ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌನದಲಿ ನಾ ಕೇಳುತಿದ್ದೆ..

ಮನ….ಮ..ನ..ನ

—-

ಕುಸುಮ ಪಟೇಲ್ 

 

ಸದ್ದೆ ಇಲ್ಲದ ಮನವದೊಮ್ಮೆ

ಎದ್ದು ಕುಳಿತು ಬೊಬ್ಬೆ ಹೊಡೆಯಿತು

ಇದ್ದಬದ್ದುದ ನನಗೆ ಬಿಟ್ಟು

ನೀ ನಿದ್ದೆ ಮಾಡ್ವುದು ತರವದೆ

 

ತಡಬಡಿಸಿ ನಾ ಎದ್ದು ಕುಳಿತೆ

ಕೇಳಿಕೊಂಡೆನು ಮುದ್ದು ಮನವನು

ಇನಿಯ ಮುನಿದಾ ನಲ್ಲೆಯನ್ನು

ರಮಿಸಿ ಕೇಳ್ವಂತೆ ಕೇಳ್ದೆನು

 

ಹೇಳು ಹೇಳು ಮನವೆ ಹೇಳು

ಭಯವ ಬಿಟ್ಟು ಮತ್ತೆ ಹೇಳು

ಇಂದಿನಾ ಕ್ಷಣ, ಇಂದಿನಾ ದಿನ

ಇರುವೆನಿಲ್ಲೆ ನಿನಗೆ ನಾನು

ನಿನ್ನ ವೇದನೆ ಕೇಳ್ವೆನು

ಸಂತಸದಿ ಮನವರಳಿತಾಗ

ವೇಗ ವೇಗದಿ ನುಡಿಯಿತಾಗ

ಹಿಂದು ಮುಂದಿನ, ಮುಂದು ಹಿಂದಿನ

ಎಲ್ಲ ಪ್ರವರದ ಮಾತನು

 

ಮೌನದಲಿ ನಾ ಕೇಳುತಿದ್ದೆ

ಮಾತು ಮುಗಿಯಲು ಕಾಯುತಿದ್ದೆ

ಬಾಯಿ ಬಿಟ್ಟು ನೋಡುತಿದ್ದೆ

ಬದಬಡಿಸುವಾ ಬಗೆಯನು

 

ಉರುಲಿ ಉರುಲಿ ತಣ್ಣಗಾಯ್ತು

ಭಾರ ಇಳಿಸಿ ಹಗುರವಾಯ್ತು

ಕೋಪವೆಲ್ಲಾ ಕರಗಿ ಹೋಯ್ತು

ಅಕ್ಕಪಕ್ಕ ನೋಡಿ ಮತ್ತೆ ..

ದೀರ್ಘ ಉಸಿರಾ ಬಿಟ್ಟಿತು

 

ನಕ್ಕು ಹೇಳಿತು ನನ್ನ ನೋಡಿ

ಇಂದಿಗಿಷ್ಟು ಮಾತು ಸಾಕು

ಕೇಳಿದ್ದಕ್ಕೆ ಬಹಳ ಥ್ಯಾಂಕ್ಸು

ಈಗ ಬೇಕು ನನಗೆ ರೆಸ್ಟು

ಮತ್ತೆ ಬರುವೆನು ನಾಳೆಯು

 

ಗಂಡಹೆಂಡಿರ  ವಾದದಂತೆ

ಮತ್ತೆ ಮುಗಿಯದ ಸಂವಾದದಂತೆ

ಮನದ ಮೌನದ ಮಾತಿನಂತೆ

ಇಲ್ಲಿ ನಡೆಯಿತೊ ಚಕಮಕಿ

 

ತಣ್ಣಗಾದ ಮನವ ಕಂಡು

ಮೆಲ್ಲನುಸಿರಿದೆ ಧೈರ್ಯದಿಂದ

ಇಲ್ಲ ಭೇದ ನನಗು ನಿನಗೂ

ಏಕೆ ವಾದವೊ ಕಾಣೆನೊ ?

 

ಏನು ಠೀವಿಯೋ ಗೆದ್ದ ಮನಕೆ

ಹೆಮ್ಮೆಯಿಂದ ಮತ್ತೆ ಬೀಗಿತು

ನನ್ನನರಿಯದ ನೀನು ಪಾಮರ

ಸುಮ್ಮನಿರು ನೀ ಎಂದಿತು

 

ಓಡುತ್ತಿತ್ತು ಮನವು ಮುಂದೆ

ನಾನು ಇದ್ದೆ ಅದರ ಹಿಂದೆ

ಆದುವು ಹಿಂದೆ ನಾನು ಮುಂದೆ

ಹೀಗೆ ನಡೆಯಿತೊ ಕಣ್ಣ ಮುಚ್ಚಾಲೆಯ ಆಟವು

 

ಬೆಳಗು ಕಂಡಿತು ಬಾಗಿಲಲ್ಲಿ

ರಾತ್ರಿ ಕರಗಿತು ಕತ್ತಲಲ್ಲಿ

ಕೈಯ್ಯಿ ಓಡಿತು ಹಾಳೆ ಮೇಲೆ

ತುಂಟ ಹನುಮನ ಬಂಟ ಮನವು

ಕುಣಿದು ಬರೆಸಿದ ಕಥೆಯಿದು…….

‍ಲೇಖಕರು avadhi

27 September, 2018

3 Comments

  1. Sangeeta Kalmane

    ವಾವ್! ಚೆನ್ನಾಗಿದೆ ಮನದ ಮಾತುಕತೆ

  2. Kusumapatel

    Thank you avadhi

  3. Kusumapatel

    Thank You ಸಂಗೀತಾ ಅವರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading