ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಗಿಯದ ಕಾಯುವಿಕೆ

ಆಶಾ ಜಗದೀಶ್


ಮತ್ತೊಂದಿಷ್ಟು ರಾತ್ರಿಗಳ
ಹಾಸಿಟ್ಟು ಕಾಯುತ್ತಿರುವೆ
ಇದೊಂದು ಮುಗಿಯದ ನಿರೀಕ್ಷೆ

ಈ ಜಗತ್ತಿನ ಉಸಿರ ಸದ್ದು
ಕೇಳುವಷ್ಟು ನಿಶ್ಯಬ್ಧ ತುಂಬಿದ
ಈ ರಾತ್ರಿ ಫಲಿಸಲಿದೆ

ತೆಕ್ಕೆಗಳು ತೆರೆದುಕೊಳ್ಳಲಿವೆ
ಒಂದು ಅವಿಸ್ಮರಣೀಯ ಆಲಿಂಗನಕೆ

ಹಚ್ಚಿಟ್ಟ ದೀಪ ತನ್ನನ್ನೇ
ಕಳೆದುಕೊಳ್ಳುತ್ತಾ
ಕತ್ತಲೊಂದಿಗೆ ಸೆಣೆಸುತ್ತದೆ
ಕೊನೆಗೆ ಎಣ್ಣೆ ತೀರಿ ಬತ್ತಿ ಸುಟ್ಟು
ಸೊಡರುತ್ತಾ ಕತ್ತಲೊಳಗೆ ಲೀನವಾಗುವ
ವೇಳೆಗೆ ನಮ್ಮ ಮಿಥುನದ ವಾರ್ತೆ ಮುಗಿದು
ಕತ್ತೆಲೆಯ ಕಾಣುವ ಮುನ್ನ
ನಮ್ಮ ಕಣ್ಣುಗಳು ಮುಚ್ಚಲಿವೆ…


ನಿಯತ್ತಿನ ರಸೀದಿ ಹಿಡಿದು
ಪ್ರೇಮಕ್ಕೆ ಸೆರಗೊಡ್ಡಲೆಂದು ನಿರೀಕ್ಷಿಸುವ
ಕಣ್ಣುಗಳಿಗೆ ತಮ್ಮ ಕಣ್ಣುಗಳ ಚಂಚಲತೆ
ಅದೆಷ್ಟು ಬಾರಿ ನಿಯತ್ತಿನ ಹೊಸಿಲ
ದಾಟಿ ಅಲೆದಾಡಿ ಬಂದಿರಬಹುದೆನ್ನುವುದರ
ಖಬರಿಲ್ಲ…

ಬಹುಶಃ ಆ ಚಂಚಲ ಕಣ್ಣುಗಳಿಗೆ
ರಸೀದಿಗಳ ಹಂಗಿಲ್ಲ


ಅರ್ಧ ಮಾಡಿಟ್ಟು ಬಂದ
ಅಡುಗೆಯಂತೆ
ಕಾಯುತ್ತಿವೆ ನಿನ್ನೊಂದಿಗೆ ಕಳೆದ
ಆ ಕ್ಷಣಗಳು…
ಪೂರ್ಣಗೊಳಿಸಲಿಕ್ಕಾದರೂ
ಒಮ್ಮೆ ಬರಲೇ…

ಎಂದು ಕೇಳುವುದು
ಸುಮ್ಮನೇ ಕೇಳಿಕೊಳ್ಳಲೂ
ಸಾಧ್ಯವಾಗದ ಪ್ರಶ್ನೆ

ಈ ತಲೆತಿರುಕ ಪ್ರಶ್ನೆಗಳಿಗೆ
ಸಮಯಪ್ರಜ್ಞೆ ಒಂಚೂರೂ ಇಲ್ಲ
ಪುಟ ತಿರುವಿದಷ್ಟು ಸುಲಭವಾ
ಬದುಕನ್ನು ತಿರುಗಾ ಮುರುಗಾ
ಮಾಡುವುದು…

‍ಲೇಖಕರು Avadhi

11 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading