ಮೂಲಭೂತವಾದದ ಮೂಲ ಹುಡುಕುತ್ತಾ…

ಹರೀಶ್ ಗಂಗಾಧರ್

ನಾನಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೆ. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದಿದ್ದ ನನಗೆ ಇಂಗ್ಲಿಷ್ ಕಲಿಯುವ ಹುಚ್ಚು. ಬೆಳಗಿನ ಜಾವ ಎದ್ದ ಕೂಡಲೇ ಬಿಬಿಸಿ, CNN ಅಥವಾ ಫಾಕ್ಸ್ ನ್ಯೂಸ್ ನೋಡುವ ಅಭ್ಯಾಸ. ಅಂದು ಬೆಳಗಿನ ಜಾವ ಟಿವಿ ಆನ್ ಮಾಡಿದ ನನಗೆ ಶಾಕ್ ಕಾದಿತ್ತು. ವಿಮಾನವೊಂದು ನೂರತ್ತು ಮಹಡಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದದ್ದು ನನಗೆ ನಂಬಲಾಗಲಿಲ್ಲ. ವಿಷಯ ಖಾತ್ರಿ ಪಡಿಸಿಕೊಳ್ಳಲು ಚಾನೆಲ್ ಬದಲಾಯಿಸಿದೆ, ಆದರೆ ಎಲ್ಲೆಲ್ಲೂ ಅದೇ ಸುದ್ದಿ.

ಆರಂಭಿಕ ಹಂತದಲ್ಲಿ ಇದೊಂದು ಅಪಘಾತ ಅಂತ ಸುದ್ದಿವಾಹನಿಗಳು ಹೇಳಿದರು, ಇನ್ನೊಂದು ಬೃಹತ್ ವಿಮಾನ ಪಕ್ಕದ ಅವಳಿ ಕಟ್ಟಡಕ್ಕೆ ಗುದ್ದಿದಾಗ ಎಲ್ಲರಿಗು ಮನದಟ್ಟಾಗಿತ್ತು ಅದೊಂದು ವ್ಯವಸ್ಥಿತ ಭಯೋತ್ಪಾದಕರ ಸಂಚು ಎಂದು. ಅಂದು ತರಗತಿಯಲ್ಲಿ ಈ ಘಟನೆಯದೇ ಚರ್ಚೆ. ಮುಸ್ಲಿಂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದ ನನ್ನ ಜೊತೆ ಓದುತ್ತಿದ್ದ ರಷ್ಯಾನ್ ಹುಡುಗಿ “They Deserve every bit of it” ಅಂತ ಅಂದಾಗ ಆಶ್ಚರ್ಯವಾಗಿತ್ತು ಮತ್ತು ಅಲ್ಲಿಂದೀಚೆಗೆ ಜಗತ್ತು ಸಂಪೂರ್ಣ ಬದಲಾಗುತ್ತದೆ ಅಂತ ನನಗೆ ಗೊತ್ತಾಗಿ ಹೋಗಿತ್ತು.

ಅವಘಡ ನೆಡೆದಾಗ, ತುರ್ತು ಪರಿಸ್ಥಿತಿಗಳಲ್ಲಿ ಅಮೇರಿಕನ್ನರು 911 ಎಂಬ ಸಂಖ್ಯೆಗೆ ಕರೆಮಾಡುತ್ತಾರೆ. ಸೆಪ್ಟೆಂಬರ್ 11ರ ಭಯೋತ್ಪಾದನೆಯನ್ನ ಬಹು ಬೇಗ 9/11 ಅಂತ ಮರುನಾಮಕರಣ ಮಾಡಲಾಯಿತು. ಇಡಿಯ ಪ್ರಪಂಚವೇ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿರುವಂತೆ ಬಿಂಬಿಸಲಾಯಿತೆಂದು ಐಜಾಜ್ ಅಹಮದ್ ಅಭಿಪ್ರಾಯ ಪಡುತ್ತಾರೆ. ಎಲ್ಲೆಡೆ ಭಯದ ವಾತಾವರಣ, ಭಯೋತ್ಪಾದನೆ ಹತ್ತಿಕ್ಕುವ ಹೆಸರಲ್ಲಿ ಎಲ್ಲರ ಮೇಲೆ ನಿಗಾ ಇಡುವುದು, ಬಂಧನ, ವಿಮಾನ ನಿಲ್ದಾಣಗಳಲ್ಲಿ ಮೈ ತಡಕುವುದು ಜಾರಿಗೆ ತರಲಾಯಿತು, ಅಂದಿನಿಂದ ವ್ಯಕ್ತಿಗತ ಪ್ರೈವೆಸಿ ಅನ್ನೋದು ಇಲ್ಲವಾಯಿತು. (CIA ಮಾದರಿಯಲ್ಲೇ ಎಲ್ಲ ದೇಶಗಳಲ್ಲೂ ಗುಪ್ತಚರ ಏಜನ್ಸಿಗಳ ಜನನವಾಯಿತು) ಎಲ್ಲೆಡೆ ಹರಡಿದ್ದ ಭಯ ಮತ್ತು ಸಂದೇಹದ ಭರ್ಜರಿ ಅನುಕೂಲ ಪಡೆದುಕೊಂಡ ಜಾರ್ಜ್ ಬುಷ್ ಮತ್ತೊಮ್ಮೆ ಅಧಿಕಾರಕ್ಕೆ ಬಂದ.

ನನಗೆ ಆ ದಿನಗಳಲ್ಲಿ ಅತಿಯಾಗಿ ಕಾಡಿದ ಕೆಲ ಪ್ರಶ್ನೆಗಳಿದ್ದವು. “ಮೂಲಭೂತವಾದವೆಂದರೇನು? ಮೂಲಭೂತವಾದ ಹುಟ್ಟಿಕೊಳ್ಳಲು ಅನುಕೂಲಕರ ವಾತಾವರಣಗಳಾವುವು? ಮೂಲಭೂತವಾದಕ್ಕೆ ಧರ್ಮವೊಂದೇ ಕಾರಣವೇ? Fundamentalism ಕುರಿತು ಸಾಕಷ್ಟು ಓದಿದೆ ಆದರೆ ಮೊಹಸಿನ್ ಹಮೀದ್ ಬರೆದ “ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್” ಕಾದಂಬರಿ ಓದುವವರೆಗೆ ನನಗೆ ಮೂಲಭೂತವಾದದ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಹಮೀದ್ ಕಾದಂಬರಿಯ ನಾಯಕ ಚಂಗೇಜ್. ಮೂಲತಃ ಪಾಕಿಸ್ತಾನದ ಲಾಹೋರ್ ನಿವಾಸಿ. ವಿದೇಶದಲ್ಲಿ ನೆಲಸಿ ಸುಖಕರ ಜೀವನ ನೆಡೆಸಬೇಕೆಂಬ ಹೆಬ್ಬಯಕೆ ಅವನಿಗೆ. ಓದಿನಲ್ಲಿ ಅತಿಯಾದ ಶ್ರದ್ದೆ, ಶ್ರಮ. ಆತನ ಅವಿರತ ಶ್ರಮದ ಫಲವಾಗಿ ಅಮೆರಿಕಾದ ಪ್ರತಿಷ್ಠಿತ ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯುತ್ತದೆ. ಅಮೇರಿಕಾದ ಬಗ್ಗೆ ನೂರಾರು ಕನಸುಗಳು ಆತನಲ್ಲಿ. ಬಿಸಿಲಿನ ತಾಪಕ್ಕೆ ಬಹುಬೇಗ ಕರಗಿಹೋಗುವ ಮಂಜುಗಡ್ಡೆಯಂತೆ, ಅಮೇರಿಕಾದ ವಾಸ್ತವ ಚಂಗೇಜ್ ಅದರ ಕುರಿತು ಕಟ್ಟಿಕೊಂಡಿದ್ದ ಭ್ರಮೆಗಳನೆಲ್ಲಾ ಕರಗಿಸಿ ಬಿಡುತ್ತದೆ.

ವಿಶ್ವವಿದ್ಯಾಲಯದ ಕಟ್ಟಡಗಳು ಪುರಾತನವಾಗಿ ಕಾಣಲೆಂದು ಆಸಿಡ್ ವಾಷ್ ನೀಡುತ್ತಿರುವುದನ್ನ ಕಾಣುತ್ತಾನೆ. ಇತಿಹಾಸವೇ ಇಲ್ಲದ ದೇಶವೊಂದು ಇತಿಹಾಸ ಸೃಷ್ಟಿಸಲು ಏನೆಲ್ಲಾ ಮಾಡಬಹುದು ಎಂಬುದನ್ನ ಮನಗಾಣುತ್ತಾನೆ. ಸಿಂಧೂ ನಾಗರೀಕತೆಯ ಕಾಲದಲ್ಲಿ ಅಮೇರಿಕಾ ಏನಾಗಿತ್ತೆಂಬ ಗಾಢ ಆಲೋಚನೆಯಲ್ಲಿ ತೊಡಗುತ್ತಾನೆ. ವ್ಯಾಸಂಗ ಮುಂದುವರೆಸಲು ಬೇಕಾದ ಹಣಕ್ಕಾಗಿ ಸಂಜೆಯ ವೇಳೆ ದಕ್ಷಿಣ ಏಶಿಯನ್ ಗ್ರಂಥಾಲಯದಲ್ಲಿ ಕೆಲಸ ಮಾಡಲು ಸೇರಿಕೊಳ್ಳುತ್ತಾನೆ. ಆ ಗ್ರಂಥಾಲಯಕ್ಕೆ ಯಾರೆಂದರೆ ಯಾರು ಹೋಗುವುದಿಲ್ಲ. ತಮಗಿಂತ ಭಿನ್ನವಾದ ಸಂಸ್ಕೃತಿ, ಕಲೆ, ಸಾಹಿತ್ಯಯನ್ನ ಅಮೇರಿಕಾ ಗಮನಿಸುವುದನ್ನೇ ಬಿಟ್ಟುಬಿಟ್ಟಿದೆ ಅಂತ ಚಂಗೇಜ್ಗೆ ಅನಿಸತೊಡಗುತ್ತದೆ. ತಮ್ಮ ಧರ್ಮದವರಲ್ಲದ, ದೇಶದವರಲ್ಲದ, ವರ್ಣದವರಲ್ಲದ ಅನ್ಯರ ಬಗ್ಗೆ ಅಮೆರಿಕನ್ನರಿಗೆ ಇರುವ ತಾತ್ಸಾರ ಅಸಡ್ಡೆಗಳ ಅನುಭವವಾಗುತ್ತದೆ.

ಇದೆಲ್ಲದರ ನಡುವೆ ಚಂಗೇಜ್ ಒಳ್ಳೆಯ ಕೆಲಸವನ್ನೇ ಗಿಟ್ಟಿಸಿಕೊಳ್ಳುತ್ತಾನೆ. ಅಂಡರ್ವುಡ್ ಸ್ಯಾಮ್ಸನ್ (US) ಎಂಬ ಕಂಪನಿಯದು. ಹೊಂಚು ಹಾಕಿ ಕಾದು ರೋಗಗ್ರಸ್ತ ಕಂಪನಿಗಳ ವಿವಶವನ್ನೇ ಬಂಡವಾಳವಾಗಿಸಿ ಅತಿ ಕಡಿಮೆ ಬೆಲೆಗೆ ಖರೀದಿ ಮಾಡುವ ಕಂಪನಿಯದು. (ಅಮೇರಿಕಾದ ಇಂಪಿರಿಯಾಲಿಸ್ಟ್ ಅಜೆಂಡಾ ಕೂಡ ಅದೇ ತಾನೆ?) ಒಮ್ಮೆ ರೋಗಗ್ರಸ್ತ ಕಂಪನಿಯ ಟೇಕ್ ಓವರ್ ಪ್ರಕ್ರಿಯೆಗೆಂದು ಮನಿಲಾ ನಗರಕ್ಕೆ ಹೋದಾಗ ಅಲ್ಲಿನ ಕೆಲಸಗಾರನೊಬ್ಬ “ಚಂಗೇಜ್ ನೀನೊಬ್ಬ ಜಾನಿಸಾರಿ ಇದ್ದಹಾಗೆ ಅಲ್ಲವೇ?” ಎಂಬ ಪ್ರಶ್ನೆ ಚಂಗೇಜ್ ನನ್ನ ದಂಗುಬಡಿಸುತ್ತದೆ.

(ಜಾನಿಸಾರಿಗಳು ಒಟ್ಟೋಮನ್ ಟರ್ಕರ ಬಲಿಷ್ಠ ಕಾಲುಳುಗಳ ಪಡೆಯಾಗಿತ್ತು. ಈ ಪಡೆ ಅತಿಯಾದ ರಾಜನಿಷ್ಠೆಗೆ ಹೆಸರುವಾಸಿಯಾಗಿತ್ತು ಆದರೆ ಆಶ್ಚರ್ಯವೆಂಬಂತೆ ಈ ಕಾಲುಳುಗಳು ಟರ್ಕರ ದಾಳಿಗೆ ಹತರಾದ ಕ್ರೈಸ್ತರ ಅನಾಥ ಮಕ್ಕಳೋ ಅಥವಾ ಯುದ್ಧದಲ್ಲಿ ಬಂಧಿಗಳಾದವರ ಮಕ್ಕಳಾಗಿರುತ್ತಿದ್ದರು. ಇವರಿಗೆ ತೀವ್ರ ತರಬೇತಿ ನೀಡಿ, ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಜಾನಿಸಾರಿಗಳನ್ನಾಗಿಸುತ್ತಿದ್ದರು ಎಂಬುದವರ ಇತಿಹಾಸ)

ತಮ್ಮ ದೇಶವನ್ನ ತೊರೆದು ಕನಸು ಕಾಣುತ್ತಾ ಅಮೆರಿಕಾಕ್ಕೆ ತೆರಳಿ ಆ ದೇಶದ ಅಭಿವೃದ್ದಿಗೆ ಶ್ರಮಿಸುತ್ತಾ ತನ್ನ ತಾಯ್ನೆಲದ ಮೇಲೆ ಅಮೇರಿಕ ನಿರಂತರವಾಗಿ ನಡೆಸುವ ದಾಳಿಯ ಕುರಿತು ಕುರುಡಾಗುವ ಕಾದಂಬರಿಯ ನಾಯಕ ಚಂಗೇಝ್ಗೆ ಕೂಡ ತಾನೊಬ್ಬ ಜಾನಿಸಾರಿ ಎಂದೆನಿಸುತ್ತದೆ.

ಚಂಗೇಝ್ ಮನಿಲದಿಂದ ಕಂಪನಿಯ ಕೆಲಸ ಮುಗಿಸಿ ವಾಪಸ್ ಬರುವ ಹೊತ್ತಿಗೆ 9/11 ಭಯೋತ್ಪಾದನೆ ಘಟಿಸಿ ಬಿಟ್ಟಿರುತ್ತದೆ. ವಿಮಾನ ನಿಲ್ದಾಣಗಳಲ್ಲಿ ಮೈ ತಡಕುವುದು, ಮುಸ್ಲಿಂರನ್ನೂ ಅನುಮಾನದಿಂದ ಕಾಣುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಎಲ್ಲೆಡೆ ಅಮೆರಿಕದ ಭಾವುಟ ಹಾರಡುತ್ತಿರುತ್ತದೆ. ಕಟ್ಟಡಗಳ ಮೇಲೆ, ಅಂಗಡಿಗಳ ಮೇಲೆ, ಮನೆಗಳ ಮೇಲೆ ಎಲ್ಲೆಲ್ಲೂ ಬಾವುಟ! ಪ್ರಪಂಚಾದ್ಯಂತ ಮುಸ್ಲಿಂರನ್ನ ಯಾವುದೇ ಆಧಾರವಿಲ್ಲದೆ ಬಂಧಿಸಿ ಸೆರಮನೆಗಟ್ಟುವುದು ದಿನನಿತ್ಯದ ಸುದ್ದಿಯಾಗುತ್ತದೆ. ಚಂಗೇಝ್ ಗಡ್ಡ ಬೆಳೆಸಿಕೊಳ್ಳುತ್ತಾನೆ, ಕಂಪನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅನುಮಾದಿಂದ ಕಾಣುತ್ತದೆ. ಹೀಗೆ ಎಲ್ಲೆಡೆ ಅವಮಾನ ಹಿಯಾಳಿಕೆಗೆ ಗುರಿಯಾಗುತ್ತಾನೆ.
ಈ ನಡುವೆ ಚಂಗೇಝ್ ಎರಿಕಾ ಎಂಬಾಕೆಯ ಪರಿಚಯವಾಗುತ್ತದೆ. ಪರಿಚಯ ಪ್ರೀತಿಯಾಗಿ ಬದಲಾಗುತ್ತದೆ. ಎರಿಕಾಗದು ಪ್ರೀತಿಯ ಎರಡನೇ ಅನುಭವ. ಮೊದಲ ಪ್ರೇಮಿ ಕ್ರಿಸ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮರಣ ಹೊಂದಿರುತ್ತಾನೆ. ಎರಿಕಾ ಚೆಂಗೇಝ್ನನ್ನು ಇಷ್ಟಪಟ್ಟರು ಮನಸ್ಪೂರ್ವಕವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಕ್ರಿಸ್ನನ್ನು ಮರೆಯಲು ಆಕೆಗೆ ಆಗುವುದೇ ಇಲ್ಲ. “ಚಂಗೇಝ್ ನೀನು ಕ್ರಿಸ್ನಂತಾದರೆ ನಾನು ನಿನ್ನನ್ನು ವರಿಸುವೆ” ಎನ್ನುತ್ತಾಳೆ. ಪ್ರಿಯತಮೆಯ ಈ ಅಸ್ವಾಭಾವಿಕ ಬೇಡಿಕೆಯಿಂದ ಆತ ತತ್ತರಿಸಿ ಹೋಗುತ್ತಾನೆ. ಎರಿಕಾಳನ್ನು ಅಮೇ(ರಿಕಾ) ಮತ್ತು ಕ್ರಿಸ್ ಅನ್ನು ಕ್ರಿಶ್ಚಿಯಾನಿಟಿ ಅಂತ ಓದಿ ಕೊಂಡರೆ ತುಂಬಾ narcisstic ಆದ, ತಮ್ಮ ಧರ್ಮ ಮತ್ತು ದೇಶವನ್ನ ಬಿಟ್ಟು ಬೇರಾರನ್ನು ಪ್ರೀತಿಯಿಂದ ಕಾಣಲಾಗದ, ಆತ್ಮೀಯವಾಗಿ ನೆಡೆಸಿಕೊಳ್ಳಲಾಗದ ವೈಟ್ ಅಮೆರಿಕನ್ ಜನರ ಚಿತ್ರಣ ಸಿಗುತ್ತದೆ.

ಭ್ರಮನಿರಸನಕ್ಕೊಳಗಾದ ಚಂಗೇಝ್ ತನ್ನ ದೇಶಕ್ಕೆ ಹಿಂದಿರುಗಿ ಲಾಹೋರ್ ವಿಶ್ವವಿದ್ಯಾಲಯದಲ್ಲಿ ಬೋಧಕನಾಗುತ್ತಾನೆ. ಅಮೆರಿಕದ ಶೋಷಕ ಸಾಮ್ರಾಜ್ಯಶಾಹಿ ನೀತಿ ಮತ್ತು ಜಗತ್ತಿನ ದೊಡ್ಡಣ್ಣನೆಂಬ ಧಿಮಾಕಿನ ಕುರಿತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾನೆ. ಹೀಗೆಲ್ಲಾ ಸಾಮ್ರಾಜ್ಯಶಾಹಿಗಳಿಗೆ ವಿರುದ್ಧವಾದ ಪ್ರತಿರೋಧದ ಪೈರುಗಳನ್ನ ನೆಟ್ಟು ಒಳ್ಳೆಯ ಫಸಲು ಪಡೆಯ ಹೋದರೆ ಅವರು ಸುಮ್ಮನಿರುತ್ತಾರೆಯೇ… ಚಂಗೇಝ್ನನ್ನು ಕೊಲ್ಲಲು ಬಹುಶಃ ಸಿಐಎ ಏಜೆಂಟ್ನನ್ನ ಲಾಹೋರಿಗೆ ಕಳುಹಿಸಿಕೊಡಲಾಗುತ್ತದೆ… ಕೆಫೆಯೊಂದರಲ್ಲಿ ಭೇಟಿ ಫಿಕ್ಸ್ ಆಗುತ್ತದೆ. ಅಲ್ಲಿ ನಡೆಯುವ ಸಂವಾದವೆ ಈ ಕಾದಂಬರಿ.

ಮೋಸಿನ್ ಹಮೀದನಿಗೆ ಮೂಲಭೂತವಾದದ ಕುರಿತಾಗಿ ಕಾದಂಬರಿಯೊಂದನ್ನು ಬರೆಯುವ ಉದ್ದೇಶವೇ ಇರಲಿಲ್ಲ. ತನ್ನ ಮೊದಲ ಕೃತಿ Moth Smoke ಬರೆದ ನಂತರ ಎರಡನೇ ಕೃತಿಯ outline ಸಿದ್ಧಪಡಿಸಿದ್ದ ಹಮೀದ್. ಅಷ್ಟರಲ್ಲಿ ಘಟಿಸಿದ 9/11 ಅವನ ಇರಾದೆಯನ್ನ ಬದಲಾಯಿಸುವಂತೆ ಮಾಡಿತು. ಮೊದಲು ಸಿದ್ಧಪಡಿಸಿದ್ದ outline, ಗೀಚಿದ್ದ ಹತ್ತಾರು ಪುಟಗಳನ್ನ ಹರಿದುಹಾಕಿ ಮೂಲಭೂತವಾದ ಜಾಡು ಹಿಡಿದು ಹೊರಟ ಹಮೀದ್ ಕೊನೆಗೆ ರಚಿಸಿದ್ದು ‘ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್’ ಎಂಬ ರೋಚಕ ಮತ್ತು insightful ಕೃತಿಯನ್ನ.
ಜಗತ್ತಿನ ಶ್ರೇಷ್ಠ ಕೃತಿಗಳು ಆ ಕಾಲದ ತುರ್ತಿನಿಂದಲೆ ಹುಟ್ಟಿವೆ ಅನ್ನೋದು ನನ್ನ ವಾದ. ಸಮಾಜದ ಬಿಕ್ಕಟ್ಟು ಬರಹಗಾರರಿಂದ ಬದ್ಧತೆ ನಿರೀಕ್ಷೆ ಮಾಡುತ್ತದೆ. ವರ್ಣಭೇದ ನೀತಿಯ ಪ್ರಕ್ಷುಬ್ಧ ವಾತಾವರಣದ ದಿನಗಳಲ್ಲಿ ಮತ್ತು ಪ್ರಭುತ್ವ ನಿರ್ಭಯವಾಗಿ ದಬ್ಬಾಳಿಕೆ, ಹಿಂಸೆಗಿಳಿದ ಕಾಲದಲ್ಲಿ ಅದರ ವಿರುದ್ಧ ಬರೆಯುತ್ತಿದ್ದ ಆಫ್ರಿಕನ್ ಬರಹಗಾರರನ್ನ ಉದ್ದೇಶಿಸಿ ಚಿನುವ ಅಚಿಬೆ ಆಡಿದ ಮಾತುಗಳು ಇಲ್ಲಿ ನೆನಪಾಗುತ್ತವೆ-
” Commitment runs right through our work… all our writers, whether they are aware of it or not, are committed writers… it’s impossible to write anything in Africa without some kind of commitment, some kind of message, some kind of protest.”

ಬದ್ಧತೆ ನಮ್ಮ ಬರಹಗಳಲ್ಲಿ ಹರಿದಾಡುತ್ತದೆ. ಅವರಿಗೆ ಅರಿವಿದೆಯೋ ಇಲ್ಲವೋ ತಿಳಿದಿಲ್ಲ ಆದರೆ ನಮ್ಮೆಲ್ಲಾ ಬರಹಗಾರರು ಬದ್ಧತೆ ಇರುವ ಬರಹಗಾರರೇ. ಬದ್ಧತೆ ಇಲ್ಲದೆ, ಸಂದೇಶವಿಲ್ಲದೆ, ಪ್ರತಿರೋಧವಿಲ್ಲದೆ ಆಫ್ರಿಕಾದಲ್ಲಿ ಬರೆಯುವುದು ಅಸಾಧ್ಯ “

(ಈ ಬದ್ಧತೆಯ ಹೊರೆ ಆಫ್ರಿಕನ್ ಸಾಹಿತ್ಯದ ಮಿತಿ ಕೂಡ ಅಂತ ಬಹಳಷ್ಟು ವಿದ್ವಾಂಸರು ವಾದಿಸಿದ್ದು ಇದೆ. ಆದರೆ ಈ ವಾದವನ್ನ ಸಂದೇಹದಿಂದಲೇ ಸ್ವೀಕರಿಸಬೇಕು. ದುರಿತ ಕಾಲದ ಬೇಡಿಕೆಗಳಿಗೆ ಸ್ಪಂದಿಸದ ಸಾಹಿತ್ಯ ಪಲಾಯನ ವಾದದ ಸಾಹಿತ್ಯ, ಅದು ಜನರ ನೋವಿಗೆ ವಿಮುಖವಾದ ಸಾಹಿತ್ಯ. ಅಂತಹ ಬರಹಗಾರರನ್ನ ಕೂಡ ತನ್ನ ಆದ್ಯ ಕರ್ತವ್ಯ ನಿರ್ಲಕ್ಷಿಸಿದ ಬರಹಗಾರ ಅಂತಲೇ ಪರಿಗಣಿಸಬೇಕು)

ಕಾಲದ ತುರ್ತು, ದುರಿತ ಕಾಲ, ಸಾಹಿತ್ಯ/ಬರಹಗಾರರ ಜವಾಬ್ದಾರಿ/ಬದ್ಧತೆ ವಿಷಯ ಬಂದಾಗ ಮೋಸಿನ್ ಹಮೀದ್ ಜೊತೆಗೆ ಮತ್ತೊಂದೆರಡು ಉದಾಹರಣೆ ಕೊಡುವುದು ಸೂಕ್ತ ಅನ್ನಿಸುತ್ತೆ. ಉದಾಹರಣೆಗಳು ವಿಷಯಾಂತರ ಅನಿಸಿದರು ಹೇಳಿಬಿಡುವೆ. ಅಮೇರಿಕಾ ಶೀತಲ ಸಮರದ ಕಾಲದ ಕಾವಿನಲ್ಲಿ ವಿಯೆಟ್ನಾಂ ದೇಶದ ಮೇಲೆ ಯುದ್ಧ ಸಾರಿತು. ಮೊದಲಿಗೆ ಬಹುಸಂಖ್ಯೆಯಲ್ಲಿ ಅಮೆರಿಕನ್ ಪ್ರಜೆಗಳು ಈ ಯುದ್ಧಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಅತಿಯಾದ ಆಡಂಬರದ, “ರಾಷ್ಟ್ರ ರಾಷ್ಟ್ರ” ವೆಂದು ಸದಾ ಎದೆ ಬಡಿದುಕೊಂಡು ಸಾಮಾನ್ಯ ಜನರಿಂದ ತ್ಯಾಗ ಬಲಿದಾನವನ್ನ ಬೇಡುವ ರಾಷ್ಟ್ರಪ್ರೇಮ (jingoism) ಎಷ್ಟು ಟೊಳ್ಳು ಎಂಬುದನ್ನ, ಮತ್ತು ಯುದ್ಧದಾಹಿ ಪ್ರಭುತ್ವ ತನ್ನದೇ ಜನರ ಮೇಲೆ ಎಸಗುವ ಕ್ರೌರ್ಯವನ್ನ ಅಮೆರಿಕನ್ ಕೌಂಟರ್ ಕಲ್ಚರ್ ಭಾಗವಾದ ಬಾಬ್ ಡಿಲನ್ ಅಂತವರು ಎಳೆ ಎಳೆಯಾಗಿ ಜನರ ಮುಂದೆ ತೆರೆದಿಟ್ಟು ಜನರ ಮನಪರಿವರ್ತನೆ ಕಾರಣರಾದರು. ಅಮೆರಿಕಾದ ಎಳೆಯ ಮನಸ್ಸುಗಳ ಮೇಲೆ ಬಾಬ್ ಡಿಲನ್ ಬರೆದ ಜಾನ್ ಬ್ರೌನ್ ಎಂಬ ಹಾಡು ತುಂಬ ಆಳವಾಗಿ ಪ್ರಭಾವಿಸಿತು. (ಹಾಡಿಗಾಗಿ ಲಿಂಕ್ ಬಳಸಿ – https://youtu.be/uS_YLI2hTIs )

ವಿಯೆಟ್ನಾಂ ದೇಶದ ಮೇಲೆ ಅನೈತಿಕ ಸಮರವನ್ನೇ ಸಾರಿದ್ದ ಅಮೆರಿಕನ್ ಸೇನೆಗೆ ಸೇರುವಂತೆ ಪ್ರೇರೇಪಿಸಿ, ರಾಷ್ಟ್ರ ರಕ್ಷಣೆ ಒಂದು ಮಹತ್ ಕಾರ್ಯವೆಂದು ನಂಬಿದ್ದ ಮಧ್ಯಮ ವರ್ಗದ ತಂದೆ ತಾಯಂದಿರನ್ನ ಕುರಿತು ಬರೆದ ಹಾಡು ಜಾನ್ ಬ್ರೌನ್. ಯುದ್ಧ ಮುಗಿದ ನಂತರ ಸಮವಸ್ತ್ರ ತೊಟ್ಟು ಪದಕಗಳೊಂದಿಗೆ ಎದೆಯುಬ್ಬಿಸಿ ಸುರದ್ರೂಪಿ ಮಗ ಬರುವನೆಂಬ ನಿರೀಕ್ಷೆಯಲ್ಲಿರುವ ತಾಯಿಗೆ ಮಗ ಕುರೂಪಿಯಾಗಿ ವೀಲ್ ಚೇರ್ ನಲ್ಲಿ ಕುಳಿತು ಬರುವುದನ್ನ ನೋಡಿ ಹೃದಯ ಹೊಡೆದು ಹೋಗುತ್ತದೆ. ಪ್ರಭುತ್ವವನ್ನ ಎದುರುಹಾಕಿಕೊಂಡು, ಪಾಪ್ಯುಲರ್ ನಂಬಿಕೆಗಳು ವಿರುದ್ಧ ಇಂತಹ ಹಾಡೊಂದನು ಬರೆದು/ಹಾಡುವ ಎದೆಗಾರಿಕೆ ಸಾಮಾಜಿಕ ಬದ್ಧತೆ ಇರುವ ಬರಹಗಾರನಿಗೆ ಮಾತ್ರ ಇರಲು ಸಾಧ್ಯ. Stanley Kubrick ಅವರ ಪಾಥ್ಸ್ ಆಫ್ ಗ್ಲೋರಿ, ಫುಲ್ ಮೆಟಲ್ ಜಾಕೆಟ್ ಮತ್ತು ಟಾಮ್ ಕ್ರೂಜ್ ಅಭಿನಯದ Born on fourth of July ನಂತಹ ಯುದ್ಧ ವಿರೋಧಿ ಚಿತ್ರಗಳನ್ನ ಮರೆಯಲಾಗುವುದಿಲ್ಲ.

ಅಚಿಬೆ ಹೇಳಿದ ಬದ್ಧತೆ, ಬಾಬ್ ಡಿಲನ್ ಗಿದ್ದ ಎದೆಗಾರಿಕೆ ನನಗೆ ಕಾಣೋದು ಮೋಸಿನ್ ಹಮೀದ್ ರಂತಹ ಲೇಖಕನಲ್ಲಿ. 9/11 ನಂತರದ ದಿನಗಳಲ್ಲಿ ಇಡೀ ಜಗತ್ತೇ ಇಸ್ಲಾಮೊಫೋಬಿಯಾ ದಲ್ಲಿ ಮುಳುಗಿ ಮೂಲಭೂತವಾದಕ್ಕೆ ಧರ್ಮ ಮಾತ್ರ ಕಾರಣವೆಂದು, ಗಡ್ಡ ಬಿಟ್ಟು, ಟೋಪಿ ಹಾಕಿದವರೆಲ್ಲಾ ಭಯೋತ್ಪಾದಕರೆಂದು suspicious ಆಗಿ ನೋಡುವ ಕಾಲದಲ್ಲಿ ತನ್ನ ಕಾದಂಬರಿಯ ಮೂಲಕ ಮೂಲಭೂತವಾದಕ್ಕೆ ಧರ್ಮವನ್ನ ಮೀರಿ ವಿಶ್ವ ಬ್ಯಾಂಕ್ ಅನುಸರಿಸುವ ಆರ್ಥಿಕ ನೀತಿಗಳು, ವ್ಯಾಪಾರೀ ಹಿತಾಸಕ್ತಿಗಳು, ತನ್ನ ಧರ್ಮವೇ/ರಾಷ್ಟ್ರವೇ ಶ್ರೇಷ್ಠವೆಂಬ ಕುರುಡು ನಂಬಿಕೆಯಲಿ ಪರರನ್ನು ಕೀಳಾಗಿ ಕಾಣುವ ದುರ್ಗುಣ, ಅತಿಯಾದ ಆಡಂಬರದ ರಾಷ್ಟ್ರ ಪ್ರೇಮ, ಬಡ ರಾಷ್ಟ್ರಗಳ ಆಂತರಿಕ ಬಿಕ್ಕಟ್ಟಿಗಳಲ್ಲಿ ಮೂಗು ತೂರಿಸುವ ತುರಿಕೆ, ಲಾಭಕ್ಕಾಗಿ ಏನನ್ನ ಬೇಕಾದರೂ ಮಾಡಿಬಿಡುವ ಕಾರ್ಪೊರೇಟ್ ಪ್ರೆಡೇಟಿವ್ ಪ್ರವೃತ್ತಿಗಳು, ಅನ್ಯರ ಮತ್ತವರ ಶ್ರೀಮಂತ ಸಂಸ್ಕೃತಿಗಳ ಬಗ್ಗೆ ಬಲಿಷ್ಠರು ತೋರುವ ಅಸಹನೆ, ಅಸಡ್ಡೆಗಳೆಲ್ಲವೂ ಕಾರಣಗಳು ಎಂದು ತೋರಿದ ಶ್ರೇಯಸ್ಸು ಹಮೀದ್ ಗೆ ಸಲ್ಲಬೇಕು.

ಅರಬ್ ರಾಷ್ಟ್ರವಾದ, ಹಲವಾರು ಅರಬ್ ರಾಷ್ಟ್ರಗಳಲ್ಲಿ ಸಕ್ರಿಯೆವಾಗಿದ್ದ ಕಮ್ಯುನಿಸಮ್, ಅಲಿಪ್ತ ಚಳುವಳಿ, ಅರಬ್ ರಾಷ್ಟ್ರಗಳ ಜನಪದ, ಯುಕ್ತಿ ಎಲ್ಲವು ನಾಶವಾಗಿ ಇಸ್ಲಾಮಿಕ್ ಕೋಆಪರೇಶನ್ ಸಂಘಟನೆ, ವರ್ಲ್ಡ್ ಮುಸ್ಲಿಂ ಲೀಗ್, ವಹಾಬಿಸಮ್ ಹುಟ್ಟಿ ಮತ್ತಷ್ಟು ತೀವ್ರವಾದ, ಮೂಲಭೂತವಾದಕ್ಕೆ ಉತ್ತೇಜನ ಸಿಕ್ಕಿದ್ದು ಹೇಗೆ ಎಂಬುದರ ಆಳವಾದ ಓದು/ಅರಿವು ನಮಗಿಂದು ಬೇಕಿದೆ. ಮೂಲಭೂತವಾದಕ್ಕೆ ಧರ್ಮವೊಂದೇ ಕಾರಣವಲ್ಲ ಎಂಬ ಜ್ಞಾನದ ದೀವಿಗೆಯನ್ನ ಮಾತ್ರ ಹಮೀದ್ ತನ್ನ ಕಾದಂಬರಿಯ ಮೂಲಕ ನನ್ನಲ್ಲಿ ಬೆಳಗಿದ್ದಾನೆ.

‍ಲೇಖಕರು Admin

October 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: