ಮಾರಾಕಿ ಮೊದ್ಲು ಇದನ್ನ.. ಪೋಲಿ ಮೇಯಕೆ ಹೋಯ್ತಿತೆ..

ಕುರುಬೋಳಿ   h r sujatha2ಹೆಚ್ ಆರ್ ಸುಜಾತಾ

ಕೊಟ್ಟಿಗೆಯಲ್ಲಿ ಆವತ್ತು ಆಕ್ರಂದನವೋ ಆಕ್ರಂದನ.

ಬೆಳಬೆಳಗ್ಗೆಲೆ ಇನ್ನೂ ಕೋಳಿ ಕೂಗೋ ಹೊತ್ತಿಗ್ ಮುಂಚೇಲೆ ಹೊಂಟು, ಕುರಬೋಳಿ ಹಸವ ಹೊಡ್ಕಬಂದ್ಬುಡು ಮಂಗ್ಳಾರ ಸಂತೀಗೆ ಅಂತ, ಅಪ್ಪ  ಆಳುಮಗ ಮೆಳ್ಳೆಗೆ ರಾತ್ರಿಲೆ ಹೇಳಿ ಹೋಗಿತ್ತು. ಮೆಳ್ಳೆ ಬೆಳಿಗ್ಗೆ ಬೆಳಿಗ್ಗೆನೆ ಕುರುಬೋಳಿಯ ನೆಲಕ್ಕೆ ಕೆಡಿಕಂದು ಮೂಗದಾರ ಹಾಕಿದ್ದೆ ತಡ ಹಸು ಗೋಗರ್ಯಾಕೆ ಸುರುವಾತು.

ಯಾವಾಗ್ಲೂ ಮೂಗದಾರನೇ ಕಾಣ್ದಿರೊ ಕುರುಬೋಳಿ ಇಂದು ದಾರದ ಒಡವೆ ಧರಿಸಿಕೊಂಡ ಏಟ್ಗೆ, ಅದಕ್ಕೆ ಈ ಮನುಶ ಮಾಡೋ ಹುನ್ನಾರದ ವಾಸನೆ ತಿಳದೋಯ್ತು. ಅಂಬಾ, ಅಂಬಾ… ಅಂತ ಕೊಟ್ಟಿಗೆ ಕಿತ್ತೋಗ ಹಂಗೆ ಕಿರಚಕೊಳ್ಳೋಕೆ ಅನುವಾಯ್ತು. ಅದ ಕಂಡಿದ್ದೆ ಆಪತ್ತಿನ ಸುಳಿವಾಡದಂಗೆ ಎಲ್ಲಾ ರಾಸುಗಳು ಊರೋರ ಕಿವಿ ಕಿತ್ತೋಗ ಹಂಗೆ ಅಂಬಾ… ಅನ್ನ ರಾಗನ ವಿಧವಿಧವಾಗಿ ಹಾಡಿದ್ದೆ, ಊರ ಸುತ್ತಲೂ ಶಂಖದ ನಾದ ಅಲೆಅಲೆಯಾಗಿ ತೇಲದಂಗೆ ಆಯ್ತು.

ಇದೆಲ್ಲನೂ ನೋಡ್ತಾ ನಿಂತ ನನ್ನ ಅವ್ವ ಮುಖ ಇಳೆ ಬಿಟ್ಕಂಡಿತ್ತು. ಹೋಗಿ ಮಕ್ಳ ಪೂಸಿ ಹೊಡ್ಯೊ ಹಂಗೆ ಆ ಹಸಿನ ಬಾಯಿಗೆ ಕಲಗಚ್ಚು ತಂದಿಟ್ಟು, ಹಸ್ರುಲ್ಲ ಬಾಯಿಗೆ ಗಿಡಿತು. ಕುರುಬೋಳಿ ಕಲಗಚ್ಚ ಕುಡ್ಕಂದ್ರೂವೆ ಕತ್ತಿಗೆ ಹೊಸ ಹಗ್ಗ ಹಾಕೋವಾಗ ಮೊಂಡಾಟ ಮಾಡ್ತಿತ್ತು.

Nammuru-1ಬಗ್ಗದಿರ ದನಗಳನ್ನ ಬಗ್ಸೋಕೆ ಅಂತಲೆ ಮೂಗದಾರ ಹಾಕ್ತಾರೆ. ಮೂಗದಾರ ಹಿಡ್ಕಂದು ಕೊಟ್ಟಿಗೆ ಬಾಗ್ಲ ದಾಟಿ ಊರಬಾಗ್ಲವರಗೂ ಮೆಳ್ಳೆ ಹೋಗದನ್ನ ನೋಡ್ತಲೆ ಅವ್ವ ಬಾಗ್ಲಲ್ಲಿ ನಿಂತು ಸೆರಗಿನ ತುದೀಲಿ ಕಣ್ಣೊರ್ಸ್ಕಂತು. ಮೂಗದಾರದ ಇರ್ಸು ಮುರಸಿಗೋ ಏನೋ ಹಸ ಅನ್ನೋದು ಸಲ್ಪ ಹೊತ್ತು ಸ್ವರ ಬಿಟ್ಟಿದ್ದು, ಮತ್ತೆ ಅಂಬಾ… ಅನ್ನ ಸ್ವರ ದೂರದಲ್ಲಿ ಹರಿತಾ ಹರಿತಾ ದೂರಾಯ್ತು.

ಇಲ್ಲಿ ಅದರ ಬಂಧುಗಳು ಅದಕ್ಕುತ್ತರ ಕೊಡ್ತಾ ಕೊಡ್ತಾ ಕೊಟ್ಟಿಗೆನೆ  ರಾಗದಲ್ಲಿ ಇಟ್ಟಾಡುಸ್ತಿದ್ವು. ರಾತ್ರಿ ಹರಿತು ಅನ್ನೋ ಸೂಚನೆ ಸಿಕ್ಕಿದ್ದೆ ತಡ ಕಣ್ಣ ಮಿಟಿಮಿಟಿ ಅನ್ನುಸ್ತಿದ್ದ ಚುಕ್ಕಿ ಅರುಗಾಗಿ ಮೂಡ್ಲಾಗ ಬೆಳ್ಳಿಚುಕ್ಕಿ ಹಚ್ಚಗೆ ಕಣ್ಣ ಬಿಟ್ಟಿತ್ತು. ಚಂದ್ರ ಸೂರ್ಯನ ವಿರುದ್ದ ದಿಕ್ಕಲ್ಲಿ ಮುಳುಗೊ ಹುನ್ನಾರದಲ್ಲಿದ್ದ.

“ಇನ್ನ ರೊಟ್ಟಿ ತಿನ್ನ ಹೊತ್ತಿಗೆ ಮೆಳ್ಳೆ ಹಾಸನದ ಸಂತೆ ತಲುಪ್ತಾನೆ” ಅಂತ ಅವ್ವ ನಿಟ್ಟುಸ್ರು ಬಿಟ್ಟು ಕೊಟ್ಟಿಗೆ ಅಗಳಿ ಹಾಕಿ  ಒಳಗೆ ಬಂದು ಕತ್ತಲಲ್ಲಿ ಸೂರು ನೋಡ್ತಾ ಮನಿಕ್ಕಂತು. ಇನ್ನೂ ನಿದ್ದೆ ಮಾಡ್ತಿದ್ದ ಕೋಳಿ ಹುಂಜ ತಡಾಯ್ತು ಅಂತ ದಡಕ್ಕನೆ ಎದ್ದಿದ್ದೆ,  ಕಾಲು ಕತ್ತ ಕಹಳೆ ಥರದಲ್ಲಿ ಮೇಲೆತ್ತಿ ಜೋರಾಗಿ ಒಂದನೆ ಜಾವದ ಕೂಗ ಹಾಕ್ತು.  ಸೊಂಟ ಸುತ್ತಿದ್ದ ನನ್ನ ಕೈ ಬುಡುಸ್ಕಂಡು ಎದ್ದಿದ್ದೆ ಅವ್ವ ತಲೆಕೂದ್ಲ ಪಟಪಟನೆ ಬಡದು ಎತ್ತಿ ಗಂಟ ಹಾಕಂಡು ರೂಮು ನಡುಮನೆ ದಾಟಿ ತನ್ನ ಕೆಲ್ಸಕ್ಕೆ ಹೋಯ್ತು.

ಅವ್ವ ಕೆಲ್ಸ ಮಾಡೋ ಸದ್ದಿನ ಜೊತೆಗೆ ಕುರುಬೋಳಿ ಹಸುವಿನ ನಾನಾ ಬಣ್ಣ ಅನ್ನವು ಮೇಲೆದ್ದು ಬಂದ್ವು. ಕುರುಬೋಳಿ, ಬೋಳಿ ಹಸಿನ ಮಗಳು. ಅದರವ್ವಂಗೆ ಕೋಡೆ ಇರಲಿಲ್ಲ. ಅದಕ್ಕೆ ಅದು ಬೋಳಿ ಹಸ. ಇದಕ್ಕೆ ಕೋಡಿರೊ ಜಾಗದಲ್ಲಿ ದಟ್ಟ ಕೂದಲ ಮೆಳೆ ಇತ್ತು. ಅದರೊಳಗೆ ಕುರುಹಿನ ಹಾಗೆ ಇದ್ದೂ ಇಲ್ಲದಂಗೆ ಸಣ್ಣಮೊಳೆ ಹಂಗೆ ಕೋಡಿದ್ವು. ಅದಕ್ಕಾಗೆ ಇದಕ್ಕೆ ಕುರುಬೋಳಿ ಅಂತಾ ಹೆಸರಿಟ್ಟಿದ್ರು. ಕಪ್ಪನೆ ಬಣ್ಣದಲ್ಲಿ ಸಲುಪ ಕೆಂಚ ಬಣ್ಣ ಮಿರುಗೊ ಬಣ್ಣ ಅದರದ್ದು. ಇರೊ ನೂರು ದನದಲ್ಲೇ ಇದು ತೊಂಡು ಮೇಯೊ ಹಸು. ಅದಕ್ಕೆ ಇದು ಹೆಸರುವಾಸಿ. ದನಕಾಯೋರು ಯಾವಾಗಲೂ ಇದರ ಮೇಲೆ ಒಂದು ಕಣ್ಣು ಇಟ್ಟಿರೋರು.

ಎಂಥಾ ಕಣ್ಣನ್ನಾದ್ರು ತಪ್ಸಿ ಚಣಕ್ಕನೆ ಕಂಡೋರ ಹೊಲಗದ್ದೆಗೆ ಹಾರಿಬಿಡೋದು. ಜತಿಗೆ ಬೇರೆ ದನಗಳ್ನು ಕರಕಂದು ಹೊರಟ್ಬಿಡೋದು. ಆವತ್ತು… ಆ ಹೊಲಗದ್ದೆಯೋರ ಬಾಯಲ್ಲಿ ಕಿವಿಲಿ ಕೇಳ್ಬಾರದ ಮಾತೆಲ್ಲ ಕೇಳ್ದಾಗ “ಥೂ, ಇದನ್ನ ಈ ವಾರದ ಮಂಗಳವಾರದ ಸಂತೀಗೆ ಅಟ್ಟಿ ಸುಟ್ಬುಡ್ಬೇಕು” ಅನ್ನೋರು. ಅದನ್ನ ಬಗ್ಸಕೆ ಒಂದೊಂದ್ ಮಾಡ್ನಿಲ್ಲಾ… ಕತ್ತಿಗೆ ಕೊರಡು ಕಟ್ಟಿ ನೋಡುದ್ರು.

ಮುಂದಿನ ಎರಡು ಕಾಲಿಗೆ ತೊಡಕಿನ ಹಗ್ಗ ಹಾಕುದ್ರು. ಕೊರಳ ಹಗ್ಗಕ್ಕೂವೆ ಬಲದೆ ಕಾಲಿಗೂವೆ ಕಣಿ ಹಾಕಿದ್ರು. ಈ ಪರಮ ಶಿಕ್ಷೆಗೆ ಅದು ಕ್ಯಾರೆ ಅನ್ದೇಯ ತನ್ಗೆ ಏನ್ ಬೇಕೊ ಅದನ್ನೇ ಮಾಡೋದು. ದನ ಕಾಯೊರಿಂದ ಮನೇವ್ರತನಕ ದೂರು ತಂದಿಡೊದು. ನೋಡಾನ ಕರ ಹಾಕುದ್ ಮೇಲಾದ್ರು ಬಗ್ಗುತ್ತೇನೋ ಅಂದ್ರೆ, ಮಧ್ಯಾನದೊತ್ತಿಗೆ ಬಂದು ಹಿತ್ಲಲ್ಲಿರೊ ತನ್ನ ಕರ ಕುಡುಸ್ಕಳದು. ಆಮೇಲೆ ಹೊಟ್ಟೆ ಹಸಿಯದೇನೋ? ಬೇಲಿ ಹಾರಿದ್ದೆ ಹತ್ರದಲ್ಲಿರೊ ಹೊಲ ಮೇಯ್ತಿರೋದು.

cow5ಇದೆಲ್ಲ ಪಶು ಸಹಜ ಗುಣವೆ ಆದ್ರೂ ಮನುಷ್ಯರ ಲೋಕದಲ್ಲಿ ಇದರ ನಡವಳಿಕೆ  ಜಗಳ ತಂದು ಹಾಕ್ತಿತ್ತು. ದನಿನೋರಂತು  ಅದರ ಅವ್ವ ಅಪ್ಪಂದಿರನೆಲ್ಲ ಉದ್ಧರಿಸಿ ಪೋಲಿ ಮಾತಿನ ಕುಲಕೋಟಿ ನಾಮಗಳಲ್ಲಿ ಅದನ್ನ ಬಯ್ತಾ ಅದರ ಜನ್ಮ ಜಾಲಿಸೋರು.

“ಮಾರಾಕಿ ಮೊದ್ಲು ಇದನ್ನ. ಮೇವಿಗೆ ದಂಡ. ಇದರ ದೆಯ್ಯ ಹೊಡ್ಯ. ಹಾಳು ಹೊಟ್ಟೆ ಇದರದ್ದು. ತಾನು ಕೆಡದಲ್ದೆ ಕಪಿ ವನ ಎಲ್ಲಾ ಕೆಡಸ್ತಂತೆ. ಅಂಗೆ ಇರೊ ಬರೊವ್ನೆಲ್ಲ ಕಟ್ಕಂದು ಪೋಲಿ ಮೇಯಕೆ ಹೋಯ್ತಿತೆ. ಇದ್ರ ಹೊಟ್ಟೆ ಸಿಗಿಯಾ. ಇದ ತಡ್ದು, ತಡ್ದು ನಮ್ಮ ಕಾಲು ಅನ್ನವು ಬಿದ್ದೋಗವೆ.” ಅಂತ ದಿನ ದೂರು ಹೇಳೋರು. ಅಂಗಂತಲೇ ಮನೆಗೆ ಒಂದು ಉಳೋ ಎತ್ತಿಗೆ ಜೋಡಿ ಹಾಕಬೇಕು. ಇದ ಮಾರಿ ಅದ ತರಣ ಅಂತೇಳಿ ಮಾರಕ್ಕೆ ಅದನ್ನ ಇವತ್ತು ಹೊಡೆದಿದ್ರು. ಅದರೂವೆ ಮನೇಲಿ ಹುಟ್ಟಿ ಬೆಳದದ್ದು ಅಲ್ವಾ?. ಅವ್ವಂಗೆ ನೆನುಸ್ಕಂದು ಕರುಳು ಕಿತ್ಕಂಬರದು.

ಇಂಗೇ ಅವ್ವನ ನಮ್ಮಮ್ಮನ (ಅಜ್ಜಿ) ಬೇಜಾರಲ್ಲೇ ಬೆಳಕು ಅನ್ನದು ಜಾರಿ ಕತ್ತಲೆ ಮಬ್ಬು ಕಣ್ಣಿಗೆ ಇಳಿಯೊ ಸಂಜೆ ಹೊತ್ನಲ್ಲಿ ಮೆಳ್ಳೆ ಸಂತಿಂದ ವಾಪಾಸ್ ಬಂದ. ಬರೊವಾಗ ಉಳೊ ಎತ್ತೊಂದನ್ನ ತಂದಿದ್ದ. ಮನೇಲಿದ್ದ ಎತ್ತು ಹಂಗೆ ತಂದಿರೊ ಎತ್ತೂವೆ ಅವಳಿ ಜವಳಿ ಇದ್ದಂಗಿದ್ವು. ಇದ್ಕೆ ಜೋಡಿ ಹಾಕದು ಅಂತಾರೆ. ಅಲ್ವಾ? ಅರೆ! ಹೆಂಗೆ ಇದೇ ಥರದ್ದು ಇವ್ರಿಗೆ ಸಿಕ್ತು ಅಂತ ನನಗೆ ಆಶ್ಚರ್ಯ ಆಗೋಯ್ತು.

“ಒಳ್ಳೆ ಯಾಪಾರ ಕಣಿ ರಂಗವ್ವರೆ, ಅದರ ಹೊಟ್ಟೆ ಹೊಡ್ಯಾ. ವಸಿ ಹಸ್ರು ಮೇಯ್ದಿತ್ತಾ  ಅದು. ಹುಟ್ಟಿದ ತಾವಲಿಂದ. ಅದಕ್ಕೆ ಒಳ್ಳೆ ಕದರಾಗಿ ಕಾಣದು. ಸಂತಿಗೆ ಹೋತಿದ್ದಂಗೆ ನೋಡದೋರು ಅದ ಹಾರುಸ್ಬುಟ್ರು”. ಅಂದ ಮೆಳ್ಳೇನ ಅವ್ವ “ಸುಮ್ಮನೆ ಹೋಯ್ತಾ ತಗಂಡರ ಹಿಂದೆ”. ಅಂತ ಕೇಳ್ತು.

“ನಿಜವಾಗ್ಲೂ ಹೋಗುತ್ತಾ ಅದು. ಚಂಡಿ ಬೀಳ್ತು. ನಾನು ಅರಗಾದೆ. ಅವ್ರು ಬಾಲ ಮುರ್ದು ಹೊಡ್ಕ ಹೋದ್ರು.ಮಾ ತ್ರವ ಅರ್ಚ್ಕತಿತ್ತು ಅಂಗೇಯಾ”  ರಥನೀರು ಮಾಡಿ ಆರತಿ ಬೆಳಗೊವಾಗ ಅವ್ವನ ಕಣ್ಣು ತುಂಬಿತ್ತು.

ಅಪ್ಪ ಬಂತು. ರಾತ್ರಿ ಅನ್ನದು ಮಾತ ಕಳಕಂದು ಮನೆ ವಳಗೆ ಮಲಿಕ್ಕಂಡು ಗೊರಕೆ ಹೊಡಿತಿತ್ತು. ಅವ್ವ ಎದ್ದು ಊಟಕ್ಕಿಡ್ತಾಲೆ ಅಪ್ಪನ ವ್ಯವಹಾರದ ಮಾತ ಕೇಳ್ಕಂತಾ ಅಡಿಗೆ ಮನೇಲಿ ಸಣ್ಣಗೆ ಸದ್ದು ಮಾಡ್ತಿತ್ತು. ಅವ್ವನ ಕೆಲ್ಸ ಮುಗಿಯೊ ಹೊತ್ತಿಗೆ ಅಪ್ಪ ಕೊಟ್ಟಿಗೇ ಅಟ್ಟದಲ್ಲಿ ಇದ್ದ ಹುಲ್ಲೆಳ್ಳ್ಕಂದು ಎಲ್ಲ ದನಗಳ ಗೊಂತಿನ ಚೆರಣಿಗೆ ಹುಲ್ಲ ಹಾಕಿ, ಮಲಗಿದ್ದ ಮಕ್ಕಳ ಹೊದಿಕೆ ಸರಿ ಮಾಡಿ ಮೈ ತುಂಬ ಹೊಚ್ಚಿ, ಚಾವಡಿಯಿಂದ  ಕೊಟ್ಟಿಗೆವರೆಗೂ ಉರಿತಿದ್ದ ಲೈಟು ತುಂಬ್ಸಿ ತನ್ನ ಹಾಸಿಗೆಗೆ ಬಂತು.

ಇಬ್ರೂ ಅಲ್ಲೊಂದು ಇಲ್ಲೊಂದು ನೆಪ್ಪಾದ ಮಾತಾಡ್ತಾ ನಿದ್ದೆ ಕಣ್ಣಿಗೆ ಜಾರುತಿದ್ರು. ಮಧ್ಯ ಮಲಗಿದ್ದ ನಾನೂವೆ ಇವತ್ತು ಬೆಳಗಿನ ಜಾವದಲ್ಲಿ ರಜವಾಗಿ ಉರಿತಿದ್ದ ಚಂದ್ರನ್ನ ನೋಡಿದ್ದ ನೆನಕೊಂಡು ನಿದ್ದೆ ಬರ ಮಾಡ್ಕಂತಿದ್ದೆ.

ಅಷ್ಟರಲ್ಲಿ ದೂರದಿಂದ ಅಂಬಾ… ಅನ್ನೋ ಆರ್ತನಾದ ಬಂತು. ಬರಬರತಾ ಮನೆ ಬಾಗ್ಲಿಗೆ ಬಂದು ಬಾಗ್ಲು ಬಡಿತು. ಒಳಗಿಂದಲೂ ಕೊಟ್ಟಿಗೇಲಿ ಆ ನಾದಕ್ಕೆ ಕೊಟ್ಟ ಉತ್ತರ ಅನ್ನದು ಹತ್ತುಪಟ್ಟು ತಿರಗ ಹಾಕಂಡು ಮೂಕಭಾಷೆ ಅನ್ನೋದು ಊರೆಂಬೋ ಊರನ್ನೆ ಎಬ್ಬಿಸಿ ತಂದು, ಮನೆ ಮುಂದೆ ಜನಗಳ ಗುಡ್ಡೆ ಹಾಕ್ತು. ಅಪ್ಪಾ ಅವ್ವಾ, ಇಬ್ರೂ ಎದ್ದೋರೆ ಕೋಟ್ಟಿಗೆ ಅಗಣಿ ತೆಗೆದೇಟ್ಗೆ ಕುರುಬೋಳಿ ಹಾರ್ಕಂದು ಬಂದಿದ್ದೆ ತನ್ನ ಬಳಗನೆಲ್ಲ ನೆಕ್ಕಿ ಮೂಸಿ ಕೊಟ್ಟಿಗೆಯಾನು ಕೊಟ್ಟಿಗೆಯೆ ಮುಸುಗುಡುತ್ತಾ ಅಂಗೆ, ಸಲ್ಪ ಹೊತ್ತಿಗೆ ತಣ್ಣಗಾಯ್ತು. ಊರೋರ ಬಾಯಲ್ಲಿ

cow6” ಒಳ್ಳೇ ಕುರುಬೋಳಿ ಕಣೆ ಇದು”

“ಪಾಪಾ, ಹಸಾದ್ರೇನು ಅದು ಊರ ಮಗಳಲ್ವಾ”

“ಮತ್ತೆ ಬಂದುಬುಡ್ತಲ್ಲ ತೆಗಿ,ಅದು ನಮ್ಮಂಗೆ ಅಲ್ವಾ?”

“ಅಯ್ಯೋ, ಎಷ್ಟು ಗಾರು ಹೊಡ್ಕ ಬಂದ್ಲೋ ಏನೋ?”

“ಹೂ, ಅಲ್ಲಿ ಅಗಳೆ, ಕಣ್ಣಿ ಕಿತ್ಕಂದು ಬಂದೋಳೆ. ಕತ್ತಲ್ಲಿ ಹಗ್ಗ ನೇತಾಡ್ತಿಲ್ವಾ ಅಲ್ಲೋಡು.”

” ಓ, ಈ ಅರಬ್ಬೆಯ ಹೊಸುಬ್ರು ಕೈಲಿ ಬಗ್ಸಕಾದಾದಾ?” ಹಿಂಗೆ ನೂರೆಂಟು ಪ್ರಶ್ನೆ ಉತ್ತರವ ಹುಡುಕಿ  ಮಾತಾಡ್ತ ಮತ್ತೆ ಊರು ಮನೆ ಬಾಗಿಲ ಒಳ್ಗೆ ಹೋಗಿ ಬಾಗ್ಲ ಹಾಕತು.

ಅಪ್ಪ ಕೊಟ್ಟಿಗೆ ಬಾಗ್ಲಲ್ಲಿ ನಿಂತಿದ್ದ ಮೆಳ್ಳೆಗೆ  “ನಾಳಿಕೆ ತಂಪು ಹೊತ್ನಲ್ಲಿ ಹೊಡ್ಕೊಂದೋಗಿ ಮಣಗನಹಳ್ಳಿಗೆ ಬಿಟ್ಬಾ. ನಾನೂ ಬಸ್ಸಿಗೆ ಬತ್ತೀನಿ. ಅವ್ರಿಗೆ ಇದನ್ನ ಒಪ್ಸಿ ಬರನ. ಆ ಪಟೆಲ್ರು ಮನೇರು ನನ್ಗೆ ಬಾಳ ಬೇಕಾದೋರು ಕಣ್ಲಾ.”

ಅಂದು ವಳಗೆ ಬಂತು. ಬೆಳಗ್ಗೆದ್ದು ಹೋದ್ರೆ ಕೊಟ್ಟಿಗೆ ತುಂಬಿ ತುಳುಕ್ತಿತ್ತು  ನಗು ಅನ್ನದು. “ಮುಂದ್ಲ ಮಂಗಳಾರ ಸಂತಿಗೆ ಮತ್ತೆ ಹೊಡುದುದ್ರೆ ದುಡ್ಡು ಬರದು. ಇವಳುವೆ ವಾಪಾಸ್ ಬರಳ. ಮತ್ತೆ ಮುಂದ್ಲಾ ವಾರಕ್ಕೆ… ಹೊಡ್ಯನ. ಇಂಗೆ ನಾಕೂ ವಾರ ಹೊಡುದ್ರೆ ಜೇಬ ತುಂಬ ದುಡ್ಡು ಎಣಿಸ್ಕಂಬೈದು.”  ಕುರುಬೋಳಿ ಅವರ ಮಾತ ಅತ್ಲಗ್ ಹಾಕಿ ತನ್ನ ಪಾಡಿಗೆ ತಾನು ಮೆಲಕು ಹಾಕ್ತಾ ನಿಂತಿತ್ತು. ನೋಡಿದ್ದೆ ಕೊಟ್ಟಿಗೆ ಕಸ ಹಾಕೊ ಲಕ್ಕಿ ಮೂಗಿನ ಮೇಲೆ ಬೆರಳ ಇಟ್ಕಂದಳೆ.

“ಪಾಪಿ ನನ್ ಮಗಳು ನೆಪ್ಪಿಟ್ಕಂದು…  ಊರ ದಾರಿ ಹಿಡ್ಕಂದು ಬಂದಳಲ್ಲ ಏಳು ಮತ್ತೆ… ಇದ್ಯಾಕೋ… ನಿಮ್ಮನೆ ಮಗಳು ಅಬ್ಬನದ ಗೌರವ್ವರು ಮಾತೆತ್ತುದ್ರೆ  ಓಡಿ ಬರರಲ್ಲ ತವ್ರು ಮನಿಗೆ ಅಂಗಾಯ್ತು ಇದೂವೆ. ದನ, ಜನ, ಯಾರೂವೆ ನಿಮ್ಮನಿಂದ ಆಚಿಗೆ ಹೊರಡಕುಲ್ಲಾ, ಅಂತರಲ್ಲ. ಯಾಕೆ? ಅಂತೀನಿ.”  ಹಾಲು ಕರ್ಕಂದು ಸೆರಗ ಮುಚ್ಚಿ ಒಳಗೆ ಹೋಗುವಾಗ ಅವ್ವನ ಮುಖದ ತುಂಬ ನಗು ತುಳುಕ್ತಾ ಇತ್ತು.

ಮೆಳ್ಳೆ ಮತ್ತೆ ಅದೇ ಮೆರವಣಿಗೆ ಮಾಡ್ಕಂದು ಕುರುಬೋಳಿಯ ಕರಕಂಡು ಹೊರಟ. “ಲಕ್ಕಿ, ಅಬ್ಬನದತ್ತೆ ಇಂಗೆ ಮಾಡ್ತಿತ್ತ? ಹೇಳೇ” ಅಂದೆ. ಅವಳು “ನಿಮ್ಮಜ್ಜಮ್ಮಾರು ಇಲ್ಲೆ ಅವ್ರೆ. ಅವರ ಮಗಳ ಆಡ್ಕೊಂದ್ರೆ ಸುಮ್ಮಗ್ ಬುಟ್ಟಾರ ನಮ್ಮ. ಸುಮ್ಕಿರಿ. ಮಧ್ಯಾಹ್ನ ಅಕ್ಕಿ ಮಾಡಕ್ಕೆ ಬಂದಾಗ ಹೇಳಿ ಕೊಟ್ಟೇನು.” ಅನ್ಕಂದು ಕಸದ ಮಂಕರಿ ಹೊತ್ತು ತಿಪ್ಪೆ ದಾರಿ ಹಿಡುದ್ಲು.  ಪೆದ್ದ ಅನ್ನ ಆಳುಮಗ ನೇಗ್ಲು ಮೇಟಿಯ ಬೆಣೆ ಹಾಕಿ ಬಿಗಿ ಮಾಡ್ತಿದ್ದ. ಅದ ನೋಡ್ತಾ ಕುಂತ್ಕಂಡೆ. ಬಿಸ್ಲು ಅನ್ನದು ಚಳಿ ಬಿಟ್ಟಿದ್ದೆ ಮೈ ಕಾಯಿಸ್ಕಂತ ನೆಲದ ಮೇಲೆ ಇಳಿತಿತ್ತು. ಅಬ್ಬನದತ್ತೆ ಕಥೆ ಕೇಳಬೇಕೂಂದ್ರೆ ಮಧ್ಯಾಹ್ನ ಊಟ ಆಗಿ ಅವಳು ಅಕ್ಕಿ ಮಾಡೋಕೆ ಕೂರವರ್ಗೂ ನಾನು ಕಾಯಲೇಬೇಕಿತ್ತು.

‍ಲೇಖಕರು Admin

September 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: