ಮೀಸೆ ಪುರಾಣ…

ಸಿದ್ಧರಾಮ ಕೂಡ್ಲಿಗಿ

ಚಿತ್ರಗಳು : ಅಂತರ್ಜಾಲದಲ್ಲಿ ದೊರಕಿದ್ದು.
ಸ್ಕೆಚ್ : ನನ್ನದು

ನಿನ್ನೆ ಶೇವ್ ಮಾಡಿಕೊಳ್ಳಬೇಕಾದಾಗ ಮೀಸೆಯನ್ನು ಕತ್ತರಿಯಿಂದ ಸರಿಪಡಿಸಿಕೊಳ್ಳುತ್ತಿದ್ದೆ. ಆಗ ಈ ಮೀಸೆಯ ಮಹತ್ವ ಏನಿರಬಹುದು ಎಂಬ ಹುಳು ತಲೆಯಲ್ಲಿ ಹೊಕ್ಕಿತು. ಮೀಸೆಗೂ ಖಂಡಿತ ಒಂದು ಇತಿಹಾಸ ಇದ್ದೇ ಇರುತ್ತದೆ ಎನಿಸಿತು. ಯಾಕೆಂದರೆ ಎಷ್ಟು ಥರದ ಮೀಸೆ ನೋಡಿಲ್ಲ ನಾನು ?

ಪುರುಷತ್ವದ ಪ್ರತೀಕವೆಂದೇ ಪರಿಗಣಿಸಿರುವ ಈ ಮೀಸೆಯಲ್ಲು ಅತೀವವಾದ ವಿನ್ಯಾಸಗಳಿವೆ. ಹಳ್ಳಿಗಳಲ್ಲೆಲ್ಲ ಆಗ ಊರಿನ ಗೌಡರಿಗೆ ಮಾತ್ರ ಮೀಸೆ ಬಿಡುವ ಅಧಿಕಾರವಿತ್ತಂತೆ. ಊರಿನಲ್ಲಿ ಯಾರೂ ಮೀಸೆ ಬಿಡುವಂತಿರಲಿಲ್ಲ. ಆಕಸ್ಮಾತ್ ಬಿಟ್ಟರೂ ಮೀಸೆ ನೆಲ ನೋಡುವಂತಿರಬೇಕು, ಮೇಲೆ ತಿರುವಿರಬಾರದು. ಗೌಡರಿಗೆ ಮಾತ್ರ ಮೀಸೆ ತಿರುವುವ ಅಧಿಕಾರ.

ಇನ್ನು ಕೆಲವು ಮೀಸೆ ಹೇಗಿರುತ್ತಿದ್ದವೆಂದರೆ ಅದರ ಮೇಲೆ ಲಿಂಬೆಹಣ್ಣನ್ನೂ ಕೂರಿಸಬಹುದಿತ್ತಂತೆ. ಮೂಗಿನ ಕೆಳಗೆ ದಪ್ಪನಾಗಿರುವ ಮೀಸೆ ತುದಿಗೆ ಬಂದಂತೆಲ್ಲ ಚೂಪಾಗಿ ನಂತರ ಅದನ್ನು ಹುರಿಗೊಳಿಸಿಬಿಟ್ಟರೆ ಅದರ ಠೀವಿಯೇ ಬೇರೆ ಅಲ್ಲವೆ ?

ರಾಜನ ಹಿರಿದ ಕತ್ತಿಯಂತಿರುವ, ರಾಜ್ ಕುಮಾರ್ ಅಣ್ಣಾವ್ರ ಮೀಸೆ ಎಷ್ಟು ಪ್ರಸಿದ್ಧವಲ್ಲವೆ ? ಅಷ್ಟೇ ಚಂದ ಅವರ ಮೊಗಕ್ಕೆ ಒಪ್ಪುತ್ತಿತ್ತು ಸಹ. ಮೀಸೆ ಇಲ್ಲದ ಅಣ್ಣಾವ್ರನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ ಎಂಬಂತೆ ಅವರ ನಗುಮೊಗಕ್ಕೆ ಕಳೆ ಅವರ ಮೀಸೆ.

ಇನ್ನು ಪುಟ್ಟ ಮೀಸೆ ಎಂದ ತಕ್ಷಣ ನೆನಪಾಗೋದು ಜಗತ್ಪ್ರಸಿದ್ಧ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ಮೀಸೆ, ಜಗತ್ತನ್ನೇ ನಡುಗಿಸ ಹೊರಟಿದ್ದ ಹಿಟ್ಲರ್ ಮೀಸೆ. ಪುಟ್ಟ ಟೂತ್ ಬ್ರಶ್ ನ್ನೇ ತುಟಿಗಳ ಕೆಳಗಿಟ್ಟಂತೆ ಇವರ ಮೀಸೆ. ಅವರೊಂದಿಗೆ ಅವರ ಮೀಸೆಗಳೂ ಜಗತ್ಪ್ರಸಿದ್ಧವಾದದ್ದೇನೂ ಸುಳ್ಳಲ್ಲ.

ಸಾಹಿತಿಗಳು ನೋಡಿ, ಗಡ್ಡ ಮೀಸೆಗಳೇ ಒಂದು ಕಾಲಕ್ಕೆ ಟ್ರೆಂಡ್ ಆಗಿತ್ತು. ಗಡ್ಡಮೀಸೆ ಇಲ್ಲದವನು ಸಾಹಿತಿಯೇ ಅಲ್ಲ ಎಂಬಂತಾಗಿಬಿಟ್ಟಿತ್ತು.

ಉದ್ದಕ್ಕೆ ಜಿರಲೆಯಂತೆ ಜೋತುಬಿದ್ದ ಮೀಸೆಗಳಿಗೆ ಚೀನಿಯರು ಪ್ರಸಿದ್ಧ. ತೆಳುವಾದ ಗಾಳಿಗೆ ಹಾರಾಡುವಂತಿರುವ ಅವರ ಗಡ್ಡ ಮೀಸೆಗಳೇ ವಿಚಿತ್ರ. ಆದರೆ ಚೀನಿಯರು ಎಂದಾಕ್ಷಣ ಅವರ ಉದ್ದಕೆ ಜೋತುಬಿದ್ದ ಮೀಸೆ ಗಡ್ಡಗಳೇ ಕಣ್ಮುಂದೆ ಬರುತ್ತವೆ. ಒಂದೊಂದು ಜನಾಂಗಗಳೂ ಸಹ ಅವರ ಮೀಸೆಗಳಿಂದ ಕಂಗೊಳಿಸುತ್ತವೆ.

ಇನ್ನು ಸೈನ್ಯವನ್ನೇ ತೆಗೆದುಕೊಳ್ಳಿ ಅಲ್ಲಿಯ ಕೆಲವು ರೆಜಿಮೆಂಟ್ ಗಳ ಸೈನಿಕರು ತಮ್ಮ ಪೌರುಷ, ವೀರತನವನ್ನು ತೋರಿಸಲೆಂದೇ ಹುರಿಮೀಸೆಗಳನ್ನು ಹೊಂದಿರುತ್ತಾರೆ. ಅದು ಅವರ ಶೌರ್ಯದ ಪ್ರತೀಕವೂ ಹೌದು. ರಜಪುತ್ ರೆಜಿಮೆಂಟ್ ಸೈನಿಕರು ತಮ್ಮ ಮೀಸೆಗಳಿಂದ ಪ್ರಸಿದ್ಧರು.

ಅಂದ ಹಾಗೆ ಈ ಮೀಸೆಯ ಜಾಡು ಹುಡುಕಿಕೊಂಡು ಹೋದವನಿಗೆ ವಿಚಿತ್ರ ವಿಶೇಷಗಳು ಸಿಕ್ಕವು.

ಪ್ರಾಚೀನ ಕಾಲದಲ್ಲಿ ಇಂಡೋ-ಯೂರೋಪಿಯನ್ ನ ಕಬ್ಬಿಣ ಯುಗದಲ್ಲಿ ಮುಖದಲ್ಲಿ ಗಡ್ಡ ಇರದೆ ಕೇವಲ ಮೀಸೆ ಬಿಟ್ಟಿರುವ ಆಧಾರಗಳು ಪಳೆಯುಳಿಕೆ ಶಾಸ್ತ್ರಜ್ಞರಿಗೆ ದೊರೆತಿವೆ.

ಮನುಕುಲದ ನಿಯಾಲಿತಿಕ್ ಕಾಲದಲ್ಲಿ ಆದಿಮಾನವರು ತಮ್ಮ ಗಡ್ಡ ಮೀಸೆಗಳನ್ನು ತೆಗೆಯಲು ಹರಿತವಾದ ಕಲ್ಲುಗಳನ್ನೆ ಬಳಸುತ್ತಿರಬಹುದೆನ್ನಲಾಗಿದೆ.

ಕ್ರಿಪೂ 2550ರ ಈಜಿಪ್ಟ್ ನ ದೊರೆ ರಾಹೊಟೆಪ್ ನ ಕಾಲದ ಶಿಲ್ಪವೊಂದರಲ್ಲಿ ಮೀಸೆ ಕಂಡುಬಂದಿದೆ. ಅಲ್ಲದೇ ಕ್ರಿ.ಪೂ 300ರಲ್ಲಿ ಪ್ರಾಚೀನ ಇರಾನಿಯನ್ ನ ಕುದುರೆ ಸವಾರನೊಬ್ಬನಿಗೆ ಮೀಸೆಯಿರುವ ಚಿತ್ರ ಲಭಿಸಿದೆ.

ಕ್ರಿ.ಶ 400ರಲ್ಲಿ ಶೇವ್ ಮಾಡಿದ, ಸುಂದರವಾಗಿ ಮೀಸೆ ಹಾಗೂ ಹುಬ್ಬು ತಿರುವಿರುವ ಕತ್ತಿನವರೆಗಿನ ಶಿಲ್ಪ ದೊರಕಿದೆ

ಪ್ರಾಚೀನ ಚೀನಿಯರಲ್ಲಿ ಕನ್ ಪ್ಯೂಷಿಯನ್ ಪ್ರಭಾವದಿಂದಾಗಿ ತಮ್ಮ ತಲೆ ಹಾಗೂ ಮುಖದ ಕೂದಲನ್ನು ತೆಗೆಯದೇ ಹಾಗೇ ಬಿಟ್ಟಿರುತ್ತಿದ್ದರು.

ಕ್ರಿ.ಶ 1542ರಲ್ಲಿ ಫ್ರೆಡರಿಕ್ ಹ್ಯಾಮರ್ ಎಂಬ ಶಿಲ್ಪಕಲಾವಿದ ತನ್ನದೇ ಶಿಲ್ಪವನ್ನು ಕೆತ್ತನೆ ಮಾಡಿದ್ದಾನೆ ಅದರಲ್ಲಿ ಅವನ ತುಂಬು ಮೀಸೆಯಿದೆ.

ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಗಡ್ಡ ಮೀಸೆ ಇರುವವರನ್ನು ಹೆಂಗಳೆಯರು ಇಷ್ಟಪಡುವುದಿಲ್ಲ.

ಕ್ರಿ.ಶ.1904ರ ಇಂಗ್ಲಂಡ್ ನ ಒಂದು ಚಮಚ ಹೇಗಿದೆಯೆಂದರೆ, ಮೀಸೆಗೆ ಧಕ್ಕೆಯಾಗದಂತೆ ಸೂಪ್ ಕುಡಿಯಲೆಂದೇ ನಿರ್ಮಿತವಾಗಿದೆ.

ಅಂದಹಾಗೆ 1954ರಲ್ಲಿ ಸಾಲ್ವಡೊರ್ ಡಾಲಿ ಎಂಬ ಸ್ಪೇನ್ ನ ಬರಹಗಾರ ತನ್ನ ಕೃತಿಯನ್ನು ತನ್ನದೇ ಮೀಸೆಗೆ ಅರ್ಪಿಸಿದ್ದಾನೆ.

ಇತ್ತೀಚೆಗೆ ಪಾಕ್ ನ ಯುದ್ಧವಿಮಾನವನ್ನು ಹೊಡೆದುರುಳಿಸಿ ಬಂದ ವೀರಯೋಧ ಅಭಿನಂದನ್ ಅವರ ಮೀಸೆ ಎಷ್ಟು ಪ್ರಸಿದ್ಧಿಯಾಯಿತೆಂದರೆ ಅದು ’ಅಭಿನಂದನ್ ಮೀಸೆ’ ಎಂದೇ ಖ್ಯಾತಿಗೊಂಡಿತು.

ಇನ್ನೂ ಒಂದು ವಿಶೇಷ ಗೊತ್ತೆ ನಿಮಗೆ ? 19ನೇ ಶತಮಾನದಲ್ಲಿ ಭಾರತೀಯರನ್ನು ಆಳುತ್ತಿದ್ದ ಬ್ರಿಟಿಶ್ ರಿಗೆ ಗಡ್ಡ ಮೀಸೆ ಇರಲಿಲ್ಲ. ಅವರು ಶೇವ್ ಮಾಡಿಕೊಳ್ಳುತ್ತಿದ್ದರು. ಆದರೆ ಭಾರತೀಯ ಪಡೆಯ ಸೈನಿಕರಿಗೆ ಮೀಸೆಗಳೇ ಪೌರುಷದ ಸಂಕೇತವಾಗಿದ್ದವು. ಬ್ರಿಟಿಶ್ ಅಧಿಕಾರಿಗಳಿಗೆ ಸೈನ್ಯದ ನಡುವೆ ಅಧಿಕಾರ ನಡೆಸುವುದು ಕಷ್ಟಕರವಾಯಿತು. ಯಾಕೆಂದರೆ ’ಮೀಸೆ ಇಲ್ಲದ ಇವನಾವ ಗಂಡಸು’ ಎಂಬುದು ನಮ್ಮ ಸೈನಿಕರ ಧೋರಣೆಯಾಗಿತ್ತು. ಇದನ್ನು ಮನಗಂಡ ಬ್ರಿಟಿಶ್ ಸೇನಾಧಿಕಾರಿಗಳು ಸಹ ಮೀಸೆ ಬಿಡಲು ಆರಂಭಿಸಿದರು. ಇದರಿಂದ ಮೀಸೆ ಬಿಡುವುದು ಸೇನಾಯಾದ್ಯಂತ ಬೇಗನೆ ಹರಡಿ ಸಾಮಾನ್ಯ ಬ್ರಿಟಿಶ್ ವ್ಯಕ್ತಿಯೂ ಮೀಸೆ ಬಿಡಲಾರಂಭಿಸಿದರು.

ಹೇಳುತ್ತ ಹೋದರೆ ದೊಡ್ಡ ಇತಿಹಾಸವೇ ಆಗುತ್ತೆ ಮೀಸೆ ಪುರಾಣ. ಏನೇ ಅನ್ನಿ ಮೀಸೆ ಮೀಸೆಯೇ. ಅದು ಪುರುಷರ ಪೌರುಷತ್ವ ಹಾಗೂ ಗಾಂಭೀರ್ಯದ ಸಂಕೇತ. ಅದೊಂದು ಚಂದದ ಲಕ್ಷಣ.

ಅಂದ ಹಾಗೆ ನಮ್ಮ ಮನೆಯಲ್ಲಿಯೂ ನನ್ನ ಮೀಸೆಯ ಮೇಲೇ ಕಣ್ಣು. ’ಅದೇನು ಮೀಸೆ ? ತೆಗೆಯಬಾರದೆ ? ಎಂದು ಮನೆಯಲ್ಲಿ ಪ್ರತಿ ಸಲ ಶೇವ್ ಮಾಡುವಾಗಲೂ ಜಗಳ. ’ಮೀಸೆಯ ಮೇಲ್ಯಾಕೆ ಸಿಟ್ಟು, ಮೀಸೆ ಇದ್ದರೂ ನಿನ್ನ ಮಾತು ಕೇಳ್ತಿಲ್ಲವೇ ?’ ಎಂಬ ವಾದ ನನ್ನದು. ಅದೇನೋ ನನ್ನ ಮೀಸೆ ಎಂದರೇ ನನಗೆ ಬಲು ಪ್ರೀತಿ.

ಅಂದಹಾಗೆ ಇಲ್ಲಿರುವ ಎಲ್ಲ ಮೀಸೆಯ ಚಿತ್ರಗಳನ್ನು ಒಮ್ಮೆ ನೋಡಿಕೊಂಡು ಬಂದುಬಿಡಿ. ಹಾಗೇ ಮುಖಪುಸ್ತಕದಲ್ಲಿರುವ ಮುಖಗಳ ಮೀಸೆಗಳನ್ನೂ ಒಮ್ಮೆ ಗಮನಿಸಿಬಿಡಿ. ಎಲ್ಲ ವೈವಿಧ್ಯ ಮೀಸೆಗಳ ಪರಿಚಯವಾಗುವುದು.

‍ಲೇಖಕರು Admin

November 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: