ಓ ದಿದ್ದಿರಿ.. ದಿದ್ದಿರಿ ದಿದ್ದಿರಿ ದಿದ್ದಿರಿ..

ಅಮೃತಸ್ವರ

ಮುನ್ನುರ್

ಮಹಿಪಾಲರೆಡ್ಡಿ ಮುನ್ನೂರ್

ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು.. ಮೇಲ್ಯಾವುದೋ..

ತೀರಾ ಇತ್ತೀಚೆಗೆ, ಚಿಂಚೋಳಿ ತಾಲೂಕಿಗೆ ಹೋಗಿದ್ದೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮವಿತ್ತು. ಗೌರವಾರ್ಪಣೆ ಸಂದರ್ಭದಲ್ಲಿ ಒಂದು ಪುಸ್ತಕವನ್ನು ಕೊಟ್ಟರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ `ಜಾತಿನಾಶ ಹೇಗೆ?’ ಎಂಬ ಪುಟ್ಟ ಪುಸ್ತಿಕೆ ಅದಾಗಿತ್ತು. ಮನೆಗೆ ಬಂದ ಮೇಲೆ ಅದನ್ನು ಓದಲು ಶುರು ಮಾಡಿದೆ.

ambedkar posterಲಾಹೋರ್ (ಪಂಜಾಬ್)ನ ಜಾತ್ ಪಾತ್ ತೋಡಕ್ ಮಂಡಲ್ (ಜಾತಿ ನಾಶ ಸಮಿತಿ) ಎಂಬುದು ಹಿಂದೂ ಸಮಾಜ ಸುಧಾರಕರ ಸಂಸ್ಥೆ. ಇದು ಆರ್ಯ ಸಮಾಜಕ್ಕೆ ಸೇರಿದ್ದು. ಇದರ ಕಾರ್ಯದಶರ್ಿ ಸಂತರಾಮ್, ತಮ್ಮ ಸಮಿತಿಯು 1936ರಲ್ಲಿ ನಡೆಸಲಿರುವ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಡಾ.ಅಂಬೇಡ್ಕರ್ ಅವರನ್ನು ಒತ್ತಾಯಿಸಿ ಒಪ್ಪಿಸಿದರು. ತಮ್ಮ ಸಮಿತಿಯಲ್ಲಿ ಈ ಬಗ್ಗೆ ಸರ್ವ ಸಮ್ಮತಿ ಇಲ್ಲದಾಗ್ಯೂ ಅಂಬೇಡ್ಕರ್ ಅವರ ಚಿಂತನೆಯ ವಿಶೇಷತೆ ಗಮನಿಸಿ, ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಸಮಿತಿಯವರನ್ನು ಒಪ್ಪಿಸಿರುವುದಾಗಿಯೂ ತಿಳಿಸಿದರು.

ಡಾ.ಅಂಬೇಡ್ಕರ್ ಅವರು ಇಂಗ್ಲೀಷಿನಲ್ಲಿ ತಮ್ಮ ಅಧ್ಯಕ್ಷ ಭಾಷಣ ಸಿದ್ಧಪಡಿಸಿದರು. ಇದರ ಒಂದು ಪ್ರತಿಯನ್ನು ಪಡೆದುಕೊಂಡ ಸಮಿತಿಯು `ಕೆಲವೊಂದು ಪದಗಳನ್ನು (ವೇದ ಇತ್ಯಾದಿ) ಮತ್ತು ಕೆಲವೊಂದು ಅಂಶಗಳನ್ನು (ಹಿಂದೂ ಸಮುದಾಯವನ್ನು ತೊರೆದು ಹೋಗುತ್ತೇನೆ, ಹಿಂದೂವಾಗಿ ನಾನು ಮಾಡುತ್ತಿರುವ ಕೊನೆಯ ಭಾಷಣವಿದು ಇತ್ಯಾದಿ) ತೆಗೆದು ಹಾಕಲು’ ವಿನಂತಿಸಿ, ತಮ್ಮ ವಿನಂತಿಗೆ ಕಾರಣಗಳನ್ನು ನೀಡಿತು.

ಈ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಡಾ.ಅಂಬೇಡ್ಕರ್ ಸಕಾರಣವಾಗಿ ತಿಳಿಸಿದರು. ಇದನು ಒಪ್ಪದ ಸಮಿತಿ ಸಮ್ಮೇಳನವನ್ನೇ ರದ್ದುಪಡಿಸಿತು.

ಆದರೆ, ಆ ಹೊತ್ತಿಗೆ ಅಂದರೆ, ಏಪ್ರಿಲ್ 1936ರ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರು ತಮ್ಮ ಭಾಷಣದ 1500 ಪ್ರತಿಗಳನ್ನು ಮುದ್ರಿಸಿ ಆಗಿತ್ತು. ಹಾಗಾಗಿ, ಅವರು ಬೇರೆ ದಾರಿ ಇಲ್ಲದೇ, ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಅವುಗಳು ಎರಡು ತಿಂಗಳಲ್ಲಿಯೇ ಮಾರಾಟವಾದವು. ಅದರ ಗುಜರಾತಿ, ತಮಿಳು ಆವೃತ್ತಿಗಳು ಮೊದಲು ಪ್ರಕಟವಾದವು. ನಂತರ ಮರಾಠಿ, ಹಿಂದಿ, ಪಂಜಾಬಿ ಮತ್ತು ಮಲಯಾಳಂ ಭಾಷಾ ಆವೃತ್ತಿಗಳು ಹೊರಬಂದವು.

ಅಂಬೇಡ್ಕರ್ ಅವರ ಚಿಂತನೆಗಳ ಈ ಆವೃತ್ತಿಯ ಬಗ್ಗೆ ಮಹಾತ್ಮಾ ಗಾಂಧಿಯವರು ಪ್ರತಿಕ್ರಿಯಿಸಿದ್ದು, ಅಂಬೇಡ್ಕರ್ ಅವರು ಮರುಪ್ರತಿಕ್ರಿಯೆ ನೀಡಿದ್ದು ಎಲ್ಲವನ್ನೂ ಒಳಗೊಂಡ `ಜಾತಿನಾಶ ಹೇಗೆ?’ ಎನ್ನುವ ಪುಟ್ಟ ಪುಸ್ತಿಕೆಯನ್ನು ಮಂಗ್ಳೂರ ವಿಜಯ ಅವರು ಕನ್ನಡಕ್ಕೆ ತಜರ್ುಮೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಬರಹವನ್ನು ಒಮ್ಮೆ ನೋಡಿ.

`ಹಿಂದೂ ಸಮಾಜಕ್ಕೆ ನೈತಿಕ ಪುನರ್ಜನ್ಮ ಅವಶ್ಯಕ. ಇದನ್ನು ಸಾಧಿಸಲು ತಡ ಮಾಡಿದಲ್ಲಿ ಅಪಾಯ ಒದಗೀತು. ಇದಕ್ಕೆ ಬೌದ್ಧಿಕ ಪುನರ್ಜನ್ಮದ ಮಹತ್ವವನ್ನು ಅರಿತು, ಬೌದ್ಧಿಕ ಧೈರ್ಯ ತೋರುವ ಪ್ರಾಮಾಣಿಕರು ಬೇಕು.’

ಇಡೀ ಕೃತಿಯ ಕೊನೆಯಲ್ಲಿ ಹೀಗೆ ಹೇಳುತ್ತಾರೆ ಡಾ.ಅಂಬೇಡ್ಕರ್.

ಮ್ಯಾಥ್ಯೂ ಅನರ್ಾಲ್ಡ್, `ಹಿಂದೂಗಳು ಸತ್ತು ಹೋದ ಒಂದು ಜಗತ್ತು ಮತ್ತು ಜನ್ಮ ತಳೆಯಲು ಶಕ್ತಿಯಿಲ್ಲದ ಇನ್ನೊಂದು ಜಗತ್ತಿನ ನಡುವೆ ಎಡತಾಕುತ್ತಿದ್ದಾರೆ.’ ಎಂದಿದ್ದಾನೆ. `ಇಂಥ ಹಿಂದೂಗಳು ಮಹಾತ್ಮರಿಗೆ ಮೊರೆ ಇಡುತ್ತಾರೆ. ಆದರೆ, ಈ ಮಹಾತ್ಮರಿಗೋ ಸ್ವತಂತ್ರ ವಿಚಾರ ಮಾಡುವುದರಲ್ಲಿ ನಂಬಿಕೆಯಿಲ್ಲ. ಹಾಗಾಗಿ ಪ್ರತ್ಯಕ್ಷ ಅನುಭವದ ಒರೆಗಲ್ಲಿಗೆ ನಿಲ್ಲಬಲ್ಲಂಥ ಮಾರ್ಗದರ್ಶನವನ್ನು ಅವರು ನೀಡಲಾರರು.’

`ಹಿಂದೂ ಸಮಾಜದಲ್ಲಿ ಸ್ವತಂತ್ರ ವಿಚಾರ ಮಾಡಬಲ್ಲವರಿಂದಲಾದರೂ ಹಿಂದೂಗಳಿಗೆ ಮಾರ್ಗದರ್ಶನ ದೊರಕೀತೇ? ಅದೂ ಇಲ್ಲ. ಏಕೆಂದರೆ, ಈ ಜನರು ಅಪ್ರಾಮಾಣಿಕರು ಮತ್ತು ಉದಾಸೀನ ಮನೋಭಾವದವರು.’

`ಒಟ್ಟಾರೆ, ಒಂದು ಮಹಾದುರಂತಕ್ಕೆ ನಾವು ಸಾಕ್ಷಿಗಳಾಗಿ ನಿಂತಿದ್ದೇವೆ. ಈ ಹೊತ್ತಿನಲ್ಲಿ ‘ಓ ಹಿಂದೂಗಳೇ, ಇಂಥವರು ನಿಮ್ಮ ಮುಂದಾಳುಗಳೇ!’ ಎಂದು ನಾವು ಶೋಕಿಸಬಹುದು ಅಷ್ಟೇ.

ಎಂತಹ ನುಡಿಗಳಿವು.

ಇಡೀ ಪುಸ್ತಕವನ್ನು ಓದಿ ಮುಗಿಸಿದ ನಂತರ, ಅದ್ಯಾಕೋ ಗೊತ್ತಿಲ್ಲ. ಡಾ. ರಾಜಕುಮಾರ ಅವರು ಮನೋಜ್ಞವಾಗಿ ನಟಿಸಿದ, `ಸತ್ಯ ಹರಿಶ್ವಂದ್ರ’ ಸಿನಿಮಾದ ಹಾಡು `ಕುಲದಲ್ಲಿ ಕೀಳ್ಯಾವ್ದೋ.. ಹುಚ್ಚಪ್ಪಾ…, ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು.. ಮೇಲ್ಯಾವುದೋ…’ ನೆನಪಾಗತೊಡಗಿತು.

ಪ್ರಸಕ್ತ ರಾಜಕೀಯ ದೊಂಬರಾಟವನ್ನು ನೋಡುತ್ತಿದ್ದರೆ, ಇದು ಜಾತಿ ರಾಜಕೀಯವೇ ಅಥವಾ ರಾಜಕೀಯವೇ ಜಾತಿಯೇ ಎಂಬ ಪ್ರಶ್ನೆ ಎಲ್ಲರನ್ನೂ ನಖಶಿಖಾಂತ ಕಾಡುತ್ತದೆ. ಈ ಹೊಲಸು ರಾಜಕೀಯ ಯಾರಿಗೆ ಬೇಕು ಅಂತ ಹಾಗೇ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಹಾಗಂತ ಬಿಡೋ ಹಾಗೂ ಇಲ್ಲ. ಒಕ್ಕಲಿಗ ಹಾಗೂ ಲಿಂಗಾಯತ ಕೆಲ ಸ್ವಾಮಿಜಿಗಳು ತಮ್ಮ ತಮ್ಮ ಜಾತಿ ನಾಯಕರ ಪರ ಹೋರಾಟಕ್ಕೆ ಇಳಿದಿದ್ದನ್ನು ನಾವೆಲ್ಲ ನೋಡಿದ್ದೇವೆ. ಕೇಳಿದ್ದೇವೆ.

ಇದೆಲ್ಲಾ ಬೇಕಿತ್ತಾ? ಎಂಬ ಪ್ರಶ್ನೆ ಎದುರಾಗೋದು ಸಹಜ.

ಈ ಸಂದರ್ಭದಲ್ಲಿಯೇ ಖಂಡಿತವಾಗಿಯೂ ಈ ಹಾಡು ನೆನೆಯಲೇಬೇಕು. ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ `ಸತ್ಯ ಹರಿಶ್ಚಂದ್ರ’ ಸಿನಿಮಾದ ಈ ಗೀತೆ ನಿಜಕ್ಕೂ ಸಾಮರಸ್ಯದ್ದು.

satya harishchandra1965ರಲ್ಲಿ ತೆರೆ ಕಂಡ `ಸತ್ಯ ಹರಿಶ್ಚಂದ್ರ’ ಸಿನಿಮಾದ “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..” ಎಂಬ ಈ ಸಾಮರಸ್ಯದ ಗೀತೆಯನ್ನು ಕೇಳಲಾರದವರೇ ಇಲ್ಲ. ಆ ತಾಳಕ್ಕೆ ಕುಣಿಯದವರೇ ಇಲ್ಲ. ಹುಣಸೂರು ಕೃಷ್ಣಮೂತರ್ಿ ಈ ಹಾಡು ಬರೆದು, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಮಾರು, 47 ವರ್ಷಗಳ ಹಿಂದೆಯೇ ಬರೆದ ಈ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡಾಗಿ ಎಲ್ಲರಲ್ಲೂ ಸಾಮರಸ್ಯ ಮೂಡಿಸುತ್ತಿದೆ.

ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಈ ಸತ್ಯ ಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣವನ್ನು ಹೊಂದಿದ್ದು ರಾಜಾ ಹರಿಶ್ವಂದ್ರ. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನು ಅನುಭವಿಸುತ್ತಾನೆ. ಇದು ಇವತ್ತಿನ ರಾಜಕಾರಣದಲ್ಲಿ ನಮ್ಮನ್ನು ಆಳುತ್ತಿರುವ ಪ್ರಭುಗಳು ಅರಿತುಕೊಳ್ಳಬೇಕಾಗಿದ್ದು ತೀರಾ ಅಗತ್ಯವಿದೆ. ಕೇವಲ ಜಾತಿಯೇ ಎಲ್ಲವೂ ಅಲ್ಲ. ಅದರಾಚೆಗಿರುವದನ್ನು ಗಮನಿಸಬೇಕು. ವೀರಬಾಹುವಿನ ಪಾತ್ರ ನಿರ್ವಹಿಸುವ ಎಂ.ಪಿ.ಶಂಕರ್ ಅವರು ತಮ್ಮ ವಿಶಿಷ್ಟ ಅಭಿನಯದಿಂದಾಗಿ ಎಲ್ಲರನ್ನೂ ಸೆಳೆದಿದ್ದಾರೆ.

ಇದೆಲ್ಲವೂ ನೆನಪಾದೊಡನೆ, ತಕ್ಷಣವೇ ಮನೆಯಲ್ಲಿಯೇ ಇದ್ದ ಈ ಸಿನಿಮಾದ ಡಿವಿಡಿಯನ್ನು ಹಾಕ್ಕೊಂಡು ನೋಡುತ್ತಾ ಕುಳಿತುಕೊಂಡೆ. ದಿದ್ದಿರಿ ದಿದ್ದಿರಿ ಎಂದು ಹಾಡು ಬಂದ ತಕ್ಷಣವೇ ಮೈ-ಮನಗಳಲ್ಲಿ ಏನೋ ಒಂದು ರೋಮಾಂಚನ.

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ

ಮತದಲ್ಲಿ ಮೇಲ್ಯಾವುದೋ

ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ

ಕೀಳ್ಯಾವ್ದು.. ಮೇಲ್ಯಾವುದೋ

 

ಓ ದಿದ್ದಿರಿ ಓ ದಿದ್ದಿರಿ

ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಿಲಕ ಇಟ್ಟರೆ ಸ್ವರಗವು ಸಿಗದು

ವಿಭೂತಿ ಬಳಿದರೆ ಕೈಲಾಸ ಬರದು

ಇಟ್ಟ ಗಂಧಾ ಬೂದಿ ನಾಮ

ಕತ್ತ ಕತ್ತಲು ನಿರನಾಮಾ..

ಓ ದಿದ್ದಿರಿ ಓ ದಿದ್ದಿರಿ

ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಸೈವರಿಗೆಲ್ಲಾ ಸಿವ ದೊಡ್ಡೋನು

ವೈಷ್ಣವರಿಗೆ ಹರಿ ಸವರ್ೋತ್ತಮನು

ಉತ್ತಮ ಮಧ್ಯಮ ಅಧಮರೆಲ್ಲರು

ಸತ್ತ ಮೇಲೆ ಸಮರಾಗ್ತರು..

ಓ ದಿದ್ದಿರಿ ಓ ದಿದ್ದಿರಿ

ambedkar statue backಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಲೆಗೊಂದು ರೀತಿ ನೀತಿಯ ಜಾತಿಯ

ಹೇಳುವ ಜೋತೀಶಿದ್ದರು ಗುರುಗಳು

ಏಯ್..

ಮಸಣದಲ್ಲಿ ಈ ವೀರಬಾಹುವ

ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ

ಮತದಲ್ಲಿ ಮೇಲ್ಯಾವುದೋ

ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ

ಕೀಳ್ಯಾವ್ದು.. ಮೇಲ್ಯಾವುದೋ..

ಜಾತಿ ಪದ್ದತಿ, ಅದರ ಶಾಸ್ತ್ರ, ಪರ ಮತ್ತು ವಿರೋಧ, ಧಿಕ್ಕರಿಸುವ ಕೆಲವರು, ಆವೇಶಗಳಲ್ಲಿ ಸಮಥರ್ಿಸಿಕೊಳ್ಳುವ ಅಪ್ರಾಮಾಣಿಕ ಹಲವರು.. ಎಲ್ಲರನ್ನೂ ಗಮನಿಸಿದಾಗ, ವೀರಬಾಹುವಿನ ಈ ಸಾಲುಗಳು ಮತ್ತೆ ಮತ್ತೆ ಓದಬೇಕೆನಿಸುತ್ತದೆ.

ಅನೇಕರ ಸೋಗಲಾಡಿತನ, ಕಪಟ ಆಚರಣೆ ಇವೆಲ್ಲವೂ ಮಾಡಬೇಕಾದ ಕಾರಣವೇನು? ರಾಜಕಾರಣದ ದೊಂಬರಾಟವೇ? ಹಾಗಂತ ಪ್ರಶ್ನಿಸುವ ಮುನ್ನವೇ ಉತ್ತರ ಗೊತ್ತಾಗುತ್ತದೆ. ಅಲ್ಲವೇ?

ವೀರಬಾಹುವಿನ ಈ ಹಾಡು ಗುನುಗುನಿಸುತ್ತೇವೆ. ಆದರೆ, ಆಚರಣೆಗೆ ತರುವಲ್ಲಿ ಹಿಂದೇಟು ಹಾಕುತ್ತೇವೆ. ಇದೇ ನಮ್ಮ ನಾಡಿನ ಬಹುದೊಡ್ಡ ದುರಂತ. ಇಂದಿನ ಪರಿಸ್ಥಿತಿ ನೋಡಿದರೆ, ಜಾತಿ ನಾಶ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅದರ ಬದಲಿಗೆ, ಜಾತಿ ಕಾರಣವೇ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಆವತ್ತು ಸಮಾನತೆಯ ಹರಿಕಾರ ಬಸವಣ್ಣನವರು ಹೇಳಿದ, `ಇವನಾರವ ಇವನಾರವ ಎಂದೆನಿಸದಿರಯ್ಯ.. ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ..’ ಕೇವಲ ಮಾತಿನಲ್ಲಿ ಹೇಳುವ ವಚನ ಆಗಿದೆ. ಆಚರಣೆಯಲ್ಲಿ ಹೂಂ.. ಹೂಂ ಇಲ್ಲವೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಜಾತಿ ಎಂಬ ಪೆಡಂಭೂತ ಎದ್ದುನಿಂತಿದೆ. ಇವತ್ತು ಡಾ.ಅಂಬೇಡ್ಕರ್ ಅವರು ಬರೆದ `ಜಾತಿ ನಾಶ ಹೇಗೆ?’ ಎಂಬ ಚಿಂತನೆ, ಹುಣಸೂರು ಕೃಷ್ಣಮೂತರ್ಿ ಬರೆದ ಈ ವೀರಬಾಹುವಿನ ಸಾಮರಸ್ಯ ಗೀತೆ. ಇವೆಲ್ಲವನ್ನೂ ಓದಿಕೊಳ್ಳುತ್ತೇವೆ. ರಾಜಕಾರಣದ ಜಾತಿ ರಗಳೆಯನ್ನು ನೋಡುತ್ತಲೇ, ಏನನ್ನೂ ಮಾಡಲಾಗದೇ ಸುಮ್ಮನೇ ಕೂತವರು ನಾವು-ನೀವು.

`ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು.. ಮೇಲ್ಯಾವುದೋ…

ಓ ದಿದ್ದಿರಿ.. ದಿದ್ದಿರಿ ದಿದ್ದಿರಿ ದಿದ್ದಿರಿ..’

‍ಲೇಖಕರು g

April 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Rekha Nataraj

    ತುಂಬ ಮನೋಜ್ಞವಾಗಿದೆ ಲೇಖನ, ಇದರೊಂದಿಗೆ ನನಗೆ ಭಾರತಿಯವರು ಅಭಿನಯಿಸಿರುವ ‘ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ ‘ ಎಂಬ ಹಾಡೂ ನೆನಪಾಯಿತು

    ಪ್ರತಿಕ್ರಿಯೆ
  2. Parameshwara.K

    ಧನ್ಯವಾದ ನಟರಾಜು…ಒಂದೊಳ್ಳೆ ಲೇಖನ ಓದಿದ ಹಾಗಾಯಿತು…

    ಪ್ರತಿಕ್ರಿಯೆ
  3. Shrivatsa Kanchimane

    ಒಂದು ಪುಸ್ತಕ, ಒಂದು ಸಿನೆಮಾ, ಒಂದು ಹಾಡು ಹಾಗೂ ಒಂದಷ್ಟು ಚಿಂತನಶೀಲ ವಿಚಾರಗಳ ಈ ಲೇಖನ ಇಷ್ಟವಾಯಿತು…
    ಹಸಿದವರಿಗೆ ಜಾತಿಯ ಹಂಗಿಲ್ಲ, ಶ್ರೀಮಂತರಿಗೆ ಜಾತಿ ಬೇಕಾಗಿಲ್ಲ, ಜಾತಿ ಉಳಿದಿರುವುದು ರಾಜಕಾರಣ ಹಾಗೂ ಧರ್ಮಕಾರಣದಿಂದಲ್ಲವೇ..?? ಎರಡನ್ನೂ ವ್ಯಕ್ತಿ ಪಾತ್ರ ಮೀರಲಾಗದು, ಸಮಷ್ಟಿ ಇವುಗಳ ತೊರೆಯಲಾರದು, ಇಂದು ಬಸವಣ್ಣನ ಹೆಸರಲ್ಲೂ ಬುದ್ಧನ ಹೆಸರಲ್ಲೂ ಜಾತಿಗಳಿರುವುದು ವಿಚಿತ್ರ ಸತ್ಯ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: