‘ಮುದ್ರಾ ರಾಕ್ಷಸ’ ಸೃಷ್ಟಿಸುವ ಅವಾಂತರಗಳು

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಮುದ್ರಣ ಸಮಯದಲ್ಲಿ ತಪ್ಪುಗಳು ಹೇಗಾಗುತ್ತವೆ?

ಮುದ್ರಣಾಲಯದಲ್ಲಿ ಕರಡನ್ನು (Proof) ತಿದ್ದುವಾಗ ಎಷ್ಟೇ ಎಚ್ಚರವಹಿಸಿದರೂ ತಪ್ಪುಗಳು ಭಯೋತ್ಪಾದಕರಂತೆ ನುಸುಳಿ ಬಿಡುತ್ತವೆ. ಕರಡು ತಿದ್ದುವಾಗ ಪದಗಳಲ್ಲಿರುವ ತಪ್ಪುಗಳನ್ನು ನಮ್ಮ ಕಣ್ಣುಗಳು ಸರಿಯಾಗಿ ಓದಿಕೊಂಡು ಮುಂದಿನ ಸಾಲಿನ ಕಡೆಗೆ ಹೊರಳಿ ಬಿಡುತ್ತವೆ.

ಮೇಲ್ನೋಟಕ್ಕೆ ಪದದಲ್ಲಿ ತಪ್ಪಿದೆಯೆಂದು ಅನಿಸುವುದೇ ಇಲ್ಲ. ಅಕ್ಷರ ಸಂಯೋಜನೆ ಹಾಗೂ ವಿನ್ಯಾಸಕ್ಕೆ ವಿನ್ಯಾಸಕಾರನ ತಾಳ್ಮೆ ಕೌಶಲ್ಯಕ್ಕೆ ಇಂಬುಗೊಡಲು ಮುದ್ರಣ ಕ್ಷೇತ್ರದಲ್ಲೂ ಕಂಪ್ಯೂಟರ್‌ಗಳು ತಳ ಊರಿದ್ದು ಉತ್ತಮವಾದ ಬೆಳವಣಿಗೆ.

ಹಸ್ತಪ್ರತಿಯನ್ನು ಕಂಪ್ಯೂಟರ್‌ನಲ್ಲಿ ಅಕ್ಷರ ಸಂಯೋಜನೆ ಮಾಡುವುದು ಒಂದು ಕಲೆ. ಹಸ್ತಪ್ರತಿಯ ಪದ, ಸಾಲುಗಳನ್ನು ನೋಡುತ್ತಾ ಕೀಲಿಮಣೆಯ ಕಡೆ ನೋಡದೆಯೇ ಶರವೇಗದಲ್ಲಿ ಯಾವುದೇ ತೊಡಕಿಲ್ಲದಂತೆ ಅಕ್ಷರ ಸಂಯೋಜಿಸುತ್ತಿರುತ್ತಾರೆ. ಕೈಬೆರಳುಗಳು ಯಂತ್ರಗಳಿಗಿಂತ ವೇಗವಾಗಿ ಕೀಲಿಮಣೆಯ (Key board) ಮೇಲೆ ನರ್ತಿಸುತ್ತಿರುತ್ತವೆ.

ಅಂತಹ ಸಮಯದಲ್ಲಿ ಒಂದು ಬೆರಳಿನ ವೇಗ ತುಸು ತಗ್ಗಿದರೂ ಕ್ಷಣಾರ್ಧದಲ್ಲಿ ತಪ್ಪುಗಳು ಉಂಟಾಗಿಬಿಡುತ್ತವೆ. ಕಣ್ಣುಗಳಿಗೆ ಹೆಚ್ಚು ಶ್ರಮವಾದಾಗ ಅಥವಾ ಬೆರಳಚ್ಚುಗಾರರ ಮನಸ್ಥಿತಿ ಸಮತೋಲನದಲ್ಲಿಲ್ಲದಿದ್ದಾಗ ಹೆಚ್ಚು ತಪ್ಪುಗಳಾಗುತ್ತವೆ. ಕೆಲವು ಬಾರಿ ಪದಗಳು, ಸಾಲುಗಳು, ಪ್ಯಾರಾಗಳು ಅಷ್ಟೇ ಏಕೆ ಪುಟಗಳು ಎಗರಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕರಡಚ್ಚಿನಲ್ಲಿ ತಪ್ಪುಗಳನ್ನು ಕೋಳಿಯು ಮಣ್ಣಿನಲ್ಲಿ ಬೆರೆತ ತನ್ನ ಆಹಾರವನ್ನು ಹೆಕ್ಕಿ ಹೆಕ್ಕಿ ತೆಗೆಯುವ ಹಾಗೆ ತಪ್ಪುಗಳನ್ನು ಹೆಕ್ಕಿ ತೆಗೆಯಬೇಕು. ಕರಡು ತಿದ್ದುವುದು ಒಂದು ಉತ್ಕೃಷ್ಟವಾದ ಕಲೆ. ಈ ಕಲೆಯು ಎಲ್ಲರಿಗೂ ಅಷ್ಟು ಸುಲಭವಾಗಿ ಸಿದ್ಧಿಸುವುದಿಲ್ಲ. ಕರಡು ತಿದ್ದುವವರು ಮತ್ತು ಕಂಪ್ಯೂಟರ್‌ನಲ್ಲಿ ಕರಡಿನ ತಪ್ಪುಗಳನ್ನು ಸರಿಪಡಿಸುವ ಬೆರಳಚ್ಚುಗಾರರು ತಪ್ಪುಗಳನ್ನು ತಿದ್ದುವಾಗ ಬಳಸುವ ವಿಶೇಷವಾದ ಚಿನ್ಹೆಗಳ ಬಗ್ಗೆ ತಿಳಿದುಕೊಂಡಿರಬೇಕು. (ಕರಡು ತಿದ್ದುವಾಗ ಬಳಸುವ ವಿಶೇಷ ಚಿನ್ಹೆಗಳನ್ನು ಅರ್ಥ ಸಮೇತ ಚಿತ್ರದಲ್ಲಿ ತೋರಿಸಲಾಗಿದೆ)

ಅನುಭವಿ, ನುರಿತ ಬೆರಳಚ್ಚುಗಾರರು ಲೇಖಕರ ಹಸ್ತಪ್ರತಿಯಲ್ಲಿನ ತಪ್ಪುಗಳನ್ನು ಸರಿಯಾಗಿಸಿಕೊಂಡು ವೇಗವಾಗಿ ಅಕ್ಷರ ಸಂಯೋಜಿಸುವ ಕಲೆಯನ್ನು ಕರಗತಮಾಡಿಕೊಂಡಿರುತ್ತಾರೆ. ಈ ಕೆಲಸ ನಿರ್ವಹಿಸುವವರು ಭಾಷೆಯ ಮೇಲೆ ಹಿಡಿತವಿರಬೇಕಾಗುತ್ತದೆ ಹಾಗೂ ವ್ಯಾಕರಣ ಚೆನ್ನಾಗಿ ತಿಳಿದುಕೊಂಡಿರಬೇಕಾಗುತ್ತದೆ.

ಸಾಲಿನ ಕೊನೆಯಲ್ಲಿ ದೊಡ್ಡ ಪದಗಳಿಗೆ ಜಾಗ ಸಾಕಾಗದಿದ್ದಾಗ ಪದವನ್ನು ವಿಭಜಿಸಿಕೊಂಡು ಜೋಡಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಪದಗಳನ್ನು ಎಚ್ಚರಿಕೆಯಿಂದ, ನಾಮಪದಗಳು ವಿಭಜನೆಯಾಗದ ಹಾಗೆ, ಪದಗಳ ಅರ್ಥಕ್ಕೆ ಕುಂದು ಬರದಂತೆ ವಿಭಜಿಸಬೇಕಾಗುತ್ತದೆ. ಅಕ್ಷರ ಸಂಯೋಜಿಸುವಾಗ ಕೆಲವು ಹೆಸರುಗಳಲ್ಲಿನ ಒಂದೇ ಒಂದು ಅಕ್ಷರ ತಪ್ಪಾದರೂ ಅಥವಾ (ಮಾನವ ಸಂಪನ್ಮೂಲ ಖಾತೆ – ಮಾವನ ಸಂಪನ್ಮೂಲ ಆಗಬಾರದು) ತುಸು ಪದ ಪಲ್ಲಟವಾದರೂ ಆಭಾಸವಾಗಿಬಿಡುತ್ತದೆ. ಉದಾಹರಣೆಗೆ, ಇತ್ತೀಚೆಗೆ ಕನ್ನಡ ಪ್ರಮುಖ ಪತ್ರಿಕೆಯೊಂದರಲ್ಲಿ ಜೆ.ಡಿ.ಎಸ್. ನಾಯಕ ವೈ.ಎಸ್.ವಿ. ದತ್ತ ಅವರ ಹೆಸರು ವೈ.ಎಸ್.ವಿ. ಸತ್ತ ಎಂದು ಪ್ರಕಟವಾಗಿ ಭಾರೀ ಮುಜುಗರಕ್ಕೆ ಕಾರಣವಾಗಿದ್ದನ್ನು ಇಲ್ಲಿ ನೆನೆಯಬಹುದು.

ಸಾಮಾನ್ಯವಾಗಿ ಮುದ್ರಣಾಲಯಗಳಲ್ಲಿ ಆಹ್ವಾನ ಪತ್ರಿಕೆಗಳನ್ನು ಡಿ.ಟಿ.ಪಿ. ಮಾಡಿ ವಿನ್ಯಾಸ ಮಾಡುವಾಗ ಕಂಪ್ಯೂಟರ್‌ನಲ್ಲಿರುವ ಹಳೆಯ ಆಹ್ವಾನ ಪತ್ರಿಕೆಯ ಫೈಲನ್ನು ತೆರೆದಿಟ್ಟುಕೊಂಡು ಅದರ ಮೇಲೆಯೇ ಹೆಸರು, ದಿನಾಂಕ, ವಿಷಯಗಳನ್ನು ಬದಲಾವಣೆ ಮಾಡುತ್ತಾ ಹೋಗುವುದು ರೂಢಿ.

ಇಂತಹ ಸಮಯದಲ್ಲಿ ತಿದ್ದುಪಡಿ ಮಾಡಿಸಿದ್ದರೂ ಕಂಪ್ಯೂಟರ್‌ನಲ್ಲಿ ಉಳಿಯದೆ ಅಥವಾ ಕಣ್ತಪ್ಪಿನಿಂದ ಹಳೆಯ ಪತ್ರಿಕೆಯ ದಿನಾಂಕವೋ, ತಿಂಗಳೋ, ವರ್ಷವೋ, ಹೆಸರೋ ಹಾಗೆಯೇ ಉಳಿದು ಅಥವಾ ಎಲ್ಲಾ ಸರಿಯಿದೆ ಎಂದ ಕೊಂಡು ವ್ಯಕ್ತಿಗಳ ಇನ್ಶಿಯಲ್ ತಪ್ಪಾಗಿ, ಕೊನೆಗೆ ಮುದ್ರಣವಾದ ಮೇಲೆ ತಪ್ಪು ಅರಿವಿಗೆ ಬಂದು, ಮುಂದೆ ಸಮಯದ ಅಭಾವದಿಂದ ಒತ್ತಡದ ಜೊತೆಗೆ ನಷ್ಟವನ್ನೂ ಅನುಭವಿಸಬೇಕಾಗುತ್ತದೆ. (ಹೀಗೆ ಒಮ್ಮೆ ವಿವಾಹ ಆಮಂತ್ರಣ ಪತ್ರಿಕೆಯನ್ನು ತುರ್ತಾಗಿ ಸುಲಭ ಮಾರ್ಗದಲ್ಲಿ ವಿನ್ಯಾಸ ಮಾಡಲು ಕಂಪ್ಯೂಟರ್‌ನಲ್ಲಿ ಇದ್ದ ಹಳೆಯ ಆಹ್ವಾನ ಪತ್ರಿಕೆಯ ಫೈಲ್ ತೆಗೆದು ಅದರಲ್ಲಿಯೇ ಬದಲಾವಣೆ ಮಾಡಿದ ಆಹ್ವಾನಪತ್ರಿಕೆಯ ಕರಡಿನಲ್ಲಿ ವಧುವಿನ ಹೆಸರೇ ಬದಲಾಗಿ ಆತಂಕ ಸೃಷ್ಟಿಸಿತ್ತು)

ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಲು ಬರುವವರು ಒತ್ತಡದಲ್ಲಿದ್ದು, ಕುದುರೆಯ ಮೇಲೆ ದೌಡಾಯಿಸುವವರಂತೆ ಬಂದಿರುತ್ತಾರೆ. ಅವರು ಆಹ್ವಾನ ಪತ್ರಿಕೆ ತುರ್ತಾಗಿ ನಿನ್ನೆಯೇ ಬೇಕಾಗಿತ್ತು ಎನ್ನುತ್ತಿರುತ್ತಾರೆ. ಅಂತಹ ಒತ್ತಡದ ಸಮಯದಲ್ಲಿ ಎಡವಟ್ಟುಗಳು ಬಹಳ. ಹೀಗೆ ಒಮ್ಮೆ ನಮ್ಮ ಮುರುಘಾಮಠದ ಬೆಂಗಳೂರು ಬಸವಕೇಂದ್ರದ ವತಿಯಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಶರಣ ಸಂಸ್ಕೃತಿ ಉತ್ಸವದ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸಲು ಕೊನೆಯ ಹಂತದಲ್ಲಿ ಬೆಳಗ್ಗೆಯೇ ಮುದ್ರಣಾಲಯಕ್ಕೆ ಬಂದು ಕಂಪ್ಯೂಟರ್ ಮುಂದೆ ಶಿವಬಸವ ಸ್ವಾಮೀಜಿಯವರೇ ಕುಳಿತರು.

ಸ್ವತಃ ವಿನ್ಯಾಸ ಮಾಡಿಸಿ, ಕರಡು ತಿದ್ದಿ ಅಂತಿಮಗೊಳಿಸುವಷ್ಟರಲ್ಲಿ ಸಂಜೆ 5 ಗಂಟೆ ಆಗಿತ್ತು. ಮುದ್ರಣಕ್ಕೆ ಒಪ್ಪಿಗೆ ನೀಡಿ, ನಾಳೆ ಬೆಳಗ್ಗೆ ಹೊತ್ತು ಹುಟ್ಟುವ ಮುಂಚೆಯೇ ಬೇಕೆಂದು ಒತ್ತಡ ಹೇರಿ ಹೋದರು. ನಾವು ಆಹ್ವಾನ ಪತ್ರಿಕೆಯ ವಿನ್ಯಾಸದ ಕೊನೆ ಹಂತದ ಕೆಲಸವನ್ನು ಮುಗಿಸಿ ಮುದ್ರಣಕ್ಕೆ ಅಣಿಯಾಗಿದ್ದೆವು. ಆದರೆ ಒಂದೆರಡು ಗಂಟೆಯ ಬಳಿಕ ದಿಢೀರನೆ ಹಿಂತಿರುಗಿ ಕರೆ ಮಾಡಿದ ಸ್ವಾಮೀಜಿಯವರು, ಒಪ್ಪಿಕೊಂಡಿದ್ದ ಗಣ್ಯ ಅತಿಥಿಗಳೊಬ್ಬರು ಅಂದು ಬರಲಾಗುತ್ತಿಲ್ಲ ಆದ್ದರಿಂದ ಬೇರೊಬ್ಬರ ಹೆಸರನ್ನು ಸೇರಿಸಬೇಕೆಂಬ ಕಾರಣವೊಡ್ಡಿ ಮುದ್ರಣವನ್ನು ನಿಲ್ಲಿಸಲು ಆದೇಶಿಸಿದರು.

ಹತ್ತದಿನೈದು ನಿಮಿಷಗಳ ಬಳಿಕ ಮತ್ತೆ ಕರೆಮಾಡಿ ಆ ಜಾಗಕ್ಕೆ ಗಂಗಾಂಬಿಕಾ ಎಂಬ ಹೆಸರನ್ನು ತಪ್ಪಾಗದ ಹಾಗೆ ಸೇರಿಸಿ ಮುದ್ರಿಸಲು ಹೇಳಿದರು. ಅವರು “ಯಾವ ಹೆಸರು ಸೇರಿಸುತ್ತಿದ್ದೀಯಾ ಮರಳಿ ಹೇಳು” ಎಂದಾಗ “ನೆನಪಿದೆ, ಜಗದ್ಗುರು ಬಸವಣ್ಣನವರ ಪತ್ನಿಯ ಹೆಸರಲ್ಲವೇ? ನಾವು ತಪ್ಪಾಗದ ಹಾಗೆ ಸೇರಿಸಿ ಮುದ್ರಿಸುತ್ತೇವೆ, ನೀವು ನಿಶ್ಚಿಂತರಾಗಿರಿ” ಎಂದು ಹೇಳಿದೆ.

ಒಮ್ಮೆ ಒಂದು ಮುದ್ರಣ ಕೆಲಸ ಅಂತಿಮವಾಗಿ ಮುದ್ರಣಕ್ಕೆ ಹೋದಮೇಲೆ ಅದನ್ನು ನಿಲ್ಲಿಸಿ ಮತ್ತೆ ಮುದ್ರಣ ಆರಂಭಿಸಿ ಅವರ ಸಮಯಕ್ಕೆ ಕೊಡುವುದು ಬಹು ಒತ್ತಡದ ಕೆಲಸ. ಆ ಒತ್ತಡಗಳ ನಡುವೆಯೂ ತಿದ್ದುಪಡಿಗಳನ್ನು ಮಾಡಿ ಅವರ ಬೇಡಿಕೆಯಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ತಡರಾತ್ರಿಯೇ ಮಠಕ್ಕೆ ತಲುಪಿಸಿದೆವು. ಅವರು ಬೆಳಗ್ಗೆ ಆಹ್ವಾನ ಪತ್ರಿಕೆಯನ್ನು ಅತಿಥಿಗಳಿಗೆ ಕೊಡಲು ಹೊರಟಿದ್ದಾರೆ.

ನಾನು ಬೆಳಗ್ಗೆದ್ದು ಮೈಮುರಿಯುವಾಗಲೇ ಅವರಿಂದ ಮತ್ತೆ ಕರೆ, “ಆಹ್ವಾನ ಪತ್ರಿಕೆಯಲ್ಲಿ ದೊಡ್ಡ ತಪ್ಪಾಗಿದೆ. ನಾವು ಗಂಗಾಂಬಿಕಾ ಹೆಸರು ಸೇರಿಸಲು ಹೇಳಿದ್ದೆವು, ನೀವು ನೀಲಾಂಬಿಕಾ ಎಂದು ಸೇರಿಸಿ ಅತಿಥಿಗಳ ಮುಂದೆ ಮುಜುಗರಪಡುವಂತಾಯಿತು” ಎಂದು ರೇಗಿದರು. ನಾನು ಬಸವಣ್ಣನವರ ಪತ್ನಿಯ ಹೆಸರೆಂದೇ ನೆನಪಿಟ್ಟುಕೊಂಡಿದ್ದೆ. ಆದರೆ ಆ ಕ್ಷಣಕ್ಕೆ ಬಸವಣ್ಣನವರಿಗೂ ಇಬ್ಬರು ಪತ್ನಿಯರೆಂಬುದನ್ನು ಮರೆತದ್ದರಿಂದ ಇಂತಹ ಅನಾಹುತ ಸಂಭವಿಸಿಬಿಟ್ಟಿತು.

ಒಮ್ಮೆ ಬಸವೇಶ್ವರರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಒಬ್ಬ ಗ್ರಾಹಕರು ಶರಣರ ಚಿತ್ರಗಳನ್ನೊಳಗೊಂಡ ವಾಲ್ ಕ್ಯಾಲೆಂಡರ್ ಮುದ್ರಿಸಲು ಬಂದಿದ್ದರು. ಅವರು ವಾಲ್ ಕ್ಯಾಲೆಂಡರ್‌ನಲ್ಲಿ ಶಿವಪೂಜಾನಿರತ ಬಸವಣ್ಣನವರು ಮತ್ತು ಅಕ್ಕಮಹಾದೇವಿಯ ಚಿತ್ರಗಳನ್ನು ದಿನಾಂಕಗಳೊಂದಿಗೆ ಹೊಂದಿಸಿ ವಿನ್ಯಾಸ ಮಾಡಿಸಿದ್ದರು.

ಅಂತಿಮ ವಿನ್ಯಾಸದಲ್ಲಿ ಅಕ್ಕಮಹಾದೇವಿ ಮತ್ತು ಬಸವಣ್ಣನವರು ಇಬ್ಬರೂ ಒಂದೇ ಕಡೆ ಮುಖಮಾಡಿ ಕುಳಿತಿರುವಂತಿತ್ತು. ಅದನ್ನು ಎದುರುಬದುರು ಕೂತಿರುವ ಹಾಗೆ ಮಾಡಬೇಕೆಂಬುದು ಅವರ ಬಯಕೆ. ಅದು ಕಂಪ್ಯೂಟರ್‌ನಲ್ಲಿ ಬಹಳ ಸುಲಭದ ಕೆಲಸ. ಒಂದು ಚಿತ್ರವನ್ನು ಆಯ್ಕೆ ಮಾಡಿ, ಮಿರರ್ ಎಂಬ ಕಮಾಂಡ್ ಕೊಟ್ಟಲ್ಲಿ ಬಲಕ್ಕೆ ನೋಡುತ್ತಿದ್ದ ಚಿತ್ರ ಎಡಕ್ಕೆ ನೋಡುವಂತಾಗಿಬಿಡುತ್ತದೆ.

ಅವರ ಮನದಾಸೆಯಂತೆಯೇ ಬಲಕ್ಕೆ ನೋಡುತ್ತಿದ್ದ ಶಿವಪೂಜಾನಿರತ ಬಸವಣ್ಣನ ಚಿತ್ರವನ್ನು ಮಿರರ್ ಇಮೇಜ್ ಮಾಡಿ, ಬಹು ಪ್ರತಿಗಳನ್ನು ಮುದ್ರಿಸಿ ಕೊಟ್ಟೆವು. ಇದಾದ ಹದಿನೈದು ದಿನಗಳ ಬಳಿಕ ಉತ್ತರ ಕರ್ನಾಟಕದ ಕಡೆಯಿಂದ ಒಬ್ಬರು ವಾಲ್ ಕ್ಯಾಲೆಂಡರ್‌ನಲ್ಲಿದ್ದ ನಮ್ಮ ದೂರವಾಣಿ ಸಂಖ್ಯೆಗೆ ಕರೆಮಾಡಿ ವಾಲ್ ಕ್ಯಾಲೆಂಡರ್ ಮೇಲಿದ್ದ ಗುರುತನ್ನು ಹೇಳಿ “ಇದು ನಿಮ್ಮದೆಯೇ?” ಎಂದು ಕೇಳಿದರು.

ನಾನು “ಕ್ಯಾಲೆಂಡರ್ ನಮ್ಮದಲ್ಲ, ನಾವು ಮುದ್ರಿಸಿದವರು” ಎಂದು ಹೇಳಿದ ಕೂಡಲೇ, ಓ ನೀವು ಹೊಟ್ಟೆಗೆ ಏನು ತಿನ್ನುತ್ತೀರಿ, ಸರಿಯಾಗಿ ಕೆಲಸ ಮಾಡಲಾಗದಿದ್ದರೆ ಕೆಲಸವನ್ನೇಕೆ ಒಪ್ಪುಕೊಳ್ಳುತ್ತೀರಿ? ಮುದ್ರಣ ಮಾಡುವಾಗ ನಿಮ್ಮ ಜ್ಞಾನವೆಲ್ಲಿರುತ್ತದೆ?” ಎಂದು ನನ್ನನ್ನು ಮಾತನಾಡಲು ಬಿಡದೆ ಬಯ್ಯತೊಡಗಿದರು. ಅವರ ಬೈಗುಳಗಳ ನಡುವೆಯೇ, “ಸಾರ್ ಮೊದಲು ತಪ್ಪೇನಾಗಿದೆ ಎಂದು ಹೇಳಿ” ಎಂದಾಗ “ಬಸವಣ್ಣನವರು ಶಿವಪೂಜೆ ಮಾಡುವಾಗ ಇಷ್ಟಲಿಂಗ ಯಾವ ಕೈನಲ್ಲಿರುತ್ತದೆ?” ಎಂಬ ಪ್ರಶ್ನೆಯನ್ನು ಹಾಕಿದರು.

ನಾನು “ಎಡಗೈನಲ್ಲಿ” ಎಂದು ಉತ್ತರಿಸುವಷ್ಟರಲ್ಲಿ, “ನೀವು ಮುದ್ರಣಮಾಡಿರುವ ಬಸವಣ್ಣನ ಬಲಗೈನಲ್ಲಿ ಇಷ್ಟಲಿಂಗವಿದೆಯಲ್ಲ” ಎಂದು ಮತ್ತಷ್ಟು ಬೈದರು. ಮುಂದೆ ಈ ಕ್ಯಾಲೆಂಡರ್ ಅನ್ನು ಯಾವುದೇ ಕಾರಣಕ್ಕೂ ಹಂಚಬಾರದೆಂದು ಧಮ್ಕಿ ಹಾಕಿದರು. ಕಂಪ್ಯೂಟರ್‌ನಲ್ಲಿ ಚಿತ್ರವನ್ನು ಮಿರರ್ ಇಮೇಜ್ ಮಾಡಿದಾಗ ಚಿತ್ರವೇನೋ ಬಲಕ್ಕೆ ತಿರುಗುತ್ತದೆ. ಆದರೆ ಎಡಕ್ಕಿದ್ದ ಅವರ ಬೈತಲೆ ಬಲಕ್ಕೆ ತಿರುಗಿದಂತಾಗುತ್ತದೆ ಅಥವಾ ಬಲಗೈನಲ್ಲಿ ಹಿಡಿದಿದ್ದ ಲೇಖನಿ ಎಡಗೈನಲ್ಲಿ ಹಿಡಿದಂತೆ ಕಾಣುತ್ತದೆ.

ಕ್ಯಾಲೆಂಡರ್‌ನಲ್ಲಿ ಶಿವಪೂಜಾನಿರತ ಬಸವಣ್ಣನವರ ಚಿತ್ರವನ್ನು ಮಿರರ್ ಇಮೇಜ್ ಮಾಡಿದಾಗ ಎಡಗೈನಲ್ಲಿದ್ದ ಇಷ್ಟಲಿಂಗ ಬಲಗೈಗೆ ಬಂದ ಸೂಕ್ಷ್ಮಾಂಶವನ್ನು ಗ್ರಹಿಸದೆ ದೊಡ್ಡ ಪ್ರಮಾದವಾಗಿಬಿಟ್ಟಿತ್ತು.

ಮುದ್ರಾ ರಾಕ್ಷಸನು ಸೃಷ್ಟಿಸುವ ಅವಾಂತರಗಳು ಮುಂದುವರಿಯುವವು…

November 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: