ಕಂಡೆವು ಆ ದಿನ ರಿಷಿ ಕಪೂರ್ ನನ್ನು..

ಬಾಲಿವುಡ್  ತಾರೆ  ರಿಷಿ ಕಪೂರ್ ರ ಭೇಟಿ: ಹೀಗೊಂದು ನೆನಪು.
ಶ್ರೀನಿವಾಸ  ಜೋಕಟ್ಟೆ, ಮುಂಬಯಿ.

ಸುಮಾರು ಮೂರೂವರೆ ವರ್ಷಗಳ  ಹಿಂದಿನ ಸಂಗತಿ. (2016). ಬೆಂಗಳೂರಿನಿಂದ ಖ್ಯಾತ ಪತ್ರಕರ್ತ, ಈಗಿನ ‘ಕನ್ನಡ ಪ್ರಭ’ ಪುರವಣಿಗಳ ಸಂಪಾದಕ (ಆಗ ಅವರು ಉದಯವಾಣಿ ಪುರವಣಿಗಳ ಸಂಪಾದಕರು ), 1988 ರಿಂದ ನನ್ನ ಗೆಳೆಯರಾಗಿರುವ, ಸಾಹಿತ್ಯ ಅಕಾಡೆಮಿ 1988 ರಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಕಥಾಕಮ್ಮಟದ  ನನ್ನ ರೂಂಮೇಟ್ ಆಗಿದ್ದ ಜೋಗಿ ಅವರು ಪರಿವಾರ ಸಹಿತ ಮುಂಬೈ ಪ್ರವಾಸಕ್ಕೆ ಬಂದಿದ್ದರು.

ಆ ಬಗ್ಗೆ ಮೊದಲೇ ನನಗೆ ತಿಳಿಸಿದ್ದರು. ನಾವು ಒಂದು ದಿನ ಅಂಧೇರಿಯಲ್ಲಿ ಮುಖಾಮುಖಿಯಾಗಿ ಅಲ್ಲಿಂದ  ಹಿರಿಯ ಚಿಂತಕ ಅಹೋರಾತ್ರ (ನಟೇಶ ಪೋಲೆಪಲ್ಲಿ) ಅವರ ಕಾಂದಿವಲಿಯ ಮನೆಗೆ  ಭೇಟಿ ನೀಡುವುದಾಗಿ  ಜೋಗಿಯವರು ಫೋನ್ ನಲ್ಲಿ ತಿಳಿಸಿದ್ದರು. ಹಾಗಾಗಿ ನಾನು 2 ದಿನ ರಜೆಯೇ ಮಾಡಿದ್ದೆ. ನಾನು ಖಂಡಿತಾ ರಜೆ ಮಾಡಲೇ ಬೇಕಿತ್ತು. ಅದಕ್ಕೂ ಒಂದು ಬಲವಾದ ಕಾರಣವಿದೆ. ಜೋಗಿಯವರು ತಮ್ಮ “B ಕ್ಯಾಪಿಟಲ್” ಕೃತಿಯಲ್ಲಿ “ಜೆ.ಸಿ.ರಸ್ತೆಯ ಪ್ರೇಮ ಕತೆ ” ಅನ್ನುವ ಲೇಖನದಲ್ಲಿ ಹೀಗೆ ಹೇಳಿಕೊಂಡಿದ್ದಾರೆ-

“ನಾನೊಮ್ಮೆ ಬಳ್ಳಾರಿಯ ಸಣ್ಣ ಕಥಾ ಕಮ್ಮಟಕ್ಕೆ ಹೋಗಿದ್ದಾಗ ಅಲ್ಲಿ ಶ್ರೀನಿವಾಸ ಜೋಕಟ್ಟೆ ಪರಿಚಯವಾಗಿದ್ದರು. ಅವರು ಆಗ ಮುಂಬೈಯಲ್ಲಿದ್ದರು. ಮುಂಬೈಗೆ ಹೋಗುವ ಎಲ್ಲಾ ಸಾಹಿತಿಗಳಿಗೆ ಮುಂಬಯಿ ತೋರಿಸುವ ಕೆಲಸವನ್ನು ಅವರು ಪ್ರೀತಿಯಿಂದ ಮಾಡುತ್ತಿದ್ದರು. ಈಗ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಕೆಲಸ ಮಾಡುವ ಅವರು  ಕನ್ನಡದ ಸಾಹಿತಿಗಳು ಬರುತ್ತಾರೆ ಎಂದು ಗೊತ್ತಾದರೆ ಸಾಕು, ರಜೆ ಹಾಕಿ ಅವರ ಜೊತೆ ಓಡಾಡುತ್ತಾರೆ.” ಹೀಗೆ ಬರೆದಿದ್ದರಿಂದ ನಾನು ರಜೆ ಮಾಡುವುದು ನನ್ನ ಕರ್ತವ್ಯವಾಗಿತ್ತು .

ಅಂತೆಯೇ ನಾವು ಅಂಧೇರಿಯಲ್ಲಿ ಒಟ್ಟಾಗಿ  ಲೋಕಲ್ ಟ್ರೇನ್ ನಲ್ಲಿ‌ ಕಾಂದಿವಲಿಗೆ ಹೋಗಿ  ಅಲ್ಲಿಂದ ಚಿಂತಕ ಅಹೋರಾತ್ರರ ಮನೆಗೆ ಹೋದೆವು. ಮನೆ ದಾರಿಯನ್ನು ಜೋಗಿಯವರೇ ಕಂಡು ಹುಡುಕಿದ್ದರು ಗೂಗಲ್ ಮ್ಯಾಪ್ ನಲ್ಲಿ.

ಅಹೋರಾತ್ರರ ಮನೆಯಲ್ಲಿ ತಿಂಡಿ, ಭೋಜನದ ಜೊತೆ ದಿನವಿಡೀ ಚರ್ಚೆಯ ನಂತರ ಸಂಜೆ ಬಾಂದ್ರಾ ಲಿಂಕ್ ರೋಡ್ ನ ಫ್ಯಾಶನ್ ಬಜಾರ್ ಕೂಡಾ ಸುತ್ತಾಡಿದ್ದೆವು. ಮರುದಿನ  ನಾವು ಚೆಂಬೂರುನಲ್ಲಿರುವ ಪ್ರಸಿದ್ದ ಕತೆಗಾರ ಡಾ. ವ್ಯಾಸರಾವ್  ನಿಂಜೂರ್ ರ ಮನೆಗೆ ಹೋಗಿ ಬರುವುದೆಂದು ನಿರ್ಧರಿಸಿದೆವು. “ಅಲ್ಲಿಂದ ಬರುವಾಗ ಬಾಲಿವುಡ್ ನ ಹೆಸರಾಂತ ಆರ್. ಕೆ.ಸ್ಟುಡಿಯೋಗೆ ಭೇಟಿ ನೀಡಿ ಬರೋಣ. ನಾನು ಅದಕ್ಕೆ ವ್ಯವಸ್ಥೆ ಮಾಡುವೆ ” ಅಂದರು ಅಹೋರಾತ್ರ.

ನಿಂಜೂರು ಅವರ ಭೇಟಿ ಮತ್ತು ಆರ್. ಕೆ. ಸ್ಟುಡಿಯೋ ವೀಕ್ಷಣೆಯ ಅವಕಾಶ ಒಂದೇ ದಿನ‌ ದೊರೆಯುವ ಭಾಗ್ಯ ಕ್ಕೆ ಸಹಜವಾಗಿಯೇ ನಾನು  ಪುಳಕಗೊಂಡಿದ್ದೆ.

ಅಂತೆಯೇ ಮರುದಿನ ಬೆಳಿಗ್ಗೆ ಅಂಧೇರಿಯ ಎಂ ಐ ಡಿ ಸಿ ಯಲ್ಲಿನ ಹೊಟೇಲೊಂದರಲ್ಲಿ ರೂಮ್  ಮಾಡಿದ್ದ ಜೋಗಿಯವರಲ್ಲಿಗೆ ಹೋಗಿ ಅಲ್ಲಿಂದ ಅಹೋರಾತ್ರರ ಕಾರಲ್ಲಿ‌ ಚೆಂಬೂರು ಕಡೆ ಹೊರಟೆವು. ನಿಂಜೂರ್ ರ ಮನೆಯಿಂದ ಹೊರಟವರು ಸಂಜೆ ಸುಮಾರು ಐದರ  ಹೊತ್ತಿಗೆ ಆರ್ ಕೆ ಸ್ಟುಡಿಯೋ ಗೆ ಪ್ರವೇಶಿಸಿದೆವು . ಅಹೋರಾತ್ರರು ಅದಕ್ಕೆ ವ್ಯವಸ್ಥೆ ಮಾಡಿದ್ದರು .

ಬಾಲಿವುಡ್ ಶೋ ಮ್ಯಾನ್ ರಾಜ್ ಕಪೂರ್ ರ ಆರ್. ಕೆ. ಸ್ಟುಡಿಯೋ ಅಂದರೆ ಅದನ್ನು ಮರೆಯಲು ಸಾಧ್ಯವೇ .ಒಳಗಡೆ ಎಲ್ಲ ಸುತ್ತಾಡುವಾಗ ಆರ್ ಕೆ. ಬ್ಯಾನರ್ ನ  ಪ್ರಮುಖ ಫಿಲಂಗಳ  ಪ್ರಶಸ್ತಿ, ದಾಖಲೆ, ಕಾಸ್ಟ್ಯೂಮ್ ಗಳು ಸ್ಮರಣಿಕೆಗಳು, ಫೋಟೋಗಳು… ಕಂಡಾಗ ಆ ಕ್ಷಣಕ್ಕೆ  ಧನ್ಯರಾದೆವು ಅನಿಸಿತು.

ಅಲ್ಲಿ ರಣಧೀರ್ ಕಪೂರ್ ಮತ್ತು ರಿಷಿ ಕಪೂರ್ ಬೇರೆಬೇರೆ ಕೊಠಡಿಗಳಲ್ಲಿ ಇದ್ದರು. ರಿಷಿ ಕಪೂರ್ ಬಳಿ ಮೊದಲಿಗೆ  ಅಹೋರಾತ್ರ, ನಂತರ ಜೋಗಿಯವರು  ಮಾತು ಆರಂಭಿಸಿದರು. ಏನು ಪ್ರಶ್ನೆ ಕೇಳುವುದೆಂದು ನನಗೆ ಆ ಕ್ಷಣಕ್ಕೆ ಹೊಳೆಯಲಿಲ್ಲ. ರಿಷಿ ಕಪೂರ್ ಅವರಂತಹ ಮಹಾನ್ ನಟನ ಎದುರು ನಾವು ಕೂತಿದ್ದೇವೆ ಎನ್ನುವುದೇ ಖುಷಿಯಾಗಿತ್ತು ಮನಸ್ಸು. ಆವಾಗ  ರಿಷಿ ಕಪೂರ್  ರು ಕನ್ನಡ ಚಿತ್ರ ರಂಗ, ಪುಟ್ಟಣ್ಣ ಕಣಗಾಲ್ ಫಿಲ್ಮ್ ಗಳ ಕುರಿತಂತೆ ತಮ್ಮ ಆರಂಭದ ದಿನಗಳ  ಅನಿಸಿಕೆಗಳನ್ನು ತೆರೆದಿಟ್ಟರು. ನಾನಂತೂ ಆರ್ ಕೆ ಸ್ಟುಡಿಯೋ ದ ಹೋಳಿಹಬ್ಬದ  ಆಚರಣೆಯ ಕುರಿತಂತೆ ಮಾತಾಡಿದೆ. ಯಾಕೆಂದರೆ ಬಾಲಿವುಡ್ ನಲ್ಲಿ ಆರ್ ಕೆ.  ಸ್ಟುಡಿಯೋದ ಹೋಳಿ ಹಬ್ಬಕ್ಕೆ ವಿಶೇಷ ಸ್ಥಾನಮಾನ. ಆದರೆ ಕಳೆದ ದಶಕದಲ್ಲಿ ಆರ್ ಕೆ ಸ್ಟುಡಿಯೋ ದಲ್ಲಿ ಅದ್ದೂರಿಯಾಗಿ ಹೋಳಿ ಆಚರಣೆ ನಿಂತು ಹೋಗಿದ್ದೂ ಇದೆ..

ಈ  ಎಲ್ಲ ನೆನಪುಗಳನ್ನು ಮತ್ತೆ ಕೆದಕಲು ಕಾರಣ ಏಪ್ರಿಲ್ 30ರಂದು ಬೆಳಿಗ್ಗೆ 8.45 ಕ್ಕೆ ಹಿರಿಯ ನಟ ರಿಷಿ ಕಪೂರ್ ರಿಲಯನ್ಸ್ ಆಸ್ಪತ್ರೆಯಲ್ಲಿ ನಿಧನರಾದ ವಾರ್ತೆ. ನಿನ್ನೆಯಷ್ಟೇ ಇರ್ಫಾನ್, ಇಂದು ರಿಷಿ ಕಪೂರ್ ನಿಧನದ ಈ ಸುದ್ದಿ ಬಾಲಿವುಡ್ ಗೆ ನಿಜಕ್ಕೂ ಆಘಾತ. ರಿಷಿ ಕಪೂರ್ ರ ಜೊತೆ ಅಂದಿನ ನಮ್ಮ ಚರ್ಚೆ ಈವಾಗ  ಮತ್ತೆ ಕಣ್ಣ ಮುಂದೆ ಬಂತು.

16 ಸೆಪ್ಟಂಬರ್ 2017ರಲ್ಲಿ ಆರ್ ಕೆ ಸ್ಟುಡಿಯೋ ಗೆ ಬೆಂಕಿ ಕೂಡ ಬಿದ್ದಿತ್ತು. ಕಪೂರ್ ಕುಟುಂಬ ಈ ಆಘಾತದಿಂದ ಚೇತರಿಸಲು ಬಹಳ ಕಾಲ ಹಿಡಿದಿತ್ತು. ಸ್ಟುಡಿಯೋದಲ್ಲಿ ನ  ಟಿವಿ ಸೀರಿಯಲ್ ಸೆಟ್  ಒಂದರಲ್ಲಿ ಬೆಂಕಿ ಕಾಣಿಸಿತ್ತು. ಈ ಬೆಂಕಿಯಲ್ಲಿ ಆರ್ ಕೆ.ಬ್ಯಾನರ್ ನ  ಫಿಲಂಗಳ ನರ್ಗಿಸ್ ರಿಂದ ಹಿಡಿದು ಐಶ್ವರ್ಯ ರೈ ತನಕ ಬಳಸಿದ ಕಾಸ್ಟ್ಯೂಮ್, ಮೇರಾ ನಾಮ್ ಜೋಕರ್ ನ ರಾಜಕಪೂರ್ ರ ಮುಖವಾಡ ,ಡ್ರೆಸ್ ಗಳು….  ಹೀಗೆ ಐತಿಹಾಸಿಕ ವಸ್ತು, ಗುರುತುಗಳೆಲ್ಲ ಆಹುತಿಯಾಗಿದ್ದವು. ಅನಂತರ ಮೇ 2019 ರಲ್ಲಿ ನಷ್ಟದಲ್ಲಿ ಇದ್ದ ಆರ್ ಕೆ ಸ್ಟುಡಿಯೋವನ್ನು ಗೋದ್ರೆಜ್ ನವರಿಗೆ ಮಾರಾಟ ಮಾಡಿದ ಸುದ್ದಿಯೂ ಕೇಳಿಬಂದಾಗ ಅನೇಕರು ಬಾಲಿವುಡ್ ನ ಈ ‘ವಿರಾಸತ್’ನ್ನು ಉಳಿಸಲು ಸರಕಾರವೇ ಮುಂದೆ ಬರಬೇಕೆಂದು ಆಗ್ರಹಿಸಿದ್ದೂ ಇದೆ.

1952 ರಲ್ಲಿ ಜನಿಸಿದ ರಿಷಿ ಕಪೂರ್ ತನ್ನ 67 ನೇ ವಯಸ್ಸಿನಲ್ಲಿ ಏಪ್ರಿಲ್ 30, 2020 ರಂದು  ನಿಧನರಾದರು. ಕಳೆದ ಎರಡು ವರ್ಷಗಳಿಂದ  ಅವರು  ಕ್ಯಾನ್ಸರ್ ನಂಥ ಅನಾರೋಗ್ಯ ಕ್ಕೆ ಈಡಾಗಿದ್ದರು. ವಿದೇಶದಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಮುಂಬೈಗೆ ಬಂದಿದ್ದು ಚೇತರಿಸಿ ಕೊಂಡಿದ್ದರು. ನಿನ್ನೆ ಮತ್ತೆ ರಿಲಯನ್ಸ್ ಆಸ್ಪತ್ರೆಗೆ ಅವರನ್ನು ಭರ್ತಿಗೊಳಿಸಲಾಗಿ ಏಪ್ರಿಲ್ 30ರಂದು ಬೆಳಿಗ್ಗೆ ನಿಧನರಾದರು.
ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಹಿಂತಿರುಗಿ ಬಂದವರು ‘ದ ಬಾಡಿ’ ಫಿಲ್ಮಿನ ಮೂಲಕ ಮತ್ತೆ ಕಾಣಿಸಿಕೊಂಡಿದ್ದರು. ಇವರ ಬಗ್ಗೆ ಕೃತಿಯೂ ಬಂದಿದೆ.

ಒಂದೊಮ್ಮೆ ಅವರು “ರೊಮಾನ್ಸ್ ರಾಜ” ಆಗಿದ್ದರು. ಸಂದರ್ಶನವೊಂದರಲ್ಲಿ ( ಡಿಸೆಂಬರ್ 2019)ಅವರು ಹೇಳಿದಂತೆ “ಆರಂಭದಲ್ಲಿ ಹಾಡು ಹೇಳುತ್ತಿದ್ದೆ, ಕುಣಿಯುತ್ತಿದ್ದೆ. ನನ್ನನ್ನು ಆವಾಗ  ಸೀರಿಯಸ್ಸಾಗಿ ಯಾರೂ ಪರಿಗಣಿಸುತ್ತಿರಲಿಲ್ಲ. ಎಲ್ಲಿಯವರೆಗೆ ಅಂದರೆ ಮದುವೆ ನಂತರವೂ ನನ್ನನ್ನು ಮಕ್ಕಳ ರೀತಿಯಲ್ಲಿ ನೋಡುತ್ತಿದ್ದರು. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನನಗೆ ಉತ್ತಮ ಪಾತ್ರಗಳು ದೊರೆತಿವೆ ” ಎಂದು ಹೇಳಿದ್ದರು.

ಐದು ದಶಕಗಳ ಕಾಲ ಅವರು ಬಾಲಿವುಡ್ ನಲ್ಲಿ ಅಭಿನಯಿಸಿದ್ದರು.  18 ಡಿಸೆಂಬರ್  1970 ರಲ್ಲಿ ‘ಮೇರಾ ನಾಮ್ ಜೋಕರ್’ನಲ್ಲಿ  ಮೊದಲಿಗೆ ಅಭಿನಯಿಸಿದ್ದರು.  ಆ ಮೂಲಕ  5 ದಶಕಗಳು  ಚಿತ್ರರಂಗದಲ್ಲಿದ್ದರು. ಲೈಲಾ ಮಜ್ನು, ಬಾಬಿ,  ಚಾಂದಿನಿ, ಸಾಗರ್, ನಮಸ್ತೆ ಲಂಡನ್, ಅಮರ್ ಅಕ್ಬರ್ ಅಂತೋನಿ, ಸಾಗರ್, ತವಾಯಫ್, ನಗೀನಾ, ದಾಮಿನಿ. (ಆದರೆ ಜನ ಸನ್ನಿ ದೆವೋಲ್ ಗೆ ಶಹಬ್ಬಾಸ್ ನೀಡಿದ್ದು ರಿಷಿ ಅವರಿಗೆ ಸ್ವಲ್ಪ ಬೇಸರ) ದ ಬಾಡಿ… ಮುಂತಾದ ಫಿಲ್ಮ್ ಗಳಲ್ಲಿ ಅವರ ಅಭಿನಯ ಯಾವತ್ತೂ ಮರೆಯುವಂತಿಲ್ಲ.

‍ಲೇಖಕರು avadhi

May 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: