
ಆಮಿರ್ ಬನ್ನೂರು
ನೀನು ಹೊರಟ ಮೇಲೆ
ನಿನ್ನ ಮೆಟ್ಟಿನ ಅಚ್ಚನ್ನು ಭೇಟಿಯಾದೆ..
ಬೆಟ್ಟದಷ್ಟು ನೋವು ಹೇಳಬಯಸಿತ್ತು,
ಆದರೆ ಹೇಳುವಷ್ಟು ಸಮಯವಿರಲಿಲ್ಲ..
ಆ ದಿನ ಮೆಟ್ಟುಗಳು ನಿನ್ನನ್ನು ಹೊತ್ತು
ಬಲು ಬೇಗನೆ ಹೊರಡಬೇಕಿತ್ತು
ಈ ಹೃದಯಕ್ಕೆ ಮಸಿ ಬಳಿದವನನ್ನು
ಭೇಟಿ ಮಾಡಲು, ಪ್ರೀತಿ ಹೇಳಲು
ಈ ಹೃದಯವನ್ನೇ ದಾಟಿಕೊಂಡು..
ನೀನು ತೋರಿದ ಪ್ರೀತಿಯೂ
ಬಣ್ಣಗಳ ರೂಪ ತಾಳಿದಾಗ,
ಆಗಸದ ನೀಲಮಯವೇ
ನನ್ನೊಟ್ಟಿಗೆ ಕೋಪಿಸಿಕೊಂಡಿತ್ತು
ಎಂದೂ ರಾಜಿಯಾಗದಂತೆ..
ನಿರಪರಾಧಿ ಈ ಜೀವ
ಬೆಂಕಿಯ ಮಳೆಗೆ ಒದ್ದೆಯಾಗಿ
ಮಳೆ ನಿಂತರೂ ಈ ಶರೀರ
ಬೆಂದು ಸುಡುತ್ತಲೇ ಇದೆ..
ಬೂದಿಯನ್ನು ಮಳೆ ನೀರು ಹೊಯ್ಯುತ್ತಿದೆ..

ಬೂದಿಯು ತೇಲಿ ಬಂದ
ಹೊಳೆಯ ನೀರಲ್ಲೇ ನೀನು
ಮೆಟ್ಟುಗಳನ್ನು ತೊಳೆದಾಗ
ಕಣ್ಣಂಚಿನಿಂದ ಉಕ್ಕಿದ ಕಣ್ಣೀರೂ,
ರಂಗು ರಂಗಿನ ಬಣ್ಣಗಳಾಗಿ
ಹಳ್ಳ, ಮೋರಿ, ಕೆರೆಯ ಸೇರಿದವು
ಮೆಟ್ಟುಗಳ ಅಚ್ಚಿಗೆ ಜೀವ ತುಂಬಲು..
ಕಾಯಲಾರೆ ಬರುವಳೆಂದು
ಹೇಳಲಾರೆ ಬರಬೇಕೆಂದು
ಪ್ರೀತಿಯ ಮುಖವಾಡ ಧರಿಸಿ
ಕಲ್ಮಷ ಹೃದಯದವಳಿಗೇನು ಗೊತ್ತು
ಅಸಲಿ ಪ್ರೀತಿಯ ಬೆಲೆ..?






0 Comments