ಹೊಸದೊಂದು ಕಥೆ : ಸೀರುಡುಕಿ

ಶೋಭಾಮಣಿ ಎಚ್ ಎಂ 

ಅಡಿಕೆ ಮರದ ಮೇಲಿಂದ ದುಗ್ಗ ಅಡಿಕೆ ಕೊನೆ ತೆಗೆದು ನೇಣಲ್ಲಿ ಜಾರಿಸ್ತಿದ್ದರೆ ಕೆಳಗಡೆಯಿಂದ ಶಂಕರ ಕೊನೆ ಹಿಡಿದು ಪಕ್ಕದಲ್ಲಿ ರಾಶಿ ಹಾಕ್ತಿದ್ದ. ದುಗ್ಗನಿಗೆ ಅರವತ್ತು ವರ್ಷಕ್ಕಿಂತ ಜಾಸ್ತಿನೆ ಆಗಿರಬಹುದೇನೊ,

ಆದ್ರು ಮರನ ಸರ, ಸರ ಹತ್ತಿ ಕೊನೆ ತೆಗೆಯೋದು, ಒಂದು ಮರದಿಂದ ಇನ್ನೊಂದು ಮರಕ್ಕೆ ಹೋಗ್ಬೇಕಂದ್ರೆ ದೋಟಿಯಿಂದ ಇನ್ನೊಂದು ಮರ ಎಳೆದು ಅದಕ್ಕೆ ಹಾರ್ತಿದ್ದ. ಇದನ್ನು ಅವನು ಒಂದು ಧ್ಯಾನದಂತೆ ಮಾಡ್ತಿದ್ದ. ದುಗ್ಗ ಕೊನೆ ತೆಗೆದು ಹಾಕ್ತಿದ್ದರೆ ಕೊನೆ ಹಿಡಿತಿದ್ದ ಶಂಕರ ಕೆಲವು ಹಿಡಿಯೋಕಾಗದೆ ನೆಲಕ್ಕೆ ಬಿದ್ದೋಗ್ತಿತ್ತು, ಯಾವತ್ತು ಅವನು ಹೀಗೆ ಮಾಡಿದವನಲ್ಲ.

ಅದಕ್ಕೆ ದುಗ್ಗ ಮರದ  ಮೇಲಿಂದ, “ಯಾಕೆ ಸಣ್ಣಯ್ಯ ಉದುರು ಮಾಡ್ತಿದ್ರಲ್ಲಾ,” ಅಂತ ಕೇಳಿ ಮರದಿಂದ ಇಳಿದು ಬಂದ. ಇಬ್ಬರು ಮರದ ಕೆಳಗೆ ಕೂತು ಮನೆಯಿಂದ ತಂದಿದ್ದ  ಮಜ್ಜಿಗೆ ಕುಡಿತಾ ಕೂತ್ಕೊಂಡ್ರು.

ದುಗ್ಗ,  ಯಾಕ ಸಣ್ಣಯ್ಯ ಮಕ ಎಲ್ಲಾ ಸಣ್ಣಗೆ ಆಗಿದೆ ಹುಷಾರಿಲ್ಲವಾ? ಅಂತ ಕೇಳ್ದ. ಶಂಕರ ಏನಿಲ್ಲ ಅಂತ ಹೇಳಿದ್ರು ಅವನ ಮನಸ್ಸು ಸರಿಯಿರಲಿಲ್ಲ. ಅವನ ಮನಸ್ಸು ತಿಳಿದವನ ಹಾಗೆ ದುಗ್ಗ, “ಒಂದು ಮದುವಿ ಮಾಡ್ಕಳಿ ಸಣ್ಣಯ್ಯ,” ಅಂದ. ಅದಕ್ಕೆ ಶಂಕರ, “ನಮಗೆಲ್ಲ ಯಾರು ಹೆಣ್ಣು ಕೊಡ್ತಾರೆ ಮಾರಾಯ,” ಅಂದ.

ದುಗ್ಗ, “ನಿಮಗೇನು  ಕಡಿಮೆಯಾಗಿದ್ದು, ಓದಿದ್ರಿ, ಚೆಂದಾಗಿದ್ರಿ, ಒಳ್ಳೆ ತೋಟ ಅದೆ, ಯಾರಾರು ಕಣ್ಮುಚ್ಕಂಡ್ ಕೊಡ್ತಾರೆ ಬಿಡಿ,” ಅಂತ ಹೇಳಿದ. ಈಗ ಅದೆಲ್ಲ ಇಲ್ಲ. ಜಮೀನು, ಮನೆ ಮಾಡ್ಕಂಡವರಿಗೆ ಹೆಣ್ಣು ಸಿಗೋದು ಕಷ್ಟ ಅಂತ ಹೇಳಿದ ಶಂಕರ ಅದು ಬಿಡು ನೀನು ಮದುವೆಯಾಗಿದ್ದು ಹೆಂಗೆ, ನಿಮ್ಮನೇಲಿ ನೋಡಿದ್ದ? ಎಂದು ಕೇಳಿದ್ದಕ್ಕೆ ದುಗ್ಗ ನಾನು ಸೀರುಡುಕಿ ಮಾಡ್ಕಂಡಿದ್ದು ಅಂದ. ಸೀರುಡುಕಿನ ಎಂತ ಮಾರಾಯ ಅದು? ಹೊಸ್ತು ಅಂದ ಶಂಕರ.

ಅದಕ್ಕೆ ದುಗ್ಗ, “ಹೊಸ್ತಲ್ಲ ಮರರೇ ಮೊದ್ಲಿದ್ದಿದ್ದೆ, ನಮ್ಮ ಗಿರಿಜಾ ಜೊತಿಗೆ ಕೆಲಸಕ್ಕೆ ಬರ್ತಿದ್ಲು. ಅವಳೂ ಮದುವೆ ಮಾಡ್ಕಂಡು ಎಂತೋ ಆಗಿ ಗಂಡನ್  ಬಿಟ್ಟಿದ್ಲು ನಂಗೆ ಇವಳು ಆಗಬೋದು ಅಂತ ಕಂಡಿತ್ತು. ಅವಳಿಗೂ ಹಂಗೆ ಇತ್ತು. ಒಂದು ಸೀರೆ ತಂದು ಕೊಟ್ಟು ಅವಳ ಜೊತಿ ಇರುಕು ಶುರು ಮಾಡ್ದೆ ಅದೇ ಸೀರಡುಕಿ,” ಒಂದಲ್ಲ, ಎರಡಲ್ಲ, ಐದು ಜನ ಮಕ್ಕಳು ನೋಡಿ ನಮಗೆ ಅಂದ. ನಾನು ಗಿರಿಜಾ ಸುಮಾರು ವರ್ಷ ನಿಮ್ಮನಿ ಜಾಗದಲ್ಲೆ ಇದ್ದಿದ್ದು. ಆಮೇಲೆ ಸರ್ಕಾರದಿಂದ ದರ್ಖಾಸ್ತು ಮಂಜೂರಾದ್ಮೇಲೆ ಅಲ್ಲಿ ಹೋಗಿದ್ದು. ಅಮ್ಮಂಗೆ ನಾನು ಸೀರುಡುಕಿ ಮಾಡ್ಕೊಂಡಿದ್ದು ಎಲ್ಲಾ ಗೊತ್ತು ಕೇಳಿ ಅಂತ ದುಗ್ಗ ಹೇಳಿದ.

ಇದನ್ನ ಕೇಳಿ ಶಂಕರನಿಗೆ ಎಷ್ಟು ಚೆನ್ನಾಗಿದೆ ಇದು ಈಗ್ಲೂ ಸೀರುಡುಕಿ ಪದ್ಧತಿ ಇದ್ದಿದ್ರೆ ನಾನು ಸುಮತಿನ ಹೀಗೆ ಸೀರುಡಿಕಿ ಮಾಡ್ಕೊಬೋದಿತ್ತು ಅಂತ ಅನ್ಕೊಂಡ. ಅವನ ಯೋಚನೆಗೆ ಅವನಿಗೆ ನಗು ಬಂತು. ಶಂಕರ ಯಾವತ್ತೂ ಈ ಸೀರುಡುಕಿ ಅನ್ನೋ ಶಬ್ದನೇ ಕೇಳಿರಲಿಲ್ಲ. ಅವನಿಗೆ ಆಶ್ಚರ್ಯ ಆಗಿತ್ತು, ನಿಮ್ಮೋರಲ್ಲಿ ಈಗ್ಲೂ ಈ ಪದ್ಧತಿ ಇದೆಯಾ? ಅಂತ ಶಂಕರ ಕೇಳಿದ. ಈಗ ಅದೆಲ್ಲ ಎಲ್ಲಿ ಮಾರರೇ ನಮ್ಮೋರು ಈಗ ನಿಮ್ಮ ಜನದ ತರನೇ ಜಾತಕ ಬರೆಸೋದು, ನೋಡುಸುದು ಎಲ್ಲಾ ಶುರು ಮಾಡ್ಕಂಡಿದರೆ ಅಂತ ಹೇಳಿ ದುಗ್ಗ ಸುಮ್ನೆ ಮರ ನೋಡ್ತಾ ಕೂತ್ಕೊಂಡ.

ದುಗ್ಗನಿಗೆ ಬೇಗ ಬೇಗ ಕೊನೆ ತೆಗೀದೆ ಇದ್ರೆ ಅಡಿಕೆ ಎಲ್ಲಾ ಗೋಟಗುತ್ತೇನೊ ಅನ್ನೊ ಚಿಂತೆಯಾಗಿತ್ತು. ಮಧ್ಯಾಹ್ನದ ನಂತರ ದಿನಾ ಮಳೆಯಾಗ್ತಿದ್ರಿಂದ ಬೆಳಿಗ್ಗೆ ಅಷ್ಟೆ ಕೊನೆ ತೆಗೆಯೋಕಾಗ್ತಿದಿದ್ದು ಹಾಗಾಗಿ ದುಗ್ಗನಿಗೆ ಬೇಗ, ಬೇಗ ಕೊನೆ ತೆಗೀಬೇಕು ಅನ್ನೊ ಆತುರ. ತನ್ನದೆ ಮನೆಯೇನೊ ಅನ್ನೊ ತರ ನಿಗಾ ವಹಿಸ್ತಿದ್ದ. ಅದಕ್ಕೆ ಶಂಕರನಿಗೂ ದುಗ್ಗನ ಕಂಡ್ರೆ ಅಕ್ಕರೆ, ಪ್ರೀತಿ. ದುಗ್ಗನಿಗೆ ಮದುವೆ ಅನ್ನೋದು ಎಷ್ಟು ಸರಳ ವಿಷಯವಾಗಿತ್ತಲ್ವಾ, ಅದು ಈಗ ಎಷ್ಟು ಗಂಟಾಗಿದೆ ಅಂತ ಅನ್ಕೊಂಡ. ದುಗ್ಗನ ತರ ಸುಲಲಿತವಾದ ಜೀವನ ನಡೆಸಿದರೆ ಎಷ್ಟು ಚೆನ್ನಾಗಿರುತ್ತೆ ಅಂತ ಶಂಕರ ಯೋಚಿಸ್ತಿದ್ದ. ಸೀರುಡುಕಿ ಹೇಗೆ ಇಲ್ಲ ಆಯಿತು ಈಗ ಅಂತ ಶಂಕರನಿಗೆ ಆಶ್ಚರ್ಯ ಆಗ್ತಿತ್ತು.

ಶಂಕರನೂ ಓದ್ಕೊಂಡು ಬೆಂಗ್ಳೂರಲ್ಲಿ ಕೆಲಸದಲ್ಲೆ ಇದ್ದ. ಅವನಪ್ಪ ದಿಢೀರ್ ಅಂತ ಸತ್ತಾಗ ಮನೆಗೆ ಬಂದವನು ವಾಪಸ್ಸು ಹೋಗಿರಲಿಲ್ಲ. ಓದು ಮುಗಿದ ಮೇಲೂ ಮನೇಲೆ ಇರೋದು ಅಂತ ಶಂಕರನ ಆಸೆಯಾಗಿತ್ತು. ಆದರೆ ಅವನಪ್ಪ ಮಹಾಬಲಯ್ಯನಿಗೆ ಮಗ ಅಷ್ಟೆಲ್ಲ ಓದಿ ಮನೇಲಿರೋದು ಇಷ್ಟ ಇರಲಿಲ್ಲ.

ಅದೂ ಅಲ್ಲದೆ ಇತ್ತಿತ್ತಲಾಗಿ ಅಡಕೆಗೂ ಹಳದಿ ರೋಗ ಬಂದು ತೋಟಗಳೆ ಹಾಳಾಗ್ತಿತ್ತು. ಕೆಲಸಕ್ಕು ಜನ ಸಿಗ್ತಿರಲಿಲ್ಲ. ಆಮೇಲೆ ಅದು ಇಲ್ಲ ಇದು ಇಲ್ಲ ಅಂತಾದರೆ ಅನ್ನೊ ಭಯದಿಂದ ಶಂಕರನ್ನ ಬೆಂಗಳೂರಿಗೆ ಕಳಿಸಿದ್ದರು. ಬೆಂಗಳೂರು ಯಾವಾಗಲು ಅವನಿಗೆ ಭಯ, ವಿಸ್ಮಯವನ್ನು ಹುಟ್ಟಿಸುತ್ತಿತ್ತು. ಮೊದ, ಮೊದಲು ಬೆಂಗಳೂರಿಗೆ ಬರುವಾಗ ಮೆಜೆಸ್ಟಿಕ್ಕಿಗೆ ಬಂದಿಳಿದರೆ ಸಾಕು. ಯಾವ, ಯಾವುದೊ ಊರಿಂದ ಬಂದಿಳಿವ ಅಪರಿಚಿತ ಜನ, ಅವರನ್ನಿಳಿಸಿ ಮತ್ತಾರನ್ನೊ ಕರೆತರಲು ಹೊರಡುವ ನಿರ್ಲಿಪ್ತ

ಬಸ್ಸುಗಳು, ಎಲ್ಲಿಗೆ ಹೋಗ್ಬೇಕು ಅಂತ ಕೇಳ್ಕೊಂಡು ಹಿಂದೆ, ಹಿಂದೆ, ಬರೊ ಆಟೋದವರು.

ಎಲ್ಲ ಶಂಕರನಿಗೆ ಆತಂಕವನ್ನು ಹುಟ್ಟಿಸುತಿತ್ತು. ಎಲ್ಲಿಗೆ ಹೋಗಬೇಕು ಅಂತಾನೆ ತೋಚದಂತಾಗುತ್ತಿತ್ತು. ಆದರೆ ಬರುವ ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯಾರಿಗು ನಿರಾಶೆ ಮಾಡದ, ಬದುಕು ಕಟ್ಟಿಕೊಳ್ಳಲು ದಾರಿ ತೋರಿಸುವ ಬೆಂಗಳೂರು ಒಂದು ವಿಸ್ಮಯವೆ ಅನ್ನಿಸುತ್ತಿತ್ತು. ಬೆಂಗಳೂರೆ ಒಂದು ಸಮುದ್ರ ಇದ್ದ ಹಾಗೆ. ನದಿಗಳು ಸೇರೊ ಹಾಗೆ ಜನ ಇಲ್ಲಿ ಸೇರ್ತಾರೆ ಅನ್ನಿಸಿದರು ಯಾರೂ ಬೆಂಗಳೂರಿಗೆ ವಿಲೀನವಾಗಿರುವುದಿಲ್ಲ. ಎಲ್ಲರು ತಮ್ಮದೆ ಆದ ಕೋಟೆಯೊಳಗೆ ಇರ್ತಾರೇನೊ ಅಂತ ಅನ್ನಿಸುತಿತ್ತು.

ಬೆಂಗಳೂರಿಗೆ ಬಂದು ಸ್ವಲ್ಪ ದಿನಕ್ಕೆ ಅವನು ನಿರ್ಧರಿಸಿದ್ದ ಒಂದೆರಡು ವರ್ಷ ಇಲ್ಲಿದ್ದು ಆಮೇಲೆ ಊರಿಗೆ ಹೋಗುವುದು ಅಂತ. ತುಂಬಾ ವರ್ಷಗಳಿಂದ ಬೆಂಗಳೂರಲ್ಲೆ ನೆಲೆಸಿ ಮನೆ, ಮಠ ಮಾಡಿಕೊಂಡವರನ್ನು ಯಾರಾದರೂ ನಿಮ್ಮೂರು ಯಾವುದು ಅಂತ ಕೇಳಿದರೆ ಯಾವೂರು ಅಂತ ಹೇಳೋಕೆ ತಡಬಡಾಯಿಸ್ತಾರೆ ಅಂತ ಅನ್ನಿಸ್ತಿತ್ತು. ಇಲ್ಲಿ ಇದ್ದು, ನಮ್ಮ ಆತ್ಮ ಇನ್ನೆಲ್ಲೊ ಇದೆ ಅಂತ ಬದುಕೋದಕ್ಕಿಂತ ಊರಿಗೆ ಹೋಗೋದೆ ಮೇಲು ಅಂತ ಶಂಕರ ಯೋಚಿಸಿದ್ದ. ಹಾಗಾಗಿ, ಅಪ್ಪ ಹೋದಾಗ ಬಂದವನು ವಾಪಸ್ಸು ಹೋಗಿರಲಿಲ್ಲ.

ಮೊದಲಿಂದಾನು ಶಂಕರನಿಗೆ ಜಮೀನು ಮನೆ ಅಂದರೆ ಇಷ್ಟನೆ. ಹಾಗಾಗಿ ಈ ತೋಟದ ಕೆಲಸಗಳು ಕಷ್ಟ ಅನ್ನಿಸ್ತಿರಲಿಲ್ಲ. ದುಗ್ಗನು ಅವನಿಗೆ ಪ್ರತಿ ಕೆಲಸದಲ್ಲೂ ಸಹಾಯಕನಾಗಿ ಇದ್ದು ಸಲಹೇನು ಕೊಡ್ತಿದ್ದ.

ಆದರೆ ಶಂಕರನ ಅಮ್ಮ  ಸುಮಿತ್ರಮ್ಮನಿಗೆ ಮಾತ್ರ ಮಗ ಮನೆಗೆ ಬಂದಿರೋದು ಖುಷಿ ಆದ್ರೂ ಮಗನ ಮದುವೆಯದೆ ಚಿಂತೆಯಾಗಿತ್ತು. ಯಾಕೆಂದ್ರೆ ಇತ್ತೀಚೆಗೆ ಮಲೆನಾಡಲ್ಲಿ ತೋಟ-ಗೀಟ ಮಾಡ್ಕಂಡು ಇರೊ ಹುಡುಗರಿಗೆ ಹೆಣ್ಣು ಸಿಗೋದು ಬಾರಿ ಕಷ್ಟ ಆಗಿತ್ತು. ಅವರೂರಲ್ಲೆ ನಲವತ್ತಾದ್ರು ಮದುವೆಯಾಗದ, ಮದುವೆ ಆಸೆನೆ ಕೈ ಬಿಟ್ಟ ಗಂಡುಗಳು ಬೇಕಾದಷ್ಟಿದ್ದರು. ಹಾಗಾಗಿ ಸುಮಿತ್ರಮ್ಮ ಮದುವೆ ಆಗೋವರೆಗಾದ್ರು ಹೊರಗಡೆ ಕೆಲಸದಲ್ಲಿದ್ದು ಆಮೇಲೆ ಮನೆಗೆ ಬಾ ಅಂತ ಶಂಕರನಿಗೆ ಸುಮಾರು ಸಾರಿ ಹೇಳಿ ನೋಡಿದ್ದರು.

ಆದರೆ ಶಂಕರ ಸುತರಾಂ ಇದಕ್ಕೆ ಒಪ್ಪಿರಲಿಲ್ಲ. ಆ ಹುಡುಗಿ ನಾನು ಕೆಲಸದಲ್ಲಿದೀನಿ ಅಂತ ಮದುವೆಯಾಗಿರೋದು. ಅವಳಿಗೆ ಹಳ್ಳಿ ಇಷ್ಟ ಇರಲ್ಲ ಇಲ್ಲಿಗೆ ಬರೋಕೆ ಒಪ್ಪದೆ ಇದ್ರೆ ಏನು ಮಾಡೋದು. ಈ ಕತೇನೆ ಬೇಡ ಮದುವೆ ಆಗದೆ ಇದ್ರೂ ಪರವಾಗಿಲ್ಲ ಅಂತ ಶಂಕರ ಹೇಳಿದ್ದ. ಇತ್ತೀಚೆಗೆ ಶಂಕರನ ಸಂಬಂಧಿಗಳು ಊರವರು ಕೆಲವರು ದೂರದ ಊರುಗಳಿಂದ ಬೇರೆ ಜಾತಿಯ ಬಡವರ ಮನೆ ಹುಡುಗಿಯರನ್ನು ಮದುವೆ ಮಾಡ್ಕೊಂಡಿದ್ದರು. ಮದುವೆಯನ್ನು ದೇವಸ್ಥಾನದಲ್ಲಿ ಸರಳವಾಗಿ ಮಾಡ್ಕೊಂಡಿರತಿದ್ದರು.

ಊರಲ್ಲಿ ಮದುವೆಯಾದರೆ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ಉದ್ದೇಶದಿಂದ ಹೀಗೆ ಮಾಡ್ತಿದ್ದರು. ಮದುವೆ ಆಗುವಾಗ ಹುಡುಗಿ ಮನೆಯವರಿಗೆ ಒಂದು ನಿಬಂಧನೆಯು ಇರ್ತಿತ್ತು ಅವರ್ಯಾರು ಇವರುಗಳ ಮನೆಗೆ ಬಂದು ಹೋಗ್ಬಾರ್ದು ಅಂತ. ದುಡ್ಡಿನ ಅವಶ್ಯಕತೆಗೋಸ್ಕರ ಹೆಣ್ಣಿನ ಕಡೆಯವರು ಇದನ್ನು ಒಪ್ತಿದ್ದರು ಅನ್ನಿಸುತ್ತೆ ಮೊದಲ್ಲೆಲ್ಲ ಊರಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಆದರೆ ಆಮೇಲೆ ಎಲ್ಲರಿಗೂ ಒಂದು ಹೆಣ್ಣು ಸಿಕ್ಕಿದರೆ ಸಾಕು ಅಂತಾಗಿದ್ದರಿಂದ ಸುಮ್ಮನಾಗಿದ್ದರು. ಕೆಲವೊಂದಷ್ಟು ಜನ ಮಠಕ್ಕೆ ಹೋಗಿ ಗುರುಗಳ ಹತ್ತಿರ ಈ ಸಮಸ್ಯೆಯನ್ನು ಹೇಳಿದ್ದರು.

ಅದಕ್ಕವರು ಬೇರೆ ಜಾತಿಯ ಹೆಣ್ಣು ತಂದು ಮದುವೆಯಾಗುವುದರಿಂದ ಯಾವುದೇ ತೊಂದರೆ ಇಲ್ಲ. ಹೆಣ್ಣಿಗೆ ಸಂಸ್ಕಾರ ಬರೋದೆ ಮದುವೆಯಿಂದ ಅಂತ ಹೇಳಿದ್ರಂತೆ. ಇದು ಹಲವರಿಗೆ ಧೈರ್ಯವನ್ನು ಕೊಟ್ಟಿತ್ತು. ಕೆಲವರು ಅನಾಥಶ್ರಮದಿಂದ ಹೆಣ್ಣು ತಂದು ಮದುವೆಯಾಗಿದ್ದರು. ಶಂಕರನಿಗೆ ಇದೆಲ್ಲ ತುಂಬಾ ಆಶ್ಚರ್ಯ ಅಂತ ಅನ್ನಿಸ್ತಿತ್ತು. ಅವನು ನೋಡಿದ ಹಾಗೆ ಊರಲ್ಲಿ ಇದ್ದದ್ದು ತುಂಬಾ ಮಡಿವಂತ ಕುಟುಂಬಗಳೆ. ಅಂತಹವರೆ ಇದನ್ನೆಲ್ಲ ಮಾತಿಲ್ಲದೆ ಒಪ್ಪುತ್ತಿದ್ದಾರೆ ಅಂದ್ರೆ ಎಂತಹ ಅನಿವಾರ್ಯ ಪರಿಸ್ಥಿತಿ. ಕಾಲವೆ ಎಲ್ಲರಿಗೂ ಪಾಠ ಕಲಿಸುತ್ತೇನೊ ಎಲ್ಲವೂ ಒಳ್ಳೆಯದೆ ಅಂತ ಖುಷಿಯಾಗ್ತಿತ್ತು. ಎಲ್ಲವೂ ತನ್ನಿಂದ ತಾನೆ ಬದಲಾಗ್ತ ಇದೆಯೇನೊ ಅಂತ ಶಂಕರ ಅನ್ಕೋತಿದ್ದ. ಸುಮಿತ್ರಮ್ಮನೂ ಮಗನ ಮದುವೆಗೆ ಪ್ರಯತ್ನ ಪಟ್ಟಿದ್ದರು. ಆದರೆ ಯಾವುದು ಫಲ ಕೊಟ್ಟಿರಲಿಲ್ಲ ಶಂಕರನೂ ಆಸಕ್ತಿ ತೋರಿಸ್ತಿರಲಿಲ್ಲ.

ಹೇಗಾದರೂ ಮಾಡಿ ಇರೋನೊಬ್ಬ ಮಗನ ಮದುವೆ ಮಾಡಬೇಕು ಅಂತ ನಿರ್ಧರಿಸಿದ್ದ ಸುಮಿತ್ರಮ್ಮ, ಶಂಕರನಿಗೆ ನಾವು ಯಾರಾದರೂ ಗೊತ್ತಿರೋರಿಗೆ ಹೇಳಿ ದೂರದ ಯಾವುದಾದರೂ ಊರಿಂದ ಬೇರೆ ಜಾತಿಯಾದರು ಪರವಾಗಿಲ್ಲ ಒಂದು ಹೆಣ್ಣು ನೋಡೋಣ ಅಂತ ಹೇಳಿದ್ರು. ಅದಕ್ಕೆ ಶಂಕರ ಈ ರೀತಿ ಕದ್ದು ಮುಚ್ಚಿ ವ್ಯವಹಾರನೆ ಬೇಡ. ಮದುವೆ ಆಗುವುದಾದರೆ ಇಲ್ಲೆ ಗೊತ್ತಿರೋರನ್ನೇ ಆಗ್ತೀನಿ ಅಂದಿದ್ದ.

ಶಂಕರ ಹೀಗನ್ನುವುದಕ್ಕೆ ಕಾರಣವು ಇತ್ತು. ಅವನ ಮನೆಗೆ ಕೆಲಸಕ್ಕೆ ಬರ್ತಿದ್ದ ಸುಮತಿನ ಇಷ್ಟ ಪಟ್ಟಿದ್ದ. ಅವಳು ಪಿಯುಸಿ ವರೆಗೆ ಓದಿಕೊಂಡಿದ್ದಳು. ಸ್ಕೂಲಿಗೆ ಹೋಗುವಾಗಿಂದಲೂ ಒಟ್ಟಿಗೆ ಹೋಗ್ತಿದ್ದರು. ಅವಳ ಮನೇಲಿ ಕಷ್ಟ ಇದ್ದಿದ್ದರಿಂದ ಓದು ಅರ್ಧಕ್ಕೆ ನಿಂತಿತ್ತು.

ಆದರೆ ಅವಳ ಓದೊ ಆಸೆ ಮಾತ್ರ ನಿಂತಿರಲಿಲ್ಲ. ಶಂಕರನ ಹತ್ತಿರ ಇರೋ ಪುಸ್ತಕನೆಲ್ಲ ತಗೊಂಡು ಹೋಗಿ ಓದೋಳು. ಸುಮಿತ್ರಮ್ಮ ಊರಲ್ಲಿ ಇಲ್ಲದೇ ಇದ್ದರೆ ಅಥವಾ ಹುಷಾರಿಲ್ಲದೆ ಇದ್ರೆ ಹಾಲು ಕರೆಯೋದು ಮನೆಕೆಲಸ ಎಲ್ಲಾ ಮಾಡಿ ಕೊಡ್ತಿದ್ದಳು. ಅವಳ ಹಾಗೆ ಸ್ವಲ್ಪ ಓದಿಕೊಂಡ ಹುಡುಗಿಯರು ಶೃಂಗೇರಿ, ಕೊಪ್ಪ ಅಂತ ಊರುಗಳಲ್ಲಿನ ಬಟ್ಟೆ ಅಂಗಡಿನೊ ಅಥವಾ ಇನ್ನಾವುದೊ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರು. ಆದರೆ ಸುಮತಿಗೆ ಅದು ಇಷ್ಟ ಆಗ್ತಿರಲಿಲ್ಲ. ಹಾಗಾಗಿ ಶಂಕರನ ಮನೆಗೆ ಕೆಲಸಕ್ಕೆ ಬರ್ತಿದ್ದಳು.

ಒಳ್ಳೆ ಕೆಲಸಗಾತಿ. ಶಂಕರನಿಗೆ ಅವಳು ಇಷ್ಟ ಆಗ್ತಿದ್ದಳು ಆದರೆ ಮದುವೆ ಪ್ರಸ್ತಾಪ ಮಾಡೋಕೆ ಒಂತರ ಭಯ ಆಗ್ತಿತ್ತು. ಅವನಿಗೆ ಅಮ್ಮ ಏನಂತಾರೊ ಅನ್ನೋ ಯೋಚನೆ. ಇವನೊಬ್ಬನೆ ಮಗ, ಅವರಿಗೂ ಏನೇನೊ ಆಸೆ ಇರುತ್ತೆ. ಒಪ್ತಾರೊ ಇಲ್ವೋ ಅನ್ನೋ ಭಯ. ತುಂಬಾ ಯೋಚನೆ ಮಾಡಿದ ಶಂಕರ ಏನಾದರಾಗಲಿ ಸುಮತಿ ಒಪ್ಪಿದರೆ ಅವಳನ್ನೇ  ಮದುವೆ ಆಗ್ತೀನಿ ಅಂತ ನಿರ್ಧರಿಸಿದ. ಸುಮತಿಗೂ ನೀನು ಒಪ್ಪಿದರೆ ಮದುವೆ ಆಗ್ತೀನಿ ಅಂತ ಹೇಳಿದ್ದ. ಸುಮತಿಗೂ ಇಷ್ಟ ಇತ್ತು. ಶಂಕರನ್ನ ಅವಳು ಸಣ್ಣವಳಿರುವಾಗಿಂದ ನೋಡಿದ್ಲು ಒಳ್ಳೆ ಹುಡುಗ. ಆದ್ರೆ ಅವಳಿಗೆ ಸುಮಿತ್ರಮ್ಮನಿಗೆ ಒಪ್ಪಿಗೆ ಇಲ್ಲದೆ ಮದುವೆಯಾಗೋದು ಇಷ್ಟ ಇರಲಿಲ್ಲ ಹಾಗಾಗಿ ಅವಳು ಸುಮಿತ್ರಮ್ಮ ಒಪ್ಪಿದ್ರೆ ಮಾತ್ರ ಮದುವೆಯಾಗ್ತೀನಿ ಅಂತ ಹೇಳಿದ್ಲು. ಸುಮಿತ್ರಮ್ಮನಿಗೂ  ಸುಮತಿ ಅಂದ್ರೆ ಇಷ್ಟನೆ ಆದ್ರೆ ಜಾತಿ ಒಂದು ಅಡ್ಡ  ಆಗಿತ್ತು. ಅದಕಿಂತ ನೆಂಟರಿಷ್ಟರು ಆಡ್ಕೋತಾರೆ ಅನ್ನೋ ಭಯ. ಅದಕ್ಕೆ ಶಂಕರ, ಅವರು ಕದ್ದು ಮುಚ್ಚಿ ಮಾಡಿರೋದು ಅದನ್ನೆ ಅಲ್ವಾ. ಎರಡು ದಿನ ಎಲ್ಲ ಸರಿ ಹೋಗುತ್ತೆ ಅಂತ ಹೇಳಿದ್ದ.

ಸುಮಿತ್ರಮ್ಮನಿಗೆ ಇನ್ನೊಂದು ಧರ್ಮಸಂಕಟವು ಇತ್ತು. ಅವರಿಗೆ ಒಬ್ಬಳು ತಂಗಿ ಇದ್ದಳು ಸುಮಿತ್ರಮ್ಮನ ನಂತರ ನಾಲ್ಕು ಗಂಡಾದ ಮೇಲೆ ಅವಳು ಹುಟ್ಟಿದ್ದು. ಚೆನ್ನಾಗಿ ಓದುತ್ತಿದ್ದಳು. ಆಗೆಲ್ಲಾ ಹೆಣ್ಣುಮಕ್ಕಳನ್ನ ಓದುಸೋದೆ ಕಷ್ಟ ಆಗಿತ್ತು. ಯಾಕೆಂದರೆ ಇವರದ್ದು ಮಲೆನಾಡು, ಕಾಡು ಗುಡ್ಡದ ನಡುವೆ ಮನೆ. ಶಾಲೆಗೆ ಹೋಗಬೇಕು ಅಂದ್ರೆ ನಾಕು ಕಿಲೋಮೀಟರ್ ನಡೀಬೇಕು. ಅಷ್ಟಾದರೆ ಬರೀ ಏಳನೇ ಕ್ಲಾಸ್ ಮಾತ್ರ ಪೂರೈಸೋಕಾಗೊದು. ಹೈಸ್ಕೂಲ್ಗೆ ಬೇರೆ ದೂರದ ಊರಿಗೆ ಹೋಗ್ಬೇಕಾಗಿತ್ತು.

ಸುಮಿತ್ರಮ್ಮನ ಇಬ್ಬರು ತಮ್ಮಂದಿರು ಚೆನ್ನಾಗಿ ಓದುತ್ತಿದ್ದರು. ಹೀಗಾಗಿ ಅವರನ್ನು ಶೃಂಗೇರಿಯಲ್ಲಿ ಬಿಟ್ಟು ಓದಿಸ್ತಿದ್ದರು. ಅಲ್ಲಿ ಹೈಸ್ಕೂಲ್, ಕಾಲೇಜು ಎರಡೂ ಇತ್ತು. ಸುಮಿತ್ರಮ್ಮನ ತಂಗಿ ಉಮ ನಾನು ಓದಲೇಬೇಕು ಅಂತ ಹಠ ಮಾಡಿ ಮನೆಯವರನ್ನು ಒಪ್ಪಿಸಿ ಅಣ್ಣಂದರ ಜೊತೆ ಇದ್ದು ಓದು ಮುಗಿಸಿ ಉದ್ಯೋಗದಲ್ಲೂ ಇದ್ದಳು. ಅವ್ಳು ಯಾರಿಗೂ ಹೇಳದೆ ಒಂದಿನ ಇದ್ದಕಿದ್ದ ಹಾಗೆ ಮದುವೆ ಮಾಡ್ಕೊಂಡು ಬಂದಿದ್ದಳು. ಹುಡುಗ ಜಾತಿಯಿಂದ ಬೇರೆ ಪ್ರೀತಿಸಿದ್ದಳು. ಮನೆಯವರಿಗೆ ಹೇಳಿದರೆ ಖಂಡಿತ ಮದುವೆ ಸಾಧ್ಯವಿಲ್ಲ ಅನ್ಕೊಂಡು ಮದುವೆ ಆಗಿಯೇ  ಬಂದಿದ್ದಳು. ಯಾವತ್ತೂ ಇಂತಹದ್ದನ್ನು ನೋಡದ ಸುಮಿತ್ರಮ್ಮನ ತವರಿಗೆ ದೊಡ್ಡ ಆಘಾತವೇ ಆಗಿತ್ತು. ಆಮೇಲೆ ಉಮಾಳನ್ನು ಯಾವುದೇ ಶುಭ ಕಾರ್ಯಕ್ಕೆ ಸೇರಿಸ್ತಿರಲಿಲ್ಲ.

ಕರೆಯೋದು ಕಳಿಸೋದು ಅಷ್ಟಾಗಿ ಇಲ್ವಾಗಿತ್ತು. ಹೆಚ್ಚು ವಿರೋಧಿಸಿದ್ದೇ ಸುಮಿತ್ರಮ್ಮ. ತನ್ನ ಗಂಡನ ಮನೇಲಿ ಮರ್ಯಾದೆ ತೆಗೆದ್ಲು ಅಂತ ತಂಗಿ ಮೇಲೆ ವಿಪರೀತ ಕೋಪ ಇತ್ತು. ಊರಿನವರು ಯಾರೂ ಹೆಣ್ಣುಮಕ್ಕಳನ್ನ ಜಾಸ್ತಿ ಓದುಸ್ತಿರಲಿಲ್ಲ. ಆಮೇಲೆ ಉಮಾಳ  ತರ ಆಗುತ್ತೆ ಅನ್ನೋ ಮಾತು ತುಂಬಾ ದಿನದವರೆಗೂ ಹರಿದಾಡ್ತಿತ್ತು. ಈಗ ಶಂಕರ ಸುಮತಿನ ಮದುವೆಯಾದರೆ, ಉಮ ಏನಂತಾಳೋ ಅನ್ನೋ ಭಯ, ಅಪರಾಧಿ ಭಾವ ಸುಮಿತ್ರಮ್ಮನ್ನ ಕಾಡ್ತಿತ್ತು. ಶಂಕರನ ಹತ್ರಾನೂ ತನ್ನ ಸಂಕಟ ಹೇಳ್ಕೊಂಡಿದ್ದರು. ಶಂಕರ. ಚಿಕ್ಕಮ್ಮ ತುಂಬಾ ಒಳ್ಳೆಯವರು ಏನು ಹೇಳಲ್ಲ ಸಂತೋಷ ಪಡ್ತಾರೆ ಅಂತ ಹೇಳಿ ಸಮಾಧಾನ ಪಡಿಸಿದ್ದ.

ಶಂಕರನ ದೊಡ್ಡಪ್ಪನ ಮಗಳು ಸಾವಿತ್ರಿ ಇತ್ತೀಚಿಗೆ ಬಂದಾಗ ಸುಮಿತ್ರಮ್ಮ ಶಂಕರನ ಮದುವೆಯದೆ ಸಮಸ್ಯೆಯಾಗಿದೆ ಅಂತ ಕಷ್ಟ ಹೇಳ್ಕೊಂಡಾಗ ಅವಳು, ನೋಡು ಶಂಕರ ನಂಗೆ ನಿಂಗೆ ಮದುವೆಯಾಗ್ತಿಲ್ಲ ಅನ್ನೋ ಬೇಜಾರಿದೆ. ಆದರೆ ನಂಗೊಂದೊಂದು ಸಾರಿ ಈ ಗಂಡಸರಿಗೆ ಹೀಗೆ ಆಗ್ಬೇಕು ಅನ್ನೊ ಖುಷಿನೂ ಆಗ್ತಿರುತ್ತೆ. ಒಂದು ಕಾಲದಲ್ಲಿ ಹೆಣ್ಣು ಹೆತ್ತವರು ಹೆಣ್ಣುಮಕ್ಕಳು ಎಷ್ಟು ಕಷ್ಟ ಅವಮಾನ ಅನುಭವಿಸಿದಾರೆ. ನನ್ನ ಮದುವೇಲೇ ಎಷ್ಟು ಗಲಾಟೆಯಾಗಿತ್ತು. ಮದುವೆ ಬೇಡ ಅಂತ ಎದ್ದು ಹೋಗೋ ಹಾಗು ಇಲ್ಲ. ಅಂತವರ  ಜೊತೇನೆ  ಮದುವೆಯಾಗಿ ಇರಬೇಕು ನರಕ ಕಣೋ ಜೀವನ. ಹೆಣ್ಣುಮಕ್ಕಳ ಶಾಪವೇ ನೋಡು ಈಗ ಯಾರಿಗೂ ಹೆಣ್ಣು ಸಿಗದೇ ಇರೋಕೆ ಕಾರಣ.

ಆದರೆ ನೀನು ಬೇಜಾರ್ ಮಾಡ್ಕೋಬೇಡ ನಿಂಗೆ ಯಾರಾದರೂ ಇಷ್ಟ ಆಗಿದ್ರೆ ಯೋಚನೆ ಮಾಡ್ದೆ ಮದುವೆಯಾಗು ಅಂತ ಹೇಳಿ ಸಾವಿತ್ರಿ, ಮದುವೇಗೆ ಕರಿಯೋ ನಂದೇ ಓಡಾಟ ಅಂತ ತಮಾಷೆ ಮಾಡಿ ಹೊರಟಿದ್ದಳು. ಇದೆ ಎಲ್ಲಾ ಯೋಚನೆಯಲ್ಲಿ ಇದ್ದ ಶಂಕರ ಕೆಲಸ ಮಾಡೋ ಮನಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ದುಗ್ಗನಿಗೆ ಮನೆಗೆ ಹೋಗಿ ಊಟ ಮಾಡ್ಕೊಂಡು ಆಮೇಲೆ ಬರೋಣ ಅಂತ ಹೇಳಿ ಇಬ್ಬರೂ ಮನೆಗೆ ಹೊರಟರು. ಮನೆಗೆ ಹೋಗಿ ಸ್ನಾನ ಮಾಡಿ ಊಟಕ್ಕೆ ತಯಾರಾಗೊ ಅಷ್ಟರಲ್ಲಿ ಗಣೇಶ ಅವನಪ್ಪ ರಾಮನ  ಜೊತೆ ಬಂದ.

ರಾಮ ಇವರ ಮನೆಗೆ ಮೊದಲಿಂದಾನು ಕೆಲಸಕ್ಕೆ ಬರ್ತಿದ್ದ. ಗಣೇಶ, ಶಂಕರ ಇಬ್ಬರು ಒಟ್ಟಿಗೆ ಸ್ಕೂಲ್ಗೆ ಹೋಗ್ತಿದ್ದರು. ಗಣೇಶ ಬುದ್ದಿವಂತ ಚೆನ್ನಾಗಿ ಓದುತಿದ್ದ. ಹಾಗಾಗಿ ಶಂಕರನ ಅಪ್ಪನೆ ಅವನು ಮುಂದೆ ಓದೋ ವ್ಯವಸ್ಥೆ ಮಾಡಿದ್ದರು. ಗಣೇಶನು ಚೆನ್ನಾಗಿ ಓದಿ ಬ್ಯಾಂಕಲ್ಲಿ ಕೆಲಸಕ್ಕೆ ಸೇರ್ಕೊಂಡಿದ್ದ. ಬೇರೆ ಊರಿನಲ್ಲಿ ಕೆಲಸ ಮಾಡ್ತಿದ್ದ ಗಣೇಶ ಇತ್ತೀಚೆಗೆ ಮನೆ ಹತ್ತಿರಾನೆ ವರ್ಗವಾಗಿ ಬಂದಿದ್ದ ಮನೆಯಿಂದಾನೆ ಓಡಾಡಿಕೊಂಡಿದ್ದ.

ಶಂಕರ ಮತ್ತು ರಾಮ ಇಬ್ಬರಲ್ಲೂ ಒಳ್ಳೆ ಬಾಂಧವ್ಯ ಇತ್ತು. ಶಂಕರ ಇಬ್ರನ್ನೂ ಒಳಗೆ ಕರೆದ. ಗಣೇಶ ಒಳಗೆ ಬಂದು ಕೂತ್ಕೊಂಡ ಆದರೆ ರಾಮಂಗೆ ಒಳಗೆ ಬಂದು ಕೂತ್ಕೊಳ್ಳೋಕೆ ಏನೋ ಒಂತರ ಆಗಿ ಅಮ್ಮನ್ನ  ಮಾತಾಡಿಸಿಕೊಂಡು ಬರ್ತೀನಿ ಅಂತ ಹಿತ್ತಲಕಡೆ ಹೋದ. ರಾಮ ಇವರ ಮನೆಗೆ ಕೆಲಸಕ್ಕೆ ಬರ್ತಿದ್ದ ಯಾವತ್ತೂ ಮನೆ ಒಳಗಡೆ ಬಂದು ಕೂತವನಲ್ಲ. ಅವನಿಗೆ ಮಗ ಒಳಗೆ ಹೋದರೂ ಇವನಿಗೆ ಮನಸ್ಸು ಬರದೆ ಹಿತ್ತಲ ಬಾಗಿಲಲ್ಲಿ ಸುಮಿತ್ರಮ್ಮನ ಹತ್ತಿರ ಮಾತಾಡ್ತ ಕೂತ್ಕೊಂಡ. ಶಂಕರ ಇಬ್ರಿಗೂ ಊಟ ಮಾಡೋಣ ಅಂತ ಹೇಳಿದ.

ಅವರು ಊಟ ಆಗಿದೆ ಅಂತ ಹೇಳಿದ್ರಿಂದ ಶಂಕರ ಅಡಿಗೆ ಮನೆಗೆ ಹೋಗಿ, ಸುಮಿತ್ರಮ್ಮನಿಗೆ ಗಣೇಶ ಕಾಫಿ ಕುಡಿಯಲ್ಲ ರಾಮ ಕುಡಿತಾನೆ ಗಣೇಶಂಗೆ ಎಂತಾದ್ರೂ ತಿಂಡಿ, ಗಿಂಡಿ ಇದ್ರೆ ಕೊಡು. ಪೇಪರಲ್ಲಿ ಕೊಡಬೇಡ ಪ್ಲೇಟಲ್ಲೆ ಕೊಡು. ನಾನು ಬ್ಯಾಂಕಿಗೆ ಏನಾದರೂ ಕೆಲಸ ಆಗ್ಬೇಕು ಅಂತ ಹೋದ್ರೆ ಅವನ ಮುಂದೇನೆ ಕೂರ್ಬೇಕು. ಪೇಪರಲ್ಲಿ ಕೊಟ್ರೆ ಏನು ಚೆನ್ನಾಗಿರುತ್ತೆ ನಾನೇ ಪ್ಲೇಟು ತೊಳೆದಿಡ್ತೀನಿ ಅಂತ ಹೇಳಿ ಹೊರಗಡೆ ಬಂದು ಗಣೇಶನ ಹತ್ತಿರ ಮಾತಾಡ್ತ ಕೂತ್ಕೊಂಡ.

ಸುಮಿತ್ರಮ್ಮನಿಗೆ ರಾಮ ಮಗನಿಗೆ ಮದುವೆ ಗೊತ್ತಾಗಿರೋ ವಿಷಯ ಹೇಳಿದ. ಸುಮಿತ್ರಮ್ಮನಿಗೆ ಮತ್ತೆ ಮಗನ ಮದ್ವೆನೇ ಕಾಡೋಕೆ ಶುರುವಾಯ್ತು. ಇಬ್ರದ್ದೂ ಒಂದೇ ವಯಸ್ಸು ಏನಾದರಾಗಲಿ ಸ್ವಲ್ಪ ದಿನದಲ್ಲಿ ಶಂಕರಂಗು ಮದುವೆ ಮಾಡಿಬಿಡಬೇಕು ಅಂತ ಅನ್ಕೊಂಡ್ರು. ಗಣೇಶ ಶಂಕರನ ಹತ್ತಿರ ತನಗೆ ಮದುವೆ ಗೊತ್ತಾಗಿರೊ ವಿಷಯ ಹೇಳಿದ. ನಿಮ್ಮ ಮನೆಯವರಿಂದಾನೆ ನಾನು ಈ ಸ್ಥಿತಿಗೆ ಬರಲು ಕಾರಣ ಅಂತ ಸುಮಿತಮ್ಮನಿಗೂ ಹೇಳಿದ.

ಸುಮಿತ್ರಮ್ಮ ನಮ್ಮದೇನಿದೆ ನಿನ್ನ ಶ್ರಮ, ದೇವರದಯೆ ಅಂತ ಹೇಳಿದ್ರು. ಗಣೇಶ ಅದು ಇದು ಮಾತಾಡಿ ಮದ್ವೇಗೆ ಇಬ್ಬರನ್ನು ಕರೆದು ಹೊರಟ. ರಾಮನು ಹಿತ್ತಿಲಕಡೆಯಿಂದ ಬಂದ. ರಾಮಂಗೆ ಶಂಕರ ಇನ್ನು ನೀನು ಅಪರೂಪ ಮಗ ಮದುವೆಯಾಗಿ ಬ್ಯಾಂಕ್ ಹತ್ರಾನೇ ಮನೆ ಮಾಡ್ತಾನಂತೆ ಇನ್ನು ನಿನ್ನ ನೋಡ್ಬೇಕು ಅಂದ್ರೆ ಅಲ್ಲಿಗೆ ಬರ್ಬೇಕು ನೋಡು ಅಂತ ತಮಾಷೆ ಮಾಡ್ದ.

ಅದಕ್ಕೆ ರಾಮ, ಅಯ್ಯಪ್ಪ ನಾನು ಅಲ್ಲಿಗೆ ಹೋಗುದಿಲ್ಲಪ್ಪ ನಾನಿಲ್ಲೆ. ನಂಗೆ ಅಲ್ಲೆಲ್ಲ ಹೊತ್ತು ಹೋಗುದಿಲ್ಲ. ಮದುವೆ ಮುಗುದ್ಮೇಲೆ ಕೆಲಸಕ್ಕೆ ಬರ್ತೀನಿ ಅಂತ ಹೇಳಿದ. ಅಷ್ಟರಲ್ಲಿ ಗಣೇಶ ತಿಂಡಿ ತಿಂದ ಪ್ಲೇಟನ್ನು ತೊಳೆಯೋಕೆ ಹೊರಗಡೆ ಕೊಳಾಯಿ ಹತ್ತರ ತಗೊಂಡು ಹೊರಟ. ಶಂಕರ ತೊಳೆಯೋದೇನು ಬೇಡ ಅಂತ ಹೇಳಿದ್ರೂ ಗಣೇಶ ಪ್ಲೇಟ್ ತೊಳೆದಿಟ್ಟು ಹೊರಟ. ಗಣೇಶ, ರಾಮ ಇಬ್ಬರು ಹೋಗೋದನ್ನೆ ಶಂಕರ ನೋಡ್ತಾ ನಿಂತಿದ್ದ. ಇಬ್ಬರೂ ಗೇಟ್ ದಾಟಿ ಹೋಗ್ತಿದ್ದ ಹಾಗೆ ಸುಮತಿ ಅಡಿಕೆ ಸುಲಿಯೋಕೆ ಅಂತ ಗೇಟ್ ದಾಟಿ ಒಳಗೆ ಬಂದಳು.

‍ಲೇಖಕರು avadhi

May 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: