ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾರ್ಚ್ 20ರ ಬೇಂದ್ರೆ

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು:

-ರಾಮಚಂದ್ರ ದೇವ

ದೇವಸಾಹಿತ್ಯ

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ನನ್ನ ಕತೆಯನು ಕೇಳಿ  ನಿನ್ನೆದೆಯು ಕರಗಿದರೆ
ಆ ಸವಿಯು ಹಣಿಸು ನನಗೆ.
(ನಾದಲೀಲೆ)

ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತಿರುಗೊಮ್ಮೆ ತೊಡವಾಗಿ ನಾ ಧರಿಸಲೇ?
(ಸಖೀಗೀತ)

ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ.
(ಉಯ್ಯಾಲೆ)

ಸಂಜೀಯ ಮುಗಿಲಾಗ ರೊಂಯ್ಬಿಲ್ಲ ಪಟವೊಂದು
ಗಾಳಿ ಸುಳಿಗೆ ಶ್ರುತಿ ಹಿಡಿದ್ಹಾಂಗ
ಗಗನಸಂಚಾರದ ನಾರದನ ವೀಣೆಯ
ಹಾಡೀನ ತೆರಿ ತೆರಿ ಬಡಿಧಾಂಗ

ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದು ನಿಂಧಾಂಗ
ನಾನೀನ ನುಡಿ ನುಂಗಿ ತಾನೀನ ತಾನೆ ತಾ
ತಾನಾಗಿ ತನನsನ ಬಂಧಾಂಗ
ರಂಗೊಂದು ದಂಗೊಂದು ಗುಂಗೊಂದು ಒಂದಕ್ಕೊಂದು
ಹತ್ತಾಗಿ ಜತ್ತಾಗಿ ಸುಳಿಧಾಂಗ
ದಣಿದ ಜೀವದ ಮ್ಯಾಲೆ ಜೇನಿನ ಸುರಿಮಳಿ
ಜೇಂಗುಟ್ಟಿ ಹನಿಹನಿ ಇಳಿಧಾಂಗ
(ಮಾಯಾಕಿನ್ನರಿ)

ಮಾತು ಜ್ಯೋತಿ, ಆ ಹರಳು_ಧೂಮ, ರಸ ಸಲಿಲ, ಭಾವ ಗಾಳಿ
ಕವಿಯೊಳಾಗಿ ಕಟ್ಟಿತ್ತು ಕಾವ್ಯ ನವ ಮೇಘ ರೂಪ ತಾಳಿ.
(ಮೇಘದೂತ–ಕವಿಯ ಮೇಘ)
*******
ತಾನು ಉಂಡ ಎದೆಯೊಲುಮೆ ತಾನು ಸೊಗವಟ್ಟು ಪಡೆದ ಹೆಣ್ಣು
ತಾನು ಕಂಡ ಋತುಮಾನ ತನ್ನ ಬಾಗಿಸಿದ ಚೆಲುವು ಕಣ್ಣು.
ಬಂದ ಬಂದ ನದಿ ಬೆಟ್ಟ ಪಟ್ಟಣದ ರಮ್ಯ ಛಾಯೆಯಿಂದ
ಮೋಡದೊಂದು ನೆಪ ಮಾಡಿ ಹಾಡಿದನು ಯಕ್ಷ-ಮಾಯೆಯಿಂದ.

ಇರಲಿ  ಬೆಟ್ಟ ನದಿ, ಇರಲಿ ಶಿವನ ಸತಿ, ಇರಲಿ ಕಾಡು ನಾಡು
ಇರಲಿ ಕಾಮ-ರತಿ, ಅಜನು-ಇಂದುಮತಿ, ಬರಲಿ ಸಾವು ಕೇಡು.
ಯಕ್ಷ-ಯಕ್ಷಿ ಇರಲಕ್ಷಿ-ಪಕ್ಷಿ ಕಣ್ಗಂಡ ಪಾತ್ರದಿಂದ
ಪ್ರೇಮದಾಟವನು ಕವಿಯು ಆಡಿಸಿದ ಕಾಮಸೂತ್ರದಿಂದ.

ಬೆಟ್ಟಕೊಲಿಯೆ ಮನ ಬೆಟ್ಟದಂತೆ ಬಗೆಗರುಹು ಎತ್ತರಹುದು
ಹೊಳೆಗೆ ಒಲಿಯೆ ಮನ ಹೊಳೆಯ ಹಾಗೆ ಬಗೆ ಭಾವ ಹೊಳಿಸುತಿಹುದು
ಬೆಟ್ಟ ಹೊಳೆಯ ಬಿಟ್ಟಿರದು ನಿನ್ನ ಬಗೆ ಎಂಥ ಭವ್ಯ ರುಚಿಯು
ಕಡಲಿನಂತೆ ಗಂಭೀರ ಗುಂಭ, ಸೌಂದರ್ಯದಂತೆ ಶುಚಿಯು.
(ಮೇಘದೂತ–ಕವಿ ಕಾಳಿದಾಸ)
*******

ಆ  ವಿರಹ ಅಲಸ ಗುರುಪದಗಳಿಂದ ಲೀಲಾsಲೋಲವಾಗಿ
ಆಕ್ರಾಂತವಾಗಿ ಉತ್ಕಂಠೆಯಿಂದ ಲಘುಪದಗಳಿಂದ ಸಾಗಿ
ಮುಗಿತಾಯದಲ್ಲಿ ಗುರುಲಘುಗಳಿಂದ ದಿಂಕಿಡುವ ಹಾಗೆ ನೂಂಕಿ
ಮಂದಾಕ್ರಾಂತದಲ್ಲಿ ವಿರಹಿ ಹೃದಯವನು ಸುಡುವದಣ್ಣ ಬೆಂಕಿ.

ಜಲದ ಭಾರದಲಿ ಜಲದ ಬಾನಿನಲಿ ಮಂದಮಂದವಾಗಿ
ಗಾಳಿಯಿಂದ ಆಕ್ರಾಂತವಾಗಿ ಗುಡುಗುಡುಗಿ ದೂಡಿ ನೂಗಿ
ನದಿಗಾಗಿ ನಡೆದು ಬೆಟ್ಟಕ್ಕೆ ತಡೆದು ನಗರಿಯಲಿ ಮೋದವಡೆದು
ಸಾಗುತಿಹುದು ಮಂದಾsಕ್ರಾಂತ ರಸ ವಿರಹಿ ಛಂದ ಹಿಡಿದು.
(ಮೇಘದೂತ–ಮಂದಾಕ್ರಾಂತ)
******

ಕವಿಯ ಕಮಲಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ
ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ.
ತೋಳುಗೀಳು ಸಡಲೀತು ಪ್ರಿಯರ ಸುಸ್ನಿಗ್ಧ ಬಂಧದಲ್ಲು
ಪ್ರಾಣ ತುಂಬುವಾ ಅಧರಪಾನ ಇಳಿದೀತೆ ಉದರದಲ್ಲು?
(ಮೇಘದೂತ–ಭಾಷಾಂತರವಲ್ಲ, ಭಾವಗ್ರಹಣ)
********

‍ಲೇಖಕರು G

17 March, 2011

1 Comment

  1. ಡಾ.ಬಿ.ಆರ್.ಸತ್ಯನಾರಾಯಣ

    ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ ಗೊತ್ತಾಯಿತು. ಸ್ವಲ್ಪ ದೂರದಲ್ಲಿದ್ದ ಚಿತ್ರ ಯಾವ ಕೋನದಿಂದ ನೋಡಿದರೂ ನಮ್ಮ ತಾತನದೇ ಚಿತ್ರದಂತೆ ಕಾಣುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ನಮ್ಮ ತಾತ ತಲೆಗೆ ರುಮಾಲು ಸುತ್ತುತ್ತಿದ್ದರು. ಚಿತ್ರದಲ್ಲಿದ್ದ ತಾತ ಟೋಪಿ ಹಾಕಿಕೊಂಡಿದ್ದರು. ಕೊನೆಗೆ ತಡೆಯಲಾರದೇ ಎದ್ದು ಹೋಗಿ ನೋಡಿದಾಗ ಅದರ ಮೇಲೆ ದ.ರಾ.ಬೇಂದ್ರೆ ಎಂದು ಬರೆದಿತ್ತು. ನಮ್ಮ ತಾತನಿಗೂ ಅದೇ ವಯಸ್ಸು, ಸುರುಳಿಗೂದಲು, ಮೀಸೆ ಮತ್ತು ಮುಗ್ದಮುಖವಿದ್ದುದರಿಂದ ಬೇಂದ್ರೆ ಚಿತ್ರ ನನಗೆ ನನ್ನ ತಾತನ ಚಿತ್ರದಂತೆಯೇ ಕಾಣುತ್ತಿತ್ತು. ಹೀಗೆ ಬೇಂದ್ರೆ ಚಿತ್ರ ಅಂದು ನನ್ನ ಮನಸ್ಸಿನಲ್ಲಿ ದಾಖಲಾಯಿತು.
    ಮೇಘದೂತ ಕಾವ್ಯ ನನಗಿಷ್ಟವಾದ ನಾಲ್ಕು ಪದ್ಯಗಳು
    ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
    ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
    ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ
    ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ

    ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು?
    ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು
    ಆ ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
    ಅವರ ಕಣ್ಣಕುಡಿಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು

    ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
    ಆಷಾಡ ಮಾವು ಸುರಿದಾವು ಗೊಂಚಲಲ್ಲಿ ಬೆಟ್ಟದೆದೆಯ ಮೇಲೆ
    ಅಮರ ಮಿಥುನಗಳ ಪ್ರಣಯ ದೃಷ್ಟಿ ಅರಳರಳುವಂತೆ ಆಗೆ
    ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ

    ಮರದ ನಡುವೆ ಬಿಳಿ ಹಾಸಗಲ್ಲು ಬಂಗಾರ ಕೋಲು ನಡುಕೆ
    ಎಳೆಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ
    ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
    ಕೈ ತಟ್ಟಿ ಮಾಟ ಬಳೆ ತಕಲಾಟ ಥಕಥೈಯ ಥಾಟಿನಲ್ಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading