ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಕಜ್ಜಿ ಮುಂದುವರಿದ ಚರ್ಚೆ: ಅದನ್ನು ಹೇಗೆ ದೃಶ್ಯ ಮಾಧ್ಯಮಕ್ಕೆ ತರುವುದು?

ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ 
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ
‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-
ಬಿ ಸುರೇಶ್ ಬರೆದಿರುವುದು ಇಲ್ಲಿದೆ-
ಜೋಗಿ ಹಾಗೂ ಸಿಎನ್ನಾರ್ ಅವರ ಚರ್ಚೆಯನ್ನು ಇಟ್ಟುಕೊಂಡು ಪ್ರತಿಭಾ ನಂದಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಇದು
ಪ್ರೊ ಸಿಎನ್ನಾರ್ ಅವರು ಪ್ರತಿಭಾ ನಂದಕುಮಾರ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ 
ಪ್ರತಿಭಾ ನಂದಕುಮಾರ್ ಅವರು ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅದು ಇಲ್ಲಿದೆ 
ಇಂಗ್ಲೆಂಡ್ ನಿಂದ ಬಿ ಪ್ರೇಮಲತಾ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ
ಅಪಾರ ಓದಿನ ಮಾಲಿನಿ ಗುರುಪ್ರಸನ್ನ ಈಗ ತಮ್ಮ ಅನಿಸಿಕೆಯನ್ನು ಮುಂದಿಟ್ಟಿದ್ದಾರೆ. ಓದಿ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಮಾಲಿನಿ ಗುರುಪ್ರಸನ್ನ
ನಮಸ್ತೆ ..
ಈ ಚರ್ಚೆಯನ್ನು ಆರಂಭದಿಂದಲೂ ಗಮನಿಸುತ್ತಾ ಬಂದಿದ್ದೇನೆ. ಇದು ಮೂಕಜ್ಜಿಯ ಕನಸುಗಳ ವೈಚಾರಿಕತೆಯನ್ನು ಸಿನಿಮಾದಲ್ಲಿ ತರಲಾಗಿಲ್ಲ ಎಂಬುದರಿಂದ ವೈಚಾರಿಕತೆಯನ್ನು ದೃಶ್ಯ ಮಾಧ್ಯಮದಲ್ಲಿ ತರಲು ಸಾಧ್ಯವೇ ಇಲ್ಲವೇ ಎಂಬುದರತ್ತ ಒಂದು ಅಧ್ಯಯನ ಯೋಗ್ಯ ಚರ್ಚೆಯಾಗಿ ಮುಂದುವರಿದಿದೆ. ಇಷ್ಟು ಗಂಭೀರವಾಗಿ ಚರ್ಚೆ ನಡೆದಿರುವುದು ಬಹಳ ಸಂತೋಷದ ವಿಷಯ.
೧) ಭಗವದ್ಗೀತೆಯನ್ನು ಅದೆಷ್ಟೋ ಎಪಿಸೋಡುಗಳಲ್ಲಿ ಹೇಳಲಾಗಿದೆ ಯಶಸ್ವಿಯಾಗಿ ಎಂಬ ಸಿಎನ್ ಆರ್ ಸರ್ ಅವರ ಮಾತು ನನ್ನನ್ನು ತುಸು ಯೋಚಿಸುವಂತೆ ಮಾಡಿತು.
ಮಹಾಭಾರತದಂತಹ ಗಟ್ಟಿಯಾದ ಒಂದು ಕಥೆ ಇಲ್ಲದಿದ್ದರೆ, ಕೃಷ್ಣ ನರನೂ ಹೌದು ನಾರಾಯಣನೂ ಹೌದು ಎಂಬುದನ್ನು ಕಥೆ ಸ್ಪಷ್ಟವಾಗಿ ಹೇಳದೆ ಇದ್ದಿದ್ದರೆ, ಕೃಷ್ಣನಿಗೆ ಯುದ್ಧವೇ ಬೇಕಾಗಿದೆ ಅದಕ್ಕೆ ಅರ್ಜುನನನ್ನು ಅಣಿಗೊಳಿಸುತ್ತಿದ್ದಾನೆ ಎಂಬ ಭಾವ ಪ್ರೇಕ್ಷಕನಿಗೆ ಮನದಟ್ಟಾಗದಿದ್ದರೆ, ಪಾಂಡವರ ಐದು ಊರು ಸಾಕು ಎಂಬ ಮಾತೂ .. ಬಂಧುಬಾಂಧವರನ್ನು ಕಂಡ ಅರ್ಜುನನ ಸಂಕಟದ ಶಸ್ತ್ರತ್ಯಾಗವೂ ಇಲ್ಲದಿದ್ದರೆ ಭಗವದ್ಗೀತೆಯನ್ನು ಅಷ್ಟು ದೀರ್ಘವಾಗಿ ತೋರಿಸುವ ಸಾಹಸ ಯಾರೂ ಮಾಡುತ್ತಿರಲಿಲ್ಲ.
ಕಥೆ ಸರ್ವರೀತಿಯಲ್ಲೂ ಸಶಕ್ತವಾಗಿ ಕಟ್ಟಿದ್ದರಿಂದಲೇ ಅದರ ಅದೆಷ್ಟೋ ಎಪಿಸೋಡುಗಳ ಮಧ್ಯೆ ಭಗವದ್ಗೀತೆಯನ್ನೂ ಹೇಳಲಾಯಿತು. ಒಂದುವೇಳೆ  ಭಗವದ್ಗೀತೆ ಇಲ್ಲದಿದ್ದರೂ ನಾಲ್ಕು ಸಾಲುಗಳಲ್ಲಿ ಸಾರವನ್ನು ಹೇಳಿ ಮುನ್ನಡೆಯಬಹುದಿತ್ತು ಅದರಿಂದ ಕಥೆಗೆ ಯಾವುದೇ ಧಕ್ಕೆ ಬರುತ್ತಿರಲಿಲ್ಲ.. ಆದರೆ ಭಗವದ್ಗೀತೆಯ ಕುರಿತು ಅಥವಾ ಇಡೀ ಕಥೆಯ ಹರಿವಿನಲ್ಲಿ ಭಗವದ್ಗೀತೆಯ ಸಾಲುಗಳನ್ನೇ ಹೇಳಬೇಕಾದ ಚಿತ್ರ ಮಾಡಿದ್ದರೆ ಅದೆಷ್ಟು ಯಶಸ್ವಿಯಾಗಿ ಜನಮನ್ನಣೆ ಪಡೆಯುತ್ತಿತ್ತು ನನಗೆ ಅನುಮಾನ..
ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ಇಡೀ ಕಾದಂಬರಿಯುದ್ದಕ್ಕೂ ಇರುವುದು ವೈಚಾರಿಕತೆ. ಅದನ್ನು ಹೇಗೆ ದೃಶ್ಯ ಮಾಧ್ಯಮಕ್ಕೆ ತರುವುದು? ವೈಚಾರಿಕತೆಯನ್ನು ತೋರಿಸಲಾಗದು ಎಂಬುದಕ್ಕಿಂತ ಮೂಕಜ್ಜಿಯ ಕನಸುಗಳಲ್ಲಿ ಹೇಳುವ ವಿಶಾಲ ವ್ಯಾಪ್ತಿಯ ವೈಚಾರಿಕತೆಯನ್ನು ಹೇಗೆ ಮಾತುಗಳಲ್ಲಿ ಹೇಳಿಸಬಹುದು? ಕಷ್ಟವಲ್ಲವೇ?
೨) ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಎಂದು ಹೇಳುತ್ತಾರೆ. ಅದರಲ್ಲಿ ಸುಬ್ರಾಯನಿಗೂ ಮೂಕಜ್ಜಿಗೂ ನಡುವೆ ನಡೆಯುವ ಸಂಭಾಷಣೆಯೇ ಕಾದಂಬರಿಯಲ್ಲಿರುವುದು.. ಅಲ್ಲಿರುವುದು ನಮ್ಮ ಬದುಕಿನುದ್ದಕ್ಕೂ ನಾವು ನಡೆದು ಬಂದ.. ಆಚರಿಸಿಕೊಂಡು ಬಂದ ಹಲವಾರು ಆಚರಣೆಗಳ ಬಗ್ಗೆ ಸುಬ್ರಾಯನ ಪ್ರಶ್ನೆ.. ಮೂಕಜ್ಜಿಯ ಉತ್ತರಗಳು.. ಜೊತೆಗೆ ಮೂಕಜ್ಜಿ ಅಲ್ಲಿ ಎತ್ತುವ ಪ್ರಶ್ನೆಗಳು ನಮ್ಮ ಬದುಕಿನ ಕ್ರಮದ ಬಗೆಗಿನ ಪ್ರಶ್ನೆಗಳು..
ಇವುಗಳಿಗೆ ಉತ್ತರ ಮೂಕಜ್ಜಿಯ ಸ್ವಂತ ಅನುಭವಗಳಿಂದ ಪಡೆದು ಕೊಂಡ ಉತ್ತರಗಳಲ್ಲ.. ಮೂಕಜ್ಜಿ ಇವುಗಳನ್ನು ಅನುಭವಿಸಿಲ್ಲ. ಉದಾಹರಣೆಗಳನ್ನು ಕೊಡುತ್ತಾ ಉತ್ತರಗಳನ್ನು ಕೊಡುತ್ತಾ, ಆಚರಣೆಗಳನ್ನು ಪ್ರಶ್ನಿಸುತ್ತಾ ಹೋಗುತ್ತಾಳೆ. ಇದು ನಾಟಕಕ್ಕೆ ಹೊಂದಬಹುದು. ( ‘ಗೋಡೋ ಬಂದ’ ನಾಟಕದಲ್ಲಿ ಕೇವಲ ಸಂಭಾಷಣೆಗಳೇ ಇರುವುದು).. ಅಲ್ಲಿ ಕಾರಂತರ ಉತ್ತರಗಳು ಅವು. ಕಾರಂತರು ಸೃಷ್ಟಿಸಿದ ಮೂಕಜ್ಜಿಯ ಪಾತ್ರದ ಅನುಭವಗಳಲ್ಲ.
ಇದು ಸ್ಪಷ್ಟವಾಗಬೇಕಾದರೆ ಇದಕ್ಕೆ ಬಹುತೇಕ ಹೋಲಿಕೆಯುಳ್ಳ ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿಯನ್ನು ನೋಡಬಹುದು. ಅಲ್ಲಿಯೂ ವೈಚಾರಿಕತೆ ಇದೆ. ಆದರೆ ಅಲ್ಲಿ ಫಣಿಯಮ್ಮನ ಅನುಭವಗಳ ಮೂಲಕ ಫಣಿಯಮ್ಮನ ವೈಚಾರಿಕತೆ ನಮ್ಮನ್ನು ತಾಗುತ್ತಾ ಹೋಗುತ್ತದೆ. ಅದು ಇಂದಿರಾ ಮನದ ಮಾತುಗಳೇ ಆಗಿದ್ದರೂ ಅವು ಘಟನೆಗಳ ಮೂಲಕ, ಫಣಿಯಮ್ಮ ಎಂಬ ಬಾಲವಿಧವೆಯ ಗಟ್ಟಿಯಾದ ಕಥೆಯ ಮೂಲಕ ಹೇಳಲ್ಪಟ್ಟಿರುವುದರಿಂದ ಅಲ್ಲಿ ವೈಚಾರಿಕತೆ ತಾನೇ ತಾನಾಗಿ ನಮ್ಮ ಬುದ್ಧಿ ಭಾವಗಳನ್ನು ಪ್ರಚೋದಿಸುತ್ತದೆ.
ಫಣಿಯಮ್ಮ ಎಂಬುದೊಂದು ವಾಸ್ತವ ಪಾತ್ರ ಚಿತ್ರಣ.. ಮೂಕಜ್ಜಿ ಕಾರಂತರ ಕಾದಂಬರಿಯ ವಾಸ್ತವದ ಪಾತ್ರ ಅಲ್ಲ. ( ಒಮ್ಮೊಮ್ಮೆ ಅದನ್ನು ವಾಸ್ತವದ ಪಾತ್ರ ಮಾಡಲು ಕಾರಂತರು ಯತ್ನಿಸುತ್ತಾರೆ. ವಾಲಗದ ಮಂಟಪದ ಬಗ್ಗೆ ಆಕೆ ಸುಬ್ರಾಯನಲ್ಲಿ ಪ್ರಶ್ನಿಸುವುದು ಅದಕ್ಕೆ ಸಾಕ್ಷಿ) ಆ ಪಾತ್ರ ತನ್ನ ಅನುಭವಗಳ ಮೂಲಕ ಏನನ್ನೂ ಕಟ್ಟಿಕೊಡುವುದಿಲ್ಲ.. ಎಲ್ಲವನ್ನೂ ನಾಗಿ.. ತಿಪ್ಪಕ್ಕ ಮುಂತಾದ ಪಾತ್ರಗಳು ಅನುಭವಿಸಿರಬಹುದಾದ ಘಟನೆಗಳಿಂದ ಉತ್ತರಗಳನ್ನು ಹುಡುಕುವಂಥದ್ದು..
ಮೂಕಜ್ಜಿ ಹೇಳುವ ಮಾತುಗಳ ಭಾರವನ್ನು ಹೊರುವ ಶಕ್ತಿ ಮೂಕಜ್ಜಿಯ ಪಾತ್ರಕ್ಕಿದೆ ಎಂದು ನನಗನ್ನಿಸುವುದಿಲ್ಲ. ಇಲ್ಲಿ ಈ ವಿಕಾಸವಾದದ ಸ್ವರೂಪವನ್ನು.. ವಿಕಾಸವಾದ ರೂಪುಗೊಳ್ಳಬೇಕಾದ ರೀತಿಯನ್ನು ಕಾರಂತರು ಮೂಕಜ್ಜಿಯ ಮೂಲಕ ನಮಗೆ ದಾಟಿಸಲೆತ್ನಿಸುತ್ತಿದ್ದಾರೆ.. ಅದೂ ಸಂಭಾಷಣೆಯ ರೂಪದಲ್ಲಿ.  ಹಾಗಾಗಿ ಇದು ಕಾದಂಬರಿ ಎಂದು ನನಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ, ಇದರಲ್ಲಿ ಗಟ್ಟಿಯಾದ ಒಂದು ಕಥೆಯಿಲ್ಲ ಎಂಬ ಕಾರಣಕ್ಕೆ.
ಇಷ್ಟನ್ನೂ ನಾನು ಏಕೆ ಹೇಳಿದೆನೆಂದರೆ  ಗಟ್ಟಿಯಾದ ಕಥೆಯಿಲ್ಲದ ಕಾದಂಬರಿಯನ್ನು ಚಿತ್ರ ಮಾಡುವುದು ಕಷ್ಟ.. ಅಷ್ಟು ವಿಶಾಲವಾದ ಕ್ಯಾನ್ವಾಸ್ ಇರುವ  ವೈಚಾರಿಕತೆಯನ್ನು ಸಹಜವಾಗಿ ಹಾಗೆಹಾಗೇ ಮನದಟ್ಟಾಗುವಂತೆ ಸಿನಿಮಾ ಹೇಗೆ ಮಾಡುವುದು ಅದರಲ್ಲಿ ವೈಚಾರಿಕತೆಯನ್ನು ಮಾತುಗಳಲ್ಲಿ ಸಂಭಾಷಣೆಯಲ್ಲಿ ಹೇಳಿಸಿದರೆ ಖಂಡಿತ ಅದು ಶುಷ್ಕವಾಗುವ ಸಂಭವವೇ ಹೆಚ್ಚು.
೩) ಈ ಎಲ್ಲ ಮಾತುಗಳೂ ಕೇವಲ ಮೂಕಜ್ಜಿಯ ಕನಸುಗಳು ಕಾದಂಬರಿಯ ಬಗ್ಗೆ .. ಅದನ್ನು ದೃಶ್ಯ ಮಾಧ್ಯಮಕ್ಕೆ ಹೊಂದಿಸುವ ಕಷ್ಟದ ಬಗ್ಗೆ. ನಾಟಕಕ್ಕೆ ತಕ್ಕ ಮಟ್ಟಿಗೆ ಹೊಂದಬಹುದಾದ ಮೂಕಜ್ಜಿ ಸಿನಿಮಾಕ್ಕೆ ಒಗ್ಗುವುದು ಕಷ್ಟ.  ನಾಟಕದಲ್ಲಿ ಕೊಂಚ ನಾಟಕೀಯತೆ ಇದ್ದರೂ ಪರಿಣಾಮಕಾರಿಯಾಗಿಯೇ ಇರುತ್ತದೆ. ಕಾರಂತರ ‘ಆಳಿದ ಮೇಲೆ’ ‘ಮರಳಿ ಮಣ್ಣಿಗೆ’ ‘ಬೆಟ್ಟದ ಜೀವ’ ಕಾದಂಬರಿಗಳಲ್ಲಿ ದಟ್ಟ ಅನುಭವಗಳ ನಡುವೆ ಹಾಸುಹೊಕ್ಕಾಗಿರುವ ವೈಚಾರಿಕತೆ.. ಹೇಳದೆಯೇ ಓದುಗನಿಗೆ ಅರಿವಾಗಬಲ್ಲ ವೈಚಾರಿಕತೆ ನನಗಿಷ್ಟವಾಗುವುದು. ಬಹುಶಃ ದೃಶ್ಯ ಮಾಧ್ಯಮಕ್ಕೂ ಅಷ್ಟೇ ಸಮರ್ಥವಾಗಿ ಒಗ್ಗಬಲ್ಲವು.

‍ಲೇಖಕರು avadhi

16 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading