ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಸ್ಸಿಂಗ್ ರಿಪೋರ್ಟ್..

~ ಬಸಂತ್ ರಥ್
ಕನ್ನಡಾನುವಾದ: ಸಂವರ್ತ ‘ಸಾಹಿಲ್’

(ಅಘಾ ಶಾಹಿದ್ ಅಲಿಗಾಗಿ)

ಮೊದಲು ನಮ್ಮ ಮಗನಿಗಾಗಿ ಹುಡುಕಾಡಿದೆವು.
ಹದಿನೇಳು ವಸಂತಗಳನು ಕಂಡವನು.
ಐದೂವರೆ ಅಡಿ. ಗಡ್ಡ ಮೂಡಿರಲಿಲ್ಲ ಇನ್ನೂ.
ಬಲಗೈಯಲ್ಲಿ ಅರ್ಧ ಘಂಟೆ
ತಡವಾಗಿ ನೆಡೆಯುವ ವಾಚು.
ಬೆರಳಲ್ಲಿ ಗುಂಡು ಬೆಸೆದ ಉಂಗುರ.
ಕಾಮಾಚಿ ಸ್ಪೋರ್ಟ್ಸ್ ಶೂ. ಕಪ್ಪು ಬಿಳುಪು.

ಆಮೇಲೆ ನಾವು ದೇಹಕ್ಕಾಗಿ ಹುಡುಕಾಡಿದೆವು.
ಶ್ರೀನಗರ ಟೈಮ್ಸ್ ನ ಮುಖಪಟದಲ್ಲಿ
ರೇಡಿಯೋ ಕಾಶ್ಮೀರದ
ಸಂಜೆಯ ಪ್ರಕಟಣೆಗಳಲ್ಲಿ.
ಜೇಹಲಂ ನದಿ ದಡದಲ್ಲಿ
ರಾಷ್ಟ್ರೀಯ ಹೆದ್ದಾರಿಯಾಚೆ ಈಚೆ
ಇರುವ ನಿರ್ಜನ ಭೂಪ್ರದೇಶದಲ್ಲಿ
ಇರುಳಿನ ಹಿಮದಲ್ಲಿ ತೇಲಿಬಿಟ್ಟ
ಮುಂಜಾವಿನ ಹೊತ್ತು
ಚಹಾದಂಗಡಿಯಲ್ಲಿ ಸಿಗುವ
ಗಾಳಿಸುದ್ದಿಯಲ್ಲೂ.

ಆ ಬಳಿಕ ದೇಹದ ಭಾಗಗಳಿಗೆ
ಹುಡುಕಲಾರಂಭಿಸಿದೆವು.
ಮುರಿದ ಕೈ
ಇಲ್ಲಾ ಬೆರಳಿಲ್ಲದ ಕಾಲು
ಅಥವಾ ಮೂಗಿಲ್ಲದ ಮೊಗ
ಹೀಗೆ.

ಈಗ ಕಾಯುತ್ತಿದ್ದೇವೆ
ಡಿ.ಎನ್.ಎ. ಸ್ಯಾ೦ಪಲ್ಲಿಗಾಗಿ
ಕೂದಲ ಎಳೆ. ಮೂಳೆಯ ಚೂರು.
ಇಲ್ಲಾ ಕಲ್ಲ ಮೇಲೆ ಚಿಮ್ಮಿದ ರಕ್ತದ ಹನಿ.

ಅಘಾ, ನೀನು ನಿನ್ನಮ್ಮನ
ಶಾಹಿದ್. ಅರಬಿಯಲ್ಲಿ ಸಾಕ್ಷಿ.
ನಮ್ಮವನೂ ಆಗು ನೀ. ನಮ್ಮ ಸಾಕ್ಷಿಯಾಗು ನೀ
ಒಂದು ವೇಳೆ ಪೊಲೀಸರು ಕೇಳಿದರೆ
ಕಳೆದು ಹೋದ ಮಿಸ್ಸಿಂಗ್ ರಿಪೋರ್ಟನ್ನು.

‍ಲೇಖಕರು Admin

11 December, 2016

2 Comments

  1. ಹರಟೆ

    ತುಂಬಾ ಚೆನ್ನಾಗಿದೆ. ಗಾಢ ವಿಷಾದ ಆವರಿಸಿಕೊಳ್ಳುತ್ತದೆ…

  2. Sangeeta Kalmane

    ಕೇಳಲು ಆಶ್ಚರ್ಯ
    ನೋಡಲು ಅಪರೂಪ
    ಅನುಭವಿಸುವವರಿಗಷ್ಟೇ ಗೊತ್ತು
    ಅದರ ಕಷ್ಟ
    ಇದ್ದರೂ ಇಲ್ಲದಂತೆ
    ಬದುಕುವುದು ಅನಿವಾರ್ಯ
    ನಿರೀಕ್ಷೆಯ ಯಾತನೆ
    ಮನ ಸೋತು ಬೆಂಡಾಗಿ
    ಮೂಕ ರೋದನ
    ಸಿಗಲಾರದ ದುಃಖಕ್ಕೆ
    ಮುಖವಾಡ ಧರಿಸಿ
    ವಿಷಾದದ ನಿಟ್ಟುಸಿರು
    ಕಂಡವರ ಬಾಯಲ್ಲಿ
    ಅಂತೆ ಕಂತೆಗಳ ಸಂತೆ
    ನೋಡುವ ನೋಟಕ್ಕೂ
    ಇದ್ದವರು ಬಲಿ ಪಶು
    ವಂಶಕ್ಕೂ ಒಂದು
    ಅವರಿವರು ಕೊಟ್ಟ
    ಬೀಗ ಮುದ್ರೆ
    ಇದೆ ಮಿಸ್ಸಿಂಗ್
    ಆದವರ ಮನೆ
    ಹರಿಕಥೆ…!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading