ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಢನಂಬಿಕೆ ಮತ್ತು ವೈಚಾರಿಕ ವಿವೇಕ

ಜಿ.ಪಿ.ಬಸವರಾಜು

ವೈಚಾರಿಕ ಚಿಂತನೆ ಎಂದರೇನು? ಆಧುನಿಕ ತತ್ವಜ್ಞಾನಿ ಕೆಂಟ್ ಇದನ್ನು ಬಹಳ ಸೂಕ್ಷ್ಮವಾಗಿ ವ್ಯಾಖ್ಯಾನಿಸಿದ್ದಾನೆ. ನಮ್ಮ ಚಿಂತನೆ ಅಥವಾ ಆಲೋಚನೆಯ ಕ್ರಮ ಸತ್ಯಸಂಗತಿಯನ್ನು ಆಧರಿಸಿರಬೇಕು. ಸತ್ಯಸಂಗತಿ ಎಂದರೇನು? ನಡೆದ ಘಟನೆ ಅಥವಾ ಸಂಗತಿ. ಇಂದ್ರಿಯಾನುಭವಕ್ಕೆ ದಕ್ಕಬಹುದಾದ ಸಂಗತಿಗಳು. ನಾವದನ್ನು ನೋಡಬಹುದು; ‘ಅರಿಯ’ಬಹುದು. ಇದನ್ನು ಆಧಾರವಾಗಿಟ್ಟುಕೊಂಡು, ಇತರರನ್ನು ಒಪ್ಪಿಸಬಹುದು. ಅಂದರೆ, ಮನಸ್ಸಿನ ಭಾವ ರಾಗಗಳನ್ನು ಆಧರಿಸಿ ಈ ವೈಚಾರಿಕ ಚಿಂತನೆಯ ಮಹಲನ್ನು ಕಟ್ಟಲು ಬರುವುದಿಲ್ಲ.ಹಾಗಾದರೆ ಮನುಷ್ಯ ‘ಬಲ್ಲ’ ಎಲ್ಲವೂ ನಮ್ಮ ಇಂದ್ರಿಯಾನುಭವಕ್ಕೆ ಬರುತ್ತದೆಯೇ? ಮನುಷ್ಯನ ಅನುಭವ ಎನ್ನುವುದು ಅವನ ಇಂದ್ರಿಯಗಳ ತಿಳುವಿನ ಆಚೆಗೂ ಚಾಚಿಕೊಂಡಿಲ್ಲವೇ? ಮನುಷ್ಯನ ರಾಗ ಭಾವಗಳನ್ನು ಅವಲಂಬಿಸಿಲ್ಲವೇ? ಅವುಗಳಿಗೆ ಜಾಗವೆಲ್ಲಿ? ಹಾಗೆ ನೋಡಿದರೆ ಮನುಷ್ಯ, ವೈಚಾರಿಕ ಚಿಂತನೆಗಿಂತ ಈ ಭಾವರಾಗಗಳಿಗೇ ಹತ್ತಿರದವನಲ್ಲವೇ? ಹೌದು, ಭಾವರಾಗಗಳು ಇಲ್ಲವಾದರೆ ಮನುಷ್ಯನ ಬದುಕಿಗೆ ಅರ್ಥವಾದರೂ ಎಲ್ಲಿ?ಸಾಮಾಜಿಕ ಜೀವನದಲ್ಲಿ ನಾವು ರೂಪಿಸಿಕೊಂಡಿರುವ ಅನೇಕ ರೀತಿ ನೀತಿಗಳು, ಕಾನೂನು ಕಟ್ಟಳೆಗಳು, ಆಡಳಿತದ ಚೌಕಟ್ಟುಗಳು, ಶಿಕ್ಷೆಯ ವಿಧಿವಿಧಾನಗಳು ಇತ್ಯಾದಿ ಕೇಳುವುದು ಸತ್ಯಸಂಗತಿಯನ್ನು; ಇಂದ್ರಿಯಾನುಭವಕ್ಕೆ ಸಿಕ್ಕುವ ಪುರಾವೆಗಳನ್ನು. ಇಷ್ಟು ಸಾಕೆ? ಮನುಷ್ಯನಿಗೆ ಮುಖ್ಯವಾದದ್ದು ಅಂತರಂಗದ ಪುರಾವೆ; ಒಳ ಎಚ್ಚರ; ಅಲ್ಲಿ ನಿಜ-ಸುಳ್ಳುಗಳ ತೀರ್ಮಾನವಾಗುತ್ತದೆ. ಆದರೆ ಸಮಾಜಕ್ಕೆ ಬೇಕಾದದ್ದು ಸತ್ಯಸಂಗತಿ; ಎಲ್ಲರಿಗೂ ತೋರಿಸಿಕೊಡಲು ಬೇಕಾದ ಹೊರ ಪುರಾವೆ; ಅಂದರೆ ಇಂದ್ರಿಯ ಗ್ರಹಿಸುವ ಪುರಾವೆ.

ಭಾವರಾಗಗಳನ್ನೇ ಆಧಾರವಾಗಿಟ್ಟುಕೊಂಡು, ನಮ್ಮ ಸಮಾಜವನ್ನು ಮುನ್ನಡೆಸುವುದು ಸಾಧ್ಯವಿಲ್ಲ. ಹಾಗೆಯೇ ಕೇವಲ ‘ಸತ್ಯಸಂಗತಿಗಳನ್ನೇ’ ಆಧಾರವಾಗಿಟ್ಟುಕೊಂಡು ಒಂದು ಸಮಾಜ ಮುನ್ನಡೆಯಲು ಆಗದು. ಒಳಗಿನ ಬೆಳಕು ನಡೆಸುವ ದಾರಿಯೇ ಮನುಷನಿಗೆ ಮುಖ್ಯ. ನ್ಯಾಯಾಲಯಗಳು ಈ ಒಳಬೆಳಕನ್ನು ಒಪ್ಪಲಾರವು. ಅವಕ್ಕೆ ಇಂದ್ರಿಯಾನುಭವದ ಮೂಲಕ ಇತರರನ್ನು ಒಪ್ಪಿಸಬಹುದಾದ ಸಂಗತಿಗಳು ಮುಖ್ಯವಾಗುತ್ತವೆ.ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿರುವ ಸಮಾಜದಲ್ಲಿ, ವಸ್ತುಸ್ಥಿತಿ ಮತ್ತು ತರ್ಕವನ್ನು ಆಧರಿಸಿದ ವೈಚಾರಿಕ ಚಿಂತನೆಯ ಸ್ಥಾನವೇನು? ಇಲ್ಲಿ ಬುದ್ಧನ ಶಿಷ್ಯರಿಗೆ ಸಂಬಂಧಿಸಿದ ಒಂದು ಪ್ರಸಿದ್ಧ ಕತೆ ನೆನಪಿಗೆ ಬರುತ್ತದೆ. ಒಮ್ಮೆ ಬುದ್ಧನ ಶಿಷ್ಯರಿಬ್ಬರು ಒಂದು ಮುರುಕಲು ದೇವಸ್ಥಾನದಲ್ಲಿ ರಾತ್ರಿಯನ್ನು ಕಳೆಯಬೇಕಾಗುತ್ತದೆ. ವಿಪರೀತ ಚಳಿ. ಸತ್ತೇಹೋಗಬಹುದೆಂಬ ಭಯ. ಹೊದಿಯಲು ಕಂಬಳಿಗಳಿಲ್ಲ. ಚಳಿತಡೆಯಲಾಗುತ್ತಿಲ್ಲ. ಅವರಲ್ಲಿ ಬುದ್ಧನ ಮರದ ಪ್ರತಿಮೆಯೊಂದನ್ನು ಬಿಟ್ಟರೆ ಬೇರೆ ವಸ್ತುಗಳಿಲ್ಲ. ಏನು ಮಾಡುವುದು? ಒಬ್ಬ ಶಿಷ್ಯನೊಬ್ಬ ಬುದ್ಧನ ಮರದ ಪ್ರತಿಮೆಯನ್ನೇ ಉಪಯೋಗಿಸಿ ಬೆಂಕಿಹೊತ್ತಿಸುತ್ತಾನೆ. ಪ್ರತಿಮೆ ಉರಿದಷ್ಟು ಕಾಲ ಬೆಂಕಿ ಕಾಯಿಸಿಕೊಂಡು ಜೀವ ಉಳಿಸಿಕೊಳ್ಳುತ್ತಾರೆ. ಇನ್ನೊಬ್ಬ ಶಿಷ್ಯ ಸೋಜಿಗದಿಂದ ಇದನ್ನೆಲ್ಲ ನೋಡಿ ಕೇಳುತ್ತಾನೆ: ‘ಗುರುವಿನ ಪ್ರತಿಮೆಯನ್ನೇ ಬೆಂಕಿಗೆ ಹಾಕಿ ನಾಶಮಾಡಿದೆಯಲ್ಲ?’ ಶಿಷ್ಯ ಹೇಳುತ್ತಾನೆ: ಮೊದಲು ನಾವು ಉಳಿಯಬೇಕು.

ಈ ಬೆಂಕಿಯಿಲ್ಲದಿದ್ದರೆ ಸತ್ತೇ ಹೋಗುತ್ತಿದ್ದೆವು. ಅಲ್ಲದೆ ಬುದ್ಧಗುರು ಉಳಿಯಬೇಕಾದದ್ದು ಕೇವಲ ಪ್ರತಿಮೆಯಲ್ಲಿ ಅಲ್ಲ; ನಮ್ಮ ತಲೆಯಲ್ಲಿ, ನಮ್ಮ ಎದೆಯಲ್ಲಿ.ಈ ಕತೆ ಅನೇಕ ಸತ್ಯಗಳನ್ನು ಧ್ವನಿಸುತ್ತದೆ.ಹಾಗಾದರೆ ವಸ್ತುಸಂಗತಿ ಮತ್ತು ತರ್ಕಗಳನ್ನು ನಿರಾಕರಿಸುವ ಮತ್ತು ಕೇವಲ ಮನುಷ್ಯನ ರಾಗಭಾವಗಳನ್ನು ಆಧರಿಸಿದ ನಂಬಿಕೆಗಳನ್ನು ನಾವೆಷ್ಟು ಮಾನ್ಯಮಾಡಬೇಕು? ಈಗ ನಮಗೆ ಎದುರಾಗುವುದು ಮನುಷ್ಯ ಕಾಲಾಂತರದಲ್ಲಿ ತನ್ನ ಜೊತೆಯಲ್ಲಿ ಉಳಿಸಿಕೊಂಡು ಬಂದ ಸಾವಿರಾರು ನಂಬಿಕೆಗಳು, ಇವುಗಳ ಸುತ್ತ ಇರುವ ಆಚರಣೆಗಳು. ನಂಬಿಕೆಗಳು ಉಳಿದಿರುವುದು ಹೊರಗೆ ಸಿಕ್ಕುವ ಪುರಾವೆಗಳಿಂದ ಅಲ್ಲ; ಅವುಗಳು ಉಳಿದಿರುವುದು ಒಳಬೆಳಕಿನ ಕಸುವಿನ ಮೇಲೆ. ಈ ನಂಬಿಕೆಗಳನ್ನ್ನು ಮಾನ್ಯ ಮಾಡಲು ಹೊರಟರೆ ಮೂಢನಂಬಿಕೆಗಳನ್ನು ದಾಟಿಕೊಂಡೇ ಹೋಗಬೇಕಾಗುತ್ತದೆ. ಮೂಢನಂಬಿಕೆ ಎನ್ನುವುದು ಯಾವುದೇ ಸಮಾಜವನ್ನು ಮುನ್ನಡೆಸಲಾರದು. ಈ ಎಚ್ಚರವೂ ಒಂದು ಸಮಾಜಕ್ಕೆ ಅಗತ್ಯ. ಆದರೆ ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಗುರುತಿಸುವಾಗ ಸೂಕ್ಷ್ಮವಾದ ಅರಿವು ಅಗತ್ಯ. ನಂಬಿಕೆಗೂ, ಮೂಢನಂಬಿಕೆಗೂ ಅಂತರ ಇರುವುದನ್ನು ಗುರುತಿಸಿಕೊಂಡಾಗಲೆ ಸಮಾಜದ ನಡೆ ಸರಿಯಾದ ದಿಕ್ಕಿನಲ್ಲಿರಲು ಸಾಧ್ಯ. ಮೂಢನಂಬಿಕೆ ಎನ್ನುವುದು ‘ಮುಂದುವರಿದ’ ಸಮುದಾಯಗಳಲ್ಲಿ ಇಲ್ಲ, ಅದೆಲ್ಲ ಇರುವುದು ‘ಹಿಂದುಳಿದ’ ಬುಡಕಟ್ಟು ಸಮುದಾಯಗಳಲ್ಲಿ ಎಂಬ ನಂಬಿಕೆಯೊಂದು ಇದೆ. ಆದರೆ ಈ ನಂಬಿಕೆಗೆ ಯಾವ ಆಧಾರವೂ ಇಲ್ಲ.

ನಾಗರಿಕತೆಯ ತುಟ್ಟತುದಿಯನ್ನು ಮುಟ್ಟಿರುವ ಸಮುದಾಯಗಳಲ್ಲೂ ಮೂಢ ನಂಬಿಕೆಗಳಿವೆ. ಮೂಢ ನಂಬಿಕೆ ಎನ್ನುವುದು ಸರಳ ಸಂಗತಿಯಲ್ಲ. ಅದು ಯಾವುದೇ ಪ್ರದೇಶಕ್ಕೆ, ಸಮುದಾಯಕ್ಕೆ ಸೀಮಿತವಾದುದಲ್ಲ. ಮನುಷ್ಯರು ಇರುವ ಕಡೆಗಳಲ್ಲೆಲ್ಲ ಇದೆ. ನಂಬಿಕೆಯ ನೆಲೆಗಟ್ಟಿನಲ್ಲಿಯೇ ಮನುಷ್ಯ ಸಂಬಂಧಗಳು ಹುಟ್ಟಿಕೊಂಡಿವೆ; ಪ್ರೀತಿಯ ಬಳ್ಳಿ ಹಬ್ಬಿದೆ. ಪರಸ್ಪರರಲ್ಲಿ ನಂಬಿಕೆ ಗೌರವ ಬೆಳೆದಿವೆ; ಅಷ್ಟೇಕೆ ಮನುಷ್ಯನ ಬದುಕಿಗೆ ಆಧಾರವೆನ್ನಿಸುವ ಮನುಷ್ಯತ್ವ ನಿಂತಿರುವುದೇ ನಂಬಿಕೆಯ ಮೇಲೆ. ಈ ನಂಬಿಕೆಯೇ ಅನೇಕ ಸಂದರ್ಭಗಳಲ್ಲಿ ಮೂಢ ನಂಬಿಕೆಯಾಗಿಯೂ ರೂಪ ಬದಲಿಸಿಕೊಂಡಿರುವುದು ಉಂಟು. ನಂಬಿಕೆ ಮತ್ತು ಮೂಢ ನಂಬಿಕೆಗಳ ಸುತ್ತಲೂ ಅನೇಕ ಆಚರಣೆಗಳು ಹುಟ್ಟಿಕೊಂಡು ನೂರಾರು ವರ್ಷಗಳಿಂದ ಬೆಳೆದುಕೊಂಡು ಬಂದಿವೆ. ನಂಬಿಕೆಗಳು ಮನುಷ್ಯ-ಮನುಷ್ಯರ ನಡುವಣ ಪ್ರೀತಿ-ಸಂಬಂಧಗಳನ್ನು ಗಟ್ಟಿಗೊಳಿಸಿದ್ದರೆ, ಮೂಢನಂಬಿಕೆಗಳು ಇದಕ್ಕೆ ವಿರುದ್ಧವಾದ ಕೆಲಸವನ್ನು ಮಾಡಿರುವುದೂ ಉಂಟು. ಪ್ರಾಣಿಬಲಿ, ಶಿಶುಬಲಿ, ಬಾಣಂತಿಯರ ಬಲಿ, ಅಷ್ಟೇಕೆ ಈಗಲೂ ಕೆಲವು ಸಮುದಾಯಗಳಲ್ಲ್ಲಿ ಕಾಲ್ತೆಗೆಯಲು ನಿರಾಕರಿಸುತ್ತಿರುವ ಬೆತ್ತಲೆ ಸೇವೆ, ಮಡೆಸ್ನಾನ, ಅಜಲು ಪದ್ಧತಿಯಂಥ ಅಮಾನವೀಯ ಆಚರಣೆಗಳು ಮೂಢನಂಬಿಕೆಯ ಫಲವಾಗಿ ಉಳಿದುಕೊಂಡು ಬಂದಿವೆ. ಮನುಷ್ಯ ತನ್ನ ಅನುಭವ, ತರ್ಕ, ವಿವೇಕವನ್ನ ಬಳಸಿ ಮೂಢನಂಬಿಕೆಗಳನ್ನು ಬಿಡುತ್ತ ಬಂದಿರುವುದನ್ನೂ ನಾವು ಮನುಷ್ಯ ನಡೆದುಬಂದ ಹಾದಿಯಲಿ ಗುರುತಿಸಬಹುದು.

ಹಳೆಯ ಮೂಢನಂಬಿಕೆಗಳು ಹೋದರೂ, ಹೊಸ ಮೂಢನಂಬಿಕೆಗಳು ಹುಟ್ಟಿಕೊಳ್ಳುವುದುಂಟು. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಗೆರೆ ತುಂಬ ತೆಳುವಾದದ್ದು. ಈ ಗೆರೆಯನ್ನು ಗುರುತಿಸಿಕೊಳ್ಳದಿದ್ದರೆ ಮನುಷ್ಯ ನೆಮ್ಮದಿಯಲ್ಲಿ ಸಹಬಾಳ್ವೆ ಮಾಡಲಾರ; ಸಮಾನತೆ, ಮನುಷ್ಯ ಘನತೆಗಳನ್ನು ಉಳಿಸಿಕೊಳ್ಳಲಾರ.ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಇವತ್ತಿಗೂ ಉಳಿದುಕೊಂಡು ಬಂದಿರುವ ನಂಬಿಕೆಗಳು, ಮೂಢನಂಬಿಕೆಗಳಂತೆ ಕಾಣಿಸಿದರೂ, ಅವು ಮನುಕುಲವನ್ನು ಪೊರೆಯುವ ಶಕ್ತಿಗಳಾಗಿ ಕೆಲಸಮಾಡುತ್ತಿವೆ. ಬುಡಕಟ್ಟುಗಳ ನಂಬಿಕೆ ಮತ್ತು ಅವಕ್ಕೆ ಸಂಬಂಧಿಸಿದ ಆಚರಣೆಗಳು ಇತರರಿಗೆ ವಿಚಿತ್ರವಾಗಿ ಕಾಣಬಹುದು. ಆದರೆ ಈ ಆಚರಣೆಗಳು ಎಂದೂ ತನ್ನ ಸಮುದಾಯದಲ್ಲಿರುವ ಯಾರೊಬ್ಬರ ಸಮಾನತೆಗೆ, ಗೌರವಕ್ಕೆ ಧಕ್ಕೆ ತಂದಿಲ್ಲ ಎಂಬುದು ಮುಖ್ಯ. ನೀರು, ಗಾಳಿ, ಭೂಮಿ, ತನ್ನ ಸುತ್ತಲಿನ ಪರಿಸರ, ಪ್ರಾಣಿಸಂಕುಲ ಎಲ್ಲವನ್ನೂ ಒಳಗೊಳ್ಳುವ ಈ ಆಚರಣೆಗಳು ಮನುಷ್ಯ ಈ ಎಲ್ಲದರ ನಡುವೆ ಬಾಳಬೇಕಾದ ಅನಿವಾರ್ಯತೆಯನ್ನು ತೋರಿಸುತ್ತವೆ. ಅವುಗಳನ್ನು ಪೊರೆಯಬೇಕಾದ ಸೂಚನೆಯನ್ನೂ ನೀಡುತ್ತವೆ. ದುಷ್ಟಶಕ್ತಿಗಳನ್ನು ಗುರುತಿಸಿ, ಅವುಗಳನ್ನು ಪಳಗಿಸುವ ಮತ್ತು ಒಟ್ಟು ಆವರಣದಲ್ಲಿ ಅವಕ್ಕೂ ಒಂದು ಜಾಗ ತೋರಿಸುವ ಉದಾತ್ತ ಗುಣವೂ ಈ ನಂಬಿಕೆಗಳಲ್ಲಿ ಮತ್ತು ಆಚರಣೆಗಳಲ್ಲಿ ಇವೆ.

ಜನ್ಮ-ಪುನರ್ಜನ್ಮಗಳನ್ನು ನಂಬುವ ಈ ಬುಡಕಟ್ಟುಗಳು ತಮ್ಮ ಆದಿ ಪುರುಷ (ಬುಡಕಟ್ಟುಗಳಲ್ಲಿ ಮಹಿಳೆ ಮತ್ತು ಪುರುಷ ಎಂಬ ವ್ಯತ್ಯಾಸವೇ ಇಲ್ಲ)ಸಾವಿರಾರು ವರ್ಷಗಳ ನಂತರವೂ ಜೀವಿಸಿದ್ದಾನೆ; ಅವನ ಆತ್ಮ ತಮ್ಮ ಪರಿಸರದಲ್ಲಿಯೇ ಸುತ್ತುತ್ತಿದೆ ಎಂದು ಭಾವಿಸುತ್ತಾರೆ. ಈ ಕಾರಣಕ್ಕಾಗಿಯೇ ಅನೇಕ ಬುಡಕಟ್ಟುಗಳು ತಾವು ವಾಸಿಸುವ ಪ್ರದೇಶವನ್ನು, ಪರಿಸರವನ್ನು ತೊರೆಯಲು ಬಯಸುವುದಿಲ್ಲ. ಅಷ್ಟೇ ಅಲ್ಲ ಆದಿಅಯ್ಯನಿಗೆ (ಮೂಲ ಪುರುಷ) ತೊಂದರೆಯಾದೀತೆಂದು ಕೆಲವು ಮರಗಳನ್ನು ಕಡಿಯುವುದಿಲ್ಲ; ಕೆಲವು ಪ್ರಾಣಿಗಳನ್ನು ಕೊಲ್ಲುವುದಿಲ್ಲ. ಭೂಮಿ ಕೂಡಾ ನಾಶವಾಗದಂತೆ ನೋಡಿಕೊಳ್ಳುವ, ಈ ಕಾರಣಕ್ಕಾಗಿ ಕೃಷಿಪದ್ಧತಿಯನ್ನೇ ಬೇರೆ ರೀತಿಯಲ್ಲಿಯೇ ರೂಢಿಸಿಕೊಂಡು ಬಂದಿರುವ ಬುಡಕಟ್ಟುಗಳೂ ಇವೆ. ಗೆಡ್ಡೆ ಗೆಣಸುಗಳನ್ನು ಭೂಮಿಯಿಂದ ಕೀಳುವಾಗಲೂ ಅವು ಮತ್ತೆ ಚಿಗುರುವಂತೆ ಒಂದಿಷ್ಟು ಭಾಗವನ್ನು ಭೂಮಿಯಲ್ಲಿಯೇ ಉಳಿಸುವ ಪದ್ಧತಿಯೂ ಕೆಲವು ಬುಡಕಟ್ಟುಗಳಲ್ಲಿದೆ. ತಮ್ಮ ತಮ್ಮ ವಿಭಿನ್ನತೆಯನ್ನು, ವಿಶೇಷತೆಯನ್ನು ಉಳಿಸಿಕೊಂಡರೂ ಈ ಬುಡಕಟ್ಟುಗಳು ಎಂದೂ ಮನುಷ್ಯ ಮನುಷ್ಯರ ನಡುವೆ ಮೇಲು-ಕೀಳು ಭಾವನೆಯನ್ನು ಹುಟ್ಟುಹಾಕುವುದಿಲ್ಲ. ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿದರೂ, ಅವುಗಳೊಂದಿಗೆ ಸಹಬಾಳ್ವೆ ನಡೆಸುವ ಅನೇಕ ತತ್ವಗಳನ್ನು ಪಾಲಿಸುವ ಗುಣ ಈ ಬುಡಕಟ್ಟು ಸಮುದಾಯಗಳಲ್ಲಿವೆ.

ಪ್ರಾಣಿಪಕ್ಷಿಗಳ ವರ್ತನೆಯನ್ನು ಸೂಕ್ಷ್ಮವಾಗಿ ತಿಳಿಯುವ ಮತ್ತು ಅವುಗಳ ಮುಕ್ತ ಬದುಕಿಗೆ ಹೆಚ್ಚು ಅಡಚಣೆಯನ್ನು ಉಂಟುಮಾಡದ ರೀತಿಯಲ್ಲಿ ನಡೆದುಕೊಂಡು, ಇಡೀ ಪರಿಸರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ಉದಾತ್ತಗುಣವನ್ನೂ ಬುಡಕಟ್ಟು ಸಮುದಾಯ ತೋರಿಸುತ್ತ ಬಂದಿವೆ.ಇಂಥ ಸಮುದಾಯದ ನಂಬಿಕೆಗಳು ಪಂಚಭೂತಗಳಿಗೆ ಮಾರಕವಲ್ಲ; ಸೂರ್ಯಚಂದ್ರರಿಗೂ ಮಾರಕವಲ್ಲ. ಇದೆಲ್ಲವನ್ನು ತಿಳಿಯುವ ಒಳಮನಸ್ಸು ನಾಗರಿಕ ಎಂದು ಕರೆದುಕೊಳ್ಳುವ ಜಗತ್ತಿಗೆ ಇರಬೇಕಾಗುತ್ತದೆ. ಆಗಲೇ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ತೆಳುಗೆರೆ ಗೋಚರವಾಗುತ್ತದೆ. ಅದು ಕಾಣಿಸಿದರೆ ನಮ್ಮ ತೀರ್ಮಾನಗಳು ಸರಳವಾಗಿರುವುದಿಲ್ಲ.

(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಿತ ಬರಹ)

‍ಲೇಖಕರು avadhi

11 April, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading