ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಕ್ಕೆಲ್ಲವೂ… ಮುಗಿವಾಗ!

ಗೀತಾ ಎನ್. ಸ್ವಾಮಿ

ಕ,ಕಾ,ಕಿ,ಕೃ ಕಾಗುಣಿತ
‘ಪದ’ವಾಗಿ,ವಾಕ್ಯವಾಗಿ
ಸೃಷ್ಟಿಸಿದ, ಅತಿವೃಷ್ಟಿಗಳೊಂದಿಗೆ
ಉಳಿದು ಅತ್ತಿದ್ದೇನೆ.

ಉಳಿದದ್ದೇನು ನನ್ನಲ್ಲಿಲ್ಲದ್ದು ಅವನೊಳಗೆ:
ಅವನಲ್ಲಿಲ್ಲದ್ದು ನನ್ನೊಳಗೆ;
ನಡು ಕೆಳಗೆ ಬೇಟೆ ಆಡಿದ್ದಷ್ಟೇ, ತೋಳನಂತೆ ತೇಗಿ
ಎಲ್ಲವೂ ಕುರಿ ಕಾಯುವವನ ಲೆಕ್ಕಾಚಾರ!

ಒಳಗೊಳಗೇ ಮಿಕ್ಕೆಲ್ಲವನೂ ಅದುಮಿ
ಮಿಡಿಯಾಗುವುದಕೆ ಮುನ್ನವೇ ಮಾವು
ರುಚಿ ರುಚಿಯಾದ ಉಪ್ಪಿನಕಾಯಿಯಾಗಿ
ತೆಂಗಿನ ಕಾಯಿಗೊಂದು ಜುಟ್ಟು ಕಿರೀಟವಾದಂತೆ!

ವಿಪರೀತಗಳೆಲ್ಲ ವಿಕೃತಿಗಳಾಗುವುದು ಹೀಗೆ!
ಹಾಗಲ ಪಲ್ಯದಲಿ ಸಿಹಿ ಹುಡುಕಿದಂತೆ,….
ಸಂತೆಗಳೆಲ್ಲ ಸಂಜೆಯಾಗುವುದರೊಳಗೆ
ಅಳಿದುಳಿದ ಸರಕ ಕಟ್ಟಿ ನಾಳಿನ ಜಾಡು ಹುಡುಕುವ ಹಾಗೆ!

ಅಪರೂಪಕ್ಕೊಮ್ಮೆ ಸಿಗುವ, ಸಿಗದ ವಾಸ್ತವಗಳು
ಹೀಗೆ ಒಮ್ಮೆ ಕಿರುನಗೆ ಬೀರಿ ನಡೆದು…
ಜಂಗುಳಿಯ ಮಧ್ಯೆ ಒಂದಿಷ್ಟು ಕಿರಿದಾಗಿ
ತಲೆ, ತಲೆಮಾರು ಕಾಣದಷ್ಟು ದೂರ ನಡೆದುಬಿಡುತ್ತವಾ????

ಆಗ ಹಚ್ಚಿದ ನನ್ನ ಮನೆಯ ಒಲೆ ಧೂಮ ಅದರ ದಟ್ಟ ಹೊಗೆ,
ಅರಳಿದ ಕಿರುನಗೆ ವ್ಯಂಗ್ಯದಂಚನೂ ದಾಟಿ
ವಾಸ್ತವದ ‘ ತಲೆ’ ಹುಡುಕುತ್ತಾ!
ಸುರುಳಿ ಸುತ್ತಿ ಸಾಯುತ್ತದೆ…

ಸಾಯಿಸಿದ ಸುರುಳಿಗಳ ಕಂಡಾಗಲೆಲ್ಲ ವಿಸ್ಮಯ
ಅತೀ ಸಣ್ಣವು ತುಸು ದೊಡ್ಡವಾಗಿ ಅವೆಲ್ಲಾ
ಅರಳಿ ಅಗಲಿ ಇಡೀ ವಿಸ್ತೀರ್ಣ ಆವರಿಸಿ
ಅಲುಗೊಂದು ಅಗಲಲು ಜಾಗವಿಲ್ಲದ ಹಾಗೆ ಸುಮ್ಮನಾಗುವ ಸ್ಥಿತಿ
ಮನಸ್ಸಿನಂತೆ ಅದರ ಚಂಚಲತೆಯಂತೆ……

ಪೂರ್ವದ ಗಾಳಿ ಪಶ್ಚಿಮದೆಡೆಗೆ
ಇಳಿಜಾರ ನೀರು ಸಮತಲಕೆ
ಸಣ್ಣ ಅಲೆ ದೊಡ್ಡ ನೆಲೆಗಳ ಕೆಡವಿ ಅದನು ಅಳಿಸಿ
ಉಳಿದ ಪುಟ್ಟ ಕುಳಿಯೊಳಗೆ’ ಚಿಕ್ಕ ಸಸಿ’ ಹೂ ಬಿಟ್ಟ ಹಾಗೆ
ಈ ಬದುಕು!!!!!!

 

‍ಲೇಖಕರು avadhi

27 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading