ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುದುಕಿಯ ಸ್ವಗತ…

ಶಂಕರಾನಂದ ಹೆಬ್ಬಾಳ

ಮರುಭೂಮಿಯ ಅರಮನೆಯಲ್ಲಿ
ವಯೋವೃದ್ದೆಯ ಆರ್ತನಾದ
ಕೇಳುವವರಿಲ್ಲದೆ,
ಕೊರಗುತ್ತಿದ್ದಾಳೆ ಆಕೆ
ಕಣ್ಣೀರಿನಲ್ಲಿ ಕೈತೊಳೆದು
ತನ್ನ ಪತಿ ಬರುವನೆಂದು….!

ಈಕೆಯದು ಹೇಳತೀರದ ಪ್ರಲಾಪ
ಚಂದ್ರಮತಿಯ ಪ್ರಲಾಪಕ್ಕಿಂತಲೂ
ಕಮ್ಮಿಯಿಲ್ಲದ ದುಃಖ
ನಿಜವೋ..?
ಸುಳ್ಳೋ…?
ಅರೆಹುಚ್ಚಿಯಂತೆ ಮುದುಕಿ
ಮುದುಡಿ ಕೂತಿದ್ದಾಳೆ
ಕಮರಿದ ಭಾವಗಳಲ್ಲಿ
ತೊಯಿಸಿಕೊಂಡ ಕಾಗೆಯಂತೆ..
ಬೆದರಿದ ಹರಿಣಿಯಂತೆ…!

ಅವಳ ಗಂಡನಿರುವ ಸ್ಥಳ
ಅವಳಿಗೆ ಮಾತ್ರ ಗೊತ್ತು..
ಮಗನೆನ್ನುತ್ತಾನೆ…
ನಾವಿರುವಾಗ ಏಕೆ ಚಿಂತೆ…
ಸುಮ್ಮನಿರು ಅಮ್ಮಾ…
ಎಂದು ಗದರುತ್ತಿದ್ದಾನೆ…!

ಮೂರೊತ್ತು ಮಾವನ ಚಿಂತೆ
ಚಿತ್ತ ಸ್ವಾಸ್ಥ್ಯವಿಲ್ಲದೆ
ಚಿತ್ರವಿಚಿತ್ರದ ವರ್ತನೆಯಲ್ಲಿ
ವರ್ತಿಸುತ್ತಿದ್ದಾಳೆ ಎಂದು
ಮೂದಲಿಸುವ ಸೊಸೆಯ
ಮಾತಿಗೆ ಮುದುಕಿ ಬೇಸತ್ತಿದ್ದಾಳೆ …

‘ಪೋನ್ ಹಚ್ಚಿಕೊಡಮ್ಮ
ಅಜ್ಜನಿಗೆ’ ಎಂದು ಕೇಳಿದರೆ
ಮೊಮ್ಮಗಳು
ನಿನ್ನದೊಂದು ಕಿರಿಕಿರಿ ಕಮ್ಮಿಯಾಗಿತ್ತು
ಥುತ್….! ಹಾಳು ದರಿದ್ರವೆ
ಎಂದು ಶಪಿಸುವ ದುರ್ಗುಣಾಪ್ರಿಯೆ…!

ಮಗನಂತೂ ಇಪ್ಪತ್ನಾಲ್ಕು ಗಂಟೆ
ಬ್ಯುಸಿಯಾದ ಮನುಷ್ಯ
ಸವತಿಯಂತಿರುವ ಸೊಸೆ,
ರಕ್ಕಸನ ಮಗಳಂತಿರುವ
ಮೊಮ್ಮಗಳು, ಸದಾ ಪೋನ್
ಸ್ಕ್ರೀನನಲ್ಲಿ ಮಗ್ನ
ನನ್ನ ಮೊರೆಯನಾಲಿಸದೆ,
ಕಲ್ಲಾಗಿ ಕುಳಿತೆಯಲ್ಲ
‘ದೇವರೆ..’
ಎಂದು ಸ್ವಗತದ ದನಿಯಲ್ಲಿ
ಹಲುಬುತ್ತಿದ್ದಾಳೆ….!
ಈಕೆಯ ನೋವಿಗೆ ಕೊನೆಯಿಲ್ಲವೆ…?

‍ಲೇಖಕರು Admin

13 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading