ʼಮೆಟ್ರೋಪಾಲಿಟನ್‌‌ ‌‌ಭೂತಪ್ರೇತಗಳು‌ʼ

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

‘ನಿಜವಾಗ್ಲೂ ನಿಮಗಿದು ಗೊತ್ತೇ ಇಲ್ವಾ ಸಾರ್?ʼ

ಎಂದ ಆತ ನನ್ನನ್ನು ಅಡಿಯಿಂದ ಮುಡಿಯವರೆಗೂ ನೋಡಿದ. ನಾನು ಇಲ್ಲವೆಂದು ತಲೆಯಾಡಿಸಿದೆ. ಇದೊಂದು ದಂಡಪಿಂಡ ಎಂಬ ಭಾವನೆಯೊಂದು ಅವನ ಮುಖದಲ್ಲಿ ಮೂಡಿ ಮರೆಯಾಯಿತು. ಹೋಗಲಿ, ಈಗ ಗೊತ್ತಾಯ್ತಲ್ವಾ, ಇನ್ನಾದರೂ ಹುಶಾರಾಗಿರಿ ಎಂದ. ಹುಶಾರಾಗಿರೋದಕ್ಕೆ ಏನು ಮಾಡಬೇಕು ಅಂದೆ. ಆತನಿಗೆ ರೋಸಿಹೋಯಿತು. ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗಿ ಎಂಬಂತೆ ನನ್ನನ್ನು ಸಂಪೂರ್ಣ ಕಡೆಗಣಿಸಿ, ಆತ ನನ್ನ ಸಹೋದ್ಯೋಗಿಯತ್ತ ತಿರುಗಿಕೊಂಡ.

‘ಹೌದ್ಹೌದು… ನನಗೂ ಅಲ್ಲಿಂದ ಏನೇನೋ ಶಬ್ದಗಳು ಕೇಳಿದ ನೆನಪಿದೆ’, ಎಂದು ಆತನ ಮುಖಭಾವಕ್ಕೆ ಪ್ರತಿಕ್ರಿಯೆಯೆಂಬಂತೆ ನನ್ನ ಸಹೋದ್ಯೋಗಿ ಉತ್ತರಿಸಿದ. ಅವನ ಶಿಫಾರಸ್ಸಿನೊಂದಿಗೆ ಮೊದಲು ನನ್ನ ಜೊತೆ ಮಾತನಾಡುತ್ತಿದ್ದ ವ್ಯಕ್ತಿಯ ಮಾತಿಗೀಗ ಬಲ ಬಂದಂತಾಯಿತು. ಎಂಥಾ ದ್ರೋಹಿಗಳು ನೀವೆಲ್ಲಾ, ಇವೆಲ್ಲವನ್ನು ನನಗೆ ಹೇಳಲೇ ಇಲ್ಲವಲ್ಲ ಎಂದು ನಾನು ಉದ್ಗರಿಸಿದೆ. ನನಗೂ ಅಲ್ಪಸ್ವಲ್ಪ ಮಾತ್ರ ಗೊತ್ತಿತ್ತು ಮಾರಾಯ ಎಂದು ನನ್ನ ಸಹೋದ್ಯೋಗಿ ಮಿತ್ರ ತಿಪ್ಪೆ ಸಾರಿಸಲು ಪ್ರಯತ್ನಿಸಿದ. 

ನಾನು ಕೂಡಲೇ ಕುಳಿತಲ್ಲಿಂದ ಎದ್ದು ಆ ಜಾಗದತ್ತ ಬಂದು ನೋಡಿದೆ. ನಮ್ಮ ಆಫೀಸಿನ ಪಾಗಾರದಾಚೆ ಇರುವ ಆ ಪುಟ್ಟ ಭಾಗವು ನೋಡಲು ಕೊಂಚ ವಿಚಿತ್ರವಾಗಿದ್ದರೂ ಸುಂದರವಾಗಿತ್ತು. ಅದು ಖಾಲಿ ಜಾಗವಾಗಿದ್ದರಿಂದ ಸ್ಥಳೀಯರು ಅದನ್ನು ಹಲವು ರೀತಿಯಲ್ಲಿ ಬಳಸುತ್ತಿದ್ದರು. ಮಧ್ಯಾಹ್ನದ ಹೊತ್ತಿನಲ್ಲಿ ಊಟದ ನಂತರ ಕೆಲವರು ಸಿಗರೇಟು ಸೇದುತ್ತಾ ಅಲ್ಲಿ ಅಡ್ಡಾಡುತ್ತಿದ್ದರೆ, ಸಂಜೆ ಕೆಲ ಮಕ್ಕಳು ಬಂದು ಅಪರೂಪಕ್ಕೆ ಕ್ರಿಕೆಟ್ ಆಡುತ್ತಿದ್ದಿದ್ದುಂಟು. 

ಅಲ್ಲಿ ದೊಡ್ಡ ವೇದಿಕೆಯಂತಹ ಎತ್ತರದ ಜಾಗವೊಂದಿತ್ತು. ಆ ಭಾಗಕ್ಕೆ ಹತ್ತಲು ಎರಡೂ ಕಡೆಯಿಂದ ಮೆಟ್ಟಿಲುಗಳು ಬೇರೆ ಇದ್ದವು. ಇನ್ನು ವೇದಿಕೆಯ ಎರಡೂ ಭಾಗದಲ್ಲಿದ್ದ ಎರಡು ಗುಮ್ಮಟದಂತಹ ಆಕೃತಿಗಳು ಆ ಜಾಗಕ್ಕೆ ಯಾವುದೋ ಪ್ರಾಚೀನ ಇತಿಹಾಸವಿರುವ ಸಾಧ್ಯತೆಯನ್ನು ಹೇಳುವಂತಿದ್ದವು. ಅಷ್ಟಿದ್ದರೂ ಅದು ಪ್ರಾಚೀನ ನಿರ್ಮಾಣವೇನೂ ಆಗಿರಲಿಲ್ಲ. ಹೆಚ್ಚೆಂದರೆ ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ಹಿಂದೆ ನಿರ್ಮಿಸಿರಬಹುದು. ಬಣ್ಣ ಬಳಿದು ಹಲವು ವರ್ಷಗಳೇ ಆಗಿದ್ದ ಪರಿಣಾಮ, ಹಳೆಯ ಬಣ್ಣವು ಮಾಸಿ ಗುಮ್ಮಟವು ತನ್ನ ಸೌಂದರ್ಯವನ್ನು ಕಳೆದುಕೊಂಡಿತ್ತು. 

ಆ ಗುಮ್ಮಟಗಳು ಪಾರಿವಾಳಗಳಿಗೆ ಮೆಚ್ಚಿನ ಸ್ಥಳವಾಗಿದ್ದನ್ನು ನಾನು ಈ ಮೊದಲು ಗಮನಿಸಿದ್ದೆ. ಹೀಗೆ ಹೋದ ಪಾರಿವಾಳಗಳು ಅಲ್ಲಿಂದ ವಿಲಕ್ಷಣ ದನಿಯನ್ನು ಹೊರಡಿಸುತ್ತಿದ್ದವು. ಹೀಗಾಗಿ ಕತ್ತಲಾದ ನಂತರ ಆ ಜಾಗಕ್ಕೆ ನಿಗೂಢ ಪ್ರಭಾವಳಿಯೊಂದು ಮೈಗೂಡುತ್ತಿತ್ತು. ನಾನು ಮಧ್ಯಾಹ್ನದ ಊಟವನ್ನು ಆಫೀಸಿನ ಕೋಣೆಯಲ್ಲೇ ಮಾಡುತ್ತಿದ್ದರಿಂದ ಹಗಲಿನಲ್ಲಿ ಅತ್ತ ಹೋಗುವ ಪರಿಪಾಠವಿರಲಿಲ್ಲ. ಇನ್ನು ಕತ್ತಲಾದ ನಂತರ ಅತ್ತ ಹೋಗುವ ಅಗತ್ಯವೂ ನನಗಿರಲಿಲ್ಲ. ಹೀಗೆ ನಿತ್ಯ ನೋಡುತ್ತಿದ್ದರೂ, ನನ್ನ ಪಾಲಿಗೆ ಬರದ ಆ ಜಾಗವು ಮಾತ್ರ ಅಂದು ಅಚಾನಕ್ಕಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವಂತೆ ಕಾಣುತ್ತಿತ್ತು.  

ಅಲ್ಲೇನೋ ಭೂತಪ್ರೇತದಂತಹ ಸಂಗತಿಗಳಿವೆ ಎಂದು ಆತ ನಮಗಂದು ಹೇಳುತ್ತಿದ್ದ. ಕತ್ತಲಾದ ನಂತರ ನಮ್ಮ ಆಫೀಸಿನಲ್ಲೂ ನಾವು ಓಡಾಡಬಾರದು ಎಂಬುದು ಆತನ ಸಲಹೆಯಾಗಿತ್ತು. ಈ ನಿಟ್ಟಿನಲ್ಲಿ ನಮ್ಮ ಆಫೀಸಿನ ಬಗ್ಗೆಯೂ ಒಂದು ಮಾತು ಹೇಳಬೇಕು. ಕೇಂದ್ರಬಿಂದುವಿನಿಂದ ನಾಲ್ಕು ವಿಂಗ್ ಗಳಲ್ಲಿ ಹಂಚಿಕೆಯಾಗಿದ್ದ ನಮ್ಮ ಆಫೀಸು, ಇತರ ಸಾಮಾನ್ಯ ಕಟ್ಟಡಗಳಂತಿರದೆ ಕೊಂಚ ವಿಭಿನ್ನವಾಗಿತ್ತು. ಕಟ್ಟಡದ ಒಟ್ಟಾರೆ ಆಕಾರವು ವೃತ್ತವಾಗಿದ್ದರೂ, ಕೋಣೆಗಳು ವೃತ್ತದ ಪರಿಧಿಯ ಭಾಗದಲ್ಲಷ್ಟೇ ಇದ್ದವು. ಹೀಗಾಗಿ ವೃತ್ತದ ಕೇಂದ್ರಬಿಂದುವಿನಿಂದ ಸೇತುವೆಯಂತೆ ಸಾಗುತ್ತಿದ್ದ ರ್ಯಾಂಪುಗಳು ಪರಿಧಿಯ ಭಾಗದಲ್ಲಿದ್ದ ನಾಲ್ಕು ವಿಂಗುಗಳನ್ನು ಸೇರಿಸುತ್ತಾ, ವೃತ್ತಮಧ್ಯದ ಸಾಕಷ್ಟು ಸ್ಥಳವನ್ನು ವ್ಯರ್ಥವಾಗಿಸಿದ್ದವು. 

ಆ ದಿನಗಳಲ್ಲಿ ಆಫೀಸ್ ಕಟ್ಟಡದ ವಿಂಗುಗಳನ್ನು ಎ, ಬಿ, ಸಿ ಮತ್ತು ಡಿ ಬ್ಲಾಕುಗಳೆಂದು ವಿಂಗಡಿಸಲಾಗಿತ್ತು. ಪ್ರತಿಯೊಂದು ಬ್ಲಾಕಿನಲ್ಲೂ ಒಂದರಿಂದ ನಲವತ್ತರವರೆಗಿನಷ್ಟು ಸಂಖ್ಯೆಗಳನ್ನು ಹೊಂದಿದ್ದ ಕೋಣೆಗಳು ಅಲ್ಲಿದ್ದವು. ಅಸಲಿಗೆ ಬ್ಲಾಕು ಮತ್ತು ಕೋಣೆಯ ಸಂಖ್ಯೆಗಳನ್ನು ಪೈಂಟ್ ಬ್ರಷ್ಷಿನಲ್ಲೇ ಆಯಾ ದ್ವಾರಗಳ ಮೇಲೆ ಬರೆಯಲಾಗಿತ್ತು. ಆದರೆ ಬಳಿದಿದ್ದ ಬಣ್ಣಗಳು ಮಾಸಿದ ಪರಿಣಾಮವಾಗಿ ಬ್ಲಾಕು ಮತ್ತು ಕೋಣೆಗಳ ಸಂಖ್ಯೆಗಳು ಅಲ್ಲಿ ಬಹುತೇಕ ಮರೆಯಾಗಿ ಹೋಗಿದ್ದವು. 

ಇದರಿಂದ ನೇರ ಪರಿಣಾಮವಾಗುತ್ತಿದ್ದಿದ್ದು ನಮ್ಮ ಆಫೀಸಿಗೆ ಹೊಸದಾಗಿ ಬರುತ್ತಿದ್ದ ವ್ಯಕ್ತಿಗಳಿಗೆ. ಸರಕಾರಿ ಆಫೀಸುಗಳೆಂದರೆ ಹಲವಾರು ಮಂದಿ ಬಂದುಹೋಗುವುದು ನಿತ್ಯದ ಮಾತು. ಆಫೀಸಿನ ಕಟ್ಟಡದ ಬಗ್ಗೆ ಅಷ್ಟಾಗಿ ತಿಳಿದಿಲ್ಲದ ವ್ಯಕ್ತಿಯೊಬ್ಬ ಯಾವುದಾದರೊಂದು ಬ್ಲಾಕಿನೊಳಗೆ ಹೋಗಿಬಿಟ್ಟರೆ, ನಂತರ ಹೊರಬರಲು ಪರಿತಪಿಸುತ್ತಿದ್ದ. ಜೊತೆಗೇ ಒಂದು ಬ್ಲಾಕಿನಲ್ಲಿದ್ದ ಅಧಿಕಾರಿಯನ್ನು ಭೇಟಿಯಾದ ನಂತರ, ಮತ್ತೊಂದು ಬ್ಲಾಕಿನಲ್ಲಿದ್ದ ಅಧಿಕಾರಿಯನ್ನು ಭೇಟಿಯಾಗಬೇಕಿದ್ದರೆ ಬಂದವರಿಗೆ ಹೇಗೆ ಹೋಗಬೇಕೆಂದೇ ತಿಳಿಯುತ್ತಿರಲಿಲ್ಲ. ಒಂದಕ್ಕೊಂದು ನೂರು ಪ್ರತಿಶತ ಸಾಮ್ಯತೆಯಿದ್ದ ಈ ಬ್ಲಾಕುಗಳು ಯಾರನ್ನಾದರೂ ಸುಲಭವಾಗಿ ಯಾಮಾರಿಸುವಂತಿದ್ದವು. ಹೀಗಾಗಿ ಬಂದವರು ಜಾತ್ರೆಯಲ್ಲಿ ಕಳೆದುಹೋದ ಮಗುವಿನಂತೆ ಕೊಂಚ ತಡಕಾಡುತ್ತಾ ಕಾಲಕಳೆಯುವುದು ಸಾಮಾನ್ಯವಾಗಿತ್ತು. ಈ ಕಾರಣಕ್ಕಾಗಿ ನಾವು ನಮ್ಮ ಆಫೀಸಿನ ಕಟ್ಟಡಕ್ಕೆ “ಭೂಲ್ ಭುಲಯ್ಯಾ” ಎಂಬ ನಾಮಕರಣವನ್ನು ಬೇರೆ ಮಾಡಿದ್ದೆವು. 

ಹೀಗೆ ಇಂತಿಪ್ಪ ಆಫೀಸಿನ ಹೊರಭಾಗದ ಖಾಲಿ ಆವರಣದಲ್ಲಿ ಭೂತಪ್ರೇತಗಳು ಮನೆ ಮಾಡಿಕೊಂಡಿವೆಯೆಂದು ಒಬ್ಬ ಕತೆ ಹೇಳುತ್ತಿದ್ದ. ಆ ದಿನಗಳಲ್ಲಿ ನಮ್ಮ ವಿಭಾಗವು ಹೊಸದಾಗಿ ಆರಂಭವಾಗಿದ್ದರಿಂದ ಕೆಲಸಗಳು ಬೆಟ್ಟದಷ್ಟಿದ್ದವು. ಹೀಗಾಗಿ ನಮ್ಮಂತಹ ಯುವ ಎಂಜಿನಿಯರುಗಳ ಪಡೆ ರಾತ್ರಿಯ ಎಂಟು-ಎಂಟೂವರೆಯವರೆಗೆ ಉಳಿದು ಕೆಲಸಗಳನ್ನು ಮಾಡುವುದು ಸಾಮಾನ್ಯ ಮಾತಾಗಿತ್ತು. ಇನ್ನು ಆಫ್ರಿಕನ್ ದೇಶಗಳಿಂದ ಗಣ್ಯರು ಆಗಮಿಸುತ್ತಿದ್ದ ಸಂದರ್ಭಗಳಲ್ಲೆಲ್ಲಾ ನಮ್ಮ ಕರ್ತವ್ಯಗಳಿಗೆ ಹೊತ್ತುಗೊತ್ತೆಂಬುದೇ ಇರುತ್ತಿರಲಿಲ್ಲ. ಇಷ್ಟಿದ್ದರೂ ಇಲ್ಲಿಯ ಸ್ಥಳಮಹಿಮೆಯು ನನಗೆ ಈವರೆಗೆ ತಿಳಿದಿಲ್ಲದ ಬಗ್ಗೆ ನಾನು ಅಚ್ಚರಿಗೊಂಡಿದ್ದೆ. 

ಇನ್ನು ಆ ದಿನಗಳಲ್ಲಿ ಹೊಸದಾಗಿ, ಒಳ್ಳೆಯ ವೇಗವಿದ್ದ ಇಂಟರ್ನೆಟ್ ಸೌಲಭ್ಯವನ್ನು ಅಳವಡಿಸಿದ್ದ ಪರಿಣಾಮವಾಗಿ ವಿವಿಧ ಭಾಷೆಗಳ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸುವುದು ನಮ್ಮೆಲ್ಲರ ಮನರಂಜನೆಯಾಗಿತ್ತು. ಹಾರರ್ ಚಿತ್ರಗಳ ಬಗ್ಗೆ ಒಲವಿದ್ದ ನಾನು ಮತ್ತು ನನ್ನ ಸಹೋದ್ಯೋಗಿಯೊಬ್ಬ ಈ ಗುಂಗಿನಲ್ಲಿ ಸಾವಿರಾರು ಹಾರರ್ ಚಲನಚಿತ್ರಗಳನ್ನು ನಾಲ್ಕು ಜನ್ಮಗಳಿಗಾಗುವಷ್ಟು ನೋಡಿ ಮುಗಿಸಿದ್ದೆವು. ಜಗತ್ತಿನ ಅತ್ಯುತ್ತಮ ಹಾರರ್ ಚಿತ್ರಗಳಿಂದ ಹಿಡಿದು, ಅತ್ಯಂತ ಕಳಪೆಯ ಚಿತ್ರದವರೆಗೂ ನಾವಿಬ್ಬರು ಹೀಗೆ ದಂಡಿಯಾಗಿ ನೋಡಿದ್ದೆವು. ಹೀಗಾಗಿ ಹಲವು ದೇಶಗಳ ಭೂತಗಳ ಪರಿಚಯವು ಆಗಲೇ ನಮಗಿದೆ ಎಂಬ ತಮಾಷೆಯ ಒಣಜಂಭವು ನಮಗಿತ್ತು.

ಹೀಗೆ ಫಾರಿನ್ ದೇಶಗಳ ಭೂತಗಳನ್ನು ಅತ್ಯಂತ ರೋಚಕವಾಗಿ ತೆರೆಯ ಮೇಲೆ ಕಂಡಿದ್ದ ನಮಗೆ, ಇಲ್ಲೊಬ್ಬ ಲೋಕಲ್ ಭೂತಗಳ ಬಗ್ಗೆ ಹೇಳುತ್ತಿದ್ದ. ಸಾಲದ್ದೆಂಬಂತೆ ಅವುಗಳು ನಮ್ಮ ಪಕ್ಕದಲ್ಲೇ ಇವೆ ಎಂಬುದನ್ನೂ ಒತ್ತಿ ಹೇಳುತ್ತಿದ್ದ. ಈ ಸಂಭಾಷಣೆಯ ನಂತರ ಏನಾದರೂ ವಿಚಿತ್ರವಾದ ದೃಶ್ಯ, ಸದ್ದುಗಳಿಗೆ ಎಡತಾಕುವ ಸಾಧ್ಯತೆಗಳು ಸಿಗಬಹುದೇ ಎಂದು ನಾನು ಎದುರು ನೋಡುತ್ತಿದ್ದೆ. ಆದರೆ ಅಂಥದ್ದೇನೂ ಆಗಲಿಲ್ಲ. ಕಳೆದ ಹತ್ತು ವರ್ಷಗಳಿಂದ ಆ ಆಫೀಸೂ, ಆ ಖಾಲಿಜಾಗವೂ ಕೊಂಚವೂ ಬದಲಾಗಿಲ್ಲ. ಒಂದು ದಶಕದ ಕಾಲಚಕ್ರದಲ್ಲಿ ಪಕ್ಕದ ಯಮುನೆಯಲ್ಲಿ ಸಾಕಷ್ಟು ನೀರು ಹತ್ತಿಳಿದಿದೆ. ಆದರೆ ಅಲ್ಲಿರುವ ಅಥವಾ ಇರಬಹುದಾದ ಭೂತಗಳ ಯೋಗಕ್ಷೇಮದ ವರ್ತಮಾನವು ನನಗಂತೂ ದಕ್ಕಿಲ್ಲ. 

ನಮ್ಮ ಹಳ್ಳಿಗಳಿಗೆ ವಿದ್ಯುಚ್ಛಕ್ತಿ ಬಂದ ನಂತರ ಇದ್ದ ಅಷ್ಟಿಷ್ಟು ಭೂತಗಳು ಏಕಾಏಕಿ ಸತ್ತುಹೋದವು ಎಂದು ಜೋಗಿ ಒಂದೆಡೆ ಬರೆಯುತ್ತಾರೆ. ಅಂಥದ್ದರಲ್ಲಿ ಹಗಲುರಾತ್ರಿಗಳ ಪರಿವೆಯಿಲ್ಲದೆ ದೀಪಗಳು ನಿರಂತರವಾಗಿ ಝಗಮಗಿಸುವ ಮಹಾನಗರಿಯೊಂದರಲ್ಲಿ ನಾನು ಭೂತಗಳನ್ನು ನಿರೀಕ್ಷಿಸುತ್ತಿದ್ದೆ. ಹಾಗೆ ನೋಡಿದರೆ ಭೂತಗಳ ಬಗ್ಗೆ ಆಸಕ್ತಿಯಿರುವ ಭೂತಾಸಕ್ತರಿಗೆ ಮಹಾ ಉದ್ದೇಶಗಳೇನೂ ಇರುವುದಿಲ್ಲ. ಹೆಚ್ಚೆಂದರೆ ನಮ್ಮಂತಹ ಸೃಜನಶೀಲ ಲೇಖಕರು ತಮ್ಮ ಕತೆಗಳಲ್ಲಿ ಇವುಗಳನ್ನು ಧಾರಾಳವಾಗಿ ಬಳಸಬಹುದು. ಹೇಗೂ ಭೂತಗಳು ಬಂದು ರಾಯಲ್ಟಿ ಸಂಭಾವನೆಗಳನ್ನು ಕೇಳುವುದಿಲ್ಲವಲ್ಲಾ!

ಹಿಂದೊಮ್ಮೆ ದಿಲ್ಲಿಯಲ್ಲಿರುವ ಅಗ್ರಸೇನ್ ಕೀ ಬಾವೊಲಿಗೆ ನಾನು ಹೋಗಿದ್ದಾಗ ಇಂಥದ್ದೇ ಕೆಲ ಕತೆಗಳು ಹೊರಬಂದಿದ್ದವು. ಕೊಂಚ ದೇಗುಲದಂತೆಯೂ, ಕೊಂಚ ಕೋಟೆಯ ಭಾಗದಂತೆಯೂ ಕಾಣುವ ಈ ‘ಬಾವೊಲಿ’ಗಳನ್ನು ನೋಡುವುದೇ ಒಂದು ಸೊಗಸು. ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಾಚೀನ ವಿಧಾನ ಮತ್ತು ಕಟ್ಟಡವನ್ನು ವಿವಿಧ ಹಂತಗಳಲ್ಲಿ ಒಂದಕ್ಕೊಂದು ಬೆಸೆಯುವ ಸುಂದರ ಮೆಟ್ಟಿಲುಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಹೀಗಾಗಿ ಚಿತ್ರತಂಡಗಳಿಗೂ ಕೂಡ ಚಿತ್ರೀಕರಣಕ್ಕೆ ಇದೊಂದು ಪ್ರಶಸ್ತವಾದ ತಾಣ. 

ಭೂತಪ್ರೇತಗಳ ಹಿನ್ನೆಲೆಯಿರುವ ದಿಲ್ಲಿಯ ಕುಖ್ಯಾತ ಭಾಗಗಳಲ್ಲಿ ಇದೂ ಒಂದು ಎಂದು ತಿಳಿದವರೊಬ್ಬರು ಹೇಳುತ್ತಿದ್ದರು. ಇಲ್ಲಿ ಮೆಟ್ಟಿಲುಗಳಿಂದ ಆಳಕ್ಕೆ ಇಳಿಯುತ್ತಾ ಹೋದಂತೆ ನಿಗೂಢ ಲೋಕವೊಂದಕ್ಕೆ ಪ್ರವೇಶಿಸುತ್ತಿರುವಂತೆ ಭಾಸವಾಗುತ್ತದೆ. ನಮ್ಮದೇ ಸದ್ದುಗಳು ಹವೆಯೊಂದಿಗೆ ಸೇರಿಕೊಂಡು ತಮ್ಮಷ್ಟಕ್ಕೆ ಮಗ್ಗುಲು ಬದಲಾಯಿಸುತ್ತವೆ. ಬಹುಷಃ ಈ ಕಾರಣಗಳಿಂದಲೋ ಏನೋ. ಅಗ್ರಸೇನ್ ಕೀ ಬಾವೊಲಿಯ ಮುಖ್ಯದ್ವಾರಗಳು ಜನಸಾಮಾನ್ಯರ ವೀಕ್ಷಣೆಗೆ ಸಂಬಂಧಪಟ್ಟಂತೆ ಕತ್ತಲಾಗುವ ಮುನ್ನವೇ ಮುಚ್ಚಿಹೋಗುತ್ತವೆ. ಒಟ್ಟಿನಲ್ಲಿ ನಿಗೂಢತೆಯ ಆಯಾಮಗಳು ಹೆಚ್ಚುತ್ತಾ ಹೋದಂತೆ ರಸವತ್ತಾದ ಕತೆಗಳೂ ಹುಟ್ಟಿಕೊಳ್ಳುವುದು ಸಹಜ.

ಯಾವುದೋ ಕಾಲಘಟ್ಟದಲ್ಲಾದ ಕ್ರೌರ್ಯವು ಇಂದಿಗೂ ಬೆಂಬಿಡದ ಭೂತದಂತೆ ಕಾಡುವುದು ದಿಲ್ಲಿಗೆ ಹೊಸತೇನಲ್ಲ. ‘ಖೂನಿ ದರ್ವಾಜಾ’ ಇಂತಹ ಸ್ಥಳಗಳಲ್ಲೊಂದು. ಹೆಸರೇ ಹೇಳುವಂತೆ ಇದೊಂದು ರಕ್ತಸಿಕ್ತ ಬಾಗಿಲು. ಅಕ್ಬರನ ಪುತ್ರ ಜಹಾಂಗೀರನ ಕಾಲದ ರಾಜಕೀಯ ಒಳಜಗಳದಲ್ಲಿ ಇಬ್ಬರನ್ನು ಕೊಂದು ಇಲ್ಲಿ ನೇತು ಹಾಕಲಾಗಿತ್ತಂತೆ. ತಾರಸಿಯಲ್ಲಿ ಒಣಗಲು ಹಾಕಿರುವ ಬಟ್ಟೆಗಳಂತೆ, ಶವಗಳು ಕೊಳೆತುಹೋಗುವವರೆಗೂ ಅವುಗಳನ್ನು ಅಲ್ಲೇ ಬಿಡಲಾಗಿತ್ತು.

ಸುಲ್ತಾನ ಔರಂಗಜೇಬ್ ತನ್ನ ಸಹೋದರನಾದ ದಾರಾ ಶಿಕೋವನ ತಲೆಯನ್ನು ಕಡಿದು ಇಲ್ಲಿ ನೇತು ಹಾಕಿದ್ದನೆಂಬ ಹಿನ್ನೆಲೆಯೂ ಕೂಡ ಈ ದ್ವಾರಕ್ಕಿದೆ. ಇಂದು ಖೂನಿ ದರ್ವಾಜಾದ ದ್ವಾರವು ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ಕಾರಣ ಅದಕ್ಕೆ ಇಲ್ಲಸಲ್ಲದ ಭಯಾನಕತೆಯೇನೂ ಒಲಿದುಬಂದಿಲ್ಲ. ಆದರೂ ಜಗತ್ತಿನ ಎಲ್ಲೆಡೆ ಆಗುವಂತೆ ಜನರ ಕತೆಗಳ ಮೂಲಕವಾಗಿ ಇಲ್ಲೂ ಹಲವು ಭೂತಗಳು ಹುಟ್ಟಿ ಸಾಯುವುದುಂಟು; ಅಡ್ಡಾಡಿ ಬರುವುದೂ ಉಂಟು. 

ದಿಲ್ಲಿಯ “ಸಿರಿ” ಕೋಟೆಗೂ ಕೂಡ ಇಂಥದ್ದೊಂದು ವಿಲಕ್ಷಣ ಹಿನ್ನೆಲೆಯಿದೆ. ಅಸಲಿಗೆ ಇಲ್ಲಿ ‘ಸಿರಿ’ ಪದವು ‘ಸಿರ್’ ಅಥವಾ ‘ಸರ್’ ಎಂಬ ಪದಮೂಲದಿಂದ ಹುಟ್ಟಿಕೊಂಡಿದೆ. ಹಿಂದಿ/ಹಿಂದೂಸ್ತಾನಿಯಲ್ಲಿ ಸಿರ್ ಅಥವಾ ಸರ್ ಎಂದರೆ ‘ತಲೆ’ ಎಂಬ ಅರ್ಥವಿದೆ. ಅಲ್ಲಾವುದ್ದೀನ್ ಖಿಲ್ಜಿ ನಿರ್ಮಿಸಿದ್ದ ಎಂದು ಹೇಳಲಾಗುವ ಈ ಕೋಟೆಯ ಅಡಿಪಾಯದ ನಿರ್ಮಾಣದಲ್ಲಿ ಸುಮಾರು ಎಂಟು ಸಾವಿರ ಮಂಗೋಲಿಯನ್ ಸೈನಿಕರ ತಲೆಗಳನ್ನು ಬಳಸಲಾಗಿದೆ ಎಂಬ ಪ್ರತೀತಿಯಿದೆ. ಹೀಗೆ ಸುಮಾರು ಏಳುನೂರು ಚಿಲ್ಲರೆ ವರ್ಷಗಳ ಹಿಂದೆ ನಡೆದಿದ್ದ ತಲೆದಂಡದ ಪರಿಣಾಮವಾಗಿ ಈ ಕೋಟೆಯು ಇಂದಿಗೂ ತನ್ನಲ್ಲೊಂದು ರಹಸ್ಯಮಯ ಛಾಪನ್ನು ಉಳಿಸಿಕೊಂಡಿದೆ. 

ಭೂತಗಳು ಇವೆಯೋ ಇಲ್ಲವೋ ಎಂಬುದು ದೇವರಿದ್ದಾನೋ ಇಲ್ಲವೋ ಎಂಬ ಪ್ರಶ್ನೆಯಷ್ಟೇ ಹಳಸಲು. ಹೀಗಾಗಿ ಸೋಜಿಗಗಳನ್ನು ಕಾಪಿಟ್ಟುಕೊಳ್ಳಲಾದರೂ, ರೋಚಕ ಕತೆಗಳನ್ನು ಸವಿಯಲಾದರೂ ಭೂತಗಳನ್ನು ನಾವು ಉಳಿಸಬೇಕಾಗುತ್ತದೆ, ಅಷ್ಟಿಷ್ಟು ನಂಬಬೇಕಾಗುತ್ತದೆ. ಕತೆಗಳು ಹಳ್ಳಿಗಳಲ್ಲೇ ಹುಟ್ಟಬೇಕು ಎಂದಿಲ್ಲವಲ್ಲಾ! ಹೀಗಾಗಿ ಭೂತಗಳು ನಮ್ಮಂತೆ ದಿಲ್ಲಿಯಂತಹ ಮಹಾನಗರಕ್ಕೂ ವಲಸೆ ಬಂದಿವೆ. ಹಿಂದೆ ಹಳ್ಳಿಗಳಲ್ಲಿ ಒಂಟಿಮನೆ ದೆವ್ವ, ಕೊಳ್ಳಿ ದೆವ್ವಗಳಿದ್ದಂತೆ ಮಹಾನಗರಿಗಳಲ್ಲಿ ಮೆಟ್ರೋ ದೆವ್ವ, ಫ್ಲೈ ಓವರ್ ದೆವ್ವ, ಫಾರ್ಮ್ ಹೌಸ್ ದೆವ್ವಗಳೂ ಅಲ್ಲಲ್ಲಿ ಕಾಣಸಿಕ್ಕರೆ ಅಚ್ಚರಿಯೇನಿಲ್ಲ. 

‘ಹೇಳಿ ಇಷ್ಟು ಹೊತ್ತಾದರೂ ಮ್ಯಾಗಿ ಇನ್ನೂ ಬಂದಿಲ್ವಲ್ಲಾ” ಎಂದು ಮಾತಿನ ನಡುವೆ ಸುಮ್ಮನೆ ಗೊಣಗಿದೆ. ‘ಮ್ಯಾಗಿ ಮನೆ ಹಾಳಾಗ… ನಡೀರಿ, ಬೇಗ ಹೊರಡೋಣ’, ಎಂದು ಆತ ಅವಸರಿಸಿದ. ಟೈಮೆಷ್ಟಾಯಿತು ನೋಡಿದೆ. ಕತ್ತಲಾಗಿತ್ತು!

‍ಲೇಖಕರು Admin

September 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: