ಮಾರಿಕೊಂಡವರ ಮತಬೇಟೆ!

ಮತಬೇಟೆ ಈ ಪದವನ್ನು ಬಳಸಿದ್ದಕ್ಕೆ ಕ್ಷಮೆ ಇರಲಿ,  ಮತ ಯಾನೆ ಓಟು ಪ್ರಜಾಪ್ರಭುತ್ವದ ಬಹು ದೊಡ್ಡ ಜನಾಸ್ತ್ರ.  ಈ ಮತವನ್ನು ಮತ್ತು ಮತದಾರರ ಘನತೆ ಈಗ ಮಸುಕಾಗಿ ಖರೀದಿಗೊಳ್ಳುವ ಮತ್ತು ಬಿಕರಿಯಾಗುವ ಪದಾರ್ಥಗಳ ಸಾಲಿಗೆ ಸೇರಲ್ಪಟ್ಟಿವೆ ಅಥವಾ ಸೇರಿಸಲ್ಪಟ್ಟಿವೆ ಎನ್ನಬಹುದು. ಮತವನ್ನು ಯಾಚಿಸುವ, ಬೇಡುವ, ಕೇಳಿಕೊಳ್ಳುವ  ಈ ಮೂಲಕ ಮತದಾರರನ್ನು ಘನತೆಯಿಂದ ಕಾಣುವ ಮತ್ತು ಆತನಿಗೆ ನಿಷ್ಠೆಯ ನಡೆ ವ್ಯಕ್ತಪಡಿಸುವ ರೂಪಗಳು ಈಗ ಬದಲಾಗಿ ಹೋಗಿವೆ. ಅಲ್ಲದೆ ಪ್ರಭು, ಒಡೆಯ, ಆತನೆ  ಅಸಲಿ ನಾಯಕ ಎಂಬಿತ್ಯಾದಿ ವಿಶೇಷಣಗಳಿಂದ ಕರೆಯಲ್ಪಡುತ್ತಿದ್ದ ಮತದಾರ ಈಗ ಬಿಕರಿಯ ಸರಕಾಗಿ ಮಾನಗೆಟ್ಟು ಹೋಗಿದ್ದಾನೆ.

ಮತ ಯಾಚನೆ ಈಗ ಮತ ಬೇಟೆಯಾಗಿಯೂ, ಮತದಾರ ಬೇಟೆಗಾರನಿಗೆ ತುತ್ತಾಗುವ ಮಿಕ, ಅಥವಾ ಯಾವುದೋ ಒಂದು ಜಂತುವಾಗಿಯೂ ಕಾಣಲ್ಪಡುತ್ತಿದ್ದಾನೆ. ಇಂತಹ ಪರಿಭಾಷೆಗಳನ್ನು ಹುಟ್ಟು ಹಾಕುವಲ್ಲಿ ಮತ್ತು ಅವುಗಳೇ ಅಸಲಿ ಅರ್ಥಪದಗಳು ಎಂಬಂತೆ ಮತ ಮತ್ತು ಮತದಾರನ ಘನತೆಯನ್ನು ಬೀದಿಗೆ ತಂದಿಡುವಲ್ಲಿ ಸುದ್ದಿಮಾಧ್ಯಮಗಳ (ಅದರಲ್ಲೂ ದೃಶ್ಯಮಾಧ್ಯಮಗಳ ಪಾತ್ರ ದೊಡ್ಡದು) ಶ್ರಮ ಹೇಳತೀರದು. ಒಂದು ಮತ ಒಂದು ಮೌಲ್ಯ ಎಂಬ ಪ್ರಬಲ ಗುಣಾತ್ಮಕ ಸಂವೇದನೆಯನ್ನೆ ಗಟಾರಕ್ಕೆ ತಳ್ಳಿದ ಪರಿಣಾಮವೇ ಓಟಿಗೆ ನೋಟು ಎಂಬ ಸ್ಲೋಗನ್ ಈಗ ರಾರಾಜಿಸುತ್ತಿದೆ.

ಇದಿಷ್ಟೆ ಆಗಿ ಹೋಯಿತೇ..? ಇಲ್ಲ, ಮತ ಪಡೆದು ಶಾಸಕರಾಗಿ ಆಯ್ಕೆಯಾದವರು ಮಿಕಗಳಂತೆಯೂ, ಮತದಾರನಂತೆಯೂ  ತಮ್ಮನ್ನು ತಾವು ಮಾರಿಕೊಳ್ಳುವುದು ಮತಮೌಲ್ಯವನ್ನು ಪ್ರಪಾತಕ್ಕೆ ತಳ್ಳಿ ಹಾಕಿದೆ. ಚಿಲ್ಲರೆ ವ್ಯಾಪಾರಿಯೊಬ್ಬ ಖರೀದಿಸಿದ ಮಾಲನ್ನು ಸಗಟು ವ್ಯಾಪಾರಿಗೆ ತನ್ನ ಸಹಿತ ಮಾರಿಕೊಳ್ಳುವ ದಂಧೆಯಂತೆ ಇವತ್ತಿನ ರಾಜಕೀಯ ಕಾಣುತ್ತಿದೆ. ಅಂತಿಮವಾಗಿ ರಾಜಕಾರಣವೂ ಉದ್ಯಮರೂಪಿಯಾಗಿ ಖರೀದಿ-ಮಾರಾಟ, ಕಾಡು ಸ್ವರೂಪವಾಗಿ ಬೇಟೆಗಾರ- ಬೇಟೆಯ ಕಲ್ಪನೆಗಳಿಂದ ನೈಜ ಪ್ರಜಾಪ್ರಭುತ್ವದ ಆಶಯಗಳು, ಅನುಷ್ಠಾನಗಳಾಗಿದ್ದ  ಜನತಾ ಜನಾರ್ಧನ, ಜನಸೇವಕ, ಜನರೇ ಮಾಲೀಕರು, ಜನರಿಂದ ಜನರಿಗೋಸ್ಕರ, ಜನರಿಗಾಗಿ ಎಲ್ಲವೂ ಈಗ ಸವಲಕಲುಗೊಂಡು ಸುಡುಗಾಡು ಸೇರಿವೆ.
ಈಗೇನಿದ್ದರು ಖರೀದಿಸುವವರು, ಮಾರಿಕೊಳ್ಳುವವರು ಮಾತ್ರ ಪ್ರಜಾಪ್ರಭುತ್ವದ ಜಾತ್ರೆಯಾದ ಚುನಾವಣೆಯಲ್ಲಿ ಕಾಣಸಿಗುತ್ತಾರೆ.

ಉಪ ಚುನಾವಣೆಗಳು ನಡೆಯುತ್ತಿರುವ ಕಾರಣ, ಅಕಾರಣಗಳು ಜನತೆಗೆ ಗೊತ್ತಿದೆ. ಚುನಾವಣೆಯ ಕಣದಲ್ಲಿರುವ  ೧೫ ಜನ ಅನರ್ಹರು ಮತ್ತು ಅವರಿಗೆ ಬೆಂಬಲಕ್ಕೆ ನಿಂತಿರುವ ಅಡಳಿತರೂಢ ಪಕ್ಷ ಜನರಿಗೆ ಯಾವ ಮ್ಯಾನಿಫೆಸ್ಟೋ ಮುಂದಿಟ್ಟಿದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಎಲ್ಲೂ ಕಾಣುತ್ತಿಲ್ಲ. ಕ್ಷೇತ್ರಗಳ ಅಭಿವೃದ್ದಿಯ ಮಾತುಗಳು ಆಡುತ್ತಿದ್ದರೂ ಅಂತಿಮವಾಗಿ ಅವರು ವೈಯುಕ್ತಿಕ ಲಾಭಕ್ಕಾಗಿಯೇ ಇದೆಲ್ಲಾ ನಡೆದಿದೆ ಎಂಬುದನ್ನು ಮತದಾರ ಅರಿತಿದ್ದಾನೆ ಎಂಬುದು ಅಲ್ಲಲ್ಲಿ ಕಂಡುಬರುತ್ತಿದೆ. ಹುಣಸೂರು, ಅಥಣಿ, ಗೋಕಾಕ್ ಸೇರಿದಂತೆ ಚುನಾವಣೆ ನೆಡಯುತ್ತಿರುವ ಕ್ಷೇತ್ರಗಳಲ್ಲಿ ಮತದಾರ ಅನರ್ಹರನ್ನು ಪ್ರಶ್ನಿಸುತ್ತಿರುವುದು, ಓಟು ನಿರಾಕರಿಸಿ ಗ್ರಾಮಗಳಿಂದ ಹೊರ ನೂಕುತ್ತಿರುವುದು ಜನತೆಯ ಜಾಗೃತಿ ಸ್ಥಿತಿಯನ್ನು ತೋರಿಸುತ್ತಿದೆ.

ಆಪರೇಶನ್ ಕಮಲಕ್ಕೆ ತುತ್ತಾಗಿ ಅನರ್ಹ ಹಣೆಪಟ್ಟಿಯೊಂದಿಗೆ ಮತ್ತೆ ಮತಯಾಚನೆಗೆ ಬಂದ ವಿಶ್ವನಾಥ್, ಅವರನ್ನು ಬೆಂಬಲಿಸಿ ಬಂದ ಶ್ರೀನಿವಾಸ್ ಪ್ರಸಾದ್, ಯೊಗೇಶ್ವರ್ ಅವರುಗಳನ್ನು ಹಿಗ್ಗಾಮುಗ್ಗಾ ತಾಡಿಸಿದ ದೃಶ್ಯಗಳನ್ನು ನೋಡಿದಾಗ ಈ ನಾಡಿಗೆ ಇನ್ನೂ ಭವಿಷ್ಯವಿದೆ ಎಂಬ ಆಶಾಭಾವನೆ ಮೂಡುತ್ತದೆ. ಇದೊಂದು ಉದಾಹರಣೆ ಅಷ್ಟೆ. ಇತರೆ ಕ್ಷೇತ್ರಗಳಲ್ಲು ಅನರ್ಹರು ಇಂತಹ ಜನವಿರೋಧವನ್ನು ಎದುರಿಸಲಾರದೆ ಪಲಾಯನ ಮಾಡಿದ್ದೂ ಇದೆ.

೧೫ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗಳನ್ನು ನಾನು ಅತ್ಯಂತ ಗಂಭೀರವಾಗಿ ನೋಡುತ್ತಿದ್ದೇನೆ. ಈ ಹಿಂದೆ ಶಾಸಕರಾಗಿ ಗೆದ್ದವರು ವರ್ಷದೊಪ್ಪತ್ತಿನೊಳಗೆ ಗೆದ್ದ ಪಕ್ಷ ಬಿಟ್ಟು  ರಾಜೀನಾಮೆ ಕೊಟ್ಟು ಮತ್ತೊಂದು ಪಕ್ಷಕ್ಕೆ ಸೇರಿ ಮತ್ತೆ  ಶಾಸಕರಾಗಿ ಆಯ್ಕೆಯಾಗುವ ಹೋರಾಟದಲ್ಲಿ ತೊಡಗಿದ್ದಾರೆ. ಇವರುಗಳ ಪಾವಿತ್ರ್ಯ ಪರೀಕ್ಷೆಯೂ ಈಗಾಗಲೆ ಸುಪ್ರೀಂಕೋರ್ಟು ನಲ್ಲಿ ನಡೆದು ಅವರೆಲ್ಲಾ ಅನರ್ಹರು ಎಂಬ ತಲೆ ಬರಹದೊಂದಿಗೆ ಚುನಾವಣಾ ಕಣದಲ್ಲಿ ಹಪಹಪಿಸುತ್ತಿದ್ದಾರೆ.

ಜಾರ್ಜ್ ಫರ್ನಾಂಡೀಸ್, ರಾಮವಿಲಾಸ್ ಪಾಸ್ವಾನ್, ಬಂಗಾರಪ್ಪನಂತಹ ಹಾರ್ಡ್‌ಕೋರ್ ಕೋಮುವಾದಿ ವಿರೋಧಿಗಳೇ ಕೋಮುವಾದಿ ಪಕ್ಷದ ಸಖ್ಯಸುಖ ಅನುಭವಿಸಿದಾಗಲೆ ಈ ದೇಶದಲ್ಲಿ ಸೈದ್ದಾಂತಿಕ ಹತ್ಯೆಯ ಸರಣಿ ಆರಂಭಗೊಂಡಿತು. ಅದು ಮುಂದುವೆರೆದು ಡಿ.ಬಿ ಚಂದ್ರೇಗೌಡ. ಶ್ರೀನಿವಾಸ್ ಪ್ರಸಾದ್, ಎಸ್.ಎಂ ಕೃಷ್ಣ .. ಈಗ ವಿಶ್ವನಾಥ್ ಅವರವರೆಗೂ ಬಂದು ನಿಂತಿದೆ. ರಮೇಶ್ ಜಾರಕೀಹೊಳಿಗೆ ಯಾವುದೇ ಸಿದ್ದಾಂತವಿಲ್ಲ. ಸ್ವಾರ್ಥ, ಲಾಭದ ಹೊರತಾಗಿ. ಉಳಿದ ಅನರ್ಹರ ಯೋಗ್ಯತೆಯೂ ಇದೆ ಆಗಿದೆ. ಅದರೆ ವಿಶ್ವನಾಥ್  ಜನರ ಮುಂದೆ ದೇವರಾಜ ಅರಸು ಅವರ ಹೆಸರನ್ನು ಪದೇ ಪದೇ ಒಡ್ಡುತ್ತಾ ಅರಸು ಅವರಿಗಿರುವ ಬಹುದೊಡ್ಡ ಮರ್ಯಾದೆಯನ್ನೆ ಮತವನ್ನಾಗಿಸಿಕೊಳ್ಳುವ (ಕು)ತಂತ್ರ ನಡೆಸುತ್ತಿದ್ದಾರೆ. ಅಷ್ಟಕ್ಕೂ ಅರಸು ಹೆಸರೇಳುವ ನೈತಿಕತೆಯಾಗಲಿ, ಯೋಗ್ಯತೆಯಾಗಲಿ ವಿಶ್ವನಾಥ್ ಅವರಿಗಿದೆಯಾ?  ಅರಸು ಅವರಿಂದ ಫಲಭರಿತರಾಗಿ ಕೊನೆಗೆ ಅವರಿಗೆ ಯಾರೆಲ್ಲಾ ಇರಿದು ಹೋದದ್ದು  ಮರೆಯಲಾದೀತೆ.?  ಸಿದ್ದರಾಮಯ್ಯ ಅವರನ್ನು ಜರಿದು ಮೂಲೆಗುಂಪಾಗಿದ್ದ ವಿಶ್ವನಾಥ್ ಗೆ ರಾಜಕೀಯ ಪುನರ್ ಜನ್ಮ ಕೊಟ್ಟ ದೇವೇಗೌಡರು,  ವಿಶ್ವನಾಥ್ ಅವರಿಂದ ಎಲ್ಲೆಂದರಲ್ಲಿ ಇರಿಸಿಕೊಂಡು ಗಾಯಗೊಂಡ ಅರಸುರಂತೆಯೇ ಕಾಣುತ್ತಿದ್ದಾರೆ. ವಿಶ್ವನಾಥ್ ಈಗ ಮಠದೊಳಗೆ ಇಲಿಯ ಬಿಲದ ಮುಂದೆ ಧ್ಯಾನಕ್ಕೆ ಕುಳಿದ ಮಾರ್ಜಾಲವಷ್ಟೆ.  ವಿಶ್ವನಾಥ್ ಅವರಂತೆ ಯಾರಲ್ಲೂ ಜನಕಲ್ಯಾಣದ ನಿಜ ಮಾತುಗಳು ಹೊರಬೀಳುತ್ತಿಲ್ಲ. ವೈಯುಕ್ತಿಕ ರಾಜಕೀಯ ಅಸ್ತಿತ್ವದ ಹೆಣಗಾಟ ಮಾತ್ರ ಉಪಚುನಾವಣೆಯ ಕಣದಲ್ಲಿ ಮೊರೆಯುತ್ತಿದೆ.

ಪಕ್ಷ ಬಿಟ್ಟು ಪಕ್ಷ ಸೇರುವುದರೊಳಗೆ ಅವರೆಲ್ಲರಿಗೂ ಬುದ್ಧನಿಗೆ ಜ್ಞಾನೋದಯವಾದಂತೆ ಸೈದ್ಧಾಂತಿಕ ಜ್ಞಾನೋದಯವೂ ಆಗಿ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸಿದ್ದಾಂತವೆಂಬುದು ಈಗ ತನ್ನ ಮೂಲ ಜೀವ ಧಾತುವನ್ನೆ ಕಳೆದುಕೊಂಡು ಹೊತ್ತುಕೊಂಡವರ ಹೆಗೆಲ ಮೇಲಿನ ಹೆಣವಾಗಿ ಮೆರವಣಿಗೆ ಹೊರಟಿದೆ. ಇಂತಹ ಹೊತ್ತಿನಲ್ಲಿ  ಜನರು  ತಮ್ಮ ಮತಗಳನ್ನು ಜಾಗೂರೂಕತೆಯಿಂದ ಕಾಯ್ದುಕೊಳ್ಳಬೇಕಾಗಿರುವುದು  ರಾಜಕೀಯ ಗುಣಲಕ್ಷಣದ ಗೌರವ ಮತ್ತು ಘನತೆ ಆಗಿದೆ.

ಉಪಚುನಾವಣೆಯಲ್ಲಿ  ಮತಬೇಟೆಗೆ ಕ್ಷಮಿಸಿ, ಮತಯಾಚನೆ ಮುಖವೊಡ್ಡುತ್ತಿರುವ ಅನರ್ಹರು ರಾಜಕೀಯ ಸಾಮ್ರಾಜ್ಯಶಾಹಿಗಳಿಗೆ ಮಾರಿಕೊಂಡ ಗುಲಾಮರಂತೆಯೂ,  ಇವೆರನ್ನೆಲ್ಲಾ ಖರೀದಿಸಿದ ಮಂದಿ ಯಾ ಪಕ್ಷ  ಸಾಮ್ರಾಜ್ಯಶಾಹಿ ಎಂದೂ ಕಾಣುತ್ತಿವೆ/ದ್ದಾರೆ.   ಮತದಾರ ಈ ಚುನಾವಣೆಯಲ್ಲಾದರೂ ಮಾರಿಕೊಂಡವರಿಗೆ ಮತ ಮಾರದೆ ಅಥವಾ ಬೇಟೆಗಾರರಿಗೆ ಈಡಾಗುವ ಬೇಟೆಯೂ ಆಗದೆ  ಪ್ರಜಾಪ್ರಭುತ್ವದ ಘನತೆಯ ಪ್ರಜೆಗಳಂತೆ ವರ್ತಿಸಬೇಕಾಗಿದೆ. ಅದು ನಮ್ಮ ಉಳಿವಿನ ದಾರಿಯಲ್ಲದೇ ಬೇರೆನೂ ಆಲ್ಲ.

ಕೊನೆ ಮಾತು:
ರಾಜಕೀಯವೆಂದರೆ ಅದು ಆ ದೇಶದ ಅಥವಾ ನಾಡಿನ ಸರ್ವೋತೋಮುಖ ನಿರ‍್ಮಾಣದ ಜನಸಮುದಾಯದ ರನ್ನಗನ್ನಡಿ. ಅದರಲ್ಲಿ ಒಡಕಲು ಬಿಂಬ ಬೀಳದಂತೆ ಕಾಯುವುದು ಜನರದ್ದೇ ಹೊಣೆಗಾರಿಕೆ, ಜನ ಕೆಟ್ಟ ನಾಡಿಗೆ ಭವಿಷ್ಯವಿಲ್ಲ.

‍ಲೇಖಕರು avadhi

December 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: