ಮುರಿದು ಬಿದ್ದ ವೀಣೆ…

ಎನ್ ಶೈಲಜಾಹಾಸನ

ಚಿಕ್ಕಂದಿನಿಂದಲೂ ನನಗೆ   ಸಂಗೀತ ಕಲಿತು, ಚೆನ್ನಾಗಿ ಹಾಡಿ ಎಸ್.ಜಾನಕಿನೊ, ಎಂ.ಎಸ್.ಸುಬ್ಬುಲಕ್ಷ್ಮಿನೊ ಆಗಬೇಕು ಅನ್ನೊ ಆಸೆ ಬೆಟ್ಟದಷ್ಟಿತ್ತು. ಆದರೆ  ನನ್ನಾಸೆನಾ  ಸಸಿಯಲ್ಲಿಯೇ ಚಿವುಟಿ ಹಾಕಿ, ಓದುವುದಷ್ಟೇ ಮುಖ್ಯ ಅನ್ನೊ ಹೆತ್ತವರ ಬಯಕೆ ನನ್ನನ್ನು ಕೇವಲ, ಕೇವಲ ಬಾತ್ ರೂಮ್ ಸಿಂಗರ್ ನನ್ನಾಗಿ ಮಾಡಿಬಿಟ್ಟಿತು. ಈಗ ಯಾರಿಗೂ ಗೊತ್ತಾಗದಂತೆ ನಾನೊಬ್ಬಳೇ  ಹಾಡಿಕೊಂಡು,  ಹಾಡುವ ನನ್ನಾಸೆಗಳನ್ನು ಪೂರೈಸಿಕೊಳ್ಳುತ್ತಿದ್ದೆನೆ. ಇಂಥಹ ಘನ ಘೋರ ಪರಿಸ್ಥಿತಿ ಯಾರಿಗೂ ಬರಬಾರದು ಬಿಡಿ. ನನ್ನಿಂದಾಗಿ ಸಂಗೀತ ಕ್ಷೇತ್ರಕ್ಕೆ ಅದೆಷ್ಟು ನಷ್ಟವಾಗಿದೆ ಅಂತ ನನಗೆ ಮಾತ್ರ ಗೊತ್ತು.

ಸಂಗೀತ ಕಲಿತಿದ್ದರೆ ಕೊಯ್  ಅಂತ ಹಾಡ್ತೀಯ ಅಂತ  ಆಡಿಕೊಳ್ಳುವವರ ಮುಂದೆ ಖ್ಯಾತ ಹಾಡುಗಾರ್ತಿಯಾಗಿ ನಾನು ಏನು ಅಂತ ತೋರಿಸ ಬಹುದಿತ್ತು, ಆದರೆ ಹಾಗೆ ನನ್ನ ಹಣೆಯಲ್ಲಿ ಆ ಬ್ರಹ್ಮ ಬರೆಯಲಿಲ್ಲವಲ್ಲ, ಏನು ಮಾಡೋದು. ಹೆತ್ತವರ ಆಸೆಯಂತೆ ಓದು ಮುಗಿಸಿದೆ. ಆಮೇಲೆ ಕೆಲಸವೂ ಸಿಕ್ಕಾಯಿತು.ಮುಂದೆ ಮದುವೆ, ಸಂಸಾರ ಶುರುವಾಯಿತು. ಗಂಡ ಅನ್ನೊ ನನ್ನ ಒಲವಿನ ಪತಿ ನನ್ನ ಯಾವ ಆಸೆ ಆಕಾಂಕ್ಷೆಗಳಿಗೂ ತಣ್ಣೀರು ಎರಚಲಾರರು ಅಂತ ಗೊತ್ತಾದ ಕೂಡಲೇ ನನ್ನ ಸಂಗೀತಾಸಕ್ತಿ ಗರಿಗೆದರಿ ಹಾರಾಡ ತೊಡಗಿತು.

ಈ ಬಾರಿ ಸಂಗೀತ ಕಲಿಯುವುದು ಬೇಡ, ಕಾಲೇಜು ಓದುವಾಗ  ಮನೆಯವರಿಗೆ ಗೊತ್ತಾಗದಂತೆ ಸಂಗೀತ ಕಲಿಯಲು ಹೋಗಿ ಸಂಗೀತ ಮೇಡಂ ಜೊತೆ ಬಿಟ್ಟು ಹಾಡಲಾರದೆ, ಈ ಸಂಗೀತ ಚಿಕ್ಕ ವಯಸ್ಸಿನಲ್ಲೇಯೇ ಕಲಿಯಬೇಕಿತ್ತು, ಆಗ ಕಲಿಸದ ಅಪ್ಪ ಅಮ್ಮನ ಮೇಲೆ ಸಾಕಷ್ಟು ಕೋಪ ಬಂದು ಹೆತ್ತವರೇ ನನ್ನ ಸಂಗೀತಾಸಕ್ತಿಗೆ  ಖಳನಾಯಕರಾದರಲ್ಲ ಅಂತ ಕೊರಗಿ  ಸೊರಗಿ, ಸಂಗೀತ ಕ್ಷೇತ್ರಕ್ಕೆ ಮತ್ತೊಬ್ಬ ಸುಬ್ಬುಲಕ್ಷ್ಮಿಯ ಪ್ರವೇಶ ತಪ್ಪಿತ್ತಲ್ಲ ಅನ್ನೊ ಶಾಶ್ವತ ನೋವಿನಿಂದ ಸಂಗೀತ ಕಲಿಕೆಗೆ ಎಳ್ಳು ನೀರು ಬಿಟ್ಟಿದ್ದೆ. ಈಗ  ಹಾಗಾಗುವುದು ಬೇಡ, ಆ ಕಷ್ಟದ ಸಂಗೀತ ಕಲಿಯುವುದು ಬೇಡ, ಯಾವುದಾದರೂ ವಾದ್ಯವನ್ನು ಕಲಿಯೋಣ ಅಂತ ನಿರ್ಧಾರಿಸಿದೆ. ಅದಕ್ಕೆ ಸಾತ್ ಕೊಡುವಂತೆ ನನ್ನ ಗೆಳತಿಯೊಬ್ಬಳು ತಾನೂ ಕೂಡ ನನ್ನೊಂದಿಗೆ ಕಲಿಯಲು ಸಿದ್ಧಳಾದಳು.

ಮೊದಲು ಯಾವ ವಾದ್ಯ ಕಲಿಯುವುದು ಅಂತ ತಲೆಕೆಡಿಸಿಕೊಳ್ಳಲು ಶುರುಮಾಡಿದೆವು. ಕೊಳಲು,
ಮೃದಂಗ, ತಬಲ, ಗಿಟಾರ್, ವೀಣೆ ಹೀಗೆ ನಾವುಕೇಳಿದ್ದ,ನೋಡಿದ್ದ ಎಲ್ಲಾ ವಾದ್ಯಗಳನ್ನು ಒಮ್ಮೆ ನೆನಪು ಮಾಡಿಕೊಂಡು,ನಮಗೆ ಯಾವುದು ಸಾಧ್ಯ ಅಂತ ಚರ್ಚೆ ನಡೆಸಿದೆವು. ಕೊಳಲು ಬೇಡ,ಅದನ್ನು ನುಡಿಸುವಾಗ ಮುಖ ಸೊಟ್ಟಗೆ ಕಾಣಿಸುತ್ತದೆ, ತಬಲ ಬಡಿಯಲು ಹೆಚ್ಚು ಶಕ್ತಿ ಬೇಕು, ತಂಬೂರಿ ಶೃತಿಗಷ್ಟೆ, ಗಿಟಾರ್ ಇಂಗ್ಲೀಷ್ ಹಾಡಿಗೆ ಮಾತ್ರ ಅಂತ ನಮಗೆ ತೋಚಿದಂತೆ ವ್ಯಾಖ್ಯಾನ ಮಾಡುತ್ತಾ,ಕೊನೆಗೆ ವೀಣೆ ಹಿಡಿವ ವೀಣಾಪಾಣಿ ಆಗಬೇಕೇಂಬ ತೀರ್ಮಾನಕ್ಕೆ ಬಂದೆವು.

ಬಾಲ್ಯದಲ್ಲಿ ನೋಡಿದ್ದ ಉಪಾಸನೆ ಸಿನಿಮಾದಲ್ಲಿ ‘ಸಂಪಿಗೆ ಮರದ ಹಸುರೆಲೆ ನಡುವೆ ಕೋಗಿಲೆ ಹಾಡಿತ್ತು’ ಅನ್ನುವ ಹಾಡು,  ‘ಭಾರತ ಭೂಷಿರಾ ಮಂದಿರಾ ಸುಂದರಿ, ಭುವನ ಮನೋಹರಿ ಕನ್ಯಾಕುಮಾರಿ ‘ಅಂತ ವೀಣೆ ನುಡಿಸುತ್ತಾ ಹಾಡುತ್ತಿದ್ದ ನಾಯಕಿಯ ಚಿತ್ರ ಮನಃಪಟಲದಿಂದ ಮರೆಯಾಗಿರಲೇ ಇಲ್ಲ.ನಾನೂ ಕೂಡಾ ವೀಣೆ ಹಿಡಿದು’ಭುವನೇಶ್ವರಿಯಾ ನೆನೆ ಮಾನಸವೇ ‘ ಅಂತ ನಾಯಕಿಯಂತೆಯೇ ಹಾಡುತ್ತಿರುವ ಹಾಗೆ ಕನಸು ಕಾಣುತ್ತಾ ಕಳೆದು ಹೋಗಿಯೇ ಬಿಟ್ಟೆ. ಗೆಳತಿ ಎಚ್ಚರಿಸಿ ಈ ಲೋಕಕ್ಕೆ ಕರೆದುಕೊಂಡು ಬಂದಳು.

ನಮ್ಮೂರಿನ ಜಿಲ್ಲಾ ಕೇಂದ್ರದಲ್ಲಿ ವೀಣೆ ಕಲಿಸುವವರನ್ನು  ಹುಡುಕಿದ್ದು ಹುಲ್ಲು ಬಣವೆಯಲ್ಲಿ ಸೂಜಿ ಹುಡುಕಿದಂತಾಗಿತ್ತು. ಹುಡುಕಲು ಹೊರಟ ಮೇಲಿಯೇ ಅದರ ಕಷ್ಟ ಏನು ಅಂತ ಅರ್ಥ ಆಗಿದ್ದು.ಇಡೀ ಊರಿನಲ್ಲಿ ಯಾರನ್ನು ಕೇಳಿದರೂ ವೀಣೆ ಕಲಿಸುವ ಗುರುಗಳ ಬಗ್ಗೆ ಹೇಳುವವರೇ ಇಲ್ಲ.ನಮಗೂ ಹುಡುಕಿ ಹುಡುಕಿ ಸಾಕಾಗಿಹೋಗಿತ್ತು.ನಮ್ಮ ಛಲಬಿಡದ ಪ್ರಯತ್ನದಲ್ಲಿ ಅಲ್ಲೆಲ್ಲೊ ಒಬ್ಬರು ವೀಣೆ ಕಲಿಸುವ ಗುರುಗಳು ಇದ್ದಾರೆ ಅಂತ ತಿಳಿದು ಹುಡುಕಿಕೊಂಡು ಹೊರಟೆವು.ಕಷ್ಟ ಪಟ್ಟು ಮನೆ ಹುಡುಕಿದರೆ ಮನೆಗೆ ಬೀಗ ಹಾಕಲಾಗಿದೆ.ಅಕ್ಕ ಪಕ್ಕದವರನ್ನು ವಿಚಾರಿಸಿದಾಗ, ಆ ಗುರುಗಳಿಗೆ ನಿವೃತ್ತಿ ಆದ್ದರಿಂದ ಮನೆ ಖಾಲಿ ಮಾಡಿ ಬೆಂಗಳೂರಿಗೆ ಶಿಫ್ಟ್ ಆದರೆಂದು ತಿಳಿದು, ನಮ್ಮ ಮೊದಲ ಪ್ರಯತ್ನವೇ ‘ಪ್ರಥಮ ಚುಂಬನಂ ದಂತ ಭಗ್ನಂ’ ಆದಂಗಾಗಿತ್ತು.ನಿರಾಶೆಯಿಂದ ಅಲ್ಲಿಂದ ಹೊರಟೆವು.

ಇನ್ನು ನಾವು ವೀಣೆ ಕಲಿಯಲು ಸಾಧ್ಯವೇ ಇಲ್ಲ ಅಂತ ಅಂದುಕೊಂಡಿರುವಾಗಲೇ ಗೆಳತಿ ಒಂದು ಸಿಹಿ ಸುದ್ದಿ ತಂದಿದ್ದಳು.ತನ್ನ ನೆಂಟರೊಬ್ಬರ ಮನೆಯ ಅಕ್ಕ ಪಕ್ಕದಲ್ಲೇಯೇ ಪ್ರತಿದಿನ ವೀಣಾವಾದನದ ಶಬ್ದ ಕೇಳಿ ಬರುತ್ತಿದೆ.ಅಲ್ಲಿ ಹೋಗಿ ಹುಡುಕೋಣ ಅಂತ ನನ್ನಲ್ಲಿ ಮತ್ತೆ ಆಶಾಕಿರಣ ಮೂಡಿಸಿ ಕರೆದುಕೊಂಡು ಹೋದಳು.ಅವರ ನೆಂಟರ ಮನೆಯಲ್ಲಿ ಕುಳಿತು ವೀಣಾವಾದನದ ಶಬ್ದಕ್ಕಾಗಿ ಕಾದು ಕುಳಿತು ಯಾವಾಗ ವೀಣಾ ವಾದನದ ಇಂಪು ಕಿವಿಗೆ ಬೀಳುತ್ತದೆಯೊ ಅಂತ ಜಾತಕಪಕ್ಷಿಯಂತೆ ಕಾಯುತ್ತಿರುವಾಗಲೇ ಎಷ್ಟೋ ಹೊತ್ತಿನ ನಂತರ ವೀಣೆಯ ನಾದ ಕೇಳಿಸಿದಾಗ ರೋಮಾಂಚಿತರಾಗಿ ಬಿಟ್ಟೆವು. ಆ ನಾದದ ಜಾಡು ಹಿಡಿದು ಹೊರಟೆವು.

ನಾಲ್ಕೈದು ಮನೆಯ ಆಚೆ ಆ ದಿವ್ಯ ನಾದ ಕೇಳಿಸುತಿದೆ. ಮನೆಯ ಬಾಗಿಲು ತೆರೆದೇ ಇದ್ದು “ತೆರೆದಿದೆ ಮನೆ ಬಾ ಓ ಅತಿಥಿ” ಅಂತ ಕರೆದಂತಾಗಿ ಭಾವಪರವಶತೆಯಿಂದ ಸೀದಾ ಮನೆ ಒಳಗೆ ನುಗ್ಗಿಯೇ ಬಿಟ್ಟೆವು.

ದೊಡ್ಡದಾದ ಹಾಲಿನಲ್ಲಿ ಕೆಂಪು ರತ್ನಕಂಬಳಿಯಾ ಮೇಲೆ ವೀಣೆಯನ್ನು ತೊಡೆಯ ಮೇಲೆ ಇರಿಸಿಕೊಂಡು ಸಾಕ್ಷಾತ್ ಸರಸ್ವತಿಯಂತೆ ವೀಣೆಯನ್ನು ನುಡಿಸುತ್ತಿರುವ ಮಹಿಳೆಯೊಬ್ಬರನ್ನು ಕಂಡು ಇವರೇ ನಮ್ಮ ಗುರುಗಳು ಅಂತ ಆ ಕ್ಷಣವೇ ನಿರ್ಧರಿಸಿ ಕೊಂಡು ಬಿಟ್ಟೆವು. ನಮ್ಮನ್ನು ಕಂಡು  ಆಶ್ಚರ್ಯ ಚಿಕಿತರಾಗಿ ವೀಣೆಯನ್ನು ಕೆಳಗಿರಿಸಿ ಎದ್ದು ನಿಂತರು.ಅವರು ನಮ್ಮನ್ನು ಯಾರೆಂದು ಕೇಳುವ ಮುನ್ನವೇ ನಮ್ಮ ಪರಿಚಯ ಹೇಳಿ ಕೊಂಡು, ತಾವು ನಮಗೆ ವಿದ್ಯಾದಾನ ಮಾಡಬೇಕು ಅಂತ ನಿವೇದಿಸಿಕೊಂಡೆವು. ನಸುನಗುತ್ತಾ ನಮಗೆ ಕುಳಿತು ಕೊಳ್ಳಲು ಹೇಳಿದರು. ಅವರ ಆ ನಗುವಿಗೆ ನಾವು ಸಂಪೂರ್ಣವಾಗಿ ಆ ಕ್ಷಣವೇ ಶರಣಾಗಿ ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂತ ಅನ್ನಿಸಿ ಬಿಟ್ಟಿತು. ಅಷ್ಟರಲ್ಲಿ ಅಡುಗೆ ಮನೆಯೊಳಗಿನಿಂದ ಕುಕ್ಕರ್ ಕೂಗಿಕೊಂಡಿತು, ಬರ್ತಿನಿ ಇರಿ ಅಂತ ಹೇಳಿ ಒಳಹೋದಾಗ ನಾನು ಚಂಗನೆ ಎದ್ದು ವೀಣೆಯ ಮುಂದೆ ಕುಳಿತು ವೀಣೆಯನ್ನು ನೇವರಿಸಿದೆ.

ಮನ ಪುಳಕಿತಗೊಂಡಿತು. ಗೆಳತಿ “ಬಾರೆ,ಅವರು ನೋಡಿದರೆ” ಅಂತ ಕರೆದಾಗ  ಮನಸ್ಸಿಲ್ಲದ ಮನಸ್ಸಿನಲ್ಲಿ ಎದ್ದು ಬಂದು ಗೆಳತಿಯ ಪಕ್ಕದಲ್ಲಿ ಕುಳಿತು ಕೊಳ್ಳುವದಕ್ಕೂ ಅವರು ಒಳಗಿನಿಂದ ಹೊರ ಬರುವುದಕ್ಕೂ ಒಂದೇ ಆಯಿತು.ಹೊರ ಬಂದ ಅವರ ಕೈಯಲ್ಲಿ ಎರಡು ತಟ್ಟೆಗಳಿದ್ದವು. ಎರಡೂ ತಟ್ಟೆಯಲ್ಲಿಯೂ ಕೋಡುಬಳೆ, ಕೊಬ್ಬರಿ ಮಿಠಾಯಿ, ಚಿಲಕವರೆ ಕಾಳಿನ ಹುರಿಗಾಳು ತುಂಬಿತ್ತು. ನಮಗೆ ತಟ್ಟೆ ನೀಡುತ್ತಾ ತಗೊಳ್ಳಿ ಅಂತ ಹೇಳಿದರು. ಇದೇನಿದು ನಾವು ಈಗಷ್ಟೇ ಪರಿಚಯವಾದವರು, ನಮಗೆ ಈ ಆತಿಥ್ಯವೇ ಅಂತ ಅಚ್ಚರಿ ಗೊಳ್ಳುವ ಸರದಿ ನಮ್ಮದಾಯಿತು. ಸಂಕೋಚಿಸುತ್ತಲೇ ಅವರು ನೀಡಿದ ತಟ್ಟೆಯನ್ನು ತೆಗೆದು ಕೊಂಡೆವು.

ನಮ್ಮ ಸಂಕೋಚ ಅರ್ಥವಾಯ್ತು ಅಂತ ಕಾಣುತ್ತೆ, “ಸರಸ್ವತಿ ಸೇವೆ ಮಾಡಲು ಬಯಸಿ ಬಂದಿದ್ದೀರಿ,ನಾನೂ ಕೂಡಾ ಸರಸ್ವತಿ ಸೇವೆ ಮಾಡುತ್ತಿರುವವಳು, ಹಾಗಿದ್ದ ಮೇಲೆ ನಾವು ಬಂಧುಗಳಲ್ಲವೇ “ಎಂದು ಹೇಳಿ ನಮ್ಮ ಸಂಕೋಚ ದೂರ ಮಾಡಿದರು. ಸಂಗೀತ ಸರಸ್ವತಿ ಮನೆಗೆ ಬಂದಿದ್ದಿವಿ ಅಂತ ಅಂದುಕೊಂಡರೆ,ಅನ್ನಪೂರ್ಣೆಶ್ವರಿ ಮನೆಗೆ ಬಂದುಬಿಟ್ಟಿವಲ್ಲ, ಇನ್ನೂ ದಿನಾ ನಮಗೆ ತಿಂಡಿಗಳ ಸಮಾರಾಧನೆ ಅಂತ ತುಂಬಾ ಖುಷಿಯಾಗಿ ಬಿಟ್ಟಿತು. ತಿಂಡಿ ಅಂತೂ ತುಂಬಾ ರುಚಿಯಾಗಿತ್ತು. ಒಂದು ಕಡೆ ವೀಣೆ ಕಲಿಕೆ, ಮತ್ತೊಂದು ಕಡೆ ರುಚಿಯಾದ ತಿಂಡಿಗಳು. ಆಹಾ ,ಇಂಥ ಅದೃಷ್ಟ ಯಾರಿಗುಂಟು, ಯಾರಿಗಿಲ್ಲ, ಬೀಗಿದೆವು. 

ಆದರೆ ತಿಂಡಿ ತಿಂದಾದ ನಂತರ ಅವರು ಹೇಳಿದ ಮಾತುಗಳು ನಮ್ಮನ್ನು ಮತ್ತೆ  ತೀವ್ರ ನಿರಾಶೆಯ ಪ್ರಪಾತಕ್ಕೆ ತಳ್ಳಿ ಬಿಟ್ಟವು.”ನಾನು ಬೇರೆಯವರಿಗೆ ಕಲಿಸುವಷ್ಟು ವೀಣೆ ಕಲಿತಿಲ್ಲ, ನಾನಿನ್ನೂ ವಿದ್ಯಾರ್ಥಿನಿ, ಕಲಿಯುತ್ತಿದ್ದೆನೆ”ಅಂತ ಆ ವೀಣಾ ಸರಸ್ವತಿ ಹೇಳಿದ ಕೂಡಲೇ ನಾನು ವೀಣಾಪಾಣಿ ಯಾಗುವ ಕನಸು ಕರಗಿ ಹೋಗಿ ನಿರಾಶಾ ಪ್ರಪಾತಕ್ಕೆ ಬಿದ್ದುಬಿಟ್ಟೆ.ಗೆಳತಿಯಾ ಪರಿಸ್ಥಿತಿಯೂ ಬೇರೆಯಾಗಿರಲಿಲ್ಲ. ನಾವಿಬ್ಬರೂ ಪೆಚ್ಚಾಗಿ ಬಿಟ್ಟೆವು.

ನಮ್ಮನ್ನು ನೋಡಿ” ಬೇಸರ ಪಟ್ಟು ಕೊಳ್ಳಬೇಡಿ, ನಾನು ವೀಣೆ ಕಲಿಯುತ್ತಿರುವ ಮೇಡಂ ಬಳಿ ನಿಮ್ಮನ್ನು ಕರೆದುಕೊಂಡು ಹೋಗುತ್ತೆನೆ,ಅಲ್ಲಿ ಸೇರಿಕೊಳ್ಳಿ”ಅಂತ ಮತ್ತೆ ನಮ್ಮ ಕನಸಿನ ಸಸಿಗೆ ನೀರೆರೆದರು.ಅಂತೂ ಇಂತೂ  ನಮಗೂ ಒಬ್ಬರು ಗುರುಗಳು ಸಿಕ್ಕಿಯೇ ಬಿಟ್ಟರು.

ನಾವು ನಮ್ಮ ಹೊಸ ಗೆಳತಿಯ ಸಹಾಯದಿಂದ ವೀಣೆ ತರಗತಿಗೆ ಸೇರಿಕೊಂಡೆವು.ವೀಣೆ ಕಲಿಸುವ ಗುರುಗಳು ವಯಸ್ಸಾಗಿರೊ ಹಿರಿಯ ಮಹಿಳೆ ಅಂತ ಅಂದುಕೊಂಡಿದ್ದರೆ ಅದು ಸುಳ್ಳಾಗಿತ್ತು.ಅವರು ಚಿಕ್ಕವಯಸ್ಸಿನ ಸರಳ ಸುಂದರ ಮಹಿಳೆ ಆಗಿದ್ದರು. ಮೊದಲ ದಿನವೇ ಬಹಳ ಸ್ನೇಹದಿಂದ ನಡೆದು ಕೊಂಡು ಮೇಡಂ ವೀಣೆ ಕಲಿಸುವ ಉತ್ಸಾಹ ತೋರಿದ್ದರು. ವೀಣೆಯನ್ನು ತೊಡೆ ಮೇಲೆ ಇರಿಸಿಕೊಂಡು ತಂತಿ ಮೀಟಿದಾಗ ಮನಸ್ಸು ಆಕಾಶದಲ್ಲಿ ತೇಲಾಡಿತು.ಅದೆಷ್ಟೋ ವರ್ಷಗಳ ಕನಸು ನೆರವೇರಿತ್ತು.ನಾನೂ ನನ್ನ ಗೆಳತಿ ಬಹಳ ಉತ್ಸಾಹದಿಂದ ವೀಣೆ ಕಲಿಯಲು ಪ್ರಯತ್ನ ನಡೆಸಿದ್ದೆವು.

ಸಂಸಾರ, ಉದ್ಯೋಗದ ಜೊತೆ ಈ ಸಂಗೀತ ವಾದ್ಯ ಕಲಿಯುವಿಕೆ ತಂತಿ ಮೇಲೆ ನಡೆಯುವ ಸರ್ಕಸ್ ನಂತಿತ್ತು. ಎರಡು ದೋಣಿಗಳ ಮೇಲೆ ಕಾಲಿಟ್ಟು ಹೇಗೊ ಮುಂದೆ ಸಾಗಲು ಪ್ರಯತ್ನ ನಡೆಸಿದ್ದೆ. ಅಷ್ಟರಲ್ಲಿ ನನ್ನ ಗೆಳತಿಗೆ ಮದುವೆ ಕೂಡಿ ಬಂದು ನಡುನೀರಿನಲ್ಲಿ ನನ್ನ ಕೈಬಿಟ್ಟು ಗಂಡನ ಕೈ ಹಿಡಿದು ಬೇರೆ ಊರಿಗೆ ಹೋಗಿಯೇ ಬಿಟ್ಟಳು.ಏನು ಮಾಡೋಕೆ ಸಾಧ್ಯ, ಪಾಪ ಅವಳೂ ಮದುವೆ ಆಗಲೇ ಬೇಕಲ್ಲ ಅಂತ ಸಮಾಧಾನ ಪಟ್ಟುಕೊಂಡು ನನ್ನ  ವೀಣೆ ಅಭ್ಯಾಸ ಮುಂದುವರಿಸಿದೆ. ಮೇಡಂಗೆ ಯಾಕೊ ನನ್ನ ನಿಧಾನ ಕಲಿಕೆ ಸಮಾಧಾನ ತರಿಸದೆ “ಮನೆಯಲ್ಲಿಯೂ ವೀಣೆ ಅಭ್ಯಾಸ ನಡೆಸಬೇಕು ನೀವು,ಹೊಸದನ್ನು ತೆಗೆದುಕೊಳ್ಳುವ ತನಕ ನಮ್ಮ ಮನೆಯ ವೀಣೆಯನ್ನು ಇಟ್ಟುಕೊಂಡು ಅಭ್ಯಾಸ ಮಾಡುತ್ತಿರಿ” ಎಂದು ನನಗೆ ಅವರ ಒಂದು ವೀಣೆಯನ್ನು ಮನೆಗೆ ಕೊಟ್ಟಿದ್ದರು.

ವೀಣೆಯನ್ನು ಬಹಳ ಸಂಭ್ರಮದಿಂದ  ಮನೆಗೆ ಬರ ಮಾಡಿಕೊಂಡೆ. ಸಡಗರದಿಂದ ಅದಕ್ಕೊಂದು ಜಾಗ ಮಾಡಿ ನನ್ನವರು ಕಾಯುತ್ತಿದ್ದರು. ವೀಣೆಯನ್ನು ನಮ್ಮ ಪುಟ್ಟ ಮನೆಯ ಹಾಲಿನಲ್ಲಿ ದಿವಾನ್ ಕಾಟಿನ ಮೇಲೆ ಮಗುವಿನಂತೆ ಇರಿಸಿ ಖುಷಿಯಿಂದ ಬೀಗಿದೆ. ನನ್ನವರ ಮುಂದೆ ನಾ ಕಲಿತಿದ್ದ ಸರಳ ವರೆಸೆ ನುಡಿಸಿ, ಆಗ ತಾನೇ ಕಲಿತಿದ್ದ ಗೀತೆ ಲಂಬೋದರ ಲಕುಮೀಕರ ಅಂಬಾಸುತ ಅಮರವಿನುತ  “ನುಡಿಸಿ ಹೇಗೆ ನುಡಿಸುತ್ತೇನೆ” ಅಂತ ಜಂಬದಿಂದ ಕೇಳಿದರೆ, “ಟೊಯ್ ಟೊಯ್ ಅಂತ ಮಾತ್ರ ನಂಗೆ ಕೇಳಿಸುತ್ತಿದೆ ಕಣೇ “ಅಂತ  ಹೇಳಿದಾಗ ನನಗೆ ಹೇಗಾಗಿರ ಬೇಡ, ಕೋಪ ಉಕ್ಕೇರಿ ಬಂದರೂ,ಪಾಪ ಸಂಗೀತದ ಗಂಧ ಗಾಳಿ ಇಲ್ಲ, ಇನ್ನೇನು ಹೇಳಲು ಸಾಧ್ಯ ಅಂತ ತಕ್ಷಣವೇ ಕ್ಷಮಿಸಿ ಬಿಟ್ಟೆ. ಆದರೆ ಅದೇಕೋ ನನ್ನವರು ” ಸಾಕು ನುಡಿಸಿದ್ದು, ವೀಣೆ ಎತ್ತಿಡು ಚಿನ್ನ, ನಾನು ಮನೆಯಲ್ಲಿ ಇದ್ದಾಗ ವೀಣೆ ಪ್ರಾಕ್ಟೀಸ್ ಮಾಡ್ಬೇಡ, ನಿನ್ನ ತೋಳಿನಲ್ಲಿ ನಾನಿರ ಬೇಕು, ಆ ವೀಣೆ ಅಲ್ಲ” ಅಂತ ರಸಿಕತೆ ತೋರಿಸಿದಾಗ ನಿಜಕ್ಕೂ ನಾಚಿದ್ದೆ.

ಪ್ರತಿ ದಿನ ಡ್ಯೂಟಿ ಮುಗಿಸಿ ಬಂದ ಕೂಡಲೇ ಪತಿರಾಯರು ಬರುವ ತನಕ ಅಭ್ಯಾಸ ತಪ್ಪದೆ ನಡೆಸುತ್ತಿದ್ದೆ. ಆದರೂ ನನ್ನ ಕಲಿಕೆಯನ್ನು ನಮ್ಮ ಗುರುಗಳು ಸಾಲದು ಅಂತಾನೇ ಇದ್ದರು. ಆಗ ಬೇಸರವಾಗುತ್ತಿದ್ದರೂ, ಈ ಕಲೆಗಳಿಗೆಲ್ಲಾ ಪೂರ್ವ ಜನ್ಮದ ಸಂಸ್ಕಾರ ಇರಬೇಕು ಅಂತ ಎಲ್ಲೋ ಕೇಳಿದ್ದು ನೆನಪಾಗಿ ಆ ಸಂಸ್ಕಾರ ನನಗೆ ಕಡಿಮೆ ಇರಬೇಕು ,ಅದಕ್ಕೆ ಕಲಿಕೆ ನಿಧಾನವಾಗುತ್ತಿದೆ ಅಲ್ಲದೆ ಇಷ್ಟು ವಯಸ್ಸಾದ ಮೇಲೆ ಕಲಿಯಲು ಶುರು ಮಾಡಿರುವುದರಿಂದ ಕಲಿಯಲು ಕಷ್ಟವಾಗುತ್ತಿರಬಹುದು, ಆದರೆ ಚೆನ್ನಾಗಿ ಕಲಿತು ನಾನೂ ಒಂದು ದಿನ ಸಂಗೀತ ಕಛೇರಿ ಮಾಡೀಯೇ ಮಾಡುತ್ತೇನೆ ಅಂತ ಶಪಥ ಮಾಡಿಕೊಂಡು ಮನೆಯಲ್ಲಿಯೇ ಸಂಭ್ರಮಿಸಿದೆ.

ಆ ಸಂಭ್ರಮ ಬಹಳ ದಿನ ಉಳಿಯಲಿಲ್ಲ. ವೀಣೆ ಮನೆಗೆ ತಂದು ಎರಡು ವಾರ ಕಳೆದಿತ್ತಷ್ಟೆ. ಸದಾ ದಿವಾನ್ ಕಾಟಿನ ಮೇಲೆ ವೀರಾಜಮಾನವಾಗಿರುತ್ತಿದ್ದ ಮೇಡಂ ಮನೆಯ ವೀಣೆಯನ್ನು ಅಂಗೈ ಅರಗಿಣಿಯಂತೆ ನೋಡಿಕೊಳ್ಳುತ್ತಿದ್ದೆ. ಅಭ್ಯಾಸಮಾಡುವಾಗಷ್ಟೆ ಕೆಳಗಿಳಿಸಿ ಅಭ್ಯಾಸ ಮುಗಿಸಿದ ತಕ್ಷಣವೇ ದಿವಾನ್ ಕಾಟಿನ ಮೇಲೆ ಇಟ್ಟು ಅದರ ಮೇಲೆ ಧೂಳು ಕೂರದಂತೆ ಹೊಸ ಬೆಡ್ ಶೀಟ್ ಹೊದ್ದಿಸಿ ಮಗುವಿನಂತೆ ನೋಡಿ ಕೊಳ್ಳುತ್ತಿದ್ದರೂ ಅದೊಂದು ದಿನ ವೀಣೆ ಅಚಾನಕವಾಗಿ ದಿವಾನ್ ಕಾಟಿನ ಮೇಲೆನಿಂದ ಕೆಳಗೆ ಬಿದ್ದು ತಾನೂ ಒಡೆದು ಕೊಂಡು, ನನ್ನದೆಯನ್ನೂ ಒಡೆದು ಬಿಟ್ಟಿತ್ತು.ಈ ಆಘಾತದಿಂದ ತತ್ತರಿಸಿ ಹೋಗಿದ್ದೆ.

ಮುರಿದು ಬಿದ್ದ ವೀಣೆ, ಶೋಕವೇ ಮೈವೆತ್ತಂತೆ ಕುಳಿತಿರುವ ನಾನು, ಆಫೀಸಿನಿಂದ ಬಂದ ನನ್ನವರಿಗೆ ಅಶೋಕ ವನದ ನಡುವೆ ಕುಳಿತ ಸೀತೆಯಂತೆ ಕಂಡಂತಾಗಿ ಗಾಬರಿಯಾದರು. ವಿಷಯ ತಿಳಿದು ಏನು ಮಾಡಲು ತೋಚದೆ ಸುಮ್ಮನೆ ಕುಳಿತು ಬಿಟ್ಟರು. ಈ ವಿಷಯದಲ್ಲಿ ನನ್ನ ಪತಿರಾಯರು ನನ್ನಷ್ಟೆ ಅನಾನುಭವಿಗಳು. ಒಡೆದ ವೀಣೆ ಏನು ಮಾಡುವದು, ಹೀಗೆ ಆಗಿದೆ ಅಂತ ಮೇಡಂರವರಿಗೆ ಹೇಗೆ ಹೇಳುವುದು, ಹೇಳಿದರೆ ನನ್ನ ಬೇಜವಾಬ್ದಾರಿತನಕ್ಕೆ ಛಿಮಾರಿ ಹಾಕದೇ ಇದ್ದಾರೆಯೇ, ಅವರ ಸ್ವಂತ ವೀಣೆ ಅದು.

ನನ್ನನ್ನು ನಂಬಿ ನನಗೆ ಕೊಟ್ಟಿದ್ದರು, ನಾನು ಅದನ್ನು ಒಡೆದು ಹಾಕಿದ್ದೆನೆ, ಏನು ಮಾಡಲಿ ಹೇಗೆ ಹೇಳಲಿ ಅನ್ನೊ ಭಯದಲ್ಲಿಯೇ ಕಳೆದು ಹೋದೆ, ಯಾಕಾದರೂ ಈ ವೀಣೆ ಕಲಿಯಲು ಹೋದನೊ, ಕಲಿಯಲು  ಹೋದರೂ ಮೇಡಂ ವೀಣೆ ಯಾಕೆ ಮನೆಗೆ ತಂದೆನೊ, ವೀಣೆ ಮನೆಗೆ ತಂದರೂ ಏಕೆ ಒಡೆದು ಹಾಕಿದೆನೊ, ಒಡೆದು ಹೋದ ಮೇಲೆ ಏನು ಮಾಡುವುದೊ  ಹೀಗೆ ಸಮುದ್ರದ ಅಲೆಗಳಂತೆ ಚಿಂತೆಗಳು ಬಂದು ಅಪ್ಪಳಿಸಿ ಅಪ್ಪಳಿಸಿ ಒಂದೇ ದಿನದಲ್ಲಿ ಸುಟ್ಟ ಬದನೆಕಾಯಿ ಅಂತೆ ಆಗಿಬಿಟ್ಟಿ.

ದೊರೆಯಂತ ನನ್ನ ಪತಿರಾಯ ನಾನು ಕೊರಗುವದನ್ನು ನೋಡಲಾರದೆ ಆಫೀಸಿಗೆ ರಜೆ ಹಾಕಿ, ಇಡೀ ಊರು ಸುತ್ತಿ, ವೀಣೆ ರಿಪೇರಿ ಮಾಡುವವರನ್ನು ಕಂಡು ಹಿಡಿದೇ  ಬಿಟ್ಟರು. ಭಗ್ನ ಮೂರ್ತಿಯಾದ ವೀಣೆಯನ್ನು ಆಟೋದಲ್ಲಿ ಹೊತ್ತೊಯ್ದು  ಅಲ್ಲಿಯೇ ಕುಳಿತು ಒಂಚೂರು ಗೊತ್ತಾಗದಂತೆ ಒಡೆದ ಚೂರನ್ನು ಅಂಟಿಸಿ ಉತ್ಸವ ಮೂರ್ತಿಯನ್ನಾಗಿಸಿ ತಂದು ನನಗೆ ಒಪ್ಪಿಸಿದಾಗ  ಕುಣಿದು ಕುಪ್ಪಳಿಸುವಂತಾಗಿತ್ತು.ವೀಣೆ ಏನೋ ರಿಪೇರಿ ಆಯ್ತು.ಆದರೆ ಅದು ಗೊತ್ತಾಗದಂತೆ ಮೇಡಂಗೆ ಕೊಡುವುದು ಹೇಗೆ ಅಂತ ಒದ್ದಾಟ ಶುರುವಾಯಿತು.

ನನ್ನ ಒದ್ದಾಟ ನೋಡಲಾರದೆ ಈ ವೀಣೆಯನ್ನು ನೀನೆ ಖರೀದಿಸಿ ಬಿಡು ಅಂತ ನನ್ನವರಿಂದ ದಿವ್ಯ ಸಲಹೆ ಬಂದು ಹೌದಲ್ವಾ ಅಂತ ಅಂದುಕೊಂಡೆ. ಅವತ್ತೇ ನಮ್ಮ ಮೇಡಂ ಹತ್ತಿರ ಕೇಳಿಯೂ ಬಿಟ್ಟೆ. ತಕ್ಷಣವೇ ಅವರು “ಅಯ್ಯೋ ಅದು ಹಳೆಯ ವೀಣೆ, ನಿಮಗೆ ಹೊಸ ವೀಣೆ ತರಿಸಿ ಕೊಡುತ್ತೇನೆ”ಅಂದು ಬಿಟ್ಟಾಗ ಹೇಗಪ್ಪ ಒಪ್ಪಿಸುವುದು ಅಂತ ಸಂದಿಗ್ಧತೆ ಉಂಟಾಯಿತು. ಕೊನೆಗೆ “ಈ ವೀಣೆ ನನಗೆ ತುಂಬಾ ಇಷ್ಟವಾಗಿದೆ,ಅದನ್ನೇ ಇಟ್ಟುಕೊಳ್ಳುತ್ತೆನೆ, ಹೊಸ ವೀಣೆ ಬೇಡಾ ಮೇಡಂ” ಅಂತ ಹೇಳಿ ಬಲವಂತವಾಗಿ ಒಪ್ಪಿಸಿ ಒಡೆದು ಹೋದ ವೀಣೆಯನ್ನು ಶಾಶ್ವತವಾಗಿ ಇರಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ.

ನನ್ನ ವೀಣೆ ಕಲಿಕೆ ನಿರಾತಂಕವಾಗಿ ಸಾಗುತ್ತಿದೆ ಅಂತ ಅಂದುಕೊಂಡಿರುವಾಗಲೇ ಮೇಡಂ ಅವರ ಪತಿಗೆ ಬೇರೆ ಊರಿಗೆ ವರ್ಗವಾಗಿ ಬಿಟ್ಟಿತು. ಸಂಸಾರ ಸಮೇತ ಅವರು ಊರು ಬಿಡಲೇ ಬೇಕಾಯಿತು. ಮತ್ಯಾರೂ ವೀಣೆ ಕಲಿಸುವವರಾರೂ ಸಿಗದೆ ಇದ್ದುದರಿಂದ ಅಲ್ಲಿಗೆ ನನ್ನ ವೀಣೆ ಕಲಿಕೆಯೂ ನಿಂತು ಹೋಯಿತು. ಅದರ ನೆನಪಾಗಿ ಅದೆಷ್ಟೊ ವರ್ಷ ವೀಣೆ ನಮ್ಮ ಮನೆಯಲ್ಲಿಯೇ ಇತ್ತು. ಮಗಳಿಗಾದರೂ ಪ್ರಯೋಜವಾದೀತೆಂದು ಅಮೂಲ್ಯ ವಸ್ತುವನ್ನು ಕಾಪಾಡಿಕೊಳ್ಳುವಂತೆ ಕಾಪಾಡಿಕೊಂಡಿದ್ದೆ.

ನನ್ನ ಮಗಳಿಗೊ ನನ್ನ ಆಸೆ, ಅಭಿರುಚಿಗಳ ಗಂಧಗಾಳಿಯೂ ಸೋಕದಂತೆ ಸಂಗೀತ, ನೃತ್ಯಗಳಿಂದ ದೂರವಿದ್ದು ಬಿಡುವ ಸ್ವಭಾವ ಅಂತ ಮನದಟ್ಟಾದ ಮೇಲೆ ಈ ಜನ್ಮದಲ್ಲಿ ಅವಳಿಗೆ ವೀಣೆ ಕಲಿಕೆಯಲ್ಲಿ ಒಲವು ಮೂಡಿಸಲು ಅಸಾಧ್ಯ ಅಂತ ಪ್ರಯತ್ನ ನಡೆಸಿ ಸೋಲು ಒಪ್ಪಿಕೊಂಡು ಬಿಟ್ಟೆ. ಯಾರೋ ನಮ್ಮ ಮನೆಯಲ್ಲಿ ವೀಣೆ ಇದೆ ಅಂತ ಗೊತ್ತು ಮಾಡಿಕೊಂಡು, ನೀವು ವೀಣೆನಾ ಉಪಯೋಗ ಮಾಡ್ತಾ ಇಲ್ಲವಲ್ಲ, ವೀಣೆಯನ್ನು ನಮಗೆ ಕೊಟ್ಟು ಬಿಡಿ ಅಂತ ಕೇಳಿ ಕೊಂಡಾಗ ವಿಧಿ ಇಲ್ಲದೆ, ನನಗಂತೂ ವೀಣೆ ಉಪಯೋಗ ಆಗಲಿಲ್ಲ, ನಾನು ವೀಣಾಪಾಣಿಯೂ ಆಗಲಿಲ್ಲ, ಇವರಿಗಾದರೂ ಉಪಯೋಗ ಅಗಲಿ ಅಂತ ಅವರಿಗೆ ಮನಸ್ಸಿಲ್ಲದ ಮನಸ್ಸಿನಿಂದ ವೀಣೆಯನ್ನು ಕೊಟ್ಟು ಬಿಟ್ಟೆ.

‍ಲೇಖಕರು Admin

May 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: