ಪಿ ಪಿ ಉಪಾಧ್ಯ ಸರಣಿ ಕಥೆ 52 – ಆದಿಯನ್ನು ನೋಡಲು ಓಡೋಡಿ ಬಂದ…

ಪಿ ಪಿ ಉಪಾಧ್ಯ

ಯಾವ ಊರಲ್ಲಿದ್ದರೂ ರಜೆಯೆಂದು ಗಿಳಿಯಾರಿಗೆ ಬಂದಾಗ ಶಂಕ್ರ ಆದಿಯನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಒಂದು ದಿನದ ಮಟ್ಟಿಗೆ ಊರಿಗೆ ಬಂದರೂ ತಿರುಗಿ ಬಸ್ಸು ಹತ್ತುವ ಮೊದಲಾದರೂ ಆದಿಯನ್ನು ನೋಡಿ ಮಾತನಾಡಿ ಹೋಗುತ್ತಿದ್ದ. ಅಮೆರಿಕಕ್ಕೆ ಹೋದ ಮೇಲೂ ಅದೇ ಮುಂದುವರಿದಿತ್ತು. ಅಮೆರಿಕಕ್ಕೆ ಹೋದ ಸುರುವಿನ ವರ್ಷಗಳಲ್ಲಿ ಅನಂತನಿದ್ದ ಕಂಪೆನಿಯಲ್ಲಿಯೇ ಟ್ರೈನೀ ಆಗಿ ಸೇರಿದ್ದ.

ಅನಂತ ಕಂಪೆನಿಯ ಖಾಯಂ ಉದ್ಯೋಗಿ. ಅದೂ ಇಂಡಿಯಾದಿಂದ ಹೋಗುವ ಮಂದಿ ಸಾಮಾನ್ಯವಾಗಿ ತಲುಪಲು ಸುಮಾರು ಹತ್ತು ವರ್ಷಗಳಷ್ಟು ಸಮಯ ತೆಗೆದುಕೊಳ್ಳುವಷ್ಟು ಉನ್ನತ ಸ್ಥಾನದಲ್ಲಿ. ಶಂಕ್ರ ಅದೇ ಕಂಪೆನಿಯಲ್ಲೇ ಟ್ರೈನೀ ಆಗಿ ಹೋಗಿದ್ದು. ಒಂದೇ ಊರಿನವರು ಬೇರೆ. ಒಬ್ಬರಿಂದೊಬ್ಬರು ತುಂಬ ಸಂಪರ್ಕದಲ್ಲಿದ್ದರು. ಆದರೆ ಶಂಕ್ರ ಮಾತ್ರ ತುಸು ಜಾಗ್ರತೆ ವಹಿಸಿದ್ದ. ತಪ್ಪಿಯೂ ಅನಂತನೊಡನೆ ಅವನಣ್ಣನ ಸಹಾಯದಿಂದಲೇ ತಾನು ಇಷ್ಟು ಮುಂದೆ ಬರುವಂತಾದದ್ದು ಎಂದು ಹೇಳಿರಲಿಲ್ಲ.

ಮನೆಯವರೊಂದಿಗೆ ಅನಂತನ ಸಂಬಂಧ ಅಷ್ಟು ಚನ್ನಾಗಿಲ್ಲ ಎನ್ನುವುದರ ತುಸು ಅರಿವು, ಜೊತೆಗೆ ಅಮೆರಿಕಕ್ಕೆ ಹೊರಟು ನಿಂತ ಅವ ತನ್ನ ತಮ್ಮನಿರುವ ಕಂಪೆನಿಗೇ ಟ್ರೈನೀ ಆಗಿ ಹೋಗುತ್ತಿರುವುದು ಎಂದು ತಿಳಿದ ಆದಿಯೂ ಹೇಳಿದ್ದ ಅಪ್ಪಿ ತಪ್ಪಿಯೂ ನಾನು ನಿನಗೆ ಸಹಾಯ ಮಾಡಿದ್ದು ಎಂದು ಅನಂತನ ಜೊತೆಗೆ ಮಾತ್ರ ಹೇಳಬೇಡ ಮಾರಾಯ’ ಎಂದದ್ದು ಎರಡೂ ಸೇರಿ ಶಂಕ್ರ ಆ ಬಗ್ಗೆ ಜಾಗ್ರತೆ ವಹಿಸುವಂತೆ ಮಾಡಿದ್ದುವು. ಆದರೆ ಅದೇ ಶಂಕ್ರ ಊರಿಗೆ ಬಂದಾಗಲೆಲ್ಲ ತಪ್ಪದೆ ಆದಿಯೊಂದಿಗೆ ತನ್ನ ಹೆಚ್ಚಿನ ಸಮಯ ಕಳೆಯುತ್ತಿದ್ದ ಅಷ್ಟೇ ಅಲ್ಲ, ಅಲ್ಲಿ ಅನಂತ ಹೆಸರು ಮಾಡುತ್ತಿದ್ದುದರ ಬಗ್ಗೆಯೂ ವಿವರವಾಗಿ ಹೇಳುತ್ತಿದ್ದ. ಅದೇ ಶಂಕ್ರ ನಿನ್ನೆಯಷ್ಟೆ ಅಮೆರಿಕದಿಂದ ಬಂದಿದ್ದ.

ಕಳೆದ ಎರಡು ವರ್ಷಗಳಿಂದ ಊರಿಗೆ ಬಂದಿರದ ಅವ ಮಾರನೇ ದಿನವೇ ಆದಿಯನ್ನು ನೋಡಲು ಓಡೋಡಿ ಬಂದ. ಆದಿ ಅಣ್ಣ, ನನಗೆ ಅಮೆರಿಕದಲ್ಲಿಯೇ ಬೇರೆ ಒಂದು ಕಂಪೆನಿಯಲ್ಲಿ ಖಾಯಂ ಕೆಲಸ ಸಿಕ್ಕಿದೆ. ಒಳ್ಳೆಯ ಕೆಲಸ. ಇನ್ನೊಂದು ವಾರದೊಳಗೆ ಹೋಗಿ ಸೇರಿಕೊಳ್ಳಬೇಕು. ಅದನ್ನೇ ನಿಮಗೆಲ್ಲ ಹೇಳಿ ಹೋಗೋಣವೆಂದು ಬಂದೆ. ಒಂದು ಐದು ಹತ್ತು ವರ್ಷ ಕೆಲಸ ಮಾಡಿ ಮತ್ತೆ ನಮ್ಮ ದೇಶಕ್ಕೆ ಬಂದು ಬಿಡಬಹುದು. ಸಂಬಳವೂ ಹಾಗೆಯೇ ಚನ್ನಾಗಿದೆ. ಐದು ಹತ್ತು ವರ್ಷಗಳ ಆ ಸಂಪಾದನೆಯಲ್ಲಿ ನಾನು ಈ ದೇಶಕ್ಕೆ ಬಂದ ಮೇಲೆ ಮತ್ತೇನೂ ಕೆಲಸ ಮಾಡಬೇಕೆಂದೇನೂ ಇಲ್ಲ. ಅಷ್ಟು ದುಡ್ಡು ಒಟ್ಟಾಗಿರುತ್ತೆ’

ಬಹಳ ಒಳ್ಳೆಯದಾಯ್ತು. ದೇವರು ಯಾವಾಗಲೂ ನಿನ್ನನ್ನು ಹೀಗೇ ಇಟ್ಟಿರಲಿ. ಚನ್ನಾಗಿರು’ ಹೀಗೆ ಲೋಕಾಭಿರಾಮದ ಮಾತನ್ನಾಡುತ್ತ ತನ್ನ ಮಾಮೂಲಿಯಷ್ಟು ಸಮಯ ಕಳೆದ ಅವ ಇನ್ನೂ ಏನನ್ನೋ ಹೇಳಲು ಪ್ರಯತ್ನಿಸುವಂತೆ ಕಂಡಿತು ಆದಿಗೆ. ‘ಯಾಕೆ ಶಂಕ್ರ ಅಮೆರಿಕದಲ್ಲಿ ಕೆಲಸ. ಕೈ ತುಂಬ ಸಂಬಳ ಅನ್ನುತ್ತೀಯ. ಇನ್ನೇನು ಬೇಕು...’ ಎಂದ ಆದಿ ತುಸು ತಡೆದು ‘ಅರ್ಜೆಂಟಿಗೆ ಹಣವೇನಾದರೂ ಬೇಕೇ?’ ಎಂದು ಕೇಳಿದ. ಛೆ ಛೆ… ಬೇಡ. ನೀವು ಈ ವರೆಗೆ ಮಾಡಿದ ಸಹಾಯವೇ ಬೇಕಾದಷ್ಟಾಗಿದೆ…’
ಮತ್ತೆ’ ‘ಅಲ್ಲ ಹೇಗೆ ಹೇಳುವುದೆಂದು ಗೊತ್ತಾಗುವುದಿಲ್ಲ. ಅದೇ ಅನಂತಣ್ಣನ ವಿಚಾರ...’ ಆದಿಗೆ ಕುತೂಹಲವುಂಟಾದರೂ ತೋರಿಸಿಕೊಳ್ಳಲಿಲ್ಲ. ಅವನ ಸ್ವಭಾವವೇ ಹಾಗೆ. ಬೇರೆಯವರ ಬಗ್ಗೆ ಎಂದಿಗೂ ತೀರ ಉತ್ಸಾಹ ತೋರಿಸಲಾರ. ಅದೂ ಅನಂತನ ಬಗ್ಗೆಯಂತೂ ಖಂಡಿತಾ ತೋರಿಸಲಾರ. ಹಾಗೆಂದು ಮಾಡುವ ಕೆಲಸದಲ್ಲಿ ಅದೂ ಅವನು ಕೇಳಿಸಿಕೊಂಡವರ ಬಗ್ಗೆ ಮಾಡುವ ಸಹಾಯವೂ ಇರಬಹುದು ಎಂದಿಗೂ, ಯಾವುದಕ್ಕೂ ಚ್ಯುತಿ ಬಾರದು. ಶಂಕ್ರ ಮುಂದುವರಿಸಿದ. ಅಲ್ಲ ಅನಂತಣ್ಣ ಅಲ್ಲಿಯೇ ಸೆಟ್ಲ್ ಅಗುವ ಪ್ಲಾನ್ ಹಾಕಿದ್ದಾರೆ ಎಂದು ಕಾಣಿಸುತ್ತದೆ.

ಎರಡು ವರ್ಷಗಳಿಂದ ಒಂದು ಹೆಣ್ಣಿನ ಜೊತೆ ಜೀವನ ಮಾಡುತ್ತಿದ್ದಾರೆ. ಅಲ್ಲಿಯದೇ ಬಿಳೀ ಹೆಂಗಸು. ಮದುವೆ ಮಾಡಿಕೊಂಡಲ್ಲ. ಅಲ್ಲೆಲ್ಲ ‘ಲಿವಿಂಗ್ ಟುಗೆದರ್’ ಅಂತ ಗಂಡ ಹೆಂಡತಿಯ ಹಾಗೇ ಬದುಕುತ್ತಾರೆ… ಹಾಗೇ ಅನಂತಣ್ಣನೂ. ಅದು ಬೇರೆ ಈಗ್ಗೆ ಒಂದು ಆರು ತಿಂಗಳ ಹಿಂದೆ ಹೊಸ ಮನೆಯೊಂದನ್ನು ಮಾಡಿ ಇಬ್ಬರೂ ಅಲ್ಲಿಯೇ ಇದ್ದಾರೆ. ಆ ಸಂಬಂಧ ಅವರ ಫ್ರೆಂಡ್ಸ್ ಎಲ್ಲರನ್ನೂ ಕರೆದು ಪಾರ್ಟಿ ಮಾಡಿದ್ದಾರೆ. ನಾನೂ ಅವರ ಜೊತೆ ಬಳಕೆ ಇದ್ದವನೇ ಆದರೂ ನನ್ನನ್ನು ಮಾತ್ರ ಕರೆಯಲಿಲ್ಲ. ನನ್ನ ಫ್ರೆಂಡ್ ಒಬ್ಬ ಉತ್ತರ ಭಾರತದವ ಹೋಗಿದ್ದ. ಅವ ಹೇಳಿದ’
ಆದಿಗೆ ಶಾಕ್. ಆದರೂ ತೋರಿಸಿಕೊಳ್ಳಲಿಲ್ಲ. ‘ಇರಲಿ ಬಿಡು ಅವನಿಗೆ ಹೇಗೆ ಸರಿ ಕಾಣುತ್ತದೋ ಹಾಗೆ ಮಾಡಲಿ ಅಲ್ಲವಾ’ ಶಂಕ್ರ ನಿರೀಕ್ಷೆ ಮಾಡಿದ್ದ ಮಾತೇ. ಆದರೂ ಮಾತಿನ ಹಿಂದಿನ ನೋವು ಶಂಕ್ರನಿಗೆ ಅರಿವಾಗಿತ್ತು. ತಾನು ಆ ಬಗ್ಗೆ ಹೇಳಿ ತಪ್ಪು ಮಾಡಿದೆನೋ ಅನ್ನಿಸಿತು. ಆದಿಯಣ್ಣ ನಾನು ಹೇಳಬಾರದಿತ್ತೇನೋ... ನನ್ನನ್ನು ಕ್ಷಮಿಸಿ ಬಿಡಿ’ ಎಂದ.ಛೆ.. ಛೆ… ಹಾಗೇನಿಲ್ಲ. ನಿನಗೆ ತಿಳಿದದ್ದನ್ನು ನೀನು ಹೇಳಿದೆ. ಅದರಲ್ಲಿ ತಪ್ಪೇನಿದೆ ಎಂದ ಆದಿ. ಆದರೂ ‘ಸಾರಿ.. ಸಾರಿ..’ ಎನ್ನುತ್ತಲೇ ಅಲ್ಲಿಂದ ಹೋಗಿದ್ದ ಶಂಕ್ರ.

ಆದಿಗೆ ತಲೆ ಸಿಡಿಯಲು ಪ್ರಾರಂಭವಾಯ್ತು. ಈ ಹಿಂದೆ ಅನಂತನ ಬಗ್ಗೆ ಸುದ್ದಿ ತಿಳಿದು ಬಂದಾಗೆಲ್ಲ ಇರಲಿ ಒಂದು ದಿನ ಬದಲಾದಾನು. ಅಣ್ಣ ತಮ್ಮಂದಿರಿಗಾಗಿ ಅಲ್ಲವಾದರೂ ಹೆತ್ತ ತಾಯಿಗಾಗಿಯಾದರೂ ಇಲ್ಲಿನ ಸಂಬಂಧವನ್ನು ಉಳಿಸಿಕೊಳ್ಳಬಹುದು ಎಂದುಕೊಂಡಿದ್ದ ತನ್ನ ಅನಿಸಿಕೆ ತೀರಾ ತಪ್ಪಾಗಿದ್ದು ಎನ್ನಿಸತೊಡಗಿತು.

ಈಗ ಈ ವಿಷಯವನ್ನು ಮನೆಯವರಿಗೆ ಹೇಳಬೇಕೇ ಬೇಡವೇ ಎನ್ನುವ ಜಿಜ್ಞಾಸೆಯಲ್ಲಿ ಬಿದ್ದ. ಎಲ್ಲರಿಗೂ ನೋವು ಕೊಡುವ ವಿಷಯ. ಇಲ್ಲಿಯ ವರೆಗೆ ಹೇಗೆ ಅವನ ವಿಚಾರಗಳು ತಿಳಿಯದೆಯೇ ಇದ್ದರೋ ಹಾಗೆಯೇ ಇರುತ್ತಾರೆ. ಇದ್ದುಬಿಡಲಿ ಎಂದುಕೊಂಡರೂ ಮರುಕ್ಷಣವೇ ಅನ್ನಿಸಿತು. ಹೇಳದಿದ್ದರೆ ತಪ್ಪಾಗುತ್ತದೆ. ಮನೆಯ ಮಗನೊಬ್ಬ ಮದುವೆ ಮಾಡಿಕೊಂಡಿದ್ದಾನೆ ಎನ್ನುವುದು ಮನೆಯವರಿಗೆ ತಿಳಿಯುವುದು ಬೇಡವೇ. ತನಗೆ ಗೊತ್ತಾಗಿಯೂ ಸುಮ್ಮನಿದ್ದರೆ ಹೇಗೆ. ತೀರ ಗೊಂದಲದಲ್ಲಿ ಬಿದ್ದ.

ಕೊನೆಗೂ ಮನೆಯವರಿಗೆ ತಿಳಿಸುವುದೇ ಸರಿ ಎಂದೆನಿಸಿದ ಆದಿ ವಾರಾಂತ್ಯಕ್ಕೆಂದು ಅಂತ್ಯ ಮನೆಗೆ ಬಂದಾಗಲೇ ಹೇಳುವುದೆಂದುಕೊಂಡ. ಅದಕ್ಕೆ ಸರಿಯಾಗಿ ಅಂತ್ಯ ಶನಿವಾರ ಸಂಜೆ ಮನೆಗೆ ಬಂದಿದ್ದ. ಮನೆಗೆ ಬಂದಾಗ ಅಂದೇ ಹೊರಡಬೇಕೆಂದಿದ್ದರೂ ರಾತ್ರಿ ಮನೆಯಲ್ಲಿ ಊಟಮಾಡಿಕೊಂಡೇ ಹೋಗುವವನು ಅವನು.

ಅಮ್ಮನ ಮಾರ್ಗದರ್ಶನದಲ್ಲಿ ಅಡಿಗೆಯವಳು ಮಾಡುವ ಅಡಿಗೆಯೆಂದರೆ ಅವನಿಗೆ ಇಷ್ಟ. ಅದೂ ಅಲ್ಲದೆ ಅಂತ್ಯ ಊಟಕ್ಕೆ ಇರುತ್ತಾನೆಂದಾದರೆ ಆ ತಾಯಿಯೂ ಅಷ್ಟೇ. ತಾನೇ ಖುದ್ದಾಗಿ ನಿಂತು ಅಡಿಗೆಯವಳಿಗೆ ಸಲಹೆ ಕೊಡುತ್ತಾ ಕೆಲವೊಮ್ಮೆ ತಾನೇ ಸಟ್ಟುಗ ಹಿಡಿಯುವದನ್ನೂ ಮಾಡುತ್ತ ಅಡಿಗೆಯ ರುಚಿಯನ್ನು ಹೆಚ್ಚಿಸುತ್ತಿದ್ದಳು. ಹಾಗಾಗಿ ಅಂದೇ ತಿರುಗಿ ಹೋಗುವ ತುರ್ತಿದ್ದರೂ ಅಂತ್ಯ ಮನೆಯಲ್ಲಿಯೇ ಊಟ ಮುಗಿಸಿಕೊಂಡೇ ಹೋಗುತ್ತ್ತಿದ್ದ.

| ಇನ್ನು ನಾಳೆಗೆ |

‍ಲೇಖಕರು Admin

June 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: