ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮೈ ಲಾರ್ಡ್, ನಾನು ಕಂಬಾಲಪಲ್ಲಿ ಹುಡುಗ…' – ನಾಗರಾಜ್ ಹೆತ್ತೂರ್ ಕವಿತೆ

ನಾಗರಾಜ್ ಹೆತ್ತೂರ್

ಮೈ ಲಾರ್ಡ್
ನಾನು ಕಂಬಾಲಪಲ್ಲಿಯ ಕಣ್ಣೀರ ಹುಡುಗ
ಇದೋ ನಮ್ಮಪ್ಪ, ಅವ್ವ, ತಂಗಿಯನ್ನು ಸುಟ್ಟು ಕರಕಲಾಗಿಸಿದ ಬೂದಿ
ಕಪ್ಪಾಗಿದೆ ನನ್ನಂತೆಯೇ… ಬೇಕಿದ್ದರೇ ಪರೀಕ್ಷಿಸಿ , ಹಿಡಿ ಜೀವ ಇನ್ನೂ ಇದೆ.
ಹದಿನಾಲ್ಕು ವರ್ಷ!
ನನ್ನ ಜೀವದಂತೆಯೇ ಕಾಪಾಡಿಕೊಂಡಿದ್ದೆ
ಇಂದು ಹಿಡಿ ಜೀವವೂ ಕೊನೆ ಉಸಿರು ಎಳೆಯಿತು
ಏಳು ಮಂದಿಯೂ ನೆನ್ನೆ ತೀರಿಕೊಂಡರು
ನಿಮ್ಮ ತೀರ್ಪು ಬರುತ್ತಲೇ…
ಓ ಮೈ ಲಾರ್ಡ್, ನೀವು ಸಾಕ್ಷಿ ಕೇಳಿದಿರಿ
ಇದು ಬಾಗಿಲ ಚಿಲಕ, ಜೀವ ಇರುವ ಚಿಲಕ
ಇದೇ ಅಲ್ಲವೇ..? ಬೆಂಕಿ ಹಚ್ಚಿದಾಗ, ನನ್ನವರು ಸುಟ್ಟು ಕರಕಲಾಗುವಾಗ
ಸಾಕ್ಷಿಯಾಗಿ ನೋಡಿದ್ದು
ಚಿಲಕ ನಿತ್ಯವೂ ನನ್ನ ಕನಸಿಗೆ ಬರುತ್ತಿದೆ
ಗೋಳಾಡುತ್ತದೆ, ಕಣ್ಣೀರು ಸುರಿಸುತ್ತದೆ
ಸಾಕ್ಷಿ ಬೇಕಾದರೆ ಹೇಳು ನಾನೇ ಬರುತ್ತೇನೆಂದು
ಗೋಗರೆಯುತ್ತದೆ….
ಮೈ ಲಾರ್ಡ್
ಅಂದು ಪೊಲೀಸರು ತೆರೆದ ಬಾಗಿಲು ಇಂದಿಗೂ ಮುಚ್ಚಿಲ್ಲ

ನನ್ನವ್ವ, ಅಪ್ಪ, ತಂಗಿ
ನ್ಯಾಯಕ್ಕಾಗಿ ಕಾದು ಕುಳಿತಿದ್ದಾರೆ
ಭೂತ, ಪ್ರೇತಗಳಂತೆ ಅಲೆಯುತ್ತಿದ್ದಾರೆ
ಒಮ್ಮೆಯಾದರೂ ನೀವು ಸಾಕ್ಷಿಗೆ ಕರೆಯಬಹುದೆಂದು
ಸಾಯಿಸಿಬಿಟ್ಟಿರಿ ಸಾಕ್ಷಿಗೆ ಕೂಡ ಕರೆಯದಂತೆ
ಓ ಮೈ ಲಾರ್ಡ್
ಅಲ್ಲಿ ಸುರಿದ ರಕ್ತ ಹೆಪ್ಪುಗಟ್ಟಿ ಬಂಡೆಯಾಗಿದೆ
ಮೂಳೆಗಳು ಕರಕಲಾಗಿ, ಭೂಮಿಗೆ ಅಂಟಿಕೊಂಡಿವೆ
ಅಷ್ಟೂ ಜನ ಅತ್ತು ಸುರಿಸಿದ ಕಣ್ಣೀರಿಗೆ ನೆಲ ಇನ್ನೂ ಒಣಗಿಲ್ಲ
ಸುಟ್ಟ ಹೊಗೆ ಅಲ್ಲೆಲ್ಲೂ ಅವಿತುಕೊಂಡಿದೆಯಂತೆ
ಎಂದಾದರೊಂದು ದಿನ ಸಾಕ್ಷಿಗೆ ಬೇಕಾಗಬಹುದೆಂದು
ನೆನ್ನೆ ಅವೂ ಕೂಡ ನೀವು ಕೊಟ್ಟ ತೀರ್ಪಿಗೆ ಕಣ್ಣೀರು ಹಾಕಿದವು, ನೊಂದುಕೊಂಡವು
ತಪ್ಪು ಮಾಡಿದಿರಿ ಮೈ ಲಾರ್ಡ್ ,
ಒಮ್ಮೆ ಯಾದರೂ ನೀವು ಸಾಕ್ಷಿಗೆ ಕರೆಯಬಹುದಿತ್ತು
ಮೈ ಲಾರ್ಡ್
ಸುಟ್ಟು ಕರಕಲಾದ ಕಂಬಾಲಪಲ್ಲಿಯನ್ನು
ಸರಕಾರ `ಸ್ಮಶಾನ’ ಎಂದು ಘೋಷಿಸಿದೆಯಂತೆ
ಚಿಲಕ, ಕಣ್ಣೀರ ಬಂಡೆ, ಬಾಗಿಲು, ಹೆಪ್ಪುಗಟ್ಟಿದ ರಕ್ತ
ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ
ಸಾಕ್ಷಿಗಾಗಿ ಕಾಯುತ್ತಿದ್ದ ಜೀವಗಳಿಗೆ ನಿದ್ರೆ ಮಾತ್ರೆ ಕೊಡಲಾಗಿದೆ
ಸುತ್ತಲೂ ಭರ್ಜಿ ಹಿಡಿದ ಭಯಾನಕರು ನಿಂತಿದ್ದಾರೆ
ಎಲ್ಲಿಯವರಗೂ ಹೋರಾಟ… ಗೆಲ್ಲುವರೆಗೂ ಹೋರಾಟ….
ಏತಕ್ಕಾಗಿ ಹೋರಾಟ … ನ್ಯಾಯಕ್ಕಾಗಿ ಹೋರಾಟ…
ಗೋರಿಗಳ ಮೇಲೆ ಕೆತ್ತಿಸಲಾಗಿದೆ
ನ್ಯಾಯ ಸತ್ತು ಹೋಗಿದೆ ಅಲ್ಲಿ
ನನ್ನವರ ದೇಹಗಳು ಸಾಕ್ಷಿ ಸಮೇತ ಸುಟ್ಟು ಕರಕಲಾಗಿದೆ
ಓ ಮೈ ಲಾರ್ಡ್
ನನ್ನವರು ಕೂಗುತ್ತಿದ್ದಾರೆ, ಅರಚುತ್ತಿದ್ದಾರೆ
ನ್ಯಾಯ ದೇವತೆಗೆ ಕಣ್ಣು , ಕಿವಿಗೆ ಬಟ್ಟೆ ಕಟ್ಟಲಾಗಿದೆ
 

‍ಲೇಖಕರು G

25 August, 2014

4 Comments

  1. mansoor shaan

    Nice kavithe

  2. ಮಾಲತೇಶ್ ಅರಸ್ ಹರ್ತಿಕೋಟೆ

    ಗೆಳೆಯ ನಾಗರಾಜ್‌ ಹೆತ್ತೂರು ಬರೆಯುತ್ತಲೇ ಎಲ್ಲವನ್ನೂ ತಮ್ಮೊಳಗಿನ ಅಗ್ನಿ ಹೃದಯದಿಂದ ಹೊರಹಾಕಿದ್ದಾರೆ. ಕಂಬಾಲಪಲ್ಲಿಯ ಕಣ್ಣೀರ ಹುಡುಗನ ನೋವು ಎಲ್ಲರ ಮನ ಮುಟ್ಟಿದೆ.
    ಮಿತ್ರನಿಗೊಂದು ಸಲಾಂ………

  3. dhanaraj

    nyay sattu hogide.

  4. b.rajashekaramurthy

    dalitha samvedhane…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading