ಮೀಟರ್ ಕಾಫಿ ಈಗ ಮಾಯವಾಗಿದೆ…

ಸುಬ್ರಾಯ ಚೊಕ್ಕಾಡಿ

ಕಿರಣ್ ಭಟ್ ಅವರ ‘ರಂಗ ಕೈರಳಿ’ ಓದ್ತಾ ಇದ್ದೆ. ಕೇರಳದ ಪ್ರವಾಸದ ನೆಪದಲ್ಲಿ ಅಲ್ಲಿನ ರಂಗಚಟುವಟಿಕೆಗಳನ್ನು ಪುಟ್ಟ ಪುಟ್ಟ ಬರೆಹಗಳ ಮೂಲಕ ಲವಲವಿಕೆಯಿಂದ ನಿರೂಪಿಸಿದ ಸ್ವಾರಸ್ಯಕರ ಕೃತಿ ಇದು. ಅದರಲ್ಲಿ ಬರುವ ‘ಡೆಮಾಕ್ರಟಿಕ್ ಚಾಯ’ ಎನ್ನುವ ಬರೆಹ ಓದುತ್ತಿದ್ದಂತೆ ಹಿಂದೆ ನಮ್ಮ ಸುಳ್ಯದಲ್ಲಿ ನಡೆದ ಒಂದು ಘಟನೆ ನೆನಪಾಯಿತು.

ಜಾರ್ಜ್ ಫೆರ್ನಾಂಡಿಸ್ ಕೇಂದ್ರ ಸಚಿವರಾಗಿದ್ದ ಕಾಲ ಅದು. ಜಾರ್ಜ್ ಮಂಗಳೂರಿಂದ ಮಡಿಕೇರಿ ಕಡೆಗೆ ಕಾರಿನಲ್ಲಿ ಗೆಳೆಯರೊಂದಿಗೆ (ಸ್ಥಳೀಯ ಶಾಸಕರು ಇರಬೇಕು ನೆನಪಾಗ್ತಿಲ್ಲ) ಹೋಗುತ್ತಿದ್ದರು. ಸ್ವತಃ ಸರಳ ವ್ಯಕ್ತಿಯಾಗಿದ್ದ ಅವರ ಕಾರಿನ ಹಿಂದೆ ಮುಂದೆ, ಎಡ ಬಲಗಳಲ್ಲಿ – ಈಗಿನಂತೆ- ಕಾರು ಜೀಪುಗಳ, ಪೋಲೀಸರು, ಅಭಿಮಾನಿಗಳ, ಪಕ್ಷೀಯರ ದಂಡು ಇರದೆ ಒಂಟಿಯಾಗಿಯೇ ಹೋಗ್ತಿದ್ದರು.

ಕೆದರಿದ ಕೂದಲಿನ, ಜುಬ್ಬಾ ಪಾಯಿಜಾಮಾದ ಈ ಜಾರ್ಜ್ ಸುಳ್ಯದ ಜ್ಯೋತಿ ಆಸ್ಪತ್ರೆ ಸಮೀಪ ಬರ್ತಿದ್ದಂತೆ ಟೀ ಕುಡಿಯಬೇಕು ಅನ್ನಿಸಿ, ಕಾರು ನಿಲ್ಲಿಸಿ, ಅಲ್ಲೇ ಪಕ್ಕದಲ್ಲಿದ್ದ ಪುಟ್ಟ ಹೋಟೆಲೊಂದಕ್ಕೆ ನುಗ್ಗಿದರು. ಅದು ಕಿರಣ್ ಭಟ್ ರ ಬರೆಹದಲ್ಲಿ ಬರುವ ನಾಯರ್ ನ ತಟ್ಟಿ ಅಂಗಡಿಯಂತಹ ಸರಳ, ಏಕ ವ್ಯಕ್ತಿಯ ಹೋಟೆಲು. ಇಲ್ಲೂ ಹೋಟೆಲ್ ಯಜಮಾನ ನಾಯರ್ ನಂತೆ ಫ್ರೆಶ್ ಆಗಿ ಟೀ, ಕಾಫಿ ಮಾಡಿಕೊಡ್ತಿದ್ದ. ಇವನೂ ಆ ನಾಯರ್ ನಂತೆ ಕುದಿನೀರಿಗೆ ಕಾಫಿ ಪುಡಿ ಹಾಕಿ ಡಿಕಾಕ್ಶನ್ ತೆಗೆದು, ಅದಕ್ಕೆ ಸಕ್ಕರೆ ಹಾಗೂ ಹಾಲು ಬೆರೆಸ್ತಿದ್ದ. ಆಮೇಲೆ ಆ ನಾಯರ್ ನ ಹಾಗೆಯೇ ಇವನೂ, ಒಂದು ಪಾಟೆ (ಮಗ್)ಯಿಂದ ಇನ್ನೊಂದು ಪಾಟೆಗೆ ಎತ್ತರದಿಂದ ಒಂದರಿಂದ ಇನ್ನೊಂದಕ್ಕೆ ಕಾಫಿ ಸುರಿಯುತ್ತಾ ಹೊಡೆಯ ತೊಡಗಿದ. ಇದನ್ನು – ಇದೇನಿದು ಹೀಗೆ- ಅಂತ ಒಂದು ಒಂದೂವರೆ ಮೀಟರ್ ಎತ್ತರದಿಂದ ಕೆಳಗಿನ ಪಾಟೆಗೆ ಕರಾರುವಾಕ್ಕಾಗಿ ಬೀಳುತ್ತಿದ್ದ ಕಾಫಿಯನ್ನು ಬಿಟ್ಟ ಕಣ್ಣಿಂದ ಜಾರ್ಜ್ ನೋಡಿಯೇ ಬಾಕಿ!

ಆಮೇಲೆ ಆ ನೊರೆ ನೊರೆಯಾದ ಕಾಫಿಯನ್ನು ಸವಿದ ಜಾರ್ಜ್ ಅದರ ರುಚಿಗೆ ಮಾರು ಹೋಗಿ ಆ ಕಾಫಿ ತಯಾರಿಯ ವೈಭವವನ್ನು ನೋಡಲೆಂದೇ ಮತ್ತೊಂದು ಮಾಡಿಸಿ ಕುಡಿದರು. ಅದನ್ನು ‘ಮೀಟರ್ ಕಾಫಿ’ ಎಂದೇ ಕರೆದರು! ಅಷ್ಟರಲ್ಲಿ ಅವರು ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅಂತ ಸುತ್ತಮುತ್ತಲಿನ ಜನರಿಗೆ ಗೊತ್ತಾಗಿ ಕೆಲವು ಅವರು ಸುತ್ತ ಸೇರಿದರು.

ಹೋಟೆಲಿನವನೂ ಕೇಂದ್ರ ಸಚಿವರು ತನ್ನ ಪುಟ್ಟ ಹೋಟೆಲಿಗೆ ಬಂದು ಕಾಫಿ ಕುಡಿದ ಸಂಗತಿಯ ಸಮ್ಮುಖದಲ್ಲಿ ಬೆರಗು, ಸಂಕೋಚ ಸಂಭ್ರಮ ದಿಂದ ನಿಂತಿದ್ದಂತೆ ಜಾರ್ಜ್ ‘ಮೀಟರ್ ಕಾಫಿ’ ಬಗ್ಗೆ ಹೊಗಳಿ ಹಣ ಕೊಡಲು ಹೋದಾಗ ಆತ ನಮ್ರವಾಗಿ ನಿರಾಕರಿಸಿದ. ಆದರವರು ಒತ್ತಾಯಿಸಿ ಹಣಕೊಟ್ಟು ಅಲ್ಲಿಂದ ಹೊರಟರು.

ಹಿಂದೆ ಹಳ್ಳಿ ಹೋಟಲ್ ಗಳಲ್ಲಿ ಸಾಮಾನ್ಯವಾಗಿದ್ದ ಈ ಮೀಟರ್ ಕಾಫಿ ಈಗ ಮಾಯವಾಗಿದೆ. ಹಾಗೆಯೇ ಇಂದಿನ ಸಚಿವರಾದಿಯಾಗಿ ಎಲ್ಲಾ ರಾಜಕಾರಣಿಗಳಲ್ಲಿ ಜಾರ್ಜ್ ರೀತಿಯ ಸರಳ, ಸಾಮಾನ್ಯ ನಡವಳಿಕೆಯೂ ಜಾರ್ಜ್ ರೊಂದಿಗೇ ಮಾಯವಾಗಿದೆ. ಇಂದಿನವರಿಗೆ ಹಿಂದಿನ ಜಾರ್ಜ್ ರ ಆ ಸರಳ ಮಾದರಿಯನ್ನು ಕಲಿಸಿಕೊಡುವವರು ಯಾರು?

‍ಲೇಖಕರು Avadhi

July 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: