ಮೇಘನಾ ಸುಧೀಂದ್ರ ಅಂಕಣ: ಇಷ್ಟೊಂದು ಬಂದೂಕುಗಳು ಇಲ್ಲಿ ಹರಿದಾಡೋಕೆ ಹೇಗೆ ಸಾಧ್ಯ?

“ಎಲೆನಾ ಎಲೆನಾ ” ಎಂದು ಜೋರಾಗಿ ಹುಡುಗಿ ಕರೆಯುತ್ತಿದ್ದರೂ ಅಲ್ಲಿ ಜನ ಓಡುತ್ತಿದ್ದರು ಇಲ್ಲಾ ಗುಂಡು ಹೊಡೆಯುತ್ತಿದ್ದರು. ಪೊಲೀಸು , ಮಿಲಿಟೆರಿ ಜೊತೆಯಲ್ಲಿ ಒಂದಷ್ಟು ಸಾಮಾನ್ಯ ಜನರೂ ಬಂದೂಕು ಹಿಡಿದು ಗುಂಡು ಹಾರಿಸುತ್ತಿದ್ದರು. ಟ್ರೈನ್ ಸ್ಟೇಷನ್ನಿನಲ್ಲಿ ಚೆನ್ನಾಗಿ ಬಾಲ್ಕನ್ ಸಂಗೀತ, ಫ್ಲೆಮೆಂಕೋ ಇನ್ನೇನೋ ಹಾಡುತ್ತಿದ್ದ ಕೆಲವು ಜನ ಬಂದೂಕು ಹಿಡಿದು ನಿಂತಿದ್ದರು. ಒಂದು ತಾತ್ವಿಕ ಹೋರಾಟ ಇಲ್ಲಿ ರಕ್ತಪಾತವಾಗುವ ಹಾಗೆ ಕಾಣಿಸುತ್ತಿತ್ತು. ಇಷ್ಟೊಂದು ಬಂದೂಕುಗಳು ಇಲ್ಲಿ ಹರಿದಾಡೋಕೆ ಹೇಗೆ ಸಾಧ್ಯ, ಅಮೇರಿಕಾದಷ್ಟು ಗನ್ ಫ್ರೀಡಮ್ ಇಲ್ಲದಿರುವ ಕಾರಣ ಹೀಗೆಲ್ಲ ಸಣ್ಣ ಸಣ್ಣ ಹುಡುಗರು, ಭಿಕ್ಷೆ ಬೇಡುವವರ ಕೈಯಲ್ಲಿ ಗನ್ನುಗಳನ್ನ ನೋಡಿ ಹೌಹಾರಿದಳು. ಎಲೆನಾ ಎಷ್ಟು ಕೂಗಿದರೂ ಕೇಳಲ್ಲಿಲ್ಲ. ಗುಂಡು ಬಿದ್ದಾಗ ಎಲ್ಲ ಕೆಳಗೆ ಬಗ್ಗಿದ ಕಾರಣ ಯಾರೋ ಹುಡುಗಿಯ ಕೈ ತುಳಿದು ಬೆರಳಿಗೆ ಹೀಲ್ಸ್ ಚಪ್ಪಲಿಯಿಂದ ಗಾಯ ಮಾಡಿದರು. ಹೀಲ್ಸ್ ಚಪ್ಪಲಿ ಎಂದರೆ ಮೊದಲೇ ಇಷ್ಟಪಡದ ಹುಡುಗಿಗೆ ಇನ್ನ್ಯಾವಳೋ ತುಳಿದು ಬೇರೆ ಹೋದಳಲ್ಲ ಎಂದು ಬೈದುಕೊಂಡೇ ಎದ್ದಳು. ಮಿಲಿಟೆರಿಯವರು ಎಬ್ಬಿಸಿ ಪಕ್ಕದಲ್ಲಿ ಕೂರಿಸಿ ಒಂದು ನೀರು ಕೊಟ್ಟರು, “ಏನು ಆಗಲ್ಲ ನಾವಿದ್ದೇವೆ, ಸ್ವಲ್ಪ ಹುಚ್ಚು ಜನರಿಗೆ ಬಂದೂಕನ್ನ ಇಲ್ಲಿನ ಯಾರೋ ಅಂಡರ್ ವರ್ಲ್ಡ್ ಗ್ಯಾಂಗ್ ಕೊಟ್ಟಿದೆ, ಅದಕ್ಕೆ ಇವರಿಗೆ ಇಷ್ಟೆಲ್ಲಾ ಕೊಬ್ಬು, ಒಬ್ಬೊಬ್ಬರನ್ನ ಸೀಳಿದರೆ ಸರಿಯಾಗುತ್ತದೆ, ನೀವು ಆರಾಮಾಗಿ ಕೂತು ಒಂದು ಸಿನೆಮಾ ನೋಡಿದ ಹಾಗೆ ನೋಡಿ” ಎಂದು ನಕ್ಕು ಹೊರಟು ಹೋದ.

“ಈ ಕರ್ಮಕ್ಕೆ ನಾನು ನನ್ನ ದೇಶದಿಂದ ಇಲ್ಲಿಗೆ ಬರಬೇಕಿತ್ತಾ, ನೆಮ್ಮದಿಯಾಗಿ ಬೆಂಗಳೂರಲ್ಲಿ ಇದ್ದೆ, ಜೀವನದ ಒಂದೇ ಸಮಸ್ಯೆ ಆಗ ಇದ್ದಿದ್ದು ಸಿಲ್ಕ್ ಬೋರ್ಡಿನ ಟ್ರಾಫಿಕ್ ಜ್ಯಾಮ್, ಈಗ ದಿನ ಬೆಳಗ್ಗೆ ಎದ್ದರೆ ಅಡುಗೆ ಏನು, ತಿಂಡಿ ಏನು, ಪಾತ್ರೆ ಯಾವಾಗ ತೊಳೆಯೋದು, ಬಟ್ಟೆ ಯಾವಾಗ ಒಗೆಯೋದು, ಓದೋದು ಯಾವಾಗ, ಕೆಲಸ ಮಾಡೋದು ಯಾವಾಗ, ಈ ಬಂದೂಕಿನಿಂದ ತಪ್ಪಿಸಿಕೊಳ್ಳೋದು ಯಾವಾಗ ಎಂಬ ಪ್ರಶ್ನೆಗಳು ಶುರುವಾಗುತ್ತದೆ. ನಿಜವಾಗಿಯೂ ಬೇರೆಯವರ ದೇಶಕ್ಕೆ ಹೋದರೆ ಅಲ್ಲಿ ಇದ್ದರೆ ಅವರ ಸಮಸ್ಯೆ ಅರ್ಥವಾಗೋದು ಇದೊಂಥರಾ ಮದುವೆ ಇದ್ದ ಹಾಗೆ, ಜೊತೆ ಇದ್ದಾಗಲೇ ಅವರ ಎಲ್ಲಾ ಮುಖಗಳೂ ಪರಿಚಯವಾಗೋದು, ನಾಲ್ಕು ದಿವಸ ಪ್ರವಾಸಿಯಾಗಿದ್ದರೆ ಬಾಯ್ ಫ್ರೆಂಡಿನ ಹಾಗೆ ಎಲ್ಲಾ ಒಳ್ಳೆ ಮುಖಗಳನ್ನು ತೋರಿಸಿ ನಮ್ಮ ಹತ್ತಿರ ೧೦೦೦ ಪದಗಳ ಆರ್ಟಿಕಲ್ ಬರೆಸಿಕೊಳ್ಳುತ್ತದೆ ಅಷ್ಟೆ… ” ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಗುಂಡು ಬಿತ್ತು, ಅಲ್ಲೊಬ್ಬ ಬಿದ್ದ, ಅವನ್ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಒಂದು ಮಿಂಚಿನ ವೇಗದಲ್ಲಿ ಒಬ್ಬನಿಗೆ ಗುಂಡು ಹೊಡೆದು, ಅವನ್ನನ್ನ ಆಸ್ಪತ್ರೆಗೂ ಸಾಗಿಸುವ ದೃಶ್ಯ ನೋಡಿ ಹುಡುಗಿಗೆ ಹುಚ್ಚು ಹಿಡಿಯಿತು. ಸಿನೆಮಾದಲ್ಲಿ ೧೦೦ ಬಾರಿ ನೋಡಿದ್ದರೂ ತಲೆ ಕೆಡಿಸಿಕೊಳ್ಳದ ಅವಳು ಇದನ್ನು ಕಣ್ಣು ಮುಂದೆ ನೋಡಿ ತಲೆ ಕೆಡಿಸಿಕೊಂಡು ಇದ್ದಳು.

ಎದ್ದು ಪೊಲೀಸಿನ ಡೈರಿಯಲ್ಲಿ ಅವಳ ಪಾಸ್ ಪೋರ್ಟ್ ನಂಬರ್ ಬರೆದು ಸೈನ್ ಮಾಡಿ ಹೊರಟಳು. “ಅಕಸ್ಮಾತ್ ಇದಕ್ಕೆ ಸಾಕ್ಷಿ ಹೇಳಬೇಕಿದ್ದರೆ ನನ್ನ ನಂಬರ್ ತಗೊಳ್ಳಿ ಖಂಡಿತಾ ನಾನು ನೋಡಿದ್ದನ್ನು ಹೇಳುತ್ತೇನೆ” ಎಂದು ಹೇಳುವಷ್ಟರಲ್ಲಿ ಎಲೆನಾ ಕೈ ಹಿಡಿದು ಎಳೆದುಕೊಂಡು ಹೋಗಿ, ಕತಲಾನಿನಲ್ಲಿ ಪೊಲೀಸನಿಗೆ ಏನೋ ಹೇಳಿ, ಇವಳು ಬರೆದಿದ್ದ ಡೀಟೆಲ್ಸಿನ ಹಾಳೆಯನ್ನು ಹರಿದು ಮುದ್ದೆ ಮಾಡಿ ಎಲ್ಲೋ ಬಿಸಾಕಿದ. ಎಲೆನಾ “ನಿನಗೆ ತಲೆ ಇಲ್ವಾ, ನಮ್ಮ ದೇಶದಲ್ಲಿ ನಡೆಯುವ ಕರ್ಮಕ್ಕೆ ನೀನ್ಯಾಕೆ ಸಾಕ್ಷಿ ಹೇಳಲು ಹೋಗ್ತ್ಯಾ, ಈ ಕೋರ್ಟು ಎಲ್ಲಾ ಅಲಿದರೆ  ಅಷ್ಟೆ, ನಿನ್ನನ್ನ ಆಚೆ ಓಡಿಸುತ್ತಾರೆ ಅಷ್ಟೆ” ಎಂದು ಹುಡುಗಿಗೆ ಎಲೆನಾ ಅವಳು ಮೈಗ್ರೆಂಟ್ ಎಂದು ನೆನಪಿಸಿದಳು.

ಹುಡುಗಿ ಸುಮ್ಮನೆ ತಮಾಷೆಗೆ, “ಇಲ್ಲ ಇಲ್ಲ ನಾ ಹೋಗಿ ಗುಂಡು ಹೊಡೆದವರ ವಿರುದ್ಧ ಸಾಕ್ಷಿ ಹೇಳುತ್ತೇನೆ ಆಗ ನನಗೆ ಉಚಿತವಾಗಿ ಸ್ಪೇನಿನ ಪೌರತ್ವ ಸಿಗುತ್ತದೆ” ಎಂದು ಹೇಳಿದಳು. ಎಲೆನಾ ಸಿಕ್ಕಾಪಟ್ಟೆ ಕೋಪಗೊಂಡು, “ನನ್ನ ಪ್ರಕಾರ ಅವರೇನೂ ತಪ್ಪು ಮಾಡಿಲ್ಲ” ಎಂದಳು. ಹುಡುಗಿ, “ಪರವಾನಗಿ ಇಲ್ಲದೇ ಗನ್ ಹಿಡಿಯುವುದು ಕಾನೂನಿನ ಪ್ರಕಾರ ತಪ್ಪು, ನಮ್ಮ ತಕ್ಕಡಿಯಲ್ಲಿ ಎಲ್ಲವನ್ನೂ ತುಲನೆ ಮಾಡಿದರೆ ಎಲ್ಲವೂ ಸರಿಯೆನಿಸುತ್ತದೆ, ದೇಶ ಪ್ರೇಮ ಇರಬೇಕು ಇಷ್ಟೊಂದು ಕುರುಡು ಪ್ರೇಮವಲ್ಲ, ನಾಳೆ ಇವರೆಲ್ಲ ಏನಾಗುತ್ತಾರೆ, ನಿಮಗೆ ಸ್ವಾತಂತ್ರ್ಯ ಸಿಕ್ಕಮೇಲೆ ನಿಮ್ಮ ಮೇಲೂ ಗುಂಡು ಹಾರಿಸುತ್ತಾರೆ ಅಷ್ಟೆ, ಬಂದೂಕಿಗೆ ರಕ್ತ ಬೇಕು ಅಷ್ಟೆ ಯಾರದ್ದಾದರೇನು? , ಹೀಗೆ ಒಬ್ಬೊರನ್ನೊಬ್ಬರು ಗುಂಡು ಹೊಡೆದುಕೊಂಡು ಯಾರು ಸ್ವಾತಂತ್ರ್ಯ ತೆಗೆದುಕೊಂಡಿದ್ದಾರೆ, ನನ್ನ ಪೂರ್ವಜರಿಗೆ ಪರಾತಂತ್ರ್ಯದ ದುಃಖಗಳು ಗೊತ್ತು, ಅವರು ಯಾರ ಸಿದ್ಧಾಂತಕ್ಕೆ ಕಟ್ಟುಬಿದ್ದರು ಗೊತ್ತಲ್ಲ್ವಾ” ಎಂದು ಖಾರವಾಗಿ ಹುಡುಗಿ ನುಡಿದಳು, ನಂತರ “ಯಾರನ್ನಾದರೂ ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ” ಎಂದು ನಮ್ಮ ತೇಜಸ್ವಿ ಹೇಳಿದ್ದಾರೆ, “ಹಾಗೆಯೇ ಯಾರನ್ನಾದರೂ ಕೊಂದು ಉಳಿಸಿಕೊಳ್ಳುವ ಸ್ವಾತಂತ್ರ್ಯ ಇದೆಯಾ , ಹೇಳು ಎಲೆನಾ” ಎಂದು ಅವಳ ಭುಜ ಅಲುಗಾಡಿಸಿ ಹುಡುಗಿ ಕೇಳಿದಳು.

ಎಲೆನಾಳಿಗೆ ಸಿಕ್ಕಾಪಟ್ಟೆ ಕೋಪ ಬಂತು. ಹಂಗಾಗಿಯೂ ನಡೆದುಕೊಂಡು ಬರುತ್ತಿರುವಾಗ , ಪ್ಲಾಸಾ ಕತಲೂನ್ಯಾದಲ್ಲಿ ಮತ್ತೊಂದು ದೊಡ್ಡ ಗಲಾಟೆ ಶುರುವಾಗಿತ್ತು. ಅಲ್ಲಿ ಬಿಳಿ ಬಾವುಟ ಹಿಡಿದು ಇಂಗ್ಲೀಷ್, ಕತಲಾನ್ ನಲ್ಲಿ ಘೋಷಣೆ ಕೂಗುತ್ತಿದ್ದರು. ಅಲ್ಲಲ್ಲಿ ನೀರು , ಕ್ರೊಸಾಂಟನ್ನು ಹಂಚುತ್ತಿದ್ದರು. ಅಲ್ಲಿದ್ದ ಸುಮಾರು ಹೋಟೆಲ್ಲುಗಳು ಇಂಡಿಯಾದವರದ್ದು. ಅವರೆಲ್ಲಾ ಈ ಸಮಾಜ ಸೇವೆಯಲ್ಲಿ ತೊಡಗಿದ್ದರು. ಸ್ವಲ್ಪ ಜನ ಕನ್ನಡದವರೂ ಕಂಡರು, “ಅಯ್ಯಾ ಕಾವೇರಿ ಗಲಾಟೆಯಲ್ಲಿ ಒಬ್ಬರೂ ಹೊರಗೆ ಬರದವರು ಅದೂ ಇಲ್ಲಿ ಇಷ್ಟೆಲ್ಲಾ ಸ್ಕೋಪ್ ತಗೋತಿದ್ದಾರಲ್ಲ” ಎಂದು ಕಿಸಕ್ಕನೆ ನಕ್ಕು ಹುಡುಗಿ ನಡೆಯತೊಡಗಿದಳು.

ಅಲ್ಲಿ ದೊಡ್ಡ ದೊಡ್ಡ ಬ್ಯಾನರ್ ಹಾಕಿ ೨೦೧೦ರಿಂದ ಅವರಿಗಾದ ಅನ್ಯಾಯಗಳನ್ನ ಪಟ್ಟಿಮಾಡಿದ್ದರು. ತಮ್ಮ ಸ್ವಾತಂತ್ರ್ಯವನ್ನ ಘೋಷಿಸಿಕೊಂಡ ನಂತರ ಸ್ಪೇನಿನವರು ಮತ್ತು ಕತಲೂನ್ಯಾದ ಕನ್ಸರ್ವೇಟಿವ್ ಪಾರ್ಟಿಯವರು ಅವರ ವಿರುದ್ಧ ದಾವೆ ಹೂಡಿ ಕೋರ್ಟಿಗೆ ಹೋದರು. ಕೋರ್ಟು ಸಹ ಇವರ ವಾದವನ್ನೇ ಮಾನ್ಯ ಮಾಡಿತ್ತು. ೧೦ ಜುಲೈ ೨೦೧೦ರಂದು ದೊಡ್ಡ ಪ್ರತಿಭಟನೆಯನ್ನು ಏರ್ಪಡಿಸಿ ಜನರು ಒಗ್ಗೂಡಿ ನಾವು ಸ್ವತಂತ್ರರು ಎಂದು ಕೂಗಿ ಇದಕ್ಕೆ ಇನ್ನು ನಮ್ಮ ಹೋರಾಟ ಮತ್ತೆ ಶುರು ಎಂದರು. ೨೦೨೨ರಲ್ಲಿ ಎಕಾನಮಿ ಬಿದ್ದಾಗ ಎಲ್ಲರೂ ಸಮಾನ ದುಃಖಿಗಳಾಗಿ ಒಗ್ಗೂಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಬಾಸ್ಕ್ ಮತ್ತು ಕತಲೂನ್ಯ ಸ್ವಾತಂತ್ರ್ಯದ ಕೂಗನ್ನು ಕಡಿಮೆ ಮಾಡಿದರು. ಆಮೇಲೆ ೧೧ ಸೆಪ್ಟೆಂಬರ್ ೨೦೧೨, ಕತಲೂನ್ಯಾದ ರಾಷ್ಟ್ರೀಯ ದಿವಸದಂದು ಇನ್ನು ನಾವು ಯಾರಕೆಳಗೂ ಇರುವುದಿಲ್ಲ ಎಂದು ಘೋಷಣೆ ಮಾಡಿ ಕತಲೂನ್ಯಾದ ಸಂಸತ್ ಸ್ವಾತಂತ್ರ್ಯಕ್ಕೆ ಅನುಮೋದನೆ ಕೊಟ್ಟಿತ್ತು.

ಇನ್ನು ಇದನ್ನ ಯೂರೋಪಿನ ಯೂನಿಯನ್, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುವ ದಾವೆಯೆಂದು ನಿರ್ಧಾರ ಮಾಡಿದರು. ಅದೇ ಸಮಯದಲ್ಲಿ ಸ್ಪೇನ್ ಅಕ್ರಮ ವಲಸಿಗರನ್ನ ಸಮುದ್ರ ತೀರಕ್ಕೆ ಮೆತ್ತಗೆ ತಳ್ಳುವ ಹುನ್ನಾರ ಮಾಡಿತ್ತು, ಅವರನ್ನ ಅಲ್ಲಿ ತಳ್ಳಿದರೆ ಇನ್ನು ಇವರ ಹೋರಾಟದಲ್ಲಿ ಒಂದಷ್ಟು ರಕ್ತ ಹರಿದು ಇನ್ನಷ್ಟು ಹೋರಾಟ ಕಡಿಮೆಯಾಗುತ್ತದೆ ಎಂದು ಅಂದುಕೊಂಡವು. ಅದೇ ಸಮಯದಲ್ಲಿ ಸರ್ಕಾರ ಕತಲಾನ್ನಿನ ಹುಡುಗ ಹುಡುಗಿಯರಿಗೆ ಬೇರೆ ದೇಶದಲ್ಲಿ ಸ್ನಾತಕೋತ್ತರ ಪದವಿ, ಪಿ ಎಚ್ ಡಿ ಗೆ ಓದಲು ಸ್ಕಾಲರ್ ಶಿಪ್ ಕೊಡಲು ಶುರುಮಾಡಿತು. ಇದರಿಂದ ಅಮೇರಿಕಾಗೋ , ಲಂಡನ್ನಿಗೋ ಅಥವಾ ಆಸ್ಟ್ರೇಲಿಯಾಗೋ ಹೋದರೆ ಅಲ್ಲಿನ ಜೀವನಕ್ಕೆ ಒಗ್ಗಿಕೊಂಡು ಮತ್ತೆ ಇಲ್ಲಿ ಬರೋದಕ್ಕೆ ಸಾಧ್ಯವೇ ಇಲ್ಲ ಇಲ್ಲಿನ ಗಲಾಟೆಗಳಿಗೆ ಭಯ ಪಟ್ಟುಕೊಂಡು ಈಗಿನ ಯುವ ಪೀಳಿಗೆ ಇಲ್ಲಿ ಮತ್ತೆ ಬರುವುದೇ ಇಲ್ಲ ಎಂಬೆಲ್ಲಾ ಹುನ್ನಾರ ಮಾಡಿ ಅವರನ್ನ ಆಚೆ ಓಡಿಸಲು ಶುರು ಮಾಡಿತ್ತು.

ಇಷ್ಟೆಲ್ಲಾ ಆಗಿದೆಯೆಲ್ಲಾ ಎಂದು ಅಂದುಕೊಳ್ಳುವುಷ್ಟರಲ್ಲಿ ಹುಡುಗಿ ಕೈಗೆ ಒಂದು ಧ್ವಜವನ್ನ ಕೊಟ್ಟು ನಡಿ ನೀನು ಎಂದು ಒಬ್ಬರು ಎಳೆದುಕೊಂಡು ಹೋದರು. ಅದೇ ಮಾಯದಲ್ಲಿ ಆ ಧ್ವಜದ ಮೇಲೆ ಬರೆದಿದ್ದ ವಾಕ್ಯಗಳು,” ಸಮ್ ಉನ ನಸಿಯೋ, ನೊಸಾಟ್ರೆಸ್ ದಿಸೈಡಮ್” ಎಂದಿತ್ತು. “ನನ್ನ ದೇಶಮ್ ಇಲ್ಲಿ ನಾನು ಏನು ಬೇಕು ಎಂದು ನಿರ್ಧರಿಸುತ್ತೇನೆ” ಎಂದು ಬರೆದಿತ್ತು.

ಸೂರ್ಯ ಸ್ವಲ್ಪ ಸ್ವಲ್ಪವೇ ಇಳಿಯುತ್ತಿದ್ದ ಆದರೆ ಪ್ರತಿಭಟನೆಯ ಕಾವು ಏರುತ್ತಲೇ ಇತ್ತು….

‍ಲೇಖಕರು avadhi

March 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: