-ಕೆ.ಎನ್. ಲಾವಣ್ಯ ಪ್ರಭಾ
ಹಿಮಾಲಯದ ಮೌನ
ಉನ್ನತ ಶ್ರೇಣಿಗಳಲ್ಲಿ
ಸದ್ದಿಲ್ಲದೆ ಹೊಳೆವ ಬೆಳಕಿನ ಕಿರಣ
ದಿಟ್ಟ ನಿಲುವನ್ನು ನೇವರಿಸಿರುವ
ಬೆಣ್ಣೆಯ ನುಣುಪು
ಎದೆಯಗಲಿಸಿ ಅಗಾಧ ನಿಂತ
ಧೀಮಂತಿಕೆ ಧೀರತೆ
ಪ್ರಶ್ನೆಯೋ ಉತ್ತರವೋ
ತರ್ಕವೋ ಅವಮಾನವೋ
ಅಲಕ್ಷ್ಯವೋ ನಿರ್ಲಿಪ್ತತೆಯೋ
ದಿವ್ಯತೆಯೋ ಭವ್ಯತೆಯೋ…
ಯಾವ ವೇದನೆಯೋ…
ಕಾರಣಗಳನ್ನು ಮುಚ್ಚಿಟ್ಟುಕೊಂಡು
ಸುಮ್ಮನೆ ನಿಂತ ನಿಶ್ಚಲತೆ
ಋತುಮಾನಕ್ಕೆ ತಕ್ಕಂತೆ ಹೆಪ್ಪುಗಟ್ಟಿ
ತನ್ನೊಳಗೆ ತಾನೇ
ಕೇಂದ್ರವಾದ ಮಂಜು
ತಾನಾಗಿ ಕರಗಿ ಹರಿದರೆ
ತಣ್ಣನೆಯ ನದಿ ತೊರೆ
ಸಹಸ್ರ ಕವಲುಗಳು
ನೆಲದೆದೆಯ ತಾಪಮಾನದ
ಎಡವಟ್ಟಿಗೆ ಸಿಲುಕಿ
ನೀರ್ಗಲ್ಲು ಕರಗಿ
ಹರಿವ ಬಿರುಸು ಪ್ರವಾಹವಾದರೆ
ಸುತ್ತಮುತ್ತಲ ಕಂಡದ್ದನ್ನು
ಒಳಗೆಳೆದುಕೊಂಡು ನುಂಗಿ
ಗಹಗಹಿಸುವ ಅತಿರೇಕದಾಟ.
ಮೌನ
ಮತ್ತು
ಹಿಮಾಲಯ
ಇವೆರಡೂ ಬೇರೆ ಬೇರೆಯೋ
ಮತ್ತವು
ಕಣ್ಣಿಗಷ್ಟೇ ಕಾಣುವಂತೆ
ಕೇವಲ ಹೊರಗಿದೆಯೇ ? !






0 Comments