ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌನೇಶ ನವಲಹಳ್ಳಿ ಹೊಸ ಕವಿತೆ: ಸೋಗು

-ಮೌನೇಶ ನವಲಹಳ್ಳಿ

*

ಅದೆಷ್ಟು ದಿನ ಮಂಚದಲ್ಲಿರುವೆ
ನರ್ತನ ನಿಲ್ಲದೆ ಆಯಾಸವಾಗದೆ
ಏಕತಾಳಕೆ ಗೆದ್ದಲತ್ತದೆ
ರಂಗವಿರುವುದು ರವೆ ಪ್ರದರ್ಶನಕೆ
ಜೀವಿಸಲಿರುವುದೆ ?

ಬಣ್ಣ ಕಳಚುವುದಕೆ
ಹೊರಗೆ ಜೋರು ಮಳೆಯಾಗಬೇಕೆಂದೇನು ಇಲ್ಲ
ನಿನ್ನೊಳ ಕಂಪನದ ಒತ್ತಡಕೆ
ಬೆಂಕಿಬೆವರ ಸೆಲೆಗೆ
ಬಟಾಬಯಲಾಗುವುದಷ್ಟೆಯಲ್ಲ, ಬೆಂದು ಬೂದಿಯಾಗದೆ ?

ಮರುಳಾದವರು ಮರೆಯಬಹುದು
ಅವರ ಕಣ್ಣೆದರಿಗೆ ಜ್ವರ ಬರದೆ
ಅವರ ಜಪ ಶಾಪವಾಗದೆ

ಬಣ್ಣ ಧರಿಸುವುದೆಂದರೆ
ಪರಕಾಯ ಪ್ರವೇಶ ಅರಿವಾಗದೆ ?

ನೀ ಉಲಿದ ಆಶೋತ್ತರಗಳೇನು ಸಾಮಾನ್ಯವೆ
ನೀ ಬಿತ್ತಿದ ಕನಸುಗಳು ಸಾವಿರ ಸಾವಿರ
ಸ್ವಾತಂತ್ರ್ಯದ ಸೋಗು
ನಮಗೆ ಉಳಿನೀರು ಕುಡಿಸಿದಂತಾಗಿದೆ
ರಂಗದ ಮುಂದೆ ಮನೆಮಂದಿಯೊಂದಿಗೆ ನೆಲಕ್ಕೂರಿ ಕೂತ ನಮಗೆ
ನಿರಸವಾಗದೆ ?

ಬಾಲಮಕ್ಕಳ ತಟ್ಟೆಯೊಳು ಬಾಲುಳ
ಆರೈಕೆಗಾಣದ ಆರೋಗ್ಯಾಲಯ
ಅಕ್ಷರಗಳನೂ ಅಂಗಡಿಯಲಿ ಮಾರುತ್ತಿರುವಾಗ
ಇನ್ನೂ ನಾವ್ಯಾರೆಂದು ಭೂತಗನ್ನಡಿಯಲಿ ದಿಟ್ಟಿಸುವಾಗ
ವೀರಾವೇಷದಿಂದ ಕತ್ತಿಯಿರಿದು ಕೊಂದ ನಾಟಕವಾಡಿ
ಅದೆಷ್ಟುದಿನ ಸಮತೆಯ ಶಂಖವೂದುವೆ
ನಿನ್ನ ಸೋಗು ಕಳಚದೆ ?

‍ಲೇಖಕರು avadhi

13 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading