ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮುರಿಗೆಮ್ಮನ ಬಂಡಾಯ’ – ಲಲಿತಾ ಸಿದ್ಧಬಸವಯ್ಯ ಬರೆದ ಕವಿತೆ

ಜೈ ಮುರಿಗೆಮ್ಮ

ಲಲಿತಾ ಸಿದ್ಧಬಸವಯ್ಯ


ಮೇಸ್ತ್ರಿ ಗುಡ್ಡಯ್ಯ
ನಮ್ಮಕುಣಿಗಲುಕಡೆಯೋನು, ಮನುಷ್ಯ ಭಲೆಗಟ್ಟಿಗ
ಮರಳಲ್ಲೆ ಹುಟ್ಟಿ ಸಿಮೆಂಟು ಮೂಟೆಯೊಳಗೇ ಬೆಳೆದ ಅವನಿಗೆ
ಮಡ್ಡಿ ಬಾಂಡ್ಲಿ ಅಂದರೆ ಖಾರಾಶೇವು ಬೆರೆತ ಭೇಲ್ಪುರಿ
ಪ್ಲೇಟಿದ್ದಂಗೆ
 
ಹದಿನಾರು ಗಂಡಾಳು
ಏಳು ಹೆಣ್ಣಾಳು ಅವನ ಲಾಗಾಯ್ತಿನ ಟೀಮು
ಗಂಡಾಳಿಗೆ ಥ್ರಿಹಂಡ್ರಡ್ ಕ್ಯಾಷ್, ಒಂದ್ಕಟ್ಟ್ ಬೀಡಿ, ಮ್ಯಾಲೆರಡು ಪಾಕೀಟು
ಹೆಣ್ಣಾಳಿಗೆ ಇನ್ನೂರಿಪ್ಪತ್ತೈದು ನಗದು, ಮ್ಯಾಲೆ ಎಲಡಿಕೆ
ಚಟ ಇದ್ದೋರಿಗೆ ಚಟಾಕು ಕಡ್ಡಿಪುಡಿ
 
ಹಿಂಗೇ ನಡೆದಿರಲೊಂದು ದಿನ
ದೇವಿ ಮುರಿಗೆಮ್ಮ , ಅವನ ಟೀಮಿನ ಮೋಸ್ಟ್ ಸೀನಿಯರ್ ಲೇಡಿ
ಗುಡ್ಡಯ್ಯನ ಮುಖದಮೇಲಿನ ನೀರಿಳಿಸಿದಳು
ಲೇ ಗುಡ್ಡಯ್ಯ ,
ಹೆಂಗ್ಸು ಗಂಡ್ಸು ಇಬ್ರು ಉದರದು ಅಲ್ಲಿಂದ್ಲೇಯ
ಅದೇನದು ಅವುರ್ಗೆ ಮುನ್ನೂರು, ನಮಿಗ್ ಇನ್ನೂರಿಪ್ಪತ್ತೈದು
ನೋಡುನಾಳಿಕಿಂದ ನಮ್ಗೂ ಮಡಗಂಗಿದ್ರೆ ಥ್ರೀಹಂಡ್ರಡ್ ಎತ್ತುತೀವಿ ಬಾಂಡ್ಲಿ
ಸಮನ ಕೆಲ್ಸ ಸಮನ ವೇತನನಾನೂ ತಿಳ್ಕಂಡಿದೀನಿ ರೂಲ್ಸ್ನ
ನಿಂತಾವಲ್ಲದಿದ್ದ್ರೆ ಇನ್ನೊಂತಾವ ಏನ್ ನೀನೊಬ್ನೆ ಗಣೆನಾಯಕ್ನಾ
 
ಗುಡ್ಡಯ್ಯನಿಗೆ ಬಂದಕ್ವಾಪಕ್ಕೆ ಜೇಸೀಬೀ ಉಳದದ್ದೆ ಸೋಜಿಗ
ಸೀಟಿಂದೆಗರಿದವನೆ ಸೆಂಟ್ರಿಂಗ್ ಪ್ಲೇಟು ಝಾಡಿಸಿ ಒದ್ದ
ಕರನೆ ಸನಿಕೆ ಹಾರೆಚಿಪ್ಗುದ್ಲಿಕೈಗೆ ಸಿಕ್ಕಿದ್ದ ಶಾಟ್ಪುಟ್ ಆಡಿದ
ಸೆಪ್ಟಿಕ್ಗುಂಡಿಯಂತ ತನ್ನ ಬಾಯ್ದೆರೆದು ಬೊಯ್ದ ಬೊಯ್ದಾ ಸಂಜೆತನಕ ಬೊಯ್ದ
ನೇರವಾದ್ದೊಂದೂ ಇಲ್ಲ, ಎಲ್ಲ ಅದರ ಮೇಲೆ ಇದರ ಮೇಲೆ
 
ಮುರಿಗೆಮ್ಮ
ಅದೇ ಅಖಾಡದ ಅದೇ ಮಿಟ್ಟಿಯಲ್ಲಿ ತಳದೋಳು
ಕ್ಯಾರೆ ಬೈಟೆ ಅನ್ನಲಿಲ್ಲ, ಹೊಗೆಸೊಪ್ಪ ಅಗಿದಗಿದು
ಬೇಬಿಜಲ್ಲಿ ಉಂಡೆಜಲ್ಲಿ  ಬಿಲ್ಡಿಂಗಿನ ಸಕಲದೆಸೆಗು
ಉಗಿದುಗಿದು ತನ್ಮೂಲಕ ತಕ್ಕಂಥ ಜವಾಬು ಸಲ್ಲಿಸಿದಳು
 
ಅವಳ ಕಟ್ಟಪ್ಪಣೇ ಮೇರೆಗೆ
ಲೇಡೀ ಟೀಮಿನ ಏಳುಮಂದೆಮ್ಮರೂ
ಬಾಂಡ್ಲಿ ಮುಟ್ಟಲಿಲ್ಲ ಹೊತ್ತಾರೆಗೆ
 

-2-

ಗುಡ್ಡಯ್ಯ ಕೂಡಾ ಸುಮ್ಮನಿರಲಿಲ್ಲ
ಸಾಮ ದಾನಯಾವುದೂ ಇಲ್ಲ, ಡೈರಕ್ಟ್ ಭೇದೋಪಾಯ
ಗಂಡ ಕಾಂತಯ್ಯನನ್ನು ಮುರಿಗೆಮ್ಮನ ಮೇಲೆತ್ತಿ ಕಟ್ಟಿ
ಛೂ ಬಿಟ್ಟಲೇ ಮುರ್ಗಿ, ಸಮನ ವೇತನ ಬೇಕೇನೆ, ನಿಂಗೆ ಸಮನ ವೇತನ
ತಕ್ಕಳೆಲೆ ಹಂಗರೆ ಸಮನ ಪಾಕೀಟ್ಟು, ಸಮನ ಗನೇಸ ಬೀಡಿ
ಎಳ್ಯೆ ನೋಡನ ಹಂಗರೆ, ಕಾಸೊಂದ್ ಕೇಳಿದ್ರೆ ಆಗಲ್ಲಮ್ಮ ಸಮನ ಓಹೊಹೊಹೊ
ಇವೂ ಹೊಡಿಬೇಕು ಸಮನ
 
ಕಾಂತಯ್ಯನ ಈ ಮೂಡಲಪಾಯ
ಕಡೆಗಣ್ಣಲ್ಲೆ ನೋಡುತ್ತಾ , ಒಣಗಿದ ಪುಳ್ಳೆತಂದು
ಒಲೆಯೂಡಿ ಷೆಡ್ಡಿನ ಮುಂದು ಮಕ್ಕಳ ತಟ್ಟಿ ಮಲಗಿಸುವ ತನಕ
ಬಾಯಿ ಹೊಲಕೊಂಡಿದ್ದಳು ಮುರಿಗೆಮ್ಮ
ಆಮೇಲೆ ತೆಗೆದಳು ನೋಡಾ ಕೆರೆ ತೂಬ
ಏನಲೇ ನೀನಂದಿದ್ದು ಕಾಂತ್ಯಾ
ನೀನೇನು ನಿಮ್ಮಪ್ಪಂಗುಟ್ಟಿದ್ದೊ ಇಲ್ಲ ಆ ಗುಡ್ಡಂಗೋ
ತತ್ತರಲೆ ಆ ಪಾಕೀಟ, ತತ್ತರಲೆ ಆ ಬೀಡಿಪಟ್ಣ
ಏನ್ನಾನ್ಕಾಣದ ಅಮರವತಿ ಶರಬತ್ತೇನಲೆ
ನೋಡೇ ಬಿಡನ ಏನ್ ಮುಳಗೋದಾತಾ ಬೂಲೋಕ
ಮುಚ್ಕಂಡ್ ಎದ್ದೋದ್ರೆ ಬದಿಕ್ಕಂಡೆ ತಿಳಕ
ನಿನ್…………………………
ನನ್ನ ಕನ್ನಡ ಕಾಗುಣಿತಕ್ಕೆ
ಮುರಿಗೆಮ್ಮನ ಮುಂದಿನ ಬೈಗುಳ ದಾಖಲಿಸುವಷ್ಟು ತಾಕತ್ತಿಲ್ಲ
ಅದು ಕಾಂತಯ್ಯನಿಗೂ ಇಲ್ಲವಾದ್ದರಿಂದ
ನವರಂಧ್ರಗಳನ್ನೂ ಮುಚ್ಚಿಕೊಂಡು ಮಲಗಿದ.

-3-


ಅಂತೂ ಅಲ್ಲಿಗ್  ಬಂದ್ ಇಲ್ಲಿಗ್ ಬಂದ್
ಇದು ಗುಡ್ಡಯ್ಯನ ಕುತ್ತಿಗೆಗೆ ಬಂತು
ಅವನು ಅಂಜುತ್ತಿದ್ದುದು ಈ ಏಳು ಮಹಿಳಾ ಮಣಿಯರಿಗಲ್ಲ
ಅವರ ಭಕ್ತರಿಗೆ
 
ಅವನ ಹದಿನಾರು ಗಂಡಾಳಿನ ಪೈಕಿ
ಲಕ್ಷಲಕ್ಷ ಅಡ್ವಾನ್ಸು ಗದುಮಿದ್ದಸೀನಿ ಗೋವಿಂದು ವೆಂಕ್ಟೇಶು
ಇತ್ಯಾದಿತ್ಯಾದಿ ಎಕ್ಸ್ಟ್ರಾಗಗಳು ಬರುತ್ತಿದ್ದುದೆ ಪಂಕಜಳಿಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಮತ್ತುಗೇಣು ಬಟ್ಟೆಗಾಗಿಯಾದರೆ
ಈ ನವಜವಾನುಗಳು ಮಾಡುವುದು ಮಾತ್ರ ಕೇವಲ ಜಿಂಕೆಮರಿ ಪಂಕಜಳಿಗಾಗಿ
ಆ ಸಕಲಕೆಲ್ಲಕುರಿಂಗ್ಟೋನೂ ಒಂದೆ
ಜಿಂಕೆಮರಿ ನಾ ಜಿಂಕೆಮರೀನಾ
ಅವಳು ಟೀಮು ಬಿಟ್ಟಳೋ ಲೆಕ್ಕ ಈ ಸಕಲರೂ ಬಿಟ್ಟಂಗೆ
 
ಇನ್ನು ಪುಚ್ಪ
ಈ ಪುಚ್ಪ ಎಲ್ಲೊ ಅಲ್ಲೆ ಅವಳ ಗಂಡ ಪಳಿನಿ
ಅವನಿಗೆ ಹೆಂಡತಿ ಮೇಲೆ ಪ್ರೀತಿ ಐದು ಕೇಜಿಯಾದರೆ ಅನುಮಾನ ಹತ್ತು ಕೇಜಿ
ಅವಳ ನೆತ್ತಿ ಮೇಗಳ ಇಟ್ಟಿಗೆಯನ್ನೂ ಪರೀಕ್ಷಿಸುತ್ತಾನೆ
ಅದೇನು ಮೇಲೋ ಫೀಮೇಲೋ ಅಂತ
ಇಂಥೋನು ಪುಚ್ಪಳನ್ನಗಲಿ ಇದ್ದಾನೊ ಗುಡ್ಡಯ್ಯನ ಕೂಡೆ
ಚೊಂಬು ಕಳಕೊಂಡ್ ಗಂಗಳ ಕೊಟ್ಟುಕಣಿ ಕೇಳ್ದಂಗೆ
 
ಇನ್ನುಳಿದ ಭುಜಬಲ ಪರಾಕ್ರಮಿ
ಕಾಂತಯ್ಯನದು ವಶೀಕರಣದ ಕೇಸು
ಈ ಭಕ್ತ ಶಿರೋಮಣಿಯ ಮೂಲೆಮಟ್ಟ ರಸಮಟ್ಟಗಳೇನಿದ್ದರು
ದೇವಿ ಮುರಿಗೆಮ್ಮನ ಸನ್ನಿಧಿಯಲ್ಲಿ ಮಾತ್ರ ಕ್ರಿಯಾಶೀಲ
 
ಈ ಎಲ್ಲಕ್ಕಿಂತ
ದೊಡ್ಡಬಾಬತ್ತೆಂದರೆ ಶೇಶಮ್ಮಗಾರ್ರು, ಗುಡ್ಡಯ್ಯನ ಶಕ್ತಿಕೇಂದ್ರ
ಟೂರಿಂಗ್ ಟಾಕೀಸಿನಂಥ ಅವನನ್ನು ಈಸು ವರುಷನೀರೆರದು ಪೊರೆದ
ಈ ಶೇಶಮ್ಮನೆಂಬ ಥರ್ಮಲ್ ಪ್ಲಾಂಟನ್ನಗಲಿ ಅವನಿಗುಂಟೆ ಅನ್ಯಜಗತ್ತು ?
ಅವಳ ಮೂರು ಹುಡುಗಿಯರು ದುಡಿಮೇಲಿ
ನೀಯತ್ತಿಗೆ ಇನ್ನೊಂದು ಹೆಸರು
 
ಗುಡ್ಡಯ್ಯನಿಗೆ
ಹದಿನಾಲ್ಕಂತಿಸ್ತಿನ ಬಿಲ್ಡಿಂಗು ಎದೆಮೇಲೆ ಬಿದ್ದಂಗಾಯಿತು
ಭಾಗಾಕಾರ ಗುಣಾಕಾರ ಮುಗಿಸಿ
ಮೂರನೆದಿನ ನಿರ್ಧಾರ ಪ್ರಕಟಿಸಿದ
ಇವೊತ್ತಿನಿಂದ ಸಮಾನ ಕೆಲಸಕ್ಕೆ ಸಮಾನ ವೇತನ

-4-

ತತ್ವಗೆದ್ದಿತು,
ನೀವು ಮಾರ್ಗದ ಬಗ್ಗೆ ಕೊಂಕು ತೆಗೆಯಬೇಡಿ
ಮಾರ್ಗ ಮತ್ತುಗುರಿಎರಡೂ ಸರಿ ಮಾಡಕಾಗಲ್ಲರೀ
ಮೀನ್ಸ್ ಅಂಡ್ ಎಂಡ್ಸ್ ಎರಡೂ ಹಿಡಕೊಂಡು ಕೂತರೆ
ಥ್ರೀ ಹಂಡ್ರಡ್ರೂಪೀಸನ್ನ ಮಹಾತ್ಮರು ತಂದು ಕೊಡೊಲ್ಲ
ಜೈ ಮುರಿಗೆಮ್ಮ
 

‍ಲೇಖಕರು G

13 October, 2014

6 Comments

  1. ಅಕ್ಕಿಮಂಗಲ ಮಂಜುನಾಥ

    ಜೈ ಮುರಿಗೆಮ್ಮ, ಜೈ ಜೈ ಲಲಿತಾ ಸಿದ್ದ ಬಸವಯ್ಯ.
    ಜಯವಾಗಲಿ ಮುರಿಗೆಮ್ಮನ ದಿಟ್ಟ ತನಕ್ಕೆ , ಅವಳ ಹೋರಾಟಕ್ಕೆ.
    ಪಡೆವ ಪ್ರತಿ ಫಲಕ್ಕೆ.
    ಸೋಲಾಗಲಿ ಫೀ ಮೇಲಿನ ಮೇಲೆ ನಡೆಯುವ ದಬ್ಬಾಳಿಕೆಗೆ
    ಮತ್ತೆ ಮೇಲಿನ ಮೇಲೆ ಫೀ ಮೇಲಿನ ಉಬ್ಬಾಳಿಕೆಗೆ.
    ಹಾಗಂತ ಗುಡ್ಡಯ್ಯನ ಬೆನ್ನು ಮುರಿಯುವ ಸಾಹಸ ಬ್ಯಾಡ
    ಮನೆಯ ಫಿಲ್ಲರಿನ ಬೆನ್ನಿಗೂ ಬಡಿದೀತು ಗೂನು.
    ಮನೆ ಆದೀತು ಕಮಾನು.
    ಹಕ್ಕು ಕೇಳಲಿ ಸರಿ.–
    ಮೇಲು ಫೀಮೇಲಿಗೆ ಸಮವಿರಲಿ ಎನ್ನುವುದಕ್ಕಿಂತ
    ಯಾವ ಕೆಲಸಕ್ಕೆ ಎಷ್ಟು ಸರಿ ಎಂಬುದಿರಲಿ.
    ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿಯುವ
    ಕಾಂಕ್ರೀಟ್ ಕಲೆಸುವವನಿಗೆ ಮುನ್ನೂರು ಸರಿ ,
    ಆದರೆ , ಎರಡು ಮೂರು ಗಂಟೆ ಅತ್ತಿಂದಿತ್ತ ಇತ್ತಿಂದತ್ತ ಓಡಿಯಾಡಿ ಕಾಲ ಕಳೆವ ಆಫೀಸರಿಗೇಕೆ ಸಾವಿರಾರು ಸಂಬಳ?
    ನೂರಿನ್ನೂರು ಪಡೆವವರಿಗೆ ಕೂಲಿ ಎನ್ನುತ್ತೀರಿ ಸಾವಿರಾರು ಪಡೆವವರಿಗೆ ಸಂಬಳ ಎನ್ನುತ್ತೀರಿ.ಅಲ್ಲಿಯೂ ಮೇಲು ಕೀಳು.
    ಇಂಥ ತಾರತಮ್ಯದ ವಿರುದ್ಧ ಹೋರಾಡು ಮುರಿಗೆಮ್ಮ.
    ನಿನಗೆ ಜಯವಾಗಲಿ.
    ಪದ್ಯ ಚೆನ್ನಾಗಿದೆ. ಓದಿ ಖುಷಿಯಾಯಿತು. ವಂದನೆಗಳು.
    -ಅಕ್ಕಿಮಂಗಲ ಮಂಜುನಾಥ.

  2. KBS

    Simply grate, madam.
    nimage neevA sAi

  3. mmshaik

    mana tattitu..javari bhaashe..kavanakke meragu needide..!!!!!!!!

  4. Gubbachchi Sathish

    ಸಖತ್ತಾಗಿದೆ ಮೆಡಂ.

  5. Palahalli Vishwanath

    ಬಹಳ ಲೈವ್ಲಿ ಅಗಿದೆ ಮೇಡಮ್. ಇಷ್ಟವಾಯಿತು.

  6. prathibha nandakumar

    ಇದನ್ನ ಒಳ್ಳೇ ಕಥೆಯಾಗಿ ಬರೀಬೇಕಿತ್ತು. ಕಾವ್ಯ ವಾಚ್ಯ ಆಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading