ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೃಹನ್ನಾಟಕದ ಕಥೆ..

ಸಂವಿಧಾನಿಕ ಮೌಲ್ಯಗಳ ಒಳಗೊಳ್ಳದ ರಾಜಕೀಯ ಪ್ರಜ್ಞೆ 
ಸತ್ತ ಸಮಾಜದ  ನಿರ್ಮಾತೃವಾಗಿರುತ್ತದೆ.
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೃಹನ್ನಾಟಕದ  ಕಥೆ ಮುಗಿಯದೆ ಪರದೆಗಳು ತೆರೆಯುತ್ತಲೆ ಇವೆ. ವಿಶ್ವಾಸ ಮತ ಕೋರಿಕೆಯ ಪ್ರಸ್ತಾವನೆಯ ಮೇಲಿನ ಚರ್ಚೆಯಲ್ಲಿ ಎಲ್ಲವೂ. ಎಲ್ಲರೂ  ತಮಗೆ ಅರಿವಿಲ್ಲದೆಯೋ. ಅರಿವಿದ್ದೋ ಬೆತ್ತಲಾಗುತ್ತಿದ್ದಾರೆ. ಎದುರಾಳಿಯನ್ನು ಹಣಿಯುವ ಭರಾಟೆಯಲ್ಲಿ ಅಥವಾ ತನ್ನ ಸಾಚಾತನವನ್ನು ಪ್ರದರ್ಶಿಸುವ ಉತ್ಸಾಹದಲ್ಲಿ ಕಳಚಿ ಹೋಗುತ್ತಿರುವ ಮೌಲ್ಯಗಳ, ನೈತಿಕಪ್ರಜ್ಞೆಯ  ಬಗೆಗೆ ಯಾರಿಗೂ  ಎಚ್ಚರವೇ ಇಲ್ಲದಿರುವುದು ದೊಡ್ಡ ದುರಂತ.
ಜೆಡಿಎಸ್ ನ ಶಾಸಕ ಶ್ರೀನಿವಾಸ್‌ಗೌಡ ಅವರು ಸದನದಲ್ಲಿ ಮಾತನಾಡುತ್ತಾ  ಬಿಜೆಪಿಯ ಶಾಸಕರಾದ ವಿಶ್ವನಾಥ್, ಆಶ್ವಥ್ ನಾರಾಯಣ, ಮಾಜಿ ಶಾಸಕ ಯೋಗೀಶ್ವರ್ ಜೊತೆ ತಮ್ಮ ಮನೆಗೆ ಬಂದು ಐದು ಕೋಟಿ ಹಣ ತಂದಿಟ್ಟು ಪಕ್ಷ ಬಿಟ್ಟು ಬರುವಂತೆ ಕರೆದಿದ್ದರು ಎಂದು ಗಂಭೀರ ಆರೋಪವನ್ನು ಮಾಡಿದರೆ, ಸಚಿವ ಸ್ಥಾನದಲ್ಲಿರುವ ಸಾ.ರಾ ಮಹೇಶ್  ಮಾತನಾಡುತ್ತಾ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್. ವಿಶ್ವನಾಥ್ ಅವರು ತಮಗೆ ಸಾಲವಿದೆ. ನನ್ನನ್ನು ಬಿಜೆಪಿಯವರು ಕರೆಯುತ್ತಿದ್ದಾರೆ. ಅಲ್ಲಿಗೆ ಹೋದರೆ ಅವರು ೨೮ ಕೋ.ರೂ. ಕೊಡಲಿದ್ದಾರೆ ಎಂದು ತಮ್ಮಲ್ಲಿ ಹೇಳಿಕೊಂಡಿದ್ದರು ಎಂಬುದನ್ನು ಸಭೆಯ ಮುಂದಿಡುತ್ತಾ ತಮ್ಮ ಹೇಳಿಕೆಗೆ ಸದನದಲ್ಲಿ ವಿಶ್ವಾಸಾರ್ಹತೆ ಮೂಡಿಸುವ ನಿಟ್ಟಿನಲ್ಲಿ ತಮ್ಮ ತಂದೆ-ತಾಯಿ, ಮಕ್ಕಳ ಮೇಲೂ ಆಣೆ-ಪ್ರಮಾಣವನ್ನು ಮಾಡಿದರು. ಶಾಸಕರುಗಳನ್ನು ಇಂದು ಮೂವತ್ತು- ನಲವತ್ತು ಕೋಟಿ ರೂಪಾಯಿಗಳಿಗೆ ಖರೀದಿ ಮಾಡಲಾಗುತ್ತಿದೆ  ಎಂಬ ಮಾತುಗಳು ಸದನದಲ್ಲೇ ಕೇಳಿ ಬಂದದ್ದು ಅವು ಗಾಳಿಗೆ ತೂರಿದ  ಮಾತುಗಳು ಎಂದು ಅನಿಸುವುದಿಲ್ಲ. ಏಕೆಂದರೆ ಇವತ್ತಿನ ಸನ್ನಿವೇಶ ಎಲ್ಲವನ್ನೂ ಹೇಳುತ್ತಿದೆ.
ಇದೇ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿರುವ ಬಸವಕಲ್ಯಾಣದ ಶಾಸಕ ನಾರಾಯಣರಾವ್  ಸದನದಲ್ಲಿ ಆಡಿದ ಮಾತುಗಳು ದಾಖಲಾರ್ಹವಾಗಿವೆ. ( ಕಡತಕ್ಕೆ ಸೇರಿಸಿದ್ದರೆ). ನಾನು ಸತ್ತರೆ ಹೂಳಲು  ಊರಿನಲ್ಲಿ ಒಂದು ಗುಂಟೆ ಜಾಗ ಕೂಡ ಇಲ್ಲ. ಪಾನ್ ಕಾರ್ಡು ಕೂಡ ಇಲ್ಲದ ನನಗೆ 30-40 ಕೋ.ರೂಗಳನ್ನು ಕೊಟ್ಟರೆ  ಏನು ಮಾಡೋದು, ಎಲ್ಲಿ ಇಡೋದು ?
ನಾನು ಊರಿಗೆ ಹೋದರೆ ಜನ ನನ್ನನ್ನು ಅನುಮಾನದಿಂದ ನೋಡುತ್ತಾರೆ. ನನಗೆ ಕ್ಷೇತ್ರದ ಅಭಿವೃದ್ದಿಗೆ ಹಣ ಕೊಡಿ, ಇದೇ ಮೊದಲ ಬಾರಿ ಗೆದ್ದಿದ್ದೇನೆ ಎಂದು ಕೇಳಿಕೊಳ್ಳುತ್ತಿದ್ದ ಸ್ಥಿತಿ ದಯನೀಯವಾಗಿತ್ತು. ಅತ್ಯಂತ ಪ್ರಾಮಾಣಿಕ ಮಾತುಗಳೂ ಎನಿಸುತ್ತಿದ್ದವು. ಇದು ಇವತ್ತಿನ ರಾಜಕೀಯ ಆಟಕ್ಕಿಡಿದ ಕನ್ನಡಿಯಂತಿತ್ತು.  ಕ್ಷೇತ್ರದ ಅಭಿವೃದ್ದಿ ನೆಪ ಮಾಡಿಕೊಂಡು ಕೋಟ್ಯಾಂತರ ರೂಪಾಯಿಗಳಿಗೆ  ತಮ್ಮನ್ನು ತಾವು ಮಾರಾಟ ಮಾಡಿಕೊಂಡು ತಲೆಮರೆಸಿಕೊಂಡಿರುವ ಶಾಸಕರು ತಮ್ಮ ಕ್ಷೇತ್ರದ ಜನತೆಗೆ ಎಂದಿಗೂ ಉತ್ತರದಾಯಿಗಳಾಗಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ ಕ್ಷೇತ್ರದ ಜನತೆ ಮಾತ್ರ ಅವರ  ರಾಜಕೀಯ ಉಡಾಳತನಕ್ಕೆ, ದುಡ್ಡು-ಅಧಿಕಾರದ ದುರಾಸೆಗೆ ಗೊತ್ತಿದ್ದು ಮರು ಮಾತಾಡದೆ ದುರ್ಬಳಕೆಯಾಗುತ್ತಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯ ಶಾಸ್ತ್ರವನ್ನು ಅಭ್ಯಸಿಸುವ  ವಿದ್ಯಾರ್ಥಿಗಳಿಗೆ  ಇದೀಗ ನಡೆಯುತ್ತಿರುವ ರಾಜಕೀಯ ತಂತ್ರ, ಒಡೆದು ಕಟ್ಟುವುದು, ಕಟ್ಟಿ ಕೆಡವುವುದು  ಸಿಲಬಸ್ ಗಳಲ್ಲಿ ಇರುವುದಿಲ್ಲ ನಿಜ, ಆದರೆ ಅದನ್ನು  ಕಲಿಸುವ ಕ್ಷೇತ್ರ ಪ್ರಾತ್ಯಕ್ಷಿಕೆಯಂತೆ  ನಮ್ಮ ರಾಜಕೀಯಪಕ್ಷಗಳು  ಕಾಣುತ್ತಿವೆ.  ಸಂವಿಧಾನಬದ್ದ ನಿಯಮಗಳನ್ನು  ಮತ್ತು ಅವುಗಳನ್ನು ವ್ಯಾಖ್ಯಾನಿಸುವ ನ್ಯಾಯ ಪೀಠಗಳಲ್ಲಿ ಮನಸ್ಸೋಇಚ್ಛೆ ತಿರುಗಿಸಿ, ಮರುಗಿಸಿ ಬಳಸಿಕೊಳ್ಳಬಹುದು ಎಂಬುದನ್ನು ಪ್ರಯೋಗಶೀಲವಾಗಿ ನಡೆಸುತ್ತಲೆ ಬಂದಿವೆ. ಯಶಸ್ಸು ಕೂಡ ಕಂಡಿವೆ.
ರಾಜಭವನಗಳು, ನ್ಯಾಯಪೀಠಗಳು ರಾಜಕೀಯ ಅಧಿಕಾರದ ಪ್ರಭಾವಗಳಿಂದ ದೂರ ಉಳಿಯದಷ್ಟು  ದುರ್ಬಲವಾದರೆ ಏನು ಮಾಡುವುದು?  ಇದರ ಪರಿಣಾಮ ಒಂದು ದೇಶದ ಯಾ ರಾಜ್ಯದ ರಾಜಕೀಯ ಪ್ರಜ್ಞೆಯ ನಂಬುಗೆಯನ್ನು ನುಚ್ಚು ನೂರು ಮಾಡುವ, ಹೊಸ ತಲೆಮಾರಿಗೆ ನೈಜ ರಾಜಕೀಯ ವ್ಯವಸ್ಥೆಯ ಬಗ್ಗೆ ಮಿಥ್ಯಗಳನ್ನು  ಬಿತ್ತುವ  ಪಾಠಶಾಲೆಗಳೆ ಆಗಿ ಹೋಗಿವೆ.
ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನದ ಉಳಿಸುವ, ಪ್ರಜಾಪ್ರಭುತ್ವದ ಉಳಿವು ಎಂದು ಘೀಳಿಡುತ್ತಲೆ  ಜನರಿಗೆ ನೈಜ ಸಂವಿಧಾನದ ರೀತಿ -ರಿವಾಜ್ಹುಗಳನ್ನು ಮರೆತು ಹೋಗುವಂತೆಯೂ , ಇಲ್ಲವೆ ಅರ್ಥವೇ ಆಗದಂತೆಯೂ  ಗೊಂದಲಕ್ಕೀಡುವ ಮಾಡುವ, ಅದೆಲ್ಲಕ್ಕಿಂತಲೂ ಸಂವಿಧಾನ ವಿರೋಧಿ ಮನೋಧರ್ಮ ಬಿತ್ತುವ ಕೆಲಸದಲ್ಲಿ  ನಿರತವಾಗಿರುವುದು ಆತಂಕಕಾರಿ ಬೆಳವಣಿಗೆ.
ಸಂವಿಧಾನ ಅದೆಷ್ಟೇ ಉತ್ಕೃಷ್ಟವಾಗಿದ್ದರೂ ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದು ಕೂಡ ಕೆಟ್ಟದಾಗಿ ಬಿಡುತ್ತದೆ   ಸ್ವತಃ ಸಂವಿಧಾನ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಈ ಮಾತುಗಳು ಸರ್ವಕಾಲಿಕ ಎಚ್ಚರಿಕೆಯನ್ನು  ಕೊಟ್ಟಿದೆ. ಇಂದು ಆಗುತ್ತಿರುವುದು ಇದೇ ಎಂಬುದನ್ನು ಬಾಯಿಬಿಟ್ಟು ಹೇಳಬೇಕಾಗಿಲ್ಲ.
ಇಲ್ಲಿ ಯಾರನ್ನೂ ದೂರುವುದು ಎಂಬ ಜಿಜ್ಞಾಸೆ ಕಾಡುತ್ತಿದೆ.  ಮತದಾರನೂ ಭ್ರಷ್ಟನಾಗಿರುವ ಸನ್ನಿವೇಶದಲ್ಲಿ.  ಜನರು ಸುಮ್ನೆ ಓಟಾಕಿಲ್ಲ. ದುಡ್ಡು ಚೆಲ್ಲಿ ಗೆದ್ದು ಬಂದಿದ್ದೇನೆ ಎಂಬ ಧಾರ್ಷ್ಟ್ಯದ ಮಾತನಾಡುವ ಶಾಸಕರುಗಳು ಈ ಧೈರ್ಯದ ಮೇಲೆಯೇ ಸಂವಿಧಾನದ ನಿಯಮಾವಳಿಗಳನ್ನು ಗಡಿಮೀರುತ್ತಿದ್ದಾರೆ.
ಲೋಕಸಭೆ, ವಿಧಾನಸಭೆಗಳಲ್ಲಿ ಉದ್ಯಮಿಗಳು, ರಿಯಲ್ ಎಸ್ಟೇಟ್ ದಂಧೆಕೋರರು, ವಂಶ ರಾಜಕಾರಣ , ಕ್ರಿಮಿನಲ್ ಹಿನ್ನೆಲೆಯುಳ್ಳವರು ಹೆಚ್ಚಾಗುತ್ತಿದ್ದಾರೆ. ನಮ್ಮ ಶಾಸನ ಸಭೆಗಳಲ್ಲಿ ಶೇ. 82 ರಷ್ಟು ಕೋಟ್ಯಾಧಿಪತಿಗಳು, ಶೇ. 28 ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳವರು, ಶೇ. 42  ರಷ್ಟು ವಂಶ ರಾಜಕಾರಣ ಹಿನ್ನೆಲೆಯುಳ್ಳವರು ಇದ್ದು ಬಸವ ಕಲ್ಯಾಣದ  ನಾರಾಯಣರಾವ್ ಅವರಂತ ಬಡಪಾಯಿ ಶಾಸಕರನ್ನು ಕಾಣಲು ಸಾಧ್ಯವೆ?
ಮುಂಬೈ ಸೇರಿಕೊಂಡಿರುವ 12 ಶಾಸಕರ ಘೋಷಿತ (ಅಘೋಷಿತ ಲೆಕ್ಕಕ್ಕಿಲ್ಲ)  ಆದಾಯ- ಆಸ್ತಿ ವಹಿವಾಟು ನೋಡಿದರೆ ಇವರು ನೈಜ ರಾಜಕಾರಣಿಗಳು ಎನ್ನುವುದಕ್ಕಿಂತ ವ್ಯವಹಾರಸ್ಥರು, ವ್ಯಾಪಾರಿಗಳು ಎಂಬ ತೀರ‍್ಮಾನಕ್ಕೆ ಬರದೆ ಇರಲಾಗದು. ಹಾಗಂತ ಮುಂಬೈನಲ್ಲಿರುವವರು ಮಾತ್ರ ರಾಜಕೀಯ  ದಂಧೆಯಲ್ಲಿ ತೊಡಗಿದ್ದಾರೆ  ಎಂದು ಭಾವಿಸುವಂತಿಲ್ಲ. ಸದನದ ಒಳಗೆ ಇದ್ದು ಸಂವಿಧಾನ, ಸಿದ್ದಾಂತ, ಜನಪರ ಹೊಣೆಗಾರಿಕೆಯ ಮಾತುಗಳನ್ನಾಡುವವರ ನಡುವೆಯೂ ಕೆಲವರಿದ್ದಾರೆ. ಇಂತಹವರಿಗೆ ಜನರ ಉತ್ತರದಾಯಿತ್ವ, ಶಾಸನ ನಿಯಮಗಳು ಅರಿವಾಗುವುದಾದರೂ ಹೇಗೆ?
ರಾಜಕಾರಣ ದುಡ್ಡು ಹಾಕಿ ದುಡ್ಡು ದುಡಿಯುವ ಒಂದು ಉದ್ಯಮವೂ, ವ್ಯವಹಾರವೂ ಆಗಿರುವಾಗ  ರಾಜಕೀಯ ಮೌಲ್ಯಗಳು, ಸಂವಿಧಾನದ ಆಶಯಗಳು ಲೊಳಲೊಟ್ಟೆಯಷ್ಟೇ. ಆಪರೇಶನ್ ಗೆ ಒಳಗಾದವರು  ಮತ್ತೆ ಜನರ ಮುಂದೆ ಬರುತ್ತಾರೆ. ದುಡ್ಡು ಚೆಲ್ಲುತ್ತಾರೆ. ಗೆದ್ದು ಬರಲೂಬಹುದು. ಮತ್ತದೆ  ಜನಸೇವೆ(?)ಯನ್ನು ಗೈಯ್ಯಬಹುದು.
ಒಮ್ಮೆ ವಿಧಾನಸಭೆಯ ಸದನದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ ಜತ್ತಿಯವರು  ಜೈಲು ಸುಧಾರಣೆ ಬಗ್ಗೆ ಮಾತನಾಡುತ್ತಿದ್ದರು. ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರು ಎದ್ದು ನಿಂತು ಸ್ವಾಮಿ, ತಾವು ಯಾವ ಜೈಲಿಗೆ ಹೋಗಿದ್ದೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಜತ್ತಿ ಅವರು ಅಷ್ಟೇ ಕರಾರುವಕ್ಕಾಗಿ ನಾನು ಜೈಲಿಗೆ ಹೋಗಿಲ್ಲ ಎಂದು ಕೂತುಬಿಟ್ಟರು. ಇದನ್ನು ಗಮನಿಸಿದ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕಾಳಿಂಗರಾಯರು  ಸಭೆ ಮುಗಿದ ಮೇಲೆ ಈ ಬಗ್ಗೆ ಪ್ರಶ್ನಿಸಿದಾಗ ಗೌಡರು ಹೇಳಿದರು: ಅಯ್ಯೋ! ಅವರು (ಜತ್ತಿ)  ಎಂದೂ ಜೈಲಿಗೆ ಹೋಗಿಲ್ಲ, ಅದು ನನಗೆ ಗೊತ್ತು. ಅವರೇನಾದರೂ ಹೋಗಿದ್ದೆ ಎಂದು ಹೇಳಿದ್ದರೆ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಎಂದರು.
ಇಂದಿನ ಸನ್ನಿವೇಶದಲ್ಲಿ ಸದನದಲ್ಲಿ ಯಾರನ್ನಾದರೂ ಜೈಲಿಗೆ ಹೋಗಿದ್ದೀರಾ?, ಕ್ರಿಮಿನಲ್ ಕೇಸುಗಳು ಇದ್ದಾವೆಯೇ? ಎಂದು ಶಾಂತವೇರಿ ಗೋಪಾಲಗೌಡರಂತೆ  ಕಣ್ಣಲ್ಲಿ ಕಣ್ಣಿಟ್ಟು ಕೇಳುವ ಮತ್ತು ಇಂತಹ ಪ್ರಶ್ನೆಗಳಿಗೆ  ಗಟ್ಟಿಯಾಗಿ ಇಲ್ಲ ಎಂದು ಬಿ.ಡಿ ಜತ್ತಿಯವರಂತೆ  ಹೇಳುವ ನೈತಿಕತೆ, ಧೈರ್ಯ ಇರುವ ಶಾಸಕರು ಅದೆಷ್ಟು ಮಂದಿ ಇದ್ದಾರೆ ನೋಡಿ.
ಸಂವಿಧಾನಿಕ ಮೌಲ್ಯಗಳ ಒಳಗೊಳ್ಳದ ರಾಜಕೀಯ ಪ್ರಜ್ಞೆ ಸತ್ತ ಸಮಾಜ ದ ನಿರ್ಮಾರ್ತೃವಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು ಎಂಬುದು ತುಟಿ ತುಪ್ಪವಷ್ಟೇ. ಪ್ರಭುತ್ವದ ಒಡೆಯರು  ಅಸಲಿಗೆ ಜನರೇ ಆಗಿದ್ದರೂ ಕುರುಡು ಕಾಂಚಾಣದ ಕುಣಿತದಲ್ಲಿ ಅವರೆಲ್ಲಾ ಸೇವಕರು,  ಬಿಕರಿಯ ಮತ್ತು ಖರೀದಿಯ ಮತಗಳೂ ಆಗಿದ್ದಾರೆ. ರಾಜಕೀಯ ಮೌಲ್ಯ, ಸಂವಿಧಾನದ ಆಶಯಗಳು ಮತ್ತು ಜನಪರ ಧೋರಣೆಯನ್ನು ಕಾಯಬೇಕಾದ , ಅವುಗಳಿಗೆ ಕಂಟಕ ಎದುರಾದಾಗ ಎಚ್ಚರ ಮೂಡಿಸುವ ಕೆಲಸ ಮಾಡಬೇಕಾದ ಮಾಧ್ಯಮಗಳು ಕೂಡ ಇಂದು ವಿಶ್ವಾಸಘಾತಕರ ತುತ್ತೂರಿಯಂತೆ ಊದುತ್ತಿರುವುದು ಎಲ್ಲದಕ್ಕಿಂತ ಹೆಚ್ಚು ಅಪಾಯಕಾರಿಯಾದ್ದದ್ದಾಗಿದೆ.
ಈ ಜನ ಸಾಕ್ರೆಟಿಸನಿಗೆ ವಿಷವಿಕ್ಕಿ ಕೊಂದಾಗಲೂ ಸುಮ್ಮನಿದ್ದರು, ಏಸುಕ್ರಿಸ್ತನನ್ನು ಶಿಲುಬೆಗೇರಿಸುವಾಗ ನಿಂತು ನೋಡಿದರು, ಗಾಂಧಿಯನ್ನು ಗುಂಡಿಟ್ಟು ಕೊಂದಾಗಲೂ ನೋಡಿ ಹೋದರು ಎಂಬ ಮಾತುಗಳು ಅದೆಷ್ಟು ನಿಜ.?! ಜನ ಈಗಲೂ ಸಂವಿಧಾನದ , ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಅದೇ ಸಂವೇದನಾರಹಿತ ಮೌನದಿಂದ ನೋಡುತ್ತಿದ್ದಾರೆ.  ಅಧಿಕಾರವೆಂಬ ನಾಯಿ ತೇಜದ ಹಿಂದೆ ಬಿದ್ದ ಸೋಕಾಲ್ಡ್  ಜನನಾಯಕರನ್ನು ಕಂಡಾಗ ಬಸವಣ್ಣ ನ ಮಾತುಗಳು ನೆನಪಾಗುತ್ತವೆ.
“ಹರಗಣಪಂಕ್ತಿಯ ನಡುವೆ ಕುಳ್ಳಿರ್ದು
ನಾನು ಒಡೆತನದ ನಾಯಿತೇಜವ ಹೊತ್ತುಕೊಂಡು
ಮಡದಿಯೆನ್ನೆಗಲೊಳಗೆ ಸಕಲದೇವಾನ್ನವ
ಒಡೆಯರಿಂದಲೂ ಮಿಗಿಲಾಗಿ ಇಕ್ಕಲು, ತೆಗೆದಿರಿಸಿದೆನು.
ಈ ಪರಿಯ  ಆಯ ಕಣ್ಗೆ ತೋರಲು ಕಿಲ್ಬಿಷವಾದವು.
ಕರುಣಿ ಚೆನ್ನಬಸವಣ್ಣಾ, ಮರೆದುಕೊಂಡೆನಾದಡೆ
ಒಡೆಯ ಕೂಡಲ ಸಂಗಯ್ಯಾ ಕೆಡಹಿ ನರಕದಲ್ಲಿಕ್ಕುವ.”
ಮಾತು ಮುಗಿಸುವ ಮುಂಚೆ: ರಾಜಕೀಯಮೌಲ್ಯ ಎಂದೋ ಸತ್ತು  ನೆನಪಾಗಿ ಮಾತ್ರ ಉಳಿದಿರುವಾಗ ನೀಚ ರಾಜಕಾರಣವೇ ಮೌಲ್ಯವಾಗಿ  ಹೊಳೆಯುತ್ತಿದೆ. ಜನರ ಉತ್ತರದಾಯಿತ್ವವನ್ನೂ ಕಸದಂತೆ ಕಂಡು ಎಡಗಾಲಲ್ಲಿ ಒದ್ದು ಹೋಗುವವರು ನಾಯಕರಾಗಿ  ಮೆರೆಯತೊಡಗಿದ್ದಾರೆ.

‍ಲೇಖಕರು avadhi

July 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: