ಮಾಲತಿ ಗೋರೆಬೈಲ್
ಸಂಜೆ ಕೆಂಪಿನ ರಂಗು ಕಳೆದು
ಇರುಳು ಪಡಸಾಲೆ ಹೊಕ್ಕುವ ಹೊತ್ತು
ಚಿಮಣಿ ದೀಪಗಳ ಸಲುಗೆ
ಲಾಟೀನಿನ ಕುದುರೆ ಏರಿಸಿ
ಸೀಮೆಎಣ್ಣೆ ಸುರುವಿ,
ನಾಜೂಕಾಗಿ ಗಾಜು ಒರೆಸಿ
ರಕ್ತ ಒಸರದಂತೆ, ಬತ್ತಿ ಹಚ್ಚಿಟ್ಟು
ಭವವ ದೇನಿಸುವ ಲಾಂದ್ರ
ತೈಲ ಆರಿ ನೆಣೆಗರಿದು
ತುಸುವೇ ಗಾಳಿಗೆ ಕೊರಳೊಡ್ಡಿ
ಜೀವ ಮಿಡಿತಕ್ಕೆ ತುಡಿವ
ಬುಡ್ಡಿ ದೀಪ!

ದಿನ ತುದಿಗೊಮ್ಮೆ
ಲೆಕ್ಕದ ಜಾತ್ರೆ
ಮಿಣುಕು ಹಣತೆಯ ಸಂಗ..
ಕೋಣೆಗೊಂದರಂತೆ ಹಚ್ಚಿಟ್ಟ
ಇನಿಯನೊಲವಿಗೆ ಕಾದು
ಸಣ್ಣಗೆ, ತಣ್ಣಗೆ ಉರಿವ
ಗುಬ್ಬಿ ಲಾಟೀನು…
ಕಾರಿರುಳ ಸೀಳಿ ನಗೆ ಚೆಲ್ಲಿ
ಅರಿವ ಹರಡುವ ಕಂದೀಲು
ಈಗ ಅಟ್ಟ ಸೇರಿವೆ,
ಝಗಮಗಿಸುವ ದೀಪ
ಪಟ್ಟವೇರಿದೆ!
ಕಾಲ ಬದಲಾಗಿದೆ;
ಮನುಷ್ಯತ್ವದ ಬೆಳಕು?
ಬಡವಾಗಿದೆ……






0 Comments