ಸಾವಿನ ಮನೆಗೆ ನುಗ್ಗಾಟ
ರವಿಕುಮಾರ್ ಟೆಲೆಕ್ಸ್
ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೆ ತರಕಾರಿ, ಹಾಲು, ಆಹಾರ ಪದಾರ್ಥಗಳಿಗೆ ಮುಗಿ ಬಿದ್ದು, ಪೊಲೀಸರ ಲಾಠಿಗೆ ತುತ್ತಾಗಿ ಪರದಾಡುತ್ತಿದ್ದ ಜನರನ್ನು ನೋಡಿದಾಗ ನನಗೆ ಅಯ್ಯೋ ಅನಿಸಿತು. ಸಾವು ಬಂದು ಬಾಗಿಲು ಬಡಿಯುತ್ತಿರುವಾಗ ಬದುಕಿಗಾಗಿ ಕೂಡಿಟ್ಟುಕೊಳ್ಳುವ ಈ ಮನುಷ್ಯನ ಅಜ್ಞಾನಕ್ಕೆ ಏನನ್ನಬೇಕು?
ಮನುಷ್ಯ ಎಂತಹ ನಿಸ್ಸಹಾಯಕ ಸ್ಥಿತಿ ತಲುಪಿದ್ದಾನೆ ನೋಡಿ.
ಸಂಪಾದಿಸಿದ್ದು, ಉಳಿಸಿದ್ದು, ಅಧಿಕಾರ, ಅಂತಸ್ತು, ಕೇಡು-ಸೇಡು, ಪ್ರತಿಷ್ಠೆ, ಶ್ರೇಷ್ಠ- ಕನಿಷ್ಠ ಎಲ್ಲವೂ ಈಗ ಕೆಲಸಕ್ಕೆ ಬರುತ್ತಿಲ್ಲ. ಅಷ್ಟೇ ಅಲ್ಲ ನಂಬಿದ ದೈವಗಳು, ಮತ- ಧರ್ಮಗಳ ಹೆಮ್ಮೆ- ವಿರೋಧ ಎಲ್ಲವೂ ನಿರರ್ಥಕ ಎಂಬ ಸತ್ಯವನ್ನು ಕಣ್ಣಿಗೆ ಕಾಣದ ಸೂಕ್ಷ್ಮಾತೀತ ಸೂಕ್ಷ್ಮ ವೈರಸ್ ವೊಂದು ಬಲಾಢ್ಯ ಮನುಷ್ಯನನ್ನು ಅಸಹಾಯಕನನ್ನಾಗಿಸಿ ಸಾವಿನ ಮನೆಯ ಮುಂದೆ ನಿಲ್ಲಿಸಿ ಬಿಟ್ಟಿದೆ.
“ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮ ನನದಲ್ಲ…” ಎಂಬ ತಾತ್ವಿಕ ಮಾತುಗಳನ್ನು ಯಾವ ಕಾಲಕ್ಕೂ ಅರ್ಥ ಮಾಡಿಕೊಳ್ಳದ ಈ ಜನ ‘ನಾನು…ನಾನೆ..’ ಎಂಬ ಭ್ರಮೆ ಯಲ್ಲಿ ಬದುಕಿದ್ದನ್ನು ಯಕಃಶ್ಚಿತ್ ಒಂದು ವೈರಸ್ ಅಲುಗಾಡಿಸಿ ಅವಸಾನಕ್ಕೆ ತಂದು ನಿಲ್ಲಿಸಿದೆ. ಯಾವ ಮಟ್ಟಿಗೆ ಎಂದರೆ ನಮ್ಮವರೆ ನಮಗೆ ಅಪರಿಚಿತರಾಗುವಂತೆ, ಯಾರಿಗೆ ಯಾರೂ ಇಲ್ಲ , ಸತ್ತಾಗಲೂ ಮುಟ್ಟಿ ಮಣ್ಣು ಮಾಡಲಾಗದಂತಹ ಅನಾಥ ಸ್ಥಿತಿಯನ್ನು ಕಣ್ಣಾರೆ ಕಾಣುವಂತಾಗಿದೆ. ಮಾನವ ನಿರ್ಮಿತ ಎಲ್ಲವೂ ನಿರರ್ಥಕಗೊಂಡ ಸ್ಥಾವರಗಳು ಎಂಬುದನ್ನು ಪ್ರಕೃತಿ ಮನವರಿಕೆ ಮಾಡಿಕೊಡುವಂತಿದೆ.
ನಿಸರ್ಗ ಬರ, ನೆರೆ, ಭೂಕಂಪದಂತ ಸಂದರ್ಭಗಳಿಂದ ಮನುಷ್ಯನಿಗೆ ಪಾಠ ಕಲಿಸುತ್ತಲೆ ಇರುತ್ತದೆ. ಆದರೂ ಈ ಮನುಷ್ಯನ ದುರಾಶೆಗಳಿಗೆ ಕೊನೆಯಿಲ್ಲ. ಪ್ರಕೃತಿಯನ್ನು ಜೀವನದ ಸಂಗಾತಿಯಂತೆ ಜತನದಿಂದ ಕಾಯ್ದುಕೊಳ್ಳದೆ ಅದರ ಮೇಲೆ ನಡೆಸುವ ದೌರ್ಜನ್ಯದಿಂದ ಇಂತಹ ನಿಸರ್ಗ ಸೃಷ್ಟಿತ ಅಪಾಯಗಳು ನಮ್ಮನ್ನು ಕಾಡುತ್ತವೆ.

ನಂಬಿದ ದೇವರು – ಧರ್ಮಗಳನ್ನ ನಮ್ಮ ನೆಮ್ಮದಿಗೆ ಬಳಸಿಕೊಂಡಿದ್ದಕ್ಕಿಂತ ಇತರರ ನೆಮ್ಮದಿಗಳನ್ನು ಕೆಡಿಸಲು ಬಳಸಿದ್ದೆ ಹೆಚ್ಚೆಂಬಂತೆ ಆ ನಂಬಿತ ಶಕ್ತಿಯನ್ನು ದುರ್ಬಲಗೊಳಿಸಿಬಿಟ್ಟಿದ್ದೇವೆ. ದೇವರು- ಧರ್ಮದ ವ್ಯಾಖ್ಯಾನಗಳನ್ನು ಪರ- ವಿರೋಧ, ದ್ವೇಷ- ಹಗೆತನದ ಬೇಲಿಗಳಿಗೆ ಬಿಗಿದು ಬಿಟ್ಟು ಆ ನಂಬಿತ ಶಕ್ತಿಗಳಿಂದ ಕಲಿಯಬಹುದಾದ ಪ್ರೀತಿ, ನಿಸ್ವಾರ್ಥ, ಸಹಬಾಳ್ವೆಯನ್ನು ಮರೆತು ಮನಃಶಾಂತಿ ಕಳೆದುಕೊಂಡಿದ್ದೇವೆ. ಈ ಹೊತ್ತಿನಲ್ಲಿ ಈ ಶಕ್ತಿಗಳೂ ನೆರವಿಗೆ ಬಾರದಂತಾಗಿವೆ.
ತಮಗೆ ಸಾವೇ ಇಲ್ಲವೇನೋ, ಅಥವಾ ನಾವೆಲ್ಲರೂ ಮೃತ್ಯುವನ್ನು ಗೆದ್ದು ಅಜೇಯರಾಗಿರುತ್ತೇವೆ ಎಂದು ಅಸೂಯೆ, ದ್ವೇಷ, ಕೇಡು, ಸ್ವಾರ್ಥಗಳಿಂದ ಬದುಕಿದ್ದೆ ಹೆಚ್ಚು. ಎಂದಾದರೂ ಒಂದು ದಿನ ಅಳಿದು ಮಣ್ಣಾಗುವ ಈ ದೇಹವನ್ನು ಇಂತಹ ಭಾವನೆಗಳಿಂದಲೆ ನರಕವನ್ನಾಗಿಸಿಕೊಂಡಿರುತ್ತೇವೆ. ಇದ್ದಷ್ಟು ದಿನ ಬದುಕನ್ನು ಸಹನೆ, ಪ್ರೀತಿ, ಅಂತಃಕರಣ, ಮೈತ್ರಿ- ಕಾರುಣ್ಯದಿಂದ ಹೂದೋಟವನ್ನಾಗಿಸಿ ಕೊಳ್ಳುವುದನ್ನು ಮರೆತು ಹೋಗಿರುತ್ತೇವೆ. ಕಾಲದ ಪಾಠಗಳಿಂದ ನಾವು ಕಲಿಯದೇ ಹೋದರೆ ಅಗೋಚರ ಶಕ್ತಿಯೊಂದು ಹೀಗೆ ಬುದ್ದಿ ಕಲಿಸುತ್ತಲೆ ಇರುತ್ತದೆ.
ಯಾರೊಬ್ಬರೂ ಗುಂಪು ಸೇರಬೇಡಿ, ಕೊರೋನಾ ಸೋಂಕು ತಗುಲಿ ಜೀವಕ್ಕೆ ಅಪಾಯವಾಗಲಿದೆ ಎಂಬ ಸರ್ಕಾರಿ ಅನೌನ್ಸ್ ಮೆಂಟ್ , ಪೊಲೀಸರ ಲಾಠಿ ಬೀಸಾಟ ಯಾವುದನ್ನೂ ಲೆಕ್ಕಿಸದೆ ದೊಡ್ಡ ದೊಡ್ಡ ಬ್ಯಾಗು ಹಿಡಿದು ದಿನಸಿ ಅಂಗಡಿಗೆ, ತರಕಾರಿ ಮಾರ್ಕೆಟ್ ಗೆ ಮುಗಿಬಿದ್ದ ಜನರನ್ನು ನೋಡಿದಾಗ ಸಾವಿನಮನೆಗೆ ನುಗ್ಗಾಟ ಎಂಬಂತೆ ಕಂಡಿತು.
ಈಮಹಾಮಾರಿ ಸೋಂಕಿಗೆ ಮದ್ದೊಂದು ಜಗತ್ತಿನ ವಿಜ್ಞಾನಕ್ಕೆ ನಿಲುಕಲಿ ಎಂದು ಪ್ರಕೃತಿಯಲ್ಲಿ ಪ್ರಾರ್ಥಿಸುತ್ತಾ ಆಫೀಸ್ ಕೆಲಸ ಮುಗಿಸಿಕೊಂಡವನೆ ಮನೆ ಸೇರಿಕೊಂಡು “ಲವ್ mocktail” ಮೂವಿಯಲ್ಲಿ ಮುಳುಗಿ ಹೋದೆ.






0 Comments