ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋಹಿಸುತ ಮೈಯ ಮರೆತು..

ಅರ್ಚನಾ. ಹೆಚ್

ಅವನುಸಿರ ದನಿಯೊಮ್ಮೆ
ಕಿಂಡಿ ಕಿಂಡಿಯಲಿ ಹೊಮ್ಮೇ…
ಅನಿಲನಲಿ ಲೀನಾಗಿ
ಅಲೆಯಾಗಿ ಚಿಮ್ಮೇ…

ಹಸಿದ ಕಂದಮ್ಮನ ಅಳುವ ನಿಲಿಸುವ ಸಲಿವು..
ಕುಪ್ಪಸದ ಗುಂಡಿಯ ಅವಸರದಿ
ಸಡಿಲಿಸುತ..
ಪುಟ್ಟ ಬಾಯ್ಗಳಲಿ ತೂರಿಸುತ ಮೊಲೆಯ..
ಹಾಲುಕ್ಕಿ ತಾಯ್ತನದ ಹರಿಯವು..
ಮುದ್ದು ಮೋರೆಯ ಮೋಡಿಯಲಿ
ಮುಳುಗಿದ್ದ ಮಾತೆಯ..

ಮಾಯಾ ಜಾಲವು ಬಿಗಿಯೆ,
ಮನೆಬಿಟ್ಟು ಮಗುಬಿಟ್ಟು
ಮನೆಯರಸನ ಮಾತ ಮುರಿದು..
ಮೈಕೊಡವಿ ಎದ್ದು ನಡೆದು..

ಊದುಗೊಳವೆಯ ಪಿಡಿದು
ಅಡಿಗಡಿಗೆ  ಉಸಿರಿಟ್ಟು..
ಒಲುಮೆಯರಸನ ನೆನೆದು,
ಒಲವಲ್ಲಿ ಹೂರಣವ ಇಂಗಿಸಿಟ್ಟು..
ಕಣಕ ಕೈಯಲ್ಲ್ಹಿಡಿದು, ಕಾವಲಿಯ ಉರಿಗಿಟ್ಟು..
ಬಾಳೆಲೆಯ ಮೇಲೆ ತಟ್ಟುತಲಿ ಒಬ್ಬಿಟ್ಟು…

ಎಳೆದಂತೆ ತಂಗಾಳಿ..
ಉರಿವ ಒಲೆ, ಸುಡುವ ಕಾವಲಿ
ಪತಿಯ ಬರುವನು ಬಿಟ್ಟು..
ನಡೆದವು ಕಾಲುಗಳು ಬುದ್ದಿಗೆಟ್ಟು..

ಮಂಡಿ ಅಡಿಗಂಟ ಲಂಗವ ಬಲಗೈಲಿಡಿದು..
ಕೊಕ್ಕರೆಯ ಅಂದದಿ ಒಂಟಿಕಾಲ ಎಡಗೈಲಿ ಪಿಡಿದು..
ಒಂದೊಂದೇ ಚೌಕಕೆ ತುಂಟ್ಹೆಂಚ ಎಸೆದು..
ಲಲನೆಯರ ಮೆಚ್ಚುಗೆಯ ಕುಂಟಪಿಲ್ಲೆಯ ಆಟ..
ಅಂಗಳದಿ ಆಡುತಿರೆ ಮರೆತು ಊಟ..
ಇಂದ್ರಜಾಲದ ಕರೆಯ ದನಿಗೆ ಓಗೊಟ್ಟು..
ಆಟ, ಊಟ ಎಲ್ಲ ಬದಿಗಿಟ್ಟು..
ಸೆಳೆತದ ಕಡೆಗೋಟ ಕಿತ್ತು..

ನದಿಯವಳು ಯಮುನೆಯು
ಹರಿವ ಮರೆತಂತೆ, ಕೊಳದಂತೆ ನಿಂತು..
ಪಿಡಿದ ಸಮ್ಮೋಹನದ ಮೂಲವನೆ ಮೋಹಿಸುತ ಮೈಯ ಮರೆತು..
ಖಗಮೃಗಗಳೆಂತೆನದೆ
ಜಿಗಿದಿರಲು ಆ ಕರೆಗೆ..
ಹೃದಯಗರ್ಭದಿ ಆ ಗಾನ.. ಸಮ್ಮಿಲನ..

ಯಮುನೆಯ ತಟದಡಿ
ಮಾವಿನ ಮರದಡಿ ಮಂಡಿಯೂರಿ..
ಮಯೂರಗರಿಧಾರಿ..
ಶ್ಯಾಮಲವರ್ಣನ ನೋಡಿ..
ಇವನದಲ್ಲವೇ ಈ ಮೋಡಿ….

‍ಲೇಖಕರು avadhi

26 July, 2019

9 Comments

  1. Arpitha

    ತುಂಬಾ ಚೆನ್ನಾಗಿದೆ!!

    • Archana H

      ಧನ್ಯವಾದಗಳು ಅರ್ಪಿತಾ..

  2. P k navalgund

    ಚಂದದ ಪದ್ಯ ಮೇಡಮ್…

    • Archana H

      ಧನ್ಯವಾದಗಳು ಸರ್

    • Archana H

      ಧನ್ಯವಾದಗಳು ಸರ್..

  3. T S SHRAVANA KUMARI

    ತುಂಬಾ ಚೆನ್ನಾಗಿದೆ

  4. Archana H

    ಧನ್ಯವಾದಗಳು ಮೇಡಮ್

  5. Ambarish

    ಚೆನ್ನಾಗಿದೆ

  6. Suneel

    ಸೊಗಸಾದ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading