
ಶ್ರೀದೇವಿ ಕೆರೆಮನೆ
ಗೊತ್ತು ಅವಳಿಗೆ
ಹಠ ಸಾಧಿಸಿ ತನ್ನದೆಂದುಕೊಂಡಿದ್ದು
ತನ್ನದಷ್ಟೇ ಆಗುವುದಿಲ್ಲವೆಂಬುದು
ಯಾರಿಗೂ ಸೇರದ ನಿರಾಕಾರಿಯ
ತನ್ನವನೆಂದು ಭ್ರಮಿಸುವ
ಸುಖ ಮಾತ್ರ ತನ್ನದೆಂದು
ಯಾರಿಗೂ ದಕ್ಕದ ಇವನು
ಈ ಗೆಜ್ಜೆ ಕಟ್ಟಿ ಕುಣಿಯುವವಳಿಗೆ ಒಲಿದಾನೆಯೇ?
ಎದೆ, ಸುನಾಮಿಗೆ ಸಿಕ್ಕ ಪುಟ್ಟ ಪಾತಿ
ಉಬ್ಬರಿಸಿ ಮೆರೆವ ಅಲೆಯೊಳಗೆ
ಅಡಗಿದ ಸಾವಿರ ಪ್ರಶ್ನೆಗಳಿಗೆ
ಅರೆತೆರೆದ ಅವನ ತೀಕ್ಷ್ಣ ಕಣ್ಣಲ್ಲಿದೆ ಉತ್ತರ
ದಿಟ್ಟಿಸಿದರೆ ಏನೊಂದೂ ಅರ್ಥವಾಗದ
ಅಯೋಮಯತೆಯ ಉಪಸಂಹಾರ
ಯಾರಿಗೂ ಸೇರದ ಈ ಭೂಮಿ
ನಿನಗೂ ಸೇರಿದ್ದಲ್ಲವೇ?
ಆ ಆಕಾಶ, ಈ ಕಡಲು
ಚುಕ್ಕಿಗಳ ನಿಹಾರಿಕಾ ಲೋಕ
ಎಲ್ಲದಕ್ಕು ನೀನೂ ಬಾಧ್ಯಸ್ಥಳಲ್ಲವೇ?
ಕೇಳುತ್ತ ಗುಳಿ ಕೆನ್ನೆಯನ್ನು
ಕಂಡೂ ಕಾಣದಂತೆ ಗಡ್ಡದೊಳಗೆ
ಅವಿತಿಡುವ ಬೂದಿಬಡುಕನ ಪರಿಯನ್ನು
ಏನು ಮಾಡಿದರೂ ಅರ್ಥವಾಗುವುದಿಲ್ಲ

ಭೂಮಿ ಆಕಾಶದಂತೆ ಸರ್ವರಿಗೂ ಸೇರಿದವನನ್ನು
ಏನೆಂದು ಒಲಿಸಿಕೊಳ್ಳುವುದು
ಒಳಗೊಳಗೇ ಅಸಹನೀಯತೆ
ಹೇಗೆ ಪ್ರೇಮಾಲಾಪ ನಡೆಸುವುದು
ಮತ್ತೆ ಮತ್ತೆ ತನ್ನನ್ನೇ ಕೇಳಿಕೊಳ್ಳುತ್ತ
ದೊರಕದ ಉತ್ತರಕ್ಕಾಗಿ ಹೈರಾಣಾಗುತ್ತಿದ್ದಾಳೆ
ಸಿಕ್ಕಿಯೂ ಸಿಗದಂತಾದವನ
ಒಲಿಸಿಕೊಂಡಾದ ಮೇಲೂ
ಅಂತರ ಕಾಯ್ದುಕೊಳ್ಳುವುದರಲ್ಲೇ ಸುಖಿಸುವ
ತನ್ನ ಮನೋನಿಗ್ರಹವನ್ನು
ಜಗದೆದುರು ಮೆರೆಸಲು ಬಳಸಿಕೊಳ್ಳುವಾತನ
ಏನೆಂದು ಬಯಸುವುದು?
ಹೆಸರಷ್ಟೇ ಅಲ್ಲ,
ಬದುಕಿನ ಪ್ರತಿ ಹೆಜ್ಜೆಯೂ
ಮೋಹದ ಮಾಯಾಜಾಲ
ನಿಡುಸುಯ್ದವಳ ಎದೆಯೊಳಗೆ
ಬಯಸಿಯೂ ತನ್ನದಾಗದ ನೋವಿನ ನಿಟ್ಟುಸಿರು






ದಿನವೂ ನಿಟ್ಟುಸಿರು…….
ಮೋಹದ ಬಲೆಯಲ್ಲಿ ಸಿಲುಕಿದವಳ ತವಕತಲ್ಲಣಗಳ ಮಾಯಾಜಾಲದಲ್ಲಿ….