ಮುಖವಾಡ!
-ಸೌಮ್ಯಶ್ರೀ ಎ.ಎಸ್.
ಕನ್ನಡಿಗೆ ಮುಖವಿಟ್ಟು ನಿಂತೆ
ನಿಚ್ಚಳವಾಗಿ ಕಣ್ಬಿಟ್ಟು
ಬಿಂಬವ ದೃಷ್ಟಿಸಿದೆ
ಅರೆಕ್ಷಣ ಆಶ್ಚರ್ಯವಾಯಿತು
ಮುಖವಾಡ ತೊಟ್ಟ ಬಿಂಬ
ದಿಗಿಲುಗೊಂಡು ಹೊತ್ತು
ಸರಿದರೂ ಕಲ್ಲಾಗಿತ್ತು ನನ್ನದೇ ಪ್ರತಿಬಿಂಬ!
ಅಯ್ಯೋ! ಇದೇನಿದು ನನ್ನ
ಮೊಗದಲ್ಲೂ ನಾನೇ ಕಂಡಿರದ
ಬದಲಾಗೋ ಬಣ್ಣದ
ಭಾವಗಳ ಮುಖವಾಡ
ಅರಿಯದಾದೆ ಅದರ ಹಿಂದಿನ ಕೈವಾಡ
ಅರಿಯದ ಚೆಂದದ ಮನಸಿಗಿಂತ
ಬಣ್ಣಮೆತ್ತಿಕೊಂಡ ಸುಂದರ ಮುಖಕ್ಕೆ
ಕಿವಿ ಇರಿಯುವಷ್ಟು ಸುರಿದ ಚಪ್ಪಾಳೆ
ಆ ಸಪ್ಪಳಕ್ಕೆ ಬೆಚ್ಚಿ ನಾನೇ ಇತ್ತ ಸರಿದೆ!
ಮನದಲಿ ದ್ವೇಷ ದಹಿಸುತ್ತಿದ್ದರೂ
ಕೃತಕತೆಯ ಕಪಟ ಪ್ರೀತಿಯ
ಮುಖವಾಡ ಹೊತ್ತು
ನೋಟದಲ್ಲೇ ನಡೆಸುವರು
ಎಂದೂ ನೋಡಿರದ ಬಣ್ಣದ ಬಯಲಾಟ
ಅರಿತಂತಿಲ್ಲ ಆಧುನಿಕತೆಯ ಸೋಗು
ಹೊತ್ತ ಇವರು ಬದುಕೊಂದು
ಹುಟ್ಟು ಸಾವಿನ ಚದುರಂಗದಾಟ!
ಕಾಲದ ಕನ್ನಡಿ ಕರೆದಾಗ
ಮುಂದೆ ನಿಂತವರಿಗೆಲ್ಲಾ ಗೊಂದಲ
ಮನದಲಿ ಅದೇನೋ
ಅರಿಯದ ಕೋಲಾಹಲ
ಮುಖವಾಡ ಕಳಚಿ
ಮಿಥ್ಯದ ವಿರೂಪ ತೊರೆದು
ಬಣ್ಣಹಚ್ಚಿ ಕುಣಿದ ನಾಟಕಕ್ಕೆ ನಾಂದಿಯಾಡಿ
ಮೆರೆದ ಎಲ್ಲರೂ ಸರಿದು ಸಾಗಬೇಕು!






ಚೆನ್ನಾಗಿದೆ