ಅನಾಮಿಕಾ @ ಹ್ಯಾಂಡ್ ಪೋಸ್ಟ್: ‘ನಿನ್ನ ಎದೆಯಲಿ ನನ್ನನು…’

ಅರೇ, ಮಾರ್ಚ್ ಎಂಟು ಮಹಿಳಾ ದಿನಾಚರಣೆ ಅಂತ ಆಗ ನಮಗೆಲ್ಲ ಗೊತ್ತೇ ಇರಲಿಲ್ಲ ಎಂದು ಗೊತ್ತಾದ ಮೇಲೆ ನಾವು ಮಾತನಾಡಿಕೊಳ್ಳುವುದಕ್ಕೂ ಮುಂಚಿನಿಂದಲೇ ನನಗೂ ಈ ದಿನಕ್ಕೂ ಎರಡು ಘಟನೆಗಳ ನಂಟು. ಮತ್ತೆ ಇವೆರಡೂ ‘ನಿನ್ನ ಎದೆಯಲಿ ನನ್ನನು, ನನ್ನ ಎದೆಯಲಿ ನಿನ್ನ ಕಂಡೆನು…’ ಎನ್ನುವಂಥ ಸಂಗತಿಗಳು.

ದೊಡ್ಡಕ್ಕ ಗಂಡನ ಮನೆಗೆ ಹೋಗಿದ್ದು, ಬಾಣಂತನಕ್ಕೆಂದು ತವರಿಗೆ ಬಂದಿದ್ದೂ ಎರಡೂ ಇದೇ ದಿನ. ವರ್ಷಗಳು ಬೇರೆ. ಮದುವೆಯಲ್ಲಿ ಎರಡೂ ಮನೆಯವರಿಗೆ ಭಿನ್ನಾಭಿಪ್ರಾಯ ಬಂದಿತ್ತು. ಅತ್ತೆಯಂದಿರ ಮದುವೆಯಾದ ಎಷ್ಟೋ ವರ್ಷಗಳ ನಂತರ ಮನೆಯಲ್ಲಿ ನಡೆಯುತ್ತಿದ್ದ ಶುಭಕಾರ್ಯದಲ್ಲಿ ಕಿರಿಕಿರಿ ಆಗಿದ್ದರ ಬಗ್ಗೆ ಅಪ್ಪ ಮಕ್ಕಳನ್ನ ಅನ್ನುವ ಹಾಗಿಲ್ಲ, ಆಡುವ ಹಾಗಿಲ್ಲ ಎಂದು ಸ್ವಲ್ಪ ಹೆಚ್ಚೇ ನೊಂದಿದ್ದರು.

ಕಲ್ಯಾಣಮಂಟಪಕ್ಕೆ ಹೋಗಿ ಮದುಮಕ್ಕಳನ್ನು ಹರಸಿ ಊಟ ಮಾಡದೆ ಮನೆಗೆ ವಾಪಸ್ಸು ಬಂದಿದ್ದರು. ಹಿತ್ತಲಿಗೆ ಎಲೆ ಅಡಿಕೆ ಉಗುಳಲು ಹೋಗಿದ್ದರು. ಮುಂಬಾಗಿಲ ಹತ್ತಿರ ನಿಂತಿದ್ದ ಅಪ್ಪನ ಸ್ನೇಹಿತರೊಬ್ಬರು, ‘ನೋಡು, ಈಗ ನೀ ಊಟಕ್ಕೆ ಬರಲಿಲ್ಲ ಅಂದ್ರೆ ಇವತ್ತಿಗೆ ನಿನ್ನದು ನನ್ನದು ಏನಿತ್ತೋ, ಎಲ್ಲ ಮುಗಿದಂತೆಯೇ ಲೆಕ್ಕ…’ ಅಂತ ಒಂದೇ ಮಾತು ಹೇಳಿದ್ದು.

ಅಪ್ಪ ಕೈಯಲ್ಲಿದ್ದ ಲೋಟವನ್ನ ಟೇಬಲ್ ಮೇಲೆ ಇಟ್ಟೆನೊ ಇಲ್ಲವೋ, ಬಾಯಿ ಒರೆಸುತ್ತಿದ್ದ ಕರ್ಚೀಫು ಜೇಬಿನೊಳಗೆ ಹೋಯ್ತ ಇಲ್ಲವ ಅಂತ ಕೂಡ ನೋಡದೆ ಓಡಿ ಹೋಗಿ ಸ್ನೇಹಿತನ ಗಾಡಿ ಹತ್ತಿದ್ದರು. ಅಪ್ಪನ ಹೆಸರು ಕರೆದವರ ಎದೆಯಲ್ಲಿದ್ದ ನಲ್ಮೆ, ಮುಗೀತು ನೋಡು ಎನ್ನುವಾಗ ದನಿಯಲ್ಲೊಂದು ಜಬರೇನಿತ್ತಲ್ಲ ಅದು, ‘ಹೊಟ್ಟೀ ಕರುಳಿನ ತುಣುಕೇ.’

ನಾವು ಚಿಕ್ಕವರಿದ್ದಾಗ ಮನೆಯ ದನಕರು ಕಾಯಲು ಒಬ್ಬ ಮನೆಮಗನಿದ್ದ. ಕಮ್ತ-ಹೈನ ತೆಗೆದ ಮೇಲೆ ಅಪ್ಪ ಅವನಿಗೊಂದು ಮದುವೆ ಮಾಡಿ, ಸರ್ಕಲ್ಲಿನಲ್ಲಿ ಅಂಗಡಿ ಇಟ್ಟುಕೊಟ್ಟಿದ್ದರು. ಇದ್ದೂರಲ್ಲೇ ಮದುವೆಯಾಗಿ ಹೋಗಿದ್ದ ದೊಡ್ಡಕ್ಕ ಹೆರಿಗೆಗೆಂದು ನಮ್ಮ ಮನೆಗೆ ಬರುವ ಹಿಂದಿನ ಗುರುವಾರವೂ ಗಂಡನೊಂದಿಗೆ ದರ್ಗಾಕ್ಕೆ ಹೋಗಿ ಸಕ್ಕರೆ ಊದಿಸಿಕೊಂಡು ಬರುತ್ತಿದ್ದಳು.

ಇವನು ನೋಡಿ ಕರೆದು, ತಾನು ಎತ್ತಾಡಿಸಿದ ಹಸುಳೆ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದೆ ಎಂದು ಅಕ್ಕರೆಯಿಂದ ಎಳನೀರು ಕೊಚ್ಚಿ ಕೊಡುತ್ತಿದ್ದ. ಹೊಟ್ಟೆಬಳಗದ ಮೇಲೆ ಕೈಯಿಟ್ಟುಕೊಂಡು ನಿಂತಿದ್ದ ದಿನ ತುಂಬಿದ ಬಸುರಿಯ ಮುಖದಲ್ಲಿದ್ದ ದುಗುಡ ನೋಡಿದವನೆ ಭಾವನ ಕಡೆ ತಿರುಗಿ, ‘ಚಂದಾಳ ಗೊಂಬೀಯಂತ ಮಗಳನ್ನ ಕೊಟ್ಟರೆ ಗಣಪ್ಪನ್ನ ಮಾಡಿ ಇಟ್ಟಿಯಲ್ಲೋ…’ ಎಂದು ಉರ್ದು ಮಿಶ್ರಿತ ಕನ್ನಡದಲ್ಲಿ ಹೇಳಿದ್ದಷ್ಟೇ.

ಕಾಡಿದ್ದೂ ಸಾರ್ಥಕವಾಯಿತು ಎನ್ನುವಂತೆ ತುಂಬುರೂಪಿಣಿ ನಕ್ಕ ಮಲ್ಲಿಗೆಯ ನಗು ದರ್ಗಾದ ನವಿಲುಗರಿಗಳಲ್ಲಿ ಪ್ರತಿಫಲಿಸಿತು. ಮನೆಮಗನ ಕಣ್ಣಲ್ಲಿ ಮಿನುಗಿದ ಅಕ್ಕನ ಮದುವೆಯಲ್ಲಿ ಅವನು ಕೊಟ್ಟ ಮೂಗುತಿಯ ಮಿಂಚಿಗೆ, ಪರಿಸ್ಥಿತಿಯ ಒತ್ತಡದಲ್ಲಿ ನಿಂದೇನು ಮಾರಾಯಾ ಹೋಗತ್ತ ಎನ್ನಬಹುದಾದಲ್ಲಿಯೂ ಘನತೆಯಿಂದ ನಡೆದುಕೊಂಡ ಅಪ್ಪ, ಮಕ್ಕಳ ಎದುರಿಗೆ ಸ್ನೇಹಿತ ಸಣ್ಣವನಾಗಬಾರದು. ಹಾಗಾಗದಂತೆ ಕಾಯಬೇಕಿರುವುದು ನನ್ನ ನೈತಿಕ ಜವಾಬ್ದಾರಿಯೂ ಹೌದು ಎನ್ನುವಂತೆ ನಡೆದುಕೊಂಡವರ ಅಂತಃಕರಣಕ್ಕೆ, ಹೆಣ್ಣು ಗಂಡೆಂಬ ವ್ಯತ್ಯಾಸವಿಲ್ಲ ಎನ್ನುವ ಸವಿಯುಂಡು ನಾನು ಬೆಳೆದಿದ್ದೇನೆ ಎನ್ನುವುದು ನನಗೆ ಕೋಡು ಮೂಡಿಸುತ್ತದೆ!

ನಾವು ಏನೇ ಮಾಡಿದರೂ ನಿನಗೆ ಹುಡುಗರೇ ಬಹುಮಾನ್ಯರು ಎನ್ನುವವರಿಗೆಲ್ಲ ನಾನು ಹೇಳುತ್ತಿರುತ್ತೇನೆ, “ಹೆಣ್ಣು – ಗಂಡು ಇದ್ದಿದ್ದರಿಂದಲೇ ಈ ಜಗತ್ತು ಇಷ್ಟು ಚೆಂದ. ಆದರೆ ನನಗೆ ಬದುಕನ್ನು ಬೇರೆಬೇರೆ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗಿದ್ದು ನಾನು ಒಡನಾಡಿದ, ನನ್ನ ಒಡನಾಟಕ್ಕೆ ಬಂದ ಗಂಡುಮಕ್ಕಳಿಂದಾಗಿ. ಹೆಣ್ಣುಮಕ್ಕಳಿಗೆ ಪ್ರಶಸ್ತ ಎನಿಸದ ಹಾಗೆ ನಡೆದುಕೊಳ್ಳದವರ ಯೋಗ್ಯತೆ ಇಷ್ಟೇ ಎಂದು ಮುಂದೆ ಸಾಗುತ್ತೇನೆ ಹೊರತು ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಲಾರೆ ಖಂಡಿಸಲಾರೆ,” ಎಂದು.

ಹೆಣ್ಣುಮಗಳಾಗಿ ಹುಟ್ಟಿದ್ದೇ ಹೆಮ್ಮೆ ಎನ್ನುವ ನನಗೆ ಸಂಭ್ರಮ ಪಡಲು ಅದಕ್ಕೆಂದು ವಿಶೇಷ ದಿನವೊಂದಿದ್ದರೆ ಅದು ಬೋನಸ್! ಹಾಗನಿಸುವುದಕ್ಕೆ ಕೆಳಗಿನವು ಕೆಲವು ಕಾರಣಗಳಷ್ಟೇ.

ಪ್ರಾಣಿ ಪಕ್ಷಿಗಳೆಡಿನ ಕಾರುಣ್ಯ ಉಸಿರಾಟಕ್ಕಿಂತ ಹಿರಿದು. ದುಡಿದಿದ್ದನ್ನು ಇನ್ನೊಬ್ಬರು ತಿಂದು ಹರಸಿದರಷ್ಟೇ ನಾವು ಹುಲುಸಾಗಿ ಬೆಳೆಯಲು ಸಾಧ್ಯ. ಅದಕ್ಕಾಗಿ ಹೆಗಲು ಹೃದಯ ಸದಾ ತೆರೆದಿರಬೇಕು ಎನ್ನುವ ಕೃಷಿಯ ಮೊದಲ ಪಾಠ ಹೇಳಿಕೊಟ್ಟ ಅಪ್ಪನಿಂದಾಗಿ,

ಹೆಣ್ಣುಮಗಳಾದರೂ ಎಲ್ಲೂ ರಿಯಾಯತಿ ಬಯಸಿಲ್ಲವಲ್ಲ! ಈ ಬದುಕು ನೀಡಿದವರ ಜವಾಬ್ದಾರಿ ನಿನ್ನದೂ ಹೌದು, ಅವರನ್ನು ಸಾಕುವ ಚೈತನ್ಯದ ಮೇಲೆ ನನ್ನ ಬಾಳು ಎನ್ನುವುದನ್ನು ತೋರಿಸಿ ಕೊಟ್ಟವನಿಂದಾಗಿ,

ಭಾವ, ಬುದ್ಧಿ, ಪ್ರಯಾಣ, ಓದು, ಸಾಂಗತ್ಯ ಸೇರಿದಂತೆ ಎಲ್ಲದರಲ್ಲೂ ಸರಿಯಾದ ಫ್ರೀಕ್ವೆನ್ಸಿಗಾಗಿ ಮನಸ್ಸನ್ನು ಸದಾ ಆಟೋಸರ್ಚ್ ಮೋಡಿನಲ್ಲಿಟ್ಟಿರುವ ನನ್ನನ್ನ ವಿಚಿತ್ರವಾಗಿ ಕಾಣದೆ, ಸರಿ ತಪ್ಪು ಮಿಶ್ರಣದ ಸಾಮಾನ್ಯಳಂತೆ ಕಂಡು ವಿಚಾರವಾದ, ಪ್ರಗತಿಪರತೆಯ ಹೆಸರು ಗೊತ್ತಿಲ್ಲದಿದ್ದರೂ ನಿನಗೆ ಬೇಕಾದ ಹಾಗೆ ಬದುಕೆಂದು ಹರಸುವ ಜೊತೆ ಬೆಳೆದವರಿಬ್ಬರಿಂದಾಗಿ,

ನೀನು ನಮಗೆಲ್ಲರಿಗೂ ಬೇಕಾದ ಒಂದು ಜೀವ. ನಮ್ಮ ಬದುಕಿನ ಅನಿವಾರ್ಯತೆಗೆ ನಾವು ನಿನ್ನಿಂದ ದೂರವಿರುವುದು. ಇಲ್ಲದಿದ್ದರೆ ಕಾಲವೂ ಕಣ್ಣೆದುರಿಗೆ ಇಟ್ಟುಕೊಂಡು ನೋಡಿಕೊಳ್ಳುತ್ತಿದ್ದೆವು. ಬೆನ್ನ ಹಿಂದೆ ಬೀಳದಿದ್ದರೇನಂತೆ ಕಣ್ಣ ಮುಂದೆ ಆಡಲಿ ಎಂದ ಬಾಲ್ಯ ಸ್ನೇಹಿತರಿಂದಾಗಿ,

ಇಂಥದ್ದು ಬೇಕೇ ಬೇಕು ಎಂದು ರಚ್ಚೆ ಹಿಡಿಯದೆ, ನಾನು ಸೋಲುವಂಥ ವ್ಯಕ್ತಿಯಾಗಲಿ, ವಸ್ತುವಾಗಲಿ ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ ಎಂದು ಆತ್ಮಸ್ಥಳಾಗಿ ನುಡಿಯಬಲ್ಲ ಸ್ಥಿರತೆ ಕೊಟ್ಟ ಮನಸ್ಸಿನಿಂದಾಗಿ,

ನನ್ನನ್ನೂ, ನನ್ನ ವ್ಯಕ್ತಿತ್ವವನ್ನೂ ಪೂರ್ತಿಯಾಗಿ ತೊಡಗಿಸಿ ಮಾಡಬಲ್ಲ ಕೆಲಸವನ್ನು ನನಗೆ ಬೇಕು ಎಂದಾಗಲೇ ದೊರಕಿಸಿ ಕೊಟ್ಟು, ಸುತ್ತಣ ಬದುಕಿಗೆ ನೆರವಾಗುವ ಮೂಲಕ ನನ್ನೊಳಗೊಂದು ಕೃತಜ್ಞತಾ ಭಾವ ಮೂಡಿಸುವ ನಿಯತಿಯಿಂದಾಗಿ,

ಬಾಹ್ಯದ ಹಂಗೇ ಇಲ್ಲದೆ, ಅಂತರಂಗದಲ್ಲಿ ನಡೆವ ವಿದ್ಯಮಾನಗಳಿಂದಲೇ ಪ್ರಪಂಚದೃಷ್ಚಿಯನ್ನು ಸೃಷ್ಟಿಸಿಕೊಟ್ಟು ವಿಶ್ವಸಾಮರಸ್ಯದಲ್ಲಿ ಲೀನವಾಗಿಸುವ ನನ್ನ ಹಿಂದೂಸ್ತಾನಿ ಸಂಗೀತದಿಂದಾಗಿ,

ಮುದ್ದು ಬಂದಾಗಲೆಲ್ಲ ‘ಈಗ ಸಿಕ್ಕರೆ ಮಿನಿ…’ ಎಂದು ಮೆಸೇಜಿನಲ್ಲೆ ಕೆರಳಿಸುವವಳಿಗೆ, ‘ಪೋನಿಗೆ ಲಾಕ್ ಇಲ್ಲ. ಸ್ನೇಹಿತರ ಬಳಿಯೋ, ಕೆಲಸದ ಹುಡುಗರ ಹತ್ತಿರವೋ ಇರುತ್ತದೆ. ಟೆಕ್ಸ್ಟ್ ಮಾಡುವ ಮುನ್ನ ಒಂದ್ಸಲ ರಿಂಗ್ ಮಾಡು,’ ಎಂದು ಸ್ಮಾರ್ಟ್ ಸೌಜನ್ಯ ಕಲಿಸಿದವನಿಂದಾಗಿ,

ಬೆಳ್ ಬೆಳಗ್ಗೆ ಫೋನ್ ನಲ್ಲಿ ಅಕ್ಕನ ಮಗಳಿಗೆ ಒಂದು ಉಪ್ಪಾ ಕೊಡು ಕೂಸೇ ಎಂದು ಅಚ್ಛಚ್ಛೇ ಮಾಡುವಾಗಲೂ ಬ್ರಷ್ ಮಾಡಿದ್ದೀಯಲ್ವ ಎಂದು ಕೇಳುವಷ್ಟು ಸ್ವಚ್ಛತೆಯ ವಚ್ಚೆಯಾದ ನನ್ನನ್ನ ಮಧ್ಯರಾತ್ರಿಯಲ್ಲೂ ಹಲ್ಲುಜ್ಜಿಯೇ ಮುತ್ತಿಟ್ಟವನಿಂದಾಗಿ,

ಕೇದಗೆ ವನದಲ್ಲಿ ಕೂತು ಹಣೆಗೆ ಹಣೆ ಹಚ್ಚಿ ಸಿಹಿ ತಿನ್ನಬೇಕಿತ್ತಲ್ಲ ಎಂದರೆ -ನೀನೇ ಒಂದು ಸವಿಸಕ್ಕರಿ ಕಣ್ಣಿ ಎಂದು ಕಾಡಿ ಗಲ್ಲ ನೀಡಿದ್ದಕ್ಕೆ ಒಲುಮೆಯ ಬೆಲ್ಲ ಹನಿಸಿದವರಿಂದಾಗಿ,

ನಾನು ಹೊತ್ತಿಗೆ ಹೃದಯ ಮುಡುಪಿಟ್ಟವಳು ಎನ್ನುವುದು ಗೊತ್ತಿದ್ದರೂ ಹಳೆಯ ಒಲವನ್ನು ಕಾಪಿಟ್ಟುಕೊಂಡು, ನನ್ನ ಬರುವಿಕೆಗಾಗಿ ಅವರೂರ ದಾರಿಯಲಿ ಹೊನ್ನ ಹೊಂಬಾಳೆ ಹುಡಿ ಚೆಲ್ಲಿ ಕಾದ ಭವವಿಧುರರಿಂದಾಗಿ,

ಎಲ್ಲರಿಗಿಂತ ತುಸು ಹೆಚ್ಚೇ ಗುಣದೋಷಗಳನ್ನು ಹೊಂದಿದ ನನ್ನನ್ನು, ‘ಶಾಪಗ್ರಸ್ತ ಕಿನ್ನರಿಯಂತೆ ಬಂದೆ ನನ್ನ ಬದುಕಲಿ’ ಎಂದು ಶಪಿಸದೆ, ಮುದ್ದುರಾಕ್ಷಸಿಯಂತೆ ಕಂಡು ಬೀಳ್ಕೊಟ್ಟ ಒಲವಿಗರಿಂದಾಗಿ ನಾನು ಪ್ರತಿ ಕ್ಷಣವೂ ಆಶೀರ್ವದಿಸಲ್ಪಟ್ಟಿದ್ದೇನೆ.

ಕಳೆದ ಹತ್ತುವರ್ಷಗಳಲ್ಲಿ ಪ್ರತಿ ಓದಿಗೂ ಹೊಸತು ಹೊಳಸುವ ಪೋಲಂಕಿ ರಾಮಮೂರ್ತಿ ಅವರ ‘ಸೀತಾಯಣ’ದ ಮುನ್ನುಡಿಯ ಸಾಲುಗಳೊಂದಿಗೆ ಸಂಜೆ ಬಿಸಿಲಿನ ಮಳೆಯ ಮನಸಿನಂತವಳ ಮಾತು ಮುಗಿಸುತ್ತೇನೆ.

“ಅರ್ಪಣೆ, ಒಲವೇ ಉಸಿರಾಗಿ ಉಸಿರಿತ್ತ ನನ್ನ ತಾಯಿ ಲಕ್ಷ್ಮಮ್ಮನಿಗೆ ಮತ್ತೂ ಯಾವ ನನ್ನ ತಾಯಿಯಂತಹವರನ್ನು ಹೆಣ್ಣುಮಕ್ಕಳು ಎಂದು ಕರೆಯಲಾಗದೋ, ಏಕೆಂದರೆ ಮಕ್ಕಳೆಂದು ಅವರನ್ನು ಅವಮಾನಿಸಲಾಗದು; ಹೆಂಗಸರು ಎಂದು ಕರೆಯಲಾಗದೋ ಏಕೆಂದರೆ ಕನ್ನಡನಾಡಿನ ಕೆಲವೆಡೆ ವೇಶ್ಯಯರಿಗೆ ಹಾಗೆನ್ನುತ್ತಾರೆ; ಸ್ತ್ರೀಯರು ಎಂದು ಕರೆಯಲಾಗದೋ ಏಕೆಂದರೆ ಸ್ತ್ರೀಯರೆಂದರೆ ಹೆರುವವರು ಆದ್ದರಿಂದ ಅವರನ್ನು ಹೆರುವಿಗೆ ಹಿಂಗಿಸಲಾರೆವು -ಅಂತಹ ಮುಟ್ಟಾಗಿಯೂ ಮುಟ್ಟದವರಾಗಿರುವ ಹೆತ್ತೂ ಸೂತಕದವರಾಗಿರುವ, ಅನಾಮಧೇಯ ಅಸ್ಪೃಶ್ಯೆಯರಿಗೆ. ಏಕೆಂದರೆ ಯಾವ ವರದಕ್ಷಿಣೆಗಾಗಿ, ವೈಧವ್ಯಕ್ಕಾಗಿ, ದುರಾಕ್ರಮಣಕ್ಕಾಗಿ, ನಿತ್ಯವೂ ರಾಮರ ಬೆಂಕಿಗೆ ಬೀಳುತ್ತಾ ರಾಮರ ಉಪೇಕ್ಷೆಯಿಂದ ಕಾಕಾಸುರರ ಅತ್ಯಾಚಾರಕ್ಕೀಡಾಗುತ್ತ, ರಾಮರ ಪರಿತ್ಯಾಗದಿಂದ ವನವಾಸ ಪಡುತ್ತಿದ್ದಾರೋ ಅವರು ವಾಲ್ಮೀಕಿ ರಾಮಾಯಣದ ಸಾಕ್ಷಾತ್ ಸೀತೆಯನ್ನು ಕಂಡುಕೊಂಡು ಅವಳಂತೆ ಸಹಜವಾಗಿ, ಮಾನವೀಯತೆ, ಪ್ರೇಮಗಳಲ್ಲಿ ಫಲಿಸಿ ವ್ಯಕ್ತಿ ವಿಶೇಷರಾಗಿ, ಅಂಕಿತನಾಮರಾಗಲೆಂದು ಹಂಬಲಿಸಿ…”

‍ಲೇಖಕರು avadhi

March 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Sudha Hegde

    ಸಂಪನ್ನವಾಯಿತು ಹುಡುಗಿ
    ಮಹಿಳಾದಿನಾಚರಣೆ

    ಪ್ರತಿಕ್ರಿಯೆ
  2. Priyadarshini Shettar

    Excellent article. Your words are my views too. Happy women’s day…

    ಪ್ರತಿಕ್ರಿಯೆ
  3. Poorvi

    Eshtu chenda barediddiri. Ishtu chendada lekhanakkagi nimagondu Ummmmaaaaa (hallujjiye kalisirodu) 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: