ಭಾಸ್ಕರ ಬಂಗೇರ
ಒಂದು ಮೊಟ್ಟೆಯ ಕಥೆ!
ಬಹಳ ವರ್ಷಗಳ ಹಿಂದೆ “ಹೆರಾಲ್ಡ್” ಎನ್ನುವ ಹಾಲಿವುಡ್ ಸಿನೆಮಾವನ್ನು ನೋಡಿದ್ದೆ. ಆ ಸಿನೆಮಾ ಕೂಡ ಸಣ್ಣ ವಯಸ್ಸಿನಲ್ಲಿಯೇ ತಲೆ ಕೂದಲು ಉದುರುವಿಕೆಯಿಂದ ಸಾಮಾಜಿಕವಾಗಿ ವ್ಯಂಗ್ಯಕ್ಕೆ ಒಳಗಾಗುವ ವಿದ್ಯಾರ್ಥಿಯೊಬ್ಬನ ಕುರಿತಾಗಿತ್ತು.

ಆದರೆ ಆ ಸಿನೆಮಾ ಕೇವಲ ಅಮೇರಿಕಾದ ಟೀನ್ ಕಾಮಿಡಿ ಶೈಲಿಗಷ್ಟೇ ಸೀಮಿತವಾಗಿರುವ ಸಿನೆಮಾ. ನಮ್ಮ ಕಾಶೀನಾಥ್ ಕೂಡ ತನ್ನ ಬಡಕಲು ದೇಹವನ್ನೇ ಬಂಡವಾಳಗಿಟ್ಟುಕೊಂಡು ಸಿನೆಮಾ ಮಾಡಿ ಪೋಲಿ ಸಂಭಾಷಣೆಗಳ ಮೂಲಕ ಯುವಜನತೆಯನ್ನು ಆಕರ್ಷಿಸುತ್ತ ಗೆದ್ದವರು.
ಆದರೆ ಒಂದು ಮೊಟ್ಟೆಯ ಕಥೆ ಅಪ್ಪಟ ಕೌಟುಂಬಿಕ ಸಿನೆಮಾ. ಅಶ್ಲೀಲ ಸಂಭಾಷಣೆ ಹಾಗು ರಕ್ತಪಾತಗಳಿಲ್ಲದ ಸಿನೆಮಾವಿದು. ದೈಹಿಕ ಸೌಂದರ್ಯದ ಕುರಿತು ತಮ್ಮದೇ ಭ್ರಮೆಯಲ್ಲಿ ಇರುವವರು ಮಜುಗರ ಪಟ್ಟುಕೊಳ್ಳುವ ಸನ್ನಿವೇಶವಿದೆ. ಶ್ರೀನಿವಾಸ್ ಎನ್ನುವ ಪಾತ್ರ ಸಿನೆಮಾದ ಕೊನೆಯ ಹಂತದಲ್ಲಿ ಮಾತನಾಡುವ ಪ್ರತಿ ಶಬ್ಧವು ಮೊಟ್ಟೆ ಸಿನೆಮಾದ ಮುತ್ತುಗಳು.
ನಿರ್ದೇಶಕರಿಗೆ ತನ್ನ ಸಿನೆಮಾ ತಲುಪಬೇಕಾದ ವ್ಯಾಪ್ತಿಯ ಅರಿವು ಹಾಗು ಅದಕ್ಕಾಗಿ ಯಾವುದೆಲ್ಲ ಅಂಶಗಳನ್ನು ಚಿತ್ರದ ಮೂಲಕತೆಗೆ ದಕ್ಕೆ ಆಗದಂತೆ ಸೇರಿಸಬೇಕು ಎನ್ನುವ ಸ್ಪಷ್ಟತೆಯಿದೆ. ಸಿನೆಮಾ ಶುರುವಾದ ಕೆಲವೇ ಹೊತ್ತಿನಲ್ಲಿ ನಮಗೆ ಅದು ತಿಳಿಯುತ್ತದೆ. ಸಿನೆಮಾದ ಕತೆ ಪಾತ್ರಗಳನ್ನು ಮಂಗಳೂರಿನ ಗಡಿ ದಾಟಿಸುವ ಪ್ರಯತ್ನವನ್ನು ಸಹ ಮಾಡುವುದಿಲ್ಲ. “ಒಂದು ಮೊಟ್ಟೆಯ ಕಥೆ” ಸಿನೆಮಾದಲ್ಲಿರುವ ಪಾತ್ರಗಳೆಲ್ಲವೂ ಮಂಗಳೂರಿನ ಸುತ್ತಲಿನ ಪರಿಸರಕ್ಕಷ್ಟೇ ಸೀಮಿತವಾಗಿರುವವು.
ಆದರೆ ಕರಾವಳಿಯ ಗಡಿಯ ಆಚೆಯೂ ಈ ಸಿನೆಮಾ ಪ್ರೇಕ್ಷಕರನ್ನು ರಂಜಿಸುವ ಅಂಶಗಳನ್ನು ಹೊಂದಿರಬೇಕು ಎನ್ನುವ ಇರಾದೆಯೊಂದಿಗೆ ವರನಟ ರಾಜಕುಮಾರ್ ಅವರನ್ನು ನಿರ್ದೇಶಕರು ಎಲ್ಲಿಯೂ ಅನಗತ್ಯ ಎನಿಸದಂತೆ ಬಳಸಿಕೊಂಡಿದ್ದಾರೆ. ನಿರ್ದೇಶಕರು ಚಿತ್ರಕತೆಗೆ ಅಣ್ಣಾವ್ರ ಮೂಲಕ ಆಗಾಗ ಟಾನಿಕ್ ನೀಡುತ್ತಿರುತ್ತಾರೆ. ಇದು ತನಗೆ ಬೇಕಾದ ಸಿನೆಮಾ ಮಾಡುವ ಹಾಗು ಜನರಿಗೆ ಇಷ್ಟವಾಗುವಂತೆ ಸಿನೆಮಾ ಮಾಡುವವರ ನಡುವಿನ ಮುಖ್ಯ ವ್ಯತ್ಯಾಸ.
ಮುಖ್ಯ ಪಾತ್ರದಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿ ನಮ್ಮೊಗಿನ ಕೀಳರಿಮೆಯ ಪ್ರತಿನಿಧಿ ಎನ್ನುವ ಭಾವ ಮೂಡುತ್ತದೆ. ಅದು ತಲೆ ಕೂದಲು ಇಲ್ಲದಿರುವುದೇ ಆಗಿರಬಹುದು ಅಥವಾ ದಪ್ಪಗಿರುವುದು, ಕಪ್ಪು ಬಣ್ಣದವರಾಗಿರುವುದು, ದಪ್ಪ ಮೂಗು, ದೊಡ್ಡ ಕಣ್ಣು ಹಾಗು ಇನ್ಯಾವುದೇ ದೈಹಿಕ ವಿಚಾರಗಳ ಕುರಿತಾದ ಕೊರಗುವಿಕೆ ಆಗಿರಬಹುದು. ಇರುವುದನ್ನು ಬಿಟ್ಟು ಯಾರದ್ದೋ ಬದುಕಿನ ಜೊತೆ ಹೋಲಿಕೆ ಮಾಡಿಕೊಂಡು ಹಲುಬುವ ಎಲ್ಲರನ್ನು ಈ ಸಿನೆಮಾ ಪ್ರಭಾವಿಸುತ್ತದೆ. ಈ ಚಮತ್ಕಾರದ ಶ್ರೇಯಸ್ಸು ಮೊದಲ ಬಾರಿ ಸಿನೆಮಾ ನಿರ್ದೇಶಿಸುತ್ತಿರುವ ರಾಜ್ ಬಿ ಶೆಟ್ಟಿ ಅವರಿಗೆ ಸಲ್ಲಬೇಕು.
ಇಂದಿನ ಯುವ ಸಮೂಹದ ತಳಮಳ, ಮೊಬೈಲ್ ಹುಚ್ಚು, ಫೆಸ್ಬುಕ್ಕಿನ ಪ್ರೇಮ ಸಲ್ಲಾಪ, ಎಲ್ಲದಕ್ಕೂ ಜಾತಕದ ಹಿಂದೆ ಬೀಳುವವರ ತೊಳಲಾಟ, ಸಮಸ್ಯೆಗಳಿಗೆಲ್ಲ ಹರಕೆ ಹೊರುವವರು ಹೀಗೆ ಈ ಸಿನೆಮಾದಲ್ಲಿ ವಿಚಾರಗಳು ಸಾಕಷ್ಟಿವೆ. ಇದೆಲ್ಲದರ ಹೊರತಾಗಿಯೂ ಅರ್ಥಶಾಸ್ತ್ರ ಉಪನ್ಯಾಸಕಿಯ ಪಾತ್ರ ಪೋಷಣೆ ಅಪೂರ್ಣ ಅನಿಸಿತು. ಆ ಪಾತ್ರದ ನಿಲುವುಗಳು ನನಗೆ ದಕ್ಕಲಿಲ್ಲ. ಜನಾರ್ಧನ್ ಜ್ಯೋತಿಷಿಯ ಮನೆಗೆ ಸಹಾಯ ಕೇಳಲು ಹೋಗುವ ದೃಶ್ಯದಲ್ಲಿ ಭಕ್ತರ ನಡುವಿನ ಮಾತುಕತೆ ದೊಡ್ಡದಾಯಿತು ಎನಿಸಿತು. ಮಿಕ್ಕಂತೆ ಇದು ಸರಳ ಹಾಗು ಆಪ್ತ ಸಿನೆಮಾ.
ಪ್ರಕಾಶ್ ತೂಮಿನಾಡು, ಉಷಾ ಭಂಡಾರಿ, ಶೈಲಶ್ರೀ ಮುಲ್ಕಿ, ಶ್ರೇಯಾ ಆಂಚನ್, ಅಮೃತ ನಾಯ್ಕ್, ಮೈಮ್ ರಾಮದಾಸ್ ಹೀಗೆ ಎಲ್ಲರ ನಟನೆ ನೆನಪಿನಲ್ಲಿ ಉಳಿಯುತ್ತದೆ. ಪಾರ್ಕಿನ ಬೆಂಚು, ಶರಭತ್ತಿನ ಲೋಟದಲ್ಲಿ ಸತ್ತ ನೊಣ, ಟಿಫಿನ್ ಬಾಕ್ಸ್, ಕೊಡೆ ಹೀಗೆ ಎಲ್ಲವೂ ಪಾತ್ರಗಳಂತೆಯೇ ಚಿತ್ರಮಂದಿರದ ಹೊರಗೆ ನಮ್ಮನ್ನು ಹಿಂಬಾಲಿಸುತ್ತವೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಹಾಗು ಮಿದುನ್ ಮುಕುಂದ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿವೆ. ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಸುಹಾನ್ ಪ್ರಸಾದ್ ಹಾಗು ಪವನ್ ಕುಮಾರ್ ಅವರಿಂದ ಇನ್ನಷ್ಟು ಭಿನ್ನ ವಸ್ತುವಿನ ಸಿನೆಮಾಗಳು ನಿರ್ಮಾಣವಾಗಲಿ.
ಸಿನೆಮಾದ ಸಂಭಾಷಣೆಗಳನ್ನು ಕೇಳಿಸಿಕೊಳ್ಳುತ್ತ ತುಟಿಯ ಮೇಲೆ ನಗುವಿನ ಅಲೆ ಮೂಡಿಸುತ್ತಲೇ ನಮ್ಮ ಒಳಗಡೆ ಸಣ್ಣ ವಿಷಾದ ಕಾಡುತ್ತದೆ. ಬಹಳ ಅಪರೂಪಕ್ಕೆ ಈ ಸಿನೆಮಾದಲ್ಲಿ ಮೌನಕ್ಕೆ ಜಾಗವಿದೆ ಹಾಗು ಅದು ನಮ್ಮನ್ನು ಮಾತನಾಡಿಸುತ್ತದೆ. ಒಳಗಿರುವ ಸೌಂದರ್ಯವನ್ನು ಹೊರಗಡೆ ಹುಡುಕುವವರೆಲ್ಲರು ಅಗತ್ಯವಾಗಿ ನೋಡಲೇಬೇಕಾದ ಸಿನೆಮಾವಿದು. ಹೊಸ ತಲೆಮಾರಿನ ಸಿನೆಮಾಗಳ ನಿರ್ಮಾಣ ನಿರಂತರವಾಗಿರಲಿ. ಚಿತ್ರ ತಂಡಕ್ಕೆ ಶುಭವಾಗಲಿ.






ಕನ್ನಡ ಚಿತ್ರ ರಂಗದ ಮಂದಿ, ಚಿತ್ರ ರಂಗದ ಉಳಿವಿಗಾಗಿ ಎಲ್ಲವನ್ನೂ ಮಾಡುತ್ತಾರೆ! ಆದರೆ ಕನ್ನಡಿಗರು ‘ಚಿತ್ರ ಮಂದಿರಕ್ಕೆ ಹೋಗಿ ಒಂದು ಉತ್ತಮ ಚಿತ್ರ ನೋಡೋಣ’ ಎಂದನಿಸಿ ( ಕನ್ನಡ ಎನ್ನುವ ಕಾರಣಕ್ಕಾಗಿ ಖಂಡಿತಾ ಅಲ್ಲ) ಕನ್ನಡ ಚಿತ್ರವೊಂದನ್ನು ನೋಡುವಂತೆ ಪ್ರೇರೇಪಿಸುವ ಚಿತ್ರಗಳನ್ನು ಮಾಡುವವರು ಹೆಚ್ಚಾಗಿ ಹೊಸಬರು! ಹಳಬರು ಸದಾ ಡಬ್ಬಿಂಗ್ ವಿರುದ್ಧ ಹೋರಾಟ, ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನಕ್ಕೆ ಬೇಡಿಕೆ… ಇದೆ ಅಸ್ತ್ರ ಪ್ರಯೋಗಿಸುತ್ತಲಿರುತ್ತಾರೆ . ವಿಪರ್ಯಾಸವೆಂದರೆ ಇಂತಹ ಚಿತ್ರಗಳನ್ನು ಅವರು ಕೂಡಾ ಹಾಡಿ ಹೊಗಳುತ್ತಾರೆ ಮತ್ತು ತಮ್ಮ ಹಳೆಯ ಚಾಳಿ, ಹೋರಾಟ ಮುಂದುವರಿಸುತ್ತಾರೆ
`ಮೌನ ಮಾತನಾಡಿಸುತ್ತದೆ’ Good one.