ಅನಂತ ಕುಣಿಗಲ್
ರಸ್ತೆಯ ಆ ಬದಿಯಲ್ಲಿ
ಒಂದು ನುಣುಪಾದ ಕಲ್ಲು ಬಿದ್ದಿತ್ತು
ಬಿಸಿಲ ಬೇಗೆಗೆ ಸುಡುತ್ತಿತ್ತು
ದಿನ ಕಳೆದಂತೆ ಕಲ್ಲಿನ ಅರ್ಧ ದೇಹ
ಮಣ್ಣೊಳಗೆ ಮುಳುಗಿ ಹೋಗಿತ್ತು
ರಾತ್ರಿ ಯಾರ ಭಯವೂ ಇಲ್ಲ ಅದಕ್ಕೆ
ಕಳ್ಳರು ಬಂದರೂ ತಡೆಯುವುದು
ಸಜ್ಜನರನ್ನೂ ತಡೆಯುವುದು
ರಾತ್ರಿ ಕುಡಿದು ತಡವಾಗಿ ಮನೆ ಸೇರುವ
ವಯಸ್ಸಾದ ಕುಡುಕನ ಬೈಕನ್ನೂ ತಡೆದು
ಜಂಪ್ ಹೊಡೆಸಿಬಿಡುವುದು
ಆ ಬೈಕ್ ಟೈರಿನ ಸ್ಪರ್ಶ ಮತ್ತೊಮ್ಮೆ
ಬೇಕು ಬೇಕೆನಿಸುತ್ತಿತ್ತು!!
ಯಾಕೆಂದರೆ ಅದು ಹೊಸ ಬೈಕು
ಹೊಸ ಟೈರು, ಸ್ಪಂಜಿನಂತ ರಬ್ಬರಿನ ಟೈರು
ಅದರ ವಾಸನೆ ಇನ್ನೂ ಅದರ ಮೈಗಂಟಿದೆ

ಆ ಬೈಕಿಗೂ ರೋಸಿ ಹೋಗಿತ್ತು
ವರುಷದಿಂದ ಷೋ-ರೂಮಿನಲ್ಲಿ ಕೊಳೆತು
ಅವರಿವರ ಪೋಟೋಗಳಿಗೆ ಪೋಸು ಕೊಟ್ಟು
ಹೊರಗಿನ ಲೋಕವ ಸುತ್ತದೆ
ಗಾಜಿನ ಮನೆಯೊಳಗೆ ಕಟ್ಟಿ ಹಾಕಲಾಗಿತ್ತು
ಇದೀಗ ತಾನೆ ಕುಡುಕನಿಂದ ಬಿಡುಗಡೆ ಪಡೆದಿತ್ತು
ಮುಳುಗುತ್ತಿದ್ದ ಕಲ್ಲಿನ ಮೇಲಿಂದ ಜಂಪ್ ಹೊಡೆದು
ಆ ಕಲ್ಲಿಗೂ ಚಲನೆ ಕೊಟ್ಟು
ಅದಕ್ಕೂ ಬಿಡುಗಡೆಯ ನೀಡಿತು
ಕಲ್ಲು,
ರಸ್ತೆಯ ಪಕ್ಕವೇ ಇದ್ದ ದೇವರ ಮೂರ್ತಿಯ ಪಕ್ಕ ನಾಟಿತು
ಬೈಕು,
ವಾಲಾಡಿ ಅಲ್ಲೆಲ್ಲೋ ಮೋರಿಯ ಸೇರಿತು
ಹೊಸತಿಗೆ ಹಳತಿನ ಬಣ್ಣ
ಹಳತಿಗೆ ಹೊಸತಿನ ಬಣ್ಣ
ಈಗಲೇ ಶುರುವಾಯ್ತು!!






0 Comments