ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಲ್ಲಗೆ ಹೊರಸೂಸುತ್ತಾ ಸುಡುತ್ತಾನೆ..

smitha makalli

ಸ್ಮಿತಾ ಮಾಕಳ್ಳಿ

ಪ್ರತಿ ದಿನವೇ…

1.
ಅಲ್ಲೊಬ್ಬ
ಗುಪ್ಪೆಯಂತಹ ಮನುಷ್ಯನಿದ್ದಾನೆ
ಹೇಗೆ ಎನ್ನುತ್ತೀರ
ನನ್ನ,ನಿಮ್ಮ ಹಾಗೆಯೇ
she2ಕಣ್ಣು,ಮೂಗು,ಕಿವಿ ಎಲ್ಲವೂ
ಬಹುಶಃ
ನಮ್ಮಂತೆ ನಡೆಯಬಲ್ಲನೇನೋ
ಹಲವು ಬಾರಿ ನೋಡಲೆತ್ನಿಸಿದ್ದೇನೆ
ಪದರ ಪದರವಾಗಿ ಸುಳಿವ ಸಿಪ್ಪೆಯಂತೆ
ಕಂಡರೂ ಊಹಿಸಲು ಆಗದಂತಹ
ಕಣ್ಣುಗಳು ಹೌದು
ಅದೆಂತಹ ಸುಳ್ಳನಾಡದ
ನಿಸ್ತೇಜವಾದ ಕಣ್ಣುಗಳು
ಅದಕ್ಕೇ ಅವನು ನಮ್ಮಂತಲ್ಲಾ!

2.
ಮಹಡಿ ಮನೆಯ ಸುಂದರಿಯ
ಬಾಚಣಿಗೆಯ ಹಲ್ಲು ಯಾತರದ್ದೋ
ಹೊಳೆಯುವ ಕಂಬದಂತೆ
ಬಲು ನಾಜೂಕು
ಅವಳ ಒಡನಾಟವು ಸಹ
ಅವಳು ನೆಟ್ಟಿರುವ ತುಳಸಿಯಷ್ಟೇ
ಉಲ್ಲಸಿತ ಅವಳ ಇರುವು

3.
ಇನ್ನು ಆ ಮೂಲೆಯಂಗಡಿಯ
ಚುರುಮುರಿಗೆ ಮುತ್ತುವ ಜನ
ಅದರಂತೆ
ಖಾಲಿ ರಸ್ತೆಗಳ ವಾರಸುದಾರರ
ಬಗೆಗೆ ಲೆಕ್ಕ ಇಟ್ಟವರುಂಟೆ

4.
ಹತ್ತಿರದ ತರಕಾರಿ
ಅಂಗಡಿಯಲ್ಲಿ ಕೊಳ್ಳಲು ಬರುವ
ಒಬ್ಬರಿಗೆ ಕೊತ್ತಂಬರಿ,ಮತ್ತೊಬ್ಬರಿಗೆ ದಂಟು
ನನಗೆ ಮಾತ್ರ ಅಲ್ಲಿ ಥರಾವರಿ ಮೀನುಗಳು
ಕಾಣಬಾರದೇಕೆ!

5.
ಇತ್ತೀಚೆಗೆ ನಮ್ಮ ಮನೆಯ
ಹಾದಿಯ ನಾಯಿಗಳು
ಎಲ್ಲಿ ಹೋದವೋ
ಅವುಗಳೋ
ನೀರಸ ರಾತ್ರಿಗಳ
ಬಂಧುಗಳು!

6.
ಜ್ವರವೇ
ಇರಲಾರದು
ಇದು ಅಸ್ಪಷ್ಟ ಕನಸಿನಂತಹ
ಚಹರೆ
ಸಧ್ಯ ಬೆಚ್ಚಗೆ ಟೋಪಿ ತೊಟ್ಟು
ಕುಳಿತಿದ್ದೇನೆ
ತರುವಾಯ ಸಿಗುವ
ಪ್ರತಿ ದಿನವೇ!
ಈ ಚಳಿಗಾಲವ ಕಳೆದುಬಿಡುವ…
cups facesಚಡಪಡಿಸುತ್ತಿರುವ ಸೊಗೆಯ
ಕೆಂಪು ಅಡರಿಗೆ
ಮತ್ತಷ್ಟು ಮೌನವಾಗಿ

ಕಪ್ಪಾಗುವ ಒಂದೊಂದು ಕಣವು
ಒಂದೊಮ್ಮೆ ಉಕ್ಕಿ
ಶೂನ್ಯದ ಸುಖಕ್ಕೆ
ಪರಿತಪಿಸಿ ಗೂಡಲಿ
ಮುದುರಿ ಅಂಟಿ
ಇಂಚಿಂಚು ನಶಿಸುವಾಗ
ಹಸಿರ ಹಕ್ಕಿಯ ನೆನಪು!

ಸೌದೆ ಉರಿಯುತ್ತಲಿದೆ
ಅದರಂತೆ ಪುಟ್ಟನ
ಮಗ್ಗಿಯ
ಗೆರೆಗಳ ಹಿಡಿದು
ಕೂಡುವ
ಇಲ್ಲಾ ಕಳೆಯುವ
ಲೆಕ್ಕ ನೆನಪುಗಳಿಗೆ
ಇದ್ದಿದರೆ ನಾನು
ಪುಟ್ಟನಂತೆ
ಉರು ಹೊಡೆಯುತ್ತಲೆ
ಇರಬಹುದಿತ್ತೆನೊ!
ಲೆಕ್ಕ ಎಂದಿಗೂ ತಪ್ಪುವುದೇ
ಆದ್ದರಿಂದ ಮನುಷ್ಯರ ವಾಸನೆಗಳ
ಆಳಕ್ಕಿಂತ
ಉರಿದ ಫ಼್ರೈಗಳ ಎಣಿಕೆ
ಮತ್ತದರ ಘಮ
ಮನಸ್ಸಿಗೆ ಮಲ್ಲಿಗೆ ಮೆಳೆಯಾಗಿ
ಹಬ್ಬುತ್ತಲೆ
ದಿನವೂ
ಉರಿವ ಕೆಂಡವ
ಬೂದಿಯೊಳಗೆ ಜರುಗಿಸಿಕೊಳ್ಳುವ
ಒಲೆಯ ತಾಮ್ರದ ತಾಟಿಗೆ
ನಿತ್ಯದ ಜಳಕ.

ಅಜ್ಜಿಯ ಸೌದೆ ರಾಶಿಯೊಳಗಿನ
ಜರಿಗಳಿಗೆ ಎಷ್ಟು ಬಗೆಯ ಕಾಲುಗಳಿದ್ದರೆನೂ
ಅವು ಚಲಿಸುವ ದಿಕ್ಕು ಒಂದೆ!
ನಮ್ಮ ನಮ್ಮ ದಿಕ್ಕುಗಳಿಗೆ
ನಿಂತ ಕೈದಾರಿಗಳ ದೂರುತ್ತಾ
ಅವುಗಳನ್ನು
ನಮ್ಮಂತೆ  ಸುಳಿದಾಡುವ
ಸೊಗಸಾದ  ಹಬೆಗೆ
ಹೋಲಿಸೋಣ,
ಅಲ್ಲೆಲ್ಲೋ
ಕಂಡು ಕಾಣದಂತಿರುವ
ನಾವೆಂಬ
ಅಪ್ಪಟ
ನಿಜದಂತಹ ಸುಳ್ಳಿಗೆ!

ಹಸಿರು ಗೋಲಿ ಸೋಡಗಳ
ಉತ್ಕಟತೆಯ ಪಾಠ
ಇಂಗಿದಷ್ಟು ತೆರೆಯುವ
ಪುಟಗಳಿಗೆ ನಾಜೂಕಾಗಿ
ಗಡಿಯಾರದ ಹೂವಿನಂತೆ
ಮೂಲೆಯಲ್ಲಿ ಅಳುಕುಗಳ
ತುಂಬಿಕೊಂಡು ಅರಳುವಾಗ
ನನ್ನಜ್ಜಿಯ ಒಲೆ ಸಣ್ಣಗೆ
ನಗುವುದಂತೆ.
ಬಾ ಎಂದಿನಂತೆ
ಅವರೆ ಸಿಪ್ಪೆಯ
ಸುಲಿಯುತ್ತಾ
ಮಗ್ಗುಲಲ್ಲಿ
ಬೆಂಕಿ ಕಾಯಿಸುತ್ತಾ
ಈ ಚಳಿಗಾಲವ ಕಳೆದುಬಿಡುವ.

‍ಲೇಖಕರು Admin

29 February, 2016

2 Comments

  1. sangeetha raviraj

    ತುಂಬಾ ಚೆನ್ನಾಗಿದೆ ಸ್ಮಿತಾರವರೇ……

  2. ಅನ

    ಚೆಂದದ ಸಾಲುಗಳು ತುಂಬಾ ಇಷ್ಟವಾದವು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading