ಮೇ ದಿನ – ಚಿಂತನೆ ಸ್ವರೂಪ ಎರಡೂ ಬದಲಾಗಬೇಕಿದೆ

ನಾ ದಿವಾಕರ

ವಿಶ್ವ ಕಾರ್ಮಿಕ ದಿನ (ಇದನ್ನು ಶ್ರಮಿಕ ದಿನ ಎನ್ನೋಣ) , ಅಂದರೆ ಮೇ ದಿನ, ಈ ಬಾರಿ ಮನೆಯೊಳಗೇ ಆಚರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ದಶಕಗಳ ಹೋರಾಟಗಳ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿಯೂ ಸಹ ಮೇಲ್ದರ್ಜೆಗೆ ಬಡ್ತಿ ಪಡೆದಿರುವ ವೈಟ್ ಕಾಲರ್ ನೌಕರರಿಗೆ ಇದೇನೋ ಹೊಸತಲ್ಲ. ಸಾರ್ವಜನಿಕ ರಜೆ ಇರುವುದರಿಂದ ಮೇ 1 ಎಂದರೆ ರಜೆ ಅನುಭವಿಸುವ ಒಂದು ಅವಕಾಶ ಎಂದು ಭಾವಿಸುವ ಕಾರ್ಮಿಕರ ಸಂಖ್ಯೆ ಗಣನೀಯವಾಗಿದೆ. ಪ್ರಧಾನವಾಗಿ ಬ್ಯಾಂಕ್ ನೌಕರರು ಮತ್ತು ಇತರ ಕಚೇರಿ ನೌಕರರಿಗೆ ಇದು ವೇತನ ಸಹಿತ ರಜೆಯಾಗಿ ಪರಿಣಮಿಸಿದೆ. ಕಳೆದ ಮೂರು ದಶಕಗಳಲ್ಲಿ ಹಣಕಾಸು ಕ್ಷೇತ್ರದಲ್ಲಿ ಉಂಟಾಗುತ್ತಿರುವ ಗಂಭೀರ ಬದಲಾವಣೆಗಳ ಹಿನ್ನೆಲೆಯಲ್ಲಿ ನೋಡಿದಾಗ ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ ನೌಕರರಿಗೆ ಮೇ ದಿನಾಚರಣೆ ಇನ್ನೂ ಹೆಚ್ಚು ಆಪ್ತ ಎನಿಸಬೇಕು, ಅವಶ್ಯಕ ಎನಿಸಬೇಕು, ಅನಿವಾರ್ಯ ಎನಿಸಬೇಕು. ಆದರೆ ಹಾಗಾಗುತ್ತಿಲ್ಲ.

ಜಾಗತೀಕರಣ ಪ್ರಕ್ರಿಯೆ ತೀವ್ರಗೊಂಡ ನಂತರದಲ್ಲಿ ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದಲ್ಲಿ ಉಂಟಾಗಿರುವ ಬದಲಾವಣೆಗಳು ಸುರಕ್ಷಿತ ಹಿತವಲಯದ ಕಾರ್ಮಿಕರಲ್ಲಿದ್ದ ಸುಪ್ತ ಪ್ರಜ್ಞೆಯನ್ನೂ ಇಲ್ಲವಾಗಿಸಿರುವುದು ವಾಸ್ತವ. ಹೊಸ ಸಹಸ್ರಮಾನದಲ್ಲಿ, ಕಳೆದ 20 ವರ್ಷಗಳ ಅವಧಿಯಲ್ಲಿ ದೇಶದ ಹಣಕಾಸು ವಲಯದಲ್ಲಿ ನೌಕರಿ ಗಳಿಸಿರುವ ಒಂದು ಪೀಳಿಗೆಗೆ ಭಾರತದ ಆರ್ಥಿಕ ಪರಿಸ್ಥಿತಿ, ಆರ್ಥಿಕತೆಯ ಇತಿಹಾಸ ಮತ್ತು ತಾವು ಪ್ರತಿನಿಧಿಸಿದ ಸಂಸ್ಥೆಯ ಇತಿಹಾಸದ ಪರಿವೆಯೇ ಇರುವುದಿಲ್ಲ. ಇನ್ನು ಮೇ ದಿನದ ಚಾರಿತ್ರಿಕ ಮಹತ್ವವನ್ನು ಅವರಿಗೆ ಹೇಗೆ ತಿಳಿಯಪಡಿಸುವುದು ? ಇದು ಅಸಾಧ್ಯವೇನೂ ಅಲ್ಲ ಆದರೆ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆಯೇ ? ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವುದು ಕಾರ್ಮಿಕ ನಾಯಕರ ಹೊಣೆ.

ಆದರೆ ಇದು ನಡೆದಿಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕಾರ್ಮಿಕ ಎನ್ನುವ ಒಂದು ವಿಶಾಲ ತಳಹದಿಯ ಅಸ್ಮಿತೆಯಿಂದ ಭಾರತದ ಒಂದು ನೌಕರ ವಲಯ ಎಂದೋ ದೂರ ಸರಿದಿರುವುದನ್ನು ಗಮನಿಸಬೇಕಿದೆ. ಇಲ್ಲ, ಹಾಗೇನೂ ನಡೆದಿಲ್ಲ, ಇಂದಿಗೂ  ನಾವೆಲ್ಲರೂ ಕೆಂಬಾವುಟದ ಅಡಿಯಲ್ಲೇ ಹೋರಾಡುತ್ತಿದ್ದೇವೆ ಎಂಬ ಮಾತುಗಳು ಕೇವಲ ಅಲಂಕಾರಿಕವಾಗಿ ಕಾಣುತ್ತವೆ. ಏಕೆಂದರೆ ಇದೇ ಕೆಂಬಾವುಟದಡಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ನೌಕರ ವಲಯದ ಒಂದು ವರ್ಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನದ ಮೂಲ ಉದ್ದೇಶವೇ ಶ್ರಮಿಕ ರಹಿತ ಆರ್ಥಿಕತೆಯನ್ನು ರೂಪಿಸುವುದು. ಆದರೆ ಶ್ರಮ ಮತ್ತು ಶ್ರಮ ಶಕ್ತಿಯನ್ನು ಆರ್ಥಿಕ ಬೆಳವಣಿಗೆಯ ಪ್ರಕ್ರಿಯೆಯಿಂದ ಬೇರ್ಪಡಿಸಲಾಗುವುದಿಲ್ಲ. ಈ ವಾಸ್ತವವನ್ನು ಸರ್ಕಾರಗಳು ಅರಿತಿವೆ. ಕಾರ್ಮಿಕರು ಇನ್ನೂ ಅರ್ಥಮಾಡಿಕೊಳ್ಳಬೇಕಿದೆ. ಶ್ರಮ ರಹಿತ ಆರ್ಥಿಕತೆಯನ್ನು ರೂಪಿಸಲು ಭಾರತ ಇನ್ನೂ ಸಾಕಷ್ಟು ಕ್ರಮಿಸಬೇಕಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಶ್ರಮರಹಿತ ಪ್ರಗತಿ ಸಾಧ್ಯವಾಗುವುದಿಲ್ಲ ಏಕೆಂದರೆ ಉತ್ಪಾದನೆಯಾಗಲಿ, ಸೇವಾಕ್ಷೇತ್ರವಾಗಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಶ್ರಮವನ್ನು ಆಧರಿಸಿಯೇ ಬೆಳೆಯುತ್ತವೆ.

ಈ ಶ್ರಮದ ಮಹತ್ವವನ್ನು ಕಾರ್ಮಿಕರಿಗೆ ಹೇಗೆ ತಿಳಿಸುವುದು ? ಶ್ರಮ ಮತ್ತು ಶ್ರಮ ಶಕ್ತಿಯ ನಡುವಿನ ವ್ಯತ್ಯಾಸವನ್ನು ಹೇಗೆ ಅರ್ಥ ಮಾಡಿಸುವುದು. ಶ್ರಮಿಕರ ಹಕ್ಕೊತ್ತಾಯಗಳಿಗಾಗಿ, ಸಮಾಜೋ ಆರ್ಥಿಕ ಪ್ರಗತಿಗಾಗಿ ಮತ್ತು ಉತ್ತಮ ಬದುಕಿಗಾಗಿ ಹೋರಾಡುವ ಸಂದರ್ಭದಲ್ಲೇ ಶ್ರಮ ಶಕ್ತಿಯ ಮೌಲ್ಯವನ್ನು ಉಳಿಸಿಕೊಳ್ಳಲೂ ಹೋರಾಡುವುದು ಇಂದಿನ ಆದ್ಯತೆಯಾಗಬೇಕಿದೆ. ಹಾಗೆಯೇ ಶ್ರಮ ರಹಿತ ಅರ್ಥವ್ಯವಸ್ಥೆಯಿಂದ ಭಾರತದಂತಹ ದೇಶಗಳಲ್ಲಿ ಉಂಟಾಗುವ ಅಪಾಯಗಳನ್ನು ಜನಸಾಮಾನ್ಯರಿಗೆ, ಮೂಲತಃ ಕಾರ್ಮಿಕರಿಗೆ ಮನದಟ್ಟುಮಾಡಬೇಕಿದೆ. ಭಾರತದ ಕಾರ್ಮಿಕ ಚಳುವಳಿಯಲ್ಲಿ, ಸಂಭಾವ್ಯ ಕ್ರಾಂತಿಯ ಮುಂಚೂಣಿ ದಳ ಹಣಕಾಸು ವಲಯ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿದೆ. ಬೃಹತ್ ಸಂಖ್ಯೆಯ ಸಂಘಟಿತ ಕಾರ್ಮಿಕರನ್ನು ಹೊಂದಿರುವ ಈ ವಲಯಗಳಲ್ಲಿನ ಮುಂಚೂಣಿ ದಳದ ಜವಾಬ್ದಾರಿ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ಈ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕೆಂದರೆ ನಮ್ಮ ಕಣ್ಣೋಟ ದಿಗಂತದಿಂದಾಚೆಗೆ ಚಾಚಬೇಕಾಗುತ್ತದೆ. ಏಕೆಂದರೆ ನವ ಉದಾರವಾದ ಹಾಗೂ ಹಣಕಾಸು ಬಂಡವಾಳದ ಅಧಿಪತ್ಯದಲ್ಲಿ ಅಗೋಚರ ಶ್ರಮಿಕರಿದ್ದಷ್ಟೇ, ಅಗೋಚರ ಶ್ರಮಶಕ್ತಿಯೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಪ್ರಕ್ರಿಯೆ ಚುರುಕಾಗಿದ್ದರೂ ನಾವು ತಲುಪಬೇಕಾದ ಕಣಿವೆಗಳು, ಏರಬೇಕಾದ ಪರ್ವತಗಳು, ಭೇದಿಸಬೇಕಾದ ಕೋಟೆಗಳು ಸಾಗರದಷ್ಟಿವೆ. ಒಂದು ಕಾಲಘಟ್ಟದಲ್ಲಿ “ನಾವು ಕಾರ್ಮಿಕರು” ಎಂದು ಗುರುತಿಸಿಕೊಳ್ಳಲೂ ಹಿಂಜರಿಯುತ್ತಿದ್ದ ಬೌದ್ಧಿಕ ವಲಯ ಇಂದು ಅನಿವಾರ್ಯವಾಗಿ ಗುರುತಿಸಿಕೊಳ್ಳಬೇಕಿದೆ. ಹಾಗೆಯೇ ತಮ್ಮ ಶ್ರಮ ಶಕ್ತಿಯನ್ನು ಮಾರುಕಟ್ಟೆಯಲ್ಲಿ ಬಿಕರಿ ಮಾಡದಿದ್ದರೆ ಬದುಕು ಸಾಗಿಸುವುದೇ ಅಸಾಧ್ಯ ಎನ್ನುವ ಸ್ಥಿತಿಯಲ್ಲಿರುವ ಅಸಂಖ್ಯಾತ ಶ್ರಮಿಕರನ್ನು, “ ನಾವು ಕಾರ್ಮಿಕರು ” ಎಂದು ಮುಷ್ಟಿ ಹಿಡಿದು ಹೇಳುವ ಸಂಘಟಿತ ಕಾರ್ಮಿಕ ವಲಯ ಗುರುತಿಸಬೇಕಿದೆ.

ಕಳೆದ ಕನಿಷ್ಠ ಎರಡು ದಶಕಗಳ ಸಂಘಟಿತ ಕಾರ್ಮಿಕ ಚಳುವಳಿ ಮತ್ತು ಮಾನಸಿಕ ಶ್ರಮದ ವಾರಸುದಾರರನ್ನು ಗಮನಿಸಿದರೆ ಒಂದು ವಿಶಿಷ್ಟ ಸಂಗತಿಯನ್ನು ಗುರುತಿಸಬಹುದು. ಬಹುಪಾಲು ಸಂಘಟಿತರಾಗಿರುವ ಮಾನಸಿಕ ಶ್ರಮ ವಲಯದ ಕಾರ್ಮಿಕರು ತಮ್ಮ ಹಿತವಲಯದಿಂದಾಚೆಗೆ ಏನನ್ನೂ ನೋಡುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ನಿಜ, ಎಡಪಕ್ಷಗಳ ಕಾರ್ಮಿಕ ಸಂಘಟನೆಗಳು ಮುಷ್ಕರ, ಮೆರವಣಿಗೆ, ದೇಶವ್ಯಾಪಿ ಬಂದ್ ನಡೆಸುತ್ತಿವೆ. ಇದು ಸೈದ್ಧಾಂತಿಕ ನೆಲೆಯಲ್ಲಿ ವಿಶಾಲ ತಳಹದಿಯ ಮೇಲೆ ನಡೆಯುವ ಚಟುವಟಿಕೆಗಳು. ಆದರೆ ವ್ಯಕ್ತಿಗತ ನೆಲೆಯಲ್ಲಿ ಬಹುಪಾಲು ನೌಕರರು ಈ ಚಳುವಳಿಗಳೊಡನೆ ಕೇವಲ ಔಪಚಾರಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ, ಕೆಲವೊಮ್ಮೆ ಭಾವನಾತ್ಮಕವಾಗಿ ಗುರುತಿಸಿಕೊಳ್ಳುತ್ತಾರೆ. ತಮ್ಮ ವ್ಯಕ್ತಿಗತ ಹಿತಾಸಕ್ತಿಗಳಿಂದಾಚೆಗೂ ಒಂದು ಜಗತ್ತು ತಮ್ಮತ್ತ ನೋಡುತ್ತಿದೆ ಎಂದು ಆಲೋಚಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಹಾಗಾಗಿಯೇ ಚಳುವಳಿಗಳಲ್ಲಿ ಕೆಂಬಾವುಟ, ರಾಜಕಾರಣದಲ್ಲಿ ಕೇಸರಿ ಬಾವುಟ ಸಾಮಾನ್ಯ ಸಂಗತಿಯಾಗಿದೆ. ಇದು ಸಂಘಟನಾತ್ಮಕ ವೈಫಲ್ಯವೋ, ಸೈದ್ಧಾಂತಿಕ ನ್ಯೂನತೆಯೋ ಅಥವಾ ಸಕ್ರಿಯ ಮನಸುಗಳ ನಿಷ್ಕ್ರಿಯತೆಯ ಫಲವೋ ಎನ್ನುವುದು ಈ ಲೇಖನದ ವ್ಯಾಪ್ತಿಗೆ ಹೊರತಾದದ್ದು.

ಈ ವಿದ್ಯಮಾನವನ್ನು ಬ್ಯಾಂಕಿಂಗ್, ವಿಮೆ, ಸಾರ್ವಜನಿಕ ಉದ್ದಿಮೆಗಳಲ್ಲಿ ಕಾಣಬಹುದು. ಕಾರ್ಮಿಕ ಸಂಘಟನೆಯ ಪ್ರತಿಯೊಬ್ಬ ಸದಸ್ಯನೂ ತಾನು ಪ್ರತಿನಿಧಿಸುವ ಸಂಘಟನೆಯ ಸೈದ್ಧಾಂತಿಕ ನೆಲೆಗೆ ಬದ್ಧನಾಗಿರಬೇಕು ಎಂದು ಅಪೇಕ್ಷಿಸುವುದು ಬಹುಶಃ ಅತಿಶಯ ಎನಿಸಬಹುದು. ಆದರೆ ಈ ಸೈದ್ಧಾಂತಿಕ ನೆಲೆಯ ಹಿಂದೆ ಇರುವ ಆಶಯಗಳನ್ನಾದರೂ ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧತೆ ಸಂಘಟಿತ ಕಾರ್ಮಿಕರಲ್ಲಿ ಇರಬೇಕಾಗುತ್ತದೆ. ಹೀಗೆ ಅರ್ಥ ಮಾಡಿಕೊಂಡಲ್ಲಿ ತಮ್ಮ ಚೌಕದ ಹೊರಗಿರುವ ಒಂದು ಶ್ರಮಿಕ ವಲಯ ಯಾವ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತಾವಿರುವ ಹಿತವಲಯದ ಪರಿಸರವನ್ನು ಸೃಷ್ಟಿಸಲು ಈ ದೇಶದ ಕಾರ್ಮಿಕ ಚಳುವಳಿಗಳು ಸಾಕಷ್ಟು ತ್ಯಾಗ ಬಲಿದಾನಗಳನ್ನು ಕಂಡಿವೆ ಎನ್ನುವ ಪರಿವೆ ಇದ್ದರೂ ಇದನ್ನು ಗ್ರಹಿಸುವುದು ಕಷ್ಟವಾಗುವುದಿಲ್ಲ. ಆದರೆ ಬಹುಪಾಲು ಮೇಲು ಮಧ್ಯಮವರ್ಗದ ಕಾರ್ಮಿಕರಿಗೆ ತಮ್ಮ ಹೆಜ್ಜೆ ಗುರುತುಗಳು ಮರೆತುಹೋಗಿರುತ್ತದೆ.

ವಿಶಾಲ ನೆಲೆಯಲ್ಲಿ ನೋಡಿದಾಗ ಇಂದಿನ ಕಾರ್ಮಿಕ ವಲಯ ಮೂರು  ಹಂತಗಳಲ್ಲಿ ವಿಂಗಡನೆಯಾಗಿದೆ. ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದದ ದೇಶಗಳಂತೆ ಕಾರ್ಮಿಕರಲ್ಲೂ ಸಹ ವಿಭಜನೆಯಾಗಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಮೂರೂ ವಲಯಗಳಲ್ಲಿರುವ ಕಾರ್ಮಿಕರು ಎಂದಿಗೂ ಒಂದಾಗದ ರೀತಿಯಲ್ಲಿ ಈ ದೇಶದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ತನ್ನದೇ ಆದ ವಿಶಿಷ್ಟ ಮಾದರಿಗಳನ್ನು ಅನುಸರಿಸುತ್ತಿದೆ. ಹಾಗಾಗಿಯೇ ಡಿಜಿಟಲ್ ಯುಗದಲ್ಲಿ ಅಗೋಚರ ಶ್ರಮ ಮತ್ತು  ಶ್ರಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರಮಶಕ್ತಿಯನ್ನು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಖರೀದಿಸುವ ಹಣಕಾಸು ಬಂಡವಾಳ ವ್ಯವಸ್ಥೆ ಶ್ರಮವನ್ನೂ ಖರೀದಿಸಲು ಸಶಕ್ತವಾಗಿದೆ. ಆದರೆ ಶ್ರಮಿಕರು ನಿರ್ಗತಿಕರಾಗುತ್ತಿದ್ದಾರೆ. ಬ್ಯಾಂಕಿಂಗ್ ಮತ್ತು ವಿಮಾ ವಲಯದಲ್ಲೂ ಈ ಬೆಳವಣಿಗೆಗಳನ್ನು ಗಮನಿಸಬಹುದು. ಹಣಕಾಸು ವಲಯದಿಂದ ಹಿಡಿದು ಉತ್ಪಾದನಾ ವಲಯದವರೆಗೆ ನೋಡಿದಾಗಲೂ , ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯ ಸಂದರ್ಭದಲ್ಲೂ ಶ್ರಮದ ಬಳಕೆ ಕಡಿಮೆಯಾಗಿಲ್ಲ. ಆದರೆ ಶ್ರಮಿಕರ ಸಂಖ್ಯೆ ಕಡಿಮೆಯಾಗಿದೆ. ಅಂದರೆ ಅಳಿದುಳಿದ ಕಾರ್ಮಿಕರ ಶ್ರಮಶಕ್ತಿಯನ್ನು ಹೆಚ್ಚಿನ ಖರ್ಚಿಲ್ಲದೆ ಬಂಡವಾಳ ವ್ಯವಸ್ಥೆ ಬಳಸಿಕೊಳ್ಳುತ್ತಿದೆ.

ಈ ವ್ಯತ್ಯಾಸವನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಿದೆ. ಸಾರ್ವಜನಿಕ ಉದ್ದಿಮೆಗಳ ಮತ್ತು ಬ್ಯಾಂಕ್ ಹಾಗೂ ವಿಮಾ ವಲಯದ ಕಾರ್ಮಿಕರಲ್ಲಿ ಈ ಕಾಳಜಿ ಮತ್ತು ಗ್ರಹಿಕೆ ಮೂಡಿದಲ್ಲಿ, ತಮ್ಮ ಬೇಲಿಯಿಂದಾಚೆಗಿರುವ ಬೃಹತ್ ಶ್ರಮಿಕ ಸಮೂಹವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೋವಿದ್ 19 ಈ ಒಂದು ಸುಸಂದರ್ಭವನ್ನು ನಮಗೆ ಒದಗಿಸಿದೆ. ನಿಮ್ಮ ಜೀವ ರಕ್ಷಣೆಗಾಗಿ ಮನೆಯಲ್ಲೇ ಇರಿ ಎಂಬ ಘೋಷಣೆಗೆ ಬದ್ಧರಾಗಿ ಮನೆಯಲ್ಲೇ ಉಳಿದಿರುವ ಕಾರ್ಮಿಕ ವಲಯ, ಇರಲು ಮನೆಯೇ ಇಲ್ಲದ ಲಕ್ಷಾಂತರ ವಲಸೆ ಕಾರ್ಮಿಕರ ಬವಣೆಯನ್ನು ದಿನನಿತ್ಯ ನೋಡುವಂತಾಗಿದೆ. ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕತ್ವ ವಹಿಸಬೇಕಾದ ಅಭಿವೃದ್ಧಿ ಹೊಂದಿದ ಕಾರ್ಮಿಕ ವಲಯ ಈ ತೃತೀಯ ವಿಶ್ವದ ಕಡೆ ಒಮ್ಮೆ ಹೊರಳಿ ನೋಡಬೇಕಿದೆ. ನಮ್ಮ ಹಿತವಲಯವನ್ನು ಸೃಷ್ಟಿಸಿರುವ ಕೆಂಬಾವುಟವೇ ಅಲ್ಲಿಯೂ ಒಂದು ಹಿತವಲಯ ಸೃಷ್ಟಿಸಲು ಸಿದ್ಧವಾಗಿದೆ ಆದರೆ ನಾವು ಆ ಬಾವುಟವನ್ನು ಎತ್ತಿಹಿಡಿಯಲು ಹೊರಹೋಗುತ್ತೇವೆಯೇ ? ಈ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ.

ಅಸಂಘಟಿತ ವಲಯದ ಕಾರ್ಮಿಕರನ್ನು ವ್ಯವಸ್ಥಿತವಾಗಿ ಸಂಘಟಿಸಲು ಶ್ರಮಿಸುತ್ತಿರುವ ಕಾರ್ಮಿಕ ಸಂಘಟನೆಗಳು ಹೊಸ ವಿಧಾನಗಳನ್ನು ಅನುಸರಿಸುತ್ತಿವೆ. ಕೋವಿದ್ 19 ಸಂದರ್ಭದಲ್ಲಿ ಈ ವಲಯದ ದುರ್ಭಾಗ್ಯ ನೌಕರರಿಗೆ ಕೂಲಿ, ಸೂರು ಒದಗಿಸಲು  ಶ್ರಮಿಸುತ್ತಿವೆ. ಆದರೆ ನಮ್ಮ ಸುತ್ತಲಿನ ಪರಿಸರದಲ್ಲಿ ಎಷ್ಟು ವಲಸೆ ಕಾರ್ಮಿಕರಿದ್ದಾರೆ ಎಂಬ ಪರಿವೆಯೇ ನಮಗೆ ಇರುವುದಿಲ್ಲ. ಈ ವಲಸೆ ಕಾರ್ಮಿಕರ ನೆಲಮೂಲ ಮತ್ತು ಸಮಾಜೋ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲೇ ವರ್ಷಗಳು ಬೇಕಾಗಬಹುದು. ಏಕೆಂದರೆ ಬಂಡವಾಳ ಎಲ್ಲಿಗೆ ಹರಿದರೆ ವಲಸೆ ಕಾರ್ಮಿಕರು ಅತ್ತ ಹೊರಳುತ್ತಾರೆ. ಅವರ ಶ್ರಮವೂ ಮಾರುಕಟ್ಟೆಯೊಡನೆಯೇ ಪಯಣಿಸುತ್ತದೆ. ಕಟ್ಟಡ ಕಾರ್ಮಿಕರೇ ಇರಲಿ, ಸಾರ್ವಜನಿಕ ಕಾಮಗಾರಿಗಳೇ ಇರಲಿ, ಈ ಶ್ರಮಿಕರ ಶ್ರಮ ಶಕ್ತಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಕಾರ್ಪೋರೇಟ್ ವಲಯ ತನ್ನದೇ ಆದ ಕಾನೂನು ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತದೆ. ನವ ಉದಾರವಾದಿ ಆರ್ಥಿಕ ನೀತಿಗಳು ಈ                         “ ದೇಶದೊಳಗಿನ ದೇಶಕ್ಕೆ ” ಸಮ್ಮತಿ ನೀಡುತ್ತವೆ.  “ ಸಂವಿಧಾನದೊಳಗಿನ ಸಂವಿಧಾನಕ್ಕೂ ” ಅವಕಾಶ ನೀಡುತ್ತವೆ.  ಈ ಭದ್ರಕೋಟೆಯನ್ನು ಭೇದಿಸಿ ಅಗೋಚರ ಕಾರ್ಮಿಕರನ್ನು ಹೊರತರಲು  ಸಾಧ್ಯವೇ ? ಈ ಪ್ರಶ್ನೆಗೂ ನಾವು ಉತ್ತರ ಶೋಧಿಸಬೇಕಿದೆ.

ಡಿಜಿಟಲ್ ಕ್ರಾಂತಿ ಸಮಸ್ತ ಶ್ರಮಿಕ ವರ್ಗದ ಸ್ಥಿತಿಗತಿಗಳನ್ನು ಬದಲಿಸಿಲ್ಲ. ಆದರೆ ಒಂದು ಶ್ರಮಿಕ ವರ್ಗದ ಮನೋಭಾವವನ್ನು ಬದಲಿಸಿಬಿಟ್ಟಿದೆ. ಮಾನಸಿಕ ಶ್ರಮ ವಹಿಸುವ ಕಾರ್ಮಿಕರು ಹೊರಜಗತ್ತಿನ ಬೌದ್ಧಿಕ ವಲಯದಂತೆ ತಮ್ಮದೇ ಆದ ಭದ್ರಕೋಟೆಗಳನ್ನು ನಿರ್ಮಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಮನೋಭಾವವನ್ನು ಹೋಗಲಾಡಿಸದೆ ನಾವು ಅಗೋಚರ ಶ್ರಮಿಕರ ಬಳಿ ಹೋಗಲು ಸಾಧ್ಯವಿಲ್ಲ. ಅಗೋಚರ ಶ್ರಮವನ್ನು ಗುರುತಿಸಲೂ ಸಾಧ್ಯವಿಲ್ಲ. ಏಕೆ ಸಾಧ್ಯವಿಲ್ಲ ? ಕಾರಣ ಸ್ಪಷ್ಟ. ತಮಗೇ ಅರಿವಿಲ್ಲದೆ ಈ ವರ್ಗದ ನೌಕರರು ತಮ್ಮ ಶ್ರಮಶಕ್ತಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಜೂರಿ ಇಲ್ಲದೆಯೇ ಒದಗಿಸುತ್ತಿದ್ದಾರೆ. ಕೆಲವೊಮ್ಮೆ  ಮೂವರು ಶ್ರಮಿಕರ ಶ್ರಮಶಕ್ತಿಯನ್ನು ಒಬ್ಬರಿಂದಲೇ ಪಡೆದರೂ ಅರ್ಥವಾಗದೆ ಮೂಕ ಪಶುಗಳಂತೆ ದುಡಿಯುತ್ತಿರುವುದೂ ಉಂಟು. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಬ್ಯಾಂಕ್ ನೌಕರರು ಇದನ್ನು ಅನುಭವಿಸಿದ್ದಾರೆ. (ಕೆಲಸ ಮಾಡಿದವರು ಕುಳಿತು ಯೋಚಿಸಿದರೆ ತಿಳಿಯುತ್ತದೆ).

ಡಿಜಿಟಲ್ ಕ್ರಾಂತಿ ಮತ್ತು ಸ್ಮಾರ್ಟ್‍ಫೋನ್/ಆಂಡ್ರಾಯ್ಡ್ ಯುಗ ಸಂಘಟಿತ, ಅಭಿವೃದ್ಧಿ ಹೊಂದಿರುವ ಕಾರ್ಮಿಕ ವಲಯಕ್ಕೆ ಹೊಸ ಭೂಮಿಕೆಗಳನ್ನು, ವೇದಿಕೆಗಳನ್ನು ಒದಗಿಸಿದೆ. ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮಾಡುವ ಅವಕಾಶವನ್ನು ಕೋವಿದ್ 19 ಒದಗಿಸಿದೆ. ಒಂದು ವಿಶ್ವವ್ಯಾಪಿ ವಿನಾಶಕಾರಿ ಪಿಡುಗು ಒಳ್ಳೆಯದನ್ನೂ ಮಾಡುತ್ತದೆ ಎಂದು  ಕಾರ್ಪೋರೇಟ್ ವಲಯ ಭಾವಿಸುವಷ್ಟು ಮಟ್ಟಿಗೆ ನಾವು ಬೌದ್ಧಿಕವಾಗಿ ಕುಸಿದುಹೋಗಿದ್ದೇವೆ. ಇದು ಬೇರೆ ವಿಚಾರ ಇಲ್ಲಿ ಚರ್ಚೆ ಮಾಡುವುದು ಬೇಕಿಲ್ಲ.  ಆದರೆ ಒಂದು ಅಂಶವನ್ನು ಗಮನಿಸಬೇಕು. ಮೆಟ್ರೋ, ನಗರ ಸಾರಿಗೆ, ಸ್ವಂತ ವಾಹನಗಳಲ್ಲಿ ಸಾರ್ವಜನಿಕರ ನಡುವೆ ಓಡಾಡುತ್ತಿದ್ದಾಗಲೇ ಆಚೆಬದಿಯಲ್ಲಿ ಶಿಥಿಲವಾಗಿರುವ ಜೀವಗಳನ್ನು ನೋಡದಿದ್ದ ಒಂದು ವರ್ಗ ಮನೆಯಲ್ಲೇ ಕುಳಿತುಬಿಟ್ಟರೆ ಇನ್ನೆಷ್ಟು ನಿಷ್ಕರುಣಿಗಳಾಗಬಹುದು ? ಇದು ಯೋಚಿಸಬೇಕಾದ ವಿಚಾರ. ಇದು ಸಮಾಜದ ಒಳಿತು ಬಯಸುವ ಬೌದ್ಧಿಕ ವಲಯವನ್ನು ಕಾಡಬೇಕಾದ ವಿಚಾರ.

ಸ್ಮಾರ್ಟ್‍ಫೋನ್ ಯುಗದಲ್ಲಿ ಕಾರ್ಮಿಕ ವರ್ಗದ ಹಿತವಲಯಕ್ಕೆ ದೊರೆತಿರುವ ಭೂಮಿಕೆ ಮತ್ತು ವೇದಿಕೆ ಅಸಂಘಟಿತ ವಲಯದ ಕಾರ್ಮಿಕರಿಗೆ, ಅಗೋಚರ ಶ್ರಮಿಕರಿಗೆ ದೊರೆತಿದೆಯೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಏಕೆಂದರೆ ಕೊರೋನಾ ಸಂದರ್ಭದಲ್ಲಿ ತಮ್ಮ ದುಡಿಮೆಯ ಭೂಮಿಕೆಯನ್ನು ತೊರೆದು ತವರಿನತ್ತ ಮುಖ ಮಾಡಿರುವ ಲಕ್ಷಾಂತರ ವಲಸೆ ಕಾರ್ಮಿಕರು ಪುನಃ ತಮ್ಮ ಶ್ರಮಶಕ್ತಿಯನ್ನು ಮಾರಾಟ ಮಾಡಲು ಅವಕಾಶ ಪಡೆಯುತ್ತಾರೋ ಇಲ್ಲವೋ ಎನ್ನುವುದು ಸದ್ಯಕ್ಕಂತೂ ಇತ್ಯರ್ಥವಾಗುವುದಿಲ್ಲ. ಈಗಾಗಲೇ ಸರ್ಕಾರದ ಔದಾರ್ಯವನ್ನೇ ಅವಲಂಬಿಸಿ ಬದುಕಬೇಕಾದ ಸ್ಥಿತಿ ತಲುಪಿದ್ದಾರೆ. “ ನವ ಭಾರತದಲ್ಲಿ ಎಲ್ಲರ ಬಳಿಯೂ ಮೊಬೈಲ್ ಫೋನ್ ಇದೆ ” ಎನ್ನುವ ಅಲ್ಲಾದೀನನ ಅದ್ಭುತ ದ್ವೀಪದಿಂದ ಹೊರಬಂದು ನೋಡಿದಾಗ ಈ ಕೋಟ್ಯಂತರ ಶ್ರಮಿಕರ ಬಳಿ ಸಂವಹನ ಮಾಧ್ಯಮವೇ ಇಲ್ಲದಿರುವುದು ಕಣ್ಣಿಗೆ ರಾಚುತ್ತದೆ.

ದೇಶದ ಉತ್ಪಾದನಾ ಪ್ರಕ್ರಿಯೆ ಮೇಲೆ ಹಾಗೂ ಉತ್ಪಾದನೆಯ ಮೇಲೆ ಸ್ವಾಧೀನ ಸಾಧಿಸಿ ಸಂಪತ್ತಿನ ಕ್ರೋಢೀಕರಣದತ್ತ ಮುನ್ನಡೆದಿರುವ ಕಾರ್ಪೋರೇಟ್ ವಲಯ ಸರ್ಕಾರದ ಆರ್ಥಿಕ ಪುನಶ್ಚೇತನದ ಫಲಾನುಭವಿಯಾಗುತ್ತದೆ. ಈ ಸಂಪತ್ತನ್ನು ಸೃಷ್ಟಿಸುವ, ಉತ್ಪಾದಕ ಶಕ್ತಿಗಳು ಸರ್ಕಾರದ ಔದಾರ್ಯದ ಫಲಾನುಭವಿಗಳಾಗುತ್ತವೆ. ಇದನ್ನು ನಾವು ಸಮಾಜವಾದದ ಒಂದು ಆಯಾಮ ಎಂದು ಭಾವಿಸಿದರೆ ತಪ್ಪಾಗುತ್ತದೆ. ಇದು ಸಮ ಸಮಾಜದ ನಿರ್ಮಾಣದತ್ತ ಸಾಗುವ ಹಾದಿಗಳಲ್ಲಿ ನಿರ್ಮಿಸಿರುವ ತಡೆಗೋಡೆಗಳು ಎಂದೇ ಭಾವಿಸಬೇಕಾಗುತ್ತದೆ. ಈ ತಡೆಗೋಡೆಗಳನ್ನೇ ಆಡಳಿತ ಪರಿಭಾಷೆಯಲ್ಲಿ ಜನಪರ ಯೋಜನೆಗಳು ಎನ್ನಲಾಗುತ್ತದೆ. ಶ್ರಮಜೀವಿಗಳು ಪ್ರಕೃತಿ ಒದಗಿಸುವ ಸಂಪನ್ಮೂಲಗಳನ್ನು ಬಳಸಿ ಉತ್ಪಾದಿಸುವ ಸಂಪತ್ತಿನ ಸಮಾನ ವಿತರಣೆಯಾದರೆ ಈ ತಡೆಗೋಡೆಗಳಿಲ್ಲದ ಸುಂದರ ಸಮಾಜವನ್ನು ನಿರ್ಮಿಸಬಹುದಲ್ಲವೇ ? ಇದು ನಾವು ಮೇ ದಿನದ ದಿನ ಎತ್ತಿಹಿಡಿಯುವ ಕೆಂಬಾವುಟದ ಆಶಯ.

ಈ ಆಶಯವನ್ನು ಅರ್ಥಮಾಡಿಕೊಳ್ಳಬೇಕಾದವರು ಕಾರ್ಮಿಕ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ಹಿತವಲಯದ ಶ್ರಮಿಕ ವರ್ಗ. ಹಾಗಾದಲ್ಲಿ ಮಾತ್ರ ಆಚೆ ಬದಿಯಲ್ಲಿರುವ ಅಗೋಚರ ಶ್ರಮಿಕರನ್ನು ತಲುಪಲು ಸಾಧ್ಯ. ಅವರಲ್ಲಿರುವ ಶ್ರಮ ಶಕ್ತಿಯ ವಾಸ್ತವಿಕ ಮೌಲ್ಯವನ್ನು ಅವರೇ ಅರ್ಥಮಾಡಿಕೊಂಡರೆ ಮಾತ್ರ ಅದೇ ಶ್ರಮಶಕ್ತಿಯ ಮಾರುಕಟ್ಟೆ ಮೌಲ್ಯವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಹಾಗಾದಲ್ಲಿ ಮಾತ್ರ ಅವರ ಶ್ರಮ ಉಚಿತವಾಗಿ ಬಿಕರಿಯಾಗುವುದನ್ನು ತಪ್ಪಿಸಬಹುದು. ಈ ಅರ್ಥ ಮಾಡಿಸುವ ಹೊಣೆ ಸ್ಮಾರ್ಟ್‍ಫೋನ್ ಯುಗದ ಫಲಾನುಭವಿಗಳ ಮೇಲಿದೆ. ನಾವು  ಕುಳಿತಲ್ಲೇ ವಿಚಾರ ಸಂಕಿರಣ ನಡೆಸುತ್ತಿದ್ದೇವೆ, ಸಭೆಗಳನ್ನು ನಡೆಸುತ್ತಿದ್ದೇವೆ, ಭಾಷಣಗಳನ್ನು ಏರ್ಪಡಿಸುತ್ತಿದ್ದೇವೆ. ಆದರೆ ಈ ಬೌದ್ಧಿಕ ಕಸರತ್ತಿನ ಮುಂದುವರೆದ ಭಾಗಕ್ಕೆ ನಮಗೆ ಡಿಜಿಟಲ್ ಪ್ರಪಂಚ ನೆರವಾಗುವುದಿಲ್ಲ. ಏಕೆಂದರೆ ನಮ್ಮ ಮುನ್ನಡೆಯ ಹಾದಿ ದುರ್ಗಮವಾಗಿದೆ. ತಲುಪಬೇಕಾದ ಗುರಿ ಬಹುದೂರ ಇದೆ.

2020ರ ಮೇ ದಿನ ಈ ನಿಟ್ಟಿನಲ್ಲಿ ಮಹತ್ವ ಪಡೆಯುತ್ತದೆ. ಇದು ಹೋರಾಟ, ಸಂಘರ್ಷಗಳ ಪರ್ವಕಾಲ. ಸಂಧಿಕಾಲವೂ ಹೌದು. ಮಲಗುಂಡಿಯಲ್ಲಿ ಉಸಿರುಗಟ್ಟಿ ಸಾಯುವ ಪೌರಕಾರ್ಮಿಕನಿಂದ ಹಿಡಿದು 50ನೆಯ ಮೇಲಂತಸ್ತಿನಲ್ಲಿ ಶೀತವಲಯದಲ್ಲಿ ಕುಳಿತು ಕೀಲಿಮಣೆಯನ್ನು ನಿರ್ವಹಿಸುವ ಕಾರ್ಮಿಕನವರೆಗೆ ಶ್ರಮ ಮತ್ತು ಶ್ರಮ ಶಕ್ತಿಯ ನಾಡಿ ವ್ಯಾಪಿಸುತ್ತದೆ. ನಾವು ಅಲ್ಲಿಗೆ ಸೇರಿದವರಲ್ಲ ಎಂದು ಭಾವಿಸುವವರು ತಮಗೇ ಅರಿವಿಲ್ಲದೆ ಅವಶೇಷಗಳಡಿ ಸಿಲುಕುವ ಪರಿಸ್ಥಿತಿಯೂ ಎದುರಾಗುತ್ತದೆ. ಜಾತಿ, ಮತಧರ್ಮ, ದೇಶ, ಭಾಷೆ ಮತ್ತು  ಪ್ರಾದೇಶಿಕ ಅಸ್ಮಿತೆಗಳಿಂದಾಚೆಗೆ ಒಂದು ಹೊಸ ಜಗತ್ತನ್ನು ಸೃಷ್ಟಿಸುವುದೇ ಆದರೆ ಅದು ಸುಂದರವಾದ ಶ್ರಮಿಕರ ಜಗತ್ತು ಮಾತ್ರವೇ. ಈ ಜಗತ್ತನ್ನು ರೂಪಿಸಲು 2020ರ ಶ್ರಮಿಕರ ದಿನಾಚರಣೆ ನಾಂದಿ ಹಾಡಲಿ.

‍ಲೇಖಕರು avadhi

May 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: