ಕಣ್ಣಮಳೆ
ಚಾಂದ್ ಪಾಷ ಎನ್ ಎಸ್
ನೀಲಾಕಾಶದ ನಿಹಾರಿಕೆಗಳ ನಡುವೆ ನಗು ಹುಡುಕುವಾಗ,
ಹಠಾತ್ತನೆ ನಿನ್ನ ಅಳು ಸಿಕ್ಕಿತು.
ದುಃಖತಪ್ತ ಮೋಡಗಳ ಮೌನವ ಸೀಳುತ್ತಾ ಸಿಡಿಲೊಂದು ಸೀಳಿ ಮಳೆ ಹನಿಯ ನೋವು ಉಕ್ಕೀತು.
ಕುರುಡುಗಣ್ಣಿನ ಚಂದ್ರನಿಂದ ಬೆಳದಿಂಗಳು ತೊಟ್ಟಿಕ್ಕಿತು!
ದಾರಿಯ ಗುರುತ ಹಿಡಿದು ಅಂಗೈಯ ಗೆರೆಯಲ್ಲೆ ನಡಿವಾಗ,
ಮುಳ್ಳಿನ ಮಾಲೆ ಮುಡಿದ ಗಿಡವ ನೆಟ್ಟವರಾರು?
ಬೇನೆಯುಂಡ ಬದುಕಿಗೂ ನಿನ್ನ ಸಾಂಗತ್ಯ ಬೇಕೆನಿಸಿದಾಗ
ಪ್ರೇಮದ ಅಂಗಾಲಿನಲ್ಲೂ ಮುಳ್ಳ ಕಿತ್ತ ಗುರುತಿದೆ
ಆದರೆ, ಕಣ್ಣುಗಳ ಹೊಲಿಗೆ ಬಿಚ್ಚುವವರಾರು?

ಬೀದಿ ದೀಪಗಳು ಮಲಗುವ ಹೊತ್ತಲ್ಲಿ ಮನೆ ದೀಪ ದೊಡ್ಡದಾಗುತ್ತದೆ.
ಕತ್ತಲೆಯ ಕೆಚ್ಚಲಲಿ ಬೆಳಕು ಹಾಲಾಗುವಷ್ಟರಲ್ಲಿ
ಕೋಲಾಹಲ ಎಬ್ಬಿಸಿದ ರಾತ್ರಿಗೆ ಎದೆಬೇನೆ ಬಂದೀತು.
ಬರಿ ಬೆಲ್ಲವಷ್ಟೇ ತಿಂದರೆ ಯುಗಾದಿ ಹೇಗಾದೀತು?
ಗುಲಾಬಿ ಗಲ್ಲದಲ್ಲಿ ಮುಳ್ಳು ಪರಚಿದ ಗುರುತಿದ್ದರೂ,
ಸುಗಂಧದ ಸೀಮೆಗೆ ಬೇಲಿ ಎಲ್ಲಿದೆ ಹೇಳು?
ಬಿದ್ದಷ್ಟು ಬೀಳಲಿ ಕಣ್ಣ ಮಳೆ ನೋವ ಕಳೆ ಕೀಳಲಾದೀತೆ?
ಇರಲಿ ಬಿಡು ಈ ಒಂದು ರಾತ್ರಿಯಾದರೂ ನೋವಿನಲ್ಲೇ ಉಸಿರಾಡಲಿ
ಮುಂಜಾನೆ ನಗುವಿಗೆ ತುಟಿಯಲ್ಲೊಂದಿಷ್ಟು ಜಾಗ ಇಡು!






0 Comments