ಮೂರು ಮಕ್ಕಳು ಒಬ್ಬರನ್ನೊಬ್ಬರು ಭೇಟಿಯಾದ ಆ ಕ್ಷಣ!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ಮಾತೃಛಾಯಾ ಫೌಂಡ್ಲಿಂಗ್‌ ಹೋಮಿನಲ್ಲಿ ಹತ್ತಾರು ಮಕ್ಕಳು. ವಿವಿಧ ರೀತಿಯ ಹಿನ್ನೆಲೆಯವರು. ಅಲ್ಲಿ ಇಲ್ಲಿ ತೊರೆಯಲ್ಪಟ್ಟವರೇ ಅನೇಕ. ರಸ್ತೆಯಲ್ಲಿ ಬಿಟ್ಟು ಹೋದವರು. ಯಾವುದೋ ದೇವಸ್ಥಾನ, ಚರ್ಚ್‌ ಇಲ್ಲವೇ ಮಸೀದಿಯೆದುರು, ಬಸ್‌ಸ್ಟಾಂಡ್‌, ರೈಲ್ವೇ ನಿಲ್ದಾಣ, ಕೆಲವು ಮಕ್ಕಳನ್ನು ಕಸದ ರಾಶಿಯ ಹತ್ತಿರ, ಕೆಲವು ಬಾರಿ ಹೋಟೆಲ್‌ನಲ್ಲಿ, ಲಾಡ್ಜಿ‌ನ ರೂಮಿನಲ್ಲಿ… ಏಕೆ ಬಿಟ್ಟು ಹೋದರು? ಅಂತಹ ಪರಿಸ್ಥಿತಿ ಏನಿತ್ತು? ಆ ಪ್ರಶ್ನೆಗಳೆಲ್ಲಾ ಆ ಸಮಯಕ್ಕೆ ಅಪ್ರಸ್ತುತ. ಫೌಂಡ್ಲಿಂಗ್‌ ಹೋಮ್‌ ಎಂದರೆ ವಿವಿಧ ಕಾರಣಗಳಿಂದ ತೊರೆಯಲ್ಪಟ್ಟ ಮಕ್ಕಳಿಗಾಗಿ ಆಸ್ಪತ್ರೆ ಆಶ್ರಯ ತಾಣಗಳು ಎಂದರ್ಥ. ಮಾತೃಛಾಯಾದಲ್ಲಿ ಆಸ್ಪತ್ರೆ ಮತ್ತು ಆಶ್ರಯ ಎರಡೂ ಜೊತೆಯಲ್ಲಿದೆ. 

ಎಲ್ಲಿಯಾದರೂ ತೊಂದರೆಯಲ್ಲಿರುವ ಮಕ್ಕಳು ಕಂಡುಬಂದರೆ ಪೊಲೀಸರಿಗೆ ಸುದ್ದಿ ಮುಟ್ಟಿದರೆ ಆ ಮಕ್ಕಳನ್ನು ಮೊದಲು ಹತ್ತಿರದ ಆಸ್ಪತ್ರೆಗೆ ಒಯ್ಯಬೇಕು, ಆಮೇಲೆ ಹತ್ತಿರದ ಶಿಶು ಮಂದಿರಕ್ಕೆ ದಾಖಲಿಸಬೇಕು. ಇದು ಅಂದಿನ ಮಕ್ಕಳ ನ್ಯಾಯ ಕಾನೂನು ೧೯೮೬ ಸೂಚಿಸಿದ್ದ ವಿಧಿವಿಧಾನ. ಮಧ್ಯದಲ್ಲಿ ಎಷ್ಟೋ ಬಾರಿ ‘ಸಿಕ್ಕವರಿಗೆ ಸೀರುಂಡೆ’ ಎಂಬಂತೆ, ಮಕ್ಕಳಿದ್ದವರೂ ಇನ್ನೊಂದು ಮಗು ಇರಲಿ ಎಂದು ಆಸೆ ಪಟ್ಟವರು ಅಥವಾ ಮಕ್ಕಳಿಲ್ಲದವರು, ಇಲ್ಲವೇ ನಮ್ಮ ಸಂಬಂಧಿಗೆ ಮಕ್ಕಳಿಲ್ಲ ಈ ಮಗು ಆದೀತು ಎಂದು ಒಯ್ಯುವವರು ಇಲ್ಲದಿರಲಿಲ್ಲ.

ಆಸ್ಪತ್ರೆಗಳಿಂದಲೂ (ಸರ್ಕಾರಿ, ಖಾಸಗಿ ಎಲ್ಲವೂ) ಮಕ್ಕಳನ್ನು ಯಾರಾದರೂ ಬಿಟ್ಟು ಹೋದರೆ, ತೊರೆಯುವ ನಿರ್ಧಾರ ಕಂಡುಬಂದರೆ, ಅಲ್ಲಿಂದಲೂ ಎಳೆ ಮಕ್ಕಳನ್ನು ಕಂಡವರು ಕಳ್ಳತನದಲ್ಲಿ ಒಯ್ಯುತ್ತಿದ್ದರು. ಮಧ್ಯದಲ್ಲಿ ಒಂದಷ್ಟು ಹಣಕಾಸು ಕೈಕೈ ಬದಲಾಯಿಸುತ್ತಿದ್ದುದು ಸುಳ್ಳೇನಲ್ಲ. 

ಮಕ್ಕಳನ್ನು ತಾವೇ ಸಂಸ್ಥೆಗಳಲ್ಲಿ ಬಿಟ್ಟುಬಿಡಲು ಬಂದವರೊಡನೆ ಸಂಸ್ಥೆಯ ಸಮಾಜಕಾರ್ಯಕರ್ತರು ಸಮಾಲೋಚನೆ ನಡೆಸಿ, ಅವರು ಮಗುವನ್ನೋ/ಮಕ್ಕಳನ್ನೋ ಬಿಟ್ಟು ಹೋಗಲು ಕಾರಣವನ್ನು ಗ್ರಹಿಸಿ ದಾಖಲಿಸಬೇಕು. ಜೊತೆಗೆ ಒಂದು ಮುಖ್ಯವಾದ ವಿಚಾರವನ್ನು ತಿಳಿಸಲೇಬೇಕು. ‘ನೀವು ಮನಸ್ಸು ಬದಲಾಯಿಸಿದರೆ, ಎರಡು ತಿಂಗಳೊಳಗೆ ಬಂದು ನಿಮ್ಮೊಡನೆ ಮಗುವನ್ನು ಮತ್ತೆ ಒಯ್ಯಬಹುದು.’ ಸಾಕಷ್ಟು ಸಂಖ್ಯೆಯಲ್ಲಿ ಇಂತಹ ತಾಯಿಯರು ಅಥವಾ ತಾಯಿ ತಂದೆಯರಿಬ್ಬರೂ ಹಿಂದಿರುಗಿ ಬಂದು ದಾಖಲೆಗಳನ್ನು ಒದಗಿಸಿ ತಮ್ಮ ಮಕ್ಕಳನ್ನು ಹಿಂದಕ್ಕೆ ಒಯ್ದದ್ದೂ ಉಂಟು. 

ಎಲ್ಲೋ ಸಿಕ್ಕ ಮಗುವನ್ನು ಕಾನೂನು ಬಾಹಿರವಾಗಿ ಮಕ್ಕಳನ್ನು ಒಯ್ಯುವುದು, ಸಾಕಿಕೊಳ್ಳುವುದು, ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿತ್ತು. ಮಕ್ಕಳನ್ನು ಮಾರುವುದಂತೂ ದೊಡ್ಡ ಅಪರಾಧವೆಂದೇ ಪರಿಗಣಿಸಲಾಗುತ್ತಿತ್ತು. ಹಾಗೆ ಮಾಡುವುದನ್ನು ಕಾನೂನುಬಾಹಿರ ದತ್ತು (Illegal adoption) ಇಲ್ಲೀಗಲ್‌ ಅಡಾಪ್ಷನ್‌ ಎಂದೇ ಗುರುತಿಸಲಾಗುತ್ತಿತ್ತು. ಆದರೂ ಜನ ಈ ಕಳ್ಳ ಮಾರ್ಗಕ್ಕೇ ಹೆಚ್ಚು ಹೆಚ್ಚು ಜೋತು ಬೀಳುತ್ತಿದ್ದುದು ನಮ್ಮ ಅರಿವಿಗೆ ಬರುತ್ತಿತ್ತು. ಇಷ್ಟೇ ಅಲ್ಲದೆ ಮಕ್ಕಳು ದತ್ತುವಿನಲ್ಲಿ ಬೇಕೆಂದರೆ ದತ್ತು ನೀಡುವ ಸಂಸ್ಥೆಗಳಿಗೆ ಕೈತುಂಬಾ ಹಣ ಕೊಡಬೇಕೆಂಬ ಹೆದರಿಕೆಯೂ ಇತ್ತು. (ಈಗಲೂ ಅದು ಕದ್ದುಮುಚ್ಚಿ ಆಗುತ್ತಲೇ ಇದೆ.)  

ಕೆನರಾ ಬ್ಯಾಂಕ್‌ ರಿಲೀಫ್‌ ಅಂಡ್‌ ವೆಲ್ಫೇರ್‌ ಸೊಸೈಟಿ ನಡೆಸುತ್ತಿದ್ದ ‘ಮಾತೃಛಾಯಾ-ಶಿಶು ಮಂದಿರ’ದಲ್ಲಿ ನನ್ನ ಕ್ಷೇತ್ರಕಾರ್ಯದ ಕೊನೆಯ ದಿನಗಳಲ್ಲಿದ್ದೆ (ಮಾರ್ಚ್‌-ಏಪ್ರಿಲ್‌ ೧೯೮೯). ಅಲ್ಲಿನ ಮ್ಯಾನೇಜರ್‌ ಆಗಿದ್ದ ಪದ್ಮಾ ಸುಬ್ಬಯ್ಯನವರ ನೇತೃತ್ವದಲ್ಲಿ ಶಿಶುಮಂದಿರದ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆ, ಮಕ್ಕಳ ನ್ಯಾಯ ಕಾಯಿದೆಯಂತೆ ಮಕ್ಕಳನ್ನು ಸಂಸ್ಥೆಗೆ ಬರಮಾಡಿಕೊಂಡು ಅವರನ್ನು ಕುರಿತು ಕೇಸ್ ಸ್ಟಡಿ (ಪ್ರಕರಣಾಧ್ಯಯನ) ಮಾಡುವುದು, ಮಕ್ಕಳ ಪೋಷಕರು ಯಾಕೆ ಮಕ್ಕಳನ್ನು ಬಿಟ್ಟು ಹೋದರು (ಅದು ತಾತ್ಕಾಲಿಕವೆಂದೋ, ಶಾಶ್ವತವೆಂದೋ ಪರಿಶೀಲಿಸಿ ದಾಖಲಿಸುವುದು); ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಆಸಕ್ತ ಪೋಷಕರು ಬಂದಾಗ ಅವರೊಡನೆ ಸಮಾಲೋಚನೆ ನಡೆಸಿ ಅವರಿಗೆ ದತ್ತು ಕಾನೂನು (ಹಿಂದೂ ದತ್ತಕ ಕಾಯಿದೆ ಮತ್ತು ಗಾರ್ಡಿಯನ್‌ಶಿಪ್‌ ಮತ್ತು ವಾರ್ಡ್‌ ಕಾಯಿದೆ) ಮತ್ತು ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು, ಭಾವೀ ದತ್ತು ಪೋಷಕರೊಡನೆ ಕಾರ್ಯಾಗಾರ ನಡೆಸುವುದು, ದತ್ತುವಿಗಾಗಿ ಬೇಕಾದ ಕಾಗದ ಪತ್ರಗಳನ್ನು ಸಿದ್ಧಪಡಿಸುವುದು, ನ್ಯಾಯಾಲಯಕ್ಕೆ ತೆರಳಿ ದತ್ತು ಪಡೆಯಲು ಪೋಷಕರಿಗೆ ನಿರ್ದೇಶನ ಪಡೆಯುವುದು ಮತ್ತು ಅಂತಿಮವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಮಗು ಮತ್ತು ಪೋಷಕರನ್ನು ನೋಂದಣಿ ಮಾಡಿಸುವ ಪ್ರಕ್ರಿಯೆಯನ್ನು ಪೂರೈಸುವುದು…

ಇವೇ ಮೊದಲಾದವುಗಳನ್ನು ಕುರಿತು ತಿಳಿದುಕೊಂಡಿದ್ದೆ. (ಅದರ ಫಲವಾಗಿ MSW ಅಧ್ಯಯನ ಮುಗಿದ ಮೇಲೆ ಸುಮಾರು ಆರು ತಿಂಗಳು ಅಲ್ಲಿಯೇ ಕೆಲಸವನ್ನೂ ಮಾಡಿದೆ). ಈ ಪ್ರಕ್ರಿಯೆಯಲ್ಲಿ (ಕಳೆದ ಸಂಚಿಕೆಯಲ್ಲಿ ವಿವರಿಸಿದಂತೆ) ಮಕ್ಕಳ ಅಧ್ಯಯನ, ಗೃಹ ತನಿಖೆ ಎನ್ನುವುದು ಬಹಳ ಮುಖ್ಯವಾದ ಮತ್ತು ಅನಿವಾರ್ಯವಾದ ಘಟ್ಟ.

ಅನೇಕ ಬಾರಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರದ ವಶಕ್ಕೆ ಅಥವಾ ಶಿಶುಮಂದಿರಗಳ ವಶಕ್ಕೆ ನೀಡಿ, ಕೆಲಕಾಲದ ನಂತರಲ್ಲಿ ಬಂದು ಮತ್ತೆ ಮಗುವನ್ನು ಹಿಂಪಡೆಯುವುದಾಗಿ ಹೇಳಿರುತ್ತಾರೆ. ಆದರೆ ಈ ಮಾತನ್ನು ಕೆಲವರಿಂದ ನಡೆಸಿಕೊಡಲು ಸಾಧ್ಯವಾಗಿರುವುದಿಲ್ಲ. ಕಾರಣಗಳು ನೂರಾರು. ಅಂದಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾದ ಕಾರಣ, ಹುಡುಗ ಹುಡುಗಿಯರ ಪರಿಚಯ, ಪ್ರೀತಿಯಾಗಿ, ಪರಿಣಯವಾಗಿ, ಹುಡುಗಿ ಗರ್ಭಿಣಿಯಾದಾಗ (ಮದುವೆಯಿಲ್ಲದೆ!) ಗಾಬರಿಯಾಗುವ ಹುಡುಗ ಹುಡುಗಿ ಪರಿಹಾರದ ದಾರಿ ಹುಡುಕತೊಡಗುತ್ತಾರೆ.

ಚಲನಚಿತ್ರಗಳಲ್ಲಿನ ಕತೆಗಳಂತೆಯೇ ಹುಡುಗ ತಾನು ಖಂಡಿತವಾಗಿಯೂ ನಿನ್ನ ಕೈಬಿಡುವುದಿಲ್ಲ, ನಾನು ನಿನ್ನನ್ನೂ ಈ ಮಗುವನ್ನೂ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತಾನೆ. ಆದರೆ ಈಗೇನು ಮಾಡುವುದು? ಕುಟುಂಬಗಳಲ್ಲಿ ಒಪ್ಪಿಗೆ ಪಡೆಯುವ ಸಾಧ್ಯತೆಯು ಇಲ್ಲವೇ ಇಲ್ಲ ಎಂದಾಗ ಅವರೇ ಎಲ್ಲೋ ಬಿಟ್ಟು ಹೋಗಬಹುದು, ತೊರೆದಿರಬಹುದು ಅಥವಾ ಆಸ್ಪತ್ರೆಗಳ ನೆರವಿನಿಂದಲೋ, ಪೊಲೀಸ್‌ ಠಾಣೆಯ ನೆರವಿನಿಂದಲೋ, ಯಾರದಾದರೂ ಸಂಪರ್ಕದಿಂದಲೋ ಅಂತೂ ಮಗು ಹತ್ತಿರದ ಶಿಶುಮಂದಿರಕ್ಕೆ ಸೇರಿರಬಹುದು.

ಪ್ರಕರಣಗಳು ಯಾವಾಗಲೂ ಹೀಗೇ ಇರುತ್ತದೆ ಎಂದೇನಲ್ಲ. ದಂಪತಿಗಳೇ ತಮಗೆ ಈಗಲೇ ಮಗು ಬೇಡವೆಂದೋ, ಅಥವಾ ಈಗಿರುವ ಮಕ್ಕಳೊಡನೆ ಇನ್ನೊಂದು ಮಗು ಬೇಡವೆಂದೋ ತೊರೆಯಲು ನಿರ್ಧರಿಸಿರಬಹುದು. ಜೊತೆಗೆ ಅನೇಕ ಬಾರಿ ಮಕ್ಕಳನ್ನು ತೊರೆಯಲು ಯಾವುದಾದರೊಂದು ಅಂಗವಿಕಲತೆಯೂ ಕಾರಣವಾಗಿದ್ದಿರಬಹುದು (ಇದು ಎಲ್ಲರೂ ಮಾಡುತ್ತಾರೆ ಎಂದೇನೂ ಭಾವಿಸಬೇಕಿಲ್ಲ). ಸುಮಾರು ಒಂದೂವರೆ ವರ್ಷದ ಮಾತೃಛಾಯಾದ ಕ್ಷೇತ್ರಕಾರ್ಯ ಮತ್ತು ಮುಂದುವರಿದು ಕೆಲಸದ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳು, ವಿದ್ಯಾರ್ಥಿ ನಿಲಯಗಳು, ಲಾಡ್ಜ್‌ಗಳು ಮತ್ತು ಮಂದಿರ ಮಠಗಳಿಂದ ತೊರೆಯಲ್ಪಟ್ಟ ಮಕ್ಕಳನ್ನು ಪೊಲೀಸ್‌ ಸಹಾಯದೊಂದಿಗೆ ಮಾತೃಛಾಯಾಕ್ಕೆ ಕರೆತಂದಿರುವ ಅನುಭವ ನನಗಾಗಿತ್ತು.

ಇಂತಹದೊಂದು ಸಂದರ್ಭದಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಳುಹಿಸಲ್ಪಟ್ಟ ಒಂದು ಮಗು (ಆಗ್ಗೆ ಸುಮಾರು ನಾಲ್ಕು ವರ್ಷದವಳು) ಮಾತೃಛಾಯಾಕ್ಕೆ ಬಂದಿತ್ತು (ಇಲ್ಲಿ ಯಾವುದೇ ಹೆಸರುಗಳನ್ನು ಉಲ್ಲೇಖಿಸುತ್ತಿಲ್ಲ). ಸುಮಾರು ನಾಲ್ಕೈದು ವಾರದ ನಂತರ ಪದ್ಮಾ ಸುಬ್ಬಯ್ಯನವರು ನನಗೆ ಆ ಮಗುವಿನ ಫೈಲ್‌ ಕೊಟ್ಟರು. ‘ನೋಡಿದು ವಾಸು. ಇಷ್ಟು ಚಿಕ್ಕವಳು. ಸದಾ ಕಾಲ ಅಕ್ಕಂದಿರು ಬೇಕು ಅಂತಿದ್ದಾಳೆ. ಎಲ್ಲಿದ್ದಾರೆ ಅಂದ್ರೆ ಗೊತ್ತಿಲ್ಲ ಅಂತಾಳೆ. ಅಪ್ಪ ಬೇಕು. ಮಂಡ್ಯ ಅಂತಾಳೆ. ಫೈಲಿನಲ್ಲಿ ಹೆಚ್ಚು ವಿವರ ಇಲ್ಲ. ನೀನು ನೋಡು.’

ಆ ಮಗುವಿನ ವಿವರಗಳನ್ನ ಓದಿದೆ. ಫೈಲಿನಲ್ಲಿದ್ದ ಒಕ್ಕಣಿಕೆಯಲ್ಲಿ ಸ್ಪಷ್ಟತೆ ಇರಲಿಲ್ಲ. ಆ ಮಗುವಿನ ಜೊತೆ ಮಾತನಾಡಲು ಅನುಮತಿ ಪಡೆದು ಅವಳೊಡನೆ ಆಟವಾಡುತ್ತಾ ಓಡಾಡುತ್ತಾ ಒಂದಷ್ಟು ಕಾಲ ಹರಟೆ ಹೊಡೆದೆ. ತಿಳಿದದ್ದು ಇಷ್ಟು. ಅವಳಿಗೆ ಇಬ್ಬರು ಅಕ್ಕಂದಿರು, ಮಂಡ್ಯದವರು. ಅಪ್ಪ ಆಟೋ ಓಡಿಸುತ್ತಾರೆ. ಅಮ್ಮ ಇಲ್ಲ. ಮೊದಲು ಅವರನ್ನು ಮೈಸೂರಿನಲ್ಲಿ ಬಿಡಲಾಯಿತು. ಆಮೇಲೆ ಇವಳನ್ನ ಮತ್ತು ಇವಳ ಎರಡನೇ ಅಕ್ಕನನ್ನು ಬೆಂಗಳೂರಿಗೆ ಕರೆತರಲಾಯಿತು. ನಂತರ ಈ ಮಗುವನ್ನು ಮಾತ್ರ ಮಾತೃಛಾಯಾಕ್ಕೆ ತರಲಾಗಿದೆ. 

ಮಕ್ಕಳ ನ್ಯಾಯ ಕಾಯಿದೆಯ ಒಂದು ನಿಯಮವನ್ನು ಅದೇಕೋ ಏನೋ ಸಂಬಂಧಿತ ಅಧಿಕಾರಿಗಳು ಉಲ್ಲಂಘಿಸಿದ್ದರು. ‘ಯಾವುದೇ ಒಡಹುಟ್ಟಿದವರನ್ನು ಎಂತಹುದೇ ಕಾರಣಕ್ಕೂ ಬೇರ್ಪಡಿಸಬಾರದು’ (ಆದರೆ ಇಲ್ಲಿ ಆಡಳಿತಾತ್ಮಕ ತೊಂದರೆಗಳು ಏಳುತ್ತವೆ. ಆರು ವರ್ಷದ ತನಕ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳನ್ನು ಶಿಶುಮಂದಿರದಲ್ಲೇ ಜೊತೆಯಾಗಿ ಇರಿಸಿಕೊಳ್ಳಬಹುದು. ಆದರೆ ಆರು ವರ್ಷ ದಾಟಿದ ಮೇಲೆ ಬಾಲಕರು ಮತ್ತು ಬಾಲಕಿಯರನ್ನು ಬೇರೆ ಬೇರೆ ಗೃಹಗಳಲ್ಲಿ ಇರಿಸಬೇಕು ಎನ್ನುವ ನಿಯಮವೂ ಇದೆ.) ಆದರೆ ಇಲ್ಲಿನ ಪ್ರಕರಣ ಹೆಣ್ಣುಮಕ್ಕಳದ್ದೇ. ಜೊತೆಗಿರಬಹುದಲ್ಲ. ಅಕ್ಕಂದಿರು ಈಗ ಎಲ್ಲಿದ್ದಾರೆ ತಲಾಶ್‌ ಮಾಡಬೇಕಿತ್ತು.

ಹೊರಟೆ. ಮೊದಲು ಬೆಂಗಳೂರಿನ ಬಾಲಕಿಯರ ಬಾಲ ಮಂದಿರ. ನಿಮ್ಹಾನ್ಸ್‌ ಮತ್ತು ಕಿದ್ವಾಯಿ ಆಸ್ಪತ್ರೆಯ ಹಿಂಭಾಗದಲ್ಲಿದೆ. ನಿಲಯದ ಅಧಿಕಾರಿಗಳು ಬಹಳ ಸುಲಭವಾಗಿ ನಮ್ಮಲ್ಲಿದ್ದ ಮಗುವಿನ ಅಕ್ಕನನ್ನು ಗುರುತಿಸಿದರು. ಆ ಮಗುವೂ ಸಂಭ್ರಮದಿಂದ ತನ್ನ ತಂಗಿಯನ್ನು ಅಕ್ಕನನ್ನು ನೋಡಬೇಕು ಎಂದು ಹೇಳಿದಳು. ಅವಳೂ ಖಾತರಿಯಲ್ಲಿ ಹೇಳಿದ್ದು, ಅಕ್ಕ ಮೈಸೂರಿನಲ್ಲಿ ಇದ್ದಾಳೆ ಎಂದು. ಅವಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಅಷ್ಟೇನೂ ವಿವರಗಳಿರಲಿಲ್ಲ. ಈಗ ಮೈಸೂರಿಗೆ.

ಬಾಲಕಿಯರ ಬಾಲಮಂದಿರ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ದಾರಿಯಲ್ಲೇ ಇದೆ. ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಪ್ರಕರಣ ಕೇಳಿದ ಅಲ್ಲಿನ ಅಧೀಕ್ಷಕರು ಪ್ರಕರಣವನ್ನು ಬಹಳ ಜತನದಿಂದ ಗಮನಿಸಿದರು. ಮತ್ತೆ ಫೈಲುಗಳು, ದಾಖಲೆಗಳ ಪರಿಶೀಲನೆ. ಸಿಕ್ಕೇಬಿಟ್ಟಳು ಅಕ್ಕ.

ಬಾಲಕಿಯರ ಬಾಲಮಂದಿರದ ಅಧಿಕಾರಿಗಳನ್ನು ನನ್ನನ್ನು ನಂಬಿ(!) ಆ ಮಗುವನ್ನು ಮಾತನಾಡಿಸಲು ಅವಕಾಶ ಮಾಡಿಕೊಟ್ಟರು. ನಿಲಯದೆದುರಿನ ಮರದ ಕೆಳಗೆ ಕುಳಿತು ಸಾಕಷ್ಟು ಕಾಲ ಮಾತನಾಡಿದೆವು. ಗೊತ್ತಾಗಿದ್ದು ‘ಅಪ್ಪನ ಹೆಸರು ಮತ್ತು ಆತನಿಗಿದ್ದ ಇನ್ನೊಂದು (ಅಲಿಯಾಸ್‌) ಹೆಸರು. ಆಟೋ ಡ್ರೈವರ್‌. ಮನೆ ಎಲ್ಲಿದೆ ಗೊತ್ತಿಲ್ಲ. ಅಮ್ಮ ಎಲ್ಲಿ ಹೋದರೋ ತಿಳಿಯದು. ಮೂರು ಮಕ್ಕಳನ್ನು ಮೂರು ವರ್ಷದ ಹಿಂದೆ ಸರ್ಕಾರದ ವಶಕ್ಕೆ ಕೊಟ್ಟಿದ್ದು. ತನಗೆ ತಂಗಿಯರನ್ನು ನೋಡುವ ಆಸೆ’.    

ಈ ಕತೆ ಸ್ವಲ್ಪ ದೀರ್ಘವಾಯಿತೆಂದೆನಿಸುತ್ತದೆ!

ಮತ್ತೆ ಬೆಂಗಳೂರಿನ ಮಾತೃಛಾಯಾದಲ್ಲಿ ಪದ್ಮಾ ಸುಬ್ಬಯ್ಯ ಅವರೊಡನೆ ವಿಚಾರ ಹಂಚಿಕೆ, ಮಾತುಕತೆ. ಅವರ ನಿರ್ದೇಶನದಂತೆ ಈಗ ಮಂಡ್ಯದಲ್ಲಿ ಅಪ್ಪನನ್ನು ಹುಡುಕಲು ಪ್ರಯಾಣ. ಮೂರು ವರ್ಷಗಳ ಕಾಲ ತನ್ನ ಮಕ್ಕಳನ್ನು ಬಿಟ್ಟು ಒಮ್ಮೆಯೂ ನೋಡಲು ಬಾರದ ಮನುಷ್ಯ ಅಲ್ಲಿ ಇರುತ್ತಾನೆ ಎಂಬ ಖಾತರಿ ಇರಲಿಲ್ಲ. ಸಿಕ್ಕಿದರೆ ಬೆಂಗಳೂರಿಗೆ ಬರಲು ಹೇಳುವುದು.

ಮಂಡ್ಯದಲ್ಲಿ ಮೂರ್ನಾಲ್ಕು ಆಟೋ ನಿಲ್ದಾಣಗಳಿಗೆ ಹೋಗಿ ಆತನ ‘ಹೆಸರು’ ಹೇಳಿ ಹುಡುಕಲು ಯತ್ನಿಸಿದೆ. ಆಗ ಮಂಡ್ಯ ಅಷ್ಟು ದೊಡ್ಡ ಊರಾಗಿರಲಿಲ್ಲ. ಆದರೂ ಬಸ್‌ಸ್ಟಾಂಡ್‌ ಹತ್ತಿರ, ಸಕ್ಕರೆ ಕಾರ್ಖಾನೆ ಮುಂದೆ, ಡಿಸಿ ಕಚೇರಿ ಎದುರು, ನಂದಾ ಥಿಯೇಟರ್‌, ರಾಘವೇಂದ್ರಸ್ವಾಮಿ ದೇವಸ್ಥಾನದೆದುರು… ಊಹು! ಯಾರಿಗೂ ಗೊತ್ತಿಲ್ಲ.

ಅಂತೂ ಇಂತೂ ಕತೆಗಳಲ್ಲಿ ಹೇಳುವಂತೆ, ‘ಕೊನೆಯಲ್ಲಿ’ ಒಂದು ಆಶಾಕಿರಣ ಸಿಕ್ಕಿತು. (ಖಂಡಿತವಾಗಿಯೂ ಇದು ಕೊನೆಯ ಯತ್ನ ಎನ್ನುವಂತೆ) ಮಹದೇಶ್ವರ ಸ್ವಾಮಿ ದೇವಾಲಯದ ಹತ್ತಿರದ ಆಟೋ ಸ್ಟಾಂಡ್‌ಗೆ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಬಂದು ಅದೇ ಪುರಾಣ ಬಿಚ್ಚಿದೆ. ‘ಅವ್ನಾ? ಇಲ್ಲೇ ಇರಿ ಈಗ ಪ್ಯಾಸೆಂಜರ್‌ ಆಕ್ಕೊಂಡು ಓಗೋವ್ನೆ. ಬತ್ತಾನೆ’. ‘ಯಾಕೌವ್ನು. ಏನಾದ್ರೂ ಮಾಡೌವ್ನ. ಸಾಲ ಕೊಟ್ಟಿದ್ದೀರಾ?’ ಏನೇನೋ ಪ್ರಶ್ನೆಗಳು. ವಿವರ ಹೇಳುವಂತಿಲ್ಲ. ‘ಇಲ್ಲ. ಹೀಗೆ ಪರಿಚಯದವರು’ ಎಂದಷ್ಟೇ ಹೇಳಿ ಕಾದಿದ್ದಾಯಿತು.

ಆತ ಬಂದ. ಗುರುತಾಯಿತು. ನಾನು ವಿಚಾರ ಪ್ರಸ್ತಾಪಿಸಿದೊಡನೆಯೇ ‘ಇಲ್ಲಿ ಬೇಡ. ಬನ್ನಿ ಮನೇಗೆ ಓಗೋಣ’ ಎಂದು ಆಟೋ ಹತ್ತಿಸಿಕೊಂಡು ಹೊರಟೇ ಬಿಟ್ಟ. ದಾರಿಯಲ್ಲೇ ಮಾತುಕತೆಯಾಯಿತು. ಅವರದು ಪ್ರೀತಿಯ ಮದುವೆ. ಹೆಂಡತಿಯ ಕಡೆ ಯಾರೂ ಇಲ್ಲ. ಈತನಿಗೂ ತನ್ನವರು ಎಂದು ಹೇಳಿಕೊಳ್ಳುವವರು ಯಾರೂ ಇಲ್ಲ. ಆತನ ಹೆಂಡತಿ ಮೂರು ಮಕ್ಕಳನ್ನು ಹೆತ್ತ ಮೇಲೆ ಯಾವುದೋ ಕಾರಣಕ್ಕೆ ಮನೆಯಲ್ಲಿ ಸಿಡಿಮಿಡಿಯಲ್ಲಿದ್ದಳಂತೆ. ಆಕೆಗೆ ಒಬ್ಬ ಗೆಳೆಯನಿದ್ದನೆಂದೂ, ಪ್ರಾಯಶಃ ಅವನೊಡನೆ ಎಲ್ಲಿಗೋ ಹೊರಟು ಹೋಗಿರಬೇಕು, ಆಮೇಲೆ ತಾನು ಒಬ್ಬನೇ ಮಕ್ಕಳನ್ನು ನೋಡಿಕೊಳ್ಳಲಾಗಲಿಲ್ಲ. ಯಾರದೋ ಸಲಹೆಯಂತೆ ಮಕ್ಕಳನ್ನು ಸರ್ಕಾರದ ವಶಕ್ಕೆ ಕೊಟ್ಟಿರುವುದಾಗಿಯೂ ಮುಂದೆ ಬಂದು ಒಯ್ಯುವುದಾಗಿಯೂ ಹೇಳಿದ.

ಮನೆ ಸಮೀಪಿಸುವಾಗ ಆತ ಒಂದು ಎಚ್ಚರಿಕೆ ಕೊಟ್ಟ. ‘ನನ್ನ ಜೊತೆ ನನ್ನ ಫ್ರೆಂಡ್‌ ಇದ್ದಾಳೆ. ಅಲ್ಲಿ ಈ ಮಾತು ಹೆಚ್ಚು ಬೇಡ’. ಬೇಡ ಎಂದರೆ, ಮನೆಗೆ ಹೋಗುತ್ತಿರುವುದೇ ಈ ಮಾತನಾಡಲು! ನಮ್ಮನ್ನು ಕಂಡ ಕೂಡಲೇ ಅಡುಗೆ ಮನೆ ಸೇರಿದ ಆಕೆ ಹೊರಗೆ ಬರಲೇ ಇಲ್ಲ. ಆದರೆ ಒಮ್ಮೆ ಅವನನ್ನು ಕರೆದು ಏನೋ ಸ್ವಲ್ಪ ಜೋರಾಗಿ, ನನಗರ್ಥವಾಗದಂತೆ ಹೇಳಿದರು. 

ಸುಮಾರು ಒಂದು ಗಂಟೆಯ ಮಾತುಕತೆಯಲ್ಲಿ ತಿಳಿದದ್ದು, ಮಕ್ಕಳನ್ನು ಕರೆತಂದರೆ ತಾನು ಹೊರಟು ಹೋಗುತ್ತೇನೆ ಎಂದು ಆಕೆ ಖಡಾಖಂಡಿತವಾಗಿ ಹೇಳಿದ್ದು. ಈ ಮನುಷ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ ಒದ್ದಾಡುತ್ತಿದ್ದುದು. ನಾನು ಅವನಿಂದ ಒಂದು ಸ್ಪಷ್ಟ ಮಾತಿಗಾಗಿ ಕಾಯುತ್ತಿದ್ದೆ. ನನಗಿದ್ದ ನಿರ್ದೇಶನ ಅದು!

ಮುಂದಿನ ತಿಂಗಳು ಖಂಡಿತಾ ಮಾತೃಛಾಯಾಕ್ಕೆ ಬರುತ್ತೇನೆಂದು ಭರವಸೆ ನೀಡಿದ. ಮಗುವನ್ನು ನೋಡಲು ಬರುತ್ತೇನೆ ಎಂದು ಅವನು ಹೇಳಿದರೂ ಅದರಲ್ಲಿ ಅಂತಹ ಖಾತರಿ ಇರಲಿಲ್ಲ. ಮಧ್ಯದಲ್ಲಿ ನಾನೊಂದು ವಿಚಾರ ಪ್ರಸ್ತಾಪಿಸಿದೆ, ‘ಸರ್ಕಾರದ ವಶದಲ್ಲಿ ಮಕ್ಕಳನ್ನು ಹೆಚ್ಚು ದಿನ ಬಿಡುವುದು ಸೂಕ್ತವಲ್ಲ. ಮಕ್ಕಳನ್ನು ಒಂದು ನೀವೇನೇ ಬಂದು ಕರೆದುಕೊಂಡು ಹೋಗಬೇಕು, ಇಲ್ಲವೇ ಆ ಮಕ್ಕಳು ಯಾರಾದರೂ ಅರ್ಹ ಕುಟುಂಬದಲ್ಲಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಬಂದು ಒಂದು ಪತ್ರ ಕೊಡಬೇಕು’. ಅದೇಕೋ ಏನೋ ಆತ ‘ನಾನು ಒಂದು ಪತ್ರ ನಿಮ್ಮ ಕೈಯಲ್ಲೇ ಕೊಡಬಹುದೆ?’ ಎಂದು ಕೇಳಿದರು. ಕೊಡಬಹುದೋ ಇಲ್ಲವೋ! ನನಗೂ ಸ್ಪಷ್ಟತೆ ಇರಲಿಲ್ಲ. ಆಯಿತೆಂದು ನನ್ನ ನೋಟ್‌ ಪುಸ್ತಕದಲ್ಲಿ ಆತ ಬರೆದುಬಿಟ್ಟ. ಆ ಹೊತ್ತಿಗೆ ನನಗೆ ಮುಂದೇನಾಗಬಹುದು ಎನ್ನುವ ಕಲ್ಪನೆ ಇರಲಿಲ್ಲ. ಯಾತಕ್ಕೂ ಇರಲಿ ಎಂದು ಅವರನ ವಿಳಾಸ ತೆಗೆದುಕೊಂಡಿದ್ದೆ. ಆಟೋ ನಂಬರ್‌ ಬರೆದುಕೊಂಡಿದ್ದೆ.

ನನ್ನ ನೋಟ್‌ ಪುಸ್ತಕದಲ್ಲಿದ್ದ ಒಕ್ಕಣಿಕೆ ಯಾವುದೇ ಕಾನೂನಿನಂತೆ ಅಧಿಕೃತ ದಾಖಲೆಯೇ ಅಲ್ಲ! ಆದರೆ ಬರುತ್ತೇನೆಂದು ಹೇಳಿದ ಮನುಷ್ಯ ಬರಲಿಲ್ಲ. ಅವರ ವಿಳಾಸಕ್ಕೆ ಕಳುಹಿಸಿದ ಪತ್ರ, ವಿಳಾಸದಾರರು ಇಲ್ಲ ಎಂದು ಹಿಂದೆ ಬಂತು. ಮಂಡ್ಯದ ಸಿ.ಡಿ.ಪಿ.ಓ.ಒ. (ಶಿಶು ಅಭಿವೃದ್ಧಿ ಯೋಜನಾಧಿಕಾರಿ)ಗಳ ಸಹಾಯದಿಂದ ಮನೆ ಹುಡುಕಿಸಿ ಆತನನ್ನು ಪತ್ತೆ ಮಾಡುವ ಯತ್ನಕ್ಕೆ ಯಾವುದೇ ಫಲ ಸಿಗಲಿಲ್ಲ.

ಮುಂದೇನು? ಈ ಮಕ್ಕಳು ಸಂಸ್ಥೆಗಳಲ್ಲೇ ಇದ್ದು ಬೆಳೆಯಬೇಕೆ? ಬೆಳೆದರೂ ಕಾನೂನಿನಂತೆ ‘ಮಗು ತನ್ನ 18ನೇ ವಯಸ್ಸಿನ ತನಕ ಸಂಸ್ಥೆಯಲ್ಲಿರಬೇಕು. ಆಮೇಲೆ…’

ಪದ್ಮಾ ಸುಬ್ಬಯ್ಯನವರು ಈ ಕುರಿತು ಇಲಾಖೆಯೊಡನೆ ಪತ್ರ ವ್ಯವಹಾರ ಶುರು ಮಾಡಿದರು. ಅವರ ಪ್ರಸ್ತಾವನೆ ಮತ್ತು ಸದುದ್ದೇಶ ಗಮನಿಸಿ, ಸರ್ಕಾರ ಉಳಿದ ಇಬ್ಬರು ಮಕ್ಕಳನ್ನು ಮಾತೃಛಾಯಕ್ಕೆ ವರ್ಗಾಯಿಸಿತು. ಆ ಮೂರೂ ಮಕ್ಕಳು ಸುಮಾರು ವರ್ಷಗಳ ನಂತರ ಭೇಟಿಯಾದ ಕ್ಷಣ ಅತ್ಯದ್ಭುತವಾಗಿತ್ತು. ನಿಜವಾಗಿಯೂ ಸಂತೋಷಕರ. ಪದ್ಮಾ ಸುಬ್ಬಯ್ಯ ಮಾತುಮಾತಿಗೂ ವಾಸು ಮಾಡಿದ ಕೆಲಸ ಎಂದು ನೆನೆಯುತ್ತಲೇ ಇದ್ದರು. ಆಯಿತು. ನನಗೊಂದು ಕೋಡು. ಕ್ಷೇತ್ರಕಾರ್ಯದ ವರದಿಯಲ್ಲಿ ಬರೆಯಲೊಂದು ಅನುಭವ. ಮುಂದೆ?

ಈ ಮೂರೂ ಮಕ್ಕಳಿಗೆ ಆಶ್ರಯ ಒದಗಿಸುವ ವಿಚಾರ. ಆಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದವರು ಶ್ರೀಮತಿ ಮೀರಾ ಸಕ್ಸೇನಾ. ವಿಚಾರ ಅವರ ಮುಂದೆ ಬಂದಿತು. ಆ ಮಕ್ಕಳ ತಂದೆಯ ಪರಿಸ್ಥಿತಿ ವಿವರಿಸಲಿಕ್ಕೆ ನನಗೆ ವಿಶೇಷ ಆಹ್ವಾನವಿತ್ತು. ಪದ್ಮಾ ಸುಬ್ಬಯ್ಯನವರ ಪ್ರಸ್ತಾವನೆ ಆ ಮಕ್ಕಳಿಗೆ ಫಾಸ್ಟರ್‌ ಕೇರ್‌ನಲ್ಲಿ ಪೋಷಕರನ್ನು ಒದಗಿಸುವುದಾಗಿತ್ತು. ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡ ಮೀರಾ ಸಕ್ಸೇನಾ ಅವರು ವಿಶೇಷ ಅನುಮತಿ ನೀಡಿದರು.  

ಮುಂದಿನದು ಕ್ಷಿಪ್ರ ನಡೆ. ಸೂಕ್ತ ಕುಟುಂಬದ ಆಯ್ಕೆ. ಮಕ್ಕಳೊಡನೆ ಪದ್ಮಾ ಸುಬ್ಬಯ್ಯ ಮತ್ತು ಅಲ್ಲಿನ ಸಮಾಜಕಾರ್ಯಕರ್ತರು ಹಲವು ಸುತ್ತಿನ ಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ವಿವರಿಸಿದ್ದರು. ಮಕ್ಕಳು ಜೊತೆಯಾಗೇ ಯಾವುದಾದರೂ ಸೂಕ್ತ ಕುಟುಂಬದೊಡನೆ ಬೆಳೆಯುವ ಮನಸ್ಸು ಮಾಡಿದ್ದರು. ದುರಾದೃಷ್ಟವಶಾತ್‌ ಸುಮಾರು ಐದಾರು ತಿಂಗಳುಗಳ ಕಾಲ ಪರಿಶೀಲಿಸಿದರೂ ಮೂರೂ ಮಕ್ಕಳನ್ನು ಒಟ್ಟಿಗೆ ಸಾಕಿಕೊಳ್ಳುವ ಸಾಮರ್ಥ್ಯವಿರುವ ಮತ್ತು ಮನಸ್ಸಿರುವ ಕುಟುಂಬ ಸಿಗಲೇ ಇಲ್ಲ. ಮತ್ತೆ ಮಕ್ಕಳೊಡನೆ ಮಾತುಕತೆ… ಪರಿಸ್ಥಿತಿಯ ಕಷ್ಟವನ್ನು ತಿಳಿಸಿದರು. ಅವರ ಒಪ್ಪಿಗೆಯಾದ ಮೇಲೆ ಅನಿವಾರ್ಯವಾಗಿ ಮೂರು ಬೇರೆ ಬೇರೆ ಕುಟುಂಬಗಳನ್ನು ಗುರುತಿಸಬೇಕಾಯಿತು. ಆಗ ಆದ ಒಪ್ಪಂದ ಪ್ರತಿ ಮೂರು ತಿಂಗಳಿಗೊಮ್ಮೆ ಈ ಅಕ್ಕತಂಗಿಯರನ್ನು ಭೇಟಿ ಮಾಡಿಸಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಒಪ್ಪಿಕೊಂಡ ಮೇಲೆ ಮೊದಲ ಸಭೆಯನ್ನು ಮಾತೃಛಾಯದಲ್ಲಿ ನಡೆಸಲಾಯಿತು.

ಮೂರು ಮಕ್ಕಳು ಮೂರು ವಿವಿಧ ಕುಟುಂಬಗಳೊಡನೆ ಸಂಬಂಧಿಗಳಂತೆ ಬೆಳೆದರು. ಈಗ ತಮ್ಮದೇ ಕುಟುಂಬಗಳನ್ನು ಹೊಂದಿರುವ ಈ ಮೂವರೂ ನೆಮ್ಮದಿಯಿಂದಿದ್ದಾರೆ. ಪದ್ಮ ಸುಬ್ಬಯ್ಯನವರ ದೂರದೃಷ್ಟಿ ಫಲ ಕೊಟ್ಟಿತು. ನನಗೆ ತಿಳಿದಂತೆ ಈ ಪ್ರಯತ್ನದ ಮೂಲಕ ಕರ್ನಾಟಕದಲ್ಲೂ ಫಾಸ್ಟರ್‌ ಕೇರ್‌ನಲ್ಲಿ ಮಕ್ಕಳಿಗೆ ಕುಟುಂಬಗಳ ಆಶ್ರಯ ಕಲ್ಪಿಸುವ ಚಿಂತನೆಗಳು ಗಟ್ಟಿಯಾಗತೊಡಗಿತು. 

‍ಲೇಖಕರು ವಾಸುದೇವ ಶರ್ಮ

January 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: