ಪ್ರೀತಿಯ ಪ್ಯಾಲಸ್ತೀನ್ ಕುರಿತು

ಯಮುನಾ ಗಾಂವ್ಕರ್, ಕಾರವಾರ
ಈ ಕೂಸು ಪಿತೃ ಭೂಮಿಯದ್ದೋ ಮಾತೃಭೂಮಿಯದ್ದೋ
ಅಂತೂ ಕೂಗುತ್ತಿದೆ ವಿಶ್ವದುದ್ದಗಲ
ನಮ್ಮ ಮನೆ ನಮ್ಮ ಹಕ್ಕು
ಕೇವಲ ತುಂಡು ಭೂಮಿ, ಹಿಡಿಯಷ್ಟು ಜೀವಕ್ಕಾಗಿ
ದೇವದೇವನ ಪವಿತ್ರ ಭೂಮಿಯಿಂದ …
ಸಮರ ಉರಿಯಲ್ಲೇ ಅವರೂ ಕೂಗುತ್ತಿದ್ದಾರೆ…
ಝರುಸಲೇಂ-ಬೆತ್ಲೆಹೆಂನ ಕ್ರಿಸ್ತ-ಪೈಗಂಬರರಿಬ್ಬರೂ
ಪ್ಯಾಲಸ್ತೀನ್ …ಪ್ಯಾಲಸ್ತೀನ್ …. ಪಾರಿವಾಳಕ್ಕಾಗಿ….
ಯುದ್ಧಾರಂಭದಿಂದ ನಿದ್ದೆ ಮಾಡಿರಲಿಕ್ಕಿಲ್ಲ
ಅಂದಿನ ಮಗು ಇಂದಿನ ವೃದ್ಧಾಪ್ಯತನಕ
ಜೀವವಿದ್ದರೆ… ನೋಡಿದ್ದು.. ಕೇಳಿದ್ದು
ಎಲ್ಲವೂ ಶೃಂಗಸಭೆ, ವಿಶ್ವಸಂಸ್ಥೆಗಳೇ…
ಗುಣಪಡಿಸಲಾರದ ಗಾಯವೇನಲ್ಲ, ಆದರೂ..
ಹೇಳಿದ್ದು ಮಾತ್ರ ವಿಮೋಚನೆಯ ಕನಸೊಂದು ಕ್ರೂರ ಜಂತು !
ಸೂರ್ಯ ಮುಳುಗದ ನಾಡಿನ ಮಾನಸ ಪುತ್ರಿ
ಬೆಳೆಯುತ್ತಿದೆ ಆ ಅಮೇರಿಕೆಯ ಬಿಳಿಮನೆಯಲ್ಲಿ
ಜಿಯಾನ್ ಜ್ಯೂ ನಾಝಿ ಹಿಂದುತ್ವ
ಎಲ್ಲವೂ ಒಂದೇ ಅಸ್ತ್ರದಲ್ಲಿ
ಇಸ್ರೈಲ್ನಿಂದ ಶಾರೂನ್, ನ್ಯಾತಾನ್ಯಾಹೂ ತನಕ
ಅಂದು ಮರದಿಂದ ಬಿದ್ದ ಮಂಗನೀಗ ದಷ್ಟಪುಷ್ಟ
ಹೊಟ್ಟೆತುಂಬ ಬಾಂಬು, ಪಿಸ್ತೂಲು, ಮಿಸೈಲ್ ಉಗ್ರಾಣ
ಎಷ್ಟು ಛೀಮಾರಿ ಉಗಿದರೂ ತಾಗುವುದಿಲ್ಲ
ವೈಟ್ ಹೌಸ್ ಸ್ನೇಹದೊಳಗೆ ಎಲ್ಲವೂ ವೈಟ್ ವಾಶ್!
ಕೊಂದಿದ್ದಕ್ಕೆ ಲೆಕ್ಕವಿಲ್ಲ, ಸಂಚಿಗೇನೂ ಬರವಿಲ್ಲ
ಅಪಹರಣಕ್ಕೆ ವಿರಾಮವೇ ಇಲ್ಲ… ವಿಷ ವೈರಸ್ಗಳೋ ಸಹಸ್ರಾರು…
ಸಾಲು ದೀಪಗಳ ಎಣ್ಣೆ ತೀರುವ ಮುನ್ನ ಆರಿಸಿದ್ದು ಗಾಳಿಯಲ್ಲ
ಗೋಲನ್ ಬೆಟ್ಟದ ತುಂಬಾ ಗೊಬೆಲ್ಸ್ ತಂತ್ರದ್ದೆ ದಾರಿಯದು..
ನದಿಯ ದಂಡೆಗುಂಟ ಮರಳರಾಶಿ
ಅಗೆದಾಗೆಲ್ಲ,
ಸ್ವಾತಂತ್ರ್ಯ ಕನಸಿದವರ ರುಂಡಗಳದ್ದೇ ಗುಳಿಕಣ್ಣು ಬುರುಡೆ …
ಅಪರಾಧಿ ಇಸ್ರೈಲ್ ಒಪುತ್ತಿಲ್ಲ
ಆದರೂ ಪ್ಯಾಲಸ್ತೀನೀಯರು ಬದುಕು ಕಲಿಸುತ್ತಾರೆ
ರಕ್ತದ ಮಡುವಿನಲ್ಲಿ, ಕೋವಿಗುಂಡಿನ ಸದ್ದಿನಲ್ಲಿ
ಸರಳು ಬಲೆಗಳ ಮುಳ್ಳಿನಲ್ಲಿ, ಸಮರಾಸ್ತ್ರಗಳ ಮಳೆಯಲ್ಲಿ
ಹೆಣಗಳ ರಾಶಿಯಲ್ಲೂ ಎಲ್ಲೆಲ್ಲೂ ಬದುಕು ಕಲಿಸುತ್ತಾರೆ ಅವರು
ಗಡಿಗುರುತುಗಳ ತೊರೆದು
ಇಸ್ರೈಲ್ ಅಮೇರಿಕಾ ಸಮ್ಮಿಳನದಲ್ಲೂ ಹಾದು ಹೋಗುತ್ತಾರೆ
ಅರಾಫತ್ ಚೆಗೆವಾರ ಮಂಡೇಲಾ ಹೊಚಿಮ್ಹಿನ್ ಜೊತೆ
ಒಂದಾಗುತ್ತಾರೆ
ಇವರೆಂದೂ ಯುದ್ಧ ಘೋಷಿಸಿಲ್ಲ; ಪೋಷಿಸಿಲ್ಲ..
ಕೊಲೆಗಾರನ ಕೊಂದಿಲ್ಲ; ಆಕ್ರಮಣಿಗರ ದೂಡಿಲ್ಲ
ಸ್ವಾತಂತ್ರ್ಯ ಹುಗಿಯಲಿಲ್ಲ…
ಆದರೆ ಈಗ ಮಾತ್ರ ಸಾರಿದ್ದಾರೆ ಯುದ್ಧ, ದಶದಿಕ್ಕುಗಳಲ್ಲಿ ..
ಮಿಸೈಲ್ನ ತುದಿಯಲ್ಲಿ ಲೇಖನಿ ಸಿಕ್ಕಿಸಿದ್ದಾರೆ.. ..
ಸಿಡಿಮದ್ದಿಗೆ ಸೆಡ್ಡು ಹೊಡೆದ ಮಸಿಕುಡಿಕೆ ಆರದಿರಲಿ
ಕ್ಷೀಣ ಭೂ ವಿಸ್ತೀರ್ಣದಲ್ಲೂ ಪ್ಯಾಲಸ್ತೀನ್ ದೇ ಛಾಪು,
ಗೋಳದ ತುಂಬಾ
ಮನದಲ್ಲಿ .. ಬೌದ್ಧಿಕ ಯುದ್ಧ… ಸ್ವಾತಂತ್ರ್ಯ ಯುದ್ಧ
ಮರೆಮಾಚಿದ ಸತ್ಯ ಬಯಲಲ್ಲಿದೆ ಈಗ… ಇಲ್ಲಿಯೇ
ಎಲ್ಲವನ್ನೂ ಹುಗಿದು ಹಾಕಿದ್ದಾರೆ ಆ ಬಿಳಿಮನೆಯವರು …
ನಾವು ಮತ್ತೆ ಸಿಡಿಯೋಣ…
ಮಿಸೈಲ್ ತುದಿಯ ಒಂದೊಂದು ಲೇಖನಿ
ನನ್ನೊಳಗೊಂದು ಗೆರಿಲ್ಲಾ ಸೃಷ್ಟಿಸಲಿ…





This writer is seriously misinformed. She needs to study the history with open mind and without prejudices. Equating Nazism & Hindutva is stupid and dangerous precedent. Israel is the one being harassed and attacked perennially and in this poem it is all ulta!!!
ಚೆನ್ನಾಗಿದೆ ಯಮುನಾ. ಹೇಗಿದ್ದೀರ?