನಸ್ಸು ಭಾರವಾಯಿತು. ಹೆಣ್ಣಿಗೆ ಎಷ್ಟು ಅಡೆತಡೆಗಳು…

    ಪ್ರತಿಕ್ರಿಯೆ
  2. Shama, Nandibetta

    “ಒಬ್ಬ ಮಹಿಳೆಯನ್ನು ನಮ್ಮ ಸಮಾಜವು ಲೇಖಕಿಯಾಗಿ ಸ್ವೀಕರಿಸುವುದಕ್ಕಿಂತ ಸುಲಭವಾಗಿ ಒಬ್ಬ ಹಾದರಗಿತ್ತಿಯಾಗಿ ಸ್ವೀಕರಿಸುತ್ತದೆ.”

    Very true.

    Hennannu heege noduvudu mathu chuchuvudu samaajada vikrutha hasivu theerisikolluva heddari.

    ಪ್ರತಿಕ್ರಿಯೆ
  3. Sangeeta Kalmane

    ಮಹಿಳಾ ಲೇಖಕಿಯರು ಕಡಿಮೆ ಆಗಲು ಇಂಥ ವಿಷಯಗಳು ಕಾರಣವಾಗಿರಬಹುದೆ ಅನ್ನಿಸುತ್ತದೆ. ಅಂತರಂಗದ ಮಾತು ಓದಿ ಮನಸ್ಸು ಭಾರವಾಯಿತು.

    ಪ್ರತಿಕ್ರಿಯೆ
  4. ಆನಂದ್ ಋಗ್ವೇದಿ

    ಓರ್ವ ಲೇಖಕಿಯ ಮಗನಾಗಿ ನಾನು ಈ ಎಲ್ಲಾ ತಳಮಳಗಳನ್ನು ಹತ್ತಿರದಿಂದ ಕಂಡು ಬೆಳೆದವನು. ಕಾಲ ಬದಲಾಗಿದೆ, ಆದರೆ ಪರಿಸ್ಥಿತಿ ಈ ಲೇಖನದಲ್ಲಿ ಇದ್ದಂತೆ ಇದೆ!!

    ಪ್ರತಿಕ್ರಿಯೆ
  5. Sulekha Varadaraj Puttur

    Namasthe Maheshwari madam..thumba olleya baraha navella oduvanthe madiddeeri..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: