ಮೋಡಿ ಮಾಡಿದ ಆ ನಿರ್ದೇಶಕ ಜೋಡಿ…   

ಗೊರೂರು ಶಿವೇಶ್

50 ವರ್ಷಗಳ ಹಿಂದೆ ಎನ್ ನರಸಿಂಹಯ್ಯನವರ ಪತ್ತೆದಾರ ಪುರುಷೋತ್ತಮನಿಂದ   ಜಿಂದೆ ನಂಜುಂಡಸ್ವಾಮಿಯವರ  ರಕ್ತದಾಹದ ರಣಹದ್ದು, ಮೃತ್ಯು ಪಂಜರದಲ್ಲಿ ಗೂಢಚಾರಿ ,ಮಾಭಿಶೇಯವರ ಚೈನಾದಲ್ಲಿ ಪತ್ತೆದಾರ ಶಂಕರ್   ಮುಂತಾದ ರೋಚಕ ಸ್ಪೈ ಕಾದಂಬರಿಗಳ ಕಡೆಗೆ ಹೊರಳುತ್ತಿದ್ದ ಸಮಯ. ಆಗ ನಮ್ಮೂರಿನ ಗೌರಿಶಂಕರ ಸಂಚಾರಿ ಚಿತ್ರಮಂದಿರದಲ್ಲಿ ಪದೇ ಪದೇ ಪುನರಾವರ್ತನೆಗೊಳ್ಳುತ್ತಿದ್ದ  ಸಿನಿಮಾಗಳೆಂದರೆ ಭಲೆ ರಾಜ ಭಲೆ ಜೋಡಿ, ವೀರಕೇಸರಿ, ಮಾಯಾ ಬಜಾರ್, ಬಾಲ ನಾಗಮ್ಮ ಮತ್ತು ಜೇಡರ ಬಲೆ.

ಆ ಕಾಲಘಟ್ಟಕ್ಕೆ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ 300ರ ಆಸು ಪಾಸಿನಲ್ಲಿರುವುದು ಈ ಪುನರಾವರ್ತನೆಗೆ ಕಾರಣವಿರಬಹುದು ಎಂದು ನನಗನ್ನಿಸುತ್ತದೆ . ಉಳಿದೆಲ್ಲ ಚಿತ್ರಗಳನ್ನು ಮನೆಯವರ ಜೊತೆ  ಬಿಡುಗಡೆಯಾದಾಗಲಿಲ್ಲ ಮತ್ತೆ ಮತ್ತೆ ಹೋಗಿ ಅದನ್ನು ನೋಡಿದ್ದೆವಾದರೂ ಜೇಡರಬಲೆ ಚಿತ್ರಕ್ಕೆ ಕುಟುಂಬ ಸಮೇತ ಹೋದದ್ದು ಇಲ್ಲವೇ ಇಲ್ಲವೆಂದು ಹೇಳಬೇಕು. ಕಾರಣ ಉಳಿದವು ಸಾಂಸಾರಿಕ ಚಿತ್ರಗಳಾದರೆ ಇದೊಂದು ಬಾಂಡ್ ಶೈಲಿ ಚಿತ್ರ. ಮಡಿವಂತಿಕೆ  ಮೀರಿದ  ಈ ಆಧುನಿಕ ಪೋಷಾಕಿನ ಗ್ಲಾಮರ್ ಹುಡುಗಿಯರು, ಜೊತೆಗೆ ಮೊದಲಿಂದ ಕೊನೆಯವರೆಗೂ ಹೊಡೆದಾಟ, ಬಡಿದಾಟ ಇದು ಅವರಿಗೆ ಹೆಚ್ಚು  ರುಚಿಸುತ್ತಿರಲಿಲ್ಲವೆಂದೆ ಹೇಳಬೇಕು. 

ಆದರೆ ಹುಡುಗರಾಗಿದ್ದ ನಾವು  ಪತ್ತೆದಾರಿ ಕಾದಂಬರಿಗಳನ್ನು ಓದಿ ಇಂತಹ ಚಿತ್ರಗಳಿಗೆ ತಹತಹಿಸುತ್ತಿದ್ದೇವು. ಆಧುನಿಕ ಅತ್ಯಾಕರ್ಷಕ ಸೂಟ್ನ ಸಿಐಡಿ999  ವೃತ್ತಾಕಾರವಾಗಿ ತಿರುಗುತ್ತಿರುವ ಬೆಡ್ ಫೋನ್ ರಿಂಗಣಿಸಿದಾಗ ಅದರ ಹತ್ತಿರಕ್ಕೆ ಚಲಿಸುವ ಪರಿ, ಬಾಕ್ಸ್ ತೆರೆದು ತನ್ನಷ್ಟಕ್ಕೆ ಹೊರಬರುವ ಫೋನ್, ಅವನ ಬಟ್ಟೆ ತೆಗೆದು ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಸುಂದರ ಲಲನೆಯರು, ಕಳ್ಳರನ್ನು ಹಿಡಿಯಲು ಪತ್ತೆದಾರ ಬಳಸುವ ಅತ್ಯಾಧುನಿಕ ತಂತ್ರಜ್ಞಾನದ ವಿಶಿಷ್ಟ ರೀತಿಯ  ಉಪಕರಣಗಳು, ವಾಚ್ ನೊಳಗೊಂದು ಗನ್ನು ,ವೈರಿಗಳ ಪಟ್ಟುಗಳಿಗೆ ಹಾಕುವ  ಎದುರು ಪಟ್ಟುಗಳು….ಅದೆಲ್ಲಾದಕ್ಕಿಂತಲೂ ಮಿಗಿಲಾಗಿ ಬಳಸುವ ಕೋರ್ಡ್ ವರ್ಡ್ ಗಳು . ಬೆಂಗಳೂರು ತುಂಬಾ ಚಳಿಯಲ್ವೇ..?ಹೌದು !ಅದಕ್ಕಾಗಿ ತುಂಬಾ ಬೆಡ್ ಶೀಟ್ ಗಳನ್ನು ತಂದಿದ್ದೇನೆ !  ಇವೆಲ್ಲವೂ ಆ ಕಾಲಕ್ಕೆ ಸಂಜೆ ಸ್ಕೂಲ್ ಬಿಟ್ಟು ಬರುವಾಗ ಚಿತ್ರ ನೋಡಿದ ಗೆಳೆಯರು  ಎಷ್ಟು ರೋಚಕವಾಗಿ ಬಣ್ಣಿಸುತ್ತಿದ್ದರು ಎಂದರೆ ಅದನ್ನು ನೋಡದ ನಾವುಗಳೇ ಪಾಪಿಗಳು ಎಂದುಕೊಳ್ಳಬೇಕು. ಈ ಚಿತ್ರ ಎಷ್ಟು ಜನಪ್ರಿಯ ರಾಗಿತಂದರೆ,  ಜೇಡರ ಬಲೆ ಚಿತ್ರದ ಟೈಟಲ್ಲನ್ನು ಬಳಸಿ ಬಲೆ ತಲೆ ಕೊಲೆ ಮುಂತಾದ ಪ್ರಾಸಪದಗಳನ್ನು ಬಳಸಿದ ಶಿಶು ಪ್ರಾಸ ಅಕಾಲಕ್ಕೆ ಅತ್ಯಂತ ಜನಪ್ರಿಯವಾಗಿತ್ತು. 

ಈ ಚಿತ್ರದ ಯಶಸ್ಸು ಮುಂದೆ  ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಸರಣಿ ಸಿನಿಮಾಗಳಾಗಿ ಮುಂದುವರೆದು ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್ಪಾಟ್ನಲ್ಲಿ ಸಿಐಡಿ 999 ಮುಂದೆ ಬಣ್ಣದಲ್ಲಿ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾಗಳಾಗಿ ಮೂಡಿಬಂದವು .ಆದರೆ ಆ ಸಿನಿಮಾಗಳು ಜಾತ್ರೆ ಸಮಯದಲ್ಲಿ ಎರಡು ಮತ್ತು ಮೂರನೆಯ ಆಟದಲ್ಲಿ ಪ್ರದರ್ಶನಗೊಂಡು ನೋಡಲು ಆಗದೆ ನಿರಾಶೆ ಪಟ್ಟದ್ದು ಇದೆ .ಅವುಗಳನ್ನು ನೋಡಲಿಕ್ಕೆ ಅ ಕಾಲಕ್ಕೆ ಸಾಧ್ಯವಾಗದಿದ್ದರೂ ಸಿಐಡಿ ಪ್ರಕಾಶ್ ನನ್ನು ಹಿಂಬಾಲಿಸುವಾಗ   ಸ್ವಿಚ್ ಒತ್ತಿದೊಡನೆ ಕಾರಿನ ಹಿಂಭಾಗದ ಡಿಕ್ಕಿ ಅಡಿಯಿಂದ ಕೊಳವೆ ಹೊರಬಂದು ಮೊಳೆಗಳು ಉದುರಿ ಹಿಂದಿನವರ ಕಾರುಗಳು ಪಂಚರ್ ಆಗಿ ಅವು ಚಿತ್ರವಿಚಿತ್ರವಾಗಿ ಸದ್ದು ಮಾಡುತ್ತಾ ಪಕ್ಕಕ್ಕೆ ಹೊರಳುವುದು ಮತ್ತು ಆ ಕಾರು ಶೆಡ್ ಒಳಗೆ ಹೋದೊಡನೆ ಹೊರಗೆ ನಾವಿಬ್ಬರು ನಮಗಿಬ್ಬರೇ ಮಕ್ಕಳು ಕುಟುಂಬ ಯೋಜನೆಯ ಫಲಕವು ಕಾಣಿಸಿಕೊಂಡು ಎದುರಾಳಿಗಳು ದಿಕ್ಕು ತಪ್ಪುವುದು ಇವೆಲ್ಲವನ್ನು  ಗೆಳೆಯರು ಹೇಳುತ್ತಿದ್ದರೆ ಬಾಯಿ ಬಿಟ್ಟು ಕೇಳಿದ ಸಂದರ್ಭ ಈಗಲೂ ನೆನಪಿಗೆ ಬರುತ್ತಿದೆ. 

ದೊರೆ ಭಗವಾನ್ ಜೋಡಿಯನ್ನು   ಆ ಕಾಲಘಟ್ಟದ ಅಪ್ಡೇಟೆಡ್ ನಿರ್ದೇಶಕ ದ್ವಯರು ಎಂದೇ ಹೇಳಬೇಕು. 1962 ರಲ್ಲಿ ಡಾ. ನೊ ಮೂಲಕ ಜೇಮ್ಸ್ ಬಾಂಡ್ ಚಿತ್ರಗಳು ಹಾಲಿವುಡ್ ಅನ್ನು ಆಕ್ರಮಿಸಿದಾಗ ಅದರ ಛಾಯೆಯನ್ನು ಹಿಡಿದು ಇಲ್ಲಿನ ವಯೋಮಾನ ಮತ್ತು ಬಜೆಟ್ ಗೆ ತಕ್ಕಂತೆ  ಸಿಐಡಿ ಯನ್ನಾಗಿಸಿ ರೂಪಿಸಿದ್ದು ಅವರ ಹೆಗ್ಗಳಿಕೆ .ಒಂದು ಮಾಹಿತಿಯ ಪ್ರಕಾರ ಜೇಡರಬಲೆಗೆ 3 ಲಕ್ಷ ಖರ್ಚು ಮಾಡಿ ಅದರ ಡಬ್ಬಿಂಗ್ ಹಕ್ಕನೇ 2 ಲಕ್ಷಕ್ಕೆ ಮಾರಿದರು ಎಂಬುದು  ಮುಂದೆ ಇದು ಭಾರತೀಯ ಚಿತ್ರರಂಗದಲ್ಲಿ   ಬಾಂಡ್ ಚಿತ್ರ ಗಳಿಗೆ ನಾಂದಿ ಹಾಡಿತು ಎಂಬುದು ವಿಶೇಷ .

ಇದಾದ ನಂತರ 66 67ರ ಸುಮಾರಿಗೆ   ಇಟಾಲಿಯನ್ ಭಾಷೆಯ ದ ಗುಡ್, ದ ಬ್ಯಾಡ್, ದ ಅಗ್ಲಿ   ಸ್ಪೆಗಾಟಿ ವೆಸ್ಟರ್ನ್ ಕೌಬಾಯ್ ಚಿತ್ರವು ಇಡೀ ಹಾಲಿವುಡ್ ಚಿತ್ರರಂಗವನ್ನೇ ಅಲ್ಲೋಲಕಲ್ಲೋಲವನ್ನಾಗಿಸಿದಾಗ ಅದರ ಛಾಯೆಯ ಆಟೋ ತೊಡೆಗಟ್ಟಿದ ಪ್ಯಾಂಟು ಇಲಿ ಮೂತಿಯ ಬೂಟು ಕುದುರೆ ಏರಿ ಬೆಲ್ಟ್ ನ ಲಾಕರ್ ನಲ್ಲಿ ಟಾಪ್ ಪಿಸ್ತೂಲನ್ನು ಟಿಶ್ಯೂಂ ಎಂದು ಹಾರಿಸಿ ಬಂದೂಕಿನ ನಳಿಗೆಯನ್ನು ಊದುವ  ಆ ಪಾತ್ರಗಳನ್ನು ಇಲ್ಲಿಗೆ ತಂದು ತಂದೆ-ತಾಯಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುವ ಪ್ರತಿಧ್ವನಿ ಚಿತ್ರವನ್ನು ಕನ್ನಡಕ್ಕೆ ತಂದದ್ದು ಈ ಜೋಡಿಯ ಹೆಗ್ಗಳಿಗೆ .ಈ ರೀತಿಯ ಕೌಬಾಯ್ ಚಿತ್ರಗಳು ಮುಂದೆ ದ್ವಾರಕೀಶ್ ಅಭಿನಯದಲ್ಲಿ ಕುಳ್ಳ ಏಜೆಂಟ್ 000,ಕೌಬಾಯ್ ಕುಳ್ಳ ನಾಗಿ ಗೆದ್ದರೆ ಇತರೆ ನಟರು ಅದೇ ಮಾದರಿಯ ಸಿಡಿಲ ಮರಿ, ಕಳ್ಳರ ಕಳ್ಳ, ನಾರಿ ಮುನಿದರೆ ಮಾರಿ ,ಸೇಡಿಗೆ ಸೇಡು, ಸೇಡಿನ ಕಿಡಿ, ಸಹೋದರರ ಸವಾಲ್ ,ಸ್ನೇಹಿತರ ಸವಾಲ್ ಮುಂತಾದ ಹತ್ತು ಹಲವು ಚಿತ್ರಗಳಲ್ಲಿ  ಅಭಿನಯಿಸಿದರು .ತಮಿಳಿನಲ್ಲಿ ಜಯಶಂಕರ್ ನೇರ್ವಳಿ, ,ಎಂಗ ಪಾಟನ್ ಸೊತ್ತು ತೆಲುಗಿನಲ್ಲಿ ಕೃಷ್ಣ,   ವಿಜಯ ನಿರ್ಮಲ ನಟನೆಯಲ್ಲಿ ದೊಂಗ ಶೀರ್ಷಿಕೆಯ ಅನೇಕ ಚಿತ್ರಗಳ ಮೂಲಕ ಅವರಿಗೆ ತಾರಾ ಪಟ್ಟ ಸಿಕ್ಕಿದ್ದು ಕೂಡ ವಿಶೇಷ .ರಜನಿಕಾಂತ್ ರವರ  ತಾಯ್  ಮೀದ ಸತ್ಯಂ, ಗಂಗಾ ಮುಂತಾದ  ಅವರ ಆರಂಭಿಕ ತಮಿಳು ಚಿತ್ರಗಳು ಕೂಡ ಈ ರೀತಿಯ ಕೌಬಾಯ್ ವೆಷ್ಟನ್ ಚಿತ್ರಗಳ ಮೂಲವನ್ನೇ ಆಧರಿಸಿರುವುದು  ಈ ಚಿತ್ರಗಳ ಯಶಸ್ಸು ಅವರ  ಸೂಪರ್  ತಾರ್ ಪಟ್ಟ ಪಡೆಯಲು ನಾಂದಿ ಆಡಿದ್ದು ಕೂಡ ವಿಶೇಷ. 

 ಅವರಿಗೆ ಅತ್ಯಂತ ದೊಡ್ಡ ಹೆಸರು ತಂದು ಕೊಟ್ಟ ಮತ್ತೊಂದು ಚಿತ್ರವೆಂದರೆ ಕಸ್ತೂರಿ ನಿವಾಸ. ತಮ್ಮ ಮೆಲೋಡ್ರಾಮದ ಮೂಲಕ ಅತಿ  ಬಾವುಕತೆಯ  ಶಿವಾಜಿ ಗಣೇಶ್ ರವರಿಗೆ  ಬಾಲಸುಬ್ರಹ್ಮಣ್ಯಂ ಎಂಬುವರು ಬರೆದ ಈ ಕಥೆ ಅವರ ಹಿಂಜರಿಕೆಯಿಂದಾಗಿ ಕೊನೆಗೆ ಬಂದು ತಲುಪಿದ್ದು ರಾಜಕುಮಾರ್ ಅವರ ಬಳಿಗೆ. 

ಆ ಕಾಲಕ್ಕೆ ಇದೊಂದು ವಿಶಿಷ್ಟ ಪ್ರಯೋಗ ಎಂದೇ ಹೇಳಬಹುದು .ಕಾರಣ  ದಾನದ ಕೈಯೊಂದು ಕೊಡುತ್ತಲೇ ಯಾರಿಂದಲೂ ಪಡೆದುಕೊಳ್ಳದೆ  ನೋಡುಗರಲ್ಲಿ ವಿಷಾದಭಾವವನ್ನು ತುಂಬತ್ತ ಕಣ್ಮರೆಯಾಗುವುದು. “ಇದು ಕಸ್ತೂರಿ ನಿವಾಸದ ಕೈ ಭೂಮಿಯನ್ನು ನೋಡುತ್ತದೆ ಹೊರತು ಆಕಾಶವನ್ನು ಅಲ್ಲ” ಎಂದು ಹೇಳುವ ನಾಯಕ, ಪಾರಿವಾಳ ಮತ್ತು ಗಿಡುಗ ಬೆಂಕಿ ಪಟ್ಟಣದ ರೂಪಕಗಳು, ಆಡಿಸಿ ನೋಡು ಬೀಳಿಸಿ ನೋಡು ಗೀತೆಯಲ್ಲಿ ಮೈಯನ್ನು ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು,  ತೇಯುತ್ತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು, ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು, ಇದೇ ಹಾಡು ಅಂತ್ಯದಲ್ಲಿ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಸೂತ್ರವ ಹರಿದ ಗೊಂಬೆಯ ಮುರಿದ ..ವಿಷಾದ ಗೀತೆಯಾಗಿ ಬಳಕೆಯಾಗಿರುವುದು  ಚಿ. ಉದಯಶಂಕರ್ ಸಾಹಿತ್ಯದ  ಸಾಲುಗಳು, ಅದನ್ನು ಚಿತ್ರದಲ್ಲಿ ಬಳಸಿರುವ ರೀತಿ   ನಂತರ ಚರಮ ಗೀತೆಯಾಗಿ ಮಾರ್ಪಟ್ಟು ಯಾರೇ ಗಣ್ಯರು ಗತಿಸಿದರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಳಕೆಯಾಗುತ್ತಿದೆ .

ಈ ಚಿತ್ರವನ್ನ ಮೊನ್ನೆ ಮತ್ತೊಮ್ಮೆ ನೋಡಿದಾಗ ಆದರ್ಶ ತುಂಬಿದ ವ್ಯಕ್ತಿಗಳು ಹೇಗೆ ತಮ್ಮ   ತ್ಯಾಗ ಹಾಗೂ ದಾನದಿಂದಾಗಿ ತಮ್ಮ ಪಾತ್ರವನ್ನು ಮೇರುಮಟ್ಟಕೊಯ್ದುದಲ್ಲದೆ ತಮ್ಮ ಸುತ್ತಮುತ್ತಲಿನ ಜನರನ್ನು ಕೃತಜ್ಞತೆಯ ಕೂಪಕ್ಕೆ ತಳ್ಳುತ್ತಾರೆ ಎಂಬ ಅಂಶವನ್ನು ಇದು ಮನಗಣಿಸುತ್ತದೆ ಎನಿಸಿತು. ಚಿತ್ರದ ಅಂತ್ಯದಲ್ಲಿ ಚಂದ್ರು ಹೇಳುವ “ನೀವು ಕೊಟ್ಟುಕೊಟ್ಟು ಬರೀ ಕೈಯಾದರೆ ನಾವು ತಗೊಂಡು ತಗೊಂಡು ಶ್ರೀಮಂತರಾದೇವು.  ದಯಮಾಡಿ ಈ ಬಂಧನದಿಂದ ಬಿಡಿಸಿ” ಎಂದು ಯಾಚಿಸುವ ಅಂಶ  ದೀನತೆಯ ಭಾರ ಎಷ್ಟೊಂದು ಕುಗ್ಗಿಸುತ್ತದೆ ಎಂಬುದರ ಅರಿವು ಮೂಡಿಸುತ್ತದೆ. 

ಅಲ್ಲಿಂದ ದೊರೆ-ಭಗವಾನ್ ಜೋಡಿ ಹೊರಳಿದ್ದು ಕಾದಂಬರಿ ಆಧಾರಿತ ಚಿತ್ರಗಳ ಕಡೆಗೆ  . ತರಾಸು, ಭಾರತಿಸುತ ,ವಾಣಿ ಮುಂತಾದ ಕಾದಂಬರಿಕಾರರ ಕಾದಂಬರಿಗಳನ್ನು ತೆರೆಯ ಮೇಲೆ ತಂದು  ಯಶಸ್ವಿ ನಿರ್ಮಾಪಕರ ಸಾಲಿಗೂ ಸೇರಿದರು .ಈ ಮೊದಲು  ಎಂಆರ್ ವಿಠ್ಠಲ್, ಟಿವಿ ಸಿಂಗ್ ಠಾಕೂರ್ ಕಾದಂಬರಿ ಆಧಾರಿತ ಚಿತ್ರಗಳನ್ನು ಪ್ರಯತ್ನಿಸಿದ್ದರು. ಪುಟ್ಟಣ್ಣ ಕಣಗಾಲ್ ಮತ್ತು ಸಿದ್ದಲಿಂಗಯ್ಯ ಕಾದಂಬರಿ ಆಧಾರಿತ ಚಿತ್ರಗಳ ಮೂಲಕ ದೊಡ್ಡ  ಯಶಸ್ಸು ಸಾಧಿಸಿದಾಗ ಈ ಜೋಡಿಯು ತಮ್ಮದೇ ಅನುಪಮ ಮೂವೀಸ್ ಮೂಲಕ ಕಾದಂಬರಿ ಆಧಾರಿತ ಚಿತ್ರಗಳ ನಿರ್ಮಾಣಕ್ಕೆ ತೊಡಗಿಸಿಕೊಂಡರು. ಅವರ ಜೊತೆಯಾಗಿ ರಾಜನ್ ನಾಗೇಂದ್ರ ರವರ ಸಂಗೀತ  ಅವರ ಯಶಸ್ಸಿಗೆ ಸಾತ್ ನೀಡಿತು. ಆ ಕಾಲದ ಎರಡು ಯಶಸ್ವಿ ಚಿತ್ರಗಳಾದ ಭೂತಯ್ಯನ ಮಗ ಅಯ್ಯು ಹಾಗೂ ಎರಡು ಕನಸು ಚಿತ್ರವನ್ನು   ಫಸ್ಟ್ ಶೋ ಮತ್ತು ಸೆಕೆಂಡ್ ಶೋ ನಲ್ಲಿ ನೋಡಿದ್ದು ಇಂದಿಗೂ ನೆನಪಿದೆ. 

ಎರಡು ಕನಸು ಚಿತ್ರದ ಎಂದೆಂದೂ ನಿನ್ನನು ಮರೆತು, ಬಾಡಿಹೋದ ಬಳ್ಳಿಯಿಂದ ,ಎಂದು ನಿನ್ನ ನೋಡುವೆ, ತನ್ನಂ ತನ್ನಂ ನನ್ನಿ ಮನಸು ಮಿಡಿಯುತ್ತಿದೆ ಚಂದನ ಗೊಂಬೆ ಚಿತ್ರದ ಆಕಾಶದಿಂದ ಧರೆಗಿಳಿದ ಗೊಂಬೆ, ಕಂಗಳು ತುಂಬಿರಲು ಕಂಬನಿ ಧಾರೆಯಲಿ ಗಾಳಿಮಾತು ಚಿತ್ರದ ನಮ್ಮೂರ ಸಂತೇಲಿ  ನುಡಿಸಲು ನೀನು ನುಡಿಯುವೆ ನಾನು ಬಯಲು ದಾರಿ ಚಿತ್ರದ ಎಲ್ಲಿರುವೆ ಮನವ ಕಾಡುವ ರೂಪಸಿಯೇ ಬಾನಲ್ಲು ನೀನೆ ಬುವಿಯಲ್ಲು ನೀನೆ ಹಾಡುಗಳು ಎವರ್ ಗ್ರೀನ್ ಹಾಡುಗಳಾಗಿ ಇಂದಿಗೂ ಉಳಿದಿವೆ. ಆ ಚಿತ್ರಗಳ ಯಶಸ್ಸಿನ ಬಳಿಕ ರಾಜನ್  ನಾಗೇಂದ್ರ ಹತ್ತಾರು ವರ್ಷ ಕನ್ನಡದ ಚಿತ್ರೋದ್ಯಮದಲ್ಲಿ ಪ್ರಮುಖ ಸಂಗೀತ ನಿರ್ದೇಶಕರಾಗಿ ಮಾರ್ಪಟ್ಟರು .(ಕೊನೆ ಕೊನೆಗೆ ಅವರ  ಸಂಗೀತದ ಹಾಡುಗಳು ಒಂದೇ  ದಾಟಿಯ  ಸಂಯೋಜನೆ ಮತ್ತು ಏಕತಾನತೆಯಿಂದಾಗಿ  ಪೇಲವವಾಗಿದ್ದು ಕೂಡ ನಿಜ) 

ದೊರೆ ತೆರೆಯ ಹಿಂದೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದರೆ  ಚಿ  ಉದಯಶಂಕರ್ ಸಂಭಾಷಣೆ ಸಾಹಿತ್ಯ ಜೊತೆಗೆ ಚಿತ್ರಕಥೆ   ರಾಜ್ ಸಂಸ್ಥೆಯ ನಿರ್ಮಾಣದ ಹೊಸ ಬೆಳಕು  ವಸಂತಗೀತಾ ಆಪರೇಷನ್ ಡೈಮಂಡ್ ರಾಕೆಟ್ ಸಮಯದ ಗೊಂಬೆ ಒಡಹುಟ್ಟಿದವರು ಸೇರಿದಂತೆ ಹಲವು ಸಿನಿಮಾಗಳನ್ನು   ಭಗವಾನ್   ನಿರ್ದೇಶಿಸುವುದರ ಜೊತೆಗೆ ಮ್ಯೂಸಿಕಲ್ ನೈಟ್ ಗೆ ನಿರೂಪಕರಾಗಿಯೂ ಕೆಲಸ ಮಾಡಿ ಅವರ ಒಡನಾಡಿಯಾಗಿದ್ದರು .ಊಟಿಯಲ್ಲಿ ನಡೆದ ಯಾರಿವನು ಚಿತ್ರದ ಶೂಟಿಂಗ್ ಸಮಯದಲ್ಲಿ  ಅನಾಮಿಕರು ರಾಜಕುಮಾರ್ ರವರ ಮೇಲೆ ಹಲ್ಲೆಗೆ ಮುಂದಾದಾಗ ಅವರ ರಕ್ಷಣೆಗೆ ಬರಲಿಲ್ಲವೆಂಬ ಆಪಾದನೆಯು ಇವರ ಮೇಲೆ ಇತ್ತು. 2,000 ಇಸವಿಗೆ ದೊರೈ ರವರ ನಿಧನದ ನಂತರ ಭಗವಾನ್ ರವರು  ಕ್ರಮೇಣ ಚಿತ್ರರಂಗದಿಂದ ದೂರ ಸರಿದು,ತುಂಬಜೀವನವನ್ನು ನಡೆಸಿ  ಈಗ ತಮ್ಮ 90ನೇ ವಯಸ್ಸಿನಲ್ಲಿ   ವಿದಾಯ ಹೇಳಿದ್ದಾರೆ. 

ಭಾರತೀಯ  ಚಿತ್ರರಂಗದ ಇತಿಹಾಸದಲ್ಲಿ  ಸಲೀಂ ಜಾವೇದ್ ,ಲಕ್ಷ್ಮಿಕಾಂತ್ -ಪ್ಯಾರೆ ಲಾಲ್ ,ಕಲ್ಯಾಣ್ ಜಿ- ಆನಂದ್ ಜಿ ,ಶಂಕರ್ -ಜಯ ಕಿಶನ್  ರೀತಿಯಲ್ಲಿ ಈ ಜೋಡಿಗಳು ಕೂಡ  ಕನ್ನಡ ಚಿತ್ರರಂಗದಲ್ಲಿ ತಮ್ಮ ಚಾಪನ್ನು ಮೂಡಿಸಿ ಹೋಗಿರುವುದು ನಿಜ. 

‍ಲೇಖಕರು avadhi

March 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: