ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲತಿ ಗೋರೆಬೈಲ್ ಕವಿತೆ – ಎಲ್ಲ ಎಲ್ಲವೂ ಜಲಸಮಾಧಿ…

ಮಾಲತಿ ಗೋರೆಬೈಲ್

ಮಳೆ ಮತ್ತು…..
ವಿಚಿತ್ರ ಥಂಡಿ ಹವೆಗೆ
ಅರಳಿಬಿಡುವ ನಾಲಿಗೆಯ ರಸಮೊಗ್ಗು
ನಿಗಿನಿಗಿ ಕೆಂಡದ ಮೇಲೆ ಬೆಂದ ಹಲಸಿನ ಬೀಜ,
ಕುರುಕಲು ಹಪ್ಪಳ
ಕೊತಕೊತ ಎಣ್ಣೆಯಲ್ಲಿ ಮುಳುಗೆದ್ದ ಬಜ್ಜಿ
ಏನೇನೋ ತಿನ್ನುವ ಹುಚ್ಚು!!

ಬೆಚ್ಚನೆ ಕಾವು ಕೊಟ್ಟು ಜೀವ ಕಾಪಿಡುವ
ಹೊದಿಕೆಗಳನ್ನೇ ಆವರಿಸಿಬಿಡುವ ಎಚ್ಚರದ ಕನಸು,
ದೂರ ತೀರದ ಇನಿಯನ ಹಂಬಲ
ಒಂದು ಬೊಗಸೆ ಪ್ರೀತಿಗಾಗಿ ಹಪಾಹಪಿ…
ನವಿರು ಭಾವ ಸ್ಪುರಿಸುವ ರಚ್ಚೆಮಳೆಗೆ
ಅದೆಂತಹುದೋ ಕಸುವು,
ಖುಷಿಯೆದ್ದು ಒಳಮನದ ನರ್ತನ….

ಮಾಧುರ್ಯ ಸವಿದು ನಿರುಮ್ಮಳನಾದ ಹೊತ್ತು
ಬಿರುಗಾಳಿಯ ಕೇಕೆ,
ನೀರಿನೊಡಲು ಸೇರಿದ ಜೀವರಾಶಿ
ಊಕ್ಕಿ ಸೂಕ್ಕಿ ಹರಿವ ಕಡಲು
ರೌದ್ರ ತಾಂಡವ….
ಜರ್ರನೆ ಇಳಿದು ಹೋದ ಹುರುಪು,
ಸೂರು-ಬೇರು,ಶೀತಭಾದೆ, ಬಾಯಿಚಪಲ
ಮೋಹ,ಪ್ರೇಮ
ಎಲ್ಲ ಎಲ್ಲವೂ ಜಲಸಮಾಧಿ….

‍ಲೇಖಕರು Admin

5 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading