ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಟ್ರೊ ಸ್ಕಾನಿಂಗ್ ಮೆಷಿನ್ ಸ್ವಗತ..

ಮೆಟ್ರೋ ರೈಲು ನಿಲ್ದಾಣದಲ್ಲಿರುವ ಸ್ಕಾನಿಂಗ್ ಯಂತ್ರ ದಿನ ದಿನವೂ ಸಾವಿರಾರು ಲಗೇಜ್ ಗಳನ್ನು ಚೆಕ್ ಮಾಡುತ್ತಲೇ ಇರುತ್ತದೆ. ಅದರ ಕಣ್ಣಿಗೆ ಏನೇನೆಲ್ಲ ಬೀಳಬಹುದು?

ಬಿ ಕೆ ಗಣೇಶ್ 

ನನಗೂ ಮಾತು ಬರುತ್ತಿದ್ದಿದ್ದರೆ…
ನಾನು ಹೇಳುತ್ತಿದ್ದೆ ನಿಮಗೆ..
ಅವಳ ಕೆಂಪು ಕೈಚೀಲದ ಒಳಗೆ ಕಳಚಿಟ್ಟ ಉಂಗುರದ ಕತೆಯ; ಕರ್ಚೀಪಿನ ಕಣ್ಣೀರಿನ ಕಲೆಯ.

ನಾನು ಹೇಳುತ್ತಿದ್ದೆ ನಿಮಗೆ…
ಅಪ್ಪನ ಚೀಲದಲ್ಲಿ ಮಗನಿಗಾಗಿ ಅಮ್ಮ ಕೊಟ್ಟ ಇಪ್ಪತ್ತೈದು ಹಲಸಿನ ಹಪ್ಪಳ ಇತ್ತೆಂದು; ಮಡಚಿಮಡಚಿಟ್ಟ ಹೊಸ ಐನೂರರ ಹಿಂದೆ ಅದೆಷ್ಟು ಬೆವರಿತ್ತೆಂದು!

ನನಗೂ ಮಾತು ಬರುತ್ತಿದ್ದಿದ್ದರೆ
ನಾನು ಹೇಳುತ್ತಿದ್ದೆ…
ಅವನ ಬ್ಯಾಕ್ ಪ್ಯಾಕ್ ನಲ್ಲಿ ಅವಳಿಗಾಗಿ ಕಾದುಕೂತ ಫಾಸ್ಟ್‌ಟ್ರ್ಯಾಕ್‌ ವಾಚೊಂದಿತ್ತು; ಅವಳ ಪರ್ಸಿನಲ್ಲಿ ಇವನ ಕಾಲ್ ಗಾಗಿ ಕಾಯುತ್ತಾ ಕೂತ ಮೊಬೈಲೊಂದಿತ್ತು

ನಾನು ಹೇಳುತ್ತಿದ್ದೆ ನಿಮಗೆ…
ಆ ಚೀಲದೊಳಗಿದ್ದ ಪುಸ್ತಕದ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ಬುಕ್ ವರ್ಮ್ ನಗುತಿತ್ತು; ಇಂಕು ಕಾರುತ್ತಿದ್ದರೂ ಆಲ್ಲೇ ಬಿದ್ದಿದ್ದ ಪೆನ್ನೊಂದು ಅಳುತಿತ್ತು.

ಹರಿದುಹೋದ ಚೀಟಿ, ಬಿಪಿ ಮಾತ್ರೆ, ಓಪನ್ನಾಗದ ಬಾಟಲು, ಕಿವಿ ಕ್ಲೀನರು, ಐ ಲೈನರು, ಪಿನ್ನು..
ಮಾತು ಬರುತ್ತಿದ್ದಿದ್ದರೆ
ನಾನು ಹೇಳುತ್ತಿದ್ದೆ ಅವರ ವಯಸ್ಸೆಷ್ಟು ಎಂದು.

ನನಗೂ ಮಾತು ಬರುತ್ತಿದ್ದಿದ್ದರೆ
ನಾನು ಹೇಳುತ್ತಿದ್ದೆ…
ಆ ಚೀಲ ನೋಡಿಯೇ ಹೇಳುತ್ತಿದ್ದೆ
ಆವರಾರು ಎಂದು…!!

‍ಲೇಖಕರು avadhi

6 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading