ಮೇಷ್ಟ್ರು ಇನ್ನು ಬರಿಯ ನೆನಪಷ್ಟೇ…

ರಾಘವನ ಚಕ್ರವತಿ೯

ಅರವತ್ತರ ಆಸುಪಾಸಿನ ಚಿರಯುವಕ, ಆತ್ಮೀಯ ಮೇಷ್ಟ್ರು, ಎಚ್.ವಿ.ವಿ. (ವೇಣುಗೋಪಾಲ್) ಇನ್ನಿಲ್ಲ ಎಂಬ ಸುದ್ದಿ ನನ್ನನ್ನು ಗಾಢಮೌನಕ್ಕೆ ತಳ್ಳಿದೆ. ನನ್ನ ಬರಹಗಳಲ್ಲಿನ ಓರೆ-ಕೋರೆಗಳನ್ನು ಗಮನಿಸಿ ಪ್ರೀತಿಯಿಂದ ತಿದ್ದಿ-ತೀಡುತ್ತಿದ್ದ ಮೇಷ್ಟ್ರು, ಸಿನಿಮಾ ನೊಡುವ ಬಗೆಯನ್ನೂ ಹೇಳಿಕೊಟ್ಟರು. ೮೨ರಲ್ಲಿ ಬಿಡುಗಡೆಯಾಗಿದ್ದ ಎಮ್.ಎಸ್.ಸತ್ಯು ನಿರ್ದೇಶನದ ’ಬರ’ ಕೆಲ ವರ್ಷಗಳ ನಂತರ ಗೌರೀಬಿದನೂರಿನ ಅಭಿಲಾಶ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಡಾಗ, ’ಅನಂತ ನಾಗ್’ ಚಿತ್ರ ಎಂದು ನೋಡಲು ಯತ್ನಿಸಿ ಮಧ್ಯೆ ಎದ್ದು ಬಂದಿದ್ದೆವು. ’ಹೇಗಿತ್ತ್ರಯ್ಯಾ ಸಿನಿಮಾ’ ಎಂದು ವಿಚಾರಿಸಿಕೊಂಡರು.

’ಬಹದ್ದೂರ್ ಗಂಡು’, ’ನಿಪ್ಪುಲಾಂಟಿ ಮನಿಷಿ’ ತರದ ಸಿನಿಮಾಗಳ ವಿಚಿತ್ರ ರೋಮಾಂಚನದ ಮನಃಸ್ಥಿತಿಯಲ್ಲಿದ್ದ ನಮಗೆ ’ಬರ’ ರುಚಿಸಿರಲಿಲ್ಲ. ’ಬೋರ್ ಆಯ್ತು ಸರ್…ಎದ್ದು ಬಂದ್ವಿ’ ಎಂದೆವು. ಕಲಾತ್ಮಕ-ಕಮರ್ಶಿಯಲ್ ಸಿನಿಮಾಗಳ, ನಾಸಿರುದ್ದೀನ್ ಶಾ-ಅನಂತನಾಗ್-ಎನ್ಟಿ‌ಆರ್ ಗಳ ಕಲಾಗ್ರಹಿಕೆ, ಸತ್ಯು-ಲಂಕೇಶ್-ಪುಟ್ಟಣ್ಣ-ದಾಸರಿ ನಾರಾಯಣರಾವ್ ತರದವರ ಸಿನಿಮಾ ಪರಿಕಲ್ಪನೆಯ ವಿಭಿನ್ನ ದೃಷ್ಟಿಕೋನಗಳ ಬಗ್ಗೆ ಮೇಷ್ಟ್ರು ಮನಮುಟ್ಟುವಂತೆ ವಿವರಿಸಿದರು. ’ಸಿನಿಮಾ’ ನಮ್ಮನ್ನು ಆವರಿಸಿಕೊಳ್ಳಲಾರಂಭಿಸಿದ್ದೇ ಮೇಷ್ಟ್ರ ಸಹವಾಸದಿಂದ. ’ನಿನ್ನ ಬರಹಗಳಲ್ಲಿ ಮೊದಲಿಗಿಂತ ಹೆಚ್ಚು ಎಚ್ಚರವಿದೆ…ಇನ್ನೂ ಆಳಕ್ಕೆ ಹೋಗಬೇಕು…ಪ್ರಯತ್ನಿಸು’ ಎಂದಿದ್ದರು. ’ಪಿರವಿ’ ಯ ವಿಮರ್ಶೆಯನ್ನು ಬಹಳ ಮೆಚ್ಚಿಕೊಂಡಿದ್ದರು. ಅದಾಗಿ ಎಷ್ಟೋ ದಿನಗಳ ನಂತರ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಸಿಕ್ಕಾಗ, ಮತ್ತೆ ’ಪಿರವಿ’ ಬಗ್ಗೆ ಮಾತನಾಡಿದ್ದರು. ಅವರ ಸಿನಿಮಾ ಜ್ಞಾನ ಅಚ್ಚರಿ ಹುಟ್ಟಿಸುತ್ತಿತ್ತು. ಅವರ ಮನೆಯಲ್ಲಿನ ’ಉನ್ನತಿ’ ಸಭಾಂಗಣ, ಅವರ ಸಿನಿಮಾ ಪ್ರೀತಿಯ ಸಂಕೇತ. ಅದಕ್ಕಾಗಿ ಅಪಾರ ಹಣವ್ಯಯಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಪದವಿಯಲ್ಲಿದ್ದಾಗಲೂ ಯಾವುದೇ ಹಮ್ಮು-ಬಿಮ್ಮು ತೋರಲಿಲ್ಲ. ಎಚ್ಚೆನ್ ಬಗ್ಗೆ ಅಪಾರ ಗೌರವ-ಅಭಿಮಾನಗಳಿತ್ತು.

ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡ ನೋವು..ಮೇಷ್ಟ್ರು ಇನ್ನು ಬರಿಯ ನೆನಪಷ್ಟೇ…ಹೋಗಿ ಬನ್ನಿ ಸರ್..

====
ಮೇಷ್ಟ್ರು ಪ್ರಿನ್ಸಿಪಾಲ್ ವೃತ್ತಿಯಿಂದ ನಿವೃತ್ತರಾದಾಗ ಬರೆದಿದ್ದ ಬರಹ. ಫೋನ್ ಮಾಡಿ ಬಹಳ ಭಾವುಕರಾಗಿ ಪ್ರತಿಕ್ರಿಯಿಸಿದ್ದರು.

ಜೂನ್ ೪, ೨೦೧೬:

ಸಾರ್..ರಿಟೈರ್ ಆಗ್ಬಿಟ್ರಂತೆ ?? ??

ನಿನ್ನೆ ಮೊನ್ನೆಯಷ್ಟೇ ಗಂಗೆಯ ವರ್ಣನೆಯಿದ್ದ ಜಗನ್ನಾಥ ಕವಿಯ ಸಂಸ್ಕೃತ ಕವಿತೆಯನ್ನು ಮನಮುಟ್ಟುವಂತೆ ಪಾಠ ಮಾಡಿದರೇನೋ ಎಂಬತ್ತಿದ್ದ ಎಚ್.ವಿ.ವಿ ಮೇಷ್ಟ್ರು ಆಗಲೇ ನಿವೃತ್ತಿಯ ವಯಸ್ಸು ತಲುಪಿಬಿಟ್ಟರು ಎಂದರೆ…. ನಂಬುವುದು ಹೇಗೆ?? ಗೌರಿಬಿದನೂರಿನ ಕಾಲೇಜಿನಲ್ಲಿ ಓದುತ್ತಿದ್ದಾಗ ಸಂಸ್ಕೃತ ಕಲಿಸಿದ-ಬೋಧಿಸಿದ ಮೇಷ್ಟ್ರ ’ದೀಪಶಿಖಾ ಕಾಳಿದಾಸ’ ನ ವಿವರಣೆ-ಬಣ್ಣನೆಗಳನ್ನು ಮರೆಯಲು ಸಾಧ್ಯವೇ? ವಾಮನನ ಎತ್ತರದ, ತ್ರಿವಿಕ್ರಮನ ಓದಿನ ಮೇಷ್ಟ್ರು ಸಂಸ್ಕೃತದ ಕಹಳೆಯಲ್ಲಿ ಕನ್ನಡದ ಧ್ವನಿ ಮೂಡಿಸಿದವರು. ಎರಡೂ ಭಾಷೆಗಳನ್ನು ಆಪ್ಯಾಯಮಾನವಾಗಿಸಿದವರು.

ನನ್ನ ಅಕ್ಕ ಲಕ್ಷ್ಮಿ ನನಗಿಂತಲೂ ಮೊದಲು ಗೌರೀಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಅವರ ವಿದ್ಯಾರ್ಥಿನಿ. ಅಕ್ಕನ ಮಗಳೂ ದಶಕಗಳ ನಂತರ ಅವರ ವಿದ್ಯಾರ್ಥಿನಿಯೇ :-). ನಾನು ಕಾಲೇಜ್ ಸೇರುವಷ್ಟರಲ್ಲಿ ಗೌರಿಬಿದನೂರು ಕಾಲೇಜಿನ ಹಲವು ಮೇಷ್ಟ್ರುಗಳು ಜೀವಂತ ದಂತಕಥೆಗಳಾಗಿದ್ದರು. ಸಂಸ್ಕೃತದ ಈ ಮೇಷ್ರು, ಕನ್ನಡದ ಕೆ.ಎಂ.ಕೆ. (ಕೋದಂಡರಾಮ ಶೆಟ್ಟರು) ಇಂಗ್ಲೀಷಿನ ಎನ್.ಆರ್ (ನಗರಗೆರೆ ರಮೇಶ್), ಬಿ.ಜಿ.ಎಮ್. (ಗಂಗಾಧರಮೂರ್ತಿ), ಗಣಿತದ ಜಿ.ಕೆ.ಆರ್. (ರಂಗನಾಥ್, ಕಲಾವಿದ-ಇಂಗ್ಲಿಷ್ ಪ್ರಾಧ್ಯಾಪಕ ಗೋವಿಂದರಾಯರ ಸೋದರ), ಅಕೌಂಟೆನ್ಸಿಯ ವೈ.ಆರ್. (ರಾಜಾರಾಮ್)..ಹೀಗೆಯೇ ಹಲವರು. ಹಲವು ಮೇಷ್ಟ್ರುಗಳು ಒಂದಷ್ಟು ದಿನ ಇದ್ದು ಮಾಯವಾದರು. ಬೆಳಗ್ಗೆ ಪಾಠಮಾಡಿ, ಸಂಜೆ ವೇಳೆಯಲ್ಲಿ ಕೆ.ಎ.ಎಸ್. ಪರೀಕ್ಷೆಗೆ ಓದಿ ತಹಸೀಲ್ದಾರರಾಗಿ ಆಯ್ಕೆಯಾಗಿ ಹೋದವರು ಹಲವು ಮಂದಿ ??. (ಒಬ್ಬ ಮೇಷ್ಟ್ರಂತೂ ತಮ್ಮ ಕೆ.ಎ.ಎಸ್ ಪರೀಕ್ಷೆಯ ಪಠ್ಯ ಪುಸ್ತಕಗಳನ್ನು ನನಗೆ ಕೊಟ್ಟು, ’ಈ ಬಿ‌ಈ-ಗೀಯಿ ಯೆಲ್ಲ ಬೇಡಾ..ಸುಮ್ನೆ ಗೌರ್ಮೆಂಟ್ ಕೆಲ್ಸ ಸೇರಿಬಿಡು.’ ಎಂದು ’ಆಶೀರ್ವದಿಸಿದ್ದರು 🙂 ).

ಎಚ್.ವಿ.ವಿ ಮೇಷ್ಟ್ರು ಸಂಸ್ಕೃತ ವಿಭಾಗದ ಏಕಮೇವಾದ್ವಿತೀಯರಾಗಿದ್ದಗಿನ ಸಂದರ್ಭದಲ್ಲಿ ಗೌರೀಬಿದನೂರು ಕಾಲೇಜಿನಲ್ಲಿನ ವಾತಾವರಣದ ಬಗ್ಗೆ ಹೇಳಬೇಕಾಗುತ್ತದೆ. ಕರ್ನಾಟಕದ ಕೋಲಾರ (ಈಗ ಚಿಕ್ಕಬಳ್ಳಾಪುರ)ದ ಗಡಿಭಾಗದ ಗೌರೀಬಿದನೂರಿನಲ್ಲಿ ಪಕ್ಕದ ಆಂಧ್ರದ ಗಾಳಿಯೇ ಹೆಚ್ಚು ಬೀಸುತ್ತದೆ. ತೆಲುಗಿನ ಹಲವು ಚಿತ್ರಗಳು ಆಂಧ್ರದೊಂದಿಗೆ ಇಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದೇ ಪ್ರತಿಷ್ಟೆ ಎಂದು ಭಾವಿಸಲಾಗುತ್ತದೆ. ನಾದೇಂಡ್ಲ ಭಾಸ್ಕರನೆಂಬ ಪುಢಾರಿಯ ಸಂಚಿಗೆ ’ದೈವಾಂಶ ಸಂಭೂತ’ ಎನ್.ಟಿ.ಆರ್ ಅಧಿಕಾರ ಕಳೆದುಕೊಂಡಾಗ ಗೌರೀಬಿದನೂರು/ಹೊಸೂರು ಕಡೆಯಲ್ಲಿ ಸೂತಕದ ವಾತಾವರಣವಿತ್ತು. ಆಗ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಎನ್.ಟಿ.ಆರ್ ಪಕ್ಕದ ಹಿಂದೂಪುರಕ್ಕೆ ಆಗಮಿಸಿದ್ದಾಗ ಅರ್ಧ ಗೌರೀಬಿದನೂರು, ಹಿಂದೂಪುರದಲ್ಲಿತ್ತು. ಕನ್ನಡ ಭಾಷೆಗೆ, ಕನ್ನಡ ಚಿತ್ರಗಳಿಗೆ ಇಲ್ಲಿ ಏನಿದ್ದರೂ ತೆಲುಗಿನ ನಂತರದ ಸ್ಥಾನ. ಕಾಲೇಜಿನಲ್ಲೂ ಇಂತಹದ್ದೇ ವಾತಾವರಣ. ಆಂಧ್ರದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿತ್ತು. ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎಲ್ಲಾ ಬ್ಯಾನರ್ ಗಳ ಮೇಲೂ ರೆಡ್ಡಿ-ನಾಯುಡು-ರಾಜು ಎಂಬ ಹೆಸರುಗಳದ್ದೇ ಮೇಲುಗೈ. ಆಂಧ್ರದ ವಿದ್ಯಾರ್ಥಿಗಳು ದ್ವೀತೀಯ ಭಾಷೆಯಾಗಿ ತೆಲುಗನ್ನೇ ಆರಿಸಿಕೊಳ್ಳುತ್ತಿದ್ದರು.

ಆಂಧ್ರದಲ್ಲಿ ವೈ.ಎಸ್.ಆರ್. ಪ್ರವರ್ಧಮಾನಕ್ಕೆ ಬರುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳ ಮೇಲೆ ಇದರ ಪ್ರಭಾವ ಪ್ರಬಲವಾಗಿತ್ತು. ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಅವರ ಭಾವಚಿತ್ರವನ್ನು ಕತ್ತರಿಸಿ ತನ್ನ ಪುಸ್ತಕಗಳ ಮೇಲೆ ಅಂಟಿಸಿಕೊಳ್ಳುತ್ತಿದ್ದ ಪನಿಪಾಕಂ ಅರವಿಂದ ಕುಮಾರ್ ಎಂಬಾತ ನೆನಪಾಗುತ್ತಾನೆ. ನೀವುಗಳು ಏಕೆ ತೆಲುಗನ್ನೇ ಓದಬೇಕು, ಇಲ್ಲಿ ಇಂಗ್ಲೀಷ್-ಸಂಸ್ಕೃತ ಗಳೂ ಇದೆ’ ಎಂದು ಕೇಳಿದಾಗ, ’ಸ್ಯಾನ್ಸ್ಕ್ರೀಟ್ ಒದ್ದಂಡಿ..ಮನಮು ಬ್ರಾಮಿನ್ಸ್ ಕಾದು..” ಎಂದು ಉತ್ತರಿಸಿದ್ದ 🙂
ಮೇಷ್ಟ್ರ ಬಗ್ಗೆ ಕೇಳಿದ್ದ ಹಿಂದೂಪುರದ ಪ್ರವೀಣ್ ಕುಮಾರ್ ಎಂಬ ಹುಡುಗನೊಬ್ಬ ಸಂಸ್ಕೃತ ಆರಿಸಿಕೊಂಡ. ಅರವಿಂದ ಮತ್ತವನ ಪಟಾಲಂ ಇದಕ್ಕಾಗಿ ಅವನನ್ನು ವಿರೊಧಿಸಿದರು 🙂 ಯಾವ ಮಟ್ಟಕ್ಕೆಂದರೆ, ಊರಿನಲ್ಲಿ ಆ ಹುಡುಗನ ತಂದೆಯನ್ನೂ ಅರವಿಂದ ಭೇಟಿ ಮಾಡಿದ್ದನಂತೆ. ಪ್ರವೀಣನ ತಂದೆ ’ಅಂಕುಶಂ’ ಚಿತ್ರದ ರಾಮಿರೆಡ್ಡಿಯ ಶೈಲಿಯಲ್ಲಿಯೇ ಕೈಕಾಲು ತಿರುಗಿಸುತ್ತಾ ’ನನಗೆ ಹುಟ್ಟಿದ ಮಗ ಏನು ಓದಬೇಕು ಆನ್ನೋದನ್ನ ನೀನ್ಯಾರು ಕೇಳೋಕೆ’ ಎಂದು ಗುಟುರುಹಾಕಿದ್ದರಿಂದ ಅರವಿಂದನ ಮುಖಭಂಗವಾಗಿತ್ತು. ಎನ್.ಟಿ.ಆರ್ ರ ಅಂತರಂಗ ಭಕ್ತ ಅರವಿಂದನಿಗೂ, ’ಆಂಧ್ರ ಜೇಮ್ಸ್ ಬಾಂಡ್’ ಎಂದು (ಕು)ಖ್ಯಾತರಾಗಿದ್ದ ಕೃಷ್ಣನ ಭಕ್ತ ಪ್ರವೀಣನಿಗೂ ಸಣ್ಣ-ಪುಟ್ಟ ಕಾರಣಗಳಿಗೆ ವಾಗ್ಯುದ್ಧಗಳಾಗುತ್ತಿದ್ದವು. ನಮಗಂತೂ ಒಂದು ತೆಲುಗು ಸಿನಿಮಾ ನೋಡಿದ ಅನುಭವವಾಗುತ್ತಿತ್ತು. ಸಹವಾಸ ಸಂನ್ಯಾಸಿಯನ್ನು ಕೆಡೆಸಿದಂತೆ ನಮ್ಮ ಕನ್ನಡದ ನೆಲದಲ್ಲೇ ಹುಟ್ಟಿ ಬೆಳೆದ ಹಲವು ಹುಡುಗರೂ ಆಂಧ್ರಾವಾಲಗಳ ಜೊತೆಸೇರಿ ತೆಲುಗಿನ ಪಾಶಕ್ಕೆ ಸಿಲುಕಿದ್ದರು. ಫಣಿರಾಜನೆಂಬಾತ (ಚಿಂತಾಮಣಿಯವ) ’ಪ್ರೇಮಾಭಿಷೇಕಂ’ ನ ನಾಗೇಶ್ವರರಾವ್ ರನ್ನು ಆವಾಹಿಸಿಕೊಂಡು ಅವರಂತೆಯೇ ಕುಣಿದು ತೆಲುಗರ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದ್ದ. ಈತ ತೆಲುಗನ್ನೇ ದ್ವಿತೀಯ ಭಾಷೆಯಾಗಿ ಆರಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜನ್ಮದಿನದಂದು ಕುಡಿದು ಚಿತ್ತಾಗಿ ’ಮಳ್ಳಿ ಪುಟ್ಟಿತೆ ನಾಗೇಶ್ವರರಾವ್ ಇಂಟಿಲೋ ಪುಟ್ತಾನ್ ರಾ’ (ಮತ್ತೆ ಹುಟ್ಟಿದರೆ ನಾಗೇಶ್ವರ್ ರಾವ್ ಮನೆಯಲ್ಲೇ ಹುಟ್ಟುತ್ತೇನೆ) ಎಂದು ಈತ ಆರ್ಭಟಿಸಿದ್ದನ್ನು ಕಂಡವರು ಧನ್ಯರಾಗಿದ್ದರು.

ಫಣಿಯ ತಾಯಿ ಮದನಪಲ್ಲಿಯವರು…ತಂದೆ ತೆಲುಗು ಮಾತೃಭಾಷೆಯವರಾದರೂ ಕನ್ನಡದವರು.ಮೂಲತಃ ಚಿಂತಾಮಣಿ ಯವರು… ಕನ್ನಡದ ಬಗ್ಗೆ ಸಹಜವಾಗಿಯೇ ತಂದೆಗೆ ಮೃದುಧೋರಣೆ. ಫಣಿಯ ತಾಯಿ ಇದಕ್ಕೊಂದು ಅಪವಾದ. ಫಣಿ ಒಮ್ಮೆ ಆಕೆಯನ್ನು ಪರಿಚಯಿಸುತ್ತಾ ’ನಮ್ ತಾಯಿ’ ಎಂದು ಹೇಳಿ ಮುಗಿಸುವಷ್ಟರಲ್ಲೇ ಆಕೆ ’ಮಾ ಊರು ಮದನಪಲ್ಲಿ ಪ್ಪಾ..’ ಎಂದು ತಮ್ಮ ಊರಾಭಿಮಾನ ತೋರ್ಪಡಿಸಿಕೊಂಡಿದ್ದರು 🙂

ಇಂತಹ ತೆಲುಗಿಷ್ಟ ವಾತಾವರಣದಲ್ಲಿ ಮೇಷ್ಟ್ರು ಸಂಸ್ಕೃತ ವಿಭಾಗವನ್ನು ಉಳಿಸಿ ಪೋಷಿಸಿದ್ದು ನಿಜಕ್ಕೂ ಪ್ರಶಂಸಾರ್ಹ. ಮೇಷ್ಟ್ರ ವಿರೊಧಿಗಳ ದೊಡ್ಡ ಬಣವೇ ಇತ್ತು. ಮೇಷ್ಟ್ರು ಪಿ.ಯು. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗ ತರಗತಿಯೊಳಗೆ ಅತಿಕ್ರಮವಾಗಿ ನುಗ್ಗಿ ಅಸಭ್ಯವಾಗಿ ಕೂಗು ಹಾಕುತ್ತಿದ್ದ ಅನಾಗರಿಕರಿಗೇನೂ ಬರವಿರಲಿಲ್ಲ. ಆಭಾಸಕಾರಿಯಾದ, ಒಮ್ಮೊಮ್ಮೆ ಭಯತರಿಸುತ್ತಿದ್ದ ಇಂತಹ ಸಂದರ್ಭಗಳಲ್ಲಿ ಮೇಷ್ಟ್ರು ತೋರಿಸುತ್ತಿದ್ದ ಅಪಾರ ಸಂಯಮವನ್ನು ನೆನೆಸಿದಾಗಲೆಲ್ಲಾ ಅಚ್ಚರಿಯಾಗುತ್ತದೆ. ಸುಮ್ಮನೆ ಕೂಗು ಹಾಕುವವರು ಕೈಲಾಗದವರು ಎಂಬುದು ಮನಃಪಟಲಕ್ಕಿಳಿದಿದ್ದೇ ಆ ದಿನಗಳಲ್ಲಿ. ಸಂಸ್ಕೃತ ಬೋಧಿಸುವ ಮೇಷ್ಟ್ರು ’ಸಮುದಾಯ’ ದವರೊಂದಿಗೆ ಗುರುತಿಸಿಕೊಳ್ಳುತ್ತಿದ್ದು ಅವರ ಮೇಲಿನ ರೊಚ್ಚಿಗೆ ಕಾರಣವಾಗಿತ್ತು. ಅಪಾರ ಸ್ಥೈರ್ಯದ ಮೇಷ್ಟ್ರು ನಿರ್ಭೀತರಾಗಿಯೇ ಇದ್ದುಬಿಟ್ಟರು.
ಬಹಳ ಮಂದಿಗೆ ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯದ ಪ್ರೀತಿ ಉಕ್ಕಿಸಿದ್ದು ಮೇಷ್ಟ್ರ ಮತ್ತೊಂದು ಸಾಧನೆ.

ಮಾಸ್ತಿಯವರಿಗೆ ಜ್ಞಾನಪೀಠ ಬಂದ ಹೊಸತು. ಕ್ರೈಸ್ಟ್ ಕಾಲೇಜಿನವರು ’ಚಿಕವೀರ ರಾಜೇಂದ್ರ – ಒಂದು ಪ್ರಾಯೋಗಿಕ ವಿಮರ್ಶೆ’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದರು. ’ಚಿಕವೀರ ರಾಜೇಂದ್ರ’ ದ ಪುಸ್ತಕ ಕೊಟ್ಟ ಮೇಷ್ಟ್ರು ’ ಪ್ರಯತ್ನಿಸು ನೋಡೊಣ’ ಎಂದು ಹುರಿದುಂಬಿಸಿದರು. ವಿಮರ್ಶೆಯ ಲವಲೇಷವೂ ತಿಳಿಯದಿದ್ದ ನನಗೆ ಚಿಂತೆಯಾಗತೊಡಗಿತು. ’ರಕ್ತ ರಾತ್ರಿ’, ’ಕಂಬನಿಯ ಕುಯಿಲು’ ಓದಿದ್ದ ’ಅನುಭವ’ ವಿತ್ತು. ’ಲಂಕೇಶ್ ಪತ್ರಿಕೆ’ ಯಲ್ಲಿನ ’ಟೀಕೆ-ಟಿಪ್ಪಣಿ’ ಓದಿ ಮುದಗೊಳ್ಳುತ್ತಿದ್ದ ದಿನಗಳವು. ’ಚಿಕವೀರ ರಾಜೇಂದ್ರ’ನೇ ಬೇರೆ ಎಂಬುದು ಮನವರಿಕೆಯಾಗತೊಡಗಿತು. ’ವಿಮರ್ಶೆ’ ಹೆಸರಿನಲ್ಲಿ ಒಂದೆರಡು ಪುಟ ಗೀಚಿದೆ. ಮೇಷ್ಟ್ರಿಗೆ ತೋರಿಸಲು ಭಯವಾಯಿತು. ಸುಮ್ಮನಿದ್ದೆ. ಅಷ್ಟರಲ್ಲಿ ಐಚ್ಚಿಕ ಭಾಷೆಯಾಗಿ ಕನ್ನಡ ತೆಗೆದುಕೊಂಡಿದ್ದ ಸ್ನೇಹಿತನಿಂದ ’ಸಂಕ್ರಮಣ’ ಎಂಬ ಸಾಹಿತ್ಯಕ ಪತ್ರಿಕೆಯೊಂದರ ಬಗ್ಗೆ ತಿಳಿಯಿತು. ಚಂದ್ರಶೇಖರ ಪಾಟೀಲರೇ ’ಚಂಪಾ’ ಎಂದು ತಿಳಿದಿದ್ದು ಆಗಲೇ 🙂 . ’ಈ ಸಲದ ಸಂಕ್ರಮಣ ಓದು. ಚಿಕವೀರರಾಜೇಂದ್ರ ದ ಬಗ್ಗೆ ಬರೆದಿದ್ದಾರೆ’ ಎಂದು ಸ್ನೇಹಿತ ಶಿಫಾರಸ್ಸು ಮಾಡಿದ. ’ಸಂಕ್ರಮಣ’ದ ಪ್ರತಿ ತಂದು ಓದಿದೆ. ಚಂಪಾ ಮಾಸ್ತಿಯವರ ಬಗ್ಗೆ ಕಾರಿಕೊಂಡಿದ್ದರು. ಅವರ ಜೊತೆಗೆ ಅನಂತಮೂರ್ತಿ-ಭೈರಪ್ಪ-ಗುಂಡ್ಮಿ ಚಂದ್ರಶೇಖರ ಐತಾಳ ಎಲ್ಲರನ್ನೂ ಅನವಶ್ಯಕವಾಗಿ ಎಳೆದುತಂದು ಶಬ್ದಾಸ್ತ್ರಗಳಿಂದ ಕತ್ತರಿಸಿಹಾಕಿದ್ದರು. “ಮಾಸ್ತಿ ಒಂದು ತುದಿ..ಅನಂತಮೂರ್ತಿ ಒಂದು ತುದಿ..ಇವರ ಮಧ್ಯೆ ಈ ಭೈರಪ್ಪ-ಅಡಿಗಾದಿಗಳು..ಎಲ್ಲರಲ್ಲೂ ತುಂಬಿರುವುದು ಬರಿಯ ವಿಷ” ಎಂದೇನೋ ಚಂಪಾ ಬರೆದಿದ್ದ ನೆನಪು. ’ಸಂಕ್ರಮಣ’ದ ಆ ಸಂಚಿಕೆಯಲ್ಲಿ ಬರೆದಿದ್ದ ಬಹುತೇಕ ’ವಿಮರ್ಶೆ’ಗಳು ಹೆಚ್ಚು-ಕಡಿಮೆ ಒಂದೇ ಧಾಟಿಯಲ್ಲಿದ್ದವು. ಇವುಗಳಲ್ಲಿ ’ಪ್ರಾಯೋಗಿಕ ವಿಮರ್ಶೆ’ ಯಾವುದು ಎಂಬ ಜಿಜ್ಞಾಸೆ ಮೂಡಿತು.
ನಾನು ಬರೆಯಬೇಕಾದ ’ವಿಮರ್ಶೆ’ಯನ್ನು ಪಕ್ಕಕ್ಕಿರಿಸಿ ಚಂಪಾಗೆ ಒಂದು ಕಾಗದ ಬರೆದೆ. (ನಂತರ ಹರಿದು ಹಾಕಿದೆ). ಆ ’ಪತ್ರ’ವನ್ನೊಮ್ಮೆ ಮೇಷ್ಟ್ರಿಗೆ ತೋರಿಸಿದೆ. ನಕ್ಕೂ ನಕ್ಕೂ ಬಿದ್ದರು. ’ಅಲ್ಲ ಕಣಯ್ಯ..ಇದೆಲ್ಲಾ ಒಂದು ವಿಮರ್ಶೆನಾ’ ಎನ್ನುತ್ತಾ ವಿಮರ್ಶೆಯೆಂಬ ಪರಿಕಲ್ಪನೆ, ಅದರ ರೂಪು-ರೇಷೆ, ವಿಮರ್ಶೆ ಮಾಡಲು ಬೇಕಾದ ಸಿದ್ಧತೆ, ಪೂರಕ ಅಧ್ಯಯನ, ವಿಮರ್ಶಿಸಲು ಬೇಕಾದ ಮನಃಸ್ಥಿತಿಗಳ ಬಗ್ಗೆ ಸರಳವಾಗಿ ಒಂದು ಉಪನ್ಯಾಸ ಕೊಟ್ಟರು. ಕಣ್ಣು ತೆರೆದಂತಾಯಿತು.

ಆಗಾಗಲೇ ಜನವರಿ ಆರಂಭವಾಗಿತ್ತು. ’ಎಂಟ್ರನ್ಸ್’ ಪರೀಕ್ಷೆ ಎಂಬ ಹೊಸ ತೊಡಕನ್ನು ಪರಿಚಯಿಸಿದ್ದರು. ಚಂಪಾ-ಸಂಕ್ರಮಣವನ್ನೆಲ್ಲಾ ಪಕ್ಕಕ್ಕಿರಿಸಲೇ ಬೇಕಾಯಿತು. ಅಂತೂ ’ವಿಮರ್ಶೆ’ ಬರೆಯಲಾಗಲಿಲ್ಲ. ಆದರೆ ಸಾಹಿತ್ಯಲೋಕವನ್ನು ಮೇಷ್ಟ್ರು ಪರಿಚಯಿಸಿಬಿಟ್ಟರು. ಪುಸ್ತಕ ಪ್ರೀತಿ ತರಿಸಿ ಉಪಕರಿಸಿದರು. ’ಲಂಕೇಶ್ ಪತ್ರಿಕೆ’ ಯ ’ಟೀಕೆ-ಟಿಪ್ಪಣಿ’ ಮಾತ್ರ ಮಿಸ್ ಮಾಡಬೇಡ’ ಎಂಬ ಅಮೂಲ್ಯ ಸಲಹೆಯಿತ್ತರು. ಅದನ್ನು ನಾನು ಪ್ರಾಮಾಣಿಕವಾಗಿ ಪಾಲಿಸಿದೆ.

ಸಿನಿಮಾ-ರಂಗ ಚಟುವಟಿಕೆಗಳನ್ನು ತಮ್ಮ ಜೀವನ ಒಂದು ಭಾಗವಾಗಿಯೇ ಮಾಡಿಕೊಂಡರು. ’ಸಮುದಾಯ’ದ ತಂಡದೊಂದಿಗೆ ಹೊಸೂರಿನಲ್ಲಿ, ಸಿದ್ಧಲಿಂಗಯ್ಯನವರ ’ಪಂಚಮ’ ನಾಟಕದ ಪ್ರದರ್ಶನ ಏರ್ಪಡಿಸಿದ್ದರು. (ಎರಡನೆಯ ಚಿತ್ರ…ಮೇಷ್ಟ್ರ ಜೊತೆಯಿರುವವರು ಸಿದ್ದಲಿಂಗಯ್ಯ ಮತ್ತು ಆರ್.ಆರ್.ಕೆ – ರಂಗಾರೆಡ್ಡಿ ಕೋಡಿರಾಂಪುರ) ಹೊಸೂರಿಗೆ ಬರುವ ಕೆಲವೇ ಗಂಟೆಗ ಮುಂಚೆ ತರಗತಿಯಲ್ಲಿ ’ಗಾರ್ಗಿ-ಯಾಜ್ಞ್ಯವಲ್ಕ್ಯ’ರ ಸಂವಾದವನ್ನು ಪಾಠ ಮಾಡಿದ್ದ ಮೇಷ್ಟ್ರು, ಗಾರ್ಗಿ ಯನ್ನು ಮನಃಪಟಲಕ್ಕಿಳಿಸಿದ್ದರು.
ಪಿ.ಯು.ಸಿ ನಂತರ ಬೆಂಗಳೂರು ಸೇರಿದ ಮೇಲೂ ಮೇಷ್ಟ್ರು ಬಹಳ ನೆನಪಾಗುತ್ತಿದ್ದರು. ನೇರ ಮಾತು-ನಡೆಗಳಿಂದ ತೊಂದರೆಗೂ ಒಳಗಾದರೆಂದು ತಿಳಿದಾಗ ನೋವಾಗುತ್ತಿತ್ತು. ನಾವು ಬೆಂಗಳೂರು ಸೇರಿದಮೇಲೆ ಅದೊಂದು ದಿನ, ಮತ್ತೊಬ್ಬ ಆತ್ಮೀಯ ಮೇಷ್ಟ್ರು ಬಿ.ಜಿ.ಎಂ. ರ ಮೇಲೆ ಹಲ್ಲೆ ನಡೆದದ್ದನ್ನು ’ಲಂಕೇಶ್ ಪತ್ರಿಕೆ’ಯಲ್ಲಿ ಓದಿದಾಗ ಹೌಹಾರಿದೆ. ಬಿ.ಜಿ.ಎಂ ರವರಂತೆಯೇ ಈ ಮೇಷ್ಟ್ರೂ ಉದ್ಧಟರ ’ಹಿಟ್ ಲಿಸ್ಟ್’ ನಲ್ಲಿದ್ದರೆಂಬುದು ತಿಳಿದಿದ್ದರೂ, ಹಲ್ಲೆಯ ಹಂತ ಮುಟ್ಟಿರಲಿಲ್ಲ. ಮೇಷ್ಟ್ರ ಬಗ್ಗೆ ಗಾಬರಿಯಾಗುತ್ತಿತ್ತು. ಗೌರೀಬಿದನೂರಿನಂತಹ ಊರಿನಲ್ಲಿ ಸಜ್ಜನರಿರುವುದೇ ತಪ್ಪೇನೋ ಎಂದೆನೆಸಿತು.

ತಾವು ಮುಖಾಮುಖಿಯಾದ ದೌಷ್ಟ್ಯ-ದರ್ಪ-ಠೇಂಕಾರಗಳನ್ನು ಸಂಸ್ಕೃತದ ಸಾತ್ವಿಕತೆ-ಕನ್ನಡದ ಸಹನೆಯಿಂದ ಎದುರಿಸಿದ ಮೇಷ್ಟ್ರು ಬಸವನಗುಡಿ ಸೇರಿದರು. ಸ್ನೇಹಿತರ ಮೂಲಕ ವಿಷಯ ತಿಳಿದು ಕಾಲೇಜಿನಲ್ಲಿ ಭೇಟಿಮಾಡಿದ್ದೆ. ಅದೇ ಆತ್ಮೀಯತೆಯಿಂದ ಮಾತನಾಡಿಸಿದ್ದರು.

ವೃತ್ತಿಯಿಂದ ಮೇಷ್ಟ್ರು ನಿವೃತ್ತರಾಗಿದ್ದಾರೆ. ಅವರ ಸಾಹಿತ್ಯಕ-ರಂಗ ಚಟುವಟಿಕೆಗಳು ನಡೆಯುತ್ತಲಿರಲಿ. ಅವರ ಮಾರ್ಗದರ್ಶನ ಸದಾ ಇರಲಿ.

(ಚಿತ್ರಗಳು ಮೇಷ್ಟ್ರ ಸಂಗ್ರಹದಿಂದ)

‍ಲೇಖಕರು Admin

June 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: