ಮೇಘನಾ ಸುಧೀಂದ್ರ ಅಂಕಣ: ಅದೇ ಅದೇ ಜಿಪ್ಸಿ ಸಂಗೀತ ಅದೇ..

“ಅಲ್ಲಾ ಎಲೆನಾ ಬಹುಮಾನದ ಹಣವನ್ನೆಲ್ಲಾ ಹಾಗೆ ಕೊಟ್ಟುಬಿಟ್ಟೆಯಲ್ಲಾ, ಅದೂ ನನ್ನನ್ನ ಕೇಳಿದ್ದರೆ ಕೊಡಲ್ಲ ಅಂತಲ್ಲ ಇನ್ನೊಬ್ಬರನ್ನ ಕೇಳುವ ಪರಿಪಾಠವಾದರೂ ಬೆಳೆಸಿಕೊಳ್ಳಬಾರದಾ” ಎಂದು ಹುಡುಗಿ ಅಸಮಾಧಾನದಿಂದಲೇ ಎಲೆನಾಗೆ ಹೇಳಿದಳು.

“ಇಲ್ಲಾ ನೀನು ಕೊಡುತ್ತೀಯ ಅಂತ ಗೊತ್ತಿದ್ದರಿಂದಲೇ ನಿನ್ನನ್ನ ಕೇಳಲಿಲ್ಲ. ಕೆಲವೊಂದು ಅನ್ನಿಸಿದಾಗ ಮಾಡಿಬಿಡಬೇಕು, ಅಷ್ಟೆ, ಸಮಯ ಬಹಳ ಕಡಿಮೆ ಇರುತ್ತದೆ. ನೋಡು ಈಗ ನನ್ನ ದೇಶ ಹೊತ್ತು ಉರಿಯುತ್ತಿದೆ. ನನ್ನ ವಯಸ್ಸು ಈಗ ೨೩, ನಾನು ಈ ದೇಶಕ್ಕೆ ಏನಾದರಾಗಲಿ ನನ್ನ ಕೆಲಸ ನಾನು ಮಾಡಿಕೊಂಡಿರುತ್ತೇನೆ ಬೇರೆ ದೇಶಕ್ಕೆ ಹಾರುತ್ತೇನೆ ಎಂಬ ಹುಚ್ಚು ಕಲ್ಪನೆ ನನಗಿಲ್ಲ. ನನ್ನ ದೇಶದಲ್ಲಿ ಸಮಾನತೆಯಿರಬೇಕು, ಎಲ್ಲರೂ ಮರ್ಯಾದೆಯಿಂದ ಬದುಕಬೇಕು, ಯಾರಿಗೂ ಅನ್ಯಾಯ ಆಗಬಾರದು. ಸಮನಾಗಿ ಸುಖ, ದುಃಖ ಎರಡೂ ಹಂಚಿಕೊಂಡಿರುವ, ಒಬ್ಬರ ದುಃಖಕ್ಕೆ ಒಬ್ಬರಾಗಿ ಇನ್ನೊಬ್ಬರ ಸಂತೋಷಕ್ಕೆ ಪಾಲುದಾರರಾಗಿ ಇರುವ ಸಮಾನತೆಯ ಸಮಾಜ ನಮ್ಮ ಕತಲೂನ್ಯಾ ಆಗಬೇಕು” ಎಂದು ಒಂದೇ ಬ್ರೆಥಿನಲ್ಲಿ ಹೇಳುತ್ತಾ ಹೋದಳು.

“ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ, ಸಮಬಗೆಯ ಸಮಸುಖದ ಸಮದುಃಖದ, ಸಾಮರಸ್ಯದ ಸಾಮಗಾನಲಹರಿಯ ಮೇಲೆ, ತೇಲಿ ಬರಲಿದೆ ನೋಡು, ನಮ್ಮ ನಾಡು!” ಎಂಬ ಸಾಲೇ ಹುಡುಗಿಯ ಮನಸ್ಸಿನಲ್ಲಿ ಮೊಳಗುತ್ತಿತ್ತು.

ಗೋಪಾಲಕೃಷ್ಣ ಅಡಿಗರು ಕರ್ನಾಟಕದ ಬಗ್ಗೆ ಎಷ್ಟೋ ದಶಕಗಳ ಹಿಂದೆ ಬರೆದಿದ್ದ ಸಾಲು, ಇಲ್ಲಿನ ಕತಲೂನ್ಯಾದ ಹುಡುಗಿ ಎಲೆನಾ ತನ್ನ ಭಾಷೆ ಕತಲಾನ್ ನಲ್ಲಿ ಹೇಳುತ್ತಿರುವ ಸಾಲುಗಳು ಎಲ್ಲವೂ ಒಂದೇ ಆಗಿತ್ತು. ಕರ್ನಾಟಕವೆಂಬ ರಸದ ನಾಡನ್ನ ಮತ್ತೆ ಕಟ್ಟುವ ಅವಕಾಶ ನಮಗೂ ಬರಲಿ ಎಂದು ಬೇಡಿಕೊಂಡಳು.

ಎಲೆನಾ ಮತ್ತೆ ಶುರುಮಾಡಿದಳು, “ನನ್ನ ದೇಶ ಅದೆಷ್ಟು ವರ್ಷಗಳಿಂದ ಪರಕೀಯರ ಆಳ್ವಿಕೆಯಲ್ಲಿ ಸಿಕ್ಕಿ ನಲುಗಿದೆ, ಅವರಿಗೆ ನಾವು ತೆರಿಗೆ ಕಟ್ಟಬೇಕು, ನಮ್ಮಿಂದಲೇ ಜಾಸ್ತಿ ತೆರಿಗೆ ಹೋಗೋದು, ಆದರೆ ನಮಗೇನೂ ವಾಪಸ್ಸು ಬರೋದಿಲ್ಲ, ಅದೂ ಭಿಕ್ಷೆಯ ಹಾಗೆ ನೀಡುತ್ತಾರೆ. ನಮ್ಮ ನೆಲದಲ್ಲಿ ನಾವೇ ಕಟ್ಟಿಕೊಂಡ ಸಾಮ್ರಾಜ್ಯವನ್ನ ನೆಲಸಮ ಮಾಡುತ್ತಾರೆ, ನಮ್ಮ ಭಾಷೆ, ಸಂಸ್ಕೃತಿ, ಸಂಗೀತ ಎಲ್ಲವನ್ನೂ ತುಳಿದು ಅವರ ಭಾಷೆ, ಸಂಗೀತ, ಸಂಸ್ಕೃತಿಯನ್ನ ನಮ್ಮ ಮೇಲೆ ಹೇರುತ್ತಾರೆ, ಮಾತೆತ್ತಿದರೆ ಕತಲಾನ್ ನಿಮ್ಮ ಭಾಷೆ, ಆದರೆ ಇಡೀ ಸ್ಪೇನಿಗೆ ಸ್ವಾನಿಷ್ ಲಿಂಕ್ ಭಾಷೆಯಾಗಲಿ ಎಂದು ಹೇಳಿ ನಮ್ಮ ಮಕ್ಕಳಿಗೆ ಸ್ಪಾನಿಷ್ ಕಲಿಸಲು ಬರುತ್ತಾರೆ. ಕಡೆಗೆ ಧರ್ಮದಲ್ಲೂ ಅದನ್ನ ಬೆರೆಸಿ ಇಲ್ಲಿನ ಜನರನ್ನ ಮೋಡಿ ಮಾಡಿದ್ದಾರೆ, ಅಲ್ಲಿ ನೋಡು ಈ ಅಂಗಡಿಯ ಮುಂದೆ ಬರೆದಿರೋದು, “ಜೀಸಸ್ ಸ್ಪಾನಿಷ್ ಮಾತಾಡುತ್ತಾನೆ” ಎಂದು. ಚರ್ಚಿನಲ್ಲಿ ನಮ್ಮ ಭಾಷೆಯ ಪ್ರಾರ್ಥನೆ ಬಿಟ್ಟು ಇನ್ನ್ಯಾವುದರಲ್ಲೋ ನಡೆಯುತ್ತಿದೆ.” ಎಂದು ತನ್ನ ಆತಂಕವನ್ನ ವಿವರಿಸಲು ಶುರು ಮಾಡಿದಳು.

“ಅವರ ಬಳಿ ರಾಜಧಾನಿ ಇದೆ ಎಂದು ಇಷ್ಟೆಲ್ಲಾ ಮಾಡುವ ಹುನ್ನಾರ ಯಾಕೆ, ನಿಮ್ಮ ದೇಶಕ್ಕೆ ಬ್ರಿಟೀಷರು ಬಂದಾಗ ನಿಮಗೂ ಹೀಗೆ ಅನ್ನಿಸುತ್ತಿತ್ತಲ್ವಾ, ನಿಮ್ಮ ಭಾಷೆ ಮತ್ತು ಧರ್ಮದ ಮೇಲೆ ಆಕ್ರಮಣ ಆಯಿತೇನೋ ಅಲ್ವಾ” ಎಂದು ಪ್ರಶ್ನೆ ಮಾಡಿದಳು. “ಎಲೆನಾ ಧರ್ಮದ ವಿಚಾರವನ್ನ ನಾನು ಮಾತಾಡಲಾರೆ, ಧರ್ಮ ಅವರವರ ಪರ್ಸನಲ್ ವಿಚಾರ, ಭಾಷೆ ಸಾರ್ವಜನಿಕ. ನಮ್ಮ ಮೇಲೂ ಇಂಗ್ಲೀಷ್ ದಾಳಿಯಾಯಿತು, ಆದರೆ ನಮ್ಮ ಭಾಷೆಯನ್ನ ನಮ್ಮ ನಾಲಿಗೆ ಮೇಲೆ ಕುಣಿಸೋದಕ್ಕೆ ಕಾರಣ ನಮ್ಮ ಅಮ್ಮಂದಿರು. ಜಗತ್ತು ಯಾವ ಭಾಷೆ ಮಾತಾಡಿದರು ಅಮ್ಮಂದಿರ ಬಳಿ ಮಕ್ಕಳು ಅದನ್ನೇ ಮಾತಾಡಬೇಕು ಎಂದು ಹೇಳುವ ಕಾರಣ ಅದಿನ್ನೂ ಉಳಿದಿದೆ. ಇಂಗ್ಲೀಷ್ ನಮಗೆ ಈಗಿನ ಕಾಲದ ಜಗತ್ತಿಗೆ ತೆರೆದುಕೊಳ್ಳಲು ಸಹಾಯ ಮಾಡಿತ್ತು, ಇನ್ನು ಲಿಂಕ್ ಭಾಷೆ ಎಂದು ನಾವು ಯೋಚನೆಯನ್ನೂ ಮಾಡಲ್ಲಿಲ್ಲ, ಆದರೆ ನನ್ನ ಪೀಳಿಗೆಯ ಸಿಟಿ ಬ್ರೆಡ್ ಮಿಲೇನಿಯಲ್ ಎಲ್ಲರೂ ನಮ್ಮ ಭಾಷೆಯ ಮಾಧ್ಯಮ ಶಾಲೆಗಳಲ್ಲೂ ಓದಲ್ಲಿಲ್ಲ. ನನ್ನ ಮಾತೃ ಭಾಷೆಯೇ ನನಗೊಂದು ಭಾಷೆಯಾಗಿ ಮಾತ್ರ ಗೊತ್ತು ಹೊರತಾಗಿ ಮಾಧ್ಯಮವಲ್ಲ ಎಲೆನಾ, ಕೆಲವನ್ನ ಪಡೆದುಕೊಳ್ಳಬೇಕಾದಾಗ ಕೆಲವನ್ನ ಕಳೆದುಕೊಳ್ಳಬೇಕು….” ಎಂದು ದೊಡ್ಡ ಗ್ಲೋಬಲೈಸೇಝನ್ ರಾಣಿಯಾಗಿ ಸಿಕ್ಕಿದ್ದೇ ಛಾನ್ಸ್ ಎಂದು ಭಾಷಣ ಬಿಗಿಯುತ್ತಿದ್ದಳು.

ಎಲೆನಾ ಮಾತ್ರ, “ನನಗೆ ಎಲ್ಲಾ ಮಾಹಿತಿ ಮನೋರಂಜನೆ ನನ್ನ ಭಾಷೆಯಲ್ಲಿಯೇ ಸಿಗಬೇಕೆಂಬ ಫಂಡಮೆಂಟಲ್ ರೈಟ್ ಇದೆ” ಅಷ್ಟೇ ಎಂದು ಪಕ್ಕದ ಪೋಲ್ ಒಂದಕ್ಕೆ ಗುದ್ದಿ ಕೋಪದಿಂದ ಹೇಳಿದಳು. ಓಹೋ ಇದು ಕಥೆ ಇವರದ್ದು ಎಂದು ನಕ್ಕು ಸುಮ್ಮನಾದಳು. “ಆದರೆ ಎಲೆನಾ ಫ್ರಾಂಕೋನ್ನನ್ನ ಅಷ್ಟು ನೀನ್ಯಾಕೆ ಹೇಟ್ ಮಾಡ್ತೀಯಾ , ಅವನು ಸರ್ವಾಧಿಕಾರಿ ಸರಿ, ಅದು ಆ ಪೀಳಿಗೆಗೆ, ಅದ್ಯಾಕೆ ಅಷ್ಟೊಂದು ದ್ವೇಷ ನಿನಗೆ, ಏನಾಯಿತು ಸ್ವಲ್ಪ ಬಿಡಿಸಿ ಹೇಳು?” ಎಂದು ಹುಡುಗಿ ಕೇಳಿದಳು.

“ನೋಡು ಯಾವ ದೇಶದ್ದೇ ಭಾಷೆ ಅಥವಾ ಊಟ ಅದು ಅವರ ಬಹಳ ಪರ್ಸನಲ್ ವಿಚಾರವಾಗಿರತ್ತೆ. ಜನಕ್ಕೆ ಅದರ ಮೇಲೆ ಆಕ್ರಮಣ ಮಾಡಿದಾಗಲೇ ನಿಜವಾದ ಕ್ರೌರ್ಯ ಅರ್ಥವಾಗೋದು. ಫ್ರಾಂಕೋ ಅದನ್ನೇ ಮಾಡಿದ್ದು. ಊಟದ ವಿಚಾರ ಇಲ್ಲಿ ಅಷ್ಟು ಸಮಂಜಸ ಅಲ್ಲ ಆದರೆ ಭಾಷೆ ಮತ್ತು ಸಂಸ್ಕೃತಿಯ ವಿರುದ್ಧ ಹಂತಹಂತವಾಗಿ ಆಕ್ರಮಣ ಮಾಡಿದ. ನಮ್ಮ ಭಾಷೆಯಲ್ಲಿ ನ್ಯೂಸ್ ಸಹ ಬಿತ್ತರಿಸುವ ಹಾಗಿರಲ್ಲಿಲ್ಲ. ನಮ್ಮ ವಿಶ್ವವಿದ್ಯಾಲಯಗಳನ್ನ ಮುಚ್ಚಿದ್ದರು. ನಮ್ಮ ಭಾಷೆಯನ್ನ ಮಾತಾಡಲೇಬಾರದು, ನಮ್ಮ ಸಂಗೀತ ಎಲ್ಲವನ್ನು ತುಳಿದರು ಆದರೆ ದುರದೃಷ್ಟವಾತ್ ಆ ಕಾಲದಲ್ಲಿ ತೀರ ಕೆಳಮಟ್ಟದಲ್ಲಿದ್ದ ನಮ್ಮ ಆರ್ಥಿಕತೆ ಕೊಂಚವೇ ಸುಧಾರಿಸಿಕೊಳ್ಳಲು ಶುರುಮಾಡಿತ್ತು. ವಿಚಿತ್ರ ಅದರೂ ಸತ್ಯ ಇದು. ಕೋಸ್ಟಾ ಬ್ರಾವಾ ಮತ್ತು ತರಗೋಣಾದಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು , ಒಂದಷ್ಟು ಪ್ರವಾಸಿ ತಾಣಗಳು ಹೀಗೆ ಜಗತ್ತಿನೆಲ್ಲೆಡೆಯಿಂದ ಜನ ಇಲ್ಲಿ ಜನ ಬಂದೆ ಸೇರಿಕೊಂಡು ಇದ್ದರು. ಆ ನೆವಕ್ಕೇನೋ ಎಲ್ಲರೂ ಬರೋ ಕತಲಾನ್ ಮಾತಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗೋದಿಲ್ಲ ಎಂದೂ ಕೆಳವರ್ಗದ , ಮಧ್ಯಮವರ್ಗದವರನ್ನ ನಂಬಿಸಿ ಅವರಿಗೆ ಮೆತ್ತಗೆ ಸ್ಪಾನಿಷ್ ಕಲಿಸುವ ತನ್ನ ಭಾಷೆಯ ಬಗ್ಗೆ ಸಿಕ್ಕಾಪಟ್ಟೆ ಕೀಳರಿಮೆ ಹುಟ್ಟಿಸುವ, ಆಗಾಗ ಸ್ಪಾನಿಷ್ ಕಲಿತರೆ ಇಷ್ಟು ಬಹುಮಾನ ಎನ್ನುವ ಘೋಷಣೆಗಳನ್ನ ಮಾಡಿ ಜನರಿಗೆ ತಮ್ಮತನದಲ್ಲಿ ಕೀಳರಿಮೆಯನ್ನ ತೋರಿಸಲು ಶುರುಮಾಡಿದರು. ಇದನ್ನೇ ನಂಬಿದ ಜನ ಕತಲಾನ್ ಮಾಧ್ಯಮ, ಭಾಷೆಯನ್ನೇ ಮರೆತು ಬೇರೆ ಬೇರೆ ಭಾಷೆ ಕಲಿತರೆ ತಮ್ಮ ಜೀವನ ಉದ್ಧಾರವಾಗುತ್ತದೆ ಎಂದು ನಂಬಿ ತಮ್ಮತನವನ್ನ ಬಿಟ್ಟುಕೊಟ್ಟರು. ಕತಲಾನ್ ಸಂಗೀತ ನೃತ್ಯದ ಬದಲು ಫ್ಲಮೆಂಕೋ ಬಂದು. ನಿಮ್ಮ ಜಿಪ್ಸಿ ಸಂಗೀತ ಬಂತು. ಕಡೆಗೆ ನಮ್ಮ ಕತಲಾನ್ ಸರ್ ನೇಮ್ ಗಳನ್ನೂ ಕಿತ್ತುಹಾಕಿಸಿದರು. ಹೀಗೆ ಒಂದೊಂದಾಗಿ ಒಂದು ಪೀಳಿಗೆಯಭಾಷಾ ಪ್ರೇಮವನ್ನ ಹಿಸುಕಿ ಕೊಂದು ಹಾಕಿ ನಮ್ಮತನವನ್ನೆಲ್ಲಾ ನಾಶ ಮಾಡಿದ ಕ್ರೂರಿ ಅವನು” ಎಂದು ಮುಖ ಕೆಂಪು ಮಾಡಿಕೊಂಡು ಹೇಳಿದಳು ಎಲೆನಾ…

ಆದರೆ ಹುಡುಗಿಗೆ ಮಾತ್ರ, “ಅದೇನೋ ನಮ್ಮ ಸಂಗೀತ ಜಿಪ್ಸಿ ಅಂದೆಯಲ್ಲ, ಏನದು” ಎಂದಳು. ರೋಮ್ ಬೆಂಕಿ ಹತ್ತಿಕೊಂಡಾಗ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬ ಮಾತಿನಂತೆ ಹುಡುಗಿಗೆ ತನ್ನ ಊರಿನಲ್ಲಿ ಯಾವುದು ಜಿಪ್ಸಿ ಸಂಗೀತ ಎಂಬ ಹುಚ್ಚು ಪ್ರಶ್ನೆ ಹತ್ತಿತ್ತು. ನಮ್ಮೂರಿನಲ್ಲಿ ಶಾಸ್ತ್ರೀಯ ಸಂಗೀತ, ರಬೀಂದ್ರ ಸಂಗೀತ , ಆಮೇಲೆ ಜನಪದ ಸಂಗೀತ ಇವೆಲ್ಲಾ ಬಹಳ ಪಾಪುಲರ್, ಇದ್ಯಾವುದು ಜಿಪ್ಸಿ ಸಂಗೀತ ಎಲ್ಲೀ ಹಾಡ್ತಾರೆ, ಅದು ನಮ್ಮದು ಅಂತ ನಿಂಗೆಲ್ಲಿ ಗೊತ್ತು ಎಂದು ಅವಳನ್ನ ಕೇಳುತ್ತಲೇ ಇದ್ದರು.

ಎಲೆನಾ, “ಬೆಂಕಿ ಬಿತ್ತು ನಿನ್ನ ಜಿಪ್ಸಿ ಸಂಗೀತಕ್ಕೆ, ಇದೇ ಇದೇ ಮನಸ್ಥಿತು ನಮ್ಮ ಜನರಿಗೆ ಫ್ರಾಂಕೋ ಇದ್ದಾಗ ಇದ್ದಿದ್ದು, ಏನು ಬೇಕೋ ಅದನ್ನ ಮರೆತು ಅವರ ಪಾಡಿಗೆ ಅವರಿದ್ದದ್ದು… ” ಎಂದು ಬೈಯ್ಯುತ್ತಲೇ ಬಾರ್ಸೆಲೊನಾಟಾ ಬೀಚಿನ ಹತ್ತಿರ ಕೇಳುತ್ತಿದ್ದ ಸಂಗೀತಗಾರನ ಸ್ವರದ ದಿಕ್ಕಿಗೆ ಇಬ್ಬರು ಓಡೋಕೆ ಶುರುಮಾಡಿದ್ದರು..

ಅದೇ ಅದೇ ಜಿಪ್ಸಿ ಸಂಗೀತ ಅದೆ……

‍ಲೇಖಕರು avadhi

February 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. ಸಂಗನಗೌಡ

    ಹತಾಶೆ, ಇರದುದರೆಡೆಗೆ ತುಡಿಯುವುದರಿಂದ ತನ್ನೊಳಗಿನ ಅಸ್ಮಿತೆಯನ್ನು ಕಳೆದುಕೊಳ್ಳಬೇಕಾಗುತ್ತದೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: