ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಸುಕಿದೀ ಮಬ್ಬಿನಲೀ…

ಕೃಷ್ಣ ಕೌಲಗಿ

ಬದುಕು ‘ಹಗುರ’ ಅಂದುಕೊಂಡೆವು…
ಸಂಸಾರ ‘ಸಸಾರ’ ಅಂದುಕೊಂಡೆವು…
ಮಕ್ಕಳು ‘ಕೊನೆಗಾಲಕ್ಕೆ’ ಅಂದುಕೊಂಡೆವು…
ಬಂಧುಗಳು ‘ಅನುಗಾಲಕ್ಕೆ’
ಅಂದು ಕೊಂಡೆವು…
ಹಾಗಾಗಲೇಯಿಲ್ಲ…

ಹಣದಿಂದ ‘ಆರೋಗ್ಯ’
ಕೊಳ್ಳಬಹುದೆಂದುಕೊಂಡೆವು…
ಅಧಿಕಾರದಿಂದ ‘ಜನರನ್ನು’ ಕೊಳ್ಳಬಹುದೆಂದುಕೊಂಡೆವು…
‘ಧರ್ಮ-ಜಾತಿ’ ಬೆಂಬಲಕ್ಕೆ ಅಂದೆವು…
ದೇವರನ್ನೇ ಧಿಕ್ಕರಿಸಿ ನಾವೇ
‘ಸ್ವಯಂಭೂ’ ಅಂದೆವು…
ಹಾಗಾಗಲೇಯಿಲ್ಲ…

ಕೈ ಹಿಡಿದ ಹೆಂಡತಿ,
ರಕ್ತ ಹಂಚಿಕೊಂಡ ಮಕ್ಕಳು,
ಕೂಡಿಟ್ಟ ಆಸ್ತಿ, ಕಟ್ಟಿದ ಮನೆ,
ಸುತ್ತಲೂ ವಂದಿಮಾಗಧರು…
ಭುಜಕೀರ್ತಿ, ಕಿ ರೀಟಗಳು
ಸಂಭ್ರಮ, ನಿತ್ಯೋತ್ಸವ
ಸದಾ ನಮ್ಮದೆಂದೆವು…
ಹಾಗಾಗಲೇಯಿಲ್ಲ…

ಔಷಧಿ ಕೊಳ್ಳಬಹುದು
ಆರೋಗ್ಯವನ್ನಲ್ಲ…
ಹಾಸಿಗೆ ಕೊಳ್ಳಬಹುದು
ನಿದ್ರೆಯನ್ನಲ್ಲ, ಎಂಬುದು…
ಪುಕ್ಕಟೆ ‘ಉಸಿರಿ’ಗೂ,
ಸುತ್ತಲ ‘ಹಸಿರಿ’ಗೂ
ಮತ್ತೇರಿಸಿಕೊಂಡ ‘ಹೆಸರಿ’ಗೂ
‘ಸುಂಕ’ ತೆರಬೇಕಾದೀತು
ಎಂದು ಕನಸಿನಲ್ಲಿಯೂ
ಅನಿಸಿರಲೇಯಿಲ್ಲ…

ನಾ ಕಟ್ಟಿದ ‘ಅರಮನೆ’
‘ಸೆರೆಮನೆ’ಯಾಗಿ,
ಕೂಡಿಟ್ಟ ಕಾಸೂ
ಕಸುವು ಕಳೆದುಕೊಂಡು
ಎಲ್ಲ ಇದ್ದೂ ತಿರುಬೋಕಿ-ಯಂತೆ
ಇಲ್ಲಿಂದ ಹೊರಡಬೇಕಾಗಬಹುದೆಂದು
ಅರಿವಾಗಲೇಯಿಲ್ಲ..

‍ಲೇಖಕರು Avadhi

12 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading