ಮೇಷ್ಟ್ರು ಅಂದ್ರೆ ಅಷ್ಟೇ ಸಾಕೆ?

ಸದಾಶಿವ ಸೊರಟೂರು

‘ಗುರು ದೊಡ್ಡ ಹೆಸರು, ನಾನು ಸಂಬಳದ ಉಪಾಧ್ಯಾಯ’ ಅಂತಾರೆ ದ.ರಾ ಬೇಂದ್ರೆಯವರು.  ಮೇಷ್ಟ್ರುಗಳು ಗುರುವಿನ ಪಟ್ಟ ಬಿಡಿಸಿಕೊಂಡು ತುಂಬಾ ದಿನಗಳೇ ಆದವು. ಮೇಷ್ಟ್ರು ಆದವನು ಸಮಾಜದ ಮಧ್ಯದಿಂದಲೇ ಬಂದವನೇ ಹೊರೆತು ಅವನು ಎಲ್ಲಿಂದಲೋ ಅವತರಿಸಿದವನಲ್ಲ. ಹಾಗಾಗಿ ಇವತ್ತಿನ ಸಮಾಜದಂತೆ ಅವನು ಕೂಡ ಇರುತ್ತಾನೆ. ಯಾಕೆಂದರೆ ಅವನು ಆ ಸಮಾಜದ ಮಧ್ಯದಿಂದಲೇ ಬಂದವನು. ಅದು ಸಹಜವೂ ಕೂಡ. ತಂದೆಯ ಪಾತ್ರಗಳು, ತಾಯಿಯ ಪಾತ್ರಗಳು ಕೂಡ ವೀಕ್ ಆಗುತ್ತಿರುವ ಈ ಹೊತ್ತಿನಲ್ಲಿ ಶಿಕ್ಷಕನಾದವನು ಮಾತ್ರ ಅದೇ ಮೊದಲಿನ ಗುರುವಿನಂತೆ ಇರಬೇಕೆಂದು ಬಯಸುವುದು ತಪ್ಪಾಗುತ್ತೆ. ಅಷ್ಟಕ್ಕೂ ಪಾಠ ಹೇಳುವುದು ಒಂದು ಜೀವನೋಪಾಯದ ವೃತ್ತಿಯಾಗಿದೆಯೇ ಹೊರತು ಅದು ಸೇವೆಯ ಗಡಿದಾಟಿ ತುಂಬಾ ದಿನಗಳಾದವು. ಅದೊಂದು ಡ್ಯೂಟಿ. ಸಮಯ, ಸಿಲಬಸ್, ಮಾರ್ಕ್ಸ್, ಫಲಿತಾಂಶ ಇಷ್ಟಕ್ಕೆ ಅವನ ವೃತ್ತಿ ಸೀಮಿತ. ಅವನಿಗೆ ಸ್ವಾತಂತ್ರ್ಯಗಳು ಕಡಿಮೆ. ಕಣ್ಣು ಕಟ್ಟಿದ ಕುದುರೆ. ಇಷ್ಟೆಲ್ಲ ಇದ್ದಾಗ್ಯೂ ಸಮಾಜ ಅವನಿಂದ ಬಯಸುವುದು ಮಾತ್ರ ಅಗಾಧ. ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರಬಂದು ಶಿಕ್ಷಕ ಮಾತ್ರ ಹೇಗಿದ್ದನೊ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ. ದಿನೇದಿನೇ ಸಮಾಜ ಶಿಕ್ಷಕ ಮತ್ತು ಶಿಕ್ಷಣದ ನಡುವೆ ಒಂದು  ಅಂತರ ಸೃಷ್ಟಿಯಾಗುತ್ತಿರುವುದು ಕಾಣಿಸುತ್ತದೆ.

ಈಗ ಬರೀ ಕಲಿಸುವುದಷ್ಟೇ ಮೇಷ್ಟ್ರು ಕೆಲಸವಲ್ಲ. ಇದುವರೆಗೂ ನಾನು ನೋಡಿದಂತೆ ಅವನಷ್ಟು ಏಕಪಾತ್ರಭಿನಯ ಮಾಡುವವನನ್ನು ನಾನು ಕಂಡಿಲ್ಲ. ಪಠ್ಯಪುಸ್ತಕ ಯೂನಿಫಾರಂ, ಹೊರಬೇಕು, ಜನ ದನ ಕೋಳಿ ಎಣಿಸಬೇಕು,  ಚುನಾವಣೆಗೆ ಹೋಗಬೇಕು, ಅಡುಗೆ ಕೆಲಸ, ಶೌಚಾಲಯ ಜಾಗೃತಿ, ದಾಖಲೆಗಳನ್ನು ಬರೆಯುವುದು, ಕಂಪ್ಯೂಟರ್ ಮುಂದೆ ಕೂತು ಪಾಲಕರ ಪರವಾಗಿ ಸ್ಕಾಲರ್ ಶಿಪ್ ಅರ್ಜಿ ಹಾಕುವುದರಿಂದ ಹಿಡಿದು ಶಾಲೆ ಸೋರುತ್ತಿದ್ದರೆ ಹತ್ತಿ ಹೆಂಚು ಹೊದಿಸುವವರೆಗೂ ಅವನ ಕೈಯಲ್ಲಿ ಕೆಲಸಗಳಿವೆ, ಪಾತ್ರಗಳಿವೆ. ಇಷ್ಟೆಲ್ಲಾ ಕೆಲಸಗಳಿದ್ದಾಗ್ಯೂ ಅವನು ಕಲಿಸುವ  ಕೆಲಸದಿಂದ ಒಂಚೂರು ಹಿಂದೆ ಸರಿಯಲು ಮಾಡಿದ ಪ್ರಯತ್ನವನ್ನಂತೂ ನಾನು ಕಂಡಿಲ್ಲ. ಸಮಾಜ ಒಂದೆರಡು ಉದಾಹರಣೆಗಳನ್ನು ತೆಗೆದುಕೊಂಡು ಈಗೀಗ ಮೇಷ್ಟ್ರುಗಳು ಸರಿಯಿಲ್ಲ ಅನ್ನುವ ತೀರ್ಮಾನಕ್ಕೆ ಬರುತ್ತದೆ. ರಸ್ತೆಯಲ್ಲಿ ನಡೆದು ಹೋಗುವ ಯಾವುದೋ ಹುಡುಗನ ಉದ್ಧಟತನ, ಬಸ್ಸಿನಲ್ಲಿ ಯಾರದೋ ಮಾತುಗಳನ್ನು ಕೇಳಿಸಿಕೊಂಡ ಸಮಾಜ’ಯಾರು ನಿಂಗೆ ಪಾಠ ಹೇಳಿದ್ದು?’ ಅಂತ ನೇರವಾಗಿ ಶಿಕ್ಷಕನ ಬುಡಕ್ಕೆ ಬರುತ್ತದೆ. ಯಾವ ಶಿಕ್ಷಕನೂ ಮಗು ಹಾಳಾಗಲಿ, ಕೆಟ್ಟ ದಾರಿ ಹಿಡಿಯಲಿ ಎಂದು ಬಯಸುವುದಿಲ್ಲ. ಈಗೀಗ ಮಗುವಿನ ಮೇಲೆ ಶಿಕ್ಷಕರಿಗಿಂತ, ಶಾಲೆಗಿಂತ ಹೆಚ್ಚು ಪ್ರಭಾವ ಬೀರಲು ಅವನದೇ ಮನೆಯ ಪರಿಸರ, ಮಾಧ್ಯಮಗಳಿವೆ. ಕಲಿಸುವ ಶಿಕ್ಷಕ ಗೌಣವಾಗುತ್ತಿರುವುದು ಇದೇ ಕಾರಣಕ್ಕೆ. ‘ಯರಲವ ಕಲಿಸಿದವನನ್ನೆ ಯಾರ್ಲ ಅಂವ?’  ಅನ್ನುವ ಪೀಳಿಗೆಯ ಮಧ್ಯೆ ಒಬ್ಬ ಒಳ್ಳೆಯ ಶಿಕ್ಷಕ ನಿಜಕ್ಕೂ ಕಳೆದು ಹೋಗುತ್ತಿದ್ದಾನೆ.

ಮಕ್ಕಳು ನಲಿಯುತ್ತಾ ಕಲಿಯಬೇಕು ಅನ್ನುವುದು ಶಿಕ್ಷಣದ ಒಂದು ಕ್ರಮ. ಅದರಂತೆ ಕಲಿಸುವವನು ಕೂಡ ಅಷ್ಟೇ ಖುಷಿಯಿಂದ ಕಲಿಸಬೇಕು. ಆಗ ಮಾತ್ರ ಬೋಧನೆ ಪರಿಣಾಮಕಾರಿ. ಈ ಹೊತ್ತಿಗೆ ನಾವು ಯೋಚಿಸಬೇಕಾದದ್ದು ಕಲಿಸುವವರು ಮುಖದಲ್ಲಿ ನಗು ಇದೆಯಾ? ‘ಯಾವ ನಾಡಿನಲ್ಲಿ ಶಿಕ್ಷಕನ ಸ್ಥಾನಮಾನಗಳು ಉತ್ತಮವಾಗಿರುವುದಿಲ್ಲವೊ ಆ ನಾಡು ಪ್ರಗತಿ ಕಾಣುವುದು ಕಷ್ಟ’ ಅಂತ ಹೇಳುತ್ತೆ  ಒಂದು ಇಂಗ್ಲಿಷ್ ನಾಣ್ನುಡಿ.

ಇವತ್ತಿಗೂ ಶಿಕ್ಷಕರಿಗೆ ಮೂರಾಲ್ಕು ತಿಂಗಳಿನಿಂದ ಸಂಬಳವಿಲ್ಲ ಅನ್ನುವ ವರದಿಗಳು ಪತ್ರಿಕೆಯಲ್ಲಿ ಬರುತ್ತವೆ. ಖಾಸಗಿ ಶಾಲೆಯ ಶಿಕ್ಷಕರ ಸ್ಥಿತಿಯಂತೂ ಇನ್ನೂ ಭಯಂಕರ. ಕರೋನದಿಂದ ಈ ಶಿಕ್ಷಕರಿಗೆ ಸಂಬಳವೇ ಇಲ್ಲ. ಹೆಚ್ಚು ಅವಧಿ ಬೋಧಿಸುವವರಿಗೆ ಕಡಿಮೆ ಸಂಬಳ, ಕಡಿಮೆ ಅವಧಿ ಬೋಧಿಸುವವರೆಗೆ ಹೆಚ್ಚು ಸಂಬಳವಾ? ಅನ್ನುವುದು ಶಿಕ್ಷಕರ ವಾದ. ‘ಬಡಮೇಷ್ಟ್ರು’ ಅನ್ನುವ ಪದವನ್ನು ನಾವು ಅಷ್ಟೇ ಜತನವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ.  ಶಿಕ್ಷಕರ ಪಾಲಿಗೆ ಲೈಫ್ ಟೈಮ್ ಖುಷಿಕೊಡುವ ವರ್ಗಾವಣೆ, ಶೇ 90 ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಒಮ್ಮೆಯೂ ಸಿಗುವುದಿಲ್ಲ. ಅಪ್ಡೇಟ್ ಆಗಲು ಕೊಡುವ ತರಬೇತಿಗಳು ಯಾಕೋ ಅವರನ್ನು ಅಪ್ಡೇಟ್ ಮಾಡುತ್ತಿಲ್ಲ. ಶಾಲೆ ಮುಚ್ಚುವುದರ ಬಗ್ಗೆ ಈಗ ಅವನನ್ನೆ ಮೊದಲ ಹೊಣೆಗಾರರನ್ನಾಗಿ ಮಾಡಿ ನಿಲ್ಲಿಸಲಾಗಿದೆ. ಇದಲ್ಲದೆ ಇಲಾಖೆಯ ಒಳಗೂ ಹತ್ತಾರು ಒತ್ತಡಗಳಿವೆ. ಇವುಗಳ ಮಧ್ಯೆ ಶಿಕ್ಷಕ ಪಾಠ ಮಾಡಬೇಕು ಅಷ್ಟೇ ಅಲ್ಲ ನಗುತ್ತಾ ಮಾಡಬೇಕು. ಬೋಧಿಸುವ ವೃತ್ತಿ ಯಾಕೆ ಬೇರೆ ವೃತ್ತಿಗಳಷ್ಟು ಆಕರ್ಷಣೀಯವಾಗಿಲ್ಲ, ಯಾಕೆ ಯುವಕರು ಶಿಕ್ಷಕರ ವೃತ್ತಿಯನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳುತ್ತಾರೆ? ಉತ್ತರವೇನು ಕಷ್ಟವಲ್ಲ.

ಶಿಕ್ಷಕನ ಮೇಲೆ ಹಲವು ದೂರುಗಳಿವೆ. ಸರಿಯಾಗಿ ಬೋಧಿಸುತ್ತಿಲ್ಲ. ಕೆಲವು ಶಿಕ್ಷಕರಿಗಂತೂ ಏನೂ ಗೊತ್ತಿಲ್ಲ. ಕಾಲಕಾಲಕ್ಕೆ ಶಿಕ್ಷಕ ಅಪ್ಡೇಟ್ ಆಗಬೇಕು. ಅವನು ಸಾಕಷ್ಟು ಓದಿಕೊಳ್ಳವುದಿಲ್ಲ. ರಾಜಕೀಯ ಮಾಡ್ತಾನೆ. ಸರಿಯಾದ ಟೈಮಿಗೆ ಸ್ಕೂಲಿಗೆ ಬರಲ್ಲ.. ಹೀಗೆ ಹತ್ತಾರು. ಹೌದು ಇದು ಸರಿ.‌ ಇವತ್ತಿಗೂ ಮೊದಲ ಬಾರಿಗೆ ಶಾಲೆಗೆ ಬರುವ ಮಗುವಿಗೆ ಶಿಕ್ಷಕನೇ ದೇವರು.  ಶಿಕ್ಷಕರನ್ನು ನಂಬುತ್ತದೆ,  ಅವರನ್ನು ಅನುಕರಿಸುತ್ತದೆ. ನೋಡಿ ಎಂತಹ ಜವಾಬ್ದಾರಿಯುತವಾದದ್ದು. ತಮ್ಮ ತಮ್ಮ ವೈಯಕ್ತಿಕ ವಿಚಾರಗಳಿಂದ ಮಕ್ಕಳಿಗೆ ಅನ್ಯಾಯವಾಗುವುದು ಸರಿಯಲ್ಲ. ಇಂಥವರು ಬೆರಳೆಣಿಕೆ ಮಾತ್ರ. ಅವೆಲ್ಲವೂ ಸರಿಯಾದರೆ ಇಡೀ ಸಮಾಜಕ್ಕೆ ಶಿಕ್ಷಕರನ್ನು ದೂರಲು ಒಂದೇ ಒಂದು ಕಾರಣಗಳಿರುವುದಿಲ್ಲ.  ಅದೆಲ್ಲವನ್ನು ಶಿಕ್ಷಕ ಅರಿತುಕೊಳ್ಳಬೇಕು. ಮತ್ತೊಂದು ಶಿಕ್ಷಕರ ದಿನಾಚರಣೆ ಬಂದಿದೆ, ಮೇಷ್ಟ್ರುಗಳನ್ನು ಹೊಗಳಲು ಎಲ್ಲರೂ ಸಜ್ಜಾಗಿದ್ದಾರೆ. ಅವನಿಗೆ ಹೊಗಳಿಕೆ ಅಷ್ಟೇ ಸಾಕೆ? ಬದಲಾದ ಕಾಲದಲ್ಲಿ ತನ್ನ ಸ್ಥಾನಕ್ಕಾಗಿ ಹೊಡೆದಾಡುವ ಹೊತ್ತಿನಲ್ಲಿ ಶಿಕ್ಷಕ ದಿನದೊಂದು ‘ಮೇಷ್ಟ್ರು..ಮೇಷ್ಟ್ರು’ ಅಂದರೆ ಅಷ್ಟೇ ಸಾಕೆ?

‍ಲೇಖಕರು Avadhi

September 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಾ.ಶಿವಕುಮಾರ್ ಕಂಪ್ಲಿ

    ಸಕಾಲಿಕ ಬರಹ ವರ್ತಮಾನದ ಸಹಜತೆಯನ್ನು ತೆರೆದಿಟ್ಟಿದೆ

    ಪ್ರತಿಕ್ರಿಯೆ
  2. Kusumasiddesh

    ವಾಸ್ತವತೆಯ ಚಿತ್ರಣ ಸವಿವರವಾಗಿ ಚಿತ್ರಿತವಾಗಿದೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: